ವಿಶ್ವವಿದ್ಯಾನಿಲಯಗಳನ್ನು ಮಾರಿಬಿಡಿ

ಜಿಲ್ಲೆಗೊಂದರಂತೆ ತಲೆಯೆತ್ತಿರುವ ಕರ್ನಾಟಕದ ಸರ್ಕಾರಿ ವಿಶ್ವವಿದ್ಯಾನಿಲಯಗಳು ಅಕ್ಷರಶಃ ಬಿಳಿಯಾನೆಗಳಾಗಿವೆ. ಇವುಗಳನ್ನು ಸಾಕಲೂ ಆಗದೆ, ಕಾಡಿಗೆ ಅಟ್ಟಲೂ ಆಗದೆ, ಕರ್ನಾಟಕ ಸರ್ಕಾರ ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕಿಹಾಕಿಕೊಂಡಿದೆ.

ರಾಜಕೀಯ ಒತ್ತಡಕ್ಕೆ ಒಳಗಾಗಿ ರಾಜ್ಯಾದ್ಯಂತ ಸರ್ಕಾರಿ ವಿಶ್ವವಿದ್ಯಾನಿಲಯಗಳನ್ನು ತೆರೆಯಲಾಗಿವೆ. ರಾಜ್ಯದ ಪ್ರತಿಯೊಂದು ಜಿಲ್ಲೆ ಹಾಗೂ ಹಲವು ತಾಲ್ಲೂಕು ಕೇಂದ್ರಗಳಲ್ಲಿ ಸ್ನಾತಕೋತ್ತರ ಶಾಖೆಗಳನ್ನು ತೆರೆಯಲಾಗಿದೆ. ಆದರೆ ಈ ಯಾವುದೇ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಿರಲಿ, ಅಧ್ಯಾಪಕರೂ ಇಲ್ಲ. ಬಹುತೇಕ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿರುವ ಅರೆಕಾಲಿಕ ಉಪನ್ಯಾಸಕರಿಂದ ಈ ವಿವಿಗಳು ಶಿಕ್ಷಣ ಬೋಧಿಸುತ್ತಿವೆ. ಶಿಕ್ಷಕೇತರ ಸಿಬ್ಬಂದಿಯಂತೂ ಇಲ್ಲವೇ ಇಲ್ಲ. ಕೆಲವರು ಎರವಲು ಸೇವೆಯ ಮೇಲೆ ವಿವಿ ಕೇಂದ್ರಗಳಿಗೆ ಬಂದು ಸಂಬಳ ಪಡೆಯುತ್ತಿದ್ದಾರೆ.

ಈ ವಿವಿಗಳಲ್ಲಿ ಹೊಸ ಸಿಬ್ಬಂದಿ ನೇಮಕಕ್ಕೆ ರಾಜ್ಯದ ಹಣಕಾಸು ಇಲಾಖೆಯ ತೀವ್ರ ಆಕ್ಷೇಪವಿದೆ. ವಿವಿ ಶಿಕ್ಷಕ ಸಿಬ್ಬಂದಿಗೆ ಯುಜಿಸಿ ವೇತನ ನೀಡಲೇಬೇಕು. ಈ ವೇತನ ಶ್ರೇಣಿಯ ಹೊರೆ ಹೊರಲು ರಾಜ್ಯ ಸರ್ಕಾರ ಸಿದ್ಧವಿಲ್ಲ. ಸಾಲಮನ್ನಾದಂತಹ ಜನಪ್ರಿಯ ಯೋಜನೆಗಳಿಗೆ ಹಣ ಹೊಂಚುವ ಹವಣಿಕೆಯಲ್ಲಿರುವ ರಾಜ್ಯ ಸರ್ಕಾರ ಉನ್ನತ ಶಿಕ್ಷಣದಂತಹ ಯಾರಿಗೂ ಬೇಡದ ಇಲಾಖೆಗೆ ಹೆಚ್ಚಿನ ಹಣ ಬಿಡುಗಡೆ ಮಾಡುವ ಪರಿಸ್ಥಿತಿಯಲ್ಲಿಲ್ಲ. ಹಾಗಾಗಿ, ಈ ವಿವಿಗಳ ಯಾವುದೇ ಕೋರಿಕೆಗಳಿಗೆ ಮಣಿಯುವ ಅಥವಾ ಮಣೆ ಹಾಕುವ ಮನಸ್ಥಿತಿಯಲ್ಲಿ ರಾಜ್ಯ ಸರ್ಕಾರವಿಲ್ಲ. ಈ ಸರ್ಕಾರಿ ವಿವಿಗಳು ಈಗಿನ ಪರಿಸ್ಥಿತಿಯಲ್ಲಿಯೇ ಮುಂದುವರೆದು ಹೆಚ್ಚೆಂದರೆ ಪ್ರೌಢಶಾಲೆ ಗುಣಮಟ್ಟದ ಶಿಕ್ಷಣವನ್ನು ತಮ್ಮ ಸ್ನಾತಕೋತ್ತರ ವಿದ್ಯಾರ್ಥಿಳಿಗೆ ನೀಡುವ ಕ್ಷಮತೆ ಹೊಂದಿವೆ.

ಈ ಸರ್ಕಾರಿ ವಿಶ್ವವಿದ್ಯಾನಿಲಯಗಳ ಬಗೆಗೆ ವಿದ್ಯಾರ್ಥಿಗಳ ಅಪೇಕ್ಷೆ ಕೂಡ ಬದಲಾಗಿದೆ. ಗುಣಮಟ್ಟದ ಶಿಕ್ಷಣ ಇಂದು ಯಾ ರಿಗೂ ಬೇಡವಾಗಿದೆ. ಬಿ.ಎ., ಬಿ.ಕಾಂ., ಬಿ.ಎಸ್ಸಿ.ಯ ವಿದ್ಯಾರ್ಥಿಗಳು ಒಂದೆರಡು ಗೈಡ್‍ಗಳನ್ನು ಓದಿ, ಪರೀಕ್ಷೆ ಬರೆದು ಬರುವ ಪರಿಪಾಠ ಬೆಳೆದುಬಂದಿದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬ ಹತ್ತಾರು ಪುಟಗಳನ್ನು ಬರೆದು ಬಂದರೆ ಅವನಿಗೆ ಡಿಸ್ಟಿಂಕ್ಷನ್ ಅಂಕಗಳನ್ನು ಕೊಡಲೇಬೇಕಾದ ಬೆದರಿಕೆಯಲ್ಲಿ ವಿವಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಈ ವಿವಿಗಳು ಕೊಡುವ ಪದವಿಯನ್ನು ಪಡೆದು ‘ಪದವೀಧರ’ರಾಗಬಹುದೇ ಹೊರತು ಯಾವುದೇ ಕೆಲಸ ಮಾಡುವ ಅರ್ಹತೆ ಪಡೆಯುವ ಪ್ರಮೇಯವಿಲ್ಲ. ಹೀಗೆ ಸರ್ಕಾರಿ ವಿವಿಗಳೆಂಬ ಯಾರಿಗೂ ಬೇಡವಾದ ಈ ಬಿಳಿಯಾನೆಗಳು ಜಿಲ್ಲೆಗೊಂದರಂತೆ ಬೊಕ್ಕಸಕ್ಕೆ ಭಾರವಾಗಿ ನಿಂತಿವೆ.

ಆದರೆ ಇಂದು ಗುಣಮಟ್ಟದ ಉನ್ನತ ಶಿಕ್ಷಣದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ. ಕರ್ನಾಟಕದ ಹುಡುಗರು ದೇಶದೆಲ್ಲೆಡೆಯ ಎಂಜಿನಿಯರಿಂಗ್, ಮೆಡಿಕಲ್, ಕಾನೂನು ಹಾಗೂ ಮಾನವಶಾಸ್ತ್ರಗಳ ಪ್ರತಿಷ್ಠಿತ ಕಾಲೇಜುಗಳಿಗೆ ಸೇರ ಬಯಸುವ ಹೋರಾಟದಲ್ಲಿದ್ದಾರೆ. ಉಳ್ಳವರು ತಮ್ಮ ಮಕ್ಕಳನ್ನು ಹೊರದೇಶದ ಹೆಸರಾಂತ ವಿಶ್ವವಿದ್ಯಾನಿಲಯಗಳಿಗೆ ಕಳಿಸುವ ಧಾವಂತದಲ್ಲಿದ್ದಾರೆ. ಇದಕ್ಕೆ ಪ್ರತಿಯಾಗಿ ನಾಡಿನ ಕೈಗಾರಿಕೆ ಹಾಗೂ ವಾಣಿಜ್ಯಗಳು ಸೂಕ್ತ ಹಾಗೂ ಪರಿಣತ ಮಾನವ ಸಂಪನ್ಮೂಲವಿಲ್ಲದೆ ಕೊರಗುತ್ತಿವೆ. ಸೇವಾ ಕ್ಷೇತ್ರದಲ್ಲಂತೂ ಇನ್ನಿಲ್ಲದ ಸಿಬ್ಬಂದಿ ಕೊರತೆಯಿದೆ. ಈ ಸಂಸ್ಥೆಗಳು ದೇಶಾದ್ಯಂತ ಹುಡುಕಿ ಅರೆಬೆಂದ ವಿದ್ಯಾರ್ಥಿಗಳನ್ನು ಆಯ್ದು ನಂತರದಲ್ಲಿ ಅವರಿಗೆ ತರಬೇತಿ ನೀಡಿ ಕೆಲಸಕ್ಕೆ ಹಚ್ಚಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಈಗಲೂ ಕೂಡ, ಅಮೆರಿಕಾ, ಇಂಗ್ಲೆಂಡ್, ಯೂರೋಪ್, ಜಪಾನ್ ಮತ್ತಿತರ ರಾಷ್ಟ್ರಗಳಿಂದ ಈ ಸೇವಾಕ್ಷೇತ್ರದಲ್ಲಿ ಸೂಕ್ತ ಉದ್ಯೋಗಿಗಳಿಗಾಗಿ ಬೇಡಿಕೆಯಿದೆ. ಈ ಕ್ಷೇತ್ರದ ಅನುಕೂಲವೆಂದರೆ ಕೆಲಸವನ್ನು ಆ ದೇಶದಲ್ಲಿ ಹೋಗಿ ಮಾಡುವ ಬದಲು ನಮ್ಮ ದೇಶದಲ್ಲಿಯೇ ಕುಳಿತು ಹೈಸ್ಪೀಡ್ ಇಂಟರ್‍ನೆಟ್ ನೆರವಿನಿಂದ ಸಲ್ಲಿಸಬಹುದಾಗಿದೆ.

ಈ ಬೇಡಿಕೆ ಪೂರೈಸಲು ದೇಶೀಯ ಉದ್ಯಮಿಗಳು ಖಾಸಗಿ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲು ಬಯಸಿದ್ದಾರೆ. ಆದರೆ, ಇದಕ್ಕೆ ಸೂಕ್ತ ಜಾಗ, ಪರವಾನಗಿ ಹಾಗೂ ಪರಿಸರಗಳು ಅವರಿಗೆ ಸಂಪೂರ್ಣ ಪೂರಕವಾಗಿಲ್ಲ. ಆದರೂ, ಕರ್ನಾಟಕದಲ್ಲಿ ಅಜೀಂ ಪ್ರೇಂಜಿ ವಿವಿ, ಅಲೈಯನ್ಸ್ ವಿವಿ, ಮತ್ತಿತರ ಖಾಸಗಿ ವಿವಿಗಳು ತಲೆಯೆತ್ತಿವೆ. ಹಲವಾರು ಶಿಕ್ಷಣ ಸಂಸ್ಥೆಗಳು ಡೀಮ್ಡ್ ವಿವಿ ಸ್ಥಾನಮಾನ ಕೂಡ ಹೊಂದಿವೆ. ಬೆಂಗಳೂರಿನ ಪರಿಸರದಲ್ಲಿ ಹೊಸ ಖಾಸಗಿ ವಿಶ್ವವಿದ್ಯಾನಿಲಯಗಳನ್ನು ಕಟ್ಟಲು ಹತ್ತಕ್ಕೂ ಮಿಗಿಲಾಗಿ ಕರ್ನಾಟಕದ ಉದ್ಯಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಜೊತೆಗೆ, ವಿದೇಶದ ಪ್ರಖ್ಯಾತ ಖಾಸಗಿ ವಿವಿಗಳು ಕರ್ನಾಟಕದಲ್ಲಿ ತಮ್ಮ ನೋಂದಾಯಿತ ಶಾಖೆ ಅಥವಾ ಪೂರ್ಣತಃ ವಿವಿಗಳನ್ನೇ ತೆರೆಯಲು ಮುಂದೆ ಬಂದಿದ್ದಾರೆ. ಆದರೆ ಇವರ್ಯಾರಿಗೂ ಸರ್ಕಾರಗಳು ಅನುಮತಿ ನೀಡದೆ ಶಿಕ್ಷಣ ಕ್ಷೇತ್ರಕ್ಕೆ ಅನ್ಯಾಯ ಮಾಡುತ್ತಿವೆ.

ಕರ್ನಾಟಕದ ಛಪ್ಪನ್ನೈವತ್ತಾರು ಸರ್ಕಾರಿ ವಿವಿಗಳನ್ನು ಖಾಸಗಿಯವ ರಿಗೆ ಮಾರಿಬಿಡಬಾರದೇಕೆ? ಬೇರಾವುದಕ್ಕೆ ಅಲ್ಲವಾದರೂ ಈ ವಿವಿಗಳ ಜಮೀನು, ಕಟ್ಟಡ ಹಾಗೂ ಪರವಾನಗಿಗಳಿಗೆ ದೊಡ್ಡ ಮೊತ್ತ ಕೊಟ್ಟು ಖರೀದಿಸಲು ಉದ್ಯಮಿಗಳು ಮುಂದೆ ಬರುತ್ತಾರೆ. ಸ್ಪರ್ಧಾತ್ಮಕವಾಗಿ ನಡೆಯಬೇಕಿರುವ ಈ ಪಾರದರ್ಶಕ ಮಾರಾಟ ಪ್ರಕ್ರಿಯೆಯಲ್ಲಿ ಮೊದಲು ಟೆಕ್ನಿಕಲ್ ಬಿಡ್‍ಗಳನ್ನು ಮತ್ತು ನಂತರದಲ್ಲಿ ಕಮರ್ಷಿಯಲ್ ಬಿಡ್‍ಗಳನ್ನು ತೆರೆದು ಅತ್ಯಂತ ಹೆಚ್ಚಿನ ಬೆಲೆಗೆ ಮಾರಬಹುದು. ಮಾರಾಟದ ದೊಡ್ಡ ಮೊತ್ತದ ಜೊತೆಗೆ ಪ್ರತಿ ತಿಂಗಳು ಭರಿಸಬೇಕಿರುವ ಶಿಕ್ಷಕ-ಶಿಕ್ಷಕೇತರ ಸಂಬಳಸಾರಿಗೆಯ ಖರ್ಚುಗಳು ಕೂಡ ಉಳಿಯುತ್ತವೆ.

ಅಮೆರಿಕೆಯೆಲ್ಲೆಡೆ ಕೂಡ ಆಯಾ ರಾಜ್ಯಗಳು ಒಂದೋ ಎರಡೋ ಸರ್ಕಾರಿ ವಿವಿಗಳನ್ನು ನಡೆಸುತ್ತವೆ. ಉಳಿಕೆಯ 30-40 ವಿವಿಗಳು ಖಾಸಗಿ ಅಧೀನದಲ್ಲಿಯೇ ಇರುತ್ತವೆ. ಈ ಮಾದರಿಯಲ್ಲಿ ವಿವಿಗಳ ನಡುವೆ ಉತ್ತಮ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆರೋಗ್ಯಕರ ಸ್ಪರ್ಧೆ ನಡೆದು ಗುಣಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತಿವೆ. ವಿಶ್ವದಾದ್ಯಂತದ ಈ ಮಾದರಿಯನ್ನು ನಾವು ಕರ್ನಾಟಕದಲ್ಲಿ ಏಕೆ ಪ್ರಯೋಗ ಮಾಡಬಾರದು ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಾಗಿದೆ.

ವಿವಿಗಳ ಖಾಸಗೀಕರಣವು ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆಗೆ ಕಾರಣವಾಗಬಹುದು ಎಂದು ವಾದಿಸುವವರು ಇದ್ದೇ ಇರುತ್ತಾರೆ. ಆದರೆ, ವಿವಿಗಳನ್ನು ಮಾರಿ ಹಾಗೂ ಸಿಬ್ಬಂದಿ ಸಂಬಳದ ಬಾಬ್ತನ್ನು ಉಳಿಸಿದ ಹಣದಲ್ಲಿ ಸರ್ಕಾರವು ಯಥೇಚ್ಛವಾಗಿ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಭತ್ಯೆ ಹಾಗೂ ಸಂಶೋಧನಾ ಅನುದಾನ ನೀಡಬಹುದಾಗಿದೆ. ವಿಶ್ವಾದ್ಯಂತ ಸಾಬೀತಾಗಿರುವ ಈ ಮಾದರಿಯನ್ನು ನಮ್ಮಲ್ಲೂ ಅನುಷ್ಠಾನಕ್ಕೆ ತಂದು ಉನ್ನತ ಶಿಕ್ಷಣ ವಲಯವನ್ನು ವಿಶ್ವದರ್ಜೆಗೆ ಏರಿಸುವ ನಿಟ್ಟಿನಲ್ಲಿ ಕಾರ್ಯತತ್ಪರವಾಗಬಹುದಾಗಿದೆ.

Leave a Reply

Your email address will not be published.