ಉಳಿಯಲಿರುವ ಬದಲಾವಣೆಗೆ ಸುರಕ್ಷತೆಯೇ ಸವಾಲು

ಕೋವಿಡ್-19ರಿಂದಾಗಿ ಹಲವಾರು ಕ್ಷೇತ್ರಗಳಲ್ಲಿ ಉದ್ಯೋಗ ನಷ್ಟವಾಗುತ್ತಿದೆ. ಆದರೆ ಆನ್‌ಲೈನ್, ಡಿಜಿಟಲ್ ಮತ್ತು ಸೈಬರ್ ಸುರಕ್ಷತೆ ಕ್ಷೇತ್ರಗಳಲ್ಲಿ ದೊರೆಯುತ್ತಿರುವ ಹೊಸ ಉದ್ಯೋಗಾವಕಾಶಗಳನ್ನು ಕನ್ನಡಿಗರು ಪಡೆಯಲು ಮುಂದಾಗಬೇಕಾಗಿದೆ.

ಕೋವಿಡ್-19 ಕುರಿತು ಅಂತರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಜನವರಿ 30ರಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತು. ಅಂದಿನಿAದ ಇಂದಿನವರಗೆ ವಿಶ್ವಾದಂತ್ಯ ಆನ್‌ಲೈನ್ ಸೌಲಭ್ಯಗಳ ಬಳಕೆ ಸರಾಸರಿ ಶೇಕಡಾ 45ರಷ್ಟು ಹೆಚ್ಚಾಗುತ್ತಿದೆ. ಭಾರತದಲ್ಲಿ 504 ಮಿಲಿಯನ್ ಸಕ್ರಿಯ ಇಂಟರ್‌ನೆಟ್ ಬಳಕೆದಾರರು ಇದ್ದಾರೆ. ಇವರಲ್ಲಿ ಶೇಕಡಾ 14ರಷ್ಟು ಬಳಕೆದಾರರು, 5ರಿಂದ 11 ವರ್ಷದ ವಯೋಮಿತಿಯವರಾಗಿದ್ದಾರೆ. ಇಂಟರ್‌ನೆಟ್ ಸೌಲಭ್ಯವನ್ನು ಮಕ್ಕಳು ಬಳಸುವಾಗ ಪಾಲಿಸಬೇಕಾದ ಸುರಕ್ಷತಾ ನಿಯಮಗಳನ್ನು ಭಾರತ ಸರ್ಕಾರ ಪ್ರಕಟಿಸಿದೆ. ಆದರೆ ಎಷ್ಟು ಪಾಲಕರು ತಮ್ಮ ಮಕ್ಕಳ ವಿಷಯದಲ್ಲಿ ಈ ನಿಯಮಗಳನ್ನು ಪಾಲಿಸುತ್ತಿದ್ದಾರೆ ಎನ್ನುವುದು ಪ್ರಶ್ನೆಯಾಗಿದೆ.

ಮಾರ್ಚ್ ತಿಂಗಳಲ್ಲಿ ಭಾರತಾದಂತ್ಯ ಇಂಟರ್‌ನೆಟ್ ಬಳಕೆಯಲ್ಲಿ ಶೇಕಡಾ 40ರಷ್ಟು ಹೆಚ್ಚಳವಾಗಿದೆ. ಪ್ರತಿ ತಿಂಗಳು ಹೆಚ್ಚುತ್ತಿರುವ ಇಂಟರ್‌ನೆಟ್ ಬೇಡಿಕೆಯನ್ನು ಸರಿದೂಗಿಸಲು ಮೊಬೈಲ್ ಸೌಲಭ್ಯ ನೀಡುವ ಸಂಸ್ಥೆಗಳು ಸಕ್ರಿಯ ಟವರ್‌ಗಳ ಸಂಖ್ಯೆಯನ್ನು ಹೆಚ್ಚು ಮಾಡಿವೆ ಮತ್ತು ಮನೆಗೆ ಬ್ರಾಡ್‌ಬ್ಯಾಂಡ್ ಸೌಲಭ್ಯ ನೀಡುವ ಸಂಸ್ಥೆಗಳು, ಸಾಮರ್ಥ್ಯವೃದ್ಧಿ ಮತ್ತು ನಿರ್ವಹಣೆಗೆ ಆದ್ಯತೆ ನೀಡಿವೆ. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸೇವೆಗಳ ಗುಣಮಟ್ಟ ಹೆಚ್ಚಿಸಲು, ಟೆಲಿಕಾಮ್ ಮತ್ತು ಬ್ರಾಡಬ್ಯಾಂಡ್ ಸಂಸ್ಥೆಗಳು ಮೂಲಭೂತ ಸೌಲಭ್ಯ ಮತ್ತು ಸಾಮರ್ಥ್ಯವೃದ್ಧಿಗಾಗಿ ಹೆಚ್ಚು ಬಂಡವಾಳ ನಿಯೋಗಿಸುವುದು ಅಗತ್ಯವಾಗಿದೆ.

ಮನೆಯಿಂದ ಕಚೇರಿಯ ಕೆಲಸ ಮಾಡುವವರು, ವಿವಿಧ ಸರ್ಕಾರಿ ಇಲಾಖೆಗಳು, ನ್ಯಾಯಾಲಯಗಳು, ಬ್ಯಾಂಕು, ಆಸ್ಪತ್ರೆ, ವಿದ್ಯುತ್, ನೀರು, ಸಾರಿಗೆ ಮೊದಲಾದ ಅಗತ್ಯ ಸೇವೆಗಳು ಮತ್ತು ರಕ್ಷಣಾ ಪಡೆಗಳು ಬಳಸುವ ಇಂಟರ್‌ನೆಟ್ ಹೊರತಾಗಿ ವಿದೇಶಿ ಮಾಧ್ಯಮಗಳ ಜಾಲತಾಣಗಳು, ಇ-ಕಾಮರ್ಸ್, ಆನ್‌ಲೈನ್ ಬ್ಯಾಂಕಿAಗ್, ಸಾಮಾಜಿಕ ಜಾಲತಾಣಗಳು, ಆನ್‌ಲೈನ್ ಗೇಮಿಂಗ್, ಚಲನಚಿತ್ರ ವೀಕ್ಷಣೆ, ಮನೋರಂಜನೆಗಾಗಿ ಹೆಚ್ಚು ಜನ ಇಂಟರ್‌ನೆಟ್ ಬಳಸಿದ್ದಾರೆ. ಟಿಕ್‌ಟಾಕ್ ನಂತರ ಜನಪ್ರಿಯ ಸೌಲಭ್ಯಗಳನ್ನು ಬಳಸಲು ಯುವಕರು ಹೆಚ್ಚು ಆಸಕ್ತಿ ತೋರಿಸಿದರೆ, ಯೂಟ್ಯೂಬ್ ನೋಡಿ ಹೊಸ ಅಡುಗೆ, ಗೃಹಾಲಂಕಾರ, ಉಡುಪು ವಿನ್ಯಾಸ ಕಲಿಯಲು ಗೃಹಿಣಿಯರು ಆಸಕ್ತಿ ತೋರಿಸಿದ್ದಾರೆ. ಆದರೆ ದೇಶ ವಿದೇಶಗಳ ಹಲವಾರು ವಿಶ್ವವಿದ್ಯಾಲಯಗಳು, ಶಿಕ್ಷಣತಜ್ಞರು ಉಚಿತವಾಗಿ ಆನ್‌ಲೈನ್ ಮೂಲಕ ನೀಡಿದ ಕೌಶಲ ಅಭಿವೃದ್ಧಿ ಶಿಕ್ಷಣ, ಮಾರ್ಗದರ್ಶನವನ್ನು ವೃತ್ತಿಪರರು ಬಳಸಿಕೊಂಡಂತೆ, ನಮ್ಮ ಪದವಿ ಮತ್ತು ಸ್ನಾತಕ್ಕೋತ್ತರ ವಿದ್ಯಾರ್ಥಿಗಳು ಬಳಸಿಕೊಳ್ಳಲು ಮುಂದಾಗಲಿಲ್ಲ.

ಮತ್ತೊಂದೆಡೆ, ಭಾರತದಲ್ಲಿ ಆನ್‌ಲೈನ್ ಶಿಕ್ಷಣ ವರ್ಷದಿಂದ ವರ್ಷಕ್ಕೆ ಹಲವು ಪಟ್ಟು ಹೆಚ್ಚಾಗುತ್ತಿದ್ದು, ಕೊರೊನಾದಿಂದಾಗಿ ಈ ವರ್ಷ ದಾಖಲೆ ಪ್ರಮಾಣದ 2 ಬಿಲಿಯನ್ ಡಾಲರ್ ಉದ್ಯಮವಾಗಿ ಬೆಳೆಯುವ ನಿರೀಕ್ಷೆ ಇದೆ. ಭಾರತಾದಂತ್ಯ 95 ಲಕ್ಷ ಜನ ಆನ್‌ಲೈನ್ ಶಿಕ್ಷಣ ಸೌಲಭ್ಯವನ್ನು ಬಳಸುತ್ತಿದ್ದಾರೆ. ಇವರಲ್ಲಿ ಅನೇಕರು ಶುಲ್ಕ ಪಾವತಿಸಿ ಈ ಸೌಲಭ್ಯವನ್ನು ಬಳಸುತ್ತಿದ್ದಾರೆ. ಗ್ರಾಮಾಂತರ ಮತ್ತು ನಗರ ಪ್ರದೇಶದ ಶಿಕ್ಷಣ ಸಂಸ್ಥೆಗಳ ನಡುವಿನ ಶಿಕ್ಷಣ ಮಟ್ಟದ ಅಂತರ, ಶಿಕ್ಷಕರ ಕೊರತೆ, ಮೂಲಭೂತಸೌಲಭ್ಯಗಳ ಕೊರತೆ ಮೊದಲಾದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿ ದೇಶಕ್ಕೆ ಮಾದರಿಯಾಗುವಂತಹ ಶಿಕ್ಷಣ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲು ಕರ್ನಾಟಕಕ್ಕೆ ಉತ್ತಮ ಅವಕಾಶ ದೊರೆತಿತ್ತು. ಆದರೆ ಸ್ಪಷ್ಟತೆ ಇಲ್ಲದೆ ಪ್ರಾರಂಭಿಸಿದ ಆನ್‌ಲೈನ್ ಶಿಕ್ಷಣ ವ್ಯವಸ್ಥೆ, ಪರಿಹಾರಕ್ಕಿಂತ ಹೆಚ್ಚು ಸಮಸ್ಯೆಗಳನ್ನು ಸೃಷ್ಟಿಸಿದಂತಿದೆ.

ಲಾಕ್‌ಡೌನೋತ್ತರ ದಿನಗಳಲ್ಲಿ ಕೂಡಾ ಆನ್‌ಲೈನ್ ಕ್ರಾಂತಿ ಮುಂದುವರೆಯುತ್ತದೆ ಮತ್ತು ಹೆಚ್ಚಾಗುತ್ತದೆ. ಮುದ್ರಣ ಮಾಧ್ಯಮ ಮತ್ತು ಟಿವಿ ಮಾಧ್ಯಮಗಳು ಪೂರ್ಣಸ್ವರೂಪದ ಡಿಜಿಟಲ್ ಮಾಧ್ಯಮವಾಗುವುದು ಅನಿವಾರ್ಯವಾಗುತ್ತದೆ. ಸ್ಥಳೀಯ ಮತ್ತು ಅಂತರಾಷ್ಟ್ರೀಯ ಪ್ರವಾಸ ಮತ್ತೆ ಪ್ರಾರಂಭವಾದಂತೆ ಆನ್‌ಲೈನ್ ಮೂಲಕ ದೊರೆಯುತ್ತಿದ್ದ ವಿಮಾನ, ರೈಲು ಮತ್ತು ಬಸ್ಸು ಟಿಕೆಟ್ ಕಾಯ್ದಿರುಸುವಿಕೆ, ಹೋಟಲ್ ರೂಮ್, ಟ್ಯಾಕ್ಸಿ ಬುಕಿಂಗ್ ಮೊದಲಾದ ಸೇವೆಗಳನ್ನು ಮೊದಲಿಗಿಂತ ಹೆಚ್ಚು ಜನರು ಬಳಸಲಿದ್ದಾರೆ. ಚಿತ್ರಮಂದಿರಗಳಿಗಿಂತ ಅನ್‌ಲೈನ್ ಮೂಲಕ ಚಿತ್ರ ನೋಡುವವರ ಸಂಖ್ಯೆ ಹೆಚ್ಚಾಗಲಿದೆ. ಶಾಲೆ ಮತ್ತು ಕಾಲೇಜು ಶಿಕ್ಷಣದ ಜೊತೆಗೆ ಹೆಚ್ಚು ಕೌಶಲಗಳನ್ನು ಕಲಿಯಲು ಆನ್‌ಲೈನ್ ಶಿಕ್ಷಣವನ್ನು ಬಳಸುವ ವಿದ್ಯಾರ್ಥಿಗಳ ಸಂಖ್ಯೆ ಕೂಡಾ ಹೆಚ್ಚಾಗಲಿದೆ. ದೇಶ ವಿದೇಶಗಳಲ್ಲಿ ಸಭೆ, ಸಮ್ಮೇಳನಗಳು ಆನ್‌ಲೈನ್ ಮೂಲಕ ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಕೂಡಾ ಇವುಗಳ ಸಂಖ್ಯೆ ಮತ್ತು ಜನಪ್ರಿಯತೆ ಹೆಚ್ಚಾಗಲಿದೆ. ಆನ್‌ಲೈನ್ ಮೂಲಕ ಕೆಲಸಕ್ಕಾಗಿ ಸಂದರ್ಶನ ನಡೆಸುವುದು ಮುಂಬರುವ ದಿನಗಳಲ್ಲಿ ಹೆಚ್ಚಾಗಲಿದೆ.

ಭಾರತದಲ್ಲಿ 4ಜಿ ಮೊಬೈಲ್ ಸೇವೆಗಳು ಹಲವೆಡೆ ದೊರೆಯುತ್ತಿವೆ, ಆದರೆ ಈ ಸೇವೆಯನ್ನು ಬಳಸಿಕೊಂಡು ಮೊಬೈಲ್ ಗ್ರಾಹಕರಿಗೆ ಆನ್‌ಲೈನ್ ಪತ್ರಿಕೆ, ಪುಸ್ತಕ, ಸಂಗೀತ, ಟಿವಿ, ಮನೋರಂಜನೆ, ವೃತ್ತಿ ಮಾರ್ಗದರ್ಶನ, ವಿದ್ಯಾರ್ಥಿ ಮತ್ತು ಕೃಷಿಕರ ಜೊತೆ ಸಮಾಲೋಚನೆ ಮೊದಲಾದ ಕಾರ್ಯಕ್ರಮಗಳನ್ನು ಭಾರತೀಯ ಭಾಷೆಗಳಲ್ಲಿ ನೀಡಲು ಅನೇಕ ಅವಕಾಶಗಳಿವೆ. ಇನ್ನು ಮುಂದಾದರೂ ಇಂತಹ ಅವಕಾಶಗಳನ್ನು ಬಳಸಿಕೊಳ್ಳಲು ಪತ್ರಿಕೋದ್ಯಮ, ಪ್ರಕಾಶಕರು, ಚಿತ್ರರಂಗ ಮತ್ತು ವಿವಿಧ ಸಂಸ್ಥೆಗಳು ಮುಂದಾಗಬೇಕಾಗಿದೆ.

ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ತಂತ್ರಜ್ಞಾನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಮತ್ತು ಆವಿಷ್ಕಾರಗಳು ಭಾರತದಲ್ಲಿ ದೊರೆಯುವ ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಇಂಟರ್‌ನೆಟ್ ಸೇವೆಗಳ ಗುಣಮಟ್ಟ ಮತ್ತು ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚು ಮಾಡಲಿವೆ. ಇದರಿಂದ ನಮ್ಮ ಆರೋಗ್ಯ ಸೇವೆಗಳು, ಕೃಷಿ ಮತ್ತು ಶಿಕ್ಷಣಕ್ಕೆ ನೇರ ಪ್ರಯೋಜನ ದೊರೆಯಲಿದೆ. ಟೆಲಿ ಮೆಡಿಸಿನ್ ಮತ್ತು ಇತ್ತೀಚಿಗೆ ಟೆಲಿ ಐಸಿಯು ವ್ಯವಸ್ಥೆ ಕೆಲವೆಡೆ ಜಾರಿಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಬೇರೆ ದೇಶಗಳಲ್ಲಿ ನಡೆದಿರುವಂತೆ ನಮ್ಮ ದೇಶದ ಆಸ್ಪತ್ರೆಗಳಲ್ಲಿ ಕೂಡಾ ತಂತ್ರಜ್ಞಾನದ ಬಳಕೆ ಹೆಚ್ಚಾಗಲಿದೆ.

ಕೃಷಿಕರಿಗೆ ಹೋಬಳಿ ಮಟ್ಟದಲ್ಲಿ ಹೆಚ್ಚು ನಿಖರವಾದ ಹವಾಮಾನ ಮುನ್ಸೂಚನೆ, ಕೃಷಿ ಮಾರ್ಗದರ್ಶನ, ರೋಗ ಮತ್ತು ಕೀಟ ನಿಯಂತ್ರಣ ಕ್ರಮಗಳು, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಆನ್‌ಲೈನ್ ಮೂಲಕ ದೊರೆಯಲಿದೆ. ಇಂಟರ್‌ನೆಟ್ ಸೌಲಭ್ಯವಿಲ್ಲದಿರುವುದು, ವಿದ್ಯುತ್ ಸೌಲಭ್ಯದ ವ್ಯತ್ಯಯ ಮೊದಲಾದ ಸಮಸ್ಯೆಗಳನ್ನು ಎದುರಿಸುತ್ತಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆನ್‌ಲೈನ್ ಶಿಕ್ಷಣ ಮತ್ತು ಮಾರ್ಗದರ್ಶನ ವ್ಯವಸ್ಥೆ ಕಾರ್ಯಗತವಾಗಬೇಕಿದೆ.

ಉದ್ಯಮ, ವಾಣಿಜ್ಯ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆನ್‌ಲೈನ್ ಬಳಕೆ ಮೊದಲಿಗಿಂತ ಹೆಚ್ಚಾಗಲಿದೆ. ಇದರಿಂದಾಗಿ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳು ಹಾಗೂ ಗ್ರಾಮೀಣ ಪ್ರದೇಶದ ಉದ್ಯಮಿಗಳಿಗೂ ಜಾಗತಿಕ ಮಾರುಕಟ್ಟೆಯನ್ನು ತಲುಪುವ ಅವಕಾಶ ದೊರೆಯಲಿದೆ.

ತಂತ್ರಜ್ಞಾನ ಅಭಿವೃದ್ಧಿ ಮತ್ತು ಆವಿಷ್ಕಾರಗಳು ದೊರೆಯುತ್ತಿರುತ್ತವೆ. ಆದರೆ ಕೋವಿಡ್ ಸಂಕಷ್ಟ ಕಾಲದಲ್ಲಿ ಅವುಗಳನ್ನು ಹೇಗೆ ಸಮರ್ಪಕವಾಗಿ ಬಳಸಿಕೊಂಡು ಪತ್ರಿಕೆಗಳು, ಪ್ರಕಾಶಕರು, ಶಿಕ್ಷಣ, ಕೃಷಿ, ಚಿತ್ರರಂಗ, ಉದ್ಯಮ ಮೊದಲಾದ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಬೇಕು ಎನ್ನುವ ಕಾರ್ಯಯೋಜನೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಸಿದ್ಧವಾಗಬೇಕಾಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದ ಇ-ಆಡಳಿತ ಇಲಾಖೆ ಕನ್ನಡ ಭಾಷೆಯಲ್ಲಿ ಅಭಿವೃದ್ಧಿ ಪಡಿಸಿ, ಜನರಿಗೆ ಉಚಿತವಾಗಿ ನೀಡುತ್ತಿರುವ ಮೊಬೈಲ್ ಆಪ್‌ಗಳು ಮತ್ತು ಜಾಲತಾಣ, ಡ್ಯಾಷ್‌ಬೋರ್ಡುಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇದು ಮುಂದುವರೆದು ವಿವಿಧ ಕ್ಷೇತ್ರಗಳಿಗೆ ಅನ್ವಯವಾಗುವಂತಹ ತಂತ್ರಾAಶಗಳು, ಜಾಲತಾಣ ಮತ್ತು ಡ್ಯಾಷ್‌ಬೋರ್ಡಗಳ ಅಭಿವೃದ್ಧಿಯಾಗಬೇಕಾಗಿದೆ.

ಹೆಚ್ಚು ಜನ ಆನ್‌ಲೈನ್ ಸೇವೆಗಳನ್ನು ಬಳಸುತ್ತಿರುವಂತೆ, ಮಾಹಿತಿ ಸುರಕ್ಷತೆಗೆ ಅದ್ಯತೆ ನೀಡಬೇಕಾಗುತ್ತದೆ. ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗುವ ಮೊದಲೇ ಇಂಟರ್‌ನೆಟ್‌ನಲ್ಲಿ ಬಿಡುಗಡೆಯಾಗಿರುತ್ತದೆ ಅಥವಾ ಆಡಿಯೋ ಬಿಡುಗಡೆಯಾಗಿರುತ್ತದೆ. ಹಲವು ರೀತಿ ಜನಸಾಮಾನ್ಯರನ್ನು ವಂಚಿಸಿ ಅವರ ಹಣ ಕದಿಯುವ, ವೈಯಕ್ತಿಕ ಮಾಹಿತಿ ಪಡೆದು ದುರ್ಬಳಕೆ ಮಾಡಿಕೊಳ್ಳುವ, ಅತ್ಯಂತ ವೈಯಕ್ತಿಕ ಕ್ಷಣಗಳ ವಿಡೀಯೋ, ಆಡಿಯೋ ಮಾಡಿಕೊಂಡು ಬ್ಲಾಕ್‌ಮೇಲ್ ಮಾಡುವ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ.

ಸೈಬರ್ ಅಪರಾಧಿಗಳು, ವಂಚಕರು ಮತ್ತು ಭಯೋತ್ಪಾದಕರು ಕೋವಿಡ್ ಸಂಕಷ್ಟ ಸಮಯದಲ್ಲಿ ಹೆಚ್ಚು ದಾಳಿಗಳನ್ನು ಮಾಡುತ್ತಿರುವುದು ಆತಂಕದ ವಿಷಯವಾಗಿದೆ. ಮಾಹಿತಿ ಸುರಕ್ಷತೆ ಮತ್ತು ಆನ್‌ಲೈನ್ ಸೌಲಭ್ಯಗಳ ಬಳಕೆಯಲ್ಲಿ ಪಾಲಿಸಬೇಕಾದ ಸೈಬರ್ ಸುರಕ್ಷತೆ ನಿಯಮಗಳನ್ನು ಕುರಿತು ಜನಜಾಗೃತಿ ಹೆಚ್ಚಾಗಬೇಕಾಗಿದೆ. ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರ ಮೇಲೆ ಸೈಬರ್ ಅಪರಾಧಿಗಳು ನಡೆಸುತ್ತಿರುವ ದಬ್ಬಾಳಿಕೆ, ಲೈಂಗಿಕ ಶೋಷಣೆ ಮತ್ತು ಬ್ಲಾಕ್‌ಮೇಲ್‌ದಂತಹ ತೀವ್ರ ಸ್ವರೂಪದ ಅಪರಾಧಗಳನ್ನು ತಡೆಗಟ್ಟಲು ಜನಸಾಮಾನ್ಯರು ಸಹಕರಿಸಬೇಕಾಗಿದೆ. ಮನೆಯಲ್ಲಿ ಬಳಸುವ ಸಿಸಿ ಕ್ಯಾಮರಾ, ಸ್ಮಾರ್ಟ್ ಟಿವಿ ಮೊದಲಾಗಿ ಲೈಟ್ ಬಲ್ಬ್ ಅನ್ನು ಕೂಡಾ ಬಳಸಿಕೊಂಡು ಸೈಬರ್ ಅಪರಾಧ ನಡೆಸುವಷ್ಟು ಸೈಬರ್ ವಂಚಕರು ಮತ್ತು ಅಪರಾಧಿಗಳು ಮುಂದಾಗಿದ್ದಾರೆ. ಕೆಲವು ದೇಶಗಳಲ್ಲಿ ಚಲಿಸುತ್ತಿರುವ ವಾಹನಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಉದ್ದೇಶಪೂರ್ವಕವಾಗಿ ಅಪಘಾತ ಮಾಡಿಸಲು ಸೈಬರ್ ಅಪರಾಧಿಗಳು ಯತ್ನಿಸಿದ್ದಾರೆ. ಹೀಗಾಗಿ ಮೊಬೈಲ್, ಕಂಪ್ಯೂಟರ್ ಮಾತ್ರವಲ್ಲದೆ ನಮ್ಮ ದೈನಂದಿನ ಬಳಕೆಯ ಎಲ್ಲಾ ಸೇವೆಗಳಲ್ಲೂ ಮಾಹಿತಿ ಸುರಕ್ಷತೆ ಮತ್ತು ಸೈಬರ್ ಸುರಕ್ಷತೆಗಾಗಿ ಅದ್ಯತೆ ನೀಡಬೇಕಾಗಿದೆ.

ಉದ್ಯಮ, ವಾಣಿಜ್ಯ, ಬ್ಯಾಂಕು ಮೊದಲಾದ ಕ್ಷೇತ್ರಗಳ ಮೇಲೆ ದಾಳಿ ಮಾಡಿ, ಅವುಗಳ ಕೆಲಸ ನಿಲುಗಡೆಯಾಗುವಂತೆ ಮಾಡುವುದು, ಮಾಹಿತಿ ಕದಿಯುವುದು, ಗ್ರಾಹಕರ ಮಾಹಿತಿ ದುರ್ಬಳಕೆ ಮಾಡಿಕೊಳ್ಳುವುದು ಮೊದಲಾದ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಸೈಬರ್ ಅಪರಾಧಗಳ ತನಿಖೆ ಮತ್ತು ಅಪರಾಧಿಗಳಿಗೆ ಶಿಕ್ಷೆಗಾಗಿ ವಿಶೇಷ ನ್ಯಾಯಾಲಯಗಳ ಸ್ಥಾಪನೆ ಅಗತ್ಯವಿದೆ. ಭಾರತೀಯರ ವೈಯಕ್ತಿಕ ಮಾಹಿತಿ ರಕ್ಷಣೆಗಾಗಿ ನ್ಯಾಯಮೂರ್ತಿ ಶ್ರೀಕೃಷ್ಣ ನೇತೃತ್ವದ ಸಮಿತಿ ಸಿದ್ಧಪಡಿಸಿರುವ ಮಸೂದೆಯನ್ನು ಕೇಂದ್ರ ಸರ್ಕಾರದ ಮಂತ್ರಿಮಂಡಲ ಅನುಮೋದನೆ ನೀಡಿದೆ. ಆದರೆ ಕೆಲವು ಪಕ್ಷಗಳ ವಿರೋಧದಿಂದಾಗಿ ಅದಕ್ಕೆ ಸಂಸತ್ತಿನಲ್ಲಿ ಅನುಮೋದನೆ ಇನ್ನೂ ದೊರೆತಿಲ್ಲ. 1980ರ ದಶಕದಲ್ಲಿ ಬ್ರಿಟನ್ ಮತ್ತು 2000ರ ದಶಕದಲ್ಲಿ ಯುರೋಪ್ ಒಕ್ಕೂಟ ಮೊದಲಾಗಿ ಹಲವು ದೇಶಗಳಲ್ಲಿ ಪ್ರಜೆಗಳ ವೈಯಕ್ತಿಕ ಮಾಹಿತಿ ರಕ್ಷಣೆಗಾಗಿ ಕಠಿಣ ಕಾನೂನುಗಳು ಜಾರಿಗೆ ಬಂದಿವೆ ಮತ್ತು ಫೇಸ್‌ಬುಕ್, ಗೂಗಲ್ ಮೊದಲಾದ ಸಂಸ್ಥೆಗಳು ಅದನ್ನು ಪಾಲಿಸುತ್ತಿವೆ. ಭಾರತದಲ್ಲಿ ಇಂತಹ ಕಾನೂನು ಬರುವುದು ಅತ್ಯಗತ್ಯವಾಗಿದೆ.

ಕೋವಿಡ್-19ರಿಂದಾಗಿ ಹಲವಾರು ಕ್ಷೇತ್ರಗಳಲ್ಲಿ ಉದ್ಯೋಗ ನಷ್ಟವಾಗುತ್ತಿದೆ. ಆದರೆ ಆನ್‌ಲೈನ್, ಡಿಜಿಟಲ್ ಮತ್ತು ಸೈಬರ್ ಸುರಕ್ಷತೆ ಕ್ಷೇತ್ರಗಳಲ್ಲಿ ದೊರೆಯುತ್ತಿರುವ ಹೊಸ ಉದ್ಯೋಗಾವಕಾಶಗಳನ್ನು ಕನ್ನಡಿಗರು ಪಡೆಯಲು ಮುಂದಾಗಬೇಕಾಗಿದೆ. ಉದಾಹರಣೆಗೆ, ವಿಶ್ವಾದಂತ್ಯ ಸೈಬರ್ ಸುರಕ್ಷತೆ ಕ್ಷೇತ್ರದಲ್ಲಿ ಸುಮಾರು 50 ಲಕ್ಷ ಉದ್ಯೋಗಾವಕಾಶಗಳು ಲಭ್ಯವಿವೆ. ವಿದ್ಯಾರ್ಥಿಗಳಿಗೆ ಇಂತಹ ಉದ್ಯೋಗವಕಾಶಗಳನ್ನು ಕುರಿತು ಮಾಹಿತಿ, ಕೌಶಲಗಳನ್ನು ಪಡೆಯಲು ತರಬೇತಿ ನೀಡುವ ಕೆಲಸವನ್ನು ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಮಾಡಬೇಕಾಗಿದೆ.

ನಮ್ಮ ಅಗತ್ಯಗಳಿಗೆ ತಕ್ಕಂತೆ ಯಾವ ತಂತ್ರಜ್ಞಾನವನ್ನು ಹೇಗೆ ಸಮರ್ಪಕವಾಗಿ, ಸುರಕ್ಷಿತವಾಗಿ ಬಳಸಬೇಕು ಎಂದು ಯೋಚಿಸೋಣ. ತಂತ್ರಜ್ಞಾನ ಬೇಡವೇ ಬೇಡ ಎಂದು ವಿರೋಧಿಸುವುದರಿಂದ, ನಮ್ಮ ದೈನಂದಿನ ಬದುಕಿನಲ್ಲಿ ತಂತ್ರಜ್ಞಾನ ಬಾರದಿರುವಂತೆ ತಡೆಯುವುದಂತೂ ಸಾಧ್ಯವಿಲ್ಲ.

 

*ಲೇಖಕರು ಇಂಜಿನಿಯರಿಂಗ್‌ನಲ್ಲಿ ಮೂರು ಡಾಕ್ಟರೇಟ್ ಪದವಿ ಪಡೆದಿದ್ದಾರೆ; ವೃತ್ತಿಯಿಂದ ಮಾಹಿತಿ ತಂತ್ರಜ್ಞಾನ ಪರಿಣತರು, ಕನ್ನಡದ ಖ್ಯಾತ ವಿಜ್ಞಾನ-ತಂತ್ರಜ್ಞಾನ ಬರಹಗಾರರು, ಪ್ರಸ್ತುತ ಕನ್ಸೆಲ್‌ಟೆನ್ಸಿ ಸಂಸ್ಥೆಯಲ್ಲಿ ಡೇಟಾ ವಿಜ್ಞಾನ ವಿಭಾಗದ ಮುಖ್ಯಸ್ಥರು. ಅವರ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ’ ಕೃತಿಗೆ ಅಕಾಡೆಮಿ ಗೌರವ ಪ್ರಶಸ್ತಿ ಲಭಿಸಿದೆ.

Leave a Reply

Your email address will not be published.