ಎನ್.ಆರ್.ನಾರಾಯಣಮೂರ್ತಿ ಜೀವನಚರಿತ್ರೆ

ಎನ್.ಆರ್.ನಾರಾಯಣಮೂರ್ತಿ  ಜೀವನಚರಿತ್ರೆ

– ಮೋಹನದಾಸ್

ಸಾಧಕರ ಜೀವನವು ಸಂಕೀರ್ಣವಾದಷ್ಟು ಸಾಧಕರ ಜೀವನಚರಿತ್ರೆಗಳು ವಿಶಿಷ್ಟ ಆಯಾಮಗಳನ್ನು ಹಾಗು ವಿಭಿನ್ನ ಅರ್ಥೈಸುವಿಕೆಯನ್ನು ಒಳಗೊಂಡು ವಿಶೇಷವಾಗಿರಬಹುದು. ಆದರೆ ಸಾಧಕನ ಜೀವನ ಅತ್ಯಂತ ಸರಳವೂ, ನೇರವೂ ಹಾಗೂ ಸ್ಪಷ್ಟವೂ ಆದರೆ ಅದು ಹಲವಾರು ಜೀವನಚರಿತ್ರೆಗಳಿಗೆ ಸಾಮಗ್ರಿ ಒದಗಿಸಲಾಗದು. ಇದೇ ಪರಿಸ್ಥಿತಿ ನಾರಾಯಣಮೂರ್ತಿಯವರ ಜೀವನ ಚರಿತ್ರೆ ಬರೆಯುವವರಿಗೂ ಕಾಡಿರಬಹುದು. ಹಾಗಾಗಿಯೇ ಅವರ ಜೀವನ ಚರಿತ್ರೆ ಬರೆಯಲು ಬಹಳಷ್ಟು ಲೇಖಕರು ಮುಂದೆ ಬಂದಿಲ್ಲವೆಂದು ಅನ್ನಿಸುತ್ತಿದೆ.

ಇವೆಲ್ಲದರ ಮಧ್ಯೆ ರಿತು ಸಿಂಘ್‍ರವರು ಬರೆದ ನಾರಾಯಣಮೂರ್ತಿಯವರ ಜೀವನಚರಿತ್ರೆ ಎಲ್ಲ ಓದುಗರ ಮನಸೆಳೆಯುತ್ತದೆ. ಪುಸ್ತಕದ ಭಾಷೆ ಸರಳ ಹಾಗೂ ನೇರವಾಗಿದೆ. ಯಾವುದೇ ವಯಸ್ಸಿನ ಓದುಗರಿಗೆ ಅತ್ಯಂತ ಸುಲಭವಾಗಿ ದಕ್ಕುವಂತಿದೆ. ನಾರಾಯಣಮೂರ್ತಿಯವರ ಬದುಕಿನಂತೆಯೇ ನೇರ, ದಿಟ್ಟ ಹಾಗೂ ಸರಳವಾಗಿದೆ. ಮೊದಲ ಓದಿಗೆ ಪ್ರಶಸ್ತವಾಗಿದೆ.

ಪುಸ್ತಕದ ಎರಡನೇ ಅಧ್ಯಾಯದ ಅನುವಾದ

ಆ ದಿನಗಳಲ್ಲಿ ಮೈಸೂರು ಸಣ್ಣ ಊರಾಗಿತ್ತು. ಪ್ರವಾಸಿಗರ ಕಣ್ಮನ ಸೆಳೆಯುತ್ತಿದ್ದರೂ ವಿಶ್ವದ ಆಕರ್ಷಣೆ ಸೆಳೆಯಲು ಹೆಣಗಾಡಬೇಕಾಗಿತ್ತು. 50ರ ಮತ್ತು 60ರ ದಶಕಗಳಲ್ಲಿ ಮೈಸೂರಿನಲ್ಲಿ ಬೆಳೆಯುತ್ತಿದ್ದ ಹುಡುಗನೊಬ್ಬ ಮುಂದಿನ ದಿನಗಳಲ್ಲಿನ ಸಾಧನೆಯ ಹಾದಿಯಲ್ಲಿ ತಣ್ಣಗೆ ತನ್ನನ್ನು ತಾನು ರೂಪಿಸಿಕೊಳ್ಳುತ್ತಿದ್ದ.

ಅದು 1962ರ ಜೂನ್ ತಿಂಗಳ ಸಮಯ. ಗಂಭೀರ ಮುಖ ಹೊತ್ತು ಹದಿನಾರು ವರ್ಷದ ಹುಡುಗನೊಬ್ಬ ಮೈಸೂರು ರೈಲ್ವೆ ನಿಲ್ದಾಣದ ಪ್ಲಾಟ್‍ಫಾರಂನಲ್ಲಿ ನಿಂತು ಮದ್ರಾಸಿಗೆ ಹೊರಟ ರೈಲನ್ನು ನೋಡುತ್ತಿದ್ದ. ಕಿಟಕಿಯಿಂದ ಕೈ ಬೀಸುತ್ತಿದ್ದ ತನ್ನ ಸ್ನೇಹಿತರಿಗೆ ಬೀಳ್ಕೊಡುತ್ತಾ ರೈಲು ಹೊಗೆ ಕೊಡವಿಕೊಂಡು ನಿಲ್ದಾಣ ಬಿಡುವುದನ್ನೇ ಕಾಯುತ್ತಿದ್ದ.

ಬಾಲ್ಯದಿಂದಲೂ ಅವನ ಜೊತೆಯಲ್ಲಿಯೇ ಬೆಳೆದ ಸ್ನೇಹಿತರು ಒಡಲಲ್ಲಿ ಹಲವು ಆಸೆ ಆಶಯಗಳನ್ನು ಹೊತ್ತು ತಮ್ಮ ಹೊಸ ಬದುಕನ್ನು ಕಟ್ಟಿಕೊಳ್ಳಲು ಹೊರಟಿದ್ದರು. ತಮ್ಮ ಬಾಲ್ಯವನ್ನು ಹಿಂದೆಬಿಟ್ಟು ವಿಶ್ವವಿದ್ಯಾಲಯದ ಶಿಕ್ಷಣ ಪಡೆದು ಹೊರಗಿನ ಪ್ರಪಂಚ ಎದುರಿಸಲು ಸಜ್ಜಾಗಲು ಹೊರಟಿದ್ದರು.

ಸ್ನೇಹಿತರನ್ನು ಕಳುಹಿಸಿಕೊಟ್ಟು ಆ ಬಾಲಕ ನಿಲ್ದಾಣದ ಕಬ್ಬಿಣದ ಬೆಂಚೊಂದರ ಮೇಲೆ ಕುಳಿತು ನಿಟ್ಟುಸಿರುಬಿಟ್ಟ. ಕಳೆದ ಹಲವಾರು ವರ್ಷದ ಬಾಲ್ಯದ ದಿನಗಳು ಅವನ ಕಣ್ಮುಂದೆ ಬಂದಂತಾಯಿತು. ಅವನು ಮತ್ತು ಅವನ ಸ್ನೇಹಿತರು ಚಾಮುಂಡಿ ಬೆಟ್ಟದ ತಪ್ಪಲಿನ ಕಲ್ಲಿನ ಮಂಟಪವೊಂದರಲ್ಲಿ ಕುಳಿತು ಪರೀಕ್ಷೆಗೆ ಓದುತ್ತಿದ್ದರು. ಜೊತೆಯಲ್ಲಿ ತಮಗೆ ತಿಳಿದಷ್ಟು ಮಟ್ಟಿಗೆ ಪ್ರಪಂಚದ ಎಲ್ಲ ವಿಷಯಗಳ ಬಗ್ಗೆ ಸೂರ್ಯ ಮುಳುಗುವವರೆಗೆ ಚರ್ಚೆ ಮಾಡುತ್ತಿದ್ದರು. ಅವರ ಮುಂದೆ ಐಐಟಿ ಪ್ರವೇಶ ಪರೀಕ್ಷೆ ಪಾಸು ಮಾಡುವ ಕಠಿಣ ಸವಾಲು ಕೂಡಾ ಇತ್ತು. ಐಐಟಿ ಅಥವಾ ಬೇರಾವುದೇ ಪ್ರತಿಷ್ಠಿತ ಕಾಲೇಜಿನ ಪ್ರವೇಶ ಗಿಟ್ಟಿಸಿದರೆ ಅವರ ಭವಿಷ್ಯ ಭದ್ರವಾಗುವ ಸಾಧ್ಯತೆಯಿತ್ತು.

ಅಂದು ಐಐಟಿ ಪ್ರವೇಶ ಪರೀಕ್ಷೆ ಇಂದಿನ ದಿನಗಳಿಗಿಂತ ಸಂಪೂರ್ಣ ಭಿನ್ನವಾಗಿತ್ತು. ಆಧುನಿಕ ಸೌಲಭ್ಯವುಳ್ಳ ಕೋಚಿಂಗ್ ಸೆಂಟರ್‍ಗಳು ಇರಲಿಲ್ಲ. ತಾಲೀಮು ನೀಡುವ ನುರಿತ ಅಧ್ಯಾಪಕರಾಗಲಿ ಅಥವಾ ಗೈಡ್ ಪುಸ್ತಕಗಳಾಗಲಿ ಇರಲಿಲ್ಲ. ಆ ಹುಡುಗರಿಗೆ ಇದ್ದದ್ದು ಕೇವಲ ಪರಸ್ಪರ ಸಮಾಲೋಚನೆ ಹಾಗೂ ಸಹಾಯದ ಅವಕಾಶ ಮಾತ್ರ. ಸಹಾಯ ಮಾಡುವುದರಲ್ಲಿ ನಾರಾಯಣಮೂರ್ತಿ ಸಿದ್ಧಹಸ್ತನಾಗಿದ್ದ. ಅವನÀ ಸ್ನೇಹಿತರು ಕಠಿಣ ಸವಾಲುಗಳನ್ನು ಪರಿಹರಿಸಲು ಕಷ್ಟಪಡುತ್ತಿದ್ದರೆ ಇವನು ಕಣ್ಣು ಮಿಟುಕಿಸುವ ಸಮಯದಲ್ಲಿ ಗಣಿತ ಮತ್ತು ಭೌತಶಾಸ್ತ್ರದ ಸಮಸ್ಯೆಗಳನ್ನು ಬಿಡಿಸಿ ಹೇಳುತ್ತಿದ್ದ. ಬೇರೆ ಸಮಯದಲ್ಲಿ ಸಂಕೋಚ ಸ್ವಭಾವದವನಾದರೂ ವಿಜ್ಞಾನದ ವಿಷಯಗಳಲ್ಲಿ ಅವನÀ ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು.

“ನೀನೂ ಬರಬೇಕಿತ್ತು” ಎಂದು ಹೇಳಿದ ಸ್ನೇಹಿನೊಬ್ಬನ ಮಾತು ಅವನನ್ನು ಕಾಡಿತ್ತು. ಅದೇ ರೈಲಿನಲ್ಲಿ ಅವನೂ ಐಐಟಿ-ಕಾನ್‍ಪುರಕ್ಕೆ ಹೊರಡಬೇಕಿತ್ತು. ಅವನ ಸ್ನೇಹಿತರಂತೆ ಅವನೂ ಬೆಂಗಳೂರಿನಲ್ಲಿ ನಡೆದ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ 17ನೇ ರ್ಯಾಂಕ್ ಪಡೆದುಕೊಂಡಿದ್ದ. ತನ್ನ ತರಗತಿಯಲ್ಲಿ ಅತ್ಯಂತ ಪ್ರತಿಭಾಶಾಲಿಯೆಂದು ಹೆಸರು ಗಳಿಸಿದ್ದ ಅವನು ಪ್ರವೇಶ ಗಿಟ್ಟಿಸಲು ತನ್ನೆಲ್ಲಾ ಪರಿಶ್ರಮ ಪಟ್ಟಿದ್ದ. ಅವನ ಪರಿವಾರದವರು ಪರೀಕ್ಷೆ ಹೇಗಾಯಿತೆಂದು ಕೇಳಿದಾಗ “ಓಕೆ” ಎಂದು ಹೇಳಿದ್ದರೂ ಅತ್ಯುತ್ತಮ ಅಂಕ ಗಳಿಸಿ ಪ್ರವೇಶ ಗಿಟ್ಟಿಸಿದ್ದ.

ಫಲಿತಾಂಶ ಹೊರಬಿದ್ದಾಗ ಹೆಮ್ಮೆಯಿಂದ ಮನೆಗೆ ಬಂದು ಅವನು ತಂದೆಗೆ ಹೇಳಿಕೊಂಡಿದ್ದ, “ಅಣ್ಣಾ ನಾನು ಪರೀಕ್ಷೆಯಲ್ಲಿ ಪಾಸಾದೆ. ಐಐಟಿಗೆ ಸೇರಿಕೊಳ್ಳುತ್ತೇನೆ”. ಓದುತ್ತಿದ್ದ ಪತ್ರಿಕೆಯನ್ನು ಕೆಳಗಿಟ್ಟ ಅವನ ತಂದೆಯ ಮುಖದಲ್ಲಿ ಸಂತಸ ಹಾಗೂ ದುಃಖವೆರಡೂ ಮೂಡಿಬಂತು. “ನಿನ್ನ ಬಗ್ಗೆ ನನಗೆ ಹೆಮ್ಮೆಯಾಗಿದೆ. ಆದರೆ ನನ್ನನ್ನು ಕ್ಷಮಿಸು. ನಿನ್ನ ಐಐಟಿ ಕಾಲೇಜು ಶುಲ್ಕವನ್ನು ನಾನು ಭರಿಸಲಾರೆ. ನಿನ್ನ ವಿದ್ಯಾರ್ಥಿ ವೇತನ ವರ್ಷ ಮುಗಿದ ಮೇಲಷ್ಟೇ ಬರುತ್ತದೆ.”

ಮನಸ್ಸು ಚೂರಾದರೂ ಅವನು ಶಾಂತಚಿತ್ತನಾಗಿಯೇ ಒಪ್ಪಿಕೊಂಡ. ಅವನ ತಂದೆ ತಿಂಗಳಿಗೆ 250 ರೂಪಾಯಿ ಸಂಬಳ ಪಡೆಯುವ ಶಾಲಾ ಶಿಕ್ಷಕನಾಗಿದ್ದ. ಅಜ್ಜಿ, ತಾಯಿ, ಏಳು ಮಂದಿ ಸಹೋದರ-ಸಹೋದರಿಯರ ಕುಟುಂಬದಲ್ಲಿ ಒಟ್ಟು ಹನ್ನೊಂದು ಜನರಿದ್ದರು. ಅವನು ಉನ್ನತ ಶಿಕ್ಷಣ ಪಡೆಯಬೇಕೆಂದರೆ ಅವನ ಸಹೋದರ-ಸಹೋದರಿಯರು ಶಿಕ್ಷಣದಿಂದಲೇ ವಂಚಿತರಾಗಬೇಕಿತ್ತು. ಅವನು ಈ ಹಂತಕ್ಕೆ ತಲುಪಲು ಅವನ ಪರಿವಾರದವರ ಬೆಂಬಲವೇ ಮುಖ್ಯವಾಗಿತ್ತಲ್ಲವೇ..? ಜೀವನದ ಏಳುಬೀಳುಗಳಲ್ಲಿ ಅವನ ಪರಿವಾರ ಅವನಿಗೆ ಅಚಲ ಬೆಂಬಲ ನೀಡಿರಲಿಲ್ಲವೇ..?

“ಜ್ಞಾಪಕ ಇಟ್ಟುಕೋ” ಅವನ ತಂದೆ ಹೇಳಿದ್ದರು, “ನಿನ್ನ ಜೀವನದ ಗತಿ ಬದಲಾಯಿಸುವುದು ಕೇವಲ ನಿನ್ನೊಬ್ಬನ ಕೈಯಲ್ಲಿದೆ. ಯಾವುದೇ ಕಾಲೇಜು ಅಥವಾ ಸಂಸ್ಥೆಯ ಕೈಯಲ್ಲಿಲ್ಲ. ನೀನು ಬುದ್ಧಿವಂತನೇ ಆಗಿದ್ದರೆ ಯಾವುದೇ ಕಾಲೇಜಿನಲ್ಲಿ ಓದಿ ನೀನು ಮುಂದೆ ಬರಬಲ್ಲೆ.”

ಎಷ್ಟು ಸತ್ಯ. ಮನಸ್ಸಿನಾಳದ ಶಂಕೆಗಳನ್ನು ಕೊಡವಿಕೊಂಡು ರೈಲ್ವೆ ನಿಲ್ದಾಣದ ಬೆಂಚಿನಿಂದ ನಾರಾಯಣಮೂರ್ತಿ ಹೊಸ ಹುರುಪಿನಿಂದ ಮೇಲೆದ್ದ. ಮುಂದಿನ ರೈಲು ಪ್ಲಾಟ್‍ಫಾರಂಗೆ ಬರುವುದಿತ್ತು. ಜನರು ಅವನನ್ನು ತಳ್ಳಿಕೊಂಡು ಮುನ್ನುಗ್ಗುತ್ತಿದ್ದರು. ಆ ಸಂದಣಿಯಲ್ಲಿ ಬಡಕಲು ದೇಹದ ಅವನನ್ನು ಯಾರೂ ಗುರುತಿಸುವ ಸಾಧ್ಯತೆಯಿರಲಿಲ್ಲ. ಆದರೆ ಮುಂದೊಂದು ದಿನ ಅವನು ‘ದೊಡ್ಡ’ ಮನುಷ್ಯನಾಗುವವನಿದ್ದ.

ಹೊಸದಾಗಿ ಶಕ್ತಿ ಮೂಡಿದಂತೆ ಕಂಡು ಅವನು ನಿಲ್ದಾಣದ ಹೊರಗೆ ಹೊರಟ.

‘ದಿ ವಿಟ್ ಅಂಡ್ ವಿಸ್ಡಮ್ ಆಫ್ ನಾರಾಯಣಮೂರ್ತಿ

ದಿನಕ್ಕೊಂದು ಗಾದೆ, ದಿನಕ್ಕೊಂದು ನಾಣ್ಣುಡಿ ಹೇಳುವ ಪುಸ್ತಕಗಳಂತೆ ನಾರಾಯಣಮೂರ್ತಿಯವರ ಚಿಂತನೆಗಳನ್ನು ಸರಳವಾಗಿ ಚಿಣ್ಣರಿಗೆ ಹಾಗೂ ಮುಂದಿನ ಪೀಳಿಗೆಗೆ ಹೇಳುವ ಸಲುವಾಗಿ ಈ ಪುಸ್ತಕ ಹೊರಬಂದಿದೆ. ಒಟ್ಟು 101 ಉಕ್ತಿಗಳನ್ನು ಒಳಗೊಂಡಿರುವ ಈ ಪುಸ್ತಕ ನಾರಾಯಣಮೂರ್ತಿ ಚಿಂತನೆಗಳನ್ನು ಅತ್ಯಂತ ಪ್ರಬುದ್ಧವಾಗಿ ಹಾಗು ಜವಾಬ್ದಾರಿಯುತವಾಗಿ ಚಿತ್ರಿಸಿದೆ. ಒಂದೇ ವಾಕ್ಯದಲ್ಲಿ ಗಹನ ಚಿಂತನೆಗಳನ್ನು ಘನೀಕರಿಸಿ ಹೇಳುವ ಮೂರ್ತಿಯವರ ಸೂಕ್ಷ್ಮತೆ ಹಾಗೂ ವೈಚಾರಿಕ ನಿಖರತೆ ಈ ಪುಸ್ತಕದಲ್ಲಿ ಹೊರಬಂದಿದೆ. ನೀವು ನಿಮ್ಮ ಮಕ್ಕಳಿಗೆ ಉಡುಗೊರೆ ನೀಡಿ ನೀತಿಪಾಠ ಹೇಳಿಕೊಡಬಹುದಾದಂತಹ ಹೊತ್ತಿಗೆ ಇದಾಗಿದೆ.

ಕೆಲವು ಉದಾಹರಣೆಗಳು

ಭಗವಂತನನ್ನು ನಾವು ನಂಬುತ್ತೇವೆ. ಬೇರೆಲ್ಲಾ ವಿಷಯಗಳಲ್ಲಿ

ಅಂಕಿಅಂಶ ಮಾಹಿತಿಯ ಮೇಲೆ ನಾವು ಭರವಸೆ ಇಡುತ್ತೇವೆ.

ಸಾಧನೆಯಿಂದ ಮನ್ನಣೆ ದೊರೆತರೆ

ಮನ್ನಣೆಯಿಂದ ಗೌರವ ಸಿಗುತ್ತದೆ

ಗೌರವ ನಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಣದ ನಿಜವಾದ ಶಕ್ತಿ ಅದನ್ನು ದಾನಮಾಡಬಲ್ಲ ಗುಣದಲ್ಲಿದೆ.

ನೀವು ಹಣದ ಹಿಂದೆ ಓಡಿದರೆ ಅದು ಮತ್ತಷ್ಟು ದೂರ ಸರಿಯುತ್ತದೆ.

ನೀವು ಗೌರವ ಗಳಿಸುವೆಡೆಗೆ ಓಡಿ, ಹಣ ನಿಮ್ಮೆಡೆಗೆ ಓಡಿ ಬರುತ್ತದೆ.

ದೊಡ್ಡ ಕನಸು ಕಾಣುವ ಧೈರ್ಯವೇ ‘ನಾಯಕತ್ವ’ವೆಂಬ ಗುಣ.

ನಿಮ್ಮ ಸುತ್ತಮುತ್ತಲಿನವರ ಜೀವನ

ಸುಧಾರಿಸುವುದೇ ನಿಜವಾದ ಅಧಿಕಾರಶಕ್ತಿ.

ಎ ಬೆಟರ್ ಇಂಡಿಯಾ-ಎ ಬೆಟರ್ ವರ್ಲ್ಡ್

ಬೇರೊಬ್ಬರು ಬರೆದ ಜೀವನಚರಿತ್ರೆಗಳು ಸಾಧಕನೊಬ್ಬನ ಜೀವನದ ಮೇಲೆ ಬೆಳಕು ಚೆಲ್ಲಬಹುದು. ಆದರೆ ಬಹುತೇಕ ಸಂದರ್ಭಗಳಲ್ಲಿ ಆತ್ಮಚರಿತ್ರೆಗಳು ಸಾಧಕರ ಜೀವನವನ್ನು ಬಿಚ್ಚಿಟ್ಟಿದ್ದಕ್ಕಿಂತ ಮುಚ್ಚಿಟ್ಟಿದ್ದೇ ಹೆಚ್ಚು. ಬಹುಶಃ ಇದಕ್ಕೇ ಏನೋ, ನಾರಾಯಣಮೂರ್ತಿಯವರು ಇದುವರೆಗೆ ತಮ್ಮ ಆತ್ಮಚರಿತ್ರೆಯನ್ನು ಬರೆದಿಲ್ಲ.

ನಾರಾಯಣಮೂರ್ತಿಯವರ ಬಗ್ಗೆ ನಾವು ತಿಳಿಯದೇ ಇರುವ ವಿಷಯಗಳು ಹೆಚ್ಚೇನಿಲ್ಲ ಎಂದು ಹೇಳಬಹುದು. ಸರಳ ಹಾಗು ನೇರ ನಡೆನುಡಿಯ ನಾರಾಯಣಮೂರ್ತಿಯವರ ಬದುಕು ತೆರೆದ ಪುಸ್ತಕದಂತೆಯೇ ಇದೆ. ಆದರೆ ನಾರಾಯಣಮೂರ್ತಿಯವರು ಬಿಚ್ಚಿಡಬೇಕಾದ ಸಂಗತಿಗಳು ಹಲವಿವೆ. ಈ ವ್ಯಕ್ತಿವಿಶೇಷ ಹಾಗೂ ಸಂಗತಿಗಳನ್ನು ಅವರು ತಮ್ಮ ಭಾಷಣಗಳಲ್ಲಿ ಹೇಳುತ್ತಾ ಬಂದಿದ್ದಾರೆ. ತಮ್ಮ ಜೀವನದ ಸಂಗತಿಗಳನ್ನೇ ಉದಾಹರಣೆಗಳಾಗಿ ಇಟ್ಟುಕೊಂಡು ಹಲವು ಗಹನ ವಿಷಯಗಳ ಬಗ್ಗೆ ವ್ಯಾಖ್ಯಾನ ಮಾಡುತ್ತಾ ಬಂದಿದ್ದಾರೆ. 2009 ರವರೆಗೆ ಮೂರ್ತಿಯವರು ನೀಡಿದ ಪ್ರಮುಖ ಭಾಷಣಗಳನ್ನು ‘ಎ ಬೆಟರ್ ಇಂಡಿಯಾ-ಎ ಬೆಟರ್ ವಲ್ರ್ಡ್’ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ. ಈ ಸಂಗ್ರಹಕ್ಕೆ ಬೇಕಾದ ಚೌಕಟ್ಟನ್ನು ನಾರಾಯಣಮೂರ್ತಿಯವರೇ ಪುಸ್ತಕದ ಪ್ರವೇಶ ಲೇಖನದಲ್ಲಿ ನೀಡಿದ್ದಾರೆ.

ನಾರಾಯಣಮೂರ್ತಿಯವರ ಚಿಂತನೆಗಳನ್ನು ತಿಳಿಹೇಳುವ ಅನೇಕ ಅದ್ಭುತ ಭಾಷಣಗಳು ಈ ಸಂಗ್ರಹದಲ್ಲಿವೆ. ಒಟ್ಟು ಹತ್ತು ವಿಷಯವಸ್ತುಗಳಲ್ಲಿ 38 ಅಮೂಲ್ಯ ಭಾಷಣಗಳು ಇಲ್ಲಿ ಅಡಕವಾಗಿವೆ. ವಿದ್ಯಾರ್ಥಿಗಳನ್ನು ಹಾಗೂ ಯುವ ಪೀಳಿಗೆಯನ್ನು ಉದ್ದೇಶಿಸಿ ಮಾಡಿದ ಹಲವು ಭಾಷಣಗಳಲ್ಲಿ ಮೌಲ್ಯಗಳು, ಶಿಕ್ಷಣ, ಮುಖ್ಯ ರಾಷ್ಟ್ರ ಸಮಸ್ಯೆಗಳು ಹಾಗೂ ನಾಯಕತ್ವದ ಪ್ರಾಮುಖ್ಯವನ್ನು ಹೇಳಲಾಗಿದೆ. ಇನ್‍ಫೋಸಿಸ್ ಪ್ರಯಾಣದ ಬಗ್ಗೆ ಐದು ಭಾಷಣಗಳಲ್ಲಿ ವಿಶದವಾಗಿ ಹೇಳಲಾಗಿದ್ದರೆ 6ರಿಂದ 9ನೇ ಅಧ್ಯಾಯದ ಹನ್ನೊಂದು ಭಾಷಣಗಳಲ್ಲಿ ನಾರಾಯಣಮೂರ್ತಿಯವರ ಸ್ವಂತಿಕೆ, ಚಿಂತನೆ ಮತ್ತು ದಾರ್ಶನಿಕ ಮನೋಭಾವ ಕಂಡುಬಂದಿದೆ. ಮೂರ್ತಿಯವರ ಚಿಂತನೆಗಳನ್ನು ತಿಳಿಯಲು ಬಯಸುವವರು ಓದಲೇಬೇಕಾದ ಪುಸ್ತಕಗಳಲ್ಲಿ ಇದು ಮೊದಲನೆಯದಾಗಿದೆ. ಈ ಸಂಗ್ರಹವನ್ನು ಓದಿದ ಯಾರಿಗಾದರೂ ಸ್ವಾತಂತ್ರ್ಯಪೂರ್ವ ಭಾರತೀಯ ಚಿಂತಕರಲ್ಲಿ ಮಹಾತ್ಮಾ ಗಾಂಧಿ ಹೇಗೆ ಮೊದಲಿಗರೋ ಹಾಗೆಯೇ ಸ್ವಾತಂತ್ರ್ಯೋತ್ತರ ಭಾರತೀಯ ಚಿಂತಕರಲ್ಲಿ ನಾರಾಯಣಮೂರ್ತಿ ಪ್ರಮುಖರೆಂದು ಅನ್ನಿಸಿದರೆ ಅಚ್ಚರಿ ಪಡಬೇಕಾಗಿಲ್ಲ.

2008-09ರ ನಂತರ ಕಳೆದ ಒಂದು ದಶಕದಲ್ಲಿ ನಾರಾಯಣಮೂರ್ತಿಯವರ ಚಿಂತನೆ ಮತ್ತಷ್ಟು ಪಕ್ವವಾಗಿರುವ ಖಚಿತತೆ ನಾವು ಕಂಡಿದ್ದೇವೆ. ಈ ಮುಂದಿನ ದಶಕದ ಭಾಷಣಗಳನ್ನೂ ಮೂರ್ತಿಯವರು ಇನ್ನೊಂದು ಸಂಗ್ರಹದಲ್ಲಿ ಓದುಗರಿಗೆ ನೀಡಿದರೆ ಉಪಯುಕ್ತವಾಗುತ್ತದೆ.

Leave a Reply

Your email address will not be published.