ಉಪಕೃತ ಮನಃಸ್ಥಿತಿಯಲ್ಲಿ ಮಾಧ್ಯಮ ಸ್ವಾತಂತ್ರ್ಯ ಹೇಗೆ ಸಾಧ್ಯ?

ಹಲವು ಮಾಧ್ಯಮ ಸಂಸ್ಥೆಗಳು, ಸೈದ್ಧಾಂತಿಕ ನೆಲೆಯಲ್ಲಿ ಅಪಹೃತಗೊಂಡಿರುವುದು ದೃಗ್ಗೋಚರ. ಅವು ಪ್ರಸಾರ ಮಾಡುವುದು ಅಥವಾ ಪ್ರಚಾರ ಮಾಡುವುದು, ಏಕದಿಕ್ಕಿನ ಚಿಂತನಾ ಪ್ರಕ್ರಿಯೆ. ಚಿಂತನಾ ವೈವಿಧ್ಯವನ್ನು ಅವು ತಿರಸ್ಕರಿಸುತ್ತವೆ. ತಮ್ಮ ಹಿತಾಸಕ್ತಿ ಬೆಳೆಸಲು ಭಾವನೆಗಳನ್ನು ಉದ್ದೀಪಿಸಿ ಪ್ರಭಾವಿಸುತ್ತವೆ.

-ಸಿ.ಜಿ.ಮಂಜುಳಾ

ಅಭಿಪ್ರಾಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಕುರಿತು ವಿಶ್ವಸಂಸ್ಥೆಯ ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯ (ಯುಡಿಎಚ್‍ಆರ್) ಆರ್ಟಿಕಲ್ 19 ಹೀಗೆ ಹೇಳುತ್ತದೆ: “ಪ್ರತಿಯೊಬ್ಬರಿಗೂ ಅಭಿಪ್ರಾಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ; ಯಾವುದೇ ಹಸ್ತಕ್ಷೇಪವಿಲ್ಲದೆ ಅಭಿಪ್ರಾಯಗಳನ್ನು ಹೊಂದುವ ಸ್ವಾತಂತ್ರ್ಯವನ್ನು ಈ ಹಕ್ಕು ಒಳಗೊಳ್ಳುತ್ತದೆ. ಅಲ್ಲದೆ, ಈ ಹಕ್ಕಿನಲ್ಲಿ ಯಾವುದೇ ಮಾಧ್ಯಮದ ಮೂಲಕ ಗಡಿಗಳ ಭೇದವಿಲ್ಲದೆ ಮಾಹಿತಿ ಹಾಗೂ ವಿಚಾರಗಳನ್ನು ಕೋರಲು, ಪಡೆದುಕೊಳ್ಳಲು ಹಾಗೂ ಹಂಚಲು ಅವಕಾಶವಿದೆ.”  

ವಾಕ್ ಸ್ವಾತಂತ್ರ್ಯ ಎಂಬುದು ಮಾನವ ಹಕ್ಕುಗಳ ಭಾಗವಾಗಿರುವುದನ್ನು ಇದು ಧ್ವನಿಸುತ್ತದೆ. ಹಾಗೆಯೇ ಭಾರತ ಸಂವಿಧಾನದ 19 (1) (ಎ) ವಿಧಿಯೂ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಚಿತಪಡಿಸುತ್ತದೆ.

ಈ ಆಶೋತ್ತರಗಳ ನಡುವೆ, ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಸ್ತಂಭವೆಂದು ಮಾಧ್ಯಮವನ್ನು ಪರಿಗಣಿಸಲಾಗುತ್ತದೆ. ಮಾಧ್ಯಮ ಹಾಗೂ ಮಾಧ್ಯಮ ಸ್ವಾತಂತ್ರ್ಯ ಪ್ರಜಾಪ್ರಭುತ್ವದಲ್ಲಿ ಅಂತರ್ಗತವಾಗಿದ್ದು ಅದನ್ನು ಬೇರ್ಪಡಿಸಲಾಗದು.

ಸಾತಂತ್ರ್ಯಾನಂತರ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವ್ಯಕ್ತಿಗತ ಅಭಿವ್ಯಕ್ತಿಯನ್ನು ಪ್ರಜೆಗಳ ಮೂಲಭೂತ ಹಕ್ಕುಗಳ ಮಹತ್ವದ ಭಾಗವಾಗಿಸಲಾಯಿತು.  ಸ್ವಾತಂತ್ರ್ಯಾನಂತರದ ಹೊಸ ವ್ಯವಸ್ಥೆಯಲ್ಲಿ, ಆಡಳಿತದ ಬಗ್ಗೆ ನಿಕಟ ಕಣ್ಣಿಡುವುದಲ್ಲದೆ, ಜನರಿಗೆ ಮಾಹಿತಿ ನೀಡುವ ಹಾಗೂ ಅವರ ಕುಂದುಕೊರತೆಗಳಿಗೆ ದನಿ ನೀಡುವ ಮಾರ್ಗವಾಯಿತು ಮಾಧ್ಯಮ. ಜನರು ಜಾಗೃತರಾಗಿದ್ದರೆ ಪ್ರಜಾಪ್ರಭುತ್ವ ಬಲವಾಗುತ್ತದೆ. ಪ್ರಜಾಪ್ರಭುತ್ವದ ಆರೋಗ್ಯದ ಸೂಚ್ಯಂಕವೇ ಪತ್ರಿಕಾ ಸ್ವಾತಂತ್ರ್ಯ ಎಂಬುದು ಇಲ್ಲಿರುವ ಚಿಂತನೆ.

ಇಂದು, ತಂತ್ರಜ್ಞಾನದ ತೀವ್ರತರ ಬೆಳವಣಿಗೆಗಳಲ್ಲಿ ಮಾಧ್ಯಮ ಲೋಕ ವ್ಯಾಪಕವಾಗಿ ವಿಸ್ತೃತಗೊಂಡಿದೆ.  ಮಾಧ್ಯಮ ಸಂಸ್ಥೆಗಳ ನಡುವಿನ ಸ್ಪರ್ಧೆಯ ಸ್ವರೂಪ ಇನ್ನಿಲ್ಲದಂತೆ ಬದಲಾಗಿದೆ. ಹೊಸ ತಂತ್ರಜ್ಞಾನಗಳು, 24 ಗಂಟೆ ಸುದ್ದಿ ವಾಹಿನಿಗಳು, ನಿಮಿಷ ನಿಮಿಷಕ್ಕೂ ಅಪ್ ಡೇಟ್ ಆಗುವ ವೆಬ್‍ಸೈಟ್‍ಗಳ ಮಧ್ಯೆ ಇರುವಂತಹ  ಸವಾಲು ದೊಡ್ಡದು. ಹಾಗೆಯೇ ಸಾಮಾಜಿಕ ಮಾಧ್ಯಮಗಳು ಹಾಗೂ `ವಾಟ್ಸ್ಯಾಪ್ ಯೂನಿವರ್ಸಿಟಿ’ಯ `ಸುಳ್ಳು ಸುದ್ದಿ’ಗಳ ಪಸರಿಸುವಿಕೆಯ ಈ ಕಾಲದಲ್ಲಿ ವಾಸ್ತವವನ್ನಾಧರಿಸಿದ ಮಾಹಿತಿಗಳ ಮಹತ್ವದ ಬಗ್ಗೆ ಅರಿವು ಮೂಡಿಸುವುದು ದೊಡ್ಡ ಜವಾಬ್ದಾರಿ.

ಇಂತಹ ಸಂದರ್ಭದಲ್ಲೇ ಎಷ್ಟರ ಮಟ್ಟಿಗಿನ ನಿರ್ಭೀತ, ಮುಕ್ತ ಹಾಗೂ ಸ್ವತಂತ್ರ ವಾತಾವರಣದಲ್ಲಿ ಮಾಧ್ಯಮಗಳು ಕೆಲಸ ಮಾಡುತ್ತಿವೆ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಪತ್ರಿಕಾ ಸ್ವಾತಂತ್ರ್ಯಕ್ಕೆ ಕುತ್ತು ಬಂದಾಗಲೆಲ್ಲಾ ಭಾರತದಲ್ಲಿ ಪ್ರತಿರೋಧಗಳು ವ್ಯಕ್ತವಾಗಿವೆ. ಆದರೆ, ಸರ್ಕಾರದ ತಪ್ಪು ಹೆಜ್ಜೆಗಳು, ವೈಫಲ್ಯ, ದೋಷಗಳ ಬಗ್ಗೆ ವರದಿ ಮಾಡಿದ ಪತ್ರಕರ್ತರೇ ಸ್ವತಃ ಇಂದು ಆಕ್ರಮಣಗಳಿಗೆ ತುತ್ತಾಗುತ್ತಿದ್ದಾರೆ ಎಂಬುದು ಆತಂಕಕಾರಿ. ಆಡಳಿತ ಪಕ್ಷದ ವಕ್ತಾರರು ಹಾಗೂ ಬೆಂಬಲಿಗರಿಂದ ಈ ಪತ್ರಕರ್ತರಿಗೆ `ರಾಷ್ಟ್ರ ವಿರೋಧಿ’ಗಳೆಂಬ ಹಣೆಪಟ್ಟಿ ಅಂಟಿಸಲಾಗುತ್ತಿದೆ. ಬೆದರಿಕೆ, ಒತ್ತಡ ತಂತ್ರಗಳಿಗೂ ಪತ್ರಕರ್ತರು ಗುರಿಯಾಗುತ್ತಿದ್ದಾರೆ. ಹಲವರು ಜೈಲು ಶಿಕ್ಷೆಗೂ ಒಳಗಾಗುತ್ತಿದ್ದಾರೆ. ಇನ್ನು, ಸಾಮಾಜಿಕ ಮಾಧ್ಯಮಗಳ ಮೂಲಕ ಆಕ್ರಮಣಕಾರಿಯಾಗಿ ಟ್ರಾಲ್ ಮಾಡುವುದಂತೂ ಮಾಮೂಲಾಗಿ ಹೋಗಿದೆ. ಪ್ರಜಾಸತ್ತಾತ್ಮಕವಾದ ಮುಕ್ತ ಸಂವಾದಗಳಿಗೆ ಅಗತ್ಯವಾದ ನಿರ್ಭೀತ ವಾತಾವರಣವನ್ನು ಕಸಿಯುತ್ತಿರುವ ಇಂತಹ ಬೆಳವಣಿಗೆಗಳು ಆತಂಕಕಾರಿ.

ಕಳೆದ ಐದುಆರು ವರ್ಷಗಳಲ್ಲಿ, ಸಾರ್ವಜನಿಕ ಚರ್ಚೆಗೊಳಪಡಬೇಕಾದ ಹಲವು ವಿಷಯಗಳ ಬಗ್ಗೆ ಮಾಧ್ಯಮಗಳನ್ನು ಮೌನವಾಗಿರಿಸಲಾಗಿದೆ ಎಂಬುದು ಮೇಲ್ನೋಟಕ್ಕೇ ಕಾಣುವ ಸಂಗತಿ. ಪ್ರಶ್ನೆಗಳನ್ನು ಕೇಳಬಲ್ಲಂತಹವರಿಗೆ ಅನೇಕ ಸಂದರ್ಭಗಳಲ್ಲಿ ಅದು ಬದುಕು, ಜೀವ, ವೃತ್ತಿಯ ಪ್ರಶ್ನೆಗಳಾಗಿ ಪರಿಣಮಿಸಿವೆ.  ಹತ್ಯೆಗೊಳಗಾದ ಕರ್ನಾಟಕದ ಗೌರಿ ಲಂಕೇಶ್ ಹಾಗೂ ಕಾಶ್ಮೀರದ ಶುಜತ್ ಬುಕಾರಿ ಅವರನ್ನು ಇಲ್ಲಿ ಸ್ಮರಿಸಬಹುದು.

ಎಲ್ಲಾ ಆಳುವ ಸರ್ಕಾರಗಳೂ ಮಾಧ್ಯಮಗಳನ್ನು ನಿಯಂತ್ರಿಸುವ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತವೆ. ತುರ್ತುಪರಿಸ್ಥಿತಿಯ ಕರಾಳ ಅವಧಿಯ ಕಥನಗಳು ನಮ್ಮ ಸ್ಮೃತಿಯಲ್ಲಿವೆ. ಕೇಂದ್ರದಲ್ಲಿದ್ದ ರಾಜೀವ್ ಗಾಂಧಿ ಆಡಳಿತ, 1988ರಲ್ಲಿ ಮಾನನಷ್ಟ ಮಸೂದೆ ಮಂಡಿಸಿತ್ತು. `ಕ್ರಿಮಿನಲ್ ಆರೋಪಗಳು’ ಹಾಗೂ `ಕೀಳು ಬರಹಗಳನ್ನು’ ನಿರ್ಬಂಧಿಸುವ ನೆಪ ಇದರಲ್ಲಿತ್ತು. ಆದರೆ, ನಂತರ ಈ ಮಸೂದೆಯನ್ನು ಹಿಂತೆಗೆದುಕೊಳ್ಳಲಾಯಿತು. ಅದೇರೀತಿ, ಪತ್ರಕರ್ತರೊಬ್ಬರು ಫೇಕ್ ನ್ಯೂಸ್ ಸೃಷ್ಟಿಸಿದ್ದಾರೆ ಅಥವಾ ಪಸರಿಸಿದ್ದಾರೆ ಎಂಬುದು ಕಂಡುಬಂದಲ್ಲಿ ಅವರ `ಅಕ್ರೆಡಿಟೇಷನ್’ ಕಾಯಂ ಆಗಿ ರದ್ದಾಗುವ ಅಪಾಯದಲ್ಲಿರುತ್ತದೆ ಎಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿದ್ದ ಮಾರ್ಗಸೂಚಿಯನ್ನು (2018), ನಂತರ ಹಿಂತೆಗೆದುಕೊಂಡ ವಿದ್ಯಮಾನವೂ ನಡೆಯಿತು. ಪ್ರಜಾಪ್ರಭುತ್ವವನ್ನು ಕುಗ್ಗಿಸುವ ಯತ್ನಗಳು ಹಾಗೂ ಮಾಧ್ಯಮವನ್ನು ಸಾಮಾಜಿಕ ಪಿಡುಗು ಎಂದು ಪರಿಗಣಿಸುವ ಇಂತಹ ಮನಸ್ಥಿತಿ ಎಲ್ಲಾ ಕಾಲದಲ್ಲೂ ಇದೆ.

ವಿಶ್ಲೇಷಣೆ, ವಿಮರ್ಶೆ, ಟೀಕೆಗಳ ಬಗ್ಗೆ ಸರ್ಕಾರಕ್ಕೆ ಎಷ್ಟರ ಮಟ್ಟಿಗೆ ಭೀತಿ ಇದೆ ಎಂಬುದು ಮಾಧ್ಯಮಗಳ ಸ್ವಾತಂತ್ರ್ಯವನ್ನು ಎಷ್ಟರ ಮಟ್ಟಿಗೆ ನಿಗ್ರಹಿಸಬೇಕು ಎಂಬಂಥ ನಿರ್ಧಾರದ ಮೇಲೆ ಪರಿಣಾಮ ಬೀರಬಹುದು. ಭೀತಿ ಹೆಚ್ಚಿದಷ್ಟೂ, ಮಾಧ್ಯಮ ಸ್ವಾತಂತ್ರ್ಯದ ನಷ್ಟವೂ ಹೆಚ್ಚಾಗುತ್ತದೆ. ತಾವು ಭೀತಿಗೊಂಡಿದ್ದೇವೆ ಎಂಬುದನ್ನು ತೋರಿಸಿಕೊಳ್ಳಲು ಸರ್ಕಾರಗಳು ಇಷ್ಟ ಪಡುವುದಿಲ್ಲ. ಬದಲಿಗೆ, ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಹಿತಾಸಕ್ತಿ ಎಂಬಂಥ ನೆಪಗಳನ್ನು ಮುಂದಿಟ್ಟು ಮಾಧ್ಯಮ ಸ್ವಾತಂತ್ರ್ಯ ನಿರ್ಬಂಧಿಸುವ ಯತ್ನಗಳು ಪುಟಿದೇಳುತ್ತಲೇ ಇರುತ್ತವೆ. 

2021ರ ತನ್ನ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ರಿಪೆÇೀರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‍ಎಸ್‍ಎಫ್) ಮಾಡಿರುವ ವರದಿ ಇದು: “ಮಾಹಿತಿ ಪಡೆದುಕೊಳ್ಳುವ ಜನರ ಅವಕಾಶಗಳು ನಾಟಕೀಯವಾಗಿ ಇಳಿಕೆಯಾಗಿದೆ. ಸುದ್ದಿ ಪ್ರಕಟಣೆಗೆ ಅಡ್ಡಿಗಳೂ ಹೆಚ್ಚಾಗುತ್ತಿವೆ. ಪತ್ರಕರ್ತರು ಮಾಹಿತಿ ಪಡೆದುಕೊಳ್ಳಲು ಹಾಗೂ ವಿಮರ್ಶಾತ್ಮಕ ವರದಿಗಾರಿಕೆ ಮಾಡುವುದನ್ನು ನಿರ್ಬಂಧಿಸಲು ಕೋವಿಡ್-19 ಅನ್ನು ನೆಪವಾಗಿ ಬಳಸಲಾಗುತ್ತಿದೆ”.

ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 2021ರಲ್ಲಿ, 180 ರಾಷ್ಟ್ರಗಳ ಪೈಕಿ ಭಾರತದ ಸ್ಥಾನ 142ರಲ್ಲಿದೆ. 2016ರಲ್ಲಿ 133ರ ಸ್ಥಾನದಲ್ಲಿದ್ದ ಭಾರತದ ಶ್ರೇಯಾಂಕ ನಿರಂತರವಾಗಿ ಕುಸಿತ ಕಾಣುತ್ತಲೇ ಇದೆ. ತಮ್ಮ ವೃತ್ತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಪತ್ರಕರ್ತರಿಗೆ ಅಪಾಯಕಾರಿಯಾಗಿರುವ ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆ ಎಂದು ಆರ್‍ಎಸ್‍ಎಫ್ ವರದಿ ಹೇಳಿದೆ. ಆದರೆ ಆರ್‍ಎಸ್‍ಎಫ್ ಶ್ರೇಯಾಂಕಗಳ ಬಗ್ಗೆಯೇ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಕಳೆದ ವರ್ಷ ಆಕ್ಷೇಪ ಎತ್ತಿದ್ದರು. ಮಾಧ್ಯಮಗಳ ಕುರಿತಾದ ಹಗೆತನದ ಭಾವನೆಯು ತೀವ್ರ ರಾಷ್ಟ್ರೀಯವಾದಿ ರಾಜಕಾರಣದ ಮುಖ್ಯ ಅಂಶ ಎಂಬುದು ಹಲವು ರಾಷ್ಟ್ರಗಳ ಸಂದರ್ಭಗಳಲ್ಲೂ ವ್ಯಕ್ತವಾಗಿದೆ. 

ಹಲವು ಮಾಧ್ಯಮ ಸಂಸ್ಥೆಗಳು, ಸೈದ್ಧಾಂತಿಕ ನೆಲೆಯಲ್ಲಿ ಅಪಹೃತಗೊಂಡಿರುವುದು ದೃಗ್ಗೋಚರ. ಅವು ಪ್ರಸಾರ ಮಾಡುವುದು ಅಥವಾ ಪ್ರಚಾರ ಮಾಡುವುದು, ಏಕದಿಕ್ಕಿನ ಚಿಂತನಾ ಪ್ರಕ್ರಿಯೆ. ಚಿಂತನಾ ವೈವಿಧ್ಯವನ್ನು ಅವು ತಿರಸ್ಕರಿಸುತ್ತವೆ. ತಮ್ಮ ಹಿತಾಸಕ್ತಿ ಬೆಳೆಸಲು ಭಾವನೆಗಳನ್ನು ಉದ್ದೀಪಿಸಿ ಪ್ರಭಾವಿಸುತ್ತವೆ. ಹಲವು ಸುದ್ದಿವಾಹಿನಿ ಗಳಲ್ಲಿ ಸರ್ಕಾರಿ ಪರ ಸುದ್ದಿಗಳೇ ಬಿಂಬಿತ. ಇನ್ನು ಟಿಆರ್‍ಪಿ ಹೆಚ್ಚಿಸಿಕೊಳ್ಳುವುದಕ್ಕಾಗಿ ಲಜ್ಜೆಗೆಟ್ಟ ಪ್ರತಿಪಾದನೆಗಳು, ಆಧಾರರಹಿತ ವಾದವಿವಾದಗಳು, ಅಪ್ರಸ್ತುತ ಸುದ್ದಿಗಳ ಪ್ರಚಾರಗಳಿಂದಾಗಿ ಮಾಧ್ಯಮಗಳ ಗುಣಮಟ್ಟದ ಅವನತಿ ಎದ್ದುಕಾಣಿಸುವಂತಹದ್ದು. ಆದರೆ, ಇಂತಹವು, ಮಾಧ್ಯಮಗಳ ಮೇಲಿನ ವಿಶ್ವಾಸಾರ್ಹತೆಯನ್ನೇ ಕುಂದಿಸುವಂತಹವು. ವೃತ್ತಿಪರ ನೈತಿಕತೆಗಳಿಗೆ ಯಾವುದೇ ಗೌರವ, ಬದ್ಧತೆ ಇಲ್ಲದೆ, ಮಾಧ್ಯಮದ ಸ್ವಾತಂತ್ರ್ಯ ತೀವ್ರ ಒತ್ತಡಕ್ಕೆ ಸಿಲುಕಿದಂತಾಗಿರುವುದು ಇಲ್ಲಿ ಎದ್ದು ಕಾಣಿಸುತ್ತದೆ.

ರಾಷ್ಟ್ರೀಯ ಮಹತ್ವದ ವಿಚಾರಗಳ ಬಗ್ಗೆ ಜನರಲ್ಲಿ ಅರಿವಿನ ಕಿಡಿ ಹೊತ್ತಿಸಿ, ಹಕ್ಕು, ಕರ್ತವ್ಯಗಳ ಬಗ್ಗೆ ಎಚ್ಚರ ಮೂಡಿಸುವ ಸೇತುವೆಗಳಾಗುತ್ತವೆ ಎಂಬಂಥ ಪರಿಕಲ್ಪನೆಯು ಸುದ್ದಿಗಳ ಬಗ್ಗೆ ಮೊದಲು ಇತ್ತು. ಆದರೆ, ಮಾಧ್ಯಮಗಳು, ಕಳೆದ ಕೆಲವು ವರ್ಷಗಳಲ್ಲಿ ಪ್ರಚಾರ ವೇದಿಕೆಗಳಾಗಿ ಪರಿವರ್ತನೆಯಾಗಿವೆ. ಅಲ್ಲದೆ, ಇವು ಪೂರ್ವಗ್ರಹಪೀಡಿತ ಅಭಿಪ್ರಾಯಗಳ ಮೂಲವಾಗುತ್ತಿವೆ.

ಚುನಾವಣೆಗಳ ಸಂದರ್ಭಗಳಲ್ಲಿ ಕಾಸು ನೀಡಿ ತಮ್ಮ ಪರವಾಗಿ ತಮಗೆ ಬೇಕಾದಂತಹ ವರದಿಗಳನ್ನು ಬರೆಸಿಕೊಳ್ಳುವಂತಹ ರಾಜಕೀಯ ನೇತಾರರು ಹಾಗೂ ಬೆಂಬಲಿಗರು ಶುರು ಮಾಡಿದ `ಪೇಯ್ಡ್ ನ್ಯೂಸ್’ (ಕಾಸಿಗಾಗಿ ಸುದ್ದಿ) ಪರಂಪರೆಯಂತೂ ಮಾಧ್ಯಮಗಳ ವರ್ಚಸ್ಸಿಗೆ ಮಸಿ ಬಳಿದಿದೆ. ರಾಜಕೀಯ ಪಕ್ಷಗಳು ಮತ್ತು ಮಾಧ್ಯಮ ಚಾನೆಲ್ ಗಳು ಅಥವಾ ಸುದ್ದಿ ಸಂಸ್ಥೆಗಳ ಮಧ್ಯೆ ಹೆಚ್ಚುತ್ತಿರುವ ಬಾಂಧವ್ಯವೂ ಮಾಧ್ಯಮ ಸ್ವಾತಂತ್ರ್ಯ ಇಂದು ಅಪಾಯದಲ್ಲಿ ಸಿಲುಕುವುದಕ್ಕೆ ಮತ್ತೊಂದು ಕಾರಣ.

ಪತ್ರಿಕೋದ್ಯಮ, ಇಂದು `ಕಾವಲು ನಾಯಿ’ಯಲ್ಲ (ವಾಚ್ ಡಾಗ್). `ತೊಡೆ ಮೇಲೆ ಕುಳಿತ ನಾಯಿ’ (ಲ್ಯಾಪ್ ಡಾಗ್) ಆಗಿ ಪರಿವರ್ತನೆಗೊಂಡಿದೆ. ಅಕಾಡೆಮಿಕ್  ವ್ಯಕ್ತಿಗಳಾದ ಬಾಬ್ ಫ್ರಾಂಕ್ಲಿನ್, ಮಾರ್ಟಿನ್ ಹ್ಯಾಮರ್, ಮೇರಿ ಕಿನ್ ಸೆ ಹಾಗೂ ಅವರ ಸಹೋದ್ಯೋಗಿಗಳು ಪತ್ರಿಕೋದ್ಯಮದ `ಲ್ಯಾಪ್ ಡಾಗ್ `ಸಿದ್ಧಾಂತವನ್ನು  ಸೂತ್ರೀಕರಿಸಿರುವ ರೀತಿ ಇದು: ಸಾರ್ವತ್ರಿಕ ಮನ್ನಣೆಗೆ ಪಾತ್ರವಾಗುವಂತಹ `ಕಾವಲು ನಾಯಿ’ಗಳಾಗಿ ಕಾರ್ಯನಿರ್ವಹಿಸುವುದಾಗಿ ಸ್ವಯಂ ಘೋಷಣೆ ಮಾಡಿಕೊಳ್ಳುವ ಪತ್ರಕರ್ತರಿಗೆ ತದ್ವಿರುದ್ಧವಾಗಿ `ಲ್ಯಾಪ್ ಡಾಗ್ ಮೀಡಿಯಾ` ಮಾದರಿಯು ಸಮಾಜೋರಾಜಕೀಯ ಗಣ್ಯರ ಅಥವಾ ಕುಲೀನರ (ಎಲೈಟ್) ಕಾರ್ಯಸೂಚಿಯನ್ನು ಬೆಂಬಲಿಸುವುದಲ್ಲದೆ ಶೋಷಣೆ ಹಾಗೂ ಸಾಮಾಜಿಕ ಅಸಮಾನತೆಗಳನ್ನು ಸ್ಥಿರೀಕರಿಸುತ್ತದೆ.

ಈ ಸಿದ್ಧಾಂತದ ಮೂರು ಕಲ್ಪನೆಗಳು ಹೀಗಿವೆ: ಮೊದಲನೆಯದು, ಸುದ್ದಿ ಹಾಗೂ ಮಾಹಿತಿಗಳಿಗಾಗಿ ಸರ್ಕಾರ, ಕಾಪೆರ್Çರೇಟ್ ಹಾಗೂ ಅಧಿಕಾರವಲಯದ ಗಣ್ಯರ ಮೇಲೆ ಸುದ್ದಿ ಮಾಧ್ಯಮಗಳು ಅತಿಯಾಗಿ ಅವಲಂಬಿತವಾಗುತ್ತವೆ. ಎರಡನೆಯದು, ಗಣ್ಯರ ಭಾಗವಾಗಿರದ ಗುಂಪುಗಳ ದೃಷ್ಟಿಕೋನಗಳನ್ನು `ಲ್ಯಾಪ್ ಡಾಗ್’ ಪತ್ರಕರ್ತರು ಎಂದೂ ಅರ್ಥ ಮಾಡಿಕೊಳ್ಳಲಾರರು ಅಥವಾ ಅರ್ಥ ಮಾಡಿಕೊಳ್ಳುವ ಆಸಕ್ತಿಯನ್ನೂ ತೋರಲಾರರು. ಮೂರನೆಯದು, ವರದಿಗಾರಿಕೆಯನ್ನು ಆಧರಿಸುವುದಕ್ಕಿಂತ ಹೆಚ್ಚಾಗಿ ವಾದವಿವಾದಗಳಲ್ಲೇ ತೊಡಗಿಕೊಳ್ಳುವ ಸುದ್ದಿಮಾಧ್ಯಮಗಳು, ರಾಜಕೀಯ ಹಾಗೂ ಕಾಪೆರ್Çರೇಟ್ ಗಣ್ಯರಿಗೆ ಅನುಕೂಲಕರವಾದ ಅಂತರ್ಗತ ರಾಜಕೀಯ ಪೂರ್ವಗ್ರಹಗಳನ್ನು ಹೊಂದಿರುತ್ತವೆ. ರಾಜಕೀಯ ಹಾಗೂ ಕಾಪೆರ್Çರೇಟ್ ಗಣ್ಯರ ತರಬೇತಿ ಪಡೆದ ನಾಯಿಗಳಂತೆ ವರ್ತಿಸಲೂ ಈ ಮಾಧ್ಯಮಗಳು ಸಿದ್ಧವಿರುತ್ತವೆ.

ಭಾರತದ ಸಂದರ್ಭದಲ್ಲಿ `ಲ್ಯಾಪ್ ಡಾಗ್’ಗೆ `ಗೋದಿ ಮೀಡಿಯಾ’ ಎಂಬ ನುಡಿಗಟ್ಟನ್ನು ಎನ್‍ಡಿಟಿವಿ ಇಂಡಿಯಾ ಪತ್ರಕರ್ತ ರವೀಶ್ ಕುಮಾರ್ ಅವರು ಬಳಕೆಗೆ ತಂದಿದ್ದು, ಇದು ಈಗಾಗಲೇ ಭಾರತೀಯ ರಾಜಕೀಯ ಪರಿಭಾಷೆಗೆ ಸೇರ್ಪಡೆಗೊಂಡಿದೆ. ಪ್ರತಿಭಟನಾಕಾರರು ಹಾಗೂ ತೀರಾ ಇತ್ತೀಚೆಗೆ ರೈತ ಪ್ರತಿಭಟನಾಕಾರರು `ಗೋದಿ ಮೀಡಿಯಾ’ದ ವಿರುದ್ಧ ಪ್ರತಿಭಟನೆಗಳನ್ನು ತೋರಿ ತಮ್ಮ ವಿಚಾರಗಳನ್ನು ಮಂಡಿಸಲು ತಮ್ಮದೇ ಪ್ರಕಟಣಾ ಹಾಗೂ ಪ್ರಸಾರ ವಿಧಾನಗಳನ್ನು ಕಂಡುಕೊಂಡಿದ್ದನ್ನೂ ನೋಡಿದ್ದೇವೆ.

ಈ ವರ್ಷ ಜನವರಿ ತಿಂಗಳಾಂತ್ಯಕ್ಕೆ ಎರಡು ತಿಂಗಳಿಗೂ ಹೆಚ್ಚಿನ ಕಾಲ ಪೂರೈಸಿದ್ದ ರೈತರ ಹೋರಾಟವು, ಅಂತರರಾಷ್ಟ್ರೀಯ ನೆಲೆಯಲ್ಲಿ ಮುಜುಗರ ಸೃಷ್ಟಿಸುವ ಭೀತಿ ಎದುರಾಗುತ್ತಿದ್ದಂತೆಯೇ ಮಾಧ್ಯಮದ ಬಾಯಿ ಮುಚ್ಚಿಸುವ ಪ್ರಯತ್ನವೂ ಸರ್ಕಾರದಿಂದ ನಡೆಯಿತು. ಜನವರಿ 26ರಂದು ನಡೆದ ರೈತರ ಟ್ರ್ಯಾಕ್ಟರ್ ಪ್ರತಿಭಟನೆ ಸಂದರ್ಭದ ಹಿಂಸಾಚಾರಗಳಿಗೆ ಸಂಬಂಧಿಸಿ ಮಾಡಿದ ಟ್ವೀಟ್ ಗಳಿಗಾಗಿ ಹಿರಿಯ ಪತ್ರಕರ್ತರಾದ ರಾಜದೀಪ್ ಸರ್ದೇಸಾಯಿ, ಮೃಣಾಲ್ ಪಾಂಡೆ, ವಿನೋದ್ ಕೆ.ಜೋಸ್ ಸೇರಿದಂತೆ ಆರು ಪತ್ರಕರ್ತರ ವಿರುದ್ಧ  ದೇಶದ್ರೋಹ ಪ್ರಕರಣ ದಾಖಲಿಸಿದಂತಹ ವಿದ್ಯಮಾನವೂ ನಡೆದು, ಇದಕ್ಕೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ತೀವ್ರ ಆಕ್ಷೇಪವನ್ನೂ ದಾಖಲಿಸಿತು.

ಈ ಪ್ರಕರಣದ ನಂತರ, ಪರ್ತಕರ್ತ ರಾಜ್‍ದೀಪ್ ಸರ್ದೇಸಾಯಿ ಅವರನ್ನು `ಇಂಡಿಯಾ ಟುಡೇ’ ಟಿವಿ ಕಾರ್ಯಕ್ರಮದಿಂದ ಹದಿನೈದು ದಿನಗಳ ಕಾಲ ಹೊರಗುಳಿಸಿದ್ದು ಕಂಪೆನಿಯ ಆಂತರಿಕ ವಿಚಾರ ಎಂಬುದೇನೋ ಸರಿ. ಆದರೆ, ಸರ್ದೇಸಾಯಿ ಮೇಲಿನ ಈ ಕ್ರಮ, `ಒಂದು ಮಿತಿಯೊಳಗೇ ಇರಬೇಕು’ ಎಂಬುದರ ಬಗ್ಗೆ ಟಿವಿ ಚಾನೆಲ್ ಗಳ ಆಡಳಿತವರ್ಗಗಳ ಮೇಲಿರುವ ಒತ್ತಡಗಳಿಗೂ ಸೂಚಕ. ಆದರೆ, ರಾಜ್‍ದೀಪ್ ಸರ್ದೇಸಾಯಿ ಪ್ರಕರಣವು, ಸರ್ಕಾರದ ಕುರಿತಂತೆ ವಿಮರ್ಶಾತ್ಮಕ ನಿಲುವುಗಳನ್ನು ಹೊಂದಿದ  ಪತ್ರಕರ್ತರೊಬ್ಬರ ಮೇಲೆ ಆಡಳಿತ ವರ್ಗವು ಕ್ರಮ ಕೈಗೊಂಡಂತಹ ಮೊದಲ ಪ್ರಕರಣವೇನೂ ಅಲ್ಲ. ಇತ್ತೀಚಿನ ವರ್ಷಗಳಲ್ಲಿ ಹಲವು ಪ್ರಮುಖ ಪತ್ರಕರ್ತರು, ಪ್ರಮುಖ ಸುದ್ದಿ ವಾಹಿನಿಗಳಿಂದ ಹೊರ ನಡೆದಿದ್ದಾರೆ ಎಂಬುದನ್ನೂ ನೆನಪಿಸಿಕೊಳ್ಳಬೇಕು. 

ಇತಿಹಾಸಕಾರ ಹಾಗೂ ಲೇಖಕ ರಾಮಚಂದ್ರ ಗುಹಾ ಅವರು `ಹಿಂದೂಸ್ಥಾನ್ ಟೈಮ್ಸ್ `ನಿಂದ ತಮ್ಮ ಪಾಕ್ಷಿಕ ಅಂಕಣವನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ಕಳೆದ ವರ್ಷ (2020) ಏಪ್ರಿಲ್ ನಲ್ಲಿ ಪ್ರಕಟಿಸಿದ್ದರು. ತಮ್ಮ ಆದ್ಯತೆಯ ಅಧಿಕೃತ ಸಂಕಥನದ ಶೈಲಿಗೆ ಸರಿಹೊಂದದ ಲೇಖಕರು, ಅಂಕಣಕಾರರ ಅಭಿಪ್ರಾಯ ಮಂಡನೆಗಳ ಕುರಿತಾಗಿ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿನ ಕಸಿವಿಸಿಯು ಈ ವಿದ್ಯಮಾನದಲ್ಲಿ ವ್ಯಕ್ತವಾಗಿತ್ತು. ಭಾರತ ಸರ್ಕಾರದ ಸೆಂಟ್ರಲ್ ವಿಸ್ತಾ ಯೋಜನೆಯ ಬಗ್ಗೆ ತಾವು ಬರೆದ ಅಂಕಣವನ್ನು ಪ್ರಕಟಿಸಲು ವ್ಯಕ್ತವಾದ ನಿರಾಕರಣೆಯ ನಂತರ ಗುಹಾ ಈ ನಿರ್ಧಾರ ಪ್ರಕಟಿಸಿದ್ದರು. ಪ್ರಕಟಿಸಲು ಸಂಪಾದಕರು ಉತ್ಸುಕರಾಗಿಯೇ ಇದ್ದರು. ಆದರೆ “ಬಾಸ್” ಹಾಗೂ “ಆಡಳಿತವರ್ಗ” ದ  ನಿರ್ಧಾರವನ್ನು ಅವರು ಕಡೆಗಣಿಸುವಂತಿರಲಿಲ್ಲ ಎಂದು ಗುಹಾ ಟ್ವೀಟ್ ಮಾಡಿದ್ದರು.

ರಾಷ್ಟ್ರದಲ್ಲಿ ಲಾಕ್ ಡೌನ್ ಘೋಷಣೆಗೂ ಮುಂಚೆ, ಭಾರತದ ಬೃಹತ್ ಮುದ್ರಣ ಮಾಧ್ಯಮ ಸಂಸ್ಥೆಗಳ 20 ಮಾಲೀಕರು ಹಾಗೂ ಸಂಪಾದಕರ ಜೊತೆ ನರೇಂದ್ರ ಮೋದಿಯವರು ವಿಡಿಯೊ ಕಾನ್ಫರೆನ್ಸ್ ನಡೆಸಿದ್ದರೆಂಬುದೂ ಇಲ್ಲಿ ಗಮನಾರ್ಹ. `ಹತಾಶೆ, ನಕಾರಾತ್ಮಕತೆ ಹಾಗೂ ವದಂತಿಗಳ ಪ್ರಸರಣ ತಡೆಯುವುದು ಮುಖ್ಯ’ ಎಂದು ಈ ಸಭೆಯಲ್ಲಿ ಹೇಳಲಾಗಿತ್ತು.

ಆದರೆ, ಪ್ರಸಕ್ತ ರಾಜಕೀಯ ಆಡಳಿತದ ಅವಧಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ರೀತಿ ಎಷ್ಟು ತೀವ್ರವಾಗಿದೆ ಎಂದರೆ ಮಾಧ್ಯಮ ಸಂಸ್ಥೆಗಳು ಹಾಗೂ ಮಾಧ್ಯಮ ವ್ಯಕ್ತಿಗಳು ಸ್ವಯಂ ಸೆನ್ಸಾರ್ ಷಿಪ್ ಮಾಡಿಕೊಳ್ಳುವಷ್ಟರ ಮಟ್ಟಿಗೆ.

ಡಿಜಿಟಲ್ ಮಾಧ್ಯಮದ ತ್ವರಿತ ತಲುಪುವಿಕೆ ಹಾಗೂ ವ್ಯಾಪಕ ವೀಕ್ಷಣೆಯ ದೃಷ್ಟಿಯಿಂದ ಡಿಜಿಟಲ್ ಮಾಧ್ಯಮ ನಿಯಂತ್ರಿಸುವ ತನ್ನ ಇಚ್ಛೆಯನ್ನು ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯಕ್ಕೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಶಕ್ತಿಶಾಲಿ ಸರ್ಕಾರ ಹೇಳುತ್ತದೆ ಎಂದರೆ, ಮಾಧ್ಯಮ ಸ್ವಾತಂತ್ರ್ಯ ಅಪಾಯದಲ್ಲಿ ಸಿಲುಕಿದೆ ಎಂದೇ ಅರ್ಥ.

ಹಾಗೆಯೇ ಪತ್ರಕರ್ತರ ಮೇಲಿನ ಒತ್ತಡ ಬರೀ ರಾಜಕೀಯ ವಲಯದಿಂದಷ್ಟೇ ಅಲ್ಲ, ಕಾಪೆರ್Çರೇಟ್ ವಲಯದಿಂದಲೂ ಇದೆ. ಉದ್ಯಮಗಳ ಕುಕೃತ್ಯಗಳ ಕುರಿತಾದ ವರದಿಗಳ ಪ್ರಕಟಣೆಗಾಗಿ ಉದ್ಯಮಿಗಳಿಂದ ಬೆದರಿಕೆಗೊಳಗಾದ ಪ್ರಕರಣಗಳೂ ಇವೆ.

ಮಾಧ್ಯಮಗಳ ಮೇಲಿನ ಆಕ್ರಮಣವನ್ನು ಸರ್ಕಾರಗಳು ಅಧಿಕೃತಗೊಳಿಸಿರುವ ಈ ಸಂದರ್ಭದಲ್ಲಿಯೇ `ಡಿಸ್ ಇನ್ ಫರ್ಮೇಷನ್` (ತಪ್ಪುಮಾಹಿತಿಗಳ ಪ್ರಸಾರ) ಪ್ರಪಂಚವೂ ಮುನ್ನೆಲೆಗೆ ಬಂದಿದೆ. ವಿಶ್ವಸಂಸ್ಥೆ ಪ್ರಕಾರ, ಇದೂ ಸಹ ಪತ್ರಿಕೋದ್ಯಮದ ಮೇಲಿನ ಆಕ್ರಮಣವನ್ನು ಪ್ರತಿನಿಧಿಸುವಂತಹದ್ದು. ವಿಶ್ವಸಂಸ್ಥೆ ಹೇಳುವ ಪ್ರಕಾರ, ಸಾರ್ವಜನಿಕ ಆರೋಗ್ಯ ಸಲಹೆ ವರದಿಗಾರಿಕೆಯೊಂದಿಗೆ `ಸಮಾನಾಂತರವಾದ ಡಿಸ್ ಇನ್ ಫರ್ಮೇಷನ್ ಪ್ಯಾಂಡೆಮಿಕ್` ಜೊತೆಯಾಗಿದೆ. ಕೊರೊನಾ ವೈರಸ್ ಹುಟ್ಟಿನಿಂದ ಹಿಡಿದು ಚಿಕಿತ್ಸೆಗಾಗಿ ಸಾಬೀತಾಗದ ತಂತ್ರಗಳು ಹಾಗೂ ಆರೈಕೆ ವಿಧಾನಗಳ ಪ್ರಸಾರದವರೆಗೆ ಈ `ಡಿಸ್ ಇನ್ ಫರ್ಮೇಷನ್’ ವ್ಯಾಪಿಸಿಕೊಂಡಿದೆ. `ಡಿಸ್ ಇನ್‍ಫರ್ಮೇಷನ್ ವಿರುದ್ಧದ ಸಮರದಲ್ಲಿ ಮುಕ್ತ ಹಾಗೂ ವೃತ್ತಿಪರ ಪತ್ರಿಕೋದ್ಯಮಕ್ಕೆ ಮಾನ್ಯತೆ ಬೇಕಿದೆ’ ಎಂದು ವಿಶ್ವಸಂಸ್ಥೆ ಹೇಳುತ್ತದೆ.

ಸ್ವತಂತ್ರ ನಿರ್ಭೀತ ಪತ್ರಿಕೋದ್ಯಮದ ಉಳಿವಿಗೆ ಸಾರ್ವಜನಿಕ ಹಿತಾಸಕ್ತಿ ಎಂಬುದು ಮುಖ್ಯವಾಗಬೇಕು. ದೊಡ್ಡ ಮಾಧ್ಯಮ ಸಂಸ್ಥೆಗಳು, ತಮ್ಮ ಪತ್ರಕರ್ತರನ್ನು ಕಡೆಯವರೆಗೂ ಬೆಂಬಲಿಸುವ ಸ್ಥಿತಿ ಸೃಷ್ಟಿಯಾಗಬೇಕು.  ವರದಿಗಳ ಪ್ರಕಟಣೆಗೆ ಸತ್ಯ ಮಾತ್ರವೇ ಮಾನದಂಡವಾಗಬೇಕು. ಮಾರುಕಟ್ಟೆ ವಿಭಾಗದ ನಿರ್ದೇಶನಗಳಿಗೆ ಒಳಪಡದೆ, ಸಂಪಾದಕೀಯ ವಿಭಾಗವೇ ಮುನ್ನಡೆಸುವ ವಾತಾವರಣ ಸಾಧ್ಯವಾಗಬಹುದೇ? ಹಿಂದೆ ಒಳ್ಳೆಯ ಪತ್ರಿಕೋದ್ಯಮದ ಆದ್ಯತೆಗಳಾಗಿದ್ದಂತಹ ಸತ್ಯ, ಪರಿಶೀಲನೆ (ವೆರಿಫಿಕೇಷನ್) ಹಾಗೂ ವಸ್ತುನಿಷ್ಠತೆ. ಮರುಕಳಿಸಬೇಕು. ಮಾಧ್ಯಮ ನಿಯೋಜನೆಗಳಲ್ಲಿ ವೈವಿಧ್ಯದ ವಸ್ತು ಹಾಗೂ ಸಮಾಜದ ಎಲ್ಲಾ ಗುಂಪುಗಳಿಗೆ ಅಂತಹ ವೈವಿಧ್ಯ ಎಟುಕಿಸುವಂತಾಗುವುದೂ ಮುಖ್ಯ. ಅಧಿಕಾರದಲ್ಲಿರುವವರಿಗೆ ಉಪಕೃತ ಮನಸ್ಥಿತಿಯಲ್ಲಿ ಮಾಧ್ಯಮ ಸಂಸ್ಥೆಗಳು ಇದ್ದಲ್ಲಿ ಸ್ವತಂತ್ರ ಪತ್ರಿಕೋದ್ಯಮದ ಸಾಧ್ಯತೆ ಕ್ಷೀಣ.

ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‍ಡಿಜಿ) 16 ನ್ಯಾಯಯುತ, ಶಾಂತಿಯುತ ಹಾಗೂ ಎಲ್ಲರನ್ನೂ ಒಳಗೊಳ್ಳುವ ಸಮಾಜಗಳ ನಿರ್ಮಾಣಕ್ಕೆ ಕರೆ ನೀಡುತ್ತದೆ. ಈ ಗುರಿಗಳ ಸಾಧನೆಗೆ ಅಗತ್ಯವಾದದ್ದು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪತ್ರಕರ್ತರ ಸುರಕ್ಷತೆ. ಹಾಗಿದ್ದಾಗ ಮಾತ್ರ ಸಂಘರ್ಷಗಳ ತಡೆ ಹಾಗೂ ಪ್ರಜಾಪ್ರಭುತ್ವ ಪ್ರಕ್ರಿಯೆ ಬೆಂಬಲಿಸುವಲ್ಲಿ ಮಾಧ್ಯಮವು ಪ್ರಮುಖ ಪಾತ್ರ ವಹಿಸಬಹುದು.

*ಲೇಖಕರು `ಪ್ರಜಾವಾಣಿ’ಯಲ್ಲಿ ಮೂರೂವರೆ ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ ನಂತರ ಸದ್ಯಕ್ಕೆ  ಬರವಣಿಗೆ, ಅನುವಾದ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಅಭಿವೃದ್ಧಿ, ಮಹಿಳಾ ಅಧ್ಯಯನ, ಮಾಧ್ಯಮ ಅಧ್ಯಯನ, ಸಾಹಿತ್ಯ ಮತ್ತು ರಾಜಕಾರಣ- ಆಸಕ್ತಿಯ ಕ್ಷೇತ್ರಗಳು.

Leave a Reply

Your email address will not be published.