ಎನ್.ಆರ್.ನಾರಾಯಣಮೂರ್ತಿ ಮೂರು ಭಾಷಣ ನೂರು ಹೊಳಹು

ಉದ್ಯಮಲೋಕದಲ್ಲಿ ತಮ್ಮದೇ ಆದ ಹೆಜ್ಜೆಗುರುತು ಮೂಡಿಸಿರುವ ಇನ್ಫೋಸಿಸ್ ಸಂಸ್ಥೆಯ ಸಹಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರ ಬದುಕು ಸರಳ ಮತ್ತು ನೇರ. ಬಡತನದ ಹಿನ್ನೆಲೆಯ ಮಧ್ಯಮ ವರ್ಗದ ಈ ವ್ಯಕ್ತಿ ಕೆಲವೇ ವರ್ಷಗಳಲ್ಲಿ ಜಾಗತಿಕ ಮಟ್ಟದ ಬೃಹತ್ ಉದ್ಯಮ-ಸಾಮ್ರಾಜ್ಯ ಕಟ್ಟಿದ ಪರಿ ಸೋಜಿಗ ಹುಟ್ಟಿಸುವಂತಹದು. ಉದ್ಯಮ ಕಟ್ಟುವ ಕಾರ್ಯದ ಹಿಂದೆ ಕೆಲಸ ಮಾಡಿದ ಅವರ ವ್ಯಕ್ತಿತ್ವ ಎಂತಹದಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ.

ನಾರಾಯಣಮೂರ್ತಿ ಅವರ ಹೇಳಿಕೆ ಆಧರಿಸಿದ ಮುಖ್ಯಚರ್ಚೆಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಅವರ ವ್ಯಕ್ತಿತ್ವ, ಚಿಂತನೆಗಳನ್ನು ಅನಾವರಣಗೊಳಿಸುವ ಉದ್ದೇಶ ಸಮಾಜಮುಖಿಯದು. ಅಂತೆಯೇ ಅವರು ವಿವಿಧ ಸಂದರ್ಭಗಳಲ್ಲಿ ಮಾಡಿದ ಮೂರು ಭಾಷಣಗಳನ್ನು ಆಯ್ದು, ಅನುವಾದಿಸಿ ನಿಮ್ಮ ಓದಿಗೆ ಒಡ್ಡುತ್ತಿದ್ದೇವೆ.

ಅನುವಾದ: ಡಾ.ಜ್ಯೋತಿ

1. 2019 ಎಪ್ರಿಲ್ 6

ಕೋಲ್ಕತ್ತಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಘಟಿಕೋತ್ಸವದಲ್ಲಿ…

ಮಾನ್ಯ ಅಧ್ಯಕ್ಷರೇ ಮತ್ತು ಎಲ್ಲಾ ಸದಸ್ಯರೇ, ನಿರ್ದೇಶಕರೇ, ಅಧ್ಯಾಪಕವೃಂದದವರೇ, ಸಿಬ್ಬಂದಿವರ್ಗ, ವಿದ್ಯಾರ್ಥಿಗಳೆ, ಇಂದು ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳ ಕುಟುಂಬ ವರ್ಗದವರೇ, ಮತ್ತು ಮುಖ್ಯವಾಗಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳೇ, ಈ ಸಂಭ್ರಮದ ಸಮಾರಂಭಕ್ಕೆ ಆಹ್ವಾನಿಸಿದ್ದಕ್ಕಾಗಿ ನಿಮಗೆಲ್ಲಾ ನನ್ನ ಪ್ರಾಮಾಣಿಕ ಧನ್ಯವಾದಗಳು. ಇಂದು ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳ ವೈಯಕ್ತಿಕ ಶೈಕ್ಷಣಿಕ ಸಾಧನೆಗಳಿಗೆ ನನ್ನ ಅಭಿನಂದನೆಗಳು. ನಿಮ್ಮ ಮುಂದಿನ ವೈಯಕ್ತಿಕ ಜೀವನದ ಮತ್ತು ಸುತ್ತಲಿನ ಸಮಾಜದ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಹೊಸ್ತಿಲಲ್ಲಿರುವ ನಿಮಗೆಲ್ಲಾ ಈ ಸಂದರ್ಭದಲ್ಲಿ ನನ್ನ ಶುಭಾಶಯಗಳು.

ನೀವು, ಈ ದೇಶ ಮತ್ತು ಪ್ರಪಂಚದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಲಿದ್ದೀರಿ ಎಂಬ ವಿಶ್ವಾಸ ನನಗಿದೆ. ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸುತ್ತಿರುವ ಈ ಕಾಲಘಟ್ಟದಲ್ಲಿ ವೃತ್ತಿರಂಗ ಎಲ್ಲಾ ರೀತಿಯ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ. ಅವಕಾಶಗಳೇನೋ ಹೇರಳವಾಗಿವೆ, ಆದರೆ ಸವಾಲುಗಳು ಮಾತ್ರ ಆತಂಕ ಹುಟ್ಟಿಸುತ್ತಿವೆ. ಇಂದು ಭಾರತೀಯ ವಾಣಿಜ್ಯ ಮಾರುಕಟ್ಟೆಯಲ್ಲಿ ಅಸಂಖ್ಯಾತ ಬಹುರಾಷ್ಟ್ರೀಯ ಸಂಸ್ಥೆಗಳಿವೆ. ಹಾಗೆಯೇ, ಹೆಚ್ಚಿನ ಭಾರತೀಯ ಸಂಸ್ಥೆಗಳು ಕೂಡ ಜಾಗತಿಕ ಮಟ್ಟದಲ್ಲಿ ತಾವೂ ಯಶಸ್ವಿಯಾಗಬೇಕೆಂದು ಆಶಿಸುತ್ತವೆ. ಏಕೆಂದರೆ, ಈ ಕಾಲಘಟ್ಟದಲ್ಲಿ ಯಶಸ್ವಿಯಾಗುವುದೆಂದರೆ ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗುವುದು. ಒಟ್ಟಿನಲ್ಲಿ, ಈ ಜಾಗತೀಕರಣ ಎಂಬ ವಿದ್ಯಮಾನಕ್ಕೆ ಧನ್ಯವಾದ ಹೇಳಬೇಕು.

ಹಾಗಾದರೆ, ಜಾಗತೀಕರಣ ಎಂದರೇನು? ಜಾಗತೀಕರಣವೆಂದರೆ, ಅಗ್ಗದ ಸ್ಥಳದಿಂದ ಬಂಡವಾಳವನ್ನು ಪಡೆಯುವುದು, ಹೆಚ್ಚು ಲಭ್ಯವಿರುವ ಸ್ಥಳದಿಂದ ಪ್ರತಿಭೆಯನ್ನು ಪಡೆಯುವುದು, ಕಡಿಮೆ ವೆಚ್ಚ ತಗಲುವ ಸ್ಥಳದಲ್ಲಿ ಉತ್ಪಾದಿಸುವುದು ಮತ್ತು ರಾಷ್ಟ್ರೀಯ ಗಡಿಗಳನ್ನು ಮೀರಿ ಹೆಚ್ಚು ಲಾಭ ಸಿಗುವ ಪ್ರದೇಶದಲ್ಲಿ ಮಾರಾಟ ಮಾಡುವುದು. ಇಂತಹ ಅತಿಯಾದ ಜಾಗತೀಕರಣದ ಸಂದರ್ಭದಲ್ಲಿ, ಯಾವುದೇ ಒಂದು ದೇಶದಲ್ಲಿ, ವಿಶ್ವದ ಯಾವುದೇ ಭಾಗದಿಂದಲೂ, ಉತ್ಪನ್ನ ಮತ್ತು ಸೇವೆ ನೀಡಲು ವಾಣಿಜ್ಯೋದ್ಯಮಿಗಳು ಬರಬಹುದು. ಉದಾಹರಣೆಗೆ, ಸ್ವಿಟ್ಜರ್ಲೆಂಡ್‍ನ ವಿಶಿಷ್ಟ ವಿಮಾನ ನಿಲ್ದಾಣ ಕಂಪನಿ ನಿರ್ಮಿಸಿದ ವಿಮಾನ ನಿಲ್ದಾಣಕ್ಕೆ ಹೋಗಲು, ಅಮೆರಿಕಾದ ಉಬರ್ ಕಂಪನಿಯ ಕಾರನ್ನು ಕರೆಯಲು ಚೀನಾದ ಮೊಬೈಲ್ ಫೋನನ್ನು ಬಳಸುತ್ತೀರಿ. ಅಥವಾ, ಬ್ರೆಜಿಲ್‍ನ ಎಂಬ್ರೇರ್ ಎಂಬ ವಿಮಾನಯಾನ ಸಂಸ್ಥೆ ತಯಾರಿಸಿದ, ಇಂಡಿಗೊ ಎಂಬ ಭಾರತೀಯ ವಿಮಾನದಲ್ಲಿ ನೀವು ಹಾರಾಟ ನಡೆಸುತ್ತೀರಿ. ಹಾಗೆಯೇ, ನೀವು ಫ್ರೆಂಚ್ ಹೋಟೆಲ್ ಕಂಪನಿಯಾದ ಅಕಾರ್ ಹೋಟೆಲುಗಳಲ್ಲಿ ವಿಶ್ವದಾದ್ಯಂತ ತಂಗುವಿರಿ. ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತದಲ್ಲಿಯೇ ನಿಮ್ಮ ಜೀವನವನ್ನು ಹೆಚ್ಚು ಉತ್ಪಾದಕ ಮತ್ತು ಆರಾಮದಾಯಕವಾಗಿಸಲು ಹಲವಾರು ರಾಷ್ಟ್ರಗಳ ಕಂಪನಿಗಳು ಒಟ್ಟು ಸೇರಿವೆ.

ಈ ಎಲ್ಲಾ ಕಂಪನಿಗಳಲ್ಲಿ ಕಂಡುಬರುವ ಸಾಮ್ಯತೆಗಳೇನು? ಇದಕ್ಕೆ, ರಾಷ್ಟ್ರೀಯ ಗಡಿಗಳನ್ನು ಮೀರಿ ವಿದೇಶಗಳಲ್ಲಿ ಯಶಸ್ವಿಯಾಗಿ ಸ್ಪರ್ಧಿಸುವ, ಅವರ ಸಾಮಥ್ರ್ಯ ಕಾರಣವೇ? ಹಾಗಿದ್ದಲ್ಲಿ, ಅಂತಹ ಸಾಮಥ್ರ್ಯಕ್ಕೆ ಅಗತ್ಯವಾದ ಗುಣಲಕ್ಷಣಗಳು ಯಾವುವು? ಮೊದಲನೆಯದಾಗಿ, ಮಾರುಕಟ್ಟೆಯಲ್ಲಿನ ತೀವ್ರ ಸ್ಪರ್ಧೆ. ನನ್ನ ಸ್ನೇಹಿತ ರಾಹುಲ್ ಬಜಾಜ್ ಹೇಳುವಂತೆ, ಸ್ಪರ್ಧೆ, ಅತ್ಯುತ್ತಮ ನಿರ್ವಹಣಾ ಗುರು. ಈ ಕಂಪನಿಗಳು, ಪ್ರತಿದಿನ ಸ್ಪರ್ಧೆಯಲ್ಲಿ ಯಶಸ್ವಿಯಾಗುವುದರಿಂದ ಮಾತ್ರ, ತಾವು ಬಲವಾದ, ದೊಡ್ಡದಾದ, ಚುರುಕಾದ, ವೇಗವಾದ, ಸಾಮಥ್ರ್ಯದ ಮತ್ತು ಹೆಚ್ಚು ಲಾಭದಾಯಕವಾದ ಸಂಸ್ಥೆಯಾಗಿ ಉಳಿಯುತ್ತೇವೆ ಎಂಬ ನಂಬಿಕೆಯಿಂದ ಪ್ರದರ್ಶನ ನೀಡುತ್ತವೆ. ಪ್ರತಿದಿನ, ಅವರು ವಿಶ್ವದ ಯಾವುದೋ ಒಂದು ಮೂಲೆಯಲ್ಲಿರುವ ತಮ್ಮ ಪ್ರತಿಸ್ಪರ್ಧಿಗಳಿಂದ ಹೊಸ ಪಾಠ ಕಲಿಯುತ್ತಾರೆ, ಮತ್ತದನ್ನು, ಇನ್ನೊಂದು ಕಡೆಯಲ್ಲಿ ಹೆಚ್ಚು ಯಶಸ್ವಿಯಾಗಿ ಅಳವಡಿಸುವುದನ್ನು ಕಲಿಯುತ್ತಾರೆ. ಇದರೊಂದಿಗೆ ತಮ್ಮದೇ ಆದ ವಿನೂತನ ಯಶಸ್ವಿ ಮಾದರಿಯನ್ನು ಸಹ ರಚಿಸುತ್ತಾರೆ. ಈ ಹಿನ್ನಲೆಯಲ್ಲಿ, ಸ್ಪರ್ಧೆ ಎನ್ನುವುದು ಈ ಕಂಪನಿಗಳಿಗೆ ದಿನದಿಂದ ದಿನಕ್ಕೆ ಹೆಚ್ಚು ಗ್ರಾಹಕ-ಕೇಂದ್ರಿತ, ಉದ್ಯೋಗಿ-ಆಧಾರಿತ ಮತ್ತು ಹೂಡಿಕೆದಾರರ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಲು ಸಹಾಯಕವಾಗಿದೆ. ಆದ್ದರಿಂದ, ನಾನು ನಿಮಗೆ ನೀಡುವ ಪ್ರಮುಖ ಸಲಹೆಯೆಂದರೆ, ಸ್ಪರ್ಧೆಯನ್ನು ಉತ್ಸಾಹದಿಂದ ಸ್ವೀಕರಿಸಿ, ನಿಮ್ಮ ಕಂಪನಿಯ ಅನುಕೂಲಕ್ಕೆ ತಕ್ಕಂತೆ ಪರಿಸ್ಥಿತಿಯನ್ನು ಬದಲಾಯಿಸಿಕೊಂಡು, ಬಿರುಗಾಳಿಗೆ ಎದುರಾಗಿ ಸವಾರಿ ಮಾಡುವುದನ್ನು ಅಭ್ಯಸಿಸಿಕೊಳ್ಳಿ.

ಪ್ರತಿಯೊಬ್ಬ ಮನುಷ್ಯ, ಅವನು ಪ್ರಪಂಚದ ಯಾವ ಮೂಲೆಯವನಾದರೂ ಸಹ, ತನ್ನ ಜೀವನದ ಆರಂಭದ ದಿನಗಳಿಂದನೇ ಜೀವನದ ದಿಕ್ಕು ಬದಲಾಯಿಸುವ ಸವಾಲುಗಳನ್ನು ಎದುರಿಸುತ್ತಾ ಬರುತ್ತಾನೆ. ಆಗ ಸಾಮಾನ್ಯವಾಗಿ ನಾವು ವ್ಯಕ್ತಪಡಿಸುವ ಹಿಂಜರಿಕೆಯ ಮನಸ್ಥಿತಿಯನ್ನು ಮೀರಿ ಸ್ಪರ್ಧಾತ್ಮಕ ಮತ್ತು ಪ್ರಗತಿಪರ ಮನಶಕ್ತಿಯನ್ನು ಬೆಳೆಸಿಕೊಳ್ಳುವುದು ಮುಖ್ಯ. ಹಿಂಜರಿಕೆಯ ಮನಸ್ಥಿತಿ ಪ್ರಗತಿಪಥದಿಂದ ನಮ್ಮನ್ನು ಹಿಮ್ಮೆಟ್ಟಿಸುವ ನಕಾರಾತ್ಮಕ ಶಕ್ತಿಯಾಗಿ ಬೆಳೆದು, ನಮ್ಮಲ್ಲಿ ಖಿನ್ನತೆ, ನಿರಾಸಕ್ತಿ, ಆತಂಕ, ನಕಾರಾತ್ಮಕತೆ, ಸಂದಿಗ್ಧತೆ, ಅಸಮರ್ಪಕತೆ ಮತ್ತು ವೈಫಲ್ಯದ ಪ್ರವೃತ್ತಿಯನ್ನು ಹುಟ್ಟುಹಾಕುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಸ್ಪರ್ಧಾತ್ಮಕ ಮನಸ್ಥಿತಿಯು ಸಕಾರಾತ್ಮಕ ಶಕ್ತಿಯಾಗಿ ನಮ್ಮನ್ನು ಪ್ರಗತಿಯತ್ತ ಕೊಂಡೊಯ್ಯುತ್ತದೆ. ಆ ಮೂಲಕ ನಮ್ಮಲ್ಲಿ, ಆತ್ಮವಿಶ್ವಾಸ, ಕುತೂಹಲ, ಸಂತೋಷ, ಧೈರ್ಯ, ಯಶಸ್ಸು, ಮುಕ್ತ ಮನಸ್ಸು ಮತ್ತು ಹೊಸ ಆಲೋಚನೆಗಳನ್ನು ತುಂಬುತ್ತದೆ. ನನ್ನ ಸ್ನೇಹಿತ ರಘುನಾಥ್ ಮಶೆಲ್ಕರ್ ಹೇಳುವಂತೆ, ಯಾರು ತಮ್ಮ ಹಿಂಜರಿಕೆಯ ಮನಸ್ಥಿತಿಯನ್ನು ಪ್ರಗತಿಪರ ಮತ್ತು ಸ್ಪರ್ಧಾತ್ಮಕವಾಗಿ ಪರಿವರ್ತಿಸಲು ಶ್ರಮಿಸುತ್ತಾರೋ ಅವರು ಮಾತ್ರ ಜೀವನದಲ್ಲಿ ಯಶಸ್ವಿಯಾಗುತ್ತಾರೆ. ನೀವು ಇಲ್ಲಿಯವರಗೆ ಈ ಋಣಾತ್ಮಕ ಮನಸ್ಥಿತಿಯನ್ನು ಪರಿವರ್ತಿಸುವ ಕೆಲಸ ಮಾಡಿರದಿದ್ದರೆ, ಇನ್ನಾದರೂ ಮಾಡುತ್ತೀರೆಂಬ ವಿಶ್ವಾಸವಿದೆ.

ನಾರಾಯಣಮೂರ್ತಿ ಜೀವನದ ಮೈಲಿಗಲ್ಲುಗಳು

 • 1946ರ ಆಗಸ್ಟ್ 20 ರಂದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಜನನ.
 • ಮೈಸೂರಿನ ಎನ್‍ಐಇ ಕಾಲೇಜಿನಿಂದ 1967ರಲ್ಲಿ ಇಂಜಿನಿಯರಿಂಗ್ ಪದವಿ.
 • ಕಾನ್‍ಪುರದ ಐಐಟಿಯಿಂದ ಎಮ್‍ಟೆಕ್ ಪದವಿ 1969ರಲ್ಲಿ.
 • 1969ರಲ್ಲಿ ಐಐಎಂ ಅಹಮದಾಬಾದಿನಲ್ಲಿ ಮೊದಲ ನೌಕರಿ -ಚೀಫ್ ಸಿಸ್ಟಮ್ ಪ್ರೊಗ್ರಾಮರ್ ಆಗಿ.
 • 1972ರಲ್ಲಿ ಸೇಸಾ ಕಂಪನಿ ಸೇರಲು ಫ್ರಾನ್ಸಿಗೆ ಪಯಣ.
 • 1975ರಲ್ಲಿ ಮರಳಿ ಭಾರತಕ್ಕೆ ಆಗಮನ. ಪುಣೆಯಲ್ಲಿ ಐಐಎಮ್ ಪ್ರೊಫೆಸರ್ ಒಬ್ಬರ ‘ಸಿಸ್ಟಮ್ ರಿಸರ್ಚ್ ಇನ್‍ಸ್ಟಿಟೂಟ್’ ಎಂಬ ಕಂಪನಿಗೆ ಸೇರ್ಪಡೆ.
 • ಪುಣೆಯಲ್ಲಿ ‘ಪಟ್ಣಿ ಕಂಪ್ಯೂಟರ್ ಸಿಸ್ಟಮ್ಸ್’ ಸೇರ್ಪಡೆ 1977ರಲ್ಲಿ.
 • ಸುಧಾ ಕುಲಕರ್ಣಿಯವರೊಡನೆ ಮದುವೆ 1978ರಲ್ಲಿ.
 • 1981ರಲ್ಲಿ ಪಟ್ಣಿ ಕಂಪ್ಯೂಟರ್ ಸಿಸ್ಟಮ್ಸ್‍ನ ಆರು ಸಹೋದ್ಯೋಗಿಗಳೊಂದಿಗೆ ಸೇರಿ ಹೊಸ ಕಂಪನಿಯೊಂದರ ಶುರುವಾತು. ಪುಣೆಯ ಸಣ್ಣ ಮನೆಯೊಂದರಲ್ಲಿ ‘ಇನ್‍ಫೋಸಿಸ್ ಕನ್ಸ್‍ಲ್ಟೆಂಟ್ ಪ್ರೈ.ಲಿ.’ ಜನನ.
 • ಇನ್‍ಫೋಸಿಸ್ ಕಛೇರಿ 1983ರಲ್ಲಿ ಬೆಂಗಳೂರಿಗೆ ಸ್ಥಳಾಂತರ.
 • 1992ರಲ್ಲಿ ಕಂಪನಿಯ ಹೆಸರನ್ನು ಇನ್‍ಫೊಸಿಸ್ ಟೆಕ್ನಾಲಜೀಸ್ ಲಿಮಿಟೆಡ್ ಎಂದು ಬದಲಾವಣೆ.
 • ಇನ್‍ಫೋಸಿಸ್‍ಗೆ ಐಎಸ್‍ಓ-9001 ಪ್ರಮಾಣಪತ್ರ. ಅದೇ ವರ್ಷ 1993ರಲ್ಲಿ ಇನ್‍ಫೋಸಿಸ್‍ನ ಐಪಿಓ (ಶೇರು ಮಾರುಕಟ್ಟೆ ನೋಂದಣಿ)
 • ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಸಾಫ್ಟ್‍ವೇರ್ ಪಾರ್ಕ್ ಉದ್ಘಾಟನೆ 1995ರಲ್ಲಿ.
 • ಚಾರಿಟಬಲ್ ಸಂಸ್ಥೆ ‘ಇನ್‍ಫೋಸಿಸ್ ಫೌಂಡೇಶನ್’ ಶುರುವಾತು 1996ರಲ್ಲಿ.
 • 1999ರಲ್ಲಿ ಇನ್‍ಫೋಸಿಸ್‍ಗೆ ಸಿಎಮ್‍ಎಮ್ ಲೆವೆಲ್-5 ಪ್ರಮಾಣಪತ್ರ. ಅದೇ ವರ್ಷ $100 ಮಿಲಿಯನ್ ವಹಿವಾಟು ಹಾಗೂ ನ್ಯೂಯಾರ್ಕಿನ ‘ನ್ಯಾಸ್ಡಾಕ್’ ನಲ್ಲಿ ಲಿಸ್ಟಿಂಗ್.
 • ಇನ್‍ಫೋಸಿಸ್ ಮುಖ್ಯ ಆಡಳಿತ ಅಧಿಕಾರಿ ಹುದ್ದೆಗೆ ಮೂರ್ತಿಯವರಿಂದ 2002ರಲ್ಲಿ ರಾಜೀನಾಮೆ. ಕಂಪನಿಯ ಛೇರ್‍ಮನ್ ಹಾಗೂ ಮುಖ್ಯ ಗುರು (ಚೀಫ್ ಮೆಂಟರ್) ಆಗಿ ಪದಗ್ರಹಣ.
 • ನಾರಾಯಣಮೂರ್ತಿ ತಮ್ಮ ಅರವತ್ತನೇ ವಯಸ್ಸಿನಲ್ಲಿ 2006ರಲ್ಲಿ ಇನ್‍ಫೋಸಿಸ್ ಛೇರ್‍ಮನ್ ಹುದ್ದೆಗೆ ರಾಜೀನಾಮೆ. ನಾನ್-ಎಕ್ಸಿಕ್ಯುಟಿವ್ ಛೇರ್‍ಮನ್ ಹಾಗೂ ಮುಖ್ಯ ಗುರುವಾಗಿ ಮುಂದುವರಿಕೆ.
 • 2009ರಲ್ಲಿ ಮೂರ್ತಿಯವರಿಂದ ತಮ್ಮ ಖಾಸಗಿ ಒಡೆತನದಲ್ಲಿ ‘ಕ್ಯಟಮರಾನ್ ವೆಂಚರ್ಸ್’ ಶುರುವಾತು.
 • 2011ರಲ್ಲಿ ಇನ್‍ಫೋಸಿಸ್‍ಗೆ ಪೂರ್ಣ ವಿದಾಯ. ಕೇವಲ ‘ಗೌರವ ಛೇರ್‍ಮನ್’ ಅಲಂಕಾರಿಕ ಹುದ್ದೆಯಲ್ಲಿ ಮುಂದುವರಿಕೆ.
 • ಭಾರತ ಸರ್ಕಾರದಿಂದ 2008ರಲ್ಲಿ ಪದ್ಮವಿಭೂಷಣ ಗೌರವ ಪ್ರದಾನ. ದೇಶ ವಿದೇಶಗಳ 25ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಪದವಿ.
 • 2013ರಲ್ಲಿ ನಾರಾಯಣಮೂರ್ತಿ ಮತ್ತೆ ಇನ್‍ಫೋಸಿಸ್ ಎಕ್ಸಿಕ್ಯುಟಿವ್ ಛೇರ್‍ಮನ್ ಆಗಿ ಮರಳಿ ಬರಬೇಕಾದ ಅನಿವಾರ್ಯತೆ. 2014ರ ಅಕ್ಟೋಬರ್‍ವರೆಗೆ ಮುಂದುವರಿಕೆ.
 • ನಾರಾಯಣಮೂರ್ತಿ ಕುಟುಂಬದ ಒಟ್ಟು ಆಸ್ತಿ ಸುಮಾರು ರೂ.18,000 ಕೋಟಿಗಳು. ಮೂರ್ತಿಯವರ ಮಗ ರೋಹನ್ ಮೂರ್ತಿ ಕ್ಯಟಮರಾನ್ ವೆಂಚರ್ಸ್‍ನಲ್ಲಿ ನಿರ್ದೇಶಕ. ಜೊತೆಗೆ ‘ಮೂರ್ತಿ ಕ್ಲಾಸಿಕಲ್ ಲೈಬ್ರರಿ’ಯ ಸಂಸ್ಥಾಪಕ. ಮೂರ್ತಿಯವರ ಮಗಳು ಅಕ್ಷತಾ ಮೂರ್ತಿ ಸ್ಟಾನ್‍ಫರ್ಡ್ ವಿವಿಯಲ್ಲಿ ಓದಿ ಇಂಗ್ಲೆಂಡ್‍ನಲ್ಲಿ ವಾಸ ಮತ್ತು ಉದ್ಯೋಗ.

 ಹಾಗಿದ್ದಲ್ಲಿ, ಪ್ರಗತಿಪರ ಮತ್ತು ಸ್ಪರ್ಧಾತ್ಮಕ ಮನಸ್ಥಿತಿಯ ಲಕ್ಷಣಗಳು ಯಾವುವು? ಮೊದಲನೆಯದಾಗಿ, ಅಂತಹ ಮನಸ್ಥಿತಿ, ಎಲ್ಲಾ ರೀತಿಯ ಆಲೋಚನೆಗಳಿಗೂ, ಮುಕ್ತವಾಗಿ ತೆರೆದುಕೊಳ್ಳುತ್ತದೆ. ಇದು ಕಾರ್ಯಕ್ಷೇತ್ರದಲ್ಲಿ, ಸ್ಥಾನಗಳ ಶ್ರೇಣಿಯ ಬದಲು ವಿಚಾರಗಳ ಶ್ರೇಣಿಯನ್ನು ಸೃಷ್ಟಿಸುತ್ತದೆ. ಅಂತಹ ಕಂಪನಿಯಲ್ಲಿ, ದ್ವಾರಪಾಲಕರಿಂದ ಅಧ್ಯಕ್ಷರವರೆಗೆ, ಪ್ರತಿಯೊಬ್ಬರೂ ಮಾಲೀಕರಂತೆ ಕಾಣಿಸುತ್ತಾರೆ. ಏಕೆಂದರೆ, ಪ್ರತಿಯೊಬ್ಬರ ವಿಚಾರಗಳಿಗೂ ಅಲ್ಲಿ ಬೆಲೆಯಿದೆ ಮತ್ತು ಅದರ ಉಪಯುಕ್ತತೆಯ ಆಧಾರದ ಮೇಲೆ ಕಾರ್ಯಗತಗೊಳ್ಳುತ್ತವೆ. ಇದು ಕಂಪನಿಯ ಉದ್ಯೋಗಿಗಳಲ್ಲಿ “ತಾನು ಯಾವುದೇ ಕೆಲಸ ಮಾಡಬಲ್ಲೆ”ಎಂಬ ಮನೋಭಾವವನ್ನು ಸೃಷ್ಟಿಸುತ್ತದೆ. ಇಲ್ಲಿ ಪ್ರತಿಯೊಬ್ಬರೂ, “ಸುಲಭವಾಗಿ ಮನವರಿಕೆಯಾಗುವ ಸಾಧ್ಯತೆಗಿಂತ, ನಂಬಲಾಗದ ಅಸಾಧ್ಯತೆ ಶ್ರೇಷ್ಠ” ಎಂಬ ಗಾದೆಗೆ ಅನುಸಾರವಾಗಿ ಕೆಲಸ ಮಾಡುತ್ತಾರೆ. ಅಂತಹ ಮನಸ್ಥಿತಿಯು ಅರ್ಹತೆ ಮತ್ತು ಮುಕ್ತಮನಸ್ಸಿಗೆ ಮನ್ನಣೆ ನೀಡುತ್ತದೆ.  ಅಲ್ಲದೆ, ಉದ್ಯೋಗಿಗಳಲ್ಲಿ ವಿಶ್ವಾಸ, ಭರವಸೆ, ಉತ್ಸಾಹ ಮತ್ತು ಮಾಲೀಕತ್ವದ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ. ಅಂತಹ ಮನೋಧರ್ಮ, ದಣಿದಿರುವ ಪ್ರತಿ ಮನಸ್ಸು ಸಂಜೆ ಕಚೇರಿ ಬಿಡುವಾಗ, ಮರುದಿನ ಬೆಳಿಗ್ಗೆ “ಮಾಡುತ್ತೇನೆ” ಎಂಬ ಹೊಸ ಹುರುಪಿನಲ್ಲಿ  ಮರಳುವ ನಿರ್ಣಯವನ್ನು ಬೆಳೆಸುತ್ತದೆ. ಇನ್ನೂ ಮುಂದುವರಿದು, ಪ್ರತಿ ಉದ್ಯೋಗಿ ತನ್ನ ಕಾರ್ಯವೈಖರಿಯಲ್ಲಿ ನ್ಯಾಯಸಮ್ಮತತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆ ಬೆಳೆಸಿಕೊಳ್ಳುವಂತೆ ಪ್ರೇರೇಪಿಸುತ್ತದೆ.

ಅಂತಹ ಮನಸ್ಥಿತಿಯ ಇನ್ನೊಂದು ವಿಶಿಷ್ಟ ಲಕ್ಷಣವೆಂದರೆ ವೇಗವಾಗಿ ಕೆಲಸ ಮಾಡುವುದು. ಕಚೇರಿಯ ಯಾವುದೋ ಮೂಲೆಯಲ್ಲಿ ಉನ್ನತ ಸ್ಥಾನದಲ್ಲಿ ಕುಳಿತ ಮೇಲಧಿಕಾರಿಯ ಆಧಾರರಹಿತ ಅಭಿಪ್ರಾಯಗಳಿಗಾಗಿ ಅವಲಂಬಿಸದೆ, ಅಗತ್ಯವಾದ ದತ್ತಾಂಶ ಮತ್ತು ಸತ್ಯಗಳನ್ನು ತ್ವರಿತವಾಗಿ ಸಂಗ್ರಹಿಸಿ, ತಕ್ಷಣ ನ್ಯಾಯಯುತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ.

ಒಳ್ಳೆಯ ವಿಚಾರಗಳಿಂದಷ್ಟೇ ಒಂದು ಸಂಸ್ಥೆಯ ಪ್ರಗತಿ ಸಾಧ್ಯ. ಈ ಆಲೋಚನೆಗಳು, ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧವಿರುವ ಪ್ರಗತಿಪರ ಮನಸ್ಥಿತಿಯಿಂದ ಬರುತ್ತದೆ. ಮುಖ್ಯವಾಗಿ, ಅದು ವೈಫಲ್ಯಕ್ಕೆ ಹೆದರುವುದಿಲ್ಲ, ತನ್ನ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಮತ್ತು ಇತರರಿಂದ ಕಲಿಯಲು ಸಿದ್ಧವಿರುತ್ತದೆ. ಆದ್ದರಿಂದ, ಪ್ರಗತಿಪರ, ಸ್ಪರ್ಧಾತ್ಮಕ ಮನೋಧರ್ಮ ಹೊಂದಲು ಇಚ್ಚಿಸುವವರು, ಅಗತ್ಯವಾಗಿ ಹೊಸ, ಕಾಲ್ಪನಿಕ ಮತ್ತು ಮುಕ್ತ ಮನಸ್ಸಿನವರಾಗಿರಬೇಕು. ಇಲ್ಲಿ ನಾವು ನೆನಪಿಡಬೇಕಾದ ವಿಚಾರ, ಒಳ್ಳೆಯ ಆಲೋಚನೆಗಳು ಸ್ಪಷ್ಟ, ಸಕಾರಾತ್ಮಕ ಬದಲಾವಣೆ ತಾರದ ಹೊರತು ಅವುಗಳಿಗೆ ಯಾವುದೇ ಮೌಲ್ಯವಿಲ್ಲ. ಅಂತಹ ಬದಲಾವಣೆಯು ಸಮರ್ಪಕ ಅಳವಡಿಕೆಯಿಂದ ಮಾತ್ರ ಸಾಧ್ಯ. ಇದು ಪ್ರಗತಿಪರ, ಸ್ಪರ್ಧಾತ್ಮಕ ಮನಸ್ಥಿತಿಯ ಅವಿಭಾಜ್ಯ ಅಂಗ.

 ಇಲ್ಲಿ ನೆರೆದಿರುವ ಪ್ರತಿಯೊಬ್ಬನಿಗೂ ನಿಮ್ಮ ಆಯ್ಕೆಯ ಕಾರ್ಯಕ್ಷೇತ್ರದಲ್ಲಿ ನಾಯಕರಾಗುವ ಸಾಮಥ್ರ್ಯವಿದೆ. ಒಬ್ಬ ಉತ್ಕೃಷ್ಟ ನಾಯಕ ಬದಲಾವಣೆಯ ಹರಿಕಾರ. ಯಾವುದೇ ಹೊಸ ಪರಿವರ್ತನೆ, ಸಮರ್ಥ, ಆಶಾವಾದ, ಪ್ರೇರಿತ, ಶಕ್ತಿಯುತ, ಉತ್ಸಾಹ, ಆತ್ಮವಿಶ್ವಾಸ, ಕಠಿಣ ಪರಿಶ್ರಮ ಮತ್ತು ಶಿಸ್ತುಬದ್ಧ ಜನರ ತಂಡವಿಲ್ಲದೆ ಸಾಧ್ಯವಿಲ್ಲ. ಉತ್ಕೃಷ್ಟ ಕೆಲಸದ ವಾತಾವರಣ ಸೃಷ್ಟಿಯಾಗಲು ಮಹತ್ವಾಕಾಂಕ್ಷೆ, ಸಂತೋಷ ಮತ್ತು ತುಡಿಯುವ ಮನಸ್ಸು ಮುಖ್ಯ. ಈ ನಿಟ್ಟಿನಲ್ಲಿ ನಿಮ್ಮ ಮುಂದಿರುವ ಮುಖ್ಯ ಸವಾಲು, ನಿಮ್ಮ ಕಿರಿಯ ಸಹೋದ್ಯೋಗಿಗಳ ಸಂತೋಷ ಮತ್ತು ಮಹತ್ವಾಕಾಂಕ್ಷೆಗಳನ್ನು ಹೆಚ್ಚಿಸುವುದು. ಜಾರ್ಜ್ ಬರ್ನಾರ್ಡ್ ಷಾ ಅವರ ಮಾತುಗಳನ್ನು ಆಧರಿಸಿ, ರಾಬರ್ಟ್ ಕೆನಡಿ ಹೀಗೆ ಹೇಳುತ್ತಾರೆ, “ಹೆಚ್ಚಿನ ಜನರು ವಿಷಯಗಳನ್ನು ಗಮನಿಸಿ, ಇದೇಕೆ ಹೀಗೆ ಎಂದು ಆಶ್ಚರ್ಯ ಪಡುತ್ತಾರೆ.  ಆದರೆ ನಾನು ಮಾತ್ರ ಗೋಚರಿಸದ ವಿಷಯಗಳ ಬಗ್ಗೆ ಕನಸು ಕಾಣುತ್ತೇನೆ ಮತ್ತು ಇದ್ಯಾಕೆ ಹೀಗಿರಬಾರದು ಎಂದು ಯೋಚಿಸುತ್ತೇನೆ.”

ಇದರೊಂದಿಗೆ, ನಿಮ್ಮ ತಂಡದ ಪ್ರತಿಯೊಬ್ಬರಿಂದ ಆಕಾಂಕ್ಷೆ, ಬದ್ಧತೆ, ಧೈರ್ಯ, ಕಠಿಣ ಪರಿಶ್ರಮ, ಶಿಸ್ತು ಮತ್ತು ತ್ಯಾಗದ ಅಗತ್ಯವಿದೆ. ನಾಯಕನಾಗಿ ನೀವು, ಉತ್ಕೃಷ್ಟ ದೂರದೃಷ್ಟಿಯನ್ನು ಸೃಷ್ಟಿಸುವ ಅಗತ್ಯವಿದೆ;

ಆದ್ದರಿಂದ, ಒಬ್ಬ ನಾಯಕನಾಗಿ ನಿಮ್ಮ ಸವಾಲು, ಇಲ್ಲಿಯವರೆಗೆ ಯೋಚಿಸಲಾಗದ ಕಲ್ಪನೆಯನ್ನು ಬೆಳೆಸಿಕೊಳ್ಳುವುದು ಮತ್ತು ಅಸಾಧ್ಯವೆಂದು ತೋರಿದ್ದನ್ನು ನಿಜವಾಗಿಸುವುದು. ಈ ಕಾರ್ಯಮಾದರಿಗೆ, ಮೊದಲನೆಯದಾಗಿ ನಿಮ್ಮ ನಾಯಕತ್ವದ ಮೇಲೆ ನಿಮಗೆ ಸಂಪೂರ್ಣ ನಂಬಿಕೆಯಿರಬೇಕು.  ಇದರೊಂದಿಗೆ, ನಿಮ್ಮ ತಂಡದ ಪ್ರತಿಯೊಬ್ಬರಿಂದ ಆಕಾಂಕ್ಷೆ, ಬದ್ಧತೆ, ಧೈರ್ಯ, ಕಠಿಣ ಪರಿಶ್ರಮ, ಶಿಸ್ತು ಮತ್ತು ತ್ಯಾಗದ ಅಗತ್ಯವಿದೆ. ನಾಯಕನಾಗಿ ನೀವು, ಉತ್ಕೃಷ್ಟ ದೂರದೃಷ್ಟಿಯನ್ನು ಸೃಷ್ಟಿಸುವ ಅಗತ್ಯವಿದೆ; ಆ ದೂರದೃಷ್ಟಿಯನ್ನು ನಿಮ್ಮ ತಂಡಕ್ಕೆ ಸ್ಪಷ್ಟವಾಗಿ ತಿಳಿಸಿ; ಇದರಿಂದ ನಿಮ್ಮ ತಂಡದ ಪ್ರತಿಯೊಬ್ಬರಿಗೂ ಲಾಭವಿದೆ ಎಂದು ಅವರಿಗೆ ಮನವರಿಕೆ ಮಾಡಿ; ನಿಮ್ಮ ನಾಯಕತ್ವದ ಮೇಲೆ ಅವರ ವಿಶ್ವಾಸವನ್ನು ಹೆಚ್ಚಿಸಿ, ಸಂವಾದ ನಡೆಸಿ; ಮತ್ತು ಅವರಲ್ಲಿ ಆತ್ಮವಿಶ್ವಾಸ, ಉತ್ಸಾಹ, ಭರವಸೆ ಮತ್ತು ಬದ್ಧತೆ ತುಂಬಿ; ಮತ್ತು ನಿಮ್ಮ ತಂಡದೊಂದಿಗೆ ಸಾಧನೆಗಳನ್ನು ಹಂಚಿಕೊಳ್ಳುವ ಔದಾರ್ಯ ತೋರುವ ಮೂಲಕ  ಅವರಲ್ಲಿ ಆತ್ಮಗೌರವ ಹೆಚ್ಚಿಸಿ.

ಯಾವುದೇ ಸಂಸ್ಥೆಯ ಉತ್ಪನ್ನ ಮತ್ತು ಸೇವೆಗಳು ಗ್ರಾಹಕರ ಮನಸ್ಸಿನಲ್ಲಿ ಹೆಮ್ಮೆಯಿಂದ ಮುದ್ರೆಯಾಗದ ಹೊರತು ಯಶಸ್ವಿಯಾಗುವುದಿಲ್ಲ. ಹಾಗೆಯೇ, ಅದು ತನ್ನ ನೌಕರರ ಪ್ರಶ್ನಾತೀತ ನಿಷ್ಠೆ, ಹೆಮ್ಮೆ ಮತ್ತು ನಿರಂತರ ಬದ್ಧತೆಯನ್ನು ಗಳಿಸದ ಹೊರತು; ಮತ್ತು ತನ್ನ ಹೂಡಿಕೆದಾರರ ಸಂಪೂರ್ಣ ನಂಬಿಕೆಯನ್ನು ಪಡೆಯದ ಹೊರತು ಯಶಸ್ವಿಯಾಗುವುದಿಲ್ಲ. ನಿಮ್ಮ ಹೂಡಿಕೆದಾರರಲ್ಲಿ ಅಂತಹ ನಂಬಿಕೆಯನ್ನು ಸೃಷ್ಟಿಸಲು ನೀವು ಯಾವಾಗಲೂ “ಅನುಮಾನ ಬಂದಾಗ ಬಗೆಹರಿಸೋ” ಎಂಬ ಗಾದೆ ಮಾತನ್ನು ಅನುಸರಿಸಬೇಕು. ನೀವು ಈ ಎಲ್ಲವನ್ನು ಮಾಡಿದರೂ ಸಹ, ಪ್ರತಿ ನಿರ್ಧಾರದಲ್ಲೂ ನಿಮ್ಮ ಸಂಸ್ಥೆಯ ಹಿತಾಸಕ್ತಿಯೊಂದಿಗೆ ಸುತ್ತಲಿನ ಸಮಾಜದ ಒಳಿತನ್ನು ಖಚಿತಪಡಿಸಲಾಗಿದೆಯೇ ಎಂದು ಪರಾಮರ್ಶಿಸಿ, ಸಮಾಜದ ಸದ್ಭಾವನೆಯನ್ನು ಗಳಿಸದ ಹೊರತು, ಆ ಸಂಸ್ಥೆ ದೀರ್ಘಾಯುಷ್ಯವನ್ನು ಪಡೆಯಲು ಸಾಧ್ಯವಿಲ್ಲ ಎಂಬುದನ್ನು ದಯವಿಟ್ಟು ನೆನಪಿಡಿ.

ಯಾವುದೇ ದೇಶದ ಪ್ರತಿಯೊಬ್ಬ ನಾಗರಿಕ ಸಂತೋಷ, ಉತ್ಸಾಹ ಮತ್ತು ಶಕ್ತಿಯುತನಾಗಿರದ ಹೊರತು, ಆ ದೇಶ ಸುಸ್ಥಿರ ಆರ್ಥಿಕ ಪ್ರಗತಿ ಮತ್ತು ದೀರ್ಘಕಾಲೀನ ಶಾಂತಿಯನ್ನು ಅನುಭವಿಸಲು ಸಾಧ್ಯವಿಲ್ಲ. ಅಂತಹ ಸುಸ್ಥಿರ ದೇಶದಲ್ಲಿ, ಯಾವುದೇ ನಾಗರಿಕ ಕೀಳರಿಮೆ ಹೊಂದಲಾರ. ಅದಕ್ಕಾಗಿಯೇ ಅಧ್ಯಕ್ಷ ಫ್ರಾಂಕ್ಲಿನ್ ರೂಸ್‍ವೆಲ್ಟ್ ವಿವರಿಸಿದ “ಪ್ರಜಾಪ್ರಭುತ್ವದ ನಾಲ್ಕು ಸ್ವಾತಂತ್ರ್ಯಗಳು” ತೆರೆದಿಡುವಂತೆ, ಯಾವುದೇ ನಾಗರಿಕನ ಧರ್ಮ, ಪ್ರದೇಶ, ಜಾತಿ, ಶಿಕ್ಷಣ ಮಟ್ಟ, ಆರ್ಥಿಕ ಮತ್ತು ಸಾಮಾಜಿಕ ವರ್ಗ ಮತ್ತು ಭಾಷೆಯನ್ನು ಲೆಕ್ಕಿಸದೆ, ಈ ನಾಲ್ಕು ಸ್ವಾತಂತ್ರ್ಯಗಳಾದ: ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಭಯದ ವಾತಾವರಣದಿಂದ ಸ್ವಾತಂತ್ರ್ಯ ಮತ್ತು ಬಡತನದಿಂದ ಸ್ವಾತಂತ್ರ್ಯ, ಪ್ರತಿಯೊಬ್ಬ ನಾಗರಿಕನ ಜನ್ಮಸಿದ್ಧ ಹಕ್ಕಾಗಿರಬೇಕು. ಪ್ರತಿಯೊಬ್ಬ ನಾಗರಿಕನ ಈ ಸ್ವಾತಂತ್ರ್ಯ ಗಳನ್ನು ರಕ್ಷಿಸುವುದು, ಈ ದೇಶದ ಭವಿಷ್ಯದ ನಾಯಕರಾಗಿ ನಿಮ್ಮ ಕರ್ತವ್ಯವಾಗಿದೆ.

ನಿಮ್ಮಲ್ಲಿ ಕೆಲವರು, ಮುಂದೆ ಕಂಪನಿಗಳ ಸ್ವತಂತ್ರ ನಿರ್ದೇಶಕರಾಗಲಿದ್ದೀರಿ ಅಥವಾ ಶ್ರೇಷ್ಠ ಕಂಪನಿಗಳ ಮಂಡಳಿ ಅಧ್ಯಕ್ಷರಾಗಲಿದ್ದೀರಿ. ಯಾವುದೇ ಉತ್ತಮ ಆಡಳಿತ ವರ್ಗ, ಷೇರುದಾರರನ್ನು ನಿಷ್ಠೆಯಿಂದ ಪ್ರತಿನಿಧಿಸುತ್ತದೆ, ಷೇರುದಾರರ ಮೌಲ್ಯವನ್ನು ಕಾನೂನುಬದ್ಧವಾಗಿ ಮತ್ತು ನೈತಿಕವಾಗಿ ಹೆಚ್ಚಿಸಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತದೆ ಮತ್ತು ಆ ಮೂಲಕ ಸಂಸ್ಥೆಯ ಖ್ಯಾತಿಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಅಂತಹ ಆದರ್ಶ ಆಡಳಿತವರ್ಗ ಪ್ರತಿಯೊಂದು ಕಾಯಿದೆಯನ್ನು ಸಂಪೂರ್ಣವಾಗಿ ಪಾಲಿಸುತ್ತಿದ್ದೇವೆಯೇ ಎಂದು ಖಚಿತಪಡಿಸಿಕೊಳ್ಳುತ್ತದೆ. ಕಂಪನಿಯ ನಿರ್ಧಾರಗಳಲ್ಲಿನ  ಅಪಾಯಗಳನ್ನು ಗುರುತಿಸುವುದು, ಹಾಗು ಚರ್ಚೆಗಳು, ನಿಯಂತ್ರಣ ವ್ಯವಸ್ಥೆಗಳು ಮತ್ತು ವ್ಯವಸ್ಥಾಪಕ ಮಂಡಳಿಯ ಸಮಯೋಚಿತ ವಿಮರ್ಶೆ, ಕ್ರಿಯೆಯ ಮೂಲಕ ಅವುಗಳನ್ನು ತಗ್ಗಿಸುವುದು ಇದರ ಮುಖ್ಯಕಾರ್ಯ. ಇದು ಕಂಪನಿಯ ಪ್ರತಿಯೊಬ್ಬ ಪಾಲುದಾರನಿಗೆ ನ್ಯಾಯಯುತ, ಪ್ರಾಮಾಣಿಕ, ಪರಿಣಾಮಕಾರಿ, ಪಾರದರ್ಶಕ ಮತ್ತು ಜವಾಬ್ದಾರಿಯುತರನ್ನಾಗಿಸುವ ನಿಟ್ಟಿನಲ್ಲಿ, ನಿರ್ವಹಣೆಯಲ್ಲಿ ಹೊಣೆಗಾರನನ್ನಾಗಿ ಮಾಡುತ್ತದೆ.

ಮುಖ್ಯವಾಗಿ ಗಮನಿಸಿ, ಸ್ವತಂತ್ರ ನಿರ್ದೇಶಕರಾಗಿ ನಿಮ್ಮ ಹೊಣೆಗಾರಿಕೆ ಕೇವಲ ನಿಮ್ಮ ಷೇರುದಾರರಿಗೆ ಮತ್ತು ನಿಯಂತ್ರಕರಿಗೆ ಮಾತ್ರ. ಯಾವುದೇ ಪ್ರಶ್ನೆಯನ್ನು ಕೇಳಲು ಷೇರುದಾರರಿಗೆ ಎಲ್ಲ ರೀತಿಯ ಹಕ್ಕಿದೆ ಎಂಬ ಮೂಲತತ್ವವನ್ನು ನೀವು ಸ್ವೀಕರಿಸಿ ಕಾರ್ಯನಿರ್ವಹಿಸಬೇಕು.

ಇನ್ನೂ ಮುಂದುವರಿದು, ಈ ಆಡಳಿತ ಮಂಡಳಿ ಒಬ್ಬ ಕಂಪನಿಯ ಮುಖ್ಯಸ್ಥ, ಕೆಳಹಂತದ ಉದ್ಯೋಗಿಗಳಿಗೆ ನ್ಯಾಯಯುತ ಪರಿಹಾರವನ್ನು ಕೊಡುವುದಲ್ಲದೆ, ತನಗಾಗಿ ಅಥವಾ ತನ್ನ ಕುಟುಂಬ, ಸ್ನೇಹಿತರು ಮತ್ತು ಆಪ್ತರಿಗೆ, ನೇರ ಅಥವಾ ಪರೋಕ್ಷ ಲಾಭ ಪಡೆಯಲು ಮಂಡಳಿಯ ಮೇಲೆ ಒತ್ತಡ ಹೇರುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತದೆ. ಜೊತೆಗೆ, ಉದ್ಯಮದ ಸೂಕ್ಷ್ಮ ವ್ಯತ್ಯಾಸಗಳು ಮತ್ತು ವ್ಯವಹಾರ ಮಾದರಿಯ ಜಟಿಲತೆಗಳನ್ನು ಅರ್ಥಮಾಡಿಕೊಳ್ಳುತ್ತದೆ. ಕಂಪನಿಯ ಮುಖ್ಯಸ್ಥ, ತನ್ನ ನಿರ್ಧಾರವನ್ನು ಪ್ರಶ್ನಾರ್ಹ ಮತ್ತು ಅನೈತಿಕ ಎಂದು ಮಂಡಳಿಗೆ ಘೋಷಿಸಿದಾಗ ಅದು ಮಂಡಳಿಯ ಸಭೆಗಳಲ್ಲಿ ಮೂಕಪ್ರೇಕ್ಷಕರಾಗಿರಬಾರದು. ಹೊರತಾಗಿ, ವಿಮರ್ಶಾತ್ಮಕ ವಹಿವಾಟಿನ ವಿವರಗಳನ್ನು ಆಳವಾಗಿ ಪ್ರಶ್ನಿಸುವುದು ಮತ್ತು ಕಂಪನಿಯ ಮುಖ್ಯಸ್ಥನಿಗೆ ಪಕ್ಷಪಾತಿಯಾಗದೆ, ಸತ್ಯವನ್ನು ಭಿನ್ನಾಭಿಪ್ರಾಯವಿಲ್ಲದೆ ಪರಾಮರ್ಶಿಸುತ್ತದೆ. ಮಾತ್ರವಲ್ಲ, ಈ ಮಂಡಳಿ, ಅನೈತಿಕ, ದುರಾಸೆಯ ಕಾನೂನು ಸಂಸ್ಥೆಗಳಿಗೆ ತನ್ನ ಅಧಿಕಾರವನ್ನು ಮಾರಿಕೊಳ್ಳುವುದಿಲ್ಲ ಅಥವಾ ವ್ಯವಹಾರ ಮಾತುಕತೆಯಲ್ಲಿ ಹಕ್ಕು ಚಲಾಯಿಸಲು ಈ ಸಂಸ್ಥೆಗಳ ಅನುಮೋದನೆಗಾಗಿ ಕಾಯುವುದಿಲ್ಲ. 

ಮುಖ್ಯವಾಗಿ ಗಮನಿಸಿ, ಸ್ವತಂತ್ರ ನಿರ್ದೇಶಕರಾಗಿ ನಿಮ್ಮ ಹೊಣೆಗಾರಿಕೆ ಕೇವಲ ನಿಮ್ಮ ಷೇರುದಾರರಿಗೆ ಮತ್ತು ನಿಯಂತ್ರಕರಿಗೆ ಮಾತ್ರ. ಯಾವುದೇ ಪ್ರಶ್ನೆಯನ್ನು ಕೇಳಲು ಷೇರುದಾರರಿಗೆ ಎಲ್ಲ ರೀತಿಯ ಹಕ್ಕಿದೆ ಎಂಬ ಮೂಲತತ್ವವನ್ನು ನೀವು ಸ್ವೀಕರಿಸಿ ಕಾರ್ಯನಿರ್ವಹಿಸಬೇಕು. ಅವರ ಪ್ರಶ್ನೆ ಸೂಕ್ತವಲ್ಲವೆಂದು ನಿರ್ಣಯಿಸುವವರು ನೀವಲ್ಲ. ನೀವು ನಿಮ್ಮ ಪ್ರತಿ ಷೇರುದಾರರಿಗೆ ಸಂಪೂರ್ಣವಾಗಿ ಪಾರದರ್ಶಕವಾಗಿರಬೇಕು. ಅಂದರೆ, ಸಂಸ್ಥಾಪಕರು ಸೇರಿದಂತೆ ಯಾವುದೇ ಗುಂಪಿನ ಷೇರು ಪ್ರಕ್ರಿಯೆಯಲ್ಲಿ ಪಕ್ಷವಾಗಲು ಸಾಧ್ಯವಿಲ್ಲ. ಜೊತೆಗೆ, ನೀವು ವರ್ಗೀಕೃತ ಮಂಡಳಿ ಮಾಹಿತಿಯನ್ನು ಮಾಧ್ಯಮದಲ್ಲಿ ಸೋರಿಕೆ ಮಾಡಬಾರದು.

ಸ್ವತಂತ್ರ ನಿರ್ದೇಶಕರಾಗಿ ಮತ್ತು ಪಟ್ಟೀಕೃತ ಕಂಪನಿಯ ಅಧ್ಯಕ್ಷರಾಗಿ ನೀವು ಹೇಗೆ ಗೌರವವನ್ನು ಗಳಿಸುತ್ತೀರಿ? ಎಂದು ನನ್ನನ್ನು ಜನ ಕೇಳುತ್ತಾರೆ. ಗೌರವ ಗಳಿಸಲು ನಿಮಗೆ ಸುಲಭವಾದ ಸಾಧನವೆಂದರೆ, ಸಭೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು, ನಿಮ್ಮ ಮನಸ್ಸಾಕ್ಷಿಯನ್ನು ಕೇಳುವುದು. ಆ ನಿರ್ಧಾರವು ನಿಮ್ಮ ಸಂಸ್ಥೆಗೆ, ಷೇರುದಾರರಿಗೆ ಮತ್ತು ಸಮಾಜಕ್ಕೆ ಗೌರವ ಹೆಚ್ಚಿಸುತ್ತದೆ ಎಂದು. ‘ಸ್ಪಷ್ಟ ಆತ್ಮಸಾಕ್ಷಿ ಮೃದುವಾದ ತಲೆದಿಂಬಿನಂತೆ’ ಎಂಬುದನ್ನು ದಯವಿಟ್ಟು ನೆನಪಿಡಿ.

ನಿಮ್ಮಲ್ಲಿ ರಾಜಕೀಯ ಸೇರಲಿಚ್ಚಿಸುವವರು ಪ್ರಸಿದ್ಧ, ಹಿಂದಿ ನುಡಿಗಟ್ಟನ್ನು ನೆನಪಿಸಿಕೊಳ್ಳುವುದು ಉಚಿತ- “ಜಿಸ್ ದೇಶ್ ಮೇ ಸರ್ಕಾರ್ ವ್ಯಾಪಾರಿ ಹೋಜಾತಾ ಹೆ, ಉಸ್ ದೇಶ್ ಮೇ ಲೋಗ್ ಬಿಕಾರಿ ಹೋಜಾತೇ ಹೆ!” ಅದರಂತೆಯೇ, “ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ” ಎಂದು ಘೋಷಿಸುವ ಪ್ರತಿ ಸರ್ಕಾರವು ಈ ಹಳೆಯ ಹಿಂದಿ ನುಡಿಗಟ್ಟನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ವ್ಯವಹಾರಕ್ಕೆ ಇಳಿಯುವ ದುರಾಸೆಯನ್ನು ವಿರೋಧಿಸಬೇಕು.

ಪ್ರಾಮಾಣಿಕ ಮತ್ತು ತೊಂದರೆ ವಿಮುಕ್ತ ಪ್ರಕ್ರಿಯೆಯ ಮೂಲಕ ತೆರಿಗೆ ಸಂಗ್ರಹ ಮಾಡಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ನಿಮ್ಮ ಕರ್ತವ್ಯ.

ಒಂದು ವೇಳೆ ಪೌರಕಾರ್ಮಿಕನಾದರೆ ನಿಮ್ಮ ಮೊದಲ ಕರ್ತವ್ಯ ನಿಷ್ಪಕ್ಷಪಾತ ನಿಯಂತ್ರಕನಾಗಿರುವುದು. ಹೆಚ್ಚಿನ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸುವ ಅನ್ವೇಷಣೆಯಲ್ಲಿ ಪ್ರಾಮಾಣಿಕ, ನವೀನ ಮತ್ತು ಕಾನೂನು ಪಾಲಿಸುವ ಯುವ ಉದ್ಯಮಿಗಳಿಗೆ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುವುದು ಮತ್ತು ಮಹತ್ವಾಕಾಂಕ್ಷೆಯ ಸಂಪತ್ತನ್ನು ಸೃಷ್ಟಿಸುವುದು. ಹಾಗೆಯೇ, ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ನ್ಯಾಯಯುತ, ಪಾರದರ್ಶಕ, ಪ್ರಾಮಾಣಿಕ ಮತ್ತು ತೊಂದರೆ ವಿಮುಕ್ತ ಪ್ರಕ್ರಿಯೆಯ ಮೂಲಕ ತೆರಿಗೆ ಸಂಗ್ರಹ ಮಾಡಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ನಿಮ್ಮ ಕರ್ತವ್ಯ. ಆ ತೆರಿಗೆ ಹಣವನ್ನು ಸಾರ್ವಜನಿಕ-ಒಳ್ಳೆಯ ಉದ್ದೇಶಗಳಿಗಾಗಿ ಸಮರ್ಥವಾಗಿ ಮತ್ತು ನ್ಯಾಯಯುತವಾಗಿ ಬಳಸುವುದು ಸಹ ಅತಿ ಮುಖ್ಯ.

ಜನರು ಸಾಮಾನ್ಯವಾಗಿ ನನ್ನಲ್ಲಿ ಯಶಸ್ಸಿನ ವ್ಯಾಖ್ಯಾನವನ್ನು ಕೇಳುತ್ತಾರೆ. ಆಗ ನಾನು, ರಾಲ್ಫ್ ವಾಲ್ಡೋ ಎಮರ್ಸನ್ ಅವರ ಹೇಳಿಕೆಯ ಧಾಟಿಯಲ್ಲಿಯೇ ಉತ್ತರಿಸುತ್ತೇನೆ, “ಯಾವಾಗಲೂ  ನಗುವುದು; ಬುದ್ಧಿವಂತ ಜನರಿಗೆ ಗೌರವ ಹಾಗು ಮಕ್ಕಳಿಗೆ ಪ್ರೀತಿಯನ್ನು ಕೊಡುವುದು; ಪ್ರಾಮಾಣಿಕ ವಿಮರ್ಶಕರ ಮೆಚ್ಚುಗೆಯನ್ನು ಗಳಿಸುವುದು ಮತ್ತು ಸುಳ್ಳು ಸ್ನೇಹಿತರ ದ್ರೋಹವನ್ನು ಅರಿಯುವುದು; ಸೌಂದರ್ಯವನ್ನು ಪ್ರಶಂಶಿಸುವುದು; ಇತರರಲ್ಲಿ ಉತ್ತಮವಾದದನ್ನು ಮಾತ್ರ ಗಮನಿಸುವುದು; ಜಗತ್ತನ್ನು ಸ್ವಲ್ಪ ಉತ್ತಮ ಸ್ಥಿತಿಯಲ್ಲಿ ಬಿಟ್ಟು ಹೋಗುವುದಕ್ಕಾಗಿ, ಒಂದು ಆರೋಗ್ಯವಂತ ಮಗು, ಒಂದು ತುಂಡು ಉದ್ಯಾನ ಅಥವಾ ಒಂದು ಚೂರು ಸುಧಾರಿಸಿದ ಸಾಮಾಜಿಕ ಸ್ಥಿತಿಯನ್ನು ಸೃಷ್ಟಿಸುವುದು; ನೀವು ಬದುಕಿರುವವರೆಗೆ, ನಿಮ್ಮಿಂದಾಗಿ ಇನ್ನೊಂದು ಜೀವ ಕೂಡ ಸಂತೋಷವಾಗಿ ಉಸಿರಾಡಿದೆ ಎಂದು ತಿಳಿಯುವುದು”. ಈ ಮಾದರಿಯನ್ನು ನಾವೆಲ್ಲರೂ ಅನುಸರಿಸಬೇಕಾಗಿದೆ. ಈ ನಿಟ್ಟಿನಲ್ಲಿ, ನಿಮ್ಮೆಲ್ಲರಿಗೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.

ಅಂತಿಮವಾಗಿ, ಯಾವುದೇ ಕಠಿಣ ಕೆಲಸಮಾಡುವುದಕ್ಕೆ ಸಂತೋಷದ ಮನಸ್ಥಿತಿ ಬೇಕು ಎಂಬುದನ್ನು ನೆನಪಿಡಿ. ನೀವು ಕಚೇರಿಯನ್ನು ತೊರೆಯುವಾಗ, ನಿಮ್ಮ ಕಚೇರಿ ವಿಷಯಗಳನ್ನು ಮರೆತುಬಿಡಿ. ನಿಮ್ಮ ಪ್ರೀತಿಪಾತ್ರರ ಜೊತೆ ಗುಣಮಟ್ಟದ ಮತ್ತು ಸಂತೋಷದ ಸಮಯವನ್ನು ಕಳೆಯಿರಿ. ಈ ಪ್ರತಿಷ್ಠಿತ ಸಂಸ್ಥೆಯಲ್ಲಿ ಓದುವ ಅವಕಾಶ ದೊರಕಿಸಿದ ನಿಮ್ಮ ಪ್ರೀತಿಪಾತ್ರರಿಗೆ ಕೃತಜ್ಞರಾಗಿರಿ.

ನಿಮ್ಮ ಭವಿಷ್ಯ ಜೀವನವು, ಹೆಚ್ಚು ಸದುದ್ದೇಶಪೂರಿತ, ಉತ್ಪಾದಕ, ಸಂತೋಷದಾಯಕ, ಆರೋಗ್ಯಕರ, ಮೌಲ್ಯಾಧಾರಿತ ಮತ್ತು ಉಪಯುಕ್ತವಾಗಿರಲೆಂದು ನನ್ನ ಶುಭಹಾರೈಕೆಗಳು.

ಧನ್ಯವಾದಗಳು!

2. 2015

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಘಟಿಕೋತ್ಸವ ಸಮಾರಂಭದಲ್ಲಿ…

ಭಾರತೀಯ ವಿಜ್ಞಾನ ಸಂಸ್ಥೆಯ ಪದವೀಧರರಾದ ನೀವು, ಭಾರತ ಹಾಗು ಜಗತ್ತನ್ನು ಸುಧಾರಿಸಲು ಏನು ಕೊಡುಗೆ ನೀಡಬಹುದು?

ಮಾನ್ಯ ಡಾ. ಕಸ್ತೂರಿರಂಗನ್, ಪ್ರೊ. ರಾಮ ರಾವ್, ಪ್ರೊ. ಅನುರಾಗ್ ಕುಮಾರ್, ಮತ್ತು ನನ್ನ ಸ್ನೇಹಿತರಾದ ಪ್ರೊ. ಬಲರಾಮ್ ಮತ್ತು ಪ್ರೊ. ರಾಮಶೇಷ, ಜೊತೆಗೆ ವಿವಿಧ ಜ್ಞಾನಶಿಸ್ತಿನ ಮುಖ್ಯಸ್ಥರು, ಅಧ್ಯಾಪಕ ವೃಂದ, ಅತಿಥಿಗಳು, ಎಲ್ಲಾ ವಿದ್ಯಾರ್ಥಿಗಳು, ವಿಶೇಷವಾಗಿ, ಇಂದು ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಮತ್ತವರ ಪೋಷಕರು. ಮೊದಲಿಗೆ, ಈ ಸ್ಮರಣೀಯ ಸಮಾರಂಭದಲ್ಲಿ ಭಾಗವಹಿಸಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ನನ್ನ ಹಾರ್ದಿಕ ಅಭಿನಂದನೆಗಳು. ಇಂದು ನಿಮ್ಮ ದಿನ. ಈ ಸಂದರ್ಭದಲ್ಲಿ ನನಗೆ ಇಷ್ಟವಾದ ವಿಷಯದ ಬಗ್ಗೆ ನಾನು ನಿಮ್ಮೊಂದಿಗೆ ಮಾತನಾಡುತ್ತೇನೆ. ಅಂದರೆ, ಭಾರತೀಯ ವಿಜ್ಞಾನ ಸಂಸ್ಥೆಯಂತಹ ಉನ್ನತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಭಾರತ ಮತ್ತು ಅದರೊಂದಿಗೆ ಜಗತ್ತನ್ನು ಸುಧಾರಿಸುವಲ್ಲಿ ಎಂತಹ ಪಾತ್ರ ವಹಿಸಬಹುದು? ನನ್ನ ಈ ಭಾಷಣದಲ್ಲಿ ‘ಅವನು’ ಅಂದರೆ ಗಂಡು ಮತ್ತು ಹೆಣ್ಣು, ಎರಡೂ ಲಿಂಗವನ್ನು ಪ್ರತಿನಿಧಿಸುತ್ತದೆ.

ನನ್ನ ಅನಿಸಿಕೆಯಂತೆ, ವಿಜ್ಞಾನ ಪ್ರಕೃತಿಯನ್ನು ಅನ್ವೇಷಿಸಿದರೆ, ತಂತ್ರಜ್ಞಾನ ಆ ಆವಿಷ್ಕಾರಗಳನ್ನು ಬಳಸಿಕೊಳ್ಳುತ್ತದೆ. ಭಾರತೀಯ ವಿಜ್ಞಾನ ಸಂಸ್ಥೆ, ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ಈ ಸಂಸ್ಥೆ, ವಿಶ್ವದಾದ್ಯಂತ ಅತ್ಯಂತ ಕಠಿಣ ಸ್ಪರ್ಧಾತ್ಮಕ ಸ್ಥಳಗಳಲ್ಲಿ ಮೇಲುಗೈ ಸಾಧಿಸುತ್ತಿರುವ ಎಷ್ಟೋ ಭಾರತೀಯ ವಿದ್ಯಾರ್ಥಿಗಳನ್ನು ರೂಪಿಸಿದೆ. ಜಾಗತಿಕ ಮಟ್ಟದಲ್ಲಿ, ನಿಮ್ಮ ಸಂಶೋಧನೆಗೆ ಮಹತ್ವದ ಸ್ಥಾನವಿದೆ. ಆದ್ದರಿಂದ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಪರಿವರ್ತಿಸುವ ಅರ್ಹತೆ ಈ ಸಂಸ್ಥೆ ಪಡೆದಿದೆ.

ವಿಚಾರಗಳು ಮತ್ತು ಆವಿಷ್ಕಾರಗಳು:

ನಾನು ಎರಡು ತಿಂಗಳ ಹಿಂದೆ ಕೇಂಬ್ರಿಜ್ ಮ್ಯಾಸಚೂಸೆಟ್ಸ್‍ನಲ್ಲಿದ್ದಾಗ, ನನಗೆ ‘ವಿಚಾರದಿಂದ ಆವಿಷ್ಕಾರದವರಗೆ: ಎಂಐಟಿಯಿಂದ ಜಗತ್ತಿಗೆ 101 ಉಡುಗೊರೆಗಳು(ಫ್ರಮ್ ಐಡಿಯಾಸ್ ಟು ಇನ್ವೆಂಷನ್ಸ್: 101 ಗಿಫ್ಟ್ಸ್ ಫ್ರಮ್  ಎಂಐಟಿ  ಟು ದಿ ವಲ್ರ್ಡ್)’ ಪುಸ್ತಕವನ್ನು ನೀಡಲಾಗಿತ್ತು. ಈ ಕಿರುಹೊತ್ತಿಗೆಯಲ್ಲಿ, ಎಂಐಟಿ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ನಿವೃತ್ತ ಅಧ್ಯಾಪಕರು, ಈ ಜಗತ್ತನ್ನು ಪರಿವರ್ತಿಸಲು ಮಾಡಿರುವ ಅನ್ವೇಷಣೆಗಳನ್ನು ಪಟ್ಟಿಮಾಡಲಾಗಿದೆ. ಅವುಗಳಲ್ಲಿ, ಕಳೆದ 50 ವರ್ಷಗಳಲ್ಲಿ ಎಂಐಟಿ ಮಾಡಿರುವ 10 ಪ್ರಮುಖ ಆವಿಷ್ಕಾರಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ. 

 • ಇವಾನ್ ಗೆಟಿಂಗ್ ಮತ್ತು ಬ್ರಾಡ್ ಪರ್ಕಿಸೋನ್- ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್
 • ಹ್ಯುಗ್ ಹೆರ್- ಬಯೋನಿಕ್ ಪ್ರೊಸ್ಥೆಸೆಸ್
 • ರಾಬರ್ಟ್ ನೋಯ್ಸ್ – ಮೈಕ್ರೋಚಿಪ್
 • ರೇ ಟಾಮ್ಲಿನ್ಸನ್ – ಇ-ಮೇಲ್
 • ರಾಬರ್ಟ್ ಲ್ಯಾಂಗರ್- ಸ್ಲೋ ಡ್ರಗ್ ಡೆಲಿವರಿ ಮತ್ತು ಪಾಲಿಮರ್ ಸ್ಕ್ಯಾಂಫ್ಪೋಲ್ಡ್ಸ್ ಫಾರ್ ಹ್ಯೂಮನ್ ಟಿಸ್ಸುಸ್
 • ರೊನಾಲ್ಡ್ ರಿವೆಸ್ಟ್ ಆದಿ ಶಮೀರ್ ಮತ್ತು ಲಿಯೊನಾರ್ಡ್ ಅಡೆಲ್ಮಾ- ಆರ್‍ಎಸ್‍ಎ ಲಿಪಿಕರಣ
 • ರೇ ಕುರ್ಜ್ ವೆಯ್ಲ್ -ಪಠ್ಯ ಮತ್ತು ಭಾಷಣ ಗುರುತಿಸುವಿಕೆ
 • ಶಿಂತರೋ ಅಸನೊ- ಫ್ಯಾಕ್ಸ್ ಯಂತ್ರ
 • ಆಂಡ್ರೂ ವಿಟರ್ಬಿ – ವಿಟರ್ಬಿ ಅಲ್ಗೊರಿಥಮ್
 • ನಾರ್ಬರ್ಟ್ ವೀನರ್ – ಸೈಬರ್ನೆಟಿಕ್ಸ್

ಇವು ನನಗೆ ವಿಶೇಷವೆನಿಸಿದ ಹತ್ತು ಆವಿಷ್ಕಾರಗಳು. ಇದು ಸಾಧ್ಯವಾಗಲು ಮುಖ್ಯ ಕಾರಣಗಳೆಂದರೆ; ಎಂಐಟಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಹೊಸ ದಾರಿಯಲ್ಲಿ ಕ್ರಮಿಸಿದ್ದರಿಂದ, ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದ್ದರಿಂದ, ತಮ್ಮ ಬುದ್ಧಿಶಕ್ತಿಯನ್ನು ಮೊನಚುಗೊಳಿಸಿದ್ದರಿಂದ, ಮತ್ತು ಅಸಾಧ್ಯವಾಗಿ ಕಂಡದ್ದನ್ನು ಸಾಧ್ಯವಾಗಿಸುವ ಧೈರ್ಯ ತೋರಿಸಿದ್ದರಿಂದ. ಹೆಚ್ಚಿನ ಪಾಶ್ಚಿಮಾತ್ಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈ ಶ್ರೇಷ್ಠ ಪರಂಪರೆಯನ್ನು ನಾವು ಕಾಣುತ್ತೇವೆ. ವಿಶೇಷವಾಗಿ, ಈ ಕೆಳಗಿನ ಆವಿಷ್ಕಾರಗಳನ್ನು ಸಾಕಾರಗೊಳಿಸಿದ ಪಾಶ್ಚಿಮಾತ್ಯ ವಿಶ್ವವಿದ್ಯಾನಿಲಯಗಳಿಗೆ ನಾವು ಕೃತಜ್ಞರಾಗಿರಬೇಕು; ಕಾರು, ಎಲೆಕ್ಟ್ರಿಕಲ್ ಬಲ್ಬ್, ರೇಡಿಯೋ, ಟೆಲಿವಿಷನ್, ಕಂಪ್ಯೂಟರ್, ಹೈಫೈ ಇಂಟರ್ನೆಟ್, ಮ್ಯೂಸಿಕ್ ಪ್ಲೇಯರ್, ಎಂಆರ್ ಐ, ಅಲ್ಟ್ರಾಸೌಂಡ್ ಸ್ಕ್ಯಾನರ್, ರೆಫ್ರಿಜರೇಟರ್, ಲೇಸರ್‍ಗಳು, ರೋಬೋಟ್, ಇನ್ನೂ ಹಲವಾರು ಯಂತ್ರೋಪಕರಣಗಳು.

ಒಂದು ಹೊಸ ಆವಿಷ್ಕಾರ, ತಂತ್ರಜ್ಞಾನ, ವಿಚಾರ….

ಈ ಪ್ರಸ್ತುತತೆಯಲ್ಲಿ, ಕಳೆದ 60 ವರ್ಷಗಳಲ್ಲಿ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳು, ವಿಶೇಷವಾಗಿ, ಭಾರತೀಯ ವಿಜ್ಞಾನ ಸಂಸ್ಥೆ, ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು, ನಮ್ಮ ದೇಶ ಮತ್ತು ಜಗತ್ತನ್ನು ಸುಧಾರಿಸುವ ನಿಟ್ಟಿನಲ್ಲಿ ಯಾವ ಕೊಡುಗೆ ನೀಡಿವೆ ಎಂದು ವಿಚಾರ ಮಾಡೋಣ. ಜಗತ್ತಿನಾದ್ಯಂತ ಮನೆಮಾತಾಗಿರುವ ಯಾವುದಾದರೂ ಆವಿಷ್ಕಾರವನ್ನು ಭಾರತ ಮಾಡಿದೆಯೇ? ಜಾಗತಿಕ ಸಂಸ್ಥೆಗಳ ಉತ್ಪಾದಕತೆಯನ್ನು ಹೆಚ್ಚಿಸಿದ ಯಾವುದಾದರೂ ತಂತ್ರಜ್ಞಾನದ ಆವಿಷ್ಕಾರ ಮಾಡಿದ್ದೇವೆಯೇ? ಜಗತ್ತಿನ ಮಾನವ ಜನಾಂಗಕ್ಕೆ ನೆಮ್ಮದಿ ನೀಡುವ ಯಾವುದಾದರೂ ಹೊಸ ಆವಿಷ್ಕಾರ ಮಾಡಿದ್ದೇವೆಯೇ? ವಾಸ್ತವವೆಂದರೆ, ಕಳೆದ 60 ವರ್ಷಗಳಲ್ಲಿ ಭಾರತ ಅಂತಹ ಮಹತ್ತರ ಕೊಡುಗೆಯೇನೂ ನೀಡಿಲ್ಲ. ಜಾಗತಿಕ ಸಂಸ್ಥೆಗಳ ಉತ್ಪಾದಕತೆಯನ್ನು ಬದಲಾಯಿಸಿದ ಪ್ರಧಾನ ಎರಡು ವಿಚಾರಗಳು- ಗ್ಲೋಬಲ್ ಡೆಲಿವರಿ ಮಾಡೆಲ್ ಮತ್ತು 24-ಗಂಟೆಗಳ ದಿನಕೆಲಸ- ಇನ್ಫೋಸಿಸ್ ಕಂಪನಿಯ ಕೊಡುಗೆಯಾಗಿದೆ. 

ಈ ಮಧ್ಯೆ, ನಮ್ಮ ದೇಶವನ್ನು ಸುತ್ತುವರಿದಿರುವ ಸಮಸ್ಯೆಗಳತ್ತ ಒಮ್ಮೆ ದೃಷ್ಟಿ ಹಾಯಿಸೋಣ.  ನಾವು ವಿಶ್ವದಲ್ಲಿಯೇ, ಅತ್ಯಂತ ಹೆಚ್ಚಿನ ಸಂಖ್ಯೆಯ ಅನಕ್ಷರಸ್ಥರನ್ನು ಹೊಂದಿದ್ದೇವೆ, ಪೌಷ್ಟಿಕಾಂಶ ಕೊರತೆಯಿಂದ ಬಳಲುವ ಮಕ್ಕಳ ಸಂಖ್ಯೆ ಹೆಚ್ಚಿದೆ, ತೀರಾ ಕೆಳಮಟ್ಟದ ಸಾರ್ವಜನಿಕ ಆರೋಗ್ಯ ಸೇವೆಯನ್ನು ಹೊಂದಿದ್ದೇವೆ, ಸಂಪೂರ್ಣವಾಗಿ ಮಾಲಿನ್ಯಗೊಂಡ ನದಿಗಳಿವೆ, ನಮ್ಮ ವಾಹನಗಳು ಭಾರಿ ಪ್ರಮಾಣದ ಇಂಗಾಲವನ್ನು ವಾತಾವರಣಕ್ಕೆ ಬಿಡುತ್ತವೆ, ನಮ್ಮಲ್ಲಿ ಬಳಕೆ ಯೋಗ್ಯ ನೀರಿನ ಪ್ರಮಾಣ ಬಹಳ ಕಡಿಮೆಯಿದೆ, ನಮ್ಮ ಪ್ರಾಥಮಿಕ ಶಿಕ್ಷಣ ಅತ್ಯಂತ ಕಡಿಮೆ ಗುಣಮಟ್ಟದ್ದಾಗಿದೆ. ಹೀಗೆ ಸಮಸ್ಯೆಗಳ ಪಟ್ಟಿಯನ್ನು ಮಾಡುತ್ತಾ ಹೋಗಬಹುದು. ಇಲ್ಲಿ ಮುಖ್ಯವಾಗಿ ಅರಿತುಕೊಳ್ಳಬೇಕಾದ ವಿಚಾರವೆಂದರೆ, ಈ ದೇಶ ತುರ್ತಾಗಿ ಪರಿಹರಿಸಬೇಕಾದ ಸಮಸ್ಯೆಗಳ ಕೊರತೆಯೇನೂ ಇಲ್ಲ.

ಈ ಎಲ್ಲಾ ಸಮಸ್ಯೆಗಳ ಮಧ್ಯೆ, ನಮ್ಮ ಮುಂದಿರುವ ಭರವಸೆಗಳೇನು? ನಿಮ್ಮಂತಹ ಪ್ರಜ್ಞಾವಂತ ಯುವಕರೇ ನಮ್ಮ ಆಶಯ. ಇಲ್ಲಿನ ವಿದ್ಯಾರ್ಥಿಗಳು ಮತ್ತು ಪಾಶ್ಚಿಮಾತ್ಯ ವಿದ್ಯಾರ್ಥಿಗಳ ನಡುವೆ ಬುದ್ಧಿಶಕ್ತಿ, ಉತ್ಸಾಹ ಶಕ್ತಿ ಮತ್ತು ಆತ್ಮವಿಶ್ವಾಸದಲ್ಲಿ ನನಗೆ ಯಾವುದೇ ವ್ಯತ್ಯಾಸ ಕಾಣಿಸುತ್ತಿಲ್ಲ. ಆದರೂ, ನಮ್ಮ ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಪದವಿ ಪಡೆದು ವಿದ್ಯಾಸಂಸ್ಥೆಗಳ ಬಿಡುವಾಗ, ಅವರ ಸಂಶೋಧನೆಯ ಫಲವೇನೂ ಸುತ್ತಲಿನ ಸಮಾಜಕ್ಕೆ ತಲುಪುತ್ತಿಲ್ಲ. ಇದಕ್ಕಿಂತ ಕೆಟ್ಟದೇನೆಂದರೆ, ಅವರು ಮುಂದೆ ಬಾಹ್ಯ ಜಗತ್ತಿಗೆ ಕಾಲಿಟ್ಟ ನಂತರದ ಅವರ ಸಾಧನೆ ನಗಣ್ಯ. ನಮ್ಮ ಮುಂದಿನ ಜನಾಂಗಕ್ಕೆ ಉತ್ತಮ ಜಗತ್ತನ್ನು ನಿರ್ಮಿಸುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳ ಈ ಶೂನ್ಯ ಸಾಧನೆಯನ್ನು, ನಮ್ಮ ಸಮಾಜದ ಶಿಕ್ಷಣ ತಜ್ಞರು, ರಾಜಕಾರಣಿಗಳು, ಅಧಿಕಾರಿಗಳು ಮತ್ತು ವಿದ್ಯಾಸಂಸ್ಥೆಗಳ ಮಾಲೀಕರು ತುರ್ತಾಗಿ ಚರ್ಚಿಸಬೇಕಾದ ಅಗತ್ಯವಿದೆ.  

60ರ ದಶಕದ ಕಾಲಘಟ್ಟವನ್ನು ಮರುಸೃಷ್ಟಿಸಿ:

ಈ ಮೇಲೆ ಪ್ರಸ್ತಾಪಿಸಿದ ವಿಚಾರ, ನೆಹರೂ ಕಾಲದಿಂದಲೂ ನಮ್ಮ ಪ್ರಧಾನ ಮಂತ್ರಿಗಳ ಗಮನ ಸೆಳೆಯಲಿಲ್ಲ. 1962ರ ತನ್ನ ಅಮೇರಿಕಾ ಭೇಟಿಯ ಸಂದರ್ಭದಲ್ಲಿ, ಸಂಶೋಧನೆ ಪೂರ್ಣಗೊಳಿಸುತ್ತಿರುವ ಅನಿವಾಸಿ ಭಾರತೀಯರಿಗೆ, ನಮ್ಮ ರಾಷ್ಟ್ರ ಪಿತಾಮಹರು ಬಯಸಿದ ಭಾರತವನ್ನು ರಚಿಸುವಲ್ಲಿ ಕೈಜೋಡಿಸಲು ಭಾರತಕ್ಕೆ ಮರಳಿ ಬರುವಂತೆ ನೆಹರೂ ಕರೆಕೊಟ್ಟಿದ್ದರು. ಅಂದರೆ, ಹಳ್ಳಿಯ ಬಡಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ರಕ್ಷಣೆ, ಪೌಷ್ಟಿಕಾಂಶ ಪೂರೈಕೆ ಮತ್ತು ಆಶ್ರಯ ಕಲ್ಪಿಸುವ ಭಾರತ ಕಟ್ಟುವ ಆಶಯ ಅದಾಗಿತ್ತು. ನೆಹರೂವಿನ ಈ ಕರೆಯ ಪರಿಣಾಮ; ಭಾರತದಲ್ಲಿ ಅಭಿವೃದ್ಧಿ ಶಕೆಗೆ ಮುನ್ನುಡಿ ಬರೆದ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ಪರಮಾಣು ಶಕ್ತಿಯ ಪ್ರಗತಿ ಮತ್ತು ಬಾಹ್ಯಾಕಾಶ ಕಾರ್ಯಕ್ರಮ. ಈ ಹಿನ್ನೆಲೆಯಲ್ಲಿ, ನಾವೀಗ ಅರವತ್ತರ ದಶಕದ ಕಾಲಘಟ್ಟವನ್ನು ಮರುಸೃಷ್ಟಿಸಬೇಕಾಗಿದೆ.

ಆ ಕಾಲಘಟ್ಟವನ್ನು ನಾವು ಹೇಗೆ ಮರುಸೃಷ್ಟಿಸಬಹುದು? ಅದಕ್ಕಾಗಿ ನಾವು ಸರ್ಕಾರದ ವ್ಯಾಪ್ತಿಯಲ್ಲಿ ಅಧಿಕಾರಶಾಹಿಗಳು, ರಾಜಕಾರಣಿಗಳು ಮತ್ತು ನಮ್ಮ ಸಮಾಜ, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಮತ್ತು ಅಧ್ಯಾಪಕರಿಗೆ ಅತ್ಯಂತ ಗೌರವದ ವಾತಾವರಣವನ್ನು ನಿರ್ಮಿಸುವ ಮೂಲಕ ಮರುಸೃಷ್ಟಿಸಬೇಕಾಗಿದೆ. ಇದರೊಂದಿಗೆ, ವಿದೇಶಿ ಬುದ್ಧಿಜೀವಿಗಳು ಮತ್ತು ವಿದ್ಯಾರ್ಥಿಗಳನ್ನು ಸ್ವಾಗತಿಸುವಲ್ಲಿ ನಾವು ಹೆಚ್ಚು ಮುಕ್ತ ಮನಸ್ಸಿನವರಾಗಬೇಕು. ಅಲ್ಲದೆ, ನಮ್ಮ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ವಿದೇಶದಲ್ಲಿರುವ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಜ್ಞಾನಾರ್ಜನೆಗೆ ಅವಕಾಶಗಳನ್ನು ಸೃಷ್ಟಿಸಬೇಕಿದೆ. ಜೊತೆಗೆ, ನಮ್ಮ ಬುದ್ಧಿಜೀವಿಗಳು ಮತ್ತು ವಿದೇಶಿ ವಿದ್ವಾಂಸರ ನಡುವೆ ಮುಕ್ತ ವಿಚಾರವಿನಿಮಯ ನಡೆಯುತ್ತಿರಬೇಕು. ವಿಶೇಷವಾಗಿ, ಕಿರಿಯ ಅಧ್ಯಾಪಕರಿಗೆ ಯಾವುದೇ ಅಡೆತಡೆಯಿಲ್ಲದೆ ತಮ್ಮ ಸಂಶೋಧನಾ ಮಾರ್ಗವನ್ನು ಮುಂದುವರಿಸಲು ಸಂಪೂರ್ಣ ಸ್ವಾತಂತ್ರ್ಯ ಇರಬೇಕು.

ಬಹಳ ಮುಖ್ಯವಾಗಿ, ಉತ್ತಮ ಸಂಶೋಧನೆಯತ್ತ ಗಮನಹರಿಸದ ಹೊರತು ಯಾವುದೇ ಉನ್ನತ ಶಿಕ್ಷಣ ಸಂಸ್ಥೆ ಯಶಸ್ವಿಯಾಗಲು ಸಾಧ್ಯವಿಲ್ಲ. ಕುತೂಹಲ, ಧೈರ್ಯ, ಸಾಮೂಹಿಕ ಕೆಲಸ ಮತ್ತು ನಮ್ಮ ಸುತ್ತಲಿನ ಸಮಸ್ಯೆಯನ್ನು ಪರಿಹರಿಸುವ ಇಚ್ಚಾಶಕ್ತಿಯ ವಾತಾವರಣವಿದ್ದಲ್ಲಿ ಮಾತ್ರ ಸಂಶೋಧನೆ ಬೆಳೆಯುತ್ತದೆ. ಸ್ವತಂತ್ರವಾಗಿ ಸಮಸ್ಯೆಗಳನ್ನು ವ್ಯಾಖ್ಯಾನಿಸುವ ಸಾಮಥ್ರ್ಯ, ಸಂಶೋಧನಾ ವಿದ್ಯಾರ್ಥಿಗಳಲ್ಲಿ ಅತ್ಯಗತ್ಯ. ನಮ್ಮ ಪದವಿಪೂರ್ವ ವಿದ್ಯಾರ್ಥಿಗಳನ್ನು ಸಹ ಸಂಶೋಧನೆಗೆ ಒಡ್ಡಿಕೊಳ್ಳುವುದು ಒಳ್ಳೆಯದು. ಈ ಎಲ್ಲಾ ಕ್ರಮಗಳೊಂದಿಗೆ, ಜಾಗತಿಕ ಮಟ್ಟದಲ್ಲಿ ಸಂಶೋಧಕರೊಂದಿಗೆ ಮಾತುಕತೆ, ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಿಗೆ ಹಾಜರಾಗುವುದು ಮತ್ತು ಆಯೋಜಿಸುವುದು, ಸಂಶೋಧನಾ ಪ್ರವೃತ್ತಿಯನ್ನು ಹೆಚ್ಚಿಸುತ್ತದೆ.

ಈಗ ನಾನು, ಇಂದು ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಾದ ನೀವು, ಭಾರತೀಯ ವಿಜ್ಞಾನ ಸಂಸ್ಥೆಯ ವೈಭವವನ್ನು ಹೆಚ್ಚಿಸಲು, ಅದರೊಂದಿಗೆ ಶ್ರೇಷ್ಠ ಇಂಜಿನಿಯರ್‍ಗಳು ಮತ್ತು ವಿಜ್ಞಾನಿಗಳಾಗಲು, ಹಾಗು ಈ ದೇಶವನ್ನು ಅಭಿವೃದ್ಧಿಗೊಳಿಸಲು ಏನು ಮಾಡಬಹುದು ಎಂದು ಹೇಳುತ್ತೇನೆ.

ನಿಮ್ಮ ಸುತ್ತಲಿನ ವಿಚಾರಗಳು, ನಿಜ ಜೀವನದ ಘಟನೆಗಳು ಮತ್ತು ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು, ನೀವು ತರಗತಿಯಲ್ಲಿ ಕಲಿಯುವ ಪರಿಕಲ್ಪನೆಗಳಿಗೆ ತುಲನಾತ್ಮಕವಾಗಿ ಜೋಡಿಸಿ ವಿಶ್ಲೇಷಿಸುವ ಅಗತ್ಯವಿದೆ.

ಈ ನಿಟ್ಟಿನಲ್ಲಿ ಮೊದಲನೆಯದಾಗಿ, ನೀವು ಸ್ವತಂತ್ರ ಜಿಜ್ಞಾಸೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು ಅವಶ್ಯವಾಗಿದೆ. ಇಂತಹ ಮನಸ್ಸುಗಳು ಮಾತ್ರ ಹೊಸ ಆಲೋಚನೆಗಳನ್ನು ಸೃಷ್ಟಿಸುತ್ತವೆ. ಈಗ, ಸ್ವಲ್ಪ ಕಲಿಕೆಯ ವಿವಿಧ ಪರಿಕಲ್ಪನೆಗಳತ್ತ ಗಮನಹರಿಸೋಣ. ಕಲಿಕೆ ಎಂದರೇನು? ನನ್ನ ಪ್ರಕಾರ, ಕಲಿಕೆಯೆಂದರೆ, ನಿರ್ದಿಷ್ಟ ನಿದರ್ಶನಗಳಿಂದ ಸಾಮಾನ್ಯ ಅನುಮಾನಗಳನ್ನು ಹೊರತೆಗೆಯುವ ಸಾಮಥ್ರ್ಯ. ಇನ್ನೂ ಮುಂದುವರಿದು, ಹೊಸ ಅಸ್ಪಷ್ಟ ಸಮಸ್ಯೆಗಳನ್ನು ಪರಿಹರಿಸಲು ನೀವು ಅವುಗಳನ್ನು ಬಳಸುವುದು. ಏಕೆಂದರೆ, ಶಿಕ್ಷಣದ ಮುಖ್ಯ ಉದ್ದೇಶ ಕಲಿಕೆ. ನಿಮ್ಮ ಸುತ್ತಲಿನ ವಿಚಾರಗಳು, ನಿಜ ಜೀವನದ ಘಟನೆಗಳು ಮತ್ತು ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು, ನೀವು ತರಗತಿಯಲ್ಲಿ ಕಲಿಯುವ ಪರಿಕಲ್ಪನೆಗಳಿಗೆ ತುಲನಾತ್ಮಕವಾಗಿ ಜೋಡಿಸಿ ವಿಶ್ಲೇಷಿಸುವ ಅಗತ್ಯವಿದೆ. ನೀವು ಸ್ವತಂತ್ರವಾಗಿ ಪರಿಹರಿಸುವ ಪ್ರತಿಯೊಂದು ಸಮಸ್ಯೆ, ನಿಮ್ಮ ಒಂದು ಸಣ್ಣ ಹೊಸ ಆವಿಷ್ಕಾರವಾಗಿದೆ ಎಂಬುದನ್ನು ನೆನಪಿಡಿ. ಅವು, ನಿಮ್ಮ ದೊಡ್ಡ ಸಮಸ್ಯೆಗಳನ್ನು ಪರಿಹರಿಸಬೇಕಾದ ಸಂದರ್ಭದಲ್ಲಿ ಆತ್ಮವಿಶ್ವಾಸವನ್ನು ತುಂಬಿಸುತ್ತವೆ.

ಎರಡನೆಯದಾಗಿ, ಅಭಿವೃದ್ಧಿಯ ಪಥದಲ್ಲಿ ಶಿಕ್ಷಣದ ಪ್ರಜಾಪ್ರಭುತ್ವೀಕರಣವು ಅಗತ್ಯವಾದ ಹೆಜ್ಜೆಯಾಗಿದೆ. ಈ ದೆಸೆಯಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆಯ ಬದ್ಧತೆಯನ್ನು ನಾನು ಅಭಿನಂದಿಸುತ್ತೇನೆ. ಆದಾಗ್ಯೂ, ಈ ಸಂಸ್ಥೆ ಪ್ರತಿ ತರಗತಿಯ ಶ್ರೇಷ್ಠ ವಿದ್ಯಾರ್ಥಿಗಳ ಆಸಕ್ತಿ ಮತ್ತು ಉತ್ಸಾಹವನ್ನು ಕಡಿಮೆಗೊಳಿಸುವುದಿಲ್ಲ ಎಂಬುದು ಸಹ ಬಹಳ ಮುಖ್ಯ. ಅಮೆರಿಕಾದ ಅನೇಕ ವಿಶ್ವವಿದ್ಯಾಲಯಗಳು ಇದನ್ನು ದಕ್ಷತೆಯಿಂದ ನಿರ್ವಹಿಸುವ ಉತ್ತಮ ವ್ಯವಸ್ಥೆಯನ್ನು ಹೊಂದಿವೆ. ಉದಾಹರಣೆಗೆ, ಅಂತಹ ಸಂಸ್ಥೆಗಳಲ್ಲಿ, ಕಂಪ್ಯೂಟರ್ ಸೈನ್ಸ್‍ನ ಮೊದಲ 10% ರಿಂದ 15% ಸೀಟುಗಳನ್ನು ಆಪರೇಟಿಂಗ್ ಸಿಸ್ಟಮ್ಸ್, ಅಲ್ಗಾರಿದಮ್ಸ್ ಮತ್ತು ಡೇಟಾ ಸ್ಟ್ರಕ್ಚರ್ಸ್, ಆಟೊಮ್ಯಾಟ್ ಥಿಯರಿ, ಡೇಟಾಬೇಸ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಂತಹ ಪ್ರಮುಖ ವಿಷಯಗಳ ಆಯ್ಕೆಗಾಗಿ ಮೀಸಲಿಡಲಾಗಿದೆ. ಸಾಮಾನ್ಯ ಆವೃತ್ತಿಯ ಪಠ್ಯಕ್ರಮದ ಸುಮಾರು ಎರಡು ಮೂರು ಪಟ್ಟು ಕಠಿಣ ಪಠ್ಯಕ್ರಮವನ್ನು ವಿಶೇಷ ಆವೃತ್ತಿಯ ತರಗತಿಯಲ್ಲಿ ಅಳವಡಿಸಲಾಗಿದೆ ಮತ್ತು ಅವುಗಳಿಗೆ ಪರೀಕ್ಷೆಗಳನ್ನು ಅತ್ಯಂತ ಸ್ಪರ್ದಾತ್ಮಕವಾಗಿ ನೀಡಲಾಗುತ್ತದೆ.

ನೀವು, ನಿಮ್ಮ ಪದವಿ ಮುಗಿದ ನಂತರವೂ ತಾಂತ್ರಿಕ ಪುಸ್ತಕಗಳು ಮತ್ತು ನಿಯತಕಾಲಿಕಗಳನ್ನು ಓದುವ ಅಭ್ಯಾಸವನ್ನು ಮುಂದುವರಿಸಬೇಕು. ಜಾರ್ಜ್ ಪೊಲ್ಯ ಅವರ ‘ಹೌ ಟು ಸಾಲ್ವ್ ಇಟ್’, ವಿಜೆ ಅರ್ನಾಲ್ಡ್ ಅವರ ‘ಮ್ಯಾಥಮೆಟಿಕಲ್ ಅಂಡರ್‍ಸ್ಟಾಂಡಿಂಗ್ ಆಫ್ ನೇಚರ್: ಎಸ್ಸೆ ಆನ್ ಅಮೇಜಿಂಗ್ ಫಿಸಿಕಲ್ ಫಿನೋಮಿನನ್ ಅಂಡ್ ದೆಯರ್ ಅಂಡರ್‍ಸ್ಟಾಂಡಿಂಗ್ ಬೈ ಮ್ಯಾಥೆಮ್ಯಾಟಿಶಿಯನ್’, ಫೆಯಿನ್‍ಮ್ಯಾನ್‍ನ ಮೂರು ಸಂಪುಟಗಳು ಮತ್ತು ಪ್ರೋಗ್ರಾಮಿಂಗ್ ಕುರಿತು ಡೊನಾಲ್ಡ್ ನುತ್ ಅವರ ನಾಲ್ಕು ಸಂಪುಟಗಳಂತಹ ಪುಸ್ತಕಗಳ ಗ್ರಂಥಾಲಯವನ್ನು ನಾನು ಮಾಡಿಕೊಂಡಿದ್ದೇನೆ. ಹಾಗಾಗಿ, ದಯವಿಟ್ಟು ನಿಮ್ಮ ಸ್ವಂತ ಗ್ರಂಥಾಲಯವನ್ನು ರಚಿಸಿ. ಪ್ರತಿದಿನ ಕನಿಷ್ಠ ಕೆಲವು ಪುಟಗಳನ್ನು ಓದಿ, ಚಿಂತನೆಯ ಪ್ರಯೋಗ ಮಾಡಿ ಮತ್ತು ನಿಮ್ಮ ಸುತ್ತಲಿನ ಸಮಸ್ಯೆಯನ್ನು ಪರಿಹರಿಸಲು ಆ ಕಲಿಕೆಯನ್ನು ಅನ್ವಯಿಸಿ.

ಯಾವುದೇ ಒಂದು ವಿಷಯದ ಬಗ್ಗೆ ನಿಮ್ಮ ತಿಳುವಳಿಕೆಯ ಮಟ್ಟವನ್ನು ಗುರುತಿಸಲು ಪರೀಕ್ಷೆಗಳು ಮುಖ್ಯ. ಆದರೆ, ಪರೀಕ್ಷೆಯ ಮೇಲಿನ ಅತಿಹೆಚ್ಚಿನ ಗಮನವು, ಯಾವುದೇ ಜ್ಞಾನದ ಆಳವಾದ ಮತ್ತು ದೀರ್ಘಕಾಲೀನ ಪ್ರಯೋಜನಗಳನ್ನು ಕಡಿಮೆ ಮಾಡುತ್ತದೆ. ಹೀಗೆ ಮಾಡಿದ ವಿದ್ಯಾರ್ಥಿಗಳು ಪರೀಕ್ಷೆಯ ನಂತರ ತಾವು ಕಲಿತ ವಿಷಯದ ಮೂಲಭೂತ ಅಂಶಗಳನ್ನು ಸಹ ಮರೆತುಬಿಡುತ್ತಾರೆ ಎಂಬುವುದನ್ನು, ನನ್ನ ದೇಶದ ಯುವಕರೊಂದಿಗಿನ ಸಂವಾದದಲ್ಲಿ ಗಮನಿಸಿದ್ದೇನೆ. ನಿಮ್ಮ ಜ್ಞಾನದ ಅರಿವು ಜೀವನದುದ್ದಕ್ಕೂ ನಿಮ್ಮೊಂದಿಗೆ ಇರಬೇಕಾಗುತ್ತದೆ. ಸಾಧ್ಯವಾದಷ್ಟು ಬಾರಿ ಅವುಗಳನ್ನು ನೀವು ಜೀವನದಲ್ಲಿ ಅನ್ವಯಿಸಬೇಕು, ಅವುಗಳನ್ನು ಸಮಕಾಲೀನ ಪ್ರಗತಿಯೊಂದಿಗೆ ನವೀಕರಿಸುತ್ತಾ ಇರಬೇಕು, ಹಾಗು ಅವುಗಳನ್ನು, ಹೊಸ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ನಿಮ್ಮ ದೈನಂದಿನ ಜೀವನದಲ್ಲಿ ಬಳಸಿಕೊಳ್ಳಬೇಕು.

ಯಾವುದೇ ಸಂಸ್ಥೆಯಲ್ಲಿ ಕೆಲಸಮಾಡುವ ಪ್ರತಿಯೊಬ್ಬ, ಎಲ್ಲರಿಗೂ ಸಮಾನ. ಅಲ್ಲಿ, ಮೇಲೆ ಕೆಳಗೆ ಎನ್ನುವ ಬೇಧ ಭಾವವಿರುವುದಿಲ್ಲ. ಅಲ್ಲಿ, ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ಆತ್ಮವಿಶ್ವಾಸ ಮತ್ತು ಉತ್ಸಾಹ ಹೊರಹೊಮ್ಮಿಸುತ್ತಾರೆ.

ನಮ್ಮ ಸ್ವಸಾಮಥ್ರ್ಯವನ್ನು ವೃತ್ತಿಪರತೆಯೊಂದಿಗೆ ಸಂಯೋಜಿಸಿದರೆ ಮಾತ್ರ, ರಾಷ್ಟ್ರಕ್ಕೆ ಉಪಯುಕ್ತ ಕೊಡುಗೆ ಸಾಧ್ಯ. ಒಬ್ಬ ಉತ್ತಮ ವೃತ್ತಿಪರ ತನ್ನ ವೃತ್ತಿಗೆ ಸಮರ್ಪಿತನಾಗಿ ಅದರ ನೀತಿಗಳಿಗೆ ಅನುಸಾರವಾಗಿ ಜೀವಿಸುತ್ತಾನೆ. ಅಲ್ಲದೆ, ವೈಯಕ್ತಿಕ ಸಂಬಂಧಗಳು ಅವನ ವೃತ್ತಿ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಲು ಬಿಡುವುದಿಲ್ಲ. ಅವನು ನ್ಯಾಯಸಮ್ಮತವಾಗಿರುತ್ತಾನೆ, ಹೊರತಾಗಿ ಪಕ್ಷಪಾತಿಯಾಗಿರುವುದಿಲ್ಲ.  ಸಾಕ್ಷ್ಯಪ್ರಮಾಣದ ಆಧಾರದ ಮೇಲಷ್ಟೇ ಅವನು ವಸ್ತುನಿಷ್ಠ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ. ಯಾವುದೇ ಸಂಸ್ಥೆಯಲ್ಲಿ ಕೆಲಸಮಾಡುವ ಪ್ರತಿಯೊಬ್ಬ, ಎಲ್ಲರಿಗೂ ಸಮಾನ. ಅಲ್ಲಿ, ಮೇಲೆ ಕೆಳಗೆ ಎನ್ನುವ ಬೇಧ ಭಾವವಿರುವುದಿಲ್ಲ. ಅಲ್ಲಿ, ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ಆತ್ಮವಿಶ್ವಾಸ ಮತ್ತು ಉತ್ಸಾಹ ಹೊರಹೊಮ್ಮಿಸುತ್ತಾರೆ. ನಮ್ಮ ಸಮಾಜದ ಮುಂದಿನ ಪೀಳಿಗೆಯ ಜೀವನವನ್ನು ಉತ್ತಮಗೊಳಿಸಲು ಅಗತ್ಯವಿರುವ ಎಲ್ಲ ತ್ಯಾಗಗಳನ್ನು ಮಾಡುತ್ತಾರೆ.

ಇಂದಿನ ವಿದ್ಯಾರ್ಥಿಗೆ ಹೆಚ್ಚಿನ ಮಹತ್ವಾಕಾಂಕ್ಷೆಗಳಿವೆ. ಅವನು ಈ ಲೋಕೋಕ್ತಿಯನ್ನು ನಂಬುತ್ತಾನೆ. ‘ಸುಲಭವಾಗಿ ಒಪ್ಪಿಕೊಳ್ಳಬಹುದಾದ ಸಾಧ್ಯತೆಗಿಂತ, ಮೇಲ್ನೋಟಕ್ಕೆ ಅಸಾಧ್ಯವೆನಿಸಿದ್ದನ್ನು ಮಾಡುವುದು ಹೆಚ್ಚು ಶ್ರೇಷ್ಠ’. ಅವನಿಗೆ, ತನ್ನ ಬುದ್ಧಿಶಕ್ತಿ, ಜ್ಞಾನ ಮತ್ತು ಜೀವನಮೌಲ್ಯಗಳು ಅತ್ಯಂತ ಶಕ್ತಿಶಾಲಿ ಸಂಪನ್ಮೂಲಗಳು. ಮಾತ್ರವಲ್ಲ, ಅವನು ನಿರಂತರವಾಗಿ ಹೊಸ ಜ್ಞಾನವನ್ನು ಪಡೆಯುತ್ತಾ, ತನ್ನ ಬುದ್ಧಿಶಕ್ತಿಯನ್ನು ತೀಕ್ಷ್ಣವಾಗಿರಿಸಿಕೊಳ್ಳುತ್ತಾನೆ, ಮತ್ತದಕ್ಕೆ ಅನುಗುಣವಾಗಿ ಬದುಕುತ್ತಾನೆ.

ಇನ್ನೂ ಮುಂದುವರಿದು, ಒಬ್ಬ ವೃತ್ತಿಪರ ವ್ಯಕ್ತಿ ತಾನು ಶ್ರೇಷ್ಠನಾಗಿದ್ದರೂ, ತಂಡದೊಂದಿಗೆ ತನ್ನನ್ನು  ಸಂಪೂರ್ಣ ತೊಡಗಿಸಿಕೊಂಡು ಕೆಲಸ ಮಾಡುತ್ತಾನೆ. ನನ್ನ ಪ್ರಕಾರ, ಉತ್ತಮ ಸಮೂಹ ಕೆಲಸಕ್ಕೆ ಉದಾಹರಣೆಯೆಂದರೆ ಸಿಂಫನಿ ಆರ್ಕೆಸ್ಟ್ರಾ, ಅಲ್ಲಿ, ನಿರ್ದೇಶನದ ಮೇರೆಗೆ ಅದ್ಬುತ ಸಂಗೀತ ತಯಾರಿಸಲು ಹಲವಾರು ಶ್ರೇಷ್ಠ ಸಂಗೀತಗಾರರು ಸಾಮರಸ್ಯದಿಂದ ಕೆಲಸ ಮಾಡುತ್ತಾರೆ. ವಿಶೇಷವಾಗಿ, ಇಂದಿನ ಜಗತ್ತಿನಲ್ಲಿ ಇದು ಅತ್ಯಗತ್ಯವಾಗಿದೆ. ಬೃಹತ್ ಸಂಕೀರ್ಣ ಯೋಜನೆಗಳನ್ನು ಅತ್ಯುತ್ತಮ ಸಾಮೂಹಿಕ ಪ್ರಯತ್ನದ ಮೂಲಕ ಕಾರ್ಯಗತಗೊಳಿಸಬೇಕಾಗಿದೆ.

ನಿಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಯಶಸ್ವಿಯಾಗಬಹುದು ಎಂಬುದನ್ನು ನೆನಪಿಡಿ. ನಿಮ್ಮ ಆಗಮನದಿಂದ ಜನರ ಮುಖದಲ್ಲಿ ಮೂಡುವ ಮಂದಹಾಸವೆ, ನಿಮ್ಮ ಸಾಮಥ್ರ್ಯದ ಯಶಸ್ಸು. ಜನರು ನಿಮ್ಮನ್ನು ನೋಡಿ ಕಿರುನಗೆ ಬೀರುವುದು, ನೀವು ಬುದ್ಧಿವಂತರು, ಶಕ್ತಿಯುತರು ಅಥವಾ ಶ್ರೀಮಂತರು ಎಂಬ ಕಾರಣದಿಂದ ಅಲ್ಲ, ಬದಲಾಗಿ ನೀವು ತೋರಿಸುವ ಕಾಳಜಿಯಿಂದ. ನಿಮ್ಮ ಜೀವನವನ್ನು ಯಶಸ್ವಿಗೊಳಿಸಲು ನಿಮ್ಮೆಲ್ಲಾ ಸಾಮಥ್ರ್ಯಗಳನ್ನು ಬಳಸಿರಿ.

ಯಾವಾಗಲೂ ಸಂತೋಷವಾಗಿರಿ. ಏಕೆಂದರೆ, ಸಂತೋಷವಾಗಿರುವ ಮನಸ್ಸು ಮಾತ್ರ ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡುತ್ತದೆ.

ಕೊನೆಯದಾಗಿ, ನಿಮಗೆ ಅರಿವಿನ ಬದುಕು ನಿರೂಪಿಸಿದ ಈ ವಿಜ್ಞಾನಸಂಸ್ಥೆ ಹೆಮ್ಮೆಪಡುವಂತಹ ಜೀವನವನ್ನು ನಡೆಸಿ. ಇಲ್ಲಿಯವರೆಗೆ ನಿಮ್ಮನ್ನು ಪೋಷಿಸಿ ಬೆಳೆಸಿದ ನಿಮ್ಮ ಪೋಷಕರು ಮತ್ತು ಶಿಕ್ಷಕರಿಗೆ ದಯವಿಟ್ಟು ಕೃತಜ್ಞತೆ ತೋರಿಸಿ. ನಿಮಗೆ ದೇವರ ಕೃಪೆ ಇರಲಿ.

ಧನ್ಯವಾದಗಳು.

3. 2007

ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ, ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್‍ನಲ್ಲಿ…

ಮಾನ್ಯ ಡೀನ್ ಕೂಲೆ, ಅಧ್ಯಾಪಕ ವೃಂದ, ಸಿಬ್ಬಂದಿವರ್ಗ, ವಿಶೇಷ ಅತಿಥಿಗಳು, ಮತ್ತು ಮುಖ್ಯವಾಗಿ, 2007ರಲ್ಲಿ ಪದವಿ ಪಡೆಯಲಿರುವ ವಿದ್ಯಾರ್ಥಿಗಳೇ, ಈ ವರ್ಷದ ತರಗತಿಗಳ ಉದ್ಘಾಟನಾ  ಸಮಾರಂಭದಲ್ಲಿ  ನಿಮ್ಮನ್ನು ಉದ್ದೇಶಿಸಿ ಮಾತನಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ.

ಮೊದಲಿಗೆ, ಈ ಆಹ್ವಾನಕ್ಕಾಗಿ ಡೀನ್ ಕೂಲೆ ಮತ್ತು ಪ್ರೊಫೆಸರ್ ಮಾರ್ಟಿ ಸುಬ್ರಹ್ಮಣ್ಯಂ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಇಂತಹ ಸಂತೋಷದಾಯಕ ಸಮಾರಂಭದಲ್ಲಿ ಭಾಗವಹಿಸುತ್ತಿರುವುದಕ್ಕೆ ನನಗೆ ಬಹಳ ಹರ್ಷವಾಗಿದೆ. ನಿಮ್ಮ ಜೀವನ ಪ್ರಯಾಣದ ಒಂದು ಪ್ರಮುಖ ಮೈಲಿಗಲ್ಲನ್ನು ಪೂರ್ಣಗೊಳಿಸಲಿರುವ 2007 ರ ವರ್ಗದ ವಿದ್ಯಾರ್ಥಿಗಳಿಗೆ ನನ್ನ ಅಭಿನಂದನೆಗಳು.

ದೀರ್ಘ ಆಲೋಚನೆಯ ನಂತರ, ನನ್ನ ಕೆಲವು ಜೀವನಪಾಠಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದ್ದೇನೆ. ನಾನು ಈ ಪಾಠಗಳನ್ನು, ನನ್ನ ವೃತ್ತಿಜೀವನದ ಆರಂಭಿಕ ಹೋರಾಟದ ದಿನಗಳಲ್ಲಿ ಕಲಿತಿದ್ದೇನೆ. ಈ ಕೆಲವು ಆಕಸ್ಮಿಕ ಘಟನೆಗಳ ಪ್ರಭಾವದಿಂದ ನನ್ನ ವ್ಯಕ್ತಿತ್ವ ಪಕ್ವಗೊಂಡು, ಭವಿಷ್ಯವನ್ನು ಮರುರೂಪಿಸಿದ ದ್ಯೋತಕಗಳಾಗಿವೆ.

ಆರಂಭದಲ್ಲಿ, ನನ್ನ ಜೀವನದ ಮರೆಯಲಾರದ ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಇವು ಕೇವಲ ನನ್ನ ಜೀವನ ಹೋರಾಟ ಮಾತ್ರವಲ್ಲ, ಈ ಘಟನೆಗಳು ದೊರಕಿಸಿದ ಅವಕಾಶಗಳು ಮತ್ತು ಕೆಲವು ಪ್ರಭಾವಿ ವ್ಯಕ್ತಿಗಳೊಂದಿಗಿನ ಆಕಸ್ಮಿಕ ಮುಖಾಮುಖಿಗಳು ನನ್ನ ವೃತ್ತಿಜೀವನವನ್ನು ಹೇಗೆ ರೂಪಿಸಿದವು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡಿವೆ.

ಆಮೇಲೆ, ಈ ಘಟನೆಗಳು ನನಗೆ ಕಲಿಸಿದ ಜೀವನ ಪಾಠಗಳನ್ನು ಹಂಚಿಕೊಳ್ಳುತ್ತೇನೆ. ಈ ವಿಚಾರ ಹಂಚಿಕೆಯು, ನಿಮ್ಮ ಸ್ವಂತ ಅಗ್ನಿಪರೀಕ್ಷೆಗಳು, ಕ್ಲೇಶಗಳು ಮತ್ತು ಅವುಗಳನ್ನು ಹೇಗೆ ಗುಣಾತ್ಮಕವಾಗಿ ನೋಡಬಹುದು ಎಂದು ಪರಿಶೀಲಿಸಲು ಸಹಾಯ ಮಾಡಬಹುದು ಎನ್ನುವುದು ನನ್ನ ಪ್ರಾಮಾಣಿಕ ಆಶಯ.

ಮೊದಲ ಘಟನೆ, ನಾನು ಭಾರತದ ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಕಂಟ್ರೋಲ್ ಥಿಯರಿಯಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಂಭವಿಸಿತು. 1968ರ ಒಂದು ಸುಂದರ ಭಾನುವಾರ ಬೆಳಿಗ್ಗೆ ಉಪಾಹಾರ ಮಾಡುತ್ತಿದ್ದಾಗ, ಅಮೆರಿಕಾದ ಪ್ರಸಿದ್ಧ ವಿಶ್ವವಿದ್ಯಾನಿಲಯದ ಒಬ್ಬ ಮಹಾನ್ ಕಂಪ್ಯೂಟರ್ ವಿಜ್ಞಾನಿಯೊಂದಿಗೆ ಭೇಟಿಯಾಗುವ ಅವಕಾಶ ಸಿಕ್ಕಿತು.

ಅವರು, ವಿದ್ಯಾರ್ಥಿಗಳೊಂದಿಗೆ ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿನ ಹೊಸ ಬೆಳವಣಿಗೆಗಳು ಮತ್ತು ಈ ಬೆಳವಣಿಗೆಗಳು ನಮ್ಮ ಭವಿಷ್ಯವನ್ನು ಹೇಗೆ ಬದಲಾಯಿಸುತ್ತವೆ ಎಂಬುವುದನ್ನು ಚರ್ಚಿಸುತ್ತಿದ್ದರು.  ಅವರ ಮಾತಿನಲ್ಲಿ ಸಾಕಷ್ಟು ಸ್ಪಷ್ಟತೆ, ಭಾವೋದ್ರೇಕತೆ ಮತ್ತು ವಿಶ್ವಾಸವಿತ್ತು. ನಾನು ಅವರ ಮಾತಿನ ಮೋಡಿಗೆ ಆಕರ್ಷಿತನಾಗಿ ತಕ್ಷಣ ಉಪಾಹಾರಗೃಹದಿಂದ ನೇರವಾಗಿ ಗ್ರಂಥಾಲಯಕ್ಕೆ ಹೋಗಿ, ಅವರು ಸೂಚಿಸಿದ ನಾಲ್ಕೈದು ಲೇಖನಗಳನ್ನು ಓದಿದೆ. ಆ ದಿವಸವೇ, ಭವಿಷ್ಯದಲ್ಲಿ ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡಬೇಕೆಂದು ನಿರ್ಧರಿಸಿ ಗ್ರಂಥಾಲಯದಿಂದ ಹೊರಬಂದೆ. 

ಕೆಲವೊಮ್ಮೆ, ಅಮೂಲ್ಯವಾದ ಸಲಹೆ ಒಂದು ಅನಿರೀಕ್ಷಿತ ಮೂಲದಿಂದ ಬರಬಹುದು ಮತ್ತು ಕೆಲವೊಮ್ಮೆ ಆಕಸ್ಮಿಕ ಘಟನೆಗಳು ಹೊಸ ಬಾಗಿಲುಗಳನ್ನು ತೆರೆಯಬಹುದೆಂದು ಈ ಅನುಭವ ನನಗೆ ಕಲಿಸಿದೆ.

ಸ್ನೇಹಿತರೇ, ನಾನಿಂದು ಹಿಂತಿರುಗಿ ನೋಡಿದಾಗ, ಒಬ್ಬ ಆದರ್ಶ ವ್ಯಕ್ತಿ, ಯುವ ವಿದ್ಯಾರ್ಥಿಯ ಭವಿಷ್ಯವನ್ನು ಹೇಗೆ ಬದಲಾಯಿಸಬಹುದು ಎಂದು ಗಮನಿಸಿದರೆ ಅಚ್ಚರಿಯಾಗುತ್ತದೆ. ಕೆಲವೊಮ್ಮೆ, ಅಮೂಲ್ಯವಾದ ಸಲಹೆ ಒಂದು ಅನಿರೀಕ್ಷಿತ ಮೂಲದಿಂದ ಬರಬಹುದು ಮತ್ತು ಕೆಲವೊಮ್ಮೆ ಆಕಸ್ಮಿಕ ಘಟನೆಗಳು ಹೊಸ ಬಾಗಿಲುಗಳನ್ನು ತೆರೆಯಬಹುದೆಂದು ಈ ಅನುಭವ ನನಗೆ ಕಲಿಸಿದೆ.

1974ರಲ್ಲಿ, ನನ್ನ ಮೇಲೆ ಅಳಿಸಲಾಗದ ಗುರುತು ಮೂಡಿಸಿದ ಇನ್ನೊಂದು ಘಟನೆ ಸಂಭವಿಸಿತು. ಇದು ನಡೆದದ್ದು ನಿಸ್ ಎಂಬ ಊರಿನಲ್ಲಿ. ಹಿಂದಿನ ಯುಗೊಸ್ಲಾವಿಯದಲ್ಲಿದೆ, ಆದರೆ ಈಗ ಅದು ಸೆರ್ಬಿಯಾ ಮತ್ತು ಬಲ್ಗೇರಿಯಾ ನಡುವಿನ ಗಡಿಪಟ್ಟಣ. ಆ ದಿನ ನಾನು ಪ್ಯಾರಿಸಿನಿಂದ ನನ್ನ ತವರೂರಾದ ಮೈಸೂರಿಗೆ ಹಿಂತಿರುಗುತ್ತಿದ್ದೆ.

ಸುಮಾರು ರಾತ್ರಿ 9ಗಂಟೆಗೆ, ಒಬ್ಬ ಸಹೃದಯಿ ವಾಹನಚಾಲಕ ನನ್ನನ್ನು ನಿಸ್ ರೈಲ್ವೆ ನಿಲ್ದಾಣದಲ್ಲಿ ಇಳಿಸಿದ. ಅದು ಶನಿವಾರ ರಾತ್ರಿಯಾದ್ದರಿಂದ ರೆಸ್ಟೋರೆಂಟ್‍ಗಳೆಲ್ಲಾ ಮುಚ್ಚಲಾಗಿತ್ತು. ಮರುದಿನ ಬ್ಯಾಂಕಿಗೆ ಕೂಡ ರಜೆಯಿತ್ತು. ಈ ಪರಿಸ್ಥಿತಿಯಲ್ಲಿ, ನನ್ನ ಬಳಿ ಸ್ಥಳೀಯ ಹಣವಿಲ್ಲದ ಕಾರಣ ಏನನ್ನೂ ತಿನ್ನಲು ಸಾಧ್ಯವಾಗಲಿಲ್ಲ. ನಾನು ರೈಲು ಬರುವವರೆಗೆ ಪ್ಲಾಟ್‍ಫಾರ್ಮ್‍ನಲ್ಲಿ ಸುಮ್ಮನೆ ಮಲಗಿದ್ದೆ.

ನನ್ನ ಬೋಗಿಯಲ್ಲಿದ್ದ ಪ್ರಯಾಣಿಕರೆಂದರೆ, ಒಂದು ಹುಡುಗಿ, ಮತ್ತೊಬ್ಬ ಹುಡುಗ ಮಾತ್ರ. ನಾನು ಆ ಹುಡುಗಿಯೊಂದಿಗೆ ಫ್ರೆಂಚ್ ಭಾಷೆಯಲ್ಲಿ ಸಂಭಾಷಣೆ ನಡೆಸಿದೆ. ಅವಳು ಫ್ರಾನ್ಸಿನಲ್ಲಿ ವಾಸಿಸುವ ಕಷ್ಟಗಳ ಬಗ್ಗೆ ಮಾತನಾಡಿದಳು, ಸ್ವಲ್ಪ ಹೊತ್ತಿನ ನಂತರ, ಕೆಲವು ಪೊಲೀಸರು ಬಂದು ನಮ್ಮನ್ನು ವಿಚಾರಣೆಗೆ ಒಳಪಡಿಸಿದರು. ಯಾಕೆಂದರೆ, ಆ ಇನ್ನೊಬ್ಬ ಯುವಕ, ನಾವು ಬಲ್ಗೇರಿಯಾದ ಕಮ್ಯುನಿಸ್ಟ್ ಸರ್ಕಾರವನ್ನು ಟೀಕಿಸುತ್ತಿದ್ದೇವೆಂದು ತಪ್ಪಾಗಿ ಭಾವಿಸಿ ಪೊಲೀಸರನ್ನು ಕರೆಸಿದ್ದ.

ತಕ್ಷಣ, ಆ ಹುಡುಗಿಯನ್ನು ಕರೆದೊಯ್ಯಲಾಯಿತು; ನನ್ನ ಬ್ಯಾಗುಗಳನ್ನು ಮುಟ್ಟುಗೋಲು ಹಾಕಲಾಯಿತು. ನನ್ನನ್ನು ಬೋಗಿಯುದ್ದಕ್ಕೂ ಎಳೆದೊಯ್ದು, ಶೌಚಾಲಯ ಸೌಲಭ್ಯಕ್ಕಾಗಿ ಮೂಲೆಯಲ್ಲೊಂದು ರಂಧ್ರವಿರುವ, ಕಲ್ಲಿನ ನೆಲದ 8×8 ಅಡಿಯ ಸಣ್ಣ ಕೋಣೆಯಲ್ಲಿ, ಕೊರೆಯುವ ಚಳಿಯಲ್ಲಿ ಕೂಡಿಹಾಕಲಾಯಿತು.  ನಾನು 72 ಗಂಟೆಗಳಿಗೂ ಹೆಚ್ಚುಕಾಲ ಆಹಾರ, ನೀರಿಲ್ಲದೆ ಆ ತಂಡಿಕೋಣೆಯಲ್ಲಿ ಬಂಧಿಸಲ್ಪಟ್ಟಿದ್ದೆ.

ಬಾಗಿಲು ತೆರೆಯುವ ಹೊತ್ತಿಗೆ, ಹೊರಗಿನ ಪ್ರಪಂಚವನ್ನು ಪುನಃ ನೋಡುವ ಎಲ್ಲ ಭರವಸೆಯನ್ನು ಕಳೆದುಕೊಂಡಿದ್ದೆ. ಮತ್ತೆ ನನ್ನನ್ನು ಹೊರಗೆ ಎಳೆದೊಯ್ದು, ಸರಕು ರೈಲಿನಲ್ಲಿ ಕಾವಲುಗಾರರ ವಿಭಾಗದಲ್ಲಿ ಬೀಗಹಾಕಿ ಕೂಡಿಹಾಕಲಾಯಿತು. ಇಸ್ತಾಂಬುಲ್ ತಲುಪಿದ 20 ಗಂಟೆಗಳ ನಂತರ ನನ್ನನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಆ ರೈಲಿನ ಕಾವಲುಗಾರನ ಕೊನೆಯ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಮೊಳಗುತ್ತಿವೆ – “ನೀವು ಭಾರತ ಎಂಬ ಸ್ನೇಹಪರ ದೇಶದಿಂದ ಬಂದಿದ್ದೀರಿ, ಅದಕ್ಕಾಗಿಯೇ ನಾವು ನಿಮ್ಮನ್ನು ಹೋಗಲು ಬಿಡುತ್ತಿದ್ದೇವೆ!”

ಇಸ್ತಾಂಬುಲಿಗೆ ತಲುಪುವ ರೈಲುಪ್ರಯಾಣ ದೀರ್ಘವಾಗಿತ್ತು ಮತ್ತು ನಾನು ತೀವ್ರ ಹಸಿವಿನಿಂದ ಬಳಲುತ್ತಿದ್ದೆ. ಈ ಸುದೀರ್ಘ, ಒಂಟಿ, ಮತ್ತು ಛಳಿಯ ಪ್ರಯಾಣವು ಕಮ್ಯುನಿಸಂ ಬಗ್ಗೆ, ನನಗಿದ್ದ ನಂಬಿಕೆಗಳನ್ನು ಆಳವಾಗಿ ಪುನರ್ವಿಮರ್ಶಿಸಲು ಒತ್ತಾಯಿಸಿತು. ಸತತ 108 ಗಂಟೆಗಳ ಕಾಲ ಹಸಿವಿನಿಂದ ಬಳಲಿದ ನಂತರ ಗುರುವಾರ ಮುಂಜಾನೆ, ನಾನು ಎಡಪಂಥೀಯರೊಂದಿಗಿನ ಸೈದ್ಧಾಂತಿಕ ಸಂಬಂಧವನ್ನು ಕೊನೆಯದಾಗಿ ಕಡಿದುಕೊಂಡೆ.

ಆ ಸಭೆಯಲ್ಲಿ, ಇನ್ಫೋಸಿಸ್ ಸಂಸ್ಥೆಯನ್ನು 1 ಮಿಲಿಯನ್ ಮೊತ್ತಕ್ಕೆ ಮಾರಾಟ ಮಾಡುವುದೆಂದು ಚರ್ಚಿಸಲಾಯಿತು. ಒಂಬತ್ತು ವರ್ಷಗಳ ಪರಿಶ್ರಮದ ನಂತರ, ಅಂದಿನ ವ್ಯಾಪಾರ ಸ್ನೇಹಿಯಲ್ಲದ ಭಾರತದಲ್ಲಿ ಸ್ವಲ್ಪ ಹಣವನ್ನಾದರೂ ನೋಡುವ ನಿರೀಕ್ಷೆಯಲ್ಲಿ, ಸಂತೋಷವಾಗಿಯೇ ನಾವು ಈ ತೀರ್ಮಾನಕ್ಕೆ ಬಂದಿದ್ದೆವು.

ಸಮಾಜದಲ್ಲಿನ ಬಡತನ ನಿರ್ಮೂಲನೆ ಮಾಡುವ ಏಕೈಕ ಕಾರ್ಯವಿಧಾನವೆಂದರೆ, ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಮಾಡುವ ಬೃಹತ್ ಉದ್ಯಮಶೀಲತೆ ಎಂದು ನನಗೆ ಮನವರಿಕೆಯಾಗಿದೆ. ಗೊಂದಲಕ್ಕೊಳಗಾದ ಎಡಪಂಥೀಯನಿಂದ ನನ್ನನ್ನು ದೃಡನಿಶ್ಚಯದ, ಆದರೆ ಸಹಾನುಭೂತಿಯ ಬಂಡವಾಳಶಾಹಿಯಾಗಿ ಪರಿವರ್ತಿಸಿದ್ದಕ್ಕಾಗಿ ಬಲ್ಗೇರಿಯದ ರೈಲು ಕಾವಲುಗಾರನಿಗೆ ನಾನು ಯಾವಾಗಲೂ ಧನ್ಯವಾದ ಹೇಳುತ್ತೇನೆ! ಅಂತಿಮವಾಗಿ, ಈ ಘಟನೆಗಳು 1981ರಲ್ಲಿ ಇನ್ಫೋಸಿಸ್ ಸ್ಥಾಪನೆಗೆ ಕಾರಣವಾಯಿತು.

ಈ ಮೊದಲ ಎರಡು ಘಟನೆಗಳಲ್ಲಿ ನಾನು ಅದೃಷ್ಟಶಾಲಿಯಾಗಿ ಕಂಡರೂ, ಮುಂದಿನ ಎರಡು ಘಟನೆಗಳು, ಇನ್ಫೋಸಿಸ್ ಸಂಸ್ಥೆಯ ಪ್ರಯಾಣದ ಬಗ್ಗೆ ಹೆಚ್ಚು ಯೋಜಿತವಾಗಿದ್ದವು ಮತ್ತು ನನ್ನ ವೃತ್ತಿಜೀವನದ ಪಥವನ್ನು ಆಳವಾಗಿ ಪ್ರಭಾವಿಸಿದವುಗಳು.

1990ರ ಚಳಿಗಾಲದ ಒಂದು ಶನಿವಾರ ಬೆಳಿಗ್ಗೆ, ಇನ್ಫೋಸಿಸ್‍ನ ಏಳು ಸಂಸ್ಥಾಪಕರಲ್ಲಿ ಐವರು  ಬೆಂಗಳೂರು ಉಪನಗರದಲ್ಲಿದ್ದ ನಮ್ಮ ಸಣ್ಣ ಕಚೇರಿಯಲ್ಲಿ  ಭೇಟಿಯಾದೆವು. ಆ ಸಭೆಯಲ್ಲಿ, ಇನ್ಫೋಸಿಸ್ ಸಂಸ್ಥೆಯನ್ನು 1 ಮಿಲಿಯನ್ ಮೊತ್ತಕ್ಕೆ ಮಾರಾಟ ಮಾಡುವುದೆಂದು ಚರ್ಚಿಸಲಾಯಿತು. ಒಂಬತ್ತು ವರ್ಷಗಳ ಪರಿಶ್ರಮದ ನಂತರ, ಅಂದಿನ ವ್ಯಾಪಾರ ಸ್ನೇಹಿಯಲ್ಲದ ಭಾರತದಲ್ಲಿ ಸ್ವಲ್ಪ ಹಣವನ್ನಾದರೂ ನೋಡುವ ನಿರೀಕ್ಷೆಯಲ್ಲಿ, ಸಂತೋಷವಾಗಿಯೇ ನಾವು ಈ ತೀರ್ಮಾನಕ್ಕೆ ಬಂದಿದ್ದೆವು.

ಆರಂಭದಲ್ಲಿ, ನನ್ನ ಕಿರಿಯ ಸಹೋದ್ಯೋಗಿಗಳಿಗೆ ಅವರ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಲು ಅವಕಾಶ ಕೊಟ್ಟೆ. ಇದರೊಂದಿಗೆ, ನಮ್ಮ ಸಂಸ್ಥೆಯ ಪ್ರಸ್ತುತ ತೊಂದರೆಗಳು ಮತ್ತು ನಮ್ಮ ಭವಿಷ್ಯದ ಸವಾಲುಗಳ ಬಗ್ಗೆ ಸುಮಾರು ನಾಲ್ಕು ಗಂಟೆಗಳ ಕಾಲ ಚರ್ಚೆ ನಡೆಯಿತು. ಅಲ್ಲಿಯವರೆಗೆ ನಾನು ಒಂದು ಮಾತೂ ಆಡಿರಲಿಲ್ಲ.

ಅಂತಿಮವಾಗಿ, ನನ್ನ ಸರದಿ ಬಂತು. ನಾನು 1981ರಲ್ಲಿ ಮುಂಬೈನ ಒಂದು ಸಣ್ಣ ಅಪಾರ್ಟ್‍ಮೆಂಟಿನಲ್ಲಿ ಪ್ರಾರಂಭವಾದ ನಮ್ಮ ಸಂಸ್ಥೆಯ ಸಹಪ್ರಯಾಣದ ಬಗ್ಗೆ ಮಾತನಾಡಿದೆ. ನಿಜವಾಗಿಯೂ ಅದು ಹಲವಾರು ಕಠಿಣ ಸವಾಲುಗಳ ಸಮಯವಾಗಿತ್ತು. ಆದರೆ, ‘ಮುಂಜಾನೆಯ ಮೊದಲು ಕತ್ತಲು ಸಹಜ’ವೆಂದು ನಾನು ಬಲವಾಗಿ ನಂಬಿದ್ದೆ.

ಆ ಸಂದರ್ಭದಲ್ಲಿ, ನಾನೊಂದು ದೃಢ ನಿರ್ಧಾರಕ್ಕೆ ಬಂದೆ. ಉಳಿದವರೆಲ್ಲರೂ ಕಂಪನಿಯನ್ನು ಮಾರಾಟ ಮಾಡಲು ಮುಂದಾಗಿದ್ದರೂ, ನನ್ನ ಜೇಬಿನಲ್ಲಿ ಬಿಡಿಕಾಸು ಇಲ್ಲದಿದ್ದರೂ, ತಕ್ಷಣ, ನನ್ನೆಲ್ಲಾ ಸಹೋದ್ಯೋಗಿಗಳ ಶೇರನ್ನು ಖರೀದಿಸಿ ಸಂಸ್ಥೆಯನ್ನು ಕೊಂಡುಕೊಳ್ಳುತ್ತೇನೆ ಎಂದೆ.

ಆ ಕೋಣೆಯಲ್ಲಿ ತಕ್ಷಣ ಆಘಾತಕಾರಿ ಮೌನ ಕವಿಯಿತು. ನನ್ನ ಸಹೋದ್ಯೋಗಿಗಳು ನನ್ನ ಮೂರ್ಖತನದ ಬಗ್ಗೆ ಆಶ್ಚರ್ಯಪಟ್ಟರು. ಆದರೆ ನಾನು ಮಾತ್ರ ಮೌನವಾಗಿಯೇ ಇದ್ದೆ. ಅಂತೂ, ಒಂದು ಗಂಟೆಯ ವಾಗ್ವಾದಗಳ ನಂತರ, ನನ್ನ ಸಹೋದ್ಯೋಗಿಗಳು ನನ್ನ ಆಲೋಚನಾ ವಿಧಾನಕ್ಕೆ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡರು. ನಾವು ಒಂದು ದೊಡ್ಡ ಸಂಸ್ಥೆಯನ್ನು ಕಟ್ಟಲು ಬಯಸಿದರೆ, ಆಶಾವಾದಿ ಮತ್ತು ಆತ್ಮವಿಶ್ವಾಸದಿಂದಿರಬೇಕೆಂದು ನಾನು ಅವರನ್ನು ಒತ್ತಾಯಿಸಿದೆ. ಆ ದಿನ ನನ್ನ ಮೇಲಿಟ್ಟ ಭರವಸೆಗೆ ಅನುಗುಣವಾಗಿ ಅವರೆಲ್ಲಾ ಬದುಕಿದ್ದಾರೆ.

ಆ ದಿನದಿಂದ ಪ್ರಾರಂಭವಾಗಿ, ಈ ಹದಿನೇಳು ವರ್ಷಗಳಲ್ಲಿ, ಇನ್ಫೋಸಿಸ್ ಸಂಸ್ಥೆ 3.0 ಬಿಲಿಯನ್ ಡಾಲರಿಗಿಂತ ಹೆಚ್ಚಿನ ಆದಾಯಗಳಿಸಿ ಬೆಳೆದು ನಿಂತಿದೆ.  ನಿವ್ವಳ ಆದಾಯ 800 ಮಿಲಿಯನ್ ಡಾಲರಿಗಿಂತ  ಹೆಚ್ಚು, 28 ಬಿಲಿಯನ್ ಡಾಲರಿಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳೀಕರಣ, ಮತ್ತು ದೈನಂದಿನ 1 ಮಿಲಿಯನ್ ಡಾಲರ್  ಕೊಡುಗೆಗಿಂತ 28,000 ಪಟ್ಟು ಶ್ರೀಮಂತವಾಗಿದೆ.

ಈ ಪ್ರಕ್ರಿಯೆಯಲ್ಲಿ, ಇನ್ಫೋಸಿಸ್ 70,000ಕ್ಕೂ ಹೆಚ್ಚು ಉತ್ತಮ ಸಂಬಳ ಪಡೆಯುವ ಉದ್ಯೋಗಗಳು, 2,000 ಕ್ಕಿಂತ ಹೆಚ್ಚು ಡಾಲರ್-ಮಿಲಿಯಾಧಿಪತಿಗಳನ್ನು ಮತ್ತು 20,000ಕ್ಕಿಂತ ಹೆಚ್ಚು ರೂಪಾಯಿ ಮಿಲಿಯಾಧಿಪತಿಗಳನ್ನು ಸೃಷ್ಟಿಸಿದೆ.

ಕೊನೆಯ ಕಥೆ:

1995ರ ಒಂದು ಬೇಸಿಗೆಯ ಬೆಳಿಗ್ಗೆ, ಫಾರ್ಚೂನ್-10 ನಿಗಮವು ಇನ್ಫೋಸಿಸ್ ಸೇರಿದಂತೆ ತಮ್ಮ ಎಲ್ಲಾ ಭಾರತೀಯ ಸಾಫ್ಟ್‍ವೇರ್ ಮಾರಾಟಗಾರರನ್ನು ಬೆಂಗಳೂರಿನ ತಾಜ್ ರೆಸಿಡೆನ್ಸಿ ಹೋಟೆಲ್‍ನಲ್ಲಿ ವಿವಿಧ ಕೋಣೆಗಳಲ್ಲಿ ಪ್ರತ್ಯೇಕಿಸಿ, ಅಂದರೆ, ಮಾರಾಟಗಾರರೊಂದಿಗೆ ಪರಸ್ಪರ ಸಂವಹನ ನಡೆಸಲು ಸಾಧ್ಯವಾಗದ ರೀತಿಯಲ್ಲಿ ಭೇಟಿಗೆ ಕರೆದಿದ್ದರು. ಗ್ರಾಹಕರ ಕಡೆಯಿಂದ ಕಠಿಣ ಚರ್ಚೆಯ ಸಾಧ್ಯತೆ ಬಗ್ಗೆ ಎಲ್ಲರಿಗೂ ನಿರೀಕ್ಷೆಯಿತ್ತು. ಸಹಜವಾಗಿ, ನಮ್ಮ ತಂಡದಲ್ಲಿ ಸ್ವಲ್ಪ ತಲ್ಲಣವಿತ್ತು.

ಮೊದಲನೆಯದಾಗಿ, ಆ ಶ್ರೀಮಂತ ಗ್ರಾಹಕರಿಗೆ ಹೋಲಿಸಿದರೆ, ಕೇವಲ 5ಮಿಲಿಯನ್ ಆದಾಯದೊಂದಿಗೆ ನಾವು ಬಹಳ ಸಣ್ಣ ಕಂಪೆನಿಯಾಗಿದ್ದೆವು. ಎರಡನೆಯದಾಗಿ, ಈ ಗ್ರಾಹಕರು ನಮ್ಮ ಸಂಸ್ಥೆಯ ಒಟ್ಟು ಆದಾಯದ 25%ರಷ್ಟು ಖರೀದಿಯಲ್ಲಿ ಪಾಲ್ಗೊಂಡಿದ್ದಾರೆ. ಈ ವ್ಯವಹಾರದಲ್ಲಿ ಆಗಬಹುದಾದ ನಷ್ಟ, ಇತ್ತೀಚೆಗಷ್ಟೇ ಶ್ರೇಯಾಂಕ ಪಡೆದ ನಮ್ಮ ಸಂಸ್ಥೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವ ಸಾಧ್ಯತೆಯಿತ್ತು.

ಮೂರನೆಯದಾಗಿ, ಆ ಗ್ರಾಹಕರ ಸಮಾಲೋಚನಾ ಶೈಲಿಯು ತುಂಬಾ ಆಕ್ರಮಣಕಾರಿಯಾಗಿತ್ತು. ಸಾಮಾನ್ಯವಾಗಿ, ಗ್ರಾಹಕ ತಂಡವು ಕೊಠಡಿಯಿಂದ ಕೊಠಡಿಗೆ ಹೋಗುತ್ತದೆ, ಪ್ರತಿ ಮಾರಾಟಗಾರರಿಂದ ಉತ್ತಮ ಒಪ್ಪಂದ ಖಾತ್ರಿ ಮಾಡಿಕೊಳ್ಳುತ್ತದೆ ಮತ್ತು ಆನಂತರ ಒಪ್ಪಂದದ ವಿಚಾರವಾಗಿ ಒಬ್ಬ ಮಾರಾಟಗಾರನನ್ನು ಇನ್ನೊಬ್ಬರ ವಿರುದ್ಧ ಛೂಬಿಡುತ್ತದೆ.  ಈ ಮಾತುಕತೆಗಳು ಹಲವಾರು ಸುತ್ತುಗಳವರೆಗೆ ನಡೆಯಿತು. ಪ್ರಧಾನವಾಗಿ, ನ್ಯಾಯಯುತ ಬೆಲೆ- ಒಳ್ಳೆಯ ಸಿಬ್ಬಂದಿ, ಸಂಶೋಧನೆ ಮತ್ತು ಅಭಿವೃದ್ಧಿ, ಮೂಲಸೌಕರ್ಯ, ತಂತ್ರಜ್ಞಾನ ಮತ್ತು ತರಬೇತಿಯಲ್ಲಿ ಹೂಡಿಕೆಮಾಡುವ ಭರವಸೆ, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ನಮ್ಮ ವಾದಗಳು, ಆ ಗ್ರಾಹಕರ ಮೇಲೆ ಯಾವುದೇ ಗುಣಾತ್ಮಕ ಪರಿಣಾಮ ಬೀರುವಲ್ಲಿ ವಿಫಲವಾದವು.

ಕೊನೆಯ ದಿನ, ಸಂಜೆ 5ಗಂಟೆಯ ಹೊತ್ತಿಗೆ, ಗ್ರಾಹಕರ ನಿಯಮಗಳನ್ನು ಸ್ವೀಕರಿಸಬೇಕೆ ಅಥವಾ ಬಿಟ್ಟುಬಿಡಬೇಕೆ ಎಂದು ನಾವು ಸ್ಥಳದಲ್ಲೇ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು.

ನಾನು ನಿರ್ಧಾರಕ್ಕೆ ಬರುತ್ತಿದ್ದಂತೆಯೇ, ನನ್ನ ಸಹೋದ್ಯೋಗಿಗಳ ಕಣ್ಣುಗಳು ನನ್ನ ಮೇಲೆಯೇ ನೆಟ್ಟಿದ್ದವು. ನಾನು ಒಂದು ಕ್ಷಣ ಕಣ್ಣುಮುಚ್ಚಿ, ಇಲ್ಲಿಯವರೆಗಿನ ನಮ್ಮ ಸಂಸ್ಥೆಯ ಪ್ರಯಾಣವನ್ನು ಕಲ್ಪಿಸಿಕೊಂಡೆ. ಅನೇಕ ಕಠಿಣ ಪರಿಸ್ಥಿತಿಗಳ ನಡುವೆ, ಯಾವಾಗಲೂ ನಾವು ಇನ್ಫೋಸಿಸ್ ಸಂಸ್ಥೆಯ ದೀರ್ಘಕಾಲೀನ ಹಿತಾಸಕ್ತಿಗಳ ಬಗ್ಗೆ ಯೋಚಿಸಿದ್ದೇವೆ. ಚೆನ್ನಾಗಿ ಯೋಚಿಸಿ, ಆ ಗ್ರಾಹಕರ ತಂಡಕ್ಕೆ ಅವರ ನಿಯಮಗಳನ್ನು ನಾವು ಸ್ವೀಕರಿಸಲು ಸಾಧ್ಯವಿಲ್ಲ ಎಂದು ನಾನು ಸ್ಪಷ್ಟವಾಗಿ ತಿಳಿಸಲು ನಿರ್ಧರಿಸಿದೆ.  ಏಕೆಂದರೆ, ಒಂದು ವೇಳೆ ನಾವು ಒಪ್ಪಿಕೊಂಡಿದ್ದರೆ, ನಂತರ ಅವರಿಗೆ ನಿರಾಶೆಯಾಗುವ ಸಾಧ್ಯತೆಯಿತ್ತು. ಆದರೆ, ಗ್ರಾಹಕರಿಗೆ ಅವರ ಆಯ್ಕೆಯ ಮಾರಾಟಗಾರರಿಗೆ, ನಮ್ಮ ಕಡೆಯಿಂದ ಸುಗಮ ಮತ್ತು ವೃತ್ತಿಪರ ಹಸ್ತಾಂತರದ ಭರವಸೆ ನೀಡಿದೆ. ಇದು ಇನ್ಫೋಸಿಸ್‍ಗೆ ಒಂದು ಮಹತ್ವದ ತಿರುವು.

ಆ ಘಟನೆಯ ನಂತರ ನಾವು, ಭವಿಷ್ಯದಲ್ಲಿ ಇಂತಹ ಬಿಕ್ಕಟ್ಟು ಪರಿಸ್ಥಿಯನ್ನ ಸಮರ್ಥವಾಗಿ ಎದುರಿಸುವ ಸಲುವಾಗಿ ಒಂದು ಮಂಡಳಿ ರಚಿಸಿದೆವು. ಅದರ ಮೂಲಕ ನಾವು, ಯಾವುದೇ ಗ್ರಾಹಕ, ತಂತ್ರಜ್ಞಾನ, ದೇಶ, ವ್ಯಾಪ್ತಿ, ಪ್ರದೇಶ ಅಥವಾ ನಿರ್ದಿಷ್ಟ ಉದ್ಯೋಗಿಗಳ ಮೇಲೆ ಸಂಸ್ಥೆ ಹೆಚ್ಚು ಅವಲಂಬಿತವಾಗಿರುವುದಿಲ್ಲ ಎಂದು ಖಾತ್ರಿ ಮಾಡಿಕೊಂಡೆವು. ಒಂದು ರೀತಿಯಲ್ಲಿ, ಈ ಮೇಲಿನ ಬಿಕ್ಕಟ್ಟು, ನಮಗೆ ಪರೋಕ್ಷವಾಗಿ ವರವಾಗಿ ಪರಿಣಮಿಸಿತ್ತು. ಇಂದು, ಇನ್ಫೋಸಿಸ್ ತನ್ನ ಆದಾಯ ಮತ್ತು ಲಾಭದ ಸುಸ್ಥಿರತೆ ಕಾಯ್ದುಕೊಳ್ಳಲು ಉತ್ತಮ ಬಿಕ್ಕಟ್ಟು ನಿರ್ವಹಣಾ ಸಮಿತಿ ಹೊಂದಿದೆ.

ಈಗ ನಾನು ನಿಮ್ಮೊಂದಿಗೆ, ಈ ಮೇಲಿನ ಘಟನೆಗಳು ನನಗೆ ಕಲಿಸಿದ ಜೀವನಪಾಠಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

 1. ನನ್ನ ಜೀವನಾನುಭವ ಕಲಿಸಿದ ಪಾಠದಿಂದ ಪ್ರಾರಂಭಿಸುತ್ತೇನೆ. ಯಾವಾಗ ನೀವು ಕೆಲಸ ಆರಂಭಿಸಿದ್ದೀರಿ ಎಂಬುದು ಮುಖ್ಯವಲ್ಲ, ಬದಲಿಗೆ, ಅದರಿಂದ ನೀವು ಹೇಗೆ ಮತ್ತು ಏನನ್ನು ಕಲಿಯುತ್ತಿದ್ದೀರಿ ಎಂಬುದು ಹೆಚ್ಚು ಮುಖ್ಯ. ನಿಮ್ಮ ಕಲಿಕೆಯ ಗುಣಮಟ್ಟ ಉತ್ಕೃಷ್ಟವಾಗಿದ್ದರೆ, ಅಭಿವೃದ್ಧಿ ಮೇಲ್ಮುಖವಾಗಿರುತ್ತದೆ. ಹಾಗು ಕಲಿಕೆಗೆ ಸಾಕಷ್ಟು ಸಮಯ ನೀಡಿದ್ದಲ್ಲಿ, ನೀವು ಹಿಂದೆ ಸಾಧಿಸದ ಯಶಸ್ಸನ್ನು ಕಾಣಬಹುದು. ಇನ್ಫೋಸಿಸ್ ಸಂಸ್ಥೆಯ ಯಶಸ್ಸಿನ ಕಥೆ ಇದಕ್ಕೆ ಜೀವಂತ ಪುರಾವೆಯಾಗಿದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಆರಂಭದಲ್ಲಿ, ನಮ್ಮ ಸ್ವಅನುಭವದಿಂದ ಆಗುವ ಕಲಿಕೆ ಸಂಕೀರ್ಣವೆನಿಸಬಹುದು. ಆದರೆ, ನಮ್ಮ ಯಶಸ್ಸಿಗಿಂತ ವೈಫಲ್ಯದಿಂದ ಕಲಿಯುವುದು ಹೆಚ್ಚು. ಸಾಮಾನ್ಯವಾಗಿ, ನಾವು ವಿಫಲರಾದಾಗ, ಅದಕ್ಕೆ ಕಾರಣವಾದ ಅಂಶಗಳ ಬಗ್ಗೆ ಎಚ್ಚರಿಕೆಯಿಂದ ಯೋಚಿಸುತ್ತೇವೆ. ಆದರೆ ನಮಗೆ ಸುಲಭವಾಗಿ ದಕ್ಕಿದ ಯಶಸ್ಸು, ಈ ಕಲಿಕೆಯ ಪ್ರಕ್ರಿಯೆಯನ್ನು ಸರಳವಾಗಿ ಕಾಣಿಸುವಂತೆ ಮಾಡಿ, ಕಲಿಕೆಯನ್ನು ಕುಂಠಿತಗೊಳಿಸುತ್ತದೆ.
 2. ಎರಡನೇ ಅಂಶ, ಜೀವನದಲ್ಲಿ ನಡೆಯುವ ಆಕಸ್ಮಿಕ ಘಟನೆಗಳಿಗಿರುವ ಶಕ್ತಿಗೆ ಸಂಬಂಧಿಸಿದ್ದು. ನನ್ನ ಜೀವನವನ್ನು ವಿವಿಧ ಆಯಾಮಗಳಲ್ಲಿ ಯೋಚಿಸುತ್ತಿದ್ದಂತೆ, ಉದ್ದೇಶಪೂರ್ವಕ ಆಯ್ಕೆಗಳಿಗಿಂತ ಆಕಸ್ಮಿಕ ಘಟನೆಗಳಲ್ಲಿ ನನ್ನ ಪಾತ್ರ ನಿರ್ವಹಣ ಶಕ್ತಿಯಿಂದ ಅಚ್ಚರಿಗೊಂಡಿದ್ದೇನೆ. ಜೀವನದ ಕೆಲವು ಮಹತ್ವದ ತಿರುವುಗಳು ನಿಜಕ್ಕೂ ಅದೃಷ್ಟಶಾಲಿಯಾಗಿದ್ದರೂ, ನಾವು ಅವುಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದಕ್ಕೆ ಪೂರ್ವ ತಯಾರಿ ಮಾಡಲು ಸಾಧ್ಯವಾಗುವುದಿಲ್ಲ. ಆದರೂ ಈ ಆಕಸ್ಮಿಕ ಘಟನೆಗಳಿಗೆ ನಾವು ಹೇಗೆ ವ್ಯವಸ್ಥಿತವಾಗಿ ಪ್ರತಿಕ್ರಿಯಿಸುತ್ತೇವೆ ಎಂಬುವುದು ಮುಖ್ಯ.
 3. ಸಹಜವಾಗಿ, ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವವರ ಮನಸ್ಥಿತಿ ಕೂಡ ಸಾಕಷ್ಟು ನಿರ್ಣಾಯಕ. ಮನಶ್ಶಾಸ್ತ್ರಜ್ಞ ಕರೋಲ್ ಡ್ವೆಕ್ ಅವರ ಇತ್ತೀಚಿನ ಕೃತಿಗಳು ತೋರಿಸಿದಂತೆ, ಮನುಷ್ಯ ತನ್ನ ನೈಜ್ಯಸಾಮಥ್ರ್ಯ ತನ್ನಲ್ಲಿ ಅಂತರ್ಗತವಾಗಿದೆ ಎಂದು ನಂಬುತ್ತಾನೆಯೇ ಅಥವಾ ಅದನ್ನು ಸ್ವಪ್ರಯತ್ನದಿಂದ ಅಭಿವೃದ್ಧಿಪಡಿಸಬಹುದೇ ಎಂಬುದು ಬಹಳ ಮುಖ್ಯ. ಸರಳವಾಗಿ ಹೇಳುವುದಾದರೆ, ಪೂರ್ವ ದೃಷ್ಟಿಕೋನ ಹಾಗು ಸ್ಥಿರ ಮನಸ್ಥಿತಿ, ಮನುಷ್ಯನಲ್ಲಿ ಪ್ರಶ್ನಿಸುವ ಪ್ರವೃತ್ತಿಯನ್ನು ಹತ್ತಿಕ್ಕುತ್ತದೆ. ಅಲ್ಲದೆ, ಉಪಯುಕ್ತ ಋಣಾತ್ಮಕ ಪ್ರತಿಕ್ರಿಯೆಯನ್ನು ನಿರ್ಲಕ್ಷಿಸುತ್ತದೆ ಮತ್ತು ಇಂತಹ ಪ್ರತಿಕ್ರಿಯೆ ನೀಡುವವರನ್ನು ದೂರವಿಡುತ್ತದೆ. ಇಂತಹ ಮನಸ್ಥಿತಿಯವರು ಪೂರ್ಣ ಸಾಮಥ್ರ್ಯವನ್ನು ಸಾಧಿಸುವುದಿಲ್ಲ. ಸರಳವಾಗಿ ಹೇಳುವುದಾದರೆ, ತನಗೆ ಎದುರಾದ ಸವಾಲುಗಳನ್ನು ಸ್ವೀಕರಿಸುವ ಪ್ರವೃತ್ತಿಗೆ, ಭವಿಷ್ಯದ ದೃಷ್ಟಿಕೋನ ಮತ್ತು ಬೆಳವಣಿಗೆಯ ಮನಸ್ಥಿತಿ ಕಾರಣವಾಗುತ್ತದೆ. ಪರರ ವಿಮರ್ಶೆಯನ್ನು ಸ್ವೀಕರಿಸಿ ಕಲಿಯುವವರು ಎಂದೆಂದಿಗೂ ಹೆಚ್ಚು ಸಾಧನೆಯನ್ನು ಮಾಡುತ್ತಾರೆ(ಕ್ರಾಕೋವ್ಸ್ ಸ್ಕಿ, 2007: ಪುಟ 48).
 4. ನಾಲ್ಕನೆಯ ಅಂಶ, ಸ್ವಅರಿವು. ಇದು ಭಾರತೀಯ ಆಧ್ಯಾತ್ಮಿಕ ಸಂಪ್ರದಾಯದ ಮೂಲಾಧಾರವಾಗಿದೆ. ವಾಸ್ತವವಾಗಿ, ಸ್ವಅರಿವು ಜ್ಞಾನದ ಅತ್ಯುನ್ನತ ರೂಪ ಎಂದು ಹೇಳಲಾಗುತ್ತದೆ. ಈ ಸ್ವಅರಿವು ಮತ್ತು ಜ್ಞಾನ, ಅಂತಿಮವಾಗಿ ತನ್ನ ಬಗ್ಗೆ ನಂಬಿಕೆಯನ್ನು ಬೆಳೆಸಲು ಸಹಾಯ ಮಾಡುತ್ತದೆ. ಧೈರ್ಯ, ದೃಢ ನಿಶ್ಚಯ, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಮ್ರತೆ, ಒಬ್ಬ ವ್ಯಕ್ತಿಯ ಯಶಸ್ಸು ಘನತೆಯಿಂದ ಕೂಡಿರುವಂತೆ ಮಾಡುತ್ತದೆ.

ನನ್ನ ಜೀವನಾನುಭವಗಳ ಆಧಾರದ ಮೇಲೆ ಹೇಳುವುದಾದರೆ, ನನಗೆ ವರ್ತಮಾನದಲ್ಲಿ  ಬೆಳೆಯಲು, ನನ್ನ ಅನುಭವದಿಂದ ಬರುವ ನಂಬಿಕೆ, ಬೆಳವಣಿಗೆಯ ಮನಸ್ಥಿತಿ, ಆಕಸ್ಮಿಕ ಘಟನೆಗಳ ಶಕ್ತಿ ಮತ್ತು ಸ್ವ ಅರಿವು ತುಂಬಾ ಸಹಾಯ ಮಾಡಿದೆ ಎಂದು ನಾನು ಪ್ರತಿಪಾದಿಸುತ್ತೇನೆ.

1960ರ ದಶಕದಲ್ಲಿನ ನನ್ನ ಪರಿಸ್ಥಿಯನ್ನು ನೆನಪಿಸಿಕೊಂಡರೆ, ಇಂದು ನಾನು ಈ ರೀತಿ, ನಿಮ್ಮ ಮುಂದೆ ನಿಲ್ಲುವ ಸಾಧ್ಯತೆ ಶೂನ್ಯವಾಗಿತ್ತು. ಆದರೂ ಇಂದು ನಾನು ನಿಮ್ಮ ಮುಂದೆ ನಿಂತಿದ್ದೇನೆ! ಪ್ರತಿ ಹೆಜ್ಜೆಯೊಂದಿಗೆ, ಅದೃಷ್ಟ ನನ್ನ ಪರವಾಗಿ ನಿಂತಿದೆ ಮತ್ತು ಈ ಮೇಲಿನ ಜೀವನ ಪಾಠಗಳೇ ನನ್ನ ಬದುಕನ್ನು ಬದಲಾಯಿಸಿತು.

ನನ್ನ ಯುವ ಸ್ನೇಹಿತರೇ, ನಾನು ಕೆಲವು ಸಲಹೆಗಳೊಂದಿಗೆ ಮಾತು ಕೊನೆಗೊಳಿಸಲು ಬಯಸುತ್ತೇನೆ. ನೀವು, ನಿಮ್ಮ ಭವಿಷ್ಯವನ್ನು ಮೊದಲೇ ನಿಗದಿಯಾಗಿದೆಯೆಂದು ನಂಬುತ್ತೀರಾ? ಅಥವಾ, ನಿಮ್ಮ ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಹಾಗೂ ಅದು ಕೆಲವೊಂದು ಆಕಸ್ಮಿಕ ಘಟನೆಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ನಂಬುತ್ತೀರಾ?

ಜೀವನದ ಈ ಅನಿರೀಕ್ಷಿತ ಘಟನೆಗಳು ನಿಮಗೆ ಗುಣಾತ್ಮಕ ಮಹತ್ವದ ತಿರುವುಗಳನ್ನು ನೀಡಬಲ್ಲವು ಎಂದು ನಂಬುತ್ತೀರಾ? ಈ ಆಕಸ್ಮಿಕ ಘಟನೆಗಳಿಂದ ನೀವು ಬಹಳ ಕಲಿಯುವಿರಿ ಮತ್ತು ಸೋಲನ್ನು ಪುನರ್ ಪರಿಶೀಲಿಸುವಿರಿ ಎಂದು ನಂಬುತ್ತೀರಾ? ಅಲ್ಲದೇ, ಈ ಜೀವನ ಪಾಠಗಳ ಪರಿಣಾಮವಾಗಿ ನಿಮ್ಮ ಯಶಸ್ಸನ್ನು ಇನ್ನೂ ಹೆಚ್ಚಿನ ಕಾಳಜಿಯಿಂದ ಸ್ವೀಕರಿಸುವಿರಿ ಎಂದು ನಂಬುತ್ತೀರಾ?

ಜೀವನದ ಹಲವಾರು ತಿರುವುಗಳಿಂದ ಪಡೆಯುವ ಉತ್ತಮ ಕಲಿಕೆಯ ಅವಕಾಶಗಳಿಂದ ಭವಿಷ್ಯ ರೂಪುಗೊಳ್ಳುತ್ತದೆ ಎಂದು ನೀವು ನಂಬುತ್ತೀರಿ ಎಂದು ನಾನು ಭಾವಿಸುತ್ತೇನೆ. ವಾಸ್ತವವಾಗಿ, ಇದು ನನಗೆ ಹೆಚ್ಚು ಪ್ರಯೋಜನ ನೀಡಿದ ಮಾರ್ಗವಾಗಿದೆ.

ಅಂತಿಮ ಮಾತು:

ಮುಂದೊಂದು ದಿನ, ನೀವು ಪ್ರಪಂಚದಲ್ಲಿ ನಿಮ್ಮ ಛಾಪು ಮೂಡಿಸಿದಾಗ, ನೀವು ಉತ್ಪಾದಿಸುವ ಸಂಪತ್ತಿನ ಬಗ್ಗೆ ಆರ್ಥಿಕ, ಬೌದ್ಧಿಕ ಅಥವಾ ಭಾವನಾತ್ಮಕವಾದ ಸಂಬಂಧ ಹೊಂದಿದ್ದರೂ, ನೀವು ಕೇವಲ ಅದರ ತಾತ್ಕಾಲಿಕ ಪೋಷಕರು ಎಂದು ನೆನಪಿಡಿ. ನೀವು ಗಳಿಸಿದ ಸಂಪತ್ತಿನ ಉತ್ತಮ ಬಳಕೆಯೆಂದರೆ ಅದನ್ನು ನತದೃಷ್ಟರೊಂದಿಗೆ ಹಂಚಿಕೊಳ್ಳುವುದು.

ಇಂದು, ನಾವೆಂದೂ ನೆಡದ ಮರಗಳಿಂದ ಹಣ್ಣುಗಳನ್ನು ತಿನ್ನುತ್ತಿದ್ದೇವೆ. ನಮ್ಮ ಸರದಿ ಬಂದಾಗ, ನಾವೂ ಹಣ್ಣಿನ ಮರಗಳ ತೋಟ ಬೆಳೆಸೋಣ, ನಾವೆಂದೂ ಅದರ ಫಲ ಪಡೆಯದೇ ಹೋದರೂ ಸಹ. ಮುಂದಿನ ಜನಾಂಗ ಅದರ ಪ್ರಯೋಜನ ಪಡೆಯಲಿ. ಇದು ನಮ್ಮ ಮುಖ್ಯ ಜವಾಬ್ದಾರಿ ಎಂದು ನಾನು ಬಲವಾಗಿ ನಂಬಿದ್ದೇನೆ. ಮಾತ್ರವಲ್ಲ, ಈ ಜವಾಬ್ದಾರಿಗೆ ನೀವು ಭುಜ ಕೊಡುತ್ತೀರಿ ಎಂದೂ ನನಗೆ ವಿಶ್ವಾಸವಿದೆ.

ನಿಮ್ಮ ಸಹನೆಗೆ ಧನ್ಯವಾದಗಳು. ನಿಮ್ಮ ಭವಿಷ್ಯವನ್ನು ತೆರೆದ ತೋಳುಗಳಿಂದ ಸ್ವೀಕರಿಸಿ, ಮತ್ತು ನಿಮ್ಮ ಸ್ವ ಅನ್ವೇಷಣೆಯ ಜೀವನ ಪ್ರಯಾಣವನ್ನು ಉತ್ಸಾಹದಿಂದ ಮುಂದುವರಿಸಿ!

Leave a Reply

Your email address will not be published.