ಎನ್.ಡಿ.ಎ. ಆಕ್ರಮಣಶೀಲತೆ ತಿರುಗುಬಾಣ ಆಗಲಿದೆಯೇ?

ಸತತವಾಗಿ ಅಧಿಕಾರಕ್ಕೆ ಬಂದಿರುವ ಎರಡನೇ ಅವಧಿಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಹೆಚ್ಚು ಆಕ್ರಮಣಶೀಲತೆಯನ್ನು ತೋರುತ್ತಿದೆ. ಸರ್ಕಾರದ ಕೆಲವು ವಿವಾದಾತ್ಮಕ ನಿರ್ಧಾರಗಳು ಅಲ್ಪಸಂಖ್ಯಾತರಲ್ಲಿ ಅಭದ್ರತೆ ಸೃಷ್ಟಿಸಿವೆ. ಅಭಿವೃದ್ಧಿ ಸರ್ಕಾರದ ಆದ್ಯತೆಯಾಗಿದೆಯೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಎಂ.ಕೆ.ಆನಂದರಾಜೇ ಅರಸ್

ಇಂಡಿಯಾ ಟುಡೆ ಕಾನ್‍ಕ್ಲೇವ್(2019) ಸಂವಾದದಲ್ಲಿ ರಾಹುಲ್ ಕನ್ವಲ್ ಕೇಂದ್ರ ಗೃಹ ಮಂತ್ರಿ ಅಮಿತ್ ಷಾರನ್ನು ಇಷ್ಟು ಆತುರಾತುರವಾಗಿ ಎಲ್ಲವನ್ನೂ ಏಕೆ ಮಾಡುತ್ತಿದ್ದೀರಾ ಎಂದು ಕೇಳುತ್ತಾರೆ. ಅದೊಂದು ಸಹಜ ಪ್ರಶ್ನೆಯಾಗಿತ್ತು. ಎನ್‍ಡಿಎ ಸತತವಾಗಿ ಎರಡನೆ ಬಾರಿ ಅಧಿಕಾರಕ್ಕೆ ಬಂದ ಕೇವಲ ಏಳು ತಿಂಗಳುಗಳಲ್ಲಿ ಹಲವಾರು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದೆ.

ತ್ರಿವಳಿ ತಲಾಖನ್ನು ಅಪರಾಧೀಕರಿಸುವ ಹೊಸದಾಗಿ ಪರಿಚಯಿಸಿದ ಕಾಯಿದೆಯನ್ನು ಜಾರಿಗೆ ತಂದಿದೆ. ಸಂವಿಧಾನ ವಿಧಿ 370ನ್ನು ರದ್ದುಗೊಳಿಸಿ ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ತೆಗೆದು ಆ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದೆ. ಆಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳಕ್ಕೊಳಗಾಗಿ 2014ಕ್ಕೂ ಮುನ್ನ ಭಾರತಕ್ಕೆ ವಲಸೆ ಬಂದಿರುವ ಅಲ್ಪಸಂಖ್ಯಾತ ಧಾರ್ಮಿಕರಿಗೆ (ಹಿಂದೂ, ಕ್ರಿಶ್ಚಿಯನ್, ಪಾರ್ಸಿ, ಸಿಖ್ ಹಾಗೂ ಬೌದ್ಧರು) ಪೌರತ್ವ ನೀಡಲು ಪೌರತ್ವ ತಿದ್ದುಪಡಿ ಕಾಯಿದೆಯನ್ನು ಜಾರಿ ಮಾಡಿದೆ. ದೇಶದ ನಾಳೆಗಳನ್ನು ಬದಲಿಸುವ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಪಾರ ರಾಜಕೀಯ ಇಚ್ಛಾಶಕ್ತಿ ಹಾಗೂ ದಿಟ್ಟತನ ಬೇಕಾಗುತ್ತದೆ.

ರಾಹುಲ್ ಕನ್ವಲ್ ಕೇಳಿದ ಪ್ರಶ್ನೆಗೆ ಅಮಿತ್ ಷಾಅವರು ತಮ್ಮ ಸಹಜ ಆಕ್ರಮಣಕಾರಿ ಶೈಲಿಯಲ್ಲಿ, “ಅರೇ ಆತುರ ಎಂದರೇನು. ಭಾರತಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳು ಆಗಿವೆ. ಈ ಕೆಲಸಗಳನ್ನು ಯಾವಾಗಲೋ ಮಾಡಬೇಕಿತ್ತು,” ಎಂದು ಉತ್ತರಿಸಿದರು.

ಮೋದಿ ಹಾಗೂ ಅಮಿತ್ ಷಾ ಅವರ ಆಕ್ರಮಣಕಾರಿ ಗುಣವೇ ಈಗ ಅವರ ನಾಗಾಲೋಟಕ್ಕೆ ಅಡ್ಡಗಾಲಾಗುತ್ತಿರಬಹುದು. 2016ರಲ್ಲಿ ಮೋದಿ ಹೆಚ್ಚು ಬೆಲೆಯ ನೋಟುಗಳ ಅನಾಣ್ಯೀಕರಣ ಮಾಡಿದಾಗ ಆ ಕ್ರಮವು ಅಧಿಕಾರದ ತರ್ಕಬಾಹಿರ ಬಳಕೆ ಎಂಬ ಟೀಕೆಗೊಳಗಾಯಿತು. ಅನಾಣ್ಯೀಕರಣ ಮೋದಿಯವರ ಉದ್ದೇಶಗಳನ್ನು ಸಾಧಿಸಲಿಲ್ಲ. ಕಪ್ಪು ಹಣವನ್ನು ವ್ಯವಸ್ಥೆಯಿಂದ ಹೊರಗೆ ಹಾಕಿ ಪರ್ಯಾಯ ಆರ್ಥಿಕತೆಯನ್ನು ನಾಶಪಡಿಸಲಿಲ್ಲ. ಅಭಿವೃದ್ಧಿ ಅರ್ಥಶಾಸ್ತ್ರಜ್ಞ ಜೀನ್ ಡ್ರೆಜ್ ‘ಅನಾಣ್ಯೀಕರಣ ಏರುತ್ತಿರುವ ಆರ್ಥಿಕತೆಯಲ್ಲಿ ರೇಸಿಂಗ್ ಕಾರ್‍ನ ಎರಡು ಟೈರ್‍ಗಳ ಮೇಲೆ ಗುಂಡು ಹಾರಿಸಿದಂತೆ’ ಎಂದು ವಿವರಿಸಿದ್ದರು.

ಹುಸಿಯಾಗುತ್ತಿರುವ ನಿರೀಕ್ಷೆಗಳು

ಅನಾಣ್ಯೀಕರಣದ ಹೊಡೆತದಿಂದ ದೇಶ ಚೇತರಿಸಿಕೊಳ್ಳುವ ಮುನ್ನವೇ ಮೋದಿ ಸರ್ಕಾರ ಜಿ.ಎಸ್.ಟಿ.ಯನ್ನು ಜಾರಿಗೆ ತಂದಿತು. ಅನಾಣ್ಯೀಕರಣ ಹಾಗೂ ಜಿ.ಎಸ್.ಟಿ.ಯ ಅಸಮರ್ಪಕ ಅನುಷ್ಟಾನ ದೇಶದ ಆರ್ಥಿಕತೆಗೆ ಅವಳಿ ಪೆಟ್ಟುಗಳನ್ನು ನೀಡಿತ್ತು. ದೇಶದ ಆರ್ಥಿಕತೆಯನ್ನು ಅರ್ಥ ಮಾಡಿಕೊಳ್ಳುವ ಆಳವಾದ ಪರಿಣತಿ ಸರ್ಕಾರಕ್ಕಿಲ್ಲ ಎಂಬ ಟೀಕೆಗಳು ಹೆಚ್ಚಾದವು.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಜಯ ಸಾಧಿಸಿತು. ರಾಷ್ಟ್ರೀಯ ಭದ್ರತೆ ಹಾಗೂ ರಾಷ್ಟ್ರ ಪ್ರೇಮವನ್ನು ಬಿಜೆಪಿಯೊಂದಿಗೆ ಬಿಂಬಿಸುವ ವ್ಯೂಹತಂತ್ರ ಕೆಲಸ ಮಾಡಿತ್ತು. ಬಿಜೆಪಿಯ ಆರ್ಥಿಕ ವೈಫಲ್ಯಗಳನ್ನು ಜನ ಕ್ಷಮಿಸಿದ್ದರು ಹಾಗೂ ಮೋದಿ ಎಲ್ಲವನ್ನೂ ಸರಿಮಾಡುತ್ತಾರೆ ಎಂದು ಭರವಸೆಯಿಟ್ಟಿದ್ದರು. ಆದರೆ ವರ್ಷವೂ ಸಂದಿಲ್ಲ. ದೇಶ ಹಿಂದೆಂದೂ ಆಗದ ರೀತಿಯಲ್ಲಿ ಸೈದ್ಧಾಂತಿಕವಾಗಿ ವಿಭಜಿತವಾಗಿದೆ. ಕಳೆದ ನಲವತ್ತು ವರ್ಷಗಳಲ್ಲಿ ಭಾರತ ಆರ್ಥಿಕವಾಗಿ ಇಷ್ತ್ತೊಂದು ಕುಸಿದಿರಲಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.

ಸಿಎಎ-ಸಂವಿಧಾನದ ಆಶಯಕ್ಕೆ ತಿಲಾಂಜಲಿ

ಪೌರತ್ವ ತಿದ್ದುಪಡಿ ಕಾಯಿದೆಯನ್ನು ಸೈದ್ಧಾಂತಿಕವಾಗಿ ಹಾಗೂ ರಾಜಕೀಯವಾಗಿ ತನಗೆ ಅನುಕೂಲವಾಗುವ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ, ಸಿಎಎ ಕಾಯಿದೆ ಬಗ್ಗೆ ಅರಿವು ಮೂಡಿಸುವ ಅಭಿಯಾನ ಆರಂಭಿಸಿದೆ. ಕಾಯಿದೆಯೊಂದು ಸಂಸತ್ತಿನಲ್ಲಿ ಅಂಗೀಕಾರವಾದ ನಂತರ ಅದರ ಬಗ್ಗೆ ಅರಿವು ಮೂಡಿಸುವ ವ್ಯಾಪಕ ಅಭಿಯಾನಕ್ಕೆ ಸರ್ಕಾರವೊಂದು ಮುಂದಾಗಿರುವುದು ಇತಿಹಾಸದಲ್ಲೇ ಇದೇ ಮೊದಲಿರಬಹುದು.

ಸಂವಿಧಾನ ತಜ್ಞರು, ನ್ಯಾಯವಾದಿಗಳು ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯರು ಈ ಕಾಯಿದೆಯನ್ನು ಸಂವಿಧಾನ ವಿರೋಧಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನೂರಕ್ಕೂ ಹೆಚ್ಚು ನಿವೃತ್ತ ಹಿರಿಯ ಅಧಿಕಾರಿಗಳು ಎನ್‍ಪಿಆರ್ ಹಾಗೂ ಎನ್‍ಆರ್‍ಸಿ ಅನಗತ್ಯ ಹಾಗೂ ಹಣ  ಮಾಡುವ ಕಾರ್ಯಕ್ರಮಗಳೆಂದು ಹಾಗೂ ಅವುಗಳ ಅನುಷ್ಠಾನ ಜನರನ್ನು ಸಂಕಷ್ಟಕ್ಕೆ ಸಿಲುಕಿಸುವುದೆಂದು ದೇಶದ ಜನತೆಗೆ ಮುಕ್ತ ಪತ್ರ ಬರೆದಿದ್ದಾರೆ. ಈ ಎಲ್ಲಾ ಟೀಕೆಗಳಿಗೆ ಮೋದಿ ಹಾಗೂ ಷಾ ವಿಚಲಿತರಾಗಿಲ್ಲ. ತದ್ವಿರುದ್ಧವಾಗಿ ಸಿಎಎ ಕುರಿತಂತೆ ಇನ್ನೂ ಹೆಚ್ಚು ಕಠಿಣ ನಿಲುವು ತಳೆದು ಅದನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಂಡಿದ್ದಾರೆ.

ಮೋದಿಯವರು ಎನ್‍ಆರ್‍ಸಿ ಬಗ್ಗೆ ಚರ್ಚೆಯೇ ನಡೆದಿಲ್ಲ ಎಂದು ರಾಮ್‍ಲೀಲಾ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿದಾಗ ಅವರ ಕೆಲವು ಹೇಳಿಕೆಗಳು ಅಮಿತ್ ಷಾ ಅವರ ಹೇಳಿಕೆಗಳಿಗೆ ವಿರುದ್ಧವಾಗಿದ್ದವು. ಅದೇ ಸಂದರ್ಭದಲ್ಲಿ ಪ್ರಧಾನಿಯವರು ಅಕ್ರಮ ವಲಸಿಗರಿಗಾಗಿ ದೇಶದಲ್ಲಿ ಯಾವುದೇ ಬಂಧನ ಕೇಂದ್ರಗಳನ್ನು ನಿರ್ಮಿಸಲಾಗಿಲ್ಲ ಎಂದು ಹೇಳಿದರು. ಈಗಾಗಲೇ ಅಸ್ಸಾಂನಲ್ಲಿ ನಿರ್ಮಿತವಾಗಿದ್ದ ಬಂಧನ ಗೃಹಗಳ ದೃಶ್ಯಗಳನ್ನು ತೋರಿಸುವ ಮೂಲಕ ಸುದ್ದಿವಾಹಿನಿಗಳು ಮೋದಿಯವರ ಹೇಳಿಕೆ ಸುಳ್ಳೆಂದು ಸಾಬೀತುಪಡಿಸಿದವು.

ಅಲ್ಪಾವಧಿ ರಾಜಕೀಯ ಉದ್ದೇಶ

ಸಾರ್ವಜನಿಕ ಭಾಷಣಗಳಲ್ಲಿ ಸಿಎಎ ಸಮರ್ಥಿಸಿಕೊಂಡು ವಿರೋಧ ಪಕ್ಷಗಳ ಮೇಲೆ ಹರಿಹಾಯುತ್ತಿದ್ದ ಪ್ರಧಾನಿಗಳ ಸಂವಹನ ಏಕಪಕ್ಷೀಯವಾಗಿತ್ತು. ಸುದ್ದಿಗೋಷ್ಠಿ ಕರೆದು ಮಾಧ್ಯಮಗಳ ಜೊತೆ ಸಂವಾದ ನಡೆಸಬಹುದಿತ್ತು. ಮಹಾತ್ಮಾ ಗಾಂಧಿ ಹಾಗೂ ಇತರ ಪ್ರಮುಖ ನಾಯಕರು ಭಾರತ ಸ್ವಾತಂತ್ರ್ಯಗಳಿಸಿದ ಬಳಿಕ ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಬೇಕೆಂದು ಹೇಳಿದ್ದರೆಂದು ಸಭೆಯೊಂದರಲ್ಲಿ ಹೇಳುತ್ತಾ ಮೋದಿ ಮಹಾತ್ಮಾ ಗಾಂಧಿಯವರನ್ನೂ ಸಹ ಸಿಎಎ ಸಮರ್ಥನೆಗೆ ಉಪಯೋಗಿಸಿಕೊಂಡರು. ಆದರೆ ಬಿಜೆಪಿಯ ಉದ್ದೇಶ ಗಾಂಧಿಯವರಷ್ಟು ನಿಷ್ಕಲ್ಮಶವಾಗಿಲ್ಲ. ಬಿಜೆಪಿ ಮಾಡಿದ ಪೌರತ್ವ ಕಾಯಿದೆ ತಿದ್ದುಪಡಿಯ ಹಿಂದೆ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿರುವ ಬಾಂಗ್ಲಾದೇಶಿ ವಲಸೆಗಾರರನ್ನು ಓಲೈಸಿಕೊಳ್ಳುವ ಅಲ್ಪಾವಧಿಯ ರಾಜಕೀಯ ಉದ್ದೇಶವಿದ್ದದ್ದು ಹಾಗೂ ಮುಸ್ಲಿಮ್ ವಲಸಿಗರನ್ನು ಗುರಿ ಮಾಡುವುದು ಸ್ಪಷ್ಟವಾಗಿತ್ತು.

2011ರ ಜನಗಣತಿಯ ಪ್ರಕಾರ ಪಶ್ಚಿಮ ಬಂಗಾಳದ ಸುಮಾರು 10 ಕೋಟಿ ಜನಸಂಖ್ಯೆಯಲ್ಲಿ 1971ರ ನಂತರ ಬಾಂಗ್ಲಾ ದೇಶದಿಂದ ಪಶ್ಚಿಮ ಬಂಗಾಳಕ್ಕೆ ವಲಸೆ ಬಂದಿರುವ ಮತುವಾ (ಹಿಂದೂ) ಸಮುದಾಯದವರ ಸಂಖ್ಯೆ ಸುಮಾರು 1.7 ಕೋಟಿಯಿದೆ. ಮತದಾನದ ಹಕ್ಕನ್ನು ಹೊಂದಿದ್ದು ಆದರೆ ಪೌರತ್ವವಿಲ್ಲದ ಮತುವಾ ಸಮುದಾಯದವರು ಸುಮಾರು 70 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಅಸ್ಸಾಂನಲ್ಲಿ   ಈಗ ಎನ್‍ಆರ್‍ಸಿಯಿಂದ ಹೊರಗುಳಿದಿರುವ ಆದರೆ ಮತದಾನದ ಹಕ್ಕನ್ನು ಹೊಂದಿರುವ ಮುಸ್ಲಿಮೇತರರ ಸಂಖ್ಯೆ 14 ಲಕ್ಷವಿದೆ. ಸುಮಾರು 5 ಲಕ್ಷ ಮುಸ್ಲಿಮರನ್ನು ಎನ್‍ಆರ್‍ಸಿಯಿಂದ ಹೊರಗಿಡಲಾಗಿದೆ. ಈ ಎರಡು ರಾಜ್ಯಗಳೂ 2021ರಲ್ಲಿ ವಿಧಾನಸಭಾ ಚುನಾವಣೆಗೆ ಹೋಗಲಿವೆ. ಪೌರತ್ವ ತಿದ್ದುಪಡಿ ಕಾಯಿದೆಯಡಿ ಮುಸ್ಲಿಮೇತರರಿಗೆ ಪೌರತ್ವ ನೀಡಿದರೆ ಈ ಎರಡೂ ರಾಜ್ಯಗಳಲ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ. ಪಶ್ಚಿಮ ಬಂಗಾಲ ಹಾಗೂ ಅಸ್ಸಾಂನಲ್ಲಿ ಚುನಾವಣೆ ನಡೆದ ನಂತರ ಸರ್ಕಾರವು ಸಿಎಎಯನ್ನು ಬುಟ್ಟಿಗೆಸೆಯುತ್ತದೆ ಎಂಬ ಅಭಿಪ್ರಾಯಗಳಿವೆ. ತಾನೆ ಹೆಣೆದ ಬಲೆಯಲ್ಲಿ ಬಿಜೆಪಿ…

ಪೌರತ್ವ ತಿದ್ದುಪಡಿ ಕಾಯಿದೆಯ ಜಾರಿಗೆ ಈಗಾಗಲೇ ಆದೇಶ ಹೊರಡಿಸಲಾಗಿದ್ದು, ಕೆಲವು ರಾಜ್ಯಗಳು ಅನುಷ್ಠಾನಕ್ಕೆ ಮುಂದಾಗಿವೆ. ಸಿಎಎ ಹಾಗೂ ನಂತರದ ದಿನಗಳಲ್ಲಿ ಅನುಷ್ಠಾನ ಮಾಡಲು ಉದ್ದೇಶಿಸಿರುವ ಎನ್‍ಆರ್‍ಸಿಯಿಂದ ಮಾನವೀಯ ಬಿಕ್ಕಟ್ಟು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಭಿವೃದ್ಧಿಯ ಕಡೆ ಸರ್ಕಾರದ ಗಮನ ಕಡಿಮೆಯಾಗುತ್ತದೆ.

ದೇಶದ ಆರ್ಥಿಕತೆ ಕುಸಿದಿರುವ ಪ್ರಸ್ತುತ ಸಂದರ್ಭದಲ್ಲಿ ಈ ಕಾಯಿದೆಯ ಅನುಷ್ಠಾನ ಅಷ್ಟ0ದು ತುರ್ತಾಗಿತ್ತೆ ಎನ್ನುವುದು ಹಲವರ ಪ್ರಶ್ನೆಯಾಗಿದೆ. ಪೌರತ್ವ ತಿದ್ದುಪಡಿ ಕಾಯಿದೆಗೂ ಎನ್‍ಆರ್‍ಸಿಗೂ ಯಾವುದೇ ಸಂಬಂಧವಿಲ್ಲವೆಂದು ಕೆಲವು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಆದರೆ ಎನ್‍ಆರ್‍ಸಿ ಮಾಡದಿದ್ದರೆ ಪೌರತ್ವ ತಿದ್ದುಪಡಿ ಕಾಯಿದೆಗೆ ಯಾವುದೇ ಅರ್ಥವಿರುವುದಿಲ್ಲ.

ಎನ್‍ಪಿಆರ್ ಅನ್ನು ಕಾಂಗ್ರೆಸ್ 2010ರಲ್ಲಿಯೇ ಮಾಡಿತ್ತು, ಈಗೇಕೆ ತಗಾದೆ ಎಂದು ಬಿಜೆಪಿ ಪ್ರಶ್ನಿಸಿದೆ. ಆದರೆ ಬಿಜೆಪಿಯ ಉದ್ದೇಶ ಎನ್‍ಪಿಆರ್ ಅನ್ನು ಎನ್‍ಆರ್‍ಸಿಗೆ ಸಂಪರ್ಕಿಸುವುದಾಗಿದೆ ಎಂದು ಟೀಕಾಕಾರರು ಸಾಕ್ಷಿ ಸಮೇತವಾಗಿ ವಾದಿಸುತ್ತಿದ್ದಾರೆ. ಗೃಹ ಸಚಿವಾಲಯದ 2018ರ ವಾರ್ಷಿಕ ವರದಿ ಎನ್‍ಪಿಆರ್, ಎನ್‍ಆರ್‍ಸಿ ಸೃಷ್ಟಿಯೆಡೆಗಿನ ಮೊದಲನೆ ಹೆಜ್ಜೆ ಎಂದು ಹೇಳುತ್ತದೆ.

ಸಿಎಎ ಹಾಗೂ ಎನ್‍ಆರ್‍ಸಿ ಭಾರತ ಇದುವರೆಗೆ ಎದುರಿಸಿರದ ಅತ್ಯಂತ ಮಾನವೀಯ ಬಿಕ್ಕಟ್ಟಿಗೆ ದಾರಿಮಾಡುವ ಸಾಧ್ಯತೆಯಿದೆ. ಪೌರತ್ವವಿಲ್ಲದ ಅಕ್ರಮ ಮುಸ್ಲಿಮರನ್ನು ಎಲ್ಲಿಗೆ ಕಳುಹಿಸುತ್ತೀರಾ? ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಇವರನ್ನು ತಮ್ಮ ನಾಗರಿಕರೆಂದು ಒಪ್ಪಿಕೊಳ್ಳುತ್ತಾರೆಯೇ? ಒಪ್ಪಿಸಲು ಸಾಧ್ಯವೇ? ಅವರು ಒಪ್ಪಿಕೊಳ್ಳದಿದ್ದಾಗ ಅವರನ್ನು ಎಲ್ಲಿಗೆ ಕಳುಹಿಸುತ್ತೀರಾ. ಕೋಟ್ಯಾಂತರ ಜನರನ್ನು ಇಡಲು ಬಂಧನ ಕೇಂದ್ರಗಳನ್ನು ಕಟ್ಟಲು ಸಾಧ್ಯವೇ? ಅದರಿಂದ ಉದ್ಭವಿಸುವ ಸಮಸ್ಯೆಗಳೇನು? ಕೇಂದ್ರಕ್ಕೆ ಮುಂದೆ ಏನು ಮಾಡಬೇಕೆಂಬ ಪೂರ್ಣ ನಕ್ಷೆಯಿಲ್ಲ.

ಸಿಡಿದೆದ್ದ ಯುವಜನತೆ

ಸುರಂಗ ದೃಷ್ಟಿಯ ಬಿಜೆಪಿಯು ತನ್ನ ಸೈದ್ಧಾಂತಿಕ ವಿನ್ಯಾಸಗಳಿಗೆ ಯುವ ಜನತೆ ಇಷ್ಟರ ಮಟ್ಟಿಗೆ ಸಿಡಿದೇಳುತ್ತಾರೆಂದು ನಿರೀಕ್ಷಿಸಿರಲಿಲ್ಲ. ಬಿಜೆಪಿಯ ಒಡ್ಡೋಲಗದಲ್ಲಿರುವ ಕೆಲವು ಮಾಧ್ಯಮಗಳು ಸಿಎಎ ಪರ ವ್ಯಾಪಕ ಪ್ರಚಾರ ಮಾಡಿವೆ. ಆದರೆ ಭಾರತದ ವಿಚಾರಶೀಲ ವರ್ಗ ಈ ಕಾಯಿದೆಯನ್ನು ಸಾರಾಸಗಟಾಗಿ ತಿರಸ್ಕರಿಸಿದೆ.

ಸಿಎಎ ವಿಷಯದಲ್ಲಿ ವಿರೋಧ ಪಕ್ಷಗಳು ಒಮ್ಮತದಿಂದ ಹೋರಾಟ ಮಾಡುತ್ತಿಲ್ಲ. ಕಾಂಗ್ರೆಸ್ ಕರೆದ ಸಿಎಎ-ವಿರೋಧಿ ಸಭೆಯಲ್ಲಿ ಪ್ರಮುಖ ವಿರೋಧ ಪಕ್ಷಗಳು ಭಾಗವಹಿಸಲಿಲ್ಲ. ಕೆಲವೊಂದು ಕಾರಣಗಳು ಕ್ಷುಲ್ಲಕವಾಗಿದ್ದವು.

ಸಿಎಎಗೆ ಪ್ರಬಲ ವಿರೋಧ ಮೊದಲು ಬಂದಿದ್ದು ವಿದ್ಯಾರ್ಥಿ ಸಮುದಾಯದಿಂದ. ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಶುರುವಾದ ವಿರೋಧ ಹಾಗೂ ಅದರ ಬೆನ್ನಲ್ಲೇ ಆದ ಪೂಲೀಸ್ ಹಿಂಸಾಚಾರ ದೇಶವ್ಯಾಪಿ ಗಮನ ಸೆಳೆಯಿತು. ಹಲವಾರು ಪ್ರಮುಖ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಕಾಯಿದೆಯ ವಿರುದ್ಧ ಬೀದಿಗಿಳಿದರು. ಪ್ರತಿಭಟನೆ ದೇಶದುದ್ದಕ್ಕೂ ಹರಡಿತು. ಹಲವೆಡೆ ಜನರು ಹಿಂಸಾಚಾರಕ್ಕಿಳಿದರು. ಉತ್ತರ ಪ್ರದೇಶದಲ್ಲಿ ಆದ ಗಲಭೆಗಳು ಹಾಗೂ ನಂತರದ ಪೆಲೀಸ್ ದೌರ್ಜನ್ಯ ಸಿಎಎ ವಿರುದ್ಧದ ಪ್ರತಿಭಟನೆಗೆ ಮಸಿ ಬಳಿಯಿತು. ಸರ್ಕಾರ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಪ್ರತಿಭಟಿಸಿದವರನ್ನೆಲ್ಲಾ ದೇಶ ವಿರೋಧಿಗಳೆಂದು ಟೀಕಿಸಲು ಆರಂಭಿಸಿತು.

ವಿಶ್ವವಿದ್ಯಾಲಯಗಳಲ್ಲಿ ಹಾಗೂ ಶಿಕ್ಷಣ ಕೇಂದ್ರಗಳಲ್ಲಿ ಸಿಎಎ ವಿರುದ್ಧದ ಪ್ರತಿಭಟನೆ ನಿರಂತರವಾಗಿ ನಡೆದಿದೆ. ಮುಸ್ಲಿಂ ಮಹಿಳೆಯರು ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸರ್ಕಾರದ ನಿದ್ದೆಗೆಡಿಸಿದೆ. ವಿಚಾರಶೀಲ ಯುವಜನತೆ ಬಿಜೆಪಿಯ ಉದ್ದೇಶಗಳನ್ನು ಬಯಲಿಗೆಳೆದಿದ್ದಾರೆ. ಮೋದಿಯವರ ಸರ್ಕಾರದಿಂದ ಅಪಾರ ನಿರೀಕ್ಷೆಯಿಟ್ಟುಕೊಂಡಿದ್ದ ಯುವಜನತೆಗೆ ಭ್ರಮನಿರಸನವಾಗಿದೆ. ಈಗಿನ ಕೇಂದ್ರ ಸರ್ಕಾರದಿಂದ ಭಾರತದ ಜಾತ್ಯತೀತ ಪರಿಕಲ್ಪನೆ ಹಾಗೂ ಕೋಮು ಸೌಹಾರ್ದಕ್ಕೆ ಧಕ್ಕೆಯಾಗುತ್ತದೆ ಎಂಬ ಜಾಗೃತಿ ವಿದ್ಯಾರ್ಥಿ ಸಮುದಾಯದಲ್ಲಿ ಬಲವಾಗಿ ಮೂಡುತ್ತಿದೆ. ಈ ಕಾರಣದಿಂದಲೇ ಕೇಂದ್ರ ಸರ್ಕಾರ ವಿದ್ಯಾರ್ಥಿ ಸಮುದಾಯದಿಂದ ಅತ್ಯಂತ ಪ್ರಬಲ ವಿರೋಧವನ್ನು ಎದುರಿಸುತ್ತಿದೆ.

ಪ್ರತಿಭಟನಾಕಾರರಿಗೆ ಅಮಿತ್ ಷಾ ‘ತುಕ್‍ಡೆ ತುಕ್‍ಡೆ’ ಗ್ಯಾಂಗ್‍ಗಳೆಂಬ ಹಣೆಪಟ್ಟಿ ಕಟ್ಟಿದರು. ಮೋದಿ ಪ್ರತಿಭಟನೆ ಮಾಡುತ್ತಿರುವವರನ್ನು ಅವರು ಧರಿಸುವ ಬಟ್ಟೆಯಿಂದ ಗುರುತಿಸಬಹುದೆಂಬ ಹೇಳಿಕೆ ನೀಡಿ ಒಬ್ಬ ಪ್ರಧಾನಮಂತ್ರಿ ಎಷ್ಟರ ಮಟ್ಟಿಗೆ ನೈತಿಕವಾಗಿ ಕುಸಿಯಬಹುದೆಂದು ಪ್ರದರ್ಶಿಸಿದರು. ದೇಶದ ಜನರು ಅಭಿವೃದ್ಧಿಪರ ಹಾಗೂ ಭ್ರಷ್ಠಚಾರಮುಕ್ತ ಸರ್ಕಾರ ನಡೆಸಲು ಮೋದಿಯವರಿಗೆ ಭಾರಿ ಬೆಂಬಲ ವ್ಯಕ್ತಪಡಿಸಿದರು. ಆದರೆ ಎನ್‍ಡಿಎ ತನಗೆ ಸಿಕ್ಕಿರುವ ಅಮೂಲ್ಯ ಅವಕಾಶವನ್ನು ಪೂಲುಮಾಡುತ್ತಿದೆ

Leave a Reply

Your email address will not be published.