ಊರಿಗೆ ಹೋಗುವ ಆಶಯದ ರಾಮಪ್ಪ

ಉತ್ತರ ಕರ್ನಾಟಕದಿಂದ ವಲಸೆ ಬಂದ ಕೂಲಿಕಾರ್ಮಿಕ ಕುಟುಂಬಗಳ ಗುಡಿಸಲುಗಳನ್ನು ನಾನು ಒಬ್ಬ ಸಾಮಾಜಿಕ ಅಧ್ಯಯನಕಾರನಾಗಿ ಗಮನಿಸುತ್ತಾ ಬಂದಿದ್ದೇನೆ. ಮಕ್ಕಳನ್ನು ಶಾಲೆಗೆ ಸೇರಿಸುವುದು, ಗುಟ್ಕಾದಂತಹ ದುರಭ್ಯಾಸಗಳು ಹಾಗೂ ಬಯಲುಶೌಚದ ಅನಾರೋಗ್ಯದ ಬಗ್ಗೆ ನಾನಾಗಿ ತಿಳಿಹೇಳುವ ಕಾರಣದಿಂದಾಗಿ, ಅವರಲ್ಲಿ ಅನೇಕರ ಪರಿಚಯವೂ ನನಗಾಗಿದೆ. 

ಅದೊಂದು ಸಣ್ಣ ಶೆಡ್ ಮಾದರಿ ವಸತಿ. ಅದಕ್ಕೆ ಇನ್ನೂ ವಿಳಾಸ ಬಂದಿಲ್ಲ. ಚಿಮನಿಹಿಲ್‍ನ ನೇವಿ ಬಡಾವಣೆಯ ಯಾರದೋ ಖಾಲಿ ಇದ್ದ ನಿವೇಶನದಲ್ಲಿ ಇವರು ಶೆಡ್ ಹಾಕಿಕೊಂಡಿದ್ದಾರೆ. ಇಲ್ಲಿ ವಿದ್ಯುತ್, ನೀರು, ಶೌಚಾಲಯ ವ್ಯವಸ್ಥೆಯೂ ಇಲ್ಲ. ಪಕ್ಕದ ನಿವೇಶನದವರು ಮನೆ ನಿರ್ಮಾಣಕ್ಕೆ ಪಡೆದ ತಾತ್ಕಾಲಿಕ ಸಂರ್ಪಕದ ಮೀಟರ್ ಬೋರ್ಡ್‍ನ್ನು ರಾಮಪ್ಪನೇ ನೋಡಿಕೊಳ್ಳುತ್ತಿರುವುದರಿಂದ, ಅವರು ರಾಮಪ್ಪನ ಶೆಡ್‍ಗೆ ದೀಪದ ವ್ಯವಸ್ಥೆ ಮಾಡಿಕೊಳ್ಳಲು ಅನುಮತಿಸಿದ್ದಾರೆ.

ಕುಟುಂಬದ ಯಜಮಾನನ ಹೆಸರು ರಾಮಪ್ಪ, ಸುಮಾರು 40 ವರ್ಷ. ಆತನ ಪತ್ನಿ ಹೆಸರು ಹನುಮಮ್ಮ, ವಯಸ್ಸು 35 ವರ್ಷ. ಆಕೆಯೂ ಅನಕ್ಷರಸ್ಥೆ. ಆದರೂ ದುಡಿದು ಬದುಕುವ, ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ‘ವಿದ್ಯೆ’ ಆಕೆಗೆ ಕರಗತವಾಗಿದೆ. ಇವರಿಗೆ 5 ಜನ ಹೆಣ್ಣುಮಕ್ಕಳು. ಹೆಂಡತಿಗೆ ಕುಟುಂಬಯೋಜನೆ ಆಗಿದೆ. ಇವರ ಮಕ್ಕಳ ವಿವರ ಕ್ರಮವಾಗಿ ಹೀಗಿದೆ: ಉಷಾಲ, 16 ವರ್ಷ, 9ನೇ ತರಗತಿ ನಪಾಸು; ಅಶ್ವಿನಿ, 14 ವರ್ಷ, 7ನೇ ತರಗತಿ; ಶಾಂತ, 12 ವರ್ಷ, 5ನೇ ತರಗತಿ; ಪಾರ್ವತಿ, 9 ವರ್ಷ, 3ನೇ ತರಗತಿ; ಹುಲಿಯಮ್ಮ, 6 ವರ್ಷ, 1ನೇ ತರಗತಿ. ತಾಯಿ ಬುದ್ಧಿವಂತೆಯಾದ್ದರಿಂದ ಎಲ್ಲ ಮಕ್ಕಳನ್ನೂ ಹತ್ತಿರದ ಸರ್ಕಾರಿ ಶಾಲೆಯಲ್ಲಿ ಓದಿಸುತ್ತಿದ್ದಾರೆ. ದೊಡ್ಡ ಮಗಳು 9ನೇ ತರಗತಿ ಫೇಲ್ ಆದಮೇಲೆ ಅಪ್ಪ ಅಮ್ಮನ ಜತೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಳೆ.

ರಾಮಪ್ಪನ ಮೂಲಸ್ಥಾನ: ತಲೆಕಟ್ಟ ಗ್ರಾಮ, ಮಾಕಾಪುರ ಅಂಚೆ, ಲಿಂಗಸೂಗೂರು ತಾ, ರಾಯಚೂರು ಜಿಲ್ಲೆ. ವಯಸ್ಸಾದ ತಾಯಿ ಸ್ವಂತ ಊರಿನಲ್ಲೇ ಇದ್ದಾರೆ. ತಾಯಿಗೆ ಸರ್ಕಾರದ ವೃದ್ಧಾಪ್ಯ ಪಿಂಚಣಿ ರೂ. 600 ಬರುತ್ತಿದೆ. ಆದರೂ, ಮಗ ಬೆಂಗಳೂರಿನಿಂದ 2-3 ತಿಂಗಳಿಗೊಮ್ಮೆ ಸುಮಾರು 2 ಸಾವಿರದಂತೆ ಕಳುಹಿಸುತ್ತಾರೆ. ಇವರದು ಪ.ಜಾತಿಗೆ ಸೇರಿದ ‘ಛಲವಾದಿ’ ಸಮುದಾಯ.

ಊರಲ್ಲಿ ಸ್ವಂತ ಕೃಷಿ ಜಮೀನು ಇಲ್ಲ. ಮಳೆಬೆಳೆಯೂ ಕಡಿಮೆ. ಆದ್ದರಿಂದ ಕೂಲಿನಾಲಿ ನಂಬಿ ಕುಟುಂಬ ನಿರ್ವಹಣೆ ಕಷ್ಟ. ಜೀವನೋಪಾಯಕ್ಕಾಗಿ ಬೆಂಗಳೂರಿಗೆ ವಲಸೆ ಬಂದಿದ್ದಾರೆ.

ಪ್ರಸ್ತುತ, ತಾವಿರುವ ಪ್ರದೇಶದಲ್ಲಿ ರಾಮಪ್ಪನಿಗೆ ಗಾರೆ ಕೆಲಸಕ್ಕಾಗಿ ದಿನಕ್ಕೆ ರೂ.650 ಕೂಲಿ ದೊರೆತರೆ, ಸಹಾಯಕ ಕೆಲಸದ ಹೆಂಡತಿಗೆ ರೂ.250 ಸಿಗುತ್ತದೆ. ಇದರಲ್ಲಿ, ದೈನಂದಿನ ಹಾಲು, ಕಾಫೀ, ಸಕ್ಕರೆ, ಮದ್ಯಪಾನ, ಮಕ್ಕಳಿಗೆ ಬ್ರೆಡ್, ಬಿಸ್ಕತ್, ತಲೆ ಎಣ್ಣೆ, ಪೌಡರ್, ಸಾಬೂನು ಇತ್ಯಾದಿ ಖರ್ಚುಗಳು; ಒಮ್ಮೆಗೆ ಒಂದೂವರೆ ಕೆಜಿಯಂತೆ ವಾರಕ್ಕೆ ಎರಡು ಬಾರಿ ಮಾಂಸದೂಟದ ಖರ್ಚು… ಹೀಗೆ ತಿಂಗಳಿಗೆ ರೂ.10000 ಖರ್ಚು ಆಗುತ್ತದೆ. ಅನಾರೋಗ್ಯವಾದಾಗ ಸರ್ಕಾರಿ ಆಸ್ಪತ್ರೆಗೆ ಹೋಗುತ್ತಾರೆ. ಆದರೂ, ಔಷಧಿ ಇತ್ಯಾದಿಗೆ ಒಮ್ಮೆಗೆ 500-600 ರೂ ಖರ್ಚಾಗುತ್ತದೆ. ವಾರ್ಷಿಕ ಆದಾಯದಲ್ಲಿ ಸುಮಾರು 40-50 ಸಾವಿರ ಉಳಿತಾಯ ಆಗುತ್ತದೆ.

ಇದಲ್ಲದೆ, ಆಗೀಗ ಊರಿಗೆ, ಜಾತ್ರೆಗೆ ಇತ್ಯಾದಿ ಹೋಗಿಬರುವ ಖರ್ಚು, ಹಬ್ಬಕ್ಕೆ ಹೊಸಬಟ್ಟೆ ಖರೀದಿ.. ಹೀಗೆ ವರ್ಷಕ್ಕೆ ಹೆಚ್ಚುವರಿಯಾಗಿ ಮತ್ತೆ ಸು. 10 ಸಾವಿರವಾದರೂ ಖರ್ಚು ಆಗುತ್ತದೆ. ಸರ್ಕಾರಿ ಶಾಲೆಯಾದ್ದರಿಂದ ಮಕ್ಕಳಿಗೆ ಹೆಚ್ಚಿನ ಶುಲ್ಕ ಇಲ್ಲ. ಆದರೂ ಇತರೆ ಖರ್ಚು ವರ್ಷಕ್ಕೆ ಸು. 1000 ರೂ ಆದರೂ ಬೇಕಾಗುತ್ತದೆ.

ಮಕ್ಕಳು ಶಾಲೆ ಓದಿನ ಜತೆಗೆ ಮನೆಕೆಲಸವನ್ನೂ ಮಾಡುತ್ತವೆ. ಅಕ್ಕಪಕ್ಕದ ಮನೆಯವರು ಕರೆದಲ್ಲಿ ಬಿಡುವಿನ ಹೊತ್ತಲ್ಲಿ ಹೋಗಿ ಕಸಮುಸುರೆಯ ಕೆಲಸವ ಮಾಡುತ್ತವೆ. ಅದಕ್ಕೆ ಕೂಲಿ ಬದಲು ಉಳಿಕೆ ಆಹಾರ ಪದಾರ್ಥವಾದರೂ ಸಿಗುತ್ತದೆ.

ಕೃಷಿ ಜಮೀನು ಇಲ್ಲವಾದ್ದರಿಂದ ಬ್ಯಾಂಕ್ ಸಾಲ ನೀಡಿಲ್ಲ, ತೀರಿಸುವ ಪ್ರಶ್ನೆಯೂ ಇಲ್ಲ. ಆದರೆ, ಸಾಂದರ್ಭಿಕ ಖರ್ಚಿಗಾಗಿ ಮಾಡಿದ್ದ ಕೈಸಾಲ 70 ಸಾವಿರ ರೂಪಾಯನ್ನು ಬೆಂಗಳೂರಲ್ಲಿ ಸಂಪಾದಿಸಿ ತೀರಿಸಿದ್ದಾರೆ.

ಊರಲ್ಲಿನ ಪಿತ್ರಾರ್ಜಿತ ನಿವೇಶನದಲ್ಲಿ ಸರ್ಕಾರ ನೀಡಿದ 1.60 ಲಕ್ಷ ರೂಪಾಯಿ ಜತೆಗೆ ತಾನೂ 1 ಲಕ್ಷ ಸೇರಿಸಿ ಮನೆ ನಿರ್ಮಿಸಿಕೊಂಡಿದ್ದಾರೆ. ಅದರ ಹೊರತು ಬೇರೆ ಸ್ಥಿರಾಸ್ತಿ, ಚರಾಸ್ತಿ ಇಲ್ಲ. ಇತರೆ ಆದಾಯವೂ ಇಲ್ಲ.

ಮನೆಯಲ್ಲಿ ಟಿವಿ ಹಾಕಿಸಿಕೊಂಡಿಲ್ಲ; ಪತ್ರಿಕೆ ಕೊಳ್ಳವ ಹವ್ಯಾಸವೂ ಇಲ್ಲ; ಆದರೆ, ಮೊಬೈಲ್ ಇದೆ. ಸರ್ಕಾರದಿಂದ ರೇಷನ್ ಕಾರ್ಡ್, ಆಧಾರ್ ಕಾರ್ಡ್ ದೊರೆತಿದೆ. ರಾಮಪ್ಪ ಸರ್ಕಾರದಿಂದ ನಿರೀಕ್ಷಿಸುವುದು ಏನೆಂದರೆ, ‘ಸರ್ಕಾರ ಜಮೀನು ನೀಡಿದರೆ ಊರಿಗೆ ಹೋಗುವುದು, ಮಕ್ಕಳ, ಕುಟುಂಬದ ಹಿತ ಕಾಪಾಡುವುದು, ಮಕ್ಕಳನ್ನು ಓದೂವಷ್ಟು ಓದಿಸುವುದು, ಮದುವೆ ಮಾಡುವುದು…’ ಇವು ರಾಮಪ್ಪನ ನಿರೀಕ್ಷೆಗಳು. ಮೊಬೈಲ್ ಸಂ: 9663344718

Leave a Reply

Your email address will not be published.