ಎತ್ತಣ ಸಾಗುವುದೀ ಎತ್ತಿನಹೊಳೆ?

ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿದ್ದ ಎಲ್ಲ ಅರ್ಜಿ, ಕೇಸುಗಳನ್ನೂ ವಜಾ ಮಾಡಿ, ರಾಷ್ಟ್ರೀಯ ಹಸಿರು ನ್ಯಾಯಪೀಠ ಯೋಜನೆಗೆ ಪೂರ್ಣ ಹಸಿರು ನಿಶಾನೆ ತೋರಿಸಿದೆ. ಜೊತೆಗೆ ಈ ಭಾಗದ ಪಶ್ಚಿಮಘಟ್ಟದ ಪರಿಸರ ನಾಶವಾಗಬಾರದು ಎಂದೂ ಹೇಳಿದೆ. ಅದು ಹೇಗೆ ಸಾಧ್ಯ?

ಸಾಮಾನ್ಯವಾಗಿ ನೀರಾವರಿ ಯೋಜನೆಯೊಂದರ ಶಂಕುಸ್ಥಾಪನೆ ಮಾಡುವುದು ಯೋಜನೆಯ ಆರಂಭದ ಭಾಗದಲ್ಲಿ. ಆದರೆ ಎತ್ತಿನಹೊಳೆ ತಿರುವು ಯೋಜನೆಯ ಶಂಕುಸ್ಥಾಪನೆಯನ್ನು ಎತ್ತಿನಹೊಳೆ ಬಳಿ ಮಾಡಲಿಲ್ಲ, ಯೋಜನೆಯ ನೀರು ಕೊನೆಗೆ ತಲುಪಬೇಕಾದ ಸ್ಥಳದಲ್ಲಿ ಮಾಡಲಾಯಿತು. ಇದರಿಂದಲೇ ನಮಗೆ ತಿಳಿಯಬೇಕು ಈ ಯೋಜನೆಯಲ್ಲಿ ಏನೋ ಹುಳುಕಿದೆ, ರಾಜಕೀಯವಿದೆ ಎಂದು. ಕರ್ನಾಟಕದ ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ನದೀ ತಿರುವು ಯೋಜನೆ ಇದು ಎಂದು ಸರ್ಕಾರ ಯೋಜಿಸಿದೆ.

ಎತ್ತಿನಹೊಳೆ ಎನ್ನುವುದು ಸಕಲೇಶಪುರ ತಾಲ್ಲೂಕಿನ ಪಶ್ಚಿಮಘಟ್ಟಗಳಲ್ಲಿ ಹುಟ್ಟಿ ಪಶ್ಚಿಮ ದಿಕ್ಕಿಗೆ ಹರಿಯುವ ಪುಟ್ಟ ಹೊಳೆ. ಈ ಹೊಳೆ, ಜೊತೆಗೆ ಇಂಥವೇ ಇನ್ನೆರಡು ಹೊಳೆಗಳಾದ ಹೊಂಗಡಹಳ್ಳ ಮತ್ತು ಕೀರಿಹೊಳೆ -ಈ ಮೂರೂ ಕೆಂಪುಹೊಳೆಗೆ ಸೇರಿಕೊಳ್ಳುತ್ತವೆ. ಕೆಂಪುಹೊಳೆಯನ್ನು ನೀವು ಸಕಲೇಶಪುರದಿಂದ ಮಂಗಳೂರಿಗೆ ಹೋಗುವಾಗ ಹೆದ್ದಾರಿಗೆ ಸಮಾನಾಂತರವಾಗಿ ಸಾಗುವುದನ್ನು ನೋಡಿರಬಹುದು. ಈ ಹೊಳೆಯನ್ನು ದಕ್ಷಿಣ ಕನ್ನಡ ಜಿಲ್ಲೆಯನ್ನು ತಲುಪುತ್ತಿದ್ದಂತೆಯೇ ಗುಂಡ್ಯಾ ನದಿ ಎಂದು ಕರೆಯುತ್ತಾರೆ.

ಈ ಗುಂಡ್ಯಾ ನದಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹರಿಯುವ ಕುಮಾರಧಾರಾ ನದಿಯ ಉಪನದಿ. ಕುಮಾರಧಾರಾ ಧರ್ಮಸ್ಥಳ, ಮಂಗಳೂರ ಮೂಲಕ ಹರಿದು ಅರಬ್ಬೀ ಸಮುದ್ರ ಸೇರುವ ನೇತ್ರಾವತಿಯ ಉಪನದಿ. ಹಾಗಾಗಿ, ಎತ್ತಿನಹೊಳೆಯ ನೀರೂ ನೇತ್ರಾವತಿಗೇ ಸೇರುವುದರಿಂದ ಎತ್ತಿನಹೊಳೆ ತಿರುವು ಯೋಜನೆ ಎನ್ನುವುದು ಬರೀ ಎತ್ತಿನಹೊಳೆಯ ತಿರುವು ಅಷ್ಟೇ ಅಲ್ಲ, ಒಂದರ್ಥದಲ್ಲಿ ನೇತ್ರಾವತಿ ತಿರುವು ಯೋಜನೆಯೇ. ಆದರೆ ನೇತ್ರಾವತಿ ತಿರುವು ಯೋಜನೆಗೆ ದಕ್ಷಿಣ ಕನ್ನಡದಲ್ಲಿ ಚಾರಿತ್ರಿಕವಾಗಿ ದೊಡ್ಡ ವಿರೋಧ ಇರುವುದರಿಂದ ಇದನ್ನು ಆ ಹೆಸರಿನಿಂದ ಕರೆಯಲು ಸರ್ಕಾರ ಹಿಂಜರಿಯಿತು. ಹಾಗಾಗಿ ನೇತ್ರಾವತಿಯ ಉಪನದಿಯ ಒಂದರ ತಿರುವು ಯೋಜನೆ ಎಂದು ಹೆಸರಿಸಿ, ದಕ್ಷಿಣ ಕನ್ನಡದ ಭೌಗೋಳಿಕ, ಆಡಳಿತ ವ್ಯಾಪ್ತಿಗೆ ಯೋಜನೆಯನ್ನೇ ವಿಸ್ತರಿಸದಂತೆ ನೋಡಿಕೊಂಡಿತು. ನೇತ್ರಾವತಿ ನದಿಕಣಿವೆಯ ಪರಿಸರ ಪರಿಣಾಮದ ವರದಿಯ ಅಗತ್ಯವೂ ಇಲ್ಲ, ದಕ್ಷಿಣ ಕನ್ನಡದ ಜನರ ಅಭಿಪ್ರಾಯ ಸಂಗ್ರಹವೂ ಬೇಕಿಲ್ಲ ಎಂಬ ನುಣುಚಿಕೊಳ್ಳುವ ತಂತ್ರವನ್ನು ಅನುಸರಿಸಿತು. ಮುಂದಿನ ದಿನಗಳಲ್ಲಿ ಯೋಜನೆಯನ್ನು ವಿಸ್ತರಿಸಿ ನೇತ್ರಾವತಿ ನೀರಿಗೂ ಕೈಹಾಕಿದರೆ ಆಶ್ಚರ್ಯವೇನಿಲ್ಲ.

ಈ ವಿಚಾರ ಒಂದು ಕಡೆಗಿರಲಿ. ಒಂದು ಕುಡಿಯುವ ನೀರಿನ ಯೋಜನೆ ಇಪ್ಪತ್ತು ಹೆಕ್ಟೇರಿಗಿಂತ ಕಡಿಮೆ ಭೂಪ್ರದೇಶದ ಕಾಡನ್ನು ಸವರಿ ಅನುಷ್ಠಾನವಾಗುವುದಿದ್ದರೆ ಅಂಥಾ ಯೋಜನೆಗೆ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಮಂತ್ರಾಲಯದಿಂದ ಪರಿಸರ ಪರಿಣಾಮ ವರದಿಗೆ ಅನುಮೋದನೆ ಮತ್ತು ಯೋಜನಾ ಪೂರ್ವಾನುಮತಿ ಬೇಕಿಲ್ಲ. ಈ ಕಾರಣಕ್ಕಾಗಿಯೇ ಸರ್ಕಾರ ಈ ಯೋಜನೆಗೆ ಕೇವಲ ಹದಿನೆಂಟು ಹೆಕ್ಟೇರ್ ಕಾಡನ್ನು ಮಾತ್ರ ಸವರಲಾಗುತ್ತದೆ ಎಂದು ವಿಸ್ತೃತ ಯೋಜನಾ ವರದಿಯಲ್ಲಿ ಹೇಳಿದೆ. ಆದರೆ ಯೋಜನೆಯ ವಿವಿಧ ಕಾಮಗಾರಿಗಳಿಗೆ ಸುಮಾರು ಇಪ್ಪತ್ತೆಂಟು ಹೆಕ್ಟೇರ್ ಕಾಡನ್ನು ಕಡಿಯಬೇಕಾಗುತ್ತದೆ ಎನ್ನುವುದು ಒಂದು ನೈಜ ಅಂದಾಜು. ಈ ಭಾಗದ ಕಾಡೆಂದರೆ ಅದು ಸಾಮಾನ್ಯ ಕಾಡಲ್ಲ. ಇಡೀ ಪಶ್ಚಿಮಘಟ್ಟದುದ್ದಕ್ಕೂ ಅಳಿದುಳಿದಿರುವ ಕೆಲವೇ ಸಣ್ಣಸಣ್ಣ ಸಮೃದ್ಧ ಭಾಗಗಳಲ್ಲಿ ಈ ಭಾಗವೂ ಒಂದು. ಈ ನಿತ್ಯಹರಿದ್ವರ್ಣ ಕಾಡುಗಳು ಸಮೃದ್ಧ ಜೀವಜಾಲವನ್ನು ಪೋಷಿಸುವಂತಹವು. ಭಾರತದಲ್ಲಷ್ಟೇ ಕಾಣಸಿಗುವ ಕೆಲವು ಸಸ್ಯ ಮತ್ತು ಪ್ರಾಣಿ ಪ್ರಬೇಧಗಳು ಇಲ್ಲಿವೆ.

ಈ ಯೋಜನೆಯ ಪ್ರಕಾರ ಮಳೆಗಾಲದ ನೂರು ದಿನಗಳಲ್ಲಿ ಮಾತ್ರ ಪಶ್ಚಿಮಕ್ಕೆ ಹರಿಯುವ ಸುಮಾರು 24.01 ಟಿಎಂಸಿ ನೀರನ್ನು ಎತ್ತಿ ಪೂರ್ವಕ್ಕೆ ಹರಿಸಲಾಗುತ್ತದೆ. ಈ ನೀರನ್ನು ಸಕಲೇಶಪುರ, ಕಡೂರು, ಅರಸೀಕೆರೆ ತಾಲ್ಲೂಕುಗಳ ಮಾರ್ಗವಾಗಿ ತುಮಕೂರು ಜಿಲ್ಲೆಗೆ ತಂದು, ಅಲ್ಲಿಂದ ಚಿಕ್ಕಬಳ್ಳಾಪುರ ತಾಲ್ಲೂಕಿನ ಭೈರಗೊಂಡ್ಲುವಿನಲ್ಲಿ ಶೇಖರಿಸಲಾಗುತ್ತದೆ. ಅಲ್ಲಿಂದ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಗಳಿಗೆ ಹರಿಸಲಾಗುತ್ತದೆ.

 

ಯೋಜನೆ ಕೈಬಿಡಲು ಆಗ್ರಹಿಸಬೇಕು

ಎತ್ತಿನಹೊಳೆ ಯೋಜನೆ ಕುರಿತು ನಾನು ಸಾಮಾಜಿಕ ಮಾಧ್ಯಮದಲ್ಲಿ ಬರೆದ ಟಿಪ್ಪಣಿಗೆ ಗೆಳೆಯರೊಬ್ಬರಿಂದ ಬಂದ ಪ್ರತಿಕ್ರಿಯೆ ಹೀಗಿದೆ: ‘ಬರಪೀಡಿತ ಜಿಲ್ಲೆಯ ಜನರನ್ನು ವ್ಯಂಗ್ಯ ಮಾಡುವ ಅವಶ್ಯಕತೆ ಇರಲಿಲ್ಲವೇನೋ. ಅಲ್ಲಿನ ನೀರಿನ ಸಮಸ್ಯೆ ಅಪಾಯಮಟ್ಟದಲ್ಲಿದೆ. ಹಾಗಾಗಿ ಈ ಯೋಜನೆಯ ಬಗ್ಗೆ ಅವರು ಆಸೆ ಪಡುವುದರಲ್ಲಿ ಯಾವ ತಪ್ಪೂ ಇಲ್ಲ. ಈ ಯೋಜನೆಯ ಹೆಸರಿನಲ್ಲಿ ಕನಸು ಬಿತ್ತಿದ ರಾಜಕಾರಣಿಗಳನ್ನು ಗುರಿಯಾಗಿಸಬೇಕೇ ಹೊರತು ಈಗಾಗಲೇ ನೊಂದು ಬೇಯುತ್ತಿರುವ ಜನರನ್ನಲ್ಲ.’

ಬರಪೀಡಿತ ಜಿಲ್ಲೆಗಳೂ ಸೇರಿದಂತೆ ಕರ್ನಾಟಕದ ಜಲಮೂಲಗಳು ಮತ್ತು ಜಲಸೌಲಭ್ಯಗಳ ಬಗ್ಗೆ ನನಗೆ ಸ್ವಲ್ಪಅರಿವಿದೆ. ಬರಪೀಡಿತ ಜಿಲ್ಲೆಗಳಲ್ಲಿ ಈ ಪರಿಸ್ಥಿತಿ ಉಂಟಾಗುವುದಕ್ಕೆ ಅಲ್ಲಿಎರಡು ಮೂರು ದಶಕಗಳಿಂದ ಭೂಮಿ ಮತ್ತು ಜಲಮೂಲಗಳ ಮೇಲೆ ನಡೆದ ತಪ್ಪುನಡೆಗಳ ಬಗ್ಗೆಯೂ ತುಸು ಗೊತ್ತಿದೆ. ಹಾಗಾಗಿ ಆ ಜಿಲ್ಲೆಗಳ ಜನರನ್ನು, ರೈತರನ್ನು ವ್ಯಂಗ್ಯದಿಂದ ಕಾಣುವ ಪ್ರಶ್ನೆಯೇ ಇಲ್ಲ.

ಈ ಯೋಜನೆಗೆ ಮುಂದಡಿ ಇಡುವುದಕ್ಕೆ ಮುಂಚೆ ಬರಪೀಡಿತ ಜಿಲ್ಲೆಯವರಿಗೆ ಮುಂದಾಗುವ ಪರಿಣಾಮಗಳ ಬಗ್ಗೆಯಾಗಲೀ, ತಮ್ಮ ಜಿಲ್ಲೆಗಳಿಗೆ ಇದು ನಿಜಕ್ಕೂ ಪರಿಹಾರವಲ್ಲ ಎನ್ನುವುದಾಗಲೀ ಅರಿವಿರಲಿಲ್ಲ ಎನ್ನುವುದನ್ನು ನಾನು ಪೂರ್ತಿಯಾಗಿ ಒಪ್ಪಲಾರೆ. ಮಾನವ ಸಹಜ ಆಸೆಯೊಂದಿಗೆ ಅವರು ಯೋಜನೆಗೆ ಆಗ್ರಹಿಸಿ ಹೋರಾಟವನ್ನೂ ಮಾಡಿದ್ದಾರೆ, ವಿರೋಧಿಸುವ ಸಮಯಗಳಲ್ಲಿ ಮೌನವನ್ನೂ ವಹಿಸಿದ್ದಾರೆ. ಈಗ ಈ ಯೋಜನೆಯಿಂದ ಯಾರಿಗೂ ಪ್ರಯೋಜನವಿಲ್ಲ ಎನ್ನುವುದು ಬಹುತೇಕ ಎಲ್ಲರಿಗೂ  ಮನವರಿಕೆಯಾಗಿದೆ.

ಈಗಲಾದರೂ ‘ಈ ಯೋಜನೆಯನ್ನುಕೈಬಿಡಿ, ನಮಗೆ ನಮ್ಮ ಸಂಪನ್ಮೂಲಗಳಿಂದಲೇ  ದೀರ್ಘಕಾಲೀನ ಜಲಸುಸ್ಥಿರತೆಯ ಕಾರ್ಯಕ್ರಮಗಳನ್ನು ಆರಂಭಿಸಿ’ ಎಂದು ಸರ್ಕಾರವನ್ನು ಆಗ್ರಹಿಸಿ ಹೋರಾಟ ಆರಂಭಿಸಲಿ. ಅವರೊಂದಿಗೆ ನಾನೂ ಒಬ್ಬ ಕಾಲಾಳಾಗಿ ಬರುತ್ತೇನೆ. ಪಶ್ಚಿಮಘಟ್ಟ ತೀರಾ ಸಂಕಷ್ಟದ ಸ್ಥಿತಿಯಲ್ಲಿದೆ. ಅದನ್ನು ಉಳಿಸಿದರೆ ಇಡೀ ನಾಡಿಗೇ ಹಿತ. ಆ ಹೋರಾಟಕ್ಕೆ ಬರಪೀಡಿತ ಜಿಲ್ಲೆಗಳೂ ಸೇರಿದಂತೆ ಕರ್ನಾಟಕದ ಎಲ್ಲ ಭಾಗದ ಜನರು ಮುಂದಾಗಲಿ.

ಸಕಲೇಶಪುರ ತಾಲ್ಲೂಕಿನಿಂದ ಹರಿವಿನ ಕೊನೆಯವರೆಗೂ ಬರುವ ಹಲಕೆಲವು ಪ್ರದೇಶಗಳಿಗೆ ನೀರು ಕೊಟ್ಟು, ಸುಮಾರು 495 ಕೆರೆಕಟ್ಟೆಗಳಿಗೆ ನೀರು ತುಂಬುವ ಪ್ರಸ್ತಾವ ಕೂಡಾ ಇದೆ. ಸುಮಾರು 2.7 ಟಿಎಂಸಿ ನೀರು ಚಿಕ್ಕಮಗಳೂರು, ಹಾಸನ ಮತ್ತು ತುಮಕೂರು ಜಿಲ್ಲೆಗಳಿಗೆ, ಕೆರೆಕಟ್ಟೆಗಳನ್ನು ತುಂಬಿಸಲು 8.95 ಟಿಎಂಸಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ 7.25 ಟಿಎಂಸಿ ಹಾಗೂ ಕೊನೆಗೆ ಬರಪೀಡಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸುಮಾರು 5.06 ಟಿಎಂಸಿ ನೀರು -ಹೀಗೆ ಹಂಚಿಕೆಯ ಪ್ರಮಾಣವನ್ನು ನಿಗದಿಸಲಾಗಿದೆ. ಬರಪೀಡಿತ ಜಿಲ್ಲೆಗಳಿಗಾಗಿಯೇ ಇದು ಎಂದು ಹೇಳಿಕೊಳ್ಳುವ ಈ ಯೋಜನೆ ಕೊನೆಗೂ ಆ ಜಿಲ್ಲೆಗಳಿಗೆ ಹಂಚಿರುವುದು ಕೇವಲ 5.06 ಟಿಎಂಸಿ. ಇದರಲ್ಲಿ ನೀರು ಇಂಗುವಿಕೆ, ಆವಿಯಾಗುವಿಕೆ, ಮಾನವ ಪ್ರೇರಿತ ಕಳವು, ಸೋರಿಕೆಗೆ ಎಷ್ಟು ನೀರು ವ್ಯರ್ಥವಾಗುತ್ತದೆ ಎನ್ನುವುದನ್ನು ಗಣನೆಗೆ ತೆಗೆದುಕೊಂಡಿಲ್ಲ. ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡು, ಪ್ರತಿವರ್ಷ 24 ಟಿಎಂಸಿ ನೀರನ್ನು ಎತ್ತಿದರೂ, ಹರಿವಿನ ಕಟ್ಟಕಡೆಯ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಇಷ್ಟಾದರೂ ನೀರು ನಿಜಕ್ಕೂ ಹರಿಯುವುದೇ ಎನ್ನುವುದನ್ನು ಕಾಲವೇ ನಿರ್ಧರಿಸಬೇಕು!

ಆದರೆ ವರ್ಷಂಪ್ರತಿ ನದಿಯ ನೈಸರ್ಗಿಕ ಪಾತ್ರದಲ್ಲಿ ಹರಿಯಬೇಕಿರುವ ಕನಿಷ್ಠ ಪ್ರಮಾಣದ ನೀರನ್ನು ಬಿಟ್ಟು, ಇತ್ತಲ ಜಿಲ್ಲೆಗಳಿಗೆ ಬೇಕಾಗುವ ಇಷ್ಟು ನೀರನ್ನು ಎತ್ತುವುದಕ್ಕೆ ಬೇಕಾಗುವಷ್ಟು ಮಳೆ ಈ ಪ್ರದೇಶದಲ್ಲಿ ಆಗುತ್ತಿದೆಯೇ ಎನ್ನುವುದೇ ಅನುಮಾನ. ಯೋಜನೆಯು ಸಕಲೇಶಪುರ ತಾಲ್ಲೂಕಿನ ಕಾಡುಮನೆ ಎನ್ನುವ ಖಾಸಗೀ ಕಾಫೀ ಎಸ್ಟೇಟಿನಲ್ಲಿರುವ ಮಳೆ ಮಾಪಕ ಯಂತ್ರವನ್ನು ಬಹುವಾಗಿ ಅವಲಂಬಿಸಿ ಇಷ್ಟು ನೀರು ಲಭ್ಯವಿದೆ ಎನ್ನುತ್ತದೆ. ಆದರೆ ಅದೇ ಪ್ರದೇಶದಲ್ಲಿರುವ ಕೇಂದ್ರ ಹವಾಮಾನ ಇಲಾಖೆಯ ಮಳೆ ಮಾಪಕ ಯಂತ್ರಗಳು ಬೇರೆಯೇ ವಾಸ್ತವವನ್ನು ಹೇಳುತ್ತವೆ. ಅಷ್ಟಲ್ಲದೇ, ಸಾಮಾನ್ಯವಾಗಿ ಕುಡಿಯುವ ಮತ್ತು ನೀರಾವರಿ ಯೋಜನೆಗಳಿಗೆ 75% ಅವಲಂಬನೆಯನ್ನು ಪರಿಗಣಿಸಲಾಗುತ್ತದೆ. ಆದರೆ ಈ ಯೋಜನೆ 50% ಅವಲಂಬನೆಯನ್ನು ಪರಿಗಣಿಸಿದೆ.

ನದಿಯ ಹರಿವಿನ ಕೆಳಗಿನ ಪ್ರದೇಶಗಳ ಜನಜೀವನವನ್ನೂ ಏರುಪೇರು ಮಾಡಿರುತ್ತದೆ, ಅಲ್ಲದೇ ಸಮುದ್ರಕ್ಕೆ ಸೇರಲೇಬೇಕಾದ ಸಿಹಿನೀರಿನ ಪ್ರಮಾಣಕ್ಕೂ ಕುತ್ತು ಉಂಟಾಗಿ ಭೂಮಿ-ಕಡಲಿನ ಸಮತೋಲನವೂ ತಪ್ಪಿರುತ್ತದೆ.

ಒಂದು ವೇಳೆ ಎಲ್ಲ ಲೆಕ್ಕಾಚಾರಗಳೂ ಉಲ್ಟಾ ಹೊಡೆದು ಇಷ್ಟು ಹಣ, ಮಾನವ ಸಂಪನ್ಮೂಲ ವ್ಯಯಿಸಿ ಅನುಷ್ಠಾನಗೊಳಿಸಿದ ಯೋಜನೆಯೇ ಅನೂರ್ಜಿತವಾದಲ್ಲಿ ಆ ಹೊತ್ತಿಗೆ ಎಂದೂ ಹಿಂಪಡೆಯಲಾಗದ ಸೂಕ್ಷ್ಮ ಕಾಡು ಮತ್ತು ಪರಿಸರವೂ ನಾಶವಾಗಿರುತ್ತದೆ, ಅಲ್ಲಿನ ವಿಶಿಷ್ಟ ಜೀವಸಂಕುಲಕ್ಕೂ ತೀವ್ರ ಧಕ್ಕೆಯಾಗಿರುತ್ತದೆ, ಅಲ್ಲಿನ ಹೊಳೆ, ತೋರೆಗಳ ಉಗಮ ಸ್ಥಾನಗಳಿಗೂ ದೊಡ್ಡ ಹಾನಿಯಾಗಿರುತ್ತದೆ. ಜೊತೆಗೆ, ನದಿಯ ಹರಿವಿನ ಕೆಳಗಿನ ಪ್ರದೇಶಗಳ ಜನಜೀವನವನ್ನೂ ಏರುಪೇರು ಮಾಡಿರುತ್ತದೆ, ಅಲ್ಲದೇ ಸಮುದ್ರಕ್ಕೆ ಸೇರಲೇಬೇಕಾದ ಸಿಹಿನೀರಿನ ಪ್ರಮಾಣಕ್ಕೂ ಕುತ್ತು ಉಂಟಾಗಿ ಭೂಮಿ-ಕಡಲಿನ ಸಮತೋಲನವೂ ತಪ್ಪಿರುತ್ತದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಎನ್ನುವಂತಹ ಇಂಥಾ ಯೋಜನೆಗೆ ರಾಷ್ಟ್ರೀಯ ಹಸಿರು ನ್ಯಾಯಪೀಠ ಹಸಿರು ನಿಶಾನೆ ತೋರಿಸಿರುವುದು ಆಶ್ಚರ್ಯಕರ ಬೆಳವಣಿಗೆ.

ನೀರಿನ ಮೂಲ ಹಾಗೂ ಪ್ರಮಾಣವೂ ಸೇರಿದಂತೆ ಭೂಮಿ ಆಯಾ ಪ್ರದೇಶಗಳಿಗೆ ತಕ್ಕಂತಹ ಸುಸ್ಥಿರ ಸಂಪನ್ಮೂಲವನ್ನು ಕೊಡಮಾಡಿಯೇ ಇರುತ್ತದೆ. ಅದನ್ನು ಹಾಳುಮಾಡದೇ ಸುಸ್ಥಿರವಾಗಿ ಬಳಸಿಕೊಳ್ಳುವುದನ್ನು ಮನುಷ್ಯ ಕಲಿಯಬೇಕು ಎನ್ನುವುದು ನಮ್ಮ ನಾಳಿನ ಬಾಳಿಗೆ ಪಾಠವಾಗಬೇಕು.

Leave a Reply

Your email address will not be published.