ಎಪ್ರಿಲ್ ಸಂಚಿಕೆಯ ಮುಖ್ಯ ಚರ್ಚೆ

ಕರ್ನಾಟಕದಲ್ಲಿ ಪರಿಸರ ಸಮತೋಲನ  ಸಾಧಿಸುವಲ್ಲಿ ಯಶಸ್ವಿಯಾಗುತ್ತಿದ್ದೇವೆಯೇ..?

ಪೃಥ್ವಿಯ ಮೇಲಾಗುತ್ತಿರುವ ಹವಾಮಾನ ವೈಪರೀತ್ಯ ಮತ್ತು ತಾಪಮಾನ ಹೆಚ್ಚಳದಿಂದ ಕರ್ನಾಟಕವೇನೂ ಹೊರತಾಗಿಲ್ಲ. ಬ್ರೆಜಿಲ್‍ನಲ್ಲಿ ಕಾಡು ಕಡಿದರೆ, ರಷ್ಯಾದಲ್ಲಿ ಕಲ್ಲಿದ್ದಲು ಸುಟ್ಟರೆ ಅಥವಾ ಅಭಿವೃದ್ಧಿಯ ಧಾವಂತದಲ್ಲಿ ಯುರೋಪಿಯನ್ ರಾಷ್ಟ್ರಗಳು ಓಝೋನ್ ಪದರ ಛೇದ ಮಾಡಿದರೆ ಅದರ ನೇರ ಪರಿಣಾಮ ಕರ್ನಾಟಕದ ಪರಿಸರದ ಮೇಲೆಯೂ ಬೀಳುತ್ತದೆ. ಪೆಸಿಫಿಕ್ ಸಾಗರದ ಮೇಲಿನ ‘ಎಲ್‍ನಿನೋ’ ಪರಿಣಾಮ ಕರ್ನಾಟಕದಲ್ಲಿ ಅತಿವೃಷ್ಟಿ-ಅನಾವೃಷ್ಟಿಗೆ ಎಡೆಮಾಡಿಕೊಡುತ್ತದೆ. ಹಾಗೆಂದ ಮಾತ್ರಕ್ಕೆ ಪರಿಸರ ಸಮತೋಲನದ ಬಗ್ಗೆ ನಾವು ಕರ್ನಾಟಕದಲ್ಲಿ ಅಸಡ್ಡೆ-ಅನಾದರ ತೋರುವಂತಿಲ್ಲ. ನಮ್ಮ ರಾಜ್ಯದಲ್ಲಿ ನಾವು ಪರಿಸರಕ್ಕೆ ಹಾನಿ ಮಾಡುವ ಕಾರಣಗಳನ್ನು ನಿಯಂತ್ರಿಸಬೇಕು ಮತ್ತು ಸಮತೋಲನ ಸಾಧಿಸುವ ಎಡೆಯಲ್ಲಿ ಕಾರ್ಯೋನ್ಮುಖರಾಗಬೇಕು. ನಮ್ಮ ಕೈಲಾದಷ್ಟು ಮಟ್ಟಿಗೆ ಪರಿಸರ ಹಾನಿಗೆ ಹಿನ್ನೆಡೆಯಾಗುವ ಕ್ರಮಗಳನ್ನು ಕೈಗೊಂಡು ಸಮತೋಲನ ಮತ್ತು ಸುಸ್ಥಿರ ಅಭಿವೃದ್ಧಿಗೆ ಕಾರಣಕರ್ತೃಗಳಾಗಬೇಕು.

  1. ಕೇವಲ 2017 ರಿಂದ 2019ರವರೆಗೆ ಕರ್ನಾಟಕದಲ್ಲಿ ಹೆಚ್ಚುವರಿಯಾಗಿ 1025 ಚದರ ಕಿಮೀ ಭೂಮಿ ಅರಣ್ಯವಾಗಿ ಪರಿವರ್ತಿತವಾದರೆ ಇದೇ ಸಮಯದಲ್ಲಿ ರಾಜ್ಯದ ಒಟ್ಟು ಅರಣ್ಯಭೂಮಿ ಶೇಕಡಾ 19.6 ರಿಂದ 20.1ಕ್ಕೆ ಏರಿದೆ.
  2. ದೇಶದಲ್ಲಿನ ಶೇಕಡಾ 25 ರಷ್ಟು ಹುಲಿಗಳು ಕರ್ನಾಟಕದಲ್ಲಿದ್ದರೆ ಇವುಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಿದೆ. ಚಿರತೆ, ಕಾಡಾನೆ ಮತ್ತು ಬೇರೆಲ್ಲಾ ಕಾಡುಪ್ರಾಣಿಗಳ ಸಂಖ್ಯೆ ಕರ್ನಾಟಕದ ಕಾಡುಗಳಲ್ಲಿ ಆರೋಗ್ಯಕರವಾಗಿದೆ. ಕರ್ನಾಟಕದ ಕಾಡುಗಳಲ್ಲಿ 529 ಹುಲಿಗಳು, 6049 ಆನೆಗಳು ಹಾಗೂ 1129 ಚಿರತೆಗಳು ಇವೆಯೆಂದು ವರದಿಯಾಗಿದೆ.
  3. ಇತ್ತೀಚೆಗಿನ ವರ್ಷಗಳಲ್ಲಿ ನದಿಮರಳು ಎತ್ತುವುದನ್ನು ನಿರ್ಬಂಧಿಸಿ ನದಿಗಳ ಪುನಶ್ಚೇತನಕ್ಕೆ ಪ್ರಯತ್ನಿಸಲಾಗುತ್ತಿದೆ. ಪ್ಲಾಸ್ಟಿಕ್ ನಿಷೇಧ, ಗಣಿ ನಿಷೇಧ ಮತ್ತಿತರ ಕ್ರಮಗಳಿಂದ ಪರಿಸರ ಹಾನಿ ತಡೆಯಲಾಗುತ್ತಿದೆ. ವಾಯು ಮಾಲಿನ್ಯ ತಡೆಗೆ ಸಾರ್ವಜನಿಕ ಸಾರಿಗೆ, ಸಿಎನ್‍ಜಿ ಬಳಕೆ, ಎಲ್‍ಪಿಜಿ ಸ್ಟೋವ್ ಬಳಕೆ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
  4. ಕಳೆದ ಹತ್ತು ವರ್ಷಗಳಲ್ಲಿ ದಕ್ಷಿಣ ಕರ್ನಾಟಕ, ಪಶ್ಚಿಮಘಟ್ಟ ಪ್ರದೇಶ ಹಾಗೂ ಕರಾವಳಿ ಪ್ರದೇಶಗಳು ಮತ್ತೆ ಹಸಿರಾಗಿವೆ. ನಗರಗಳಲ್ಲಿಯೂ ಮರಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.
  5. ಜಲ-ವಾಯು-ಬಿಸಿಲು ಮೂಲಗಳಿಂದ ನವೀಕರಿಸ ಬಹುದಾದ ವಿದ್ಯುಚ್ಛಕ್ತಿ ಮೂಲಗಳಿಗೆ ಒತ್ತಾಸೆ ನೀಡಲಾಗಿದೆ. ಈಗಾಗಲೇ ನಿಗದಿತ ಶೇಕಡಾ 15ಕ್ಕೂ ಹೆಚ್ಚು ಶಕ್ತಿಮೂಲ ಈ ಅಸಾಂಪ್ರದಾಯಿಕ ಮೂಲಗಳಿಂದ ಒದಗಿಬಂದಿದೆ.
  6. ಕರ್ನಾಟಕದ ಹಲವೆಡೆ ಸುಸ್ಥಿರ ಅಭಿವೃದ್ಧಿಯ ಪ್ರಮುಖ ಪ್ರಯೋಗಗಳಾಗಿವೆ. ಪರಿಸರ ಸಮತೋಲನ ಹಾಗೂ ವನ್ಯಸಂರಕ್ಷಣೆಯ ಬಗ್ಗೆ ಶಾಲೆ-ಕಾಲೇಜು-ಮಾಧ್ಯಮ-ಸಾರ್ವಜನಿಕ ಚರ್ಚೆಗಳಲ್ಲಿ ಗುರುತರ ಕಾಳಜಿ ವ್ಯಕ್ತವಾಗಿದೆ.

ಮೇಲಿನ ಹಲವು ಅಂಶಗಳು ನಮ್ಮ ಯಶಸ್ಸಿನ ಗಾಥೆಗಳಾದರೆ ಬೆಂಗಳೂರಿನ ಸಂಚಾರ ದಟ್ಟಣೆಯ ಬವಣೆ, ಅಂತರ್ಜಲದ ಘೋರ ದುರ್ಬಳಕೆ, ನಗರಗಳಲ್ಲಿನ ವಾಯು ಮಾಲಿನ್ಯ, ನದಿನೀರು ಅಸಮಂಜಸ ಬಳಕೆ, ಕಾಡುಪ್ರಾಣಿ-ಮಾನವ ಸಂಘರ್ಷಗಳನ್ನು ಎದುರಿಸುವಲ್ಲಿನ ವಿಫಲತೆ ಮತ್ತಿತರ ಹಲವುಹತ್ತು ಕ್ಷೇತ್ರಗಳಲ್ಲಿ ನಾವಿಂದು ಸೋಲು ಕಾಣುತ್ತಿದ್ದೇವೆ. ಈ ಸೋಲು-ಗೆಲುವುಗಳನ್ನು ಸಮಚಿತ್ತದಿಂದ ನೋಡಿ ನಮ್ಮ ಸಾಧನೆಯನ್ನು ಅಳೆಯುವ ಸಮಯ ಬಂದಿದೆ.

  • ಪರಿಸರ ಸಮತೋಲನ ಸಾಧಿಸುವಲ್ಲಿ ನಾವು ಇದುವರೆಗೆ ಕೈಗೊಂಡಿರುವ ಕ್ರಮಗಳ ಯಶಸ್ಸಿನ ಬಗ್ಗೆ ನಾವು ಸಂತೃಪ್ತರಾಗಬಹುದೇ..?
  • ಸಾಧಿಸುವ ಗುರಿಯ ದೂರ ಮತ್ತು ಕ್ಲಿಷ್ಟತೆಯ ಮುಂದೆ ಇದುವರೆಗಿನ ನಮ್ಮ ಸಾಧನೆ ಅಲ್ಪಮಾತ್ರವೇ..?
  • ಇದುವರೆಗಿನ ಸಾಧನೆ ಸುಲಭ ಸಾಧ್ಯವಾದರೆ ಮುಂದೆ ಆಗಬೇಕಿರುವ ಕಾರ್ಯಗಳ ಸಂಪೂರ್ಣ ಅರಿವು ನಮಗಿದೆಯೇ..?
  • ಅಥವಾ ಪರಿಸರ ಸಮತೋಲನ ಸಾಧಿಸುವಲ್ಲಿನ ನಮ್ಮ ಸಾಧನೆ ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಯಂತೆ ಆಗಿದೆಯೇ..?

ಮುಂದಿನ ದಶಕಗಳ ಮತ್ತು ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಲ್ಲಿ ಈ ಚರ್ಚೆ ಅತ್ಯಂತ ಪ್ರಮುಖವೂ ಅನಿವಾರ್ಯವೂ ಆಗಿದೆ. ಇರುವುದೊಂದೇ ಭೂಮಿ, ಇರುವುದೊಂದೇ ಕನ್ನಡ ನಾಡು. ಈ ನಾಡಿನ ನೆಲ-ಜಲ-ಕಾಡು-ಮೇಡುಗಳ ರಕ್ಷಣೆಯಲ್ಲಿ ನಾವು ವ್ಯರ್ಥ ಮಾಡಲು ಯಾವುದೇ ಸಮಯ ಉಳಿದಿಲ್ಲ. ಬನ್ನಿ, ಇದುವರೆಗೆ ಆಗಿರುವ ಕೆಲಸಗಳ ಪಟ್ಟಿ ಮಾಡೋಣ. ಪರಿಸರ ಸಮತೋಲನ ಸಾಧಿಸುವ ಹಾದಿಯಲ್ಲಿ ನಾವು ಮಾಡಬೇಕಾದ ಕೆಲಸಗಳನ್ನು ಮಾಡಿಬಿಡೋಣ. ನಾವು ಇನ್ನೊಬ್ಬರನ್ನು ದೂರುವಂತೆ ಇನ್ನೊಬ್ಬರು ನಮ್ಮನ್ನು ದೂರದಂತೆ ಎಚ್ಚರ ವಹಿಸೋಣ. ನಾಡಿನ ಜೀವನವನ್ನು ತಟ್ಟುವ ಈ ವಿಷಯದಲ್ಲಿ ನಮ್ಮೆಲ್ಲರ ಚಿಂತನೆ ಅಗತ್ಯವಾಗಿದೆ. ಪರಿಣತರ ತೂಕದ ಮಾತುಗಳೊಡನೆ ಸಾಮಾನ್ಯರ ಪರಿಸರ ಕಾಳಜಿಯು ಚರ್ಚೆಯ ಮೌಲ್ಯ ಹೆಚ್ಚಿಸಲಿದೆ. ನಿಮ್ಮ ಬರಹಗಳು ಮಾರ್ಚ್ 15ರೊಳಗೆ ನಮ್ಮ ಕೈಸೇರಲಿ.

ಸಮಾಜಮುಖಿ ಮಾಸಪತ್ರಿಕೆ

ನಂ.8, ಡಾ.ಎಚ್.ಎಲ್.ನಾಗೇಗೌಡ ರಸ್ತೆ (ಸರ್ಪೆಂಟೈನ್ ರಸ್ತೆ), ಕುಮಾರ ಪಾರ್ಕ್ ಪಶ್ಚಿಮ, ಶೇಷಾದ್ರಿಪುರಂ, ಬೆಂಗಳೂರು-560020.

ಇಮೇಲ್: samajamukhi2017@gmail.com,, ದೂ: 9606934018.

Leave a Reply

Your email address will not be published.