ಉಭಯ ಕವಿ ರನ್ನನ ಅಜಿತನಾಥ ಪುರಾಣಂ

ಇದು ರನ್ನನ ಧಾರ್ಮಿಕ ಕಾವ್ಯ. ಕ್ರಿ.. 993ರಲ್ಲಿ ಕೃತಿಯ ರಚನೆಯಾಗಿದೆ. ಇದು ಜೈನಧರ್ಮದ ತ್ರಿಷಷ್ಟಿ ಶಲಾಕ ಪುರುಷರಲ್ಲಿ ಒಬ್ಬನಾದ ಎರಡನೆಯ ತೀರ್ಥಂಕರ ಅಜಿತನಾಥನ ಕಥೆ ಹಾಗೂ ಎರಡನೆಯ ಚಕ್ರವರ್ತಿಯಾದ ಸಗರನ ಚರಿತೆಯ ಕಥೆಯನ್ನು ವಸ್ತುವಾಗಿ ಹೊಂದಿದೆ. ದಾನ ಚಿಂತಾಮಣಿ ಅತ್ತಿಮಬ್ಬೆ ರನ್ನನ ಪೋಷಕಳು.

-ಡಾ.ಲಕ್ಷ್ಮೀಕಾಂತ ಸಿ. ಪಂಚಾಳ

ಹಳಗನ್ನಡ ಸಾಹಿತ್ಯದ ಮಹತ್ವದ ಚಂಪೂ ಕವಿ ರನ್ನ. ಕನ್ನಡ ಸಾಹಿತ್ಯದಲ್ಲಿ ತನ್ನ ವಿಶಿಷ್ಟವಾದ ಕಾವ್ಯರಚನೆಯ ಶೈಲಿಯಿಂದ ‘ಶಕ್ತಿಕವಿ’ ಎಂದು ಗುರುತಿಸಲ್ಪಟ್ಟಿದ್ದಾನೆ. ಸಂಸ್ಕøತ ಮತ್ತು ಕನ್ನಡ ಎರಡು ಭಾಷೆಗಳಲ್ಲಿ ಕಾವ್ಯ ರಚನೆಯ ಪ್ರೌಢಿಮೆಯನ್ನು ಹೊಂದಿದ್ದರಿಂದ ‘ಉಭಯಕವಿ’ ಎಂಬ ಖ್ಯಾತಿ ಈತನಿಗಿದೆ.

ರನ್ನನು ತನ್ನ ಜೀವನ ವಿವರವನ್ನು ಅಜಿತ ಪುರಾಣದ ಕಾವ್ಯದ ಕೊನೆಯಲ್ಲಿ ಹೇಳಿಕೊಂಡಿದ್ದಾನೆ. ಈತ ಕ್ರಿ. ಶ. ಸು. 949 ರ ಸೌಮ್ಯ ಸಂವತ್ಸರದ ಕರ್ಕಾಟಕ ರಾಶಿಯಲ್ಲಿ ಬೆಳುವಲ ನಾಡಿನ ಜಮಖಂಡಿ ಬಳಿಯ ಮುದುವೊಳಲು (ಈಗಿನ ಬಾಗಲಕೋಟ ಜಿಲ್ಲೆಯ ಮುಧೋಳ) ದಲ್ಲಿ ಜನಿಸಿದನು. ತಾಯಿ ಅಬ್ಬಲಬ್ಬೆ. ತಂದೆ ಜಿನವಲ್ಲಭೇಂದ್ರ. ವೃತ್ತಿಯಿಂದ ಬಳೆಗಾರ. ರೇಚಣ-ಮಾರಮಯ್ಯ ಈತನ ಸಹೋದರರು. ಜಕ್ಕಿ-ಶಾಂತಿ ಎಂಬ ಇಬ್ಬರು ಹೆಂಡತಿಯರು. ರಾಯ ಮತ್ತು ಅತ್ತಿಮಬ್ಬೆ ಮಕ್ಕಳು. ಅಜಿತಸೇನಾಚಾರ್ಯರು ಈತನ ಗುರುಗಳು.

ರನ್ನ ಮೊದಲು ಗಂಗರ ಮಂತ್ರಿಯಾದ ಚಾವುಂಡರಾಯನ ಆಶ್ರಯವನ್ನು ಪಡೆದಿದ್ದ. ಗಂಗರ ಪತನದ ನಂತರ ಚಾಲುಕ್ಯ ಚಕ್ರವರ್ತಿ ತೈಲಪ ಹಾಗೂ ಅವನ ಮಗ ಇರಿವಬೆಡಂಗ ಸತ್ಯಾಶ್ರಯರ ಆಶ್ರಯದಲ್ಲಿದ್ದ. ಅನಂತರ ದಾನಚಿಂತಾಮಣಿ ಅತ್ತಿಮಬ್ಬೆ ಇವನ ಪೋಷಕಳಾಗಿದ್ದಳು. ಆದ್ದರಿಂದಲೇ ಚಾವುಂಡರಾಯ ಮತ್ತು ಅತ್ತಿಮಬ್ಬೆಯರ ಮೇಲಿನ ಅಭಿಮಾನಕ್ಕಾಗಿ ತನ್ನ ಮಕ್ಕಳಿಗೆ ರಾಯ ಮತ್ತು ಅತ್ತಿಮಬ್ಬೆ ಎಂದು ಹೆಸರಿಟ್ಟಿದ್ದು ಕಾಣುತ್ತೇವೆ.

ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೃತಿಗಳನ್ನು ಕಾಣಿಕೆಯಾಗಿ ನೀಡಿದ ಖ್ಯಾತಿ ರನ್ನ ಕವಿಯದ್ದು. ಈತನ ‘ಅಜಿತನಾಥ ಪುರಾಣಂ’ ಮತ್ತು ‘ಸಾಹಸಭೀಮ ವಿಜಯಂ ಅಥವಾ ಗದಾಯುದ್ಧ’ ಕೃತಿಗಳು ದೊರೆತಿವೆ. ‘ಚಕ್ರೇಶ್ವರ ಚರಿತೆ’ ಮತ್ತು ‘ಪರಶುರಾಮ ಚರಿತೆ’ ಕೃತಿಗಳು ಉಪಲಬ್ಧವಿಲ್ಲ. ಅಸಮಗ್ರವಾಗಿ ಲಭ್ಯವಿರುವ ‘ರನ್ನಕಂದ’ ಎಂಬ ಹಳಗನ್ನಡ ನಿಘಂಟು ಈತನದೇ ಎಂದು ಹೇಳಲಾಗುತ್ತಿದೆ.

‘ಅಜಿತ ಪುರಾಣ’ ಇದು ರನ್ನನ ಧಾರ್ಮಿಕ ಕಾವ್ಯ. ಕ್ರಿ. ಶ. 993 ರಲ್ಲಿ ಈ ಕೃತಿಯನ್ನು ರಚಿಸಿದ್ದಾನೆಂಬುದು ವಿದ್ವಾಂಸರ ಅಭಿಮತ. ಅಜಿತ ಪುರಾಣಕ್ಕೆ ಗುಣಭದ್ರಚಾರ್ಯರ ಸಂಸ್ಕøತದ ‘ಉತ್ತರ ಪುರಾಣ’ ಕೃತಿ ಆಕರವಾಗಿದೆ. ಇದು ಜೈನಧರ್ಮದ ತ್ರಿಷಷ್ಟಿ ಶಲಾಕ ಪುರುಷರಲ್ಲಿ ಒಬ್ಬನಾದ ಎರಡನೆಯ ತೀರ್ಥಂಕರ ಅಜಿತನಾಥನ ಕಥೆ ಹಾಗೂ ಎರಡನೆಯ ಚಕ್ರವರ್ತಿಯಾದ ಸಗರನ ಚರಿತೆಯ ಕಥೆಯನ್ನು ವಸ್ತುವಾಗಿ ಹೊಂದಿದೆ. ದಾನ ಚಿಂತಾಮಣಿ ಅತ್ತಿಮಬ್ಬೆ ಈ ಕೃತಿಯನ್ನು ಹೇಳಿಸಿದ್ದಾಳೆಂದು ರನ್ನ ಹೇಳಿಕೊಂಡಿದ್ದಾನೆ.

‘ಅಜಿತನಾಥ ಪುರಾಣಂ ಅಥವಾ ಅಜಿತ ತೀರ್ಥಂಕರ ಪುರಾಣ ತಿಲಕವು’ ಹನ್ನೆರಡು ಆಶ್ವಾಸಗಳಲ್ಲಿ ಚಿತ್ರಣಗೊಂಡಿದೆ. ಮೊದಲ ಆಶ್ವಾಸದಲ್ಲಿ ಅತ್ತಿಮಬ್ಬೆಯ ಚಿತ್ರಣವನ್ನೂ ಮತ್ತು ಕೊನೆಯ ಆಶ್ವಾಸದಲ್ಲಿ ಕವಿಯ ಇತಿವೃತ್ತಕ್ಕೆ ಮೀಸಲಿರಿಸಿದ್ದಾನೆ. ಎರಡನೆಯ ಆಶ್ವಾಸದಿಂದ ಎಂಟನೆಯ ಆಶ್ವಾಸದವರೆಗೂ ಅಜಿತನಾಥನ ಚರಿತ್ರೆಯನ್ನು, ಒಂಬತ್ತನೆಯ ಆಶ್ವಾಸದಿಂದ ಹನ್ನೊಂದನೆಯ ಆಶ್ವಾಸದವರೆಗೂ ಸಗರ ಚಕ್ರವರ್ತಿಯ ಕಥೆಯನ್ನು ವಿವರಿಸಿದ್ದಾನೆ. ಇದರಲ್ಲಿ ಭವಾವಳಿಗಳ ತೊಡಕಿಲ್ಲ. ಸುಲಭ ಶೈಲಿಯಲ್ಲಿ ಚಿತ್ರಣಗೊಂಡಿದೆ.

ಎನಿತುಂಟಾಗಮವರ್ಣನ

ಮನಿತುಮನೊಳಕೊಂಡು ಸಕಲಭವ್ಯಜನಂಗ

ಳ್ಗನುರಾಮನೊಡರಿಸಿದಪು

ದೆನಿಪ ಪುರಾಣಂ ಪುರಾಣತಿಲಕಮಿದಲ್ತೇ

ಆಗಮ ಲಕ್ಷಣಗಳು ಎಷ್ಟಿವೆಯೋ ಅಷ್ಟನ್ನೋ ಈ ಕೃತಿ ಒಳಗೊಂಡಿದೆ. ಸಕಲ ಭವ್ಯರಾದ ಜನಗಳಿಗೂ ತನ್ನ ಕೃತಿಯು ಪ್ರೀತಿಯನ್ನು ಒದಗಿಸುತ್ತದೆ. ತಾನು ರಚಿಸುತ್ತಿರುವ ‘ಅಜಿತ ಪುರಾಣ’ವು ಪುರಾಣತಿಲಕವೇ ಅಲ್ಲವೇ ಎಂದು ಪ್ರಶ್ನಿಸಿದ್ದಾನೆ.

ಅಜಿತಪುರಾಣದಲ್ಲಿ ಅತ್ತಿಮಬ್ಬೆಯ ಚಿತ್ರಣವು ಅತಿಮುಖ್ಯವೂ, ಗಮನಾರ್ಹವೂ ಆಗಿದೆ. ಪುಟ್ಟ ಸುಂದರ ಕಾವ್ಯ ಎಂದೇ ಹೇಳಬಹುದು. ಅತ್ತಿಮಬ್ಬೆಯ ವ್ಯಕ್ತಿತ್ವವು ಜೈನರಿಗೆ ಹಾಗೂ ಜೈನೇತರರಿಗೂ ಆಕರ್ಷಣಿಯವಾಗಿರುವುದನ್ನು ನಾವು ಮನಗಾಣಬಹುದು.

ಅಜಿತಜಿನಪದಯೋರುಹ

ರಜಸ್ಸಮಾಸಂಗಿಭೃಂಗಿ ಗುಣಶೀಲದಯಾ

ಧ್ವಜೆಯೆಂದು ನಾಡೆ ಸುವಿನೇ

ಯಜನಂ ಬಣ್ಣಿಪುದು ದಾನಚಿಂತಾಮಣಿಯಂ

ಅಜಿತ ಜಿನರ ಪಾದ ಕಮಲಗಳ ದೂಳಿಗೆ ಬಂದು ಸೇರುವ ದುಂಬಿ ಎಂಬುದಾಗಿ ಗುಣ, ಶೀಲ, ದಯಾ-ಇವುಗಳ ಧ್ವಜ ಇವನ್ನು ಎತ್ತಿಹಿಡಿಯುವವಳು ಎಂಬುದಾಗಿ ತುಂಬ ವಿನಯವಂತರಾದ ಜನಸಮೂಹ ‘ದಾನಚಿಂತಾಮಣಿ’ ಅತ್ತಿಮಬ್ಬೆಯನ್ನು ಬಣ್ಣಿಸುತ್ತದೆ ಎಂದು ಕವಿ ತಿಳಿಸುತ್ತಾನೆ. ಅಲ್ಲದೆ ‘ದಾನಿಗಳೊಳಗಗ್ಗಳದ ದಾನಚಿಂತಾಮಣಿ’ ಎಂದು ಅತ್ತಿಮಬ್ಬೆಯ ಉದಾತ್ತ ವ್ಯಕ್ತಿತ್ವವನ್ನು ಬಾಯ್ತುಂಬ ಹೊಗಳಿದ್ದಾನೆ. ರನ್ನನಿಗೆ ಅತ್ತಿಮಬ್ಬೆಯ ಮೇಲೆ ಅಪಾರವಾದ ಗೌರವ, ಭಕ್ತಿಭಾವದಿಂದಾಗಿಯೇ ತನ್ನ ಮಗಳಿಗೆ ಅತ್ತಿಮಬ್ಬೆ ಎಂದು ಹೆಸರಿಟ್ಟಿರುವುದನ್ನು ಅತ್ತಿಮಬ್ಬೆಯ ಪೂರ್ವಿಕರ ಇತ್ತಿವೃತ್ತದಿಂದ ತಿಳಿದು ಬರುತ್ತದೆ.

ವೆಂಗಿ ಮಂಡಲದಲ್ಲಿ ಪ್ರಸಿದ್ಧವಾದ ಕಂಮೆನಾಡಿನ ಪುಂಗನೂರಿನ ನಾಗಮಯ್ಯನಿದ್ದ, ಕೌಂಡಿನ್ಯ ಕುಲದವನಾದ ನಾಗಮಯ್ಯನಿಗೆ ಮಲ್ಲಪ, ಪೊನ್ನಮಯ್ಯ ಎಂಬ ಇಬ್ಬರು ಮಕ್ಕಳು. ಮಲ್ಲಪನು ಪಂಡಿತರಿಗೆ ಆಶ್ರಯದಾತನಾಗಿದ್ದರೆ, ಪೊನ್ನಪಯ್ಯ ಜಿನಭಕ್ತರಿಗೆ ಆಶ್ರಯದಾತರಾಗಿ, ವೀರ ಶೂರತನಕ್ಕೆ ಹೆಸರಾದವರು. ಮಲ್ಲಪನಿಗೆ ‘ಅಪ್ಪಕಬ್ಬೆ’ ಹೆಂಡತಿಯಾಗಿದ್ದಳು. ಈ ದಂಪತಿಗಳಿಗೆ ಐವರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು ಇದ್ದರು. ಇವರಲ್ಲಿ ಅತ್ತಿಮಬ್ಬೆ ಮತ್ತು ಗುಂಡಮಬ್ಬೆಯರು ಒಡಹುಟ್ಟಿದವರು. ಚಾಲುಕ್ಯ ಮಹಾಮಂತ್ರಿಯ ಮಗನಾದ ನಾಗದೇವನು ‘ಅತ್ತಿಮಬ್ಬೆ’ ಮತ್ತು ‘ಗುಂಡಮಬ್ಬೆ’ಯರನ್ನು ಮದುವೆಯಾದನು. ಕಾಳಗವೊಂದರಲ್ಲಿ ನಾಗದೇವನು ವೀರಾವೇಶದಿಂದ ಹೋರಾಡಿ ವೀರ ಮರಣ ಹೊಂದಿದನು.

ಎರಡೆ ವಲಂ ಕುಲವಧುಗಾ

ಚರಿಸಲ್ ಪತಿಯಿಂ ಪರೋಕ್ಷದೊಳ್ ಜಿನದೀಕ್ಷಾ

ಚರಣಂ ಮೇಣ್ ಶುಭಚರಿತದೆ

ಮರಣಂ ಮೇಣಳಿಪಿಂದೆ ಬಾಳ್ವುದು ದೊರೆಯೇ

ಕುಲವಧುವಾದವಳಿಗೆ ಗಂಡನು ಸತ್ತಾಗ ಎರಡೇ ಮಾರ್ಗಗಳಲ್ಲವೆ; ಜೈನ ವ್ರತವನ್ನು ಆಚರಿಸುತ್ತಾ ಬದುಕುವುದು, ಇಲ್ಲವೆ ಗಂಡನೊಡನೆ ಸಹಗಮನ ಮಾಡುವುದು. ಅದು ಬಿಟ್ಟು ಜೀವನದ ಮೇಲೆ ಅತಿಯಾದ ಆಸೆಯನಿಟ್ಟು ಬದುಕುವುದು ಸರಿಯೇ? ಎಂದು, ಗಂಡನೊಂದಿಗೆ ಅತ್ತಿಮಬ್ಬೆಯ ತಂಗಿ ಗುಂಡಮಬ್ಬೆ ಸಹಗಮನ ಹೊಂದಿದ್ದಳು. ಅಕ್ಕನಾದ ಅತ್ತಿಮಬ್ಬೆ ಜೈನದೀಕ್ಷೆಯ ಜೀವನ ಪಡೆದು ಪುತ್ರನ ಪಾಲನೆಯಲ್ಲಿ ನಿಂತಳು.

ಜಂಬೂ ದ್ವೀಪದ ಪೂರ್ವ ವಿದೇಹದ ವತ್ಸಕಾವತೀ ದೇಶದ ಸುಸೀಮಾ ನಗರದ ರಾಜ ವಿಮಲವಾಹನನಿಗೆ ವೈರಾಗ್ಯ ಉಂಟಾಗುವ ಪ್ರಸಂಗ ಅಜಿತಪುರಾಣದ ಸುಂದರವಾದ ಪ್ರಸಂಗ. ವಿಮಲವಾಹನನು ಒಂದು ದಿವಸ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಳ್ಳುತ್ತಿರುವಾಗ ತನ್ನ ಕೆನ್ನೆಯಲ್ಲಿ ಒಂದು ನೆರೆಗೂದಲು ಮೂಡಿದುದನ್ನು ಕಂಡನು. ಆಗ ಅವನಲ್ಲಿ ಒಮ್ಮೆಲೇ ವೈರಾಗ್ಯ ಮೂಡುತ್ತದೆ. ರೂಪ ಯೌವನಾದಿಗಳು ಕ್ಷಣಿಕ ಎಂಬುದನ್ನು ಮನಗಾಣುತ್ತಾನೆ.

ಜಲಬುದ್ಬುದಚಲವಿದ್ಯು

ದ್ವಿಲಸನ ಬಳರಿಪುಶರಾಸನಂಗಳ್ನಿರುತಂ

ಬಲವಿಭವರೂಪಯೌವನ

ವಿಲಾಸವಿಲಯಕ್ಕಿವಲ್ತೆ ದೃಷ್ಟಾಂತಂಗಳ್

ಮನುಷ್ಯನ ಬಲ, ವೈಭವ, ರೂಪ, ಯೌವನ ವಿಲಾಸ-ಇವುಗಳು ಕರಗುವುದಕ್ಕೆ ನೀರಿನ ಗುಳ್ಳೆ, ಮಿಂಚು ಕಾಮನಬಿಲ್ಲು ಇವು ದೃಷ್ಟಾಂತಗಳು ಅಲ್ಲವೇ? ಇವು ಎಷ್ಟು ಕ್ಷಣಿಕವೆಂಬುದನ್ನು ಕವಿ ರೂಪಕ ಮಾಲಿಕೆಯಿಂದ ಸ್ಪಷ್ಟಪಡಿಸುತ್ತಾನೆ. ಸಂಸಾರ ನಿಸ್ಸಾರವೆಂದು ಬಗೆಯುತ್ತಾನೆ, ಇಹ ಭೋಗವು ನರಕಕ್ಕೆ ದಾರಿ ಎಂದು ಅರಿತು, ತನ್ನ ಮಗನಿಗೆ ರಾಜ್ಯಭಾರವನ್ನು ಒಪ್ಪಿಸಿ ಜಿನದೀಕ್ಷೆ ಪಡೆದು ತಪಸ್ಸಿಗೆ ತೆರಳುತ್ತಾನೆ. ಘೋರ ತಪಸ್ಸನ್ನು ಆಚರಿಸಿ ಸಮಾಧಿ ಮರಣ ಹೊಂದಿ, ಸ್ವರ್ಗದಲ್ಲಿ ವಿಜಯ ಎಂಬ ವಿಮಾನದಲ್ಲಿ ‘ಅಹಮಿಂದ್ರದೇವ’ನಾಗಿ ಹುಟ್ಟಿದನು. ಅಲ್ಲಿ ಸಕಲ ಸುಖವನ್ನು ಅನುಭವಿಸಿ ದೇವತಾಯುಷ್ಯ ಪೂರ್ಣಗೊಂಡಿತು. ಮುಂದೆ, ಅಯೋಧ್ಯ ದೇಶದ ರಾಜಧಾನಿ ಸಾಕೇತಪುರ ಇಲ್ಲಿ ಚಕ್ರವರ್ತಿ ಜಿತಶತ್ರು ಮತ್ತು ಆತನ ರಾಣಿ ವಿಜಯಸೇನೆಯರು ಸಕಲಭೋಗಗಳನ್ನು ಅನುಭವಿಸುತ್ತ ಸುಖದಿಂದ ಇದ್ದರು. ವಿಜಯಸೇನೆಯ ಗರ್ಭದಲ್ಲಿ ಅವತರಿಸುವನು.

ಲೋಕೈಕ ಸುಂದರಿಯೆನಿಸಿದ ವಿಜಯಸೇನಾದೇವಿ ಗರ್ಭದಲ್ಲಿ ಅವತರಿಸುವ ಪೂರ್ವದಲ್ಲಿ ದೇವೇಂದ್ರನು ದೇವಾಂಗನೆಯರಿಂದ ಅವಳ ಗರ್ಭವನ್ನು ಶುದ್ಧಿಗೊಳಿಸಿದ್ದನು. ಅವತರಿಸಿದ ಮೇಲೆ ವಾದ್ಯ ಗೀತೆ, ನಾಟ್ಯ ಮೊದಲಾದ ವಿವಿಧ ವಿನೋದಗಳಿಂದ ಗರ್ಭಾವತರಣ ಕಲ್ಯಾಣವನ್ನು ಜರುಗುತ್ತದೆ. ಆ ಪುಣ್ಯಮೂರ್ತಿಯು ಆ ಮಹಾತಾಯಿಯ ಗರ್ಭ ಪ್ರವೇಶ ಮಾಡುತ್ತಿರುವ ವೇಳೆ ಬೆಳÀಗಿನ ಜಾವವಾಗಿತ್ತು ಆಗ ಹದಿನಾರು ಶುಭಸ್ವಪ್ನಗಳನ್ನು ಕಂಡು ನಿದ್ರೆ ತಿಳಿದೆದ್ದು, ಸ್ವಪ್ನ ದರ್ಶನದ ವೃತ್ತಾಂತವನ್ನು ಅರಸನಿಗೆ ತಿಳಿಸಿದಳು. ಆ ಶುಭಸ್ವಪ್ನಗಳ ಫಲವನ್ನು ತಿಳಿದ ಅರಸ ಜಿತಶತ್ರು ಹೀಗೆ ಹೇಳುತ್ತಾನೆ.

ಕುಲತಿಳಕಂ ಜಗತೀತಳ

ತಿಳಕಂತಾಂ ನಮಗೆ ತನಯನಾಗಲ್ ಬಗೆದಂ

ಬೆಳಗುಗುಮಾತಂ ನಮ್ಮಯ

ಕುಳಮಂ ಶ್ರೀಜೈನಧರ್ಮಮಂ ಪ್ರಿಯದಯಿತೇ (3-14)

ಪ್ರಿಯೆ, ಪ್ರಿಯ ಪತ್ನಿಯೇ, ನಮ್ಮ ಕುಲಕ್ಕೆ ತಿಲಕ ಪ್ರಾಯನೂ ಜಗತ್ತಿಗೇ ತಿಲಕಪ್ರಾಯನೂ ಆದ ಜಿನನು ನಮಗೆ ಮಗನಾಗಿ ಜನಿಸಲು ನಿರ್ಧರಿಸಿದ್ದಾನೆ. ಆತನು ನಮ್ಮ ಕುಲವನ್ನೂ ಶ್ರೀ ಜೈನಧರ್ಮವನ್ನು ಬೆಳಗುತ್ತಾನೆ ಎಂಬುದನ್ನು ತಿಳಿದು ಹೇಳುವನು. ವಿಜಯಸೇನಾದೇವಿಯ ಹರ್ಷವೂ ಮುಗಿಲು ಮುಟ್ಟಿತ್ತು. ಆನಂದ ತುದಿತಳಾಗಿ, ಪ್ರತಿ ನಿತ್ಯ ಜಿನಧರ್ಮ ಪಾಲನೆ ಮಾಡುತ್ತ ನವ ಮಾಸ ತುಂಬಿತು. ಶುಭ ಮಹೂರ್ತದಲ್ಲಿ ಅಜಿತನ ಜನನವಾಯಿತು.

ಕೃತಭವ್ಯೋತ್ಸವ ಮಾಘಶುದ್ಧದಶಮೀ ಪುಣ್ಯಾಹಯುಕ್ತಂ ಪ್ರಜಾ

ಪತಿಯೋಗಂ ಬೆರೆದಂದುರೋಹಿಣಿಯೊಲಿಂದ್ರಾನಂದತೂರ್ಯಂ ಸರಿ

ತ್ಪತಿಫೋಷಕ್ಕೆಣೆಯಾಗೆ ಭೋರ್ಗರೆಯೆ ಸಂದಿಕ್ಷ್ವಾಕು ವಂಶೋದಯೋ

ನ್ನತ ಶೈಲಾಗ್ರದೊಳಾದುದಂದಜಿತತೀರ್ಥೇಶಾಬ್ಜ ಮಿತ್ತೋದಯಂ

ಮಾಘ ಮಾಸದ ಶುದ್ಧ ದಶಮಿಯ ಶುಭದಿನದಂದು ಪ್ರಜಾಪತಿ ಯೋಗವು ಕೂಡಿರಲು ರೋಹಿಣಿ ನಕ್ಷತ್ರದಲ್ಲಿ ದೇವೇಂದ್ರನ ಆನಂದ ವಾದ್ಯ ಘೋಷವು ಸಮುದ್ರದ ಭೋರ್ಗರೆತಕ್ಕೆ ಸಮನಾಗಿ ಭೋರ್ಗರೆಯುತ್ತಿರಲು, ಪವಿತ್ರವಾದ ಇಕ್ಷ್ವಾಕು ವಂಶವೆಂಬ ಉನ್ನತವಾದ ಶೈಲದ ಶಿಖರದಲ್ಲಿ ಅಜಿತ ತೀರ್ಥಂಕರನಾಗಲಿರುವ ಶಿಶುಸೂರ್ಯನು ಉದಯಿಸಿದನು. ಇದು ಭವ್ಯರಾದವರಿಗೆಲ್ಲ ಮಹಾ ಉತ್ಸವವಾಯಿತು. ಅಜಿತನಾಥನ ಜನ್ಮಾಭಿಷೇಕವನ್ನು ರನ್ನ ಕವಿ ಬಹುರಮ್ಯವಾಗಿ, ಹೃದಯಂಗಮವಾಗಿ ಬಣ್ಣಿಸುತ್ತಾನೆ.

ಜಿತಶತ್ರು ಮಹಾರಾಜ ಅಜಿತನು ಬಾಲ್ಯ ಕಳೆದು ಯೌವನಕ್ಕೆ ಬಂದಾಗ ಸಹಸ್ರ ಕನ್ಯೆಯರೊಡನೆ ವಿವಾಹಮಾಡಿದನು. ರಾಜ್ಯಭಾರವನ್ನು ಅಜಿತನಿಗೆ ವಹಿಸಿದನು. ಕಾಲಾನಂತರದಲ್ಲಿ ಅಜಿತಸ್ವಾಮಿಗೆ ಅಜಿತಸೇನ ಎಂಬ ಪುತ್ರ ಜನಿಸಿದನು. ಹೀಗೆ ಕಾಲ ಕಳೆಯುತ್ತಿರಲು ಒಂದು ದಿನ ಆಕಾಶದಿಂz ಉರುಳಿ ಬೀಳುತ್ತಿರುವ ಉಲ್ಕಾಪಾತವನ್ನು ಕಂಡು ಅಜಿತನಾಥನಿಗೆ ಸಂಸಾರ ಹೇಯವೆನಿಸುತ್ತದೆ. ವೈರಾಗ್ಯವನ್ನು ಹೊಂದುತ್ತಾನೆ. ಮಗನಿಗೆ ರಾಜ್ಯಭಾರವನ್ನು ವಹಿಸಿಜಿನ ದೀಕ್ಷೆಯನ್ನು ಕೈಗೊಂಡನು.

ಅಜಿತಪುರಾಣದ ಮತ್ತೊಂದು ಸುಂದರ ನಿರೂಪಣೆ ಸಗರ ಚಕ್ರವರ್ತಿ ಕಥೆ. ಈತನು ಜೈನ ಧರ್ಮದ ತ್ರಿಷಷ್ಟಿ ಶಲಾಕಾಪುರುಷರಲ್ಲಿ ಎರಡನೆಯ ಚಕ್ರವರ್ತಿ. ಇಲ್ಲಿ ಅವನ ಹಿಂದಿನ ಮೂರು ಜನ್ಮಗಳ ಕಥೆ ಇದೆ. ಸಗರ ತುಂಬ ಶ್ರೇಷ್ಠನಾದ ದೊರೆ ಆಯುಧಗಾರದಲ್ಲಿ ಜನಿಸಿದ ಚಕ್ರರತ್ನದ ಸಹಾಯದಿಂದ ದಿಗ್ವಿಜಯವನ್ನು ಸಾಧಿಸುತ್ತಾನೆ. ಅಯೋಧ್ಯೆಯಲ್ಲಿ ತೊಂಬತ್ತಾರು ಸಾವಿರ ಮಡದಿಯರು; ಅರವತ್ತು ಸಾವಿರ ಮಕ್ಕಳು ಸುಖದಿಂದ ಕಾಲ ಕಳೆಯುತ್ತಿರುತ್ತಾನೆ. ಸಗರನಿಗೆ ಪೂರ್ವಜನ್ಮದ ಸ್ಮರಣೆ ಮಾಡುವ ಮಿತ್ರ ಮಣಿಕೇತುವಿನ ಪಯತ್ನ ಫಲಿಸಲಿಲ್ಲ. ಅದಕ್ಕೆ ಭವಸಾಗರದಲ್ಲಿ ಮುಳುಗಿರುವ ಈತನಿಗೆ ಪುತ್ರರ ವಿಯೋಗವೇ ಸೂಕ್ತವೆಂದು ಭಾವಿಸಿ, ಕೈಲಾಸ ಪರ್ವತದಲ್ಲಿ ಜಿನಪ್ರತಿಮೆಗೆ ರಕ್ಷಣೆಯನ್ನು ನಿರ್ಮಿಸಲು ಹೋದ ಪುತ್ರರನ್ನು ವಿಷ ಸರ್ಪವಾಗಿ ಮಣಿಕೇತು ಬಂದು ಭಗೀರಥನೊಬ್ಬನನ್ನುಳಿದು ಎಲ್ಲರನ್ನು ಹೆಣವಾಗಿ ಮಲಗಿಸಿದ. ಆಮೇಲೆ ಮಣಿಕೇತು ವಿಪ್ರನ ವೇಷದಲ್ಲಿ ಸಗರನಲ್ಲಿಗೆ ಬಂದು; ‘ನಾನೊಬ್ಬ ಬಡಬ್ರಾಹ್ಮಣ, ಇದ್ದೊಬ್ಬ ಮಗ ಕಾಲ ವಶನಾದನು. ಸಕಲ ಭೂಮಂಡಲವನ್ನು ಕಾಪಾಡುವ ದೊರೆಯಾದ ತಾವು ನನ್ನೊಬ್ಬ ಮಗನನ್ನು ಬದುಕಿಸಲಾರಿರೇ’ ಎಂದು ತನ್ನ ಅಳಲನ್ನು ತೊಡಿಕೊಂಡನು. ಬ್ರಾಹ್ಮಣನ ಸ್ಥಿತಿಯನ್ನು ಕಂಡು ನಗಬೇಕೋ; ಅಳಬೇಕೋ ತಿಳಿಯದೆ, ಚಕ್ರವರ್ತಿಯ ಅಭಿಮಾನಕ್ಕೆ ಸವಾಲು ಬಂದೆರಗಿತು. ಸಗರ ಚಿಂತಿತನಾದ. ಇದನ್ನು ಕಂಡ ಮಂತ್ರಿ ಬುದ್ಧಿಸಾಗರ ಉಪಾಯ ಒಂದನ್ನು ಸೂಚಿಸಿದ ಯಾರೂ ಸಾಯದ ಮನೆಯಿಂದ ಹುಲ್ಲನ್ನೂ ಬೆಂಕಿಯನ್ನೂ ತಂದರೆ ಮಗನನ್ನು ಬದುಕಿಸಿ ಕೊಡುವುದಾಗಿ ತಿಳಿಸಿದ. ಏನೂ ತಿಳಿಯದವನಂತೆ ಹೋಗಿ ಬಂದ ಬ್ರಾಹ್ಮಣ ಅಂತಹ ಮನೆಯಿಲ್ಲ ಎಂದನು. ಪುರೋಹಿತನು ಸಾವಿನ ಅನಿವಾರ್ಯತೆಯ ಬಗ್ಗೆ ಮಾತುಗಳನ್ನು ಆಡತೊಡಗಿದನು.

ಏಂ ನಿಷ್ಕರುಣಿಯೂ ಪಸುಮಗ

ನೆನ್ನದೆ ಮುತ್ತಾಣ್ಮನೆನ್ನದರಿವುಳ್ಳಂ ಬಾ

ರ್ಗೆನ್ನದೆ ಮರುಳಕ್ಕಟ ಮಾ

ಣೆನ್ನದೆ ಮುಂಬಿಟ್ಟು ಕೊಂದಪಂ ಯಮರಾಜಂ

ಇದೇ ವೇಳೆಗೆ ಭಗೀರಥನು ಬಂದುತನ್ನ ಸಹೋದರರು ಎಲ್ಲರೂ ಮಡಿದ ಸಮಚಾರವನ್ನು ತಂದೆಗೆ ತಿಳಿಸಿದನು. ಅಂತಃಪುರದ ರಾಣಿಯರ ಆಕ್ರಂದನ ಮುಗಿಲು ಮುಟ್ಟಿತು. ಸಗರ ವೈರಾಗ್ಯ ಹೊಂದಿ; ಜಿನದೀಕ್ಷೆ ಹೊಂದಿದನು. ಹೀಗೆ ಸಗರನ ಕಥೆಯನ್ನು ರನ್ನ ಕವಿ ಬಹುರಮ್ಯವಾಗಿ ಹೇಳಿದ್ದಾನೆ. ರಾಜ ವೈರಾಗ್ಯಪರನಾದ ಸಂದರ್ಭ ಇಲ್ಲಿ ಹೃದಯಂಗಮವಾಗಿ ಮೂಡಿಬಂದಿದೆ.

ಒಟ್ಟಾರೆಯಾಗಿ ರನ್ನನ ಅಜಿತಪುರಾಣ ಪಂಪನ ಆದಿಪುರಾಣದಷ್ಟು ಶ್ರೇಷ್ಠತೆ, ವಿಶದತೆ ಇಲ್ಲವಾದರೂ, ಅವಶ್ಯಕವಾದುದನ್ನು ರಮ್ಯವಾಗಿ ಹೇಳಿದ್ದಾನೆ. ಪಂಚಕಲ್ಯಾಣದ ವರ್ಣನೆಗಳ ಸಂದರ್ಭಗಳಲ್ಲಿ ಬಹು ರನ್ನನ ಪ್ರತಿಭಾಶಕ್ತಿಯನ್ನು ಕಾಣಬಹುದಾಗಿದೆ. ಅಲೌಕಿಕ ವರ್ಣನೆಗಳಿಂದ ಕಾವ್ಯ ಮೈದುಂಬಿದ್ದು, ಜೊತೆಗೆ ಕವಿ ಸಮಯವೂ ಕಾವ್ಯದೋಟಕ್ಕೆ ಮೆರಗು ನೀಡಿದೆ. ರನ್ನನ ಪ್ರತಿಭಾ ಶಕ್ತಿಯಿಂದ ಇದು ರಸಮಯತೆ ಪಡೆದಿದೆ. ಆದ್ದರಿಂದಲೆ ಇದು ಪುರಾಣವಲ್ಲ-ಪುರಾಣತಿಲಕ ಎಂದು ಹೇಳುವ ರನ್ನ ನಮ್ಮ ಮೆಚ್ಚುಗೆಗೂ ಪಾತ್ರನಾಗುತ್ತಾನೆ.

*ಲೇಖಕರು ಬೀದರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರು; ಅಧ್ಯಯನ ಮತ್ತು ಸಂಶೋಧನೆಗಳ ಬಗೆಗೆ ಅಪಾರ ಕಾಳಜಿ, ಆಸಕ್ತಿ. ‘ಸಾಹಿತ್ಯ ದೀಪ್ತಿ, ‘ಸರಳ ಛಂದಸ್ಸು, ‘ಕನ್ನಡ ಕೈದೀವಿಗೆ, ‘ಕಡ್ಡಾಯ ಕನ್ನಡ ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ.

Leave a Reply

Your email address will not be published.