ಎಚ್ಚರಿಕೆ ಮತ್ತು ಭರವಸೆಯ ಬಿಂಬ!

ಅವರು ಆ ಊರಿನ ಶ್ರೀಮಂತ ವೈದ್ಯ. ಸಾಕಷ್ಟು ಹೂಡಿಕೆ ಮಾಡಿ ಸುಸಜ್ಜಿತ ಆಸ್ಪತ್ರೆ ಕಟ್ಟಿದ್ದರು. ಹಣದೊಂದಿಗೆ ದುರಭ್ಯಾಸಗಳೂ ಅವರ ಜೊತೆಗೂಡಿದವು. ಕೊನೆಗೆ ಎಲ್ಲ ದಿವಾಳಿಯಾಗಿ ಪಾಪರ್ ಚೀಟಿ ಪಡೆಯಬೇಕಾದ ಹಂತ ತಲುಪಿದರು. ಆಗ ಅವರಿಗೆ ಕೋವಿಡ್ ವರವಾಗಿ ನೆರವಾಯಿತು. ಹತ್ತಿರದ ಸ್ಲಮ್ ಹುಡುಗರಿಗೆ ಪಿಪಿಇ ಕಿಟ್ ಹಾಕಿಸಿ ಚಿಕಿತ್ಸೆ ಹೆಸರಿನಲ್ಲಿ ದೋಚತೊಡಗಿದರು. ಕೋವಿಡ್ ಮೊದಲ ಅಲೆಯಲ್ಲಿ ಸಾಲಸೋಲ ತೀರಿಸಿ ಸಮೃದ್ಧಿ ಸಾಧಿಸಿದ್ದೇ ತಡ ಮತ್ತೆ ಅಂಟಿಕೊಂಡಿತು ಜೂಜಾಟದ ಚಟ. ಎರಡನೇ ಅಲೆಯ ದೆಶೆಯಿಂದ ಅವರ ಆಸ್ಪತ್ರೆ ಪುನಃ ಚೇತರಿಸಿಕೊಂಡಿತು. ಆದರೆ ವೈದ್ಯರು ಸುಧಾರಿಸಲಿಲ್ಲ. ಗಳಿಸಿದ ಆದಾಯ ಉಳಿಸಿಕೊಂಡು ಗೌರವದಿಂದ ಬಾಳಲು ಅವರ ಸಹೋದೋಗಿ ನೀಡಿದ ಸಲಹೆಗೆ ಆ ವೈದ್ಯನ ಉತ್ತರ: ‘ಇನ್ನೂ ಮೂರನೇ ಅಲೆ ಬರುವುದು ಬಾಕಿ ಇದೆ!’

ಹೀಗೆ ಕೋವಿಡ್ ಮೂರನೇ ಅಲೆಯ ಸಂಕಷ್ಟದ ‘ಅವಕಾಶ’ಕ್ಕಾಗಿ ಕಾಯುತ್ತಿರುವವರ ಸಂಖ್ಯೆ ಕಡಿಮೆಯೇನಿಲ್ಲ. ಇವರ ಬಗ್ಗೆ ಎಚ್ಚರ ಅಗತ್ಯ.

ಇನ್ನೊಂದು ಪ್ರಸಂಗ. ಅದು ಕೋವಿಡ್ ಎರಡನೇ ಅಲೆ ಉತ್ತುಂಗಕ್ಕೇರಿದ ಸಂದರ್ಭ. ಸೋಂಕಿತರಿಂದ ತುಂಬಿ ತುಳುಕುತ್ತಿದ್ದ ಆಸ್ಪತ್ರೆ. ಆಮ್ಲಜನಕದ ಪ್ರಮಾಣ ಶೇ.40ಕ್ಕಿಂತ ಕೆಳಗಿಳಿದ ಅನೇಕ ಸೋಂಕಿತರಿಗೆ ಏಕಕಾಲಕ್ಕೆ ವೆಂಟಿಲೇಟರ್ ಸೌಲಭ್ಯದ ಅಗತ್ಯವಿತ್ತು. ಲಭ್ಯವಿದ್ದದ್ದು ಒಂದೇ ವೆಂಟಿಲೇಟರ್. ವೈದ್ಯರಿಗೆ ಯಾರ ಜೀವ ಉಳಿಸಬೇಕು ಎಂಬ ಆಯ್ಕೆಯ ಪ್ರಶ್ನೆ. ಧರ್ಮಸಂಕಟದಲ್ಲಿ ಬಿದ್ದ ವೈದ್ಯರು 30ರ ಯುವಕನ ಬದಲು 73 ವರ್ಷದ ವೃದ್ಧರಿಗೆ ಅವಕಾಶ ಕಲ್ಪಿಸಿದರು. ವೃದ್ಧ ಕೆಲವೇ ಗಂಟೆಗಳಲ್ಲಿ ಅಸುನೀಗಿದರು. ಅವಕಾಶ ಸಿಗದ ಯುವಕನೂ ಉಳಿಯಲಿಲ್ಲ. ಯುವಕನಿಗೆ ವೆಂಟಿಲೇಟರ್ ನೀಡಿ ಬದುಕಿಸಬೇಕಿತ್ತು, ಎಲ್ಲರಿಗೂ ಬದುಕುವ ಸಮಾನ ಹಕ್ಕಿರುವಾಗ ಆಯ್ಕೆ ಮಾಡಲು ತಾನಾರು ಎಂಬ ಪಾಪ ಪ್ರಜ್ಞೆಗೀಡಾದ ಯುವ ಶ್ವಾಸಕೋಶ ತಜ್ಞ ಡಾ.ವಿವೇಕ್ ಕಣ್ಣಲ್ಲಿ ಧಾರಾಕಾರ ನೀರು.

ಇಂತಹ ಹೃದಯವಂತ ವೈದ್ಯರ ಸಂತತಿಯೂ ಕಡಿಮೆಯೇನಿಲ್ಲ. ಇವರೇ ಮೂರನೆಯ ಅಲೆ ಎದುರಿಸಲು ಇರುವ ಭರವಸೆಯ ಕಿರಣ.

ನಾವು ಈ ಸಂಚಿಕೆಯ ಮುಖ್ಯಚರ್ಚೆ ಮೂಲಕ ಕೋವಿಡ್ ಎಂಬ ಕನ್ನಡಿಯಲ್ಲಿ ವ್ಯವಸ್ಥೆ ಮತ್ತು ವ್ಯಕ್ತಿಗಳ ಒಳಹೊರಗು ಕಾಣಲು, ಕಾಣಿಸಲು, ಹಿಡಿದಿಡಲು ಹೊರಟೆವು. ಕನ್ನಡಿಯ ಗಾತ್ರ ಅಗಲಿಸಿ, ಕೋನ ಬದಲಿಸಿ, ಆಕಾರ ಕುದುರಿಸಿ, ಅಡಚಣೆ ಚದುರಿಸಿ… ಹೇಗೆಲ್ಲಾ ಹೆಣಗಾಡಿದರೂ ಉಳಿದದ್ದು ಅದೇ ಬಿಂಬ. ಚಿತ್ರದಲ್ಲಿ ಕಾಣುವ ಆ ಬಿಂಬ ಒಬ್ಬ ವ್ಯಕ್ತಿಯದೆಂದು ಪರಿಭಾವಿಸಿದರೆ ತೀರಾ ಮೇಲ್ಪದರ ಗ್ರಹಿಕೆಯಾದೀತು. ಅದು ಪ್ರಸಕ್ತ ಭಾರತ ಪ್ರತಿಬಿಂಬಿಸುವ ಸಾಂಕೇತಿಕ ವ್ಯಕ್ತಿತ್ವ.

ದೇಶದ ಪ್ರಧಾನಿಯಿಂದ ಹಿಡಿದು ಹಳ್ಳಿಯ ಪಂಚಾಯಿತಿ ಸದಸ್ಯರ ತನಕ ಆಡಳಿತ ಸರಣಿಯ ಕೊಂಡಿಗಳು ಈ ಕೋವಿಡ್ ಸಂದರ್ಭದಲ್ಲಿ ವರ್ತಿಸಿದ ರೀತಿಗೆ ಅವರವರ ಸ್ಥಾನ-ಅರ್ಹತೆಗೆ ತಕ್ಕ ಮಹತ್ವ ಇರುತ್ತದೆ. ಮಾತು ಅಗತ್ಯವಿದ್ದಾಗ ಮೌನ ವಹಿಸಿದ ಪ್ರಧಾನಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಗ್ಗೆ ತಪ್ಪು ಸಂದೇಶ ರವಾನಿಸಿದ ಕರ್ನಾಟಕದ ಮುಖ್ಯಮಂತ್ರಿ-ವಿರೋಧ ಪಕ್ಷದ ನಾಯಕರು, ರಾಜ್ಯಕ್ಕಾದ ತಾರತಮ್ಯದ ಬಗ್ಗೆ ದನಿಯೆತ್ತದ ಸಂಸದರು, ಅಸಹಾಯಕರಿಗೆ ತಲುಪಬೇಕಾದ ನೆರವು ನುಂಗಿದ ಪುಢಾರಿಗಳು… ಎಲ್ಲರೂ ಕೋವಿಡ್ ಅನಾಹುತಗಳಿಗೆ ಸಮಾನ ಬಾಧ್ಯಸ್ಥರು.

ಇಂತಹ ವಿಶಾಲ ದೃಷ್ಟಿಕೋನದಿಂದ ರೂಪಿಸಿದ ಈ ಚರ್ಚೆಯಲ್ಲಿ ಆಡಳಿತ ವ್ಯವಸ್ಥೆಯ ಊನ, ಹುಳುಕು, ಕೆಡಕುಗಳು ಪ್ರಕಟವಾಗಲಿ; ಒಳಿತಿನ ರಚನಾತ್ಮಕ ಚಿಂತನೆಗಳು ಹೊಳೆಯಲಿ; ಸುವ್ಯವಸ್ಥೆಯ ಹಾದಿ ಸುಗಮವಾಗಲಿ ಎಂಬುದಷ್ಟೇ ಸಮಾಜಮುಖಿಯ ಆಶಯ.

ಎರಡು ತಿಂಗಳ ನಂತರ ಮುದ್ರಣ ಆವೃತ್ತಿಯಲ್ಲಿ ಹೊರಬಿದ್ದ ಈ ಸಂಚಿಕೆಯನ್ನು ಸಜೀವಗೊಳಿಸಲು ಶ್ರದ್ಧೆಯಿಂದ ಶ್ರಮಿಸಿದ್ದೇವೆ, ಸ್ವೀಕರಿಸಿ. ಸಮಾಜಮುಖಿ ಶೋಧ ಬಾಲಚಂದ್ರ ಅವರ ವಿಡಂಬನೆ ಓದಲು ಮರೆಯಬೇಡಿ.

Leave a Reply

Your email address will not be published.