ಎಚ್ಚೆಸ್ವಿ ಅವರ ‘ಬುದ್ಧಚರಣ’

-ಸುಭಾಷ್ ರಾಜಮಾನೆ

ಈ ಕೃತಿಯಲ್ಲಿ ಬುದ್ಧ ಜೀವವಿರೋಧಿ ವೈದಿಕ ಆಚರಣೆಗಳನ್ನು ವಿರೋಧಿಸಿದ್ದರ ಬಗ್ಗೆ ಅಪ್ಪಿತಪ್ಪಿಯೂ ಒಂದು ಸಾಲು ಸಿಗುವುದಿಲ್ಲ. ಇವುಗಳ ಸತ್ಯಾಸತ್ಯತೆ ಕವಿಗಳಿಗೆ ಗೊತ್ತಿಲ್ಲ ಎಂದರ್ಥವಲ್ಲ. ತಮ್ಮ ಕಾವ್ಯವನ್ನು ಹಾಡಿಹೊಗಳುವ ವರ್ಗದ ಕೆಂಗಣ್ಣಿಗೆ ಗುರಿಯಾಗುವ ಆತಂಕ ಮತ್ತು ತಮ್ಮ ಜಾತಿಯ ಓದುಗ ವಲಯದ ವಿರೋಧ ಕಟ್ಟಿಕೊಳ್ಳಬೇಕಾದೀತು ಎಂಬ ಆಂತರಿಕ ಭಯ ಕವಿಯನ್ನು ಆವರಿಸಿದಂತಿದೆ!

ಆಡಂಬರ-ಆತ್ಮವOಚನೆಯೇ ಹೂರಣ!

ಹಿರಿಯ ಕವಿಗಳಾದ ಎಚ್.ಎಸ್.ವೆಂಕಟೇಶಮೂರ್ತಿಯವರ ಇತ್ತೀಚಿನ ಕೃತಿ ‘ಬುದ್ಧಚರಣ’ವು ಬುದ್ಧನ ಜೀವನ ಹಾಗೂ ತತ್ವವನ್ನು ಕಾವ್ಯರೂಪದಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದೆ. ಎಂಟು ಕಾಂಡಗಳಲ್ಲಿ ಹರಡಿಕೊಂಡಿರುವ ಈ ಕಾವ್ಯವು ‘ಬೆರೆತು ಬದುಕಿಸಿದ ನನ್ನೊಲವಿನ ಸಖಿ| ತೊರೆದು ಹೋದಳು’ ಎಂಬ ವಿಷಾದದೊಂದಿಗೆ ಶುರುವಾಗುತ್ತದೆ. ಬುದ್ಧ ಗುರುವಿನ ಮಹಾನಿರ್ವಾಣದೊಂದಿಗೆ ‘ಒದ್ದೆಗಣ್ಣಲ್ಲಿ ನೋಡುತ್ತೇನೆ ಕಡುನೀಲಿಬಾನತ್ತ, ನೆತ್ತಿಮೇಲಿದ್ದ| ಶ್ರೀಚರಣಕ್ಕೆ ಮಣಿದು’ ಎನ್ನುವ ದುಃಖ ಭಾವದೊಂದಿಗೆ ಮುಗಿಯುತ್ತದೆ. ಇದರ ನಡುವೆ ಸಿದ್ಧಾರ್ಥನ ಜನನ, ಬೆಳವಣಿಗೆ, ಸಾಂಸಾರಿಕ ಜೀವನ ಮತ್ತು ಬುದ್ಧತ್ವ ಪಡೆಯಲು ನಡೆಸುವ ಸಂಘರ್ಷ ಹಾಗೂ ಭಿಕ್ಕುವಾಗಿ ಪರಿನಿರ್ವಾಣದವರೆಗಿನ ಕಾಲಘಟ್ಟವು ಕಾವ್ಯವಾಗಿ ಮೈದಾಳಿದೆ.

ಎಚ್ಚೆಸ್ವಿಯವರ ಇದುವರೆಗಿನ ಕಾವ್ಯವು ಪೌರಾಣಿಕ ವ್ಯಕ್ತಿಗಳಾದ ರಾಮ ಮತ್ತು ಕೃಷ್ಣರ ಸುತ್ತವೇ ಗಿರಕಿ ಹೊಡೆಯುತ್ತಿತ್ತು ಹಾಗೂ ಎರಡೂವರೆ ಸಾವಿರ ವರ್ಷಗಳ ಕೆಳಗೆ ತನ್ನ ಚಾರಿತ್ರೆö್ಯ, ವ್ಯಕ್ತಿತ್ವ, ನಡೆನುಡಿಯಿಂದ ಯುಗಪ್ರವರ್ತಕ ಹೆಜ್ಜೆಗಳನ್ನು ಇಟ್ಟ ಬುದ್ಧ ಗುರುವಿನ ಕುರಿತು ಕಾವ್ಯವನ್ನು ರಚಿಸಿದ್ದರಿಂದ ಕುತೂಹಲ ಮೂಡಿಸಿತು.

ಈ ಕೃತಿಯು ಛಂದೋಬದ್ಧತೆ ಹಾಗೂ ಲಾಲಿತ್ಯಮಯ ಶೈಲಿಯಲ್ಲಿ ಬುದ್ಧನ ಜೀವನದ ಆಗುಹೋಗುಗಳನ್ನು ಚಾರಿತ್ರಿಕವಾದ ಕಾಲಾನುಕ್ರಮಣಿಕೆಯಲ್ಲಿ ಕಾವ್ಯ ಕಥನವನ್ನು ನಿರೂಪಿಸುತ್ತದೆ. ಇದನ್ನು ‘ಲಲಿತ ಛಂದೋಲಯದ ಮಹಾಕಾವ್ಯ’ ಎಂದು ಕರೆಯಲಾಗಿದೆ. ಆದರೆ ಕಾವ್ಯದ ಜೀವಾಳವೆಂದರೆ ಅದು ಕಾಲ ಮತ್ತು ದೇಶವನ್ನು ಮೀರಿ ನಮ್ಮ ಕಾಲದ ಯಾವ ದಂದುಗಗಳಿಗೆ ಮುಖಾಮುಖಿಯಾಗಿದೆ ಎನ್ನುವುದೇ ಮುಖ್ಯವಾಗಿರುತ್ತದೆ.

ಕೇವಲ ಸುಲಲಿತವಾದ, ಛಂದೋಬದ್ಧವಾದ ಹಾಗೂ ರಸಮಯವಾದ ಆಡಂಬರದ ಶಬ್ದಗಳನ್ನು ಪೋಣಿಸುವುದರಿಂದಷ್ಟೇ ಮಹಾಕಾವ್ಯವಾಗದು; ಕಾವ್ಯದಲ್ಲಿ ಹೊಸ ನೀರು ಹರಿಯದಿದ್ದರೆ ಅದು ಬಹುಬೇಗ ಚರ್ವಿತಚರ್ವಣವೇ ಆಗಿಬಿಡುತ್ತದೆ; ಪೂರ್ವಸೂರಿಗಳ ಜಾಡಿನಲ್ಲಿ ನಡೆದರೂ ಅದರೊಳಗೆ ನಾವೀನ್ಯತೆಯ ಕಾಣ್ಕೆ ಇರದಿದ್ದರೆ ಆ ಕಾವ್ಯವು ಬಹುಬೇಗ ಮೂಲೆಗುಂಪಾಗುತ್ತದೆ. ‘ಬುದ್ಧಚರಣ’ವು ತನ್ನತನದ ಹುಡುಕಾಟದ ದಾರಿಯನ್ನು ಕಂಡುಕೊಳ್ಳಲಾಗದೆ ಸೂತ್ರಬದ್ಧವಾದ ಹಾಗೂ ಸವಕಲಾದ ದಾರಿಯನ್ನು ಹಿಡಿದಿರುವುದು ಸ್ಪಷ್ಟವಾಗಿದೆ. ಆದ್ದರಿಂದಲೇ ಈ ಕಾವ್ಯದ ಓದಿನ ಅನುಭವವು ನಮ್ಮ ಸಂವೇದನೆಯನ್ನು ಕಲಕಿ ಹೊಸ ಅರಿವನ್ನು ನೀಡುವಷ್ಟು ಫಲಪ್ರದವಾಗಿಲ್ಲ.

ವೈದಿಕ ಧರ್ಮವು ರೂಢಿಗೊಳಿಸಿದ್ದ ಚತುರ್ವರ್ಣ ವ್ಯವಸ್ಥೆ, ಪುರೋಹಿತಶಾಹಿ, ಅಸ್ಪೃಶ್ಯತೆ, ಜಾತಿ ಪದ್ಧತಿ, ಮೇಲು ಕೀಳಿನ ಅಸಮಾನತೆ ಹಾಗೂ ಹಿಂಸೆಯನ್ನು ಪೋಷಿಸುವ ಯಜ್ಞಯಾಗಾದಿಗಳನ್ನು ಬುದ್ಧ ಮೆಲುದನಿಯಲ್ಲಿಯೇ ಪ್ರತಿರೋಧಿಸಿದ. ಬುದ್ಧ ಮನುಷ್ಯರ ನಡುವೆ ತಾರತಮ್ಯವನ್ನು ತಂದೊಡ್ಡಿದ ಎಲ್ಲ ಬಗೆಯ ಭೇದಭಾವಗಳನ್ನು ನಿರಾಕರಿಸಿದ. ‘ಬುದ್ಧಚರಣ’ ಕಾವ್ಯದಲ್ಲಿ ಬುದ್ಧ ಜೀವ ವಿರೋಧಿಯಾಗಿರುವ ವೈದಿಕ ಆಚರಣೆಗಳನ್ನು ವಿರೋಧಿಸಿದ್ದರ ಬಗ್ಗೆ ಅಪ್ಪಿತಪ್ಪಿಯೂ ಒಂದು ಸಾಲು ಸಿಗುವುದಿಲ್ಲ. ಇವುಗಳ ಸತ್ಯಾಸತ್ಯತೆ ಕವಿಗಳಿಗೆ ಗೊತ್ತಿಲ್ಲ ಎಂದರ್ಥವಲ್ಲ. ಇವರ ಕಾವ್ಯವನ್ನು ಒಂದು ವರ್ಗದವರು ಹಾಡಿ ಹೊಗಳುತ್ತ ಬಂದಿರುವುದರಿAದ ಅವರ ಕೆಂಗಣ್ಣಿಗೆ ಗುರಿಯಾಗುವ ಆತಂಕವಿದೆ ಹಾಗೂ ಎಲ್ಲಿ ತಮ್ಮ ಜಾತಿಯ ಓದುಗ ವಲಯದ ವಿರೋಧ ಕಟ್ಟಿಕೊಳ್ಳಬೇಕಾಗುವುದೋ ಎನ್ನುವ ಆಂತರಿಕ ಭಯವೂ ಇದೆ.

ಕವಿಯೊಬ್ಬ ಹೀಗೆ ತನ್ನೊಳಗಿನ ದನಿಯೊಂದಿಗೆ ರಾಜಿ ಮಾಡಿಕೊಳ್ಳುವುದರಿಂದ ಸಹಜವಾಗಿಯೇ ಆತ್ಮವಂಚನೆಯನ್ನು ಮಾಡಿಕೊಳ್ಳುವ ಹಂತವನ್ನು ತಲುಪಿಬಿಡುತ್ತಾನೆ. ಇದರಿಂದ ಲೋಕಕ್ಕೆ ಹೇಳಬೇಕಾದ ಸತ್ಯವನ್ನು ಮರೆಮಾಚಿದಂತಾಗುತ್ತದೆ. ಆದರೆ ಬುದ್ಧ ತನ್ನ ಹೆಂಡತಿ, ಮಗು, ಮನೆಮಾರು, ಮನೆತನ, ರಾಜ್ಯ, ಅಧಿಕಾರಗಳ ಯಾವುದೇ ಹಂಗಿಲ್ಲದೇ ಜನಸಮುದಾಯಗಳ ಒಳಿತನ್ನು ಬಯಸಿದ. ತನ್ನ ಕೈಯಲ್ಲಿ ಭಿಕ್ಷಾಪಾತ್ರೆಯನ್ನು ಹಿಡಿದುಕೊಂಡು ಲೋಕ ಸತ್ಯವನ್ನು ನುಡಿದ. ಬುದ್ಧನಂತೆಯೇ ಬಸವ, ಗಾಂಧಿ, ಜ್ಯೋತಿಬಾ ಫುಲೆ, ಪೆರಿಯಾರ್, ಲೋಹಿಯಾ, ಅಂಬೇಡ್ಕರ್ ಇವರೆಲ್ಲ ಸತ್ಯವನ್ನು ನುಡಿಯುವುದಕ್ಕಾಗಿ ಅಗ್ನಿದಿವ್ಯದಲ್ಲಿ ಹಾದು ಬಂದವರೇ ಆಗಿದ್ದಾರೆ. ಕವಿಯು ಕೂಡ ಇಂತಹ ಸತ್ಯಕ್ಕಾಗಿ ದೀಪದ ಸುತ್ತ ಹಾರಾಡುವ ಪತಂಗದ ಹಾಗೆ ತನ್ನನ್ನು ತಾನು ಸುಟ್ಟುಕೊಳ್ಳದಿದ್ದರೆ ಕಾವ್ಯದಲ್ಲಿ ದಾರ್ಶನಿಕತೆಯೇ ಅಂತರ್ಗತವಾಗುವುದಿಲ್ಲ. ಹೀಗಾಗಿ ‘ಬುದ್ಧಚರಣ’ ಕಾವ್ಯವು ಎಷ್ಟೇ ಸುಂದರವಾಗಿ, ಲಾಲಿತ್ಯಪೂರ್ಣವಾಗಿ ಕಟ್ಟಿದರೂ ಅದರೊಳಗೆ ಯುಗದ ದಾರ್ಶನಿಕತೆಯೇ ಇಲ್ಲವಾದರೆ ಅದು ಆಡಂಬರದ ಕಾವ್ಯವಷ್ಟೇ ಆಗಿರುತ್ತದೆ.

ಪಾಳಿ ಭಾಷೆಯಲ್ಲಿರುವ ಬುದ್ಧನ ಜಾತಕ ಕತೆಗಳು ಕಲ್ಪಿತವೆಂಬುದನ್ನು ಅನೇಕ ವಿದ್ವಾಂಸರು ಒಪ್ಪಿದ್ದಾರೆ. ಆದರೆ ಈ ಕಾವ್ಯದಲ್ಲಿ ಬುದ್ಧನಿಂದಲೇ ತನ್ನ ಪೂರ್ವ ಜನ್ಮದ ಕತೆಗಳನ್ನು ಹೇಳಿಸಲು ಒಂದು ಅಧ್ಯಾಯವನ್ನೇ ಮೀಸಲಿರಿಸಿರುವುದು ವಿಚಿತ್ರವಾಗಿದೆ. ಬುದ್ಧ ತನ್ನ ಇಡೀ ಜೀವಮಾನದಲ್ಲಿ ತನ್ನ ಹಿಂದಿನ ಜನ್ಮದ ಬಗ್ಗೆಯಾಗಲಿ, ಕರ್ಮ ಸಿದ್ಧಾಂತದ ಕುರಿತಾಗಲಿ ಮಾತನಾಡಿದವನಲ್ಲ. ಮನುಷ್ಯರ ಕ್ರಿಯಾಶಕ್ತಿಯನ್ನು ಹಾಗೂ ಸ್ವತಂತ್ರ ಆಲೋಚನಾಶಕ್ತಿಯನ್ನು ಕುಗ್ಗಿಸುವ ಕರ್ಮ ಸಿದ್ಧಾಂತವು ಜಾತಿ ಪದ್ಧತಿಯನ್ನು ಸಮರ್ಥಿಸುತ್ತದೆ. ಈಗ ಕೀಳು ಜಾತಿಯಲ್ಲಿ ಹುಟ್ಟಿರುವುದಕ್ಕೆ ಪೂರ್ವಜನ್ಮದ ಪಾಪವೇ ಕಾರಣವೆಂದು ಹೇಳುವುದರ ಮೂಲಕ ಜಾತಿ ವ್ಯವಸ್ಥೆಯ ಯಥಾಸ್ಥಿತಿಯನ್ನು ಕಾಪಾಡಲಾಗುತ್ತದೆ. ಬುದ್ಧ ತನ್ನ ಕಾಲಮಾನದ ಮನುಷ್ಯರ ನಡುವಿನ ಸರ್ವಬಗೆಯ ಗೋಡೆಗಳನ್ನು ನಾಶಪಡಿಸಿ ಮೈತ್ರಿಭಾವವನ್ನು ಪ್ರತಿಪಾದಿಸಿದ. ಮನುಷ್ಯ ಸಂಬAಧಗಳನ್ನು ಛಿದ್ರಗೊಳಿಸುವ ಎಲ್ಲ ಅಡಚಣೆಗಳ ಹಿಂದಿರುವ

ಕಾರಣಗಳನ್ನು ವೈಚಾರಿಕವಾಗಿ ಆಲೋಚಿಸಿದವನು. ಆದರೆ ಈ ಕಾವ್ಯದಲ್ಲಿ ಬುದ್ಧನ ಚಿಂತನಶೀಲತೆ ಹಾಗೂ ಕ್ರಾಂತಿಕಾರಿ ನಡೆಯೇ ಕಣ್ಮರೆಯಾಗಿದೆ.

ಸಿದ್ಧಾರ್ಥ ತನ್ನ ಅರಮನೆಯ ಹೊರಗೆ ವೃದ್ಧ, ರೋಗಿ, ಶವ ಹಾಗೂ ಸಂನ್ಯಾಸಿಯನ್ನು ಕಂಡು ಪರಿವರ್ತನೆಯಾದ ಎಂದು ಪ್ರಾಥಮಿಕ ಶಾಲಾ ಪಠ್ಯಪುಸ್ತಕಗಳಿಂದಲೇ ಹೇಳಿಕೊಡುತ್ತ ಬರಲಾಗಿದೆ. ಮದುವೆಯಾಗಿ ಮಗುವನ್ನು ಪಡೆದಿದ್ದ ಸಿದ್ಧಾರ್ಥನಿಗೆ ಮುದಿತನ, ಕಾಯಿಲೆ, ಸಾವು ಇವುಗಳ ಕುರಿತು ಏನೂ ಗೊತ್ತಿರದಷ್ಟು ಮುಗ್ಧನಾಗಿದ್ದನೇ? ತನ್ನ 29ನೇ ವಯಸ್ಸಿನಲ್ಲಿಯು ಇವುಗಳ ಬಗ್ಗೆ ತಿಳಿದಿರದಷ್ಟು ಮೂಢನಾಗಿದ್ದನೇ?

‘ಬುದ್ಧಚರಣ’ ಕಾವ್ಯವು ಇಂತಹ ಎಳಸು ಸಂಗತಿಗಳನ್ನು ಯಥಾವತ್ತಾಗಿಯೇ ನಿರೂಪಿಸುತ್ತದೆ. ಇವುಗಳನ್ನು ವೈಚಾರಿಕ ಪ್ರಜ್ಞೆಯಿಲ್ಲದೇ ಪ್ರಶ್ನಾತೀತವಾಗಿ ಒಪ್ಪಿಕೊಳ್ಳಲಾಗಿದೆ. ಬುದ್ಧ ಆಳವಾದ ವೈಚಾರಿಕ ಪ್ರಜ್ಞೆಯನ್ನು ಹೊಂದಿದ್ದ ಹಾಗೂ ಸಾಮಾಜಿಕ ಕಾಯಿಲೆಗಳ ಕಾರಣಗಳನ್ನು ಮತ್ತು ಅವುಗಳಿಗೆ ಸೂಕ್ತವಾದ ಮದ್ದನ್ನು ಕಂಡುಹಿಡಿದ ಒಬ್ಬ ಮನೋವಿಜ್ಞಾನಿಯಂತೆ ಆಲೋಚಿಸಿದವನು. ಅಂತಹ ಬುದ್ಧನನ್ನು ತನ್ನೊಳಗೆ ಮುಳುಗಿದಂತೆ, ಒಬ್ಬ ಪವಾಡ ಪುರುಷನಂತೆ ಇಲ್ಲಿ ಚಿತ್ರಿಸಲಾಗಿದೆ.

ಮನುಷ್ಯನ ದುಃಖದ ಕಾರಣಗಳನ್ನು ಹಾಗೂ ಅವುಗಳಿಗೆ ಶಾಶ್ವತ ಪರಿಹಾರಗಳನ್ನು ನೀಡಿದವನು ಬುದ್ಧ. ಕಣ್ಣಿಗೆ ಕಾಣದ ದೇವರು ಮತ್ತು ಆತ್ಮದ ಹಿಂದೆ ಬಿದ್ದವರ ಅಜ್ಞಾನವನ್ನು ಬುದ್ಧ ತೋರಿಸಿಕೊಟ್ಟ. ಮಧ್ಯಮ ಮಾರ್ಗದ ಪ್ರತಿಪಾದನೆಗಾಗಿ ದೀರ್ಘ ತಪಸ್ಸು, ಧ್ಯಾನಗಳ ಪಯಣದಲ್ಲಿ ಬುದ್ಧ ಕಂಡುಕೊAಡ ಪರಮ ಸತ್ಯಗಳು ಲೋಕೋದ್ಧಾರಕ್ಕೆ ಮಾರ್ಗದರ್ಶಿ ಸೂತ್ರಗಳಾದವು. ಬುದ್ಧ ಪ್ರತಿಪಾದಿಸಿದ ಜೀವಕಾರುಣ್ಯ ಮತ್ತು ಮೈತ್ರಿತತ್ವಗಳು ಜಾತಿಬೇಲಿಯನ್ನು ಮುರಿದು ಮನುಷ್ಯ ಸಮಾನತೆಗೆ ಅಡಿಪಾಯ ಹಾಕಿದವು. ಸಾರ್ವಕಾಲಿಕ ಸತ್ಯದ ತತ್ವಗಳನ್ನು ನೀಡಿದ ಬುದ್ಧ ಗುರುವಿನ ಜೀವನವು ಇಂದಿಗೂ ಆಕರ್ಷಣೆಯ ಕೇಂದ್ರವಾಗಿದೆ.

ಬುದ್ಧನ ನಂತರದಲ್ಲಿ ಆತನ ಜೀವನ ಹಾಗೂ ಸಾಧನೆಯನ್ನು ಅಶ್ವಘೋಷ ಕಾವ್ಯವಾಗಿಸಿದ. ಆಧುನಿಕ ಕನ್ನಡ ಸಾಹಿತ್ಯವು ಕತೆ, ನಾಟಕ, ಕಾವ್ಯ, ಅನುವಾದ ಹಾಗೂ ತಾತ್ವಿಕ ಚಿಂತನೆ, ವಿಮರ್ಶೆಗಳಿಂದ ಬುದ್ಧನ ದಾರ್ಶನಿಕತೆಯನ್ನು ಅನುಸಂಧಾನ ಮಾಡಿದೆ. ಈ ನಿಟ್ಟಿನಲ್ಲಿ ಜಿ.ಪಿ.ರಾಜರತ್ನಂ, ಗೋವಿಂದ ಪೈ, ಮಾಸ್ತಿ ವೆಂಕಟೇಶ ಅಯ್ಯಂಗಾರ, ಕುವೆಂಪು, ಪ್ರಭುಶಂಕರ, ಎಲ್.ಬಸವರಾಜು, ಡಿ.ಆರ್.ನಾಗರಾಜ, ನಟರಾಜ ಬೂದಾಳು, ಮೂಡ್ನಾಕೂಡು ಚಿನ್ನಸ್ವಾಮಿ ಮುಂತಾದವರು ಮಹತ್ವದ ಹೆಜ್ಜೆಗಳನ್ನು ಇಟ್ಟಿದ್ದಾರೆ. ಆದರೆ ‘ಬುದ್ಧಚರಣ’ವು ದಿಟ್ಟತನ, ಖಚಿತತೆ ಹಾಗೂ ಸಾಮಾಜಿಕ ಸತ್ಯಗಳನ್ನು ತೆರೆದಿಡುವ ಛಾತಿಯಿಲ್ಲದೆ ಸೊರಗಿದೆ.

ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯವು ವಾಲ್ಮೀಕಿ ರಾಮಾಯಣದ ಪಡಿನೆರಳಾಗಿ ಸೃಷ್ಟಿಯಾಗಿದ್ದಲ್ಲ; ಅದರ ಅನುಸಂಧಾನವು ಅಲ್ಲ; ಕುವೆಂಪು ಇದರಲ್ಲಿ ಋಣಸಂದಾಯ ಮಾಡಿರುವ ಕವಿಗಳ ಪಟ್ಟಿಯು ದೀರ್ಘವಾಗಿದ್ದರೂ ಕನ್ನಡದಲ್ಲಿ ಅದೊಂದು ಹೊಸ ಸೃಜನಶೀಲ ಸೃಷ್ಟಿಯಾಗಿಯೇ ಮೂಡಿದ ಕಾವ್ಯವಾಗಿದೆ. ಆದರೆ ‘ಬುದ್ಧಚರಣ’ವು ಪೂರ್ವಸೂರಿಗಳ ಋಣಭಾರದಿಂದ ಮುಕ್ತವಾಗಲು ಸಾಧ್ಯವಾಗಿಲ್ಲ ಹಾಗೂ ಅಷ್ಟೇ ಅಲ್ಲದೇ ಅದನ್ನು ಮೀರಿ ನವದಾರ್ಶನಿಕತೆಯನ್ನು ಹುಟ್ಟಿಸಲು ಕೂಡ ಸಫಲವಾಗಿಲ್ಲ.

ಬುದ್ಧನನ್ನು ಬರಿ ಬುದ್ಧಿಯಿಂದ ಗ್ರಹಿಸಿಕೊಂಡು ಕಾವ್ಯವನ್ನು ಕಟ್ಟಲು ತೊಡಗುವ ಕವಿಗಳ ಹಣೆಬರಹವೇ ಇಷ್ಟು. ಸಾಮಾಜಿಕ ವಾಸ್ತವತೆಯ ಮೌಲ್ಯಗಳ ಅನುಸಾರವಾಗಿ ಬದುಕದಿರುವ ಮತ್ತು ಎದೆಯಾಳದಿಂದ ಸಂವೇದಿಸದಿರುವ ಯಾವ ಕವಿಯೂ ಮಹಾಕಾವ್ಯವನ್ನು ರಚಿಸಿದ್ದೇನೆಂದು ಬೀಗಲಾಗದು. ಮಹಾಕಾವ್ಯ ಬರೆದಿರುವುದಾಗಿ ಘಂಟಾಘೋಷವಾಗಿ ಹೇಳಿಕೊಳ್ಳಬಹುದು. ಇಂತಹ ಮಹಾಕಾವ್ಯದ ಸತ್ವವನ್ನು ಕಾಲ ಕೂಡ ನಿರ್ಧರಿಸುತ್ತದೆ.

Leave a Reply

Your email address will not be published.