ಎಮ್ಮೆಯ ನಾಡಿನ ಕೆಲವು (ಅಧಿಕ) ಪ್ರಸಂಗಗಳು

ಎಮ್ಮೆಗಳ ನಾಡುಅಂತ ಕರೆಸಿಕೊಂಡ ನಾಡಿನಲ್ಲಿ ಎಮ್ಮೆಗಳ ಸಂಖ್ಯೆ ಕಡಿಮೆಯಾಗಿದ್ದನ್ನು ಮನಗಂಡ  ನಮ್ಮ ಮೈಸೂರಿನ ದೊರೆಗಳಾಗಿದ್ದ ಶ್ರೀ ಮನ್ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸನ್ ಒಂದು ಸಾವಿರದ ಒಂಭೈನೂರ ಹದಿನೈದನೇ ಇಸವಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡಿದರು.  ಎತ್ತಣ ಮಾಮರ ಎತ್ತಣ ಕೋಗಿಲೆ? ಅಂತ ಕೇಳಬೇಡಿ!

ಆದಾಗಿ ನಮ್ಮ ಮೈಸೂರು ಪ್ರಾಂತವನ್ನು ಹಿಂದಾನೊಂದು ಕಾಲದಲ್ಲಿ ‘ಮಹಿಷ ಮಂಡಲ’ ಅಂತ ಕರೆಯುತ್ತಿದ್ದರಂತೆ. ಮಹಿಷ ಮಂಡಲ ಅಂದರೆ ‘ಆಹಾ! ಎಂಥ ಚಂದವಾದ ಹೆಸರು!’ ಅಂತ ನಿಮಗನ್ನಿಸಬಹುದು. ಎಷ್ಟಾದರೂ ಅದು ಸಂಸ್ಕೃತ ಅಲ್ಲವೆ? ದೇವಭಾಷೆ! ಅದರಲ್ಲಿ ಏನು ಹೇಳಿದರೂ ಚಂದವೇ. ಸಾಮಾನ್ಯಾತಿಸಾಮಾನ್ಯ ವಿಷಯಗಳೂ ಸಂಸ್ಕೃತದಲ್ಲಿ ಹೇಳಿದರೆ ಚಂದವಾಗಿ ಕೇಳಿಸುತ್ತವೆ.

ಕನ್ನಡದಲ್ಲಿ ಕರಿಯ, ಕಾಳ, ಕದಿರ ಅಂತ ಹೆಸರಿಟ್ಟರೆ ಯಾರಿಗಾದರೂ ಬೇಜಾರಾಗುತ್ತದೆ. ಅದೇ ಸಂಸ್ಕೃತದಲ್ಲಿ ಶ್ಯಾಮ, ಕೃಷ್ಣ, ಕಿರಣ ಅಂತ ಹೆಸರಿಟ್ಟರೆ ಎಷ್ಟು ಚಂದ ನೋಡಿ. ಹಾಗೇ ಕನ್ನಡದ ಅರಿಶಿನದ ಬಟ್ಟೆ ಸಂಸ್ಕೃತದಲ್ಲಿ ಪೀತಾಂಬರವಾಗುತ್ತದೆ. ಕನ್ನಡದ ‘ಉದಕ’ ಸಂಸ್ಕೃತದ ‘ಜಲ’ವಾಗುತ್ತದೆ. ಅಷ್ಟಾö್ಯಕೆ ನಾವು ಬದುಕಿದ್ದಾಗ ತಿನ್ನುವ ಸಂಸ್ಕೃತದ ‘ಅನ್ನ’, ಮಲ್ಲಿಗೆ ಹೂವಿನಂತೆ ಬೆಳ್ಳಗೆ ಅರಳಿರುತ್ತದೆ. ಸತ್ತ ಮೇಲೆ ತಿನ್ನುವ ಕನ್ನಡದ ‘ಕೂಳ’ನ್ನು ಮುಷ್ಟಿಯಲ್ಲಿ ಮಿದ್ದಿ ದೂರದಲ್ಲಿಟ್ಟು ಕಾಗೆಗಳಿಗೆ ತಿನ್ನಿಸುತ್ತಾರೆ. ಕನ್ನಡದ ಅವ್ವ ‘ಬಸಿರಾ’ಗಿ ಹೆತ್ತರೆ ಸಂಸ್ಕೃತದ ಮಾತೆ ಗರ್ಭಿಣಿಯಾಗಿ ಪ್ರಸವಿಸುತ್ತಾಳೆ. ಹೀಗೇ ಬಹಳ ಹೇಳಬಹುದು.

ಇರಲಿ, ಇನ್ನೊಂದೇ ಉದಾಹರಣೆ ಹೇಳಿಬಿಡುತ್ತೇನೆ. ಕನ್ನಡದಲ್ಲಿ ‘ಉಚ್ಚೆ ಹುಯ್ಯೋದು’ ಎಂದರೆ ಎಷ್ಟು ಕೆಟ್ಟದಾಗಿ ಕೇಳಿಸುತ್ತೆ ನೋಡಿ. ನಾಲ್ಕಾರು ಮಂದಿ ಸುಸಂಸ್ಕೃತರು ಇರೋವಾಗ ಆಡೋ ಮಾತಾ ಅದು? ಅದನ್ನೇ ಸಂಸ್ಕೃತದಲ್ಲಿ ‘ಮೂತ್ರ ವಿಸರ್ಜನೆ’ ಅಂದರೆ ಯಾವ ಸುಶಿಕ್ಷಿತರಿಗೂ ಅಸಹ್ಯ ಅನ್ನಿಸುವುದಿಲ್ಲ. ನಮ್ಮ ಕಾಲದ ಹಳ್ಳಿ ಇಸ್ಕೂಲು ಐಕಳು ‘ಮೂತ್ರ ವಿಸರ್ಜನೆ’ ಅನ್ನುವಂಥಾ ಶಬ್ದಗಳನ್ನು ಉಚ್ಚರಿಸಬೇಕಾದರೇ ಉಚ್ಚೆ ಹುಯ್ಕೊಂಡುಬಿಡೋರು.

ಮೂತ್ರ ವಿಸರ್ಜನೆ ಅಂದದ್ದಕ್ಕೆ ನೆನಪಾಯ್ತು. ಕೈಲಾಸಂ, ಅದೇ ನಮ್ಮ ಕನ್ನಡದ ನಾಟಕಕಾರ ಟಿ.ಪಿ.ಕೈಲಾಸಂ, ಅವರ ಚಿಕ್ಕಂದಿನಲ್ಲಿ ಸಂಸ್ಕೃತ ತರಗತಿಗೆ ಸೇರಿಕೊಂಡಿದ್ದರಂತೆ. ಹುಡುಗನಿಗೆ ಒಂದು ಸಲ ಅದೂ ತರಗತಿ ನಡೀತಾ ಇದ್ದಾಗ ಉಚ್ಚೆ ಹುಯ್ಯೋಕೆ ಅವಸರ ಆಯ್ತು. ಅದಕ್ಕಾಗಿ ಹೊರಗೆ ಹೋಗಬೇಕಲ್ಲ! ಅವನೇನು ನಮ್ಮ ಸರ್ಕಾರಿ ಕನ್ನಡ ಸಾಲೆಯ ಹುಡುಗನೇ, ಮೇಷ್ಟರಿಗೆ ಕಿರುಬೆರಳೆತ್ತಿ ತೋರಿ ‘ಒಂದಕ್ಕೋಗಬೇಕು ಸಾ’ ಅಂದುಬಿಟ್ಟು ಓಡಿಹೋಗೋಕೆ?! ಪಾಠ ಮಾಡ್ತಾ ಇರೋದು ಸಂಸ್ಕೃತದ ಉಪಾಧ್ಯಾಯರು! ಹುಡುಗ ನಿಧಾನವಾಗಿ ಎದ್ದು, ಕಾಲು ಮಡಚಿ ಕಿರುಬೆರಳನ್ನೆತ್ತಿ ತೋರಿಸುತ್ತಾ ಹೇಳಿದ, “ಮೂತ್ರವಿಸರ್ಜನಾರ್ಥಂ ಬಹಿರ್ದೇಶಂ ಗಚ್ಛಾಮಿ!” ಎಂಥ ಚಂದ ಅಲ್ಲವೇ?

ಮಾತು ಎಲ್ಲೆಲ್ಲೋ ಹೋಯಿತು. ಹೋಗಲಿ ಬಿಡಿ. ಮಾತಿನ ಸ್ವಭಾವವೇ ಅದಲ್ಲವೇ? ನಾನೇನು ಹೇಳ್ತಾ ಇದ್ದೆ? ಹ್ಞಾಂ! ನಮ್ಮ ಮೈಸೂರು ಪ್ರಾಂತವನ್ನು ಹಿಂದಾನೊAದು ಕಾಲದಲ್ಲಿ ‘ಮಹಿಷ ಮಂಡಲ’ ಅಂತ ಕರೆಯುತ್ತಿದ್ದರಂತೆ, ಅದೇ ತಾನೆ? ಮಹಿಷ ಅಂದರೆ ಕೋಣ. ಹಾಗೇ ಮಹಿಷಿ ಅಂದರೆ ಎಮ್ಮೆ. ‘ಇಕಾರಾಂತ ಸ್ತ್ರೀಲಿಂಗ!’ ಒಟ್ಟಿನಲ್ಲಿ ಹೀಗೆ ಹೇಳಬಹುದು ಮಹಿಷ ಮಂಡಲ (ಅಥವಾ ಮಹಿಷಿ ಮಂಡಲ) ಅಂದರೆ ಕನ್ನಡದಲ್ಲಿ ಎಮ್ಮೆಗಳ ನಾಡು. ಹೀಗೆ ಕರೆದದ್ದು ಯಾಕೆ ಅಂದರೆ ಆ ಕಾಲದಲ್ಲಿ ಈ ಪ್ರದೇಶದಲ್ಲಿ ಒಳ್ಳೆ ಎಮ್ಮೆಗಳನ್ನು ಸಾಕುತ್ತಿದ್ದರಂತೆ. ಆದ್ದರಿಂದ ಎಲ್ಲೆಂದರಲ್ಲಿ ಎಮ್ಮೆಗಳು ಮೇದಾಡಿಕೊಂಡು, ಕಾದಾಡಿಕೊಂಡು, ಓಡಾಡಿಕೊಂಡು ಸುಖವಾಗಿದ್ದವಂತೆ. ಸಹಜವಾಗಿಯೇ ಇಲ್ಲಿ ಎಮ್ಮೆ ಹಾಲು ಕುಡಿದ ಜನರೆಲ್ಲಾ ದಷ್ಟಪುಷ್ಟವಾಗಿ, ಆರೋಗ್ಯವಾಗಿ, ಆನಂದವಾಗಿ ಇದ್ದರಂತೆ. ಅಂತೂ ಈ ಪ್ರದೇಶ ಲಾಗಾಯ್ತಿನಿಂದಲೂ ‘ಎಮ್ಮೆಗಳ ನಾಡು’ ಅಂತ ಆಯ್ತು.

ಕಾಲ ಇದ್ದ ಹಾಗೇ ಇರುವುದಿಲ್ಲ. ಎಮ್ಮೆ ಹಾಲು ಕುಡಿದರೆ ಕೇವಲ ದೇಹ ಬೆಳೆಯುವುದೇ ಪರಂತೂ ಬುದ್ಧಿ ಬೆಳೆಯಬೇಕಾದರೆ ಹಸುವಿನ ಹಾಲು ಕುಡಿಯಬೇಕು ಎಂಬ ಜ್ಞಾನ ಕಾಲಾನಂತರದಲ್ಲಿ ಬೆಳೆಯಿತು. ಆದ್ದರಿಂದ ಜನರು ಹಸುಗಳನ್ನೂ ಸಾಕಲು ಆರಂಭ ಮಾಡಿದರು. ತತ್ಪರಿಣಾಮವಾಗಿ ಎಮ್ಮೆಗಳ ಸಂಖ್ಯೆ ಕಡಿಮೆಯಾಯಿತು. ‘ಎಮ್ಮೆಗಳ ನಾಡು’ ಅಂತ ಕರೆಸಿಕೊಂಡ ನಾಡಿನಲ್ಲಿ ಎಮ್ಮೆಗಳ ಸಂಖ್ಯೆ ಕಡಿಮೆಯಾಗಿದ್ದನ್ನು ಮನಗಂಡ  ನಮ್ಮ ಮೈಸೂರಿನ ದೊರೆಗಳಾಗಿದ್ದ ಶ್ರೀ ಮನ್ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸನ್ ಒಂದು ಸಾವಿರದ ಒಂಭೈನೂರ ಹದಿನೈದನೇ ಇಸವಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡಿದರು. ಎತ್ತಣ ಮಾಮರ ಎತ್ತಣ ಕೋಗಿಲೆ? ಎತ್ತಣ ಎಮ್ಮೆ ಎತ್ತಣ ವಿಶ್ವವಿದ್ಯಾನಿಲಯ? ಇದು ಎತ್ತಣಿಂದೆತ್ತ ಸಂಬಂಧವಯ್ಯಾ? ಅಂತ ಕೇಳಬೇಡಿ. ತಾವು ಸಾವಧಾನವಾಗಿ ಲಾಲಿಸಬೇಕು.

ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆಯಾದ ನಂತರ ಅಲ್ಲಿಂದ ಕಾಲಾನುಕಾಲಕ್ಕೆ ಕನ್ನಡ ಎಮ್ಮೆ, ಇಂಗ್ಲಿಷ್ ಎಮ್ಮೆ, ಹಿಸ್ಟರಿ ಎಮ್ಮೆ, ಸೋಷಿಯಾಲಜಿ ಎಮ್ಮೆ, ಎಕನಾಮಿಕ್ಸ್ ಎಮ್ಮೆ, ಜಿಯಾಗ್ರಫಿ ಎಮ್ಮೆ, ಪೊಲಿಟಿಕಲ್ ಸೈನ್ಸ್ ಎಮ್ಮೆ, ಬಗೆ ಬಗೆ ತಳಿಯ ಎಮ್ಮೆಗಳು ಹೊರಬಂದವು. ಅಚ್ಚರಿಯೆಂದರೆ ಈ ಎಮ್ಮೆಗಳಲ್ಲಿ ಸಂಸ್ಕೃತ ಎಮ್ಮೆಗಳೂ, ಹಿಂದಿ ಎಮ್ಮೆಗಳೂ, ಉರ್ದು ಎಮ್ಮೆಗಳೂ ಇದ್ದವು. ನಾನು ಎಂ.ಎ. ಅನ್ನುವುದಕ್ಕೆ ಬರದೆ ಎಮ್ಮೆ ಅನ್ನುತ್ತಿದ್ದೇನೆ ಅಂತ ನೀವು ಬಯ್ಯಬಾರದು. ಈಗಲೂ ವಿಶ್ವವಿದ್ಯಾನಿಲಯದೊಳಗೆ ಅಡ್ಡಾಡುವ ಎಮ್ಮೆಗಳನ್ನು ಮಾತಾಡಿಸಿ ನೊಡಿ. ನಾನು ಕನ್ನಡ ಎಮ್ಮೆ, ಹಿಂದಿ ಎಮ್ಮೆ ಅನ್ನುತ್ತವೆಯೇ ಪರಂತೂ ಕನ್ನಡ ಎಂ.ಎ, ಹಿಂದಿ ಎಂ.ಎ. ಅನ್ನುವುದಿಲ್ಲ.

ಎಮ್ಮೆಗಳ ನಾಡಿನಲ್ಲಿ ನಮ್ಮನ್ನು ‘ಎಮ್ಮೆ’ ಅಂದುಕೊಳ್ಳುವುದು ನಮಗೊಂದು ಹೆಮ್ಮೆಯೇ ವಿನಾ ಅನ್ಯಥಾ ಅಲ್ಲ. ಯಾಕೆಂದರೆ ಇದನ್ನೆಲ್ಲಾ ನಿಮ್ಮ ಮುಂದೆ ಹೇಳುತ್ತಿರುವ ನಾನೂ ಕೂಡ ಒಂದು ಕನ್ನಡ ಎಮ್ಮೆ. ಅಯ್ಯಾ, ನಾನು ಹೇಳುವುದನ್ನೆಲ್ಲಾ ಕೇಳುತ್ತಿರುವ ನೀವು ನಿಜವಾಗಲೂ ದೇವರಂಥವರು. ನಾನು ನಿಜ ಹೇಳಿದರೂ ಕೇಳ್ತೀರಿ, ಸುಳ್ಳು ಹೇಳಿದರೂ ಕೇಳ್ತೀರಿ. ಇದನ್ನೆಲ್ಲಾ ನಾನು ಹೇಳುತ್ತಿರುವುದು ಯಾಕೆಂದರೆ, ಮೈಸೂರಿಗೂ ಎಮ್ಮೆಗಳಿಗೂ ಸಂಬಂಧವಿದೆ ಅನ್ನುವುದನ್ನು ಸ್ಥಾಪಿಸುವುದಕ್ಕಾಗಿಯೇ ಪರಂತೂ ಅನ್ಯಥಾ ಅಲ್ಲ. ಅಷ್ಟಕ್ಕೂ ಸರ್ವೇಸಾಮಾನ್ಯವಾಗಿ ನನ್ನ ಮಾತು ನಿಮಗೆ ಒಪ್ಪಿಗೆಯಾಗದಿದ್ದಲ್ಲಿ, ಕೆಲವು ವರ್ಷಗಳ ಹಿಂದೆ ಇದೇ ನಮ್ಮ ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟಕ ದೇಶದ ಮಂತ್ರಿವರ್ಯರೊಬ್ಬರು ಮೈಸೂರಿಗೆ ಬಂದು ಉದ್ಘೋಷಣೆ ಮಾಡಿದ್ದು ನಿಮಗೆ ಗೊತ್ತೋ ಇಲ್ಲವೋ!- ‘ಯಾವ ಈ ಮೈಸೂರು ಹೆನ್ನತಕ್ಕಂಥದ್ದು ಖರ್ನಾಟಕಕ್ಕೆ ಮಾತ್ರವಲ್ಲ; ಹಿಡೀ ಭಾರಥ ಧೇಶಕ್ಕೇ ಹೊಂದು ಎಮ್ಮೆ, ಹಿದು ನಮ್ಮೆಲ್ಲರ ಎಮ್ಮೆಯ ನಗರಾ!!’ ಪಾಮರನಾದ ನನ್ನ ಮಾತು ನಿಮಗೆ ಒಪ್ಪಿಗೆಯಾಗದಿದ್ದರೆ ಬೇಡ. ಸನ್ಮಾನ್ಯ ಮಂತ್ರಿಗಳು ಹೇಳಿದ ಮೇಲೆ ಒಪ್ಪಲೇಬೇಕು ತಾನೆ? ಯಾಕೆಂದರೆ ಅವರು ನಾವೇ ಚುನಾಯಿಸಿದ ಘನ ಸರ್ಕಾರದ ಸನ್ಮಾನ್ಯ ಮಂತ್ರಿಗಳಲ್ಲವೆ?

ಮಾನ್ಯ ಓದುಗರೇ, ಇಲ್ಲಿವರೆಗೆ ನಾನು ಏನೇನೋ ಹೇಳಿದೆ. ನೀವೂ ಅದನ್ನೆಲ್ಲಾ ಓದಿದಿರಿ. ಈಗೊಂದು ಸಾರಿ ನೀವು ನನ್ನನ್ನು ಕ್ಷಮಿಸಬೇಕು. ನಾನು ಮೊದಲೇ ಹೇಳಿದ್ದೀನಿ. ನೀವು ದೇವರಂಥಾ ಜನ, ನಾನು ನಿಜ ಹೇಳಿದ್ರೂ ಕೇಳ್ತೀರಿ, ಸುಳ್ಳು ಹೇಳಿದರೂ ಕೇಳ್ತೀರಿ. ನನ್ನನ್ನ ನಿಮ್ಮ ಕರುಣೆಯ ಕಂದ ಅಂತ ತಿಳಿದು ದಯವಿಟ್ಟು ಕ್ಷಮಿಸಬೇಕು. ನಾನು ಏನೇನೋ ಹೇಳಿ ದಯವಿಟ್ಟು ನಿಮ್ಮ ಸಮಯ ಹಾಳುಮಾಡಿಬಿಟ್ಟೆ. ಹೀಗೆ ಏನೇನೋ ಹೇಳಿ ಸಮಯ ಹಾಳು ಮಾಡಿದ ಎಷ್ಟೋ ಜನರನ್ನು ನೀವು ಕ್ಷಮಿಸುತ್ತಲೇ ಬಂದಿದ್ದೀರಿ. ಅವರು ಹೇಳಿದ ಎಷ್ಟೋ ಅಪದ್ಧಗಳನ್ನು ಹೊಟ್ಟೆಗೆ ಹಾಕಿಕೊಂಡು ಅರಗಿಸಿಕೊಂಡಿದ್ದೀರಿ. ಈಗ ಕ್ಷಮಿಸುವುದಕ್ಕೆ ನಾನೊಬ್ಬ ಹೆಚ್ಚಾಗ್ತೀನಾ? ಖಂಡಿತವಾಗಿಯೂ ಇಲ್ಲ.

ವಿಷಯ ಏನಪ್ಪಾ ಅಂದ್ರೆ, ನಾನು ನಿಮಗೆ ಹೇಳೋಕೆ ಅಂತ ಹೊರಟಿದ್ದು ಇದಲ್ಲವೇ ಅಲ್ಲ. ಅದೇ ಬೇರೆ. ಅದನ್ನ ಈಗ ಹೇಳ್ತೀನಿ. ನಿಧಾನವಾಗಿ ಕೇಳಿ. ಎಲ್ಲಾ ಕಡೆ ಲಾಕ್‌ಡೌನ್ ಇರೋದರಿಂದ ನಿಮಗೆ ಟೈಮು ಹೇಗೂ ಇದ್ದೇ ಇದೆ.

ಏನಪ್ಪಾ ಅಂದ್ರೆ, ಈ ಕೊರೊನಾ ಅಂತ ಹಾಳು ವೈರಸ್ಸು ಬಂದು ಇಡೀ ಪ್ರಪಂಚದ ಮೂಗಿಗೇ ಮಾಸ್ಕು ಹಾಕಿ ಕಣ್ಣೀರಲ್ಲಿ ಮತ್ತು ಸಾಬೂನಲ್ಲಿ ಕೈ ತೊಳಿಸ್ತಾ ಇದೆಯಲ್ಲ, ಈ ಸಂದರ್ಭದಲ್ಲಿ ಇದೇ ನಮ್ಮ ಎಮ್ಮೆಯೂರಿನಲ್ಲಿ ನಾನು ಕಂಡು ಕೇಳಿದ ಒಂದೆರಡು (ಅಧಿಕ)ಪ್ರಸಂಗಗಳನ್ನು ನಿಮ್ಮೆದುರು ಹೇಳಬೇಕು ಅಂತ ನಾನು ಹೊರಟದ್ದು. ಈಗ ಅರ್ಥವಾಯಿತಲ್ಲವೇ? ಕೇಳಿ.

ಪ್ರಸಂಗ ಒಂದು:

ಇದೇ ನಮ್ಮ ಎಮ್ಮೆಯೂರಿನಲ್ಲಿ ಒಂದು ಕಾಫಿ ಡೇ. ಅದರ ಟೇಬಲ್ ಮೇಲೆ ಒಂದು ವೈರಸ್ ಇನ್ನೊಂದರ ಜೊತೆ ಕೂತುಕೊಂಡು ಮಾತಾಡ್ತಾ ಇದ್ದವಂತೆ, ಅದೂ ಕನ್ನಡದಲ್ಲಿ-

“ಆಲ್ ಸೆಡ್ ಅಂಡ್ ಡನ್, ನಮ್ ಪ್ರೀವಿಯಸ್ ಜನರೇಷನ್ನು ಡ್ಯಾಮ್ ಯೂಸ್‌ಲೆಸ್ಸ್ ಮಗ! ಸರಿಯಾಗಿ ಅಪ್‌ಡೇಟೇ ಆಗಿಲ್ಲ ಅವರು. ಅವನಜ್ಜಿ ನಾವ್ ನೋಡು, ಪ್ರೆಸೆಂಟ್ ಜನರೇಷನ್ನು! ಓವರ್‌ನೈಟ್ ವರ್ಲ್ಡ್ವೈಡ್ ಸ್ಪೆçಡ್ ಆಗಿಬಿಟ್ವಿ. ನಾವು ಲಾಗ್‌ಇನ್ ಆಗ್ತಿದ್ದಂತೆ ಇಡೀ ವರ್ಲ್ಡು ಲಾಕ್‌ಡೌನ್ ಆಗಿಬಿಡ್ತು! ಯೆಂಗೆ!?’

ಕೆಲವು ದಿನಗಳ ಹಿಂದೆ, ಅದೇ ಕಾಫಿ ಡೇನಲ್ಲಿ ಕೂತ ನಮ್ಮ ಪ್ರೆಸೆಂಟ್ ಜನರೇಷನ್ ಹುಡುಗ ಹುಡುಗಿಯರೂ ಅಲ್ಲಿ ಹಾಗೇ ಮಾತಾಡ್ತಿದ್ದರಂತೆ!

ಪ್ರಸಂಗ ಎರಡು:

ನಮ್ಮ ಜೋಯಿಸರು ಭಾಳಾ ಫೇಮಸ್ಸು. ಮೊದಲು ಇಷ್ಟಿರಲಿಲ್ಲ. ಮದುವೆ, ತಿಥಿ, ಗೃಹಪ್ರವೇಶಗಳ ಪೌರೋಹಿತ್ಯ ಮಾಡಿಕೊಂಡು ಹ್ಯಾಗೋ ಹಾಗಿದ್ದರು. ನಮ್ಮ ಟಿ.ವಿ. ಚಾನಲ್ಲುಗಳಲ್ಲಿ ಅವರೇ ಸ್ಲಾಟ್ ಪ್ರಾಕ್ಟೀಸ್ ಮಾಡಿ ತೆರೆಯ ಮೇಲೆ ಅವತರಿಸಿ ಭವಿಷ್ಯ ಹೇಳೋದಕ್ಕೆ ಶುರುಮಾಡಿದ ಮೇಲೆ ಬ್ರಹ್ಮಾಂಡ ಫೇಮಸ್ ಆಗಿಬಿಟ್ಟಿದ್ದಾರೆ. ಈಗ ಅವರ ಅಪಾಯಿಂಟ್‌ಮೆಂಟ್ ಆಗೋದಕ್ಕೆ ಎಮ್ಮೆಲ್ಲೆ ಎಂಪಿಗಳಿಂದ ಫೋನು ಮಾಡಿಸಬೇಕಾಗಿದೆ. ಅಷ್ಟು ಡಿಮ್ಯಾಂಡು. ಅವರ ಟಿ.ವಿ. ಲೈವ್ ಪ್ರೋಗ್ರಾಮ್‌ನಲ್ಲಿ ‘ನಮ್ಮ ಪುಣ್ಯ’ಕ್ಕೆ ಲೈನ್ ಸಿಕ್ಕಿ ನಾವು ಯಾರದಾದರೂ ಜನ್ಮದಿನಾಂಕ, ಜನ್ಮಸ್ಥಳ, ಹೆಸರು ಹೇಳಿದರೆ ಅವರ ಇಡೀ ಜಾತಕವನ್ನು ಜಾಲಾಡಿಬಿಡ್ತಾರೆ. ನನ್ನ ಪುಣ್ಯಕ್ಕೆ ಒಂದು ಸಲ ಲೈನ್ ಸಿಕ್ಕಿತು. “ಗುರೂಜಿ ಇದ್ದಾರೆ, ಮಾತಾಡಿ” ಅಂದಳು ಆ್ಯಂಕರಿAಗ್ ಮಾಡುತ್ತಿದ್ದ ಸುಂದರಿ. ನಾನು ಕೇಳಿದೆ-

“ಗುರೂಜಿ, ಹೆಸರು-ಕೊರೊನಾ, ಹುಟ್ಟಿದ್ದು- ನವೆಂಬರ್ 2019, ಗೋತ್ರ-ವೈರಸ್ಸು, ಜನ್ಮಸ್ಥಳ- ಚೀನಾ ದೇಶದ ವುಹಾನ್. ಈ ಜಾತಕದ ಆಯಸ್ಸೆಷ್ಟು ಅಂತ ಸ್ವಲ್ಪ ನೋಡಿ ಹೇಳ್ತೀರಾ?”

ಗುರೂಜಿ ಹೇಳಿದರು-

“ಅದರ ಮುಂಡಾಮೋಚ್ತು. ನನ್ನ ಗ್ರಹನಕ್ಷತ್ರಗಳೆಲ್ಲಾ ಸನಾತನವಾದವು. ನಿಮ್ಮ ವೈರಸ್ಸು ಹೊಸಾದು. ನಾನೇನು ಹೇಳ್ಲಯ್ಯಾ ನಿನ್ನ ಪಿಂಡ?”

ಲೈನ್ ‘ಕಟ್’ ಆಯಿತು.

ಪ್ರಸಂಗ ಮೂರು:

ಅಣ್ಣೇಗೌಡ ಅನ್ನುವುದು ತಂದೆ ತಾಯಿ ಇಟ್ಟ ಹೆಸರು. ‘ಎಣ್ಣೇಗೌಡ’ ಅನ್ನುವುದು ಸ್ವಯಾರ್ಜಿತ ಕೀರ್ತಿ.

ಈ ಕೀರ್ತಿ ಸುಮ್ಮನೆ ಬಂದದ್ದಲ್ಲ. ಪುಗಸಟ್ಟೆ ಪುನಗಲ್ಲ. ಅದಕ್ಕಾಗಿ ಅವನು ಎಷ್ಟು ಹಾರಾಡಿದ್ದನೋ, ಎಷ್ಟು ತೂರಾಡಿದ್ದನೋ, ಅದೆಷ್ಟು ಬಾರಿ ಬಿದ್ದು ಎದ್ದಿದ್ದನೋ!

ಈ ಗೌರವಕ್ಕಾಗಿ ಅವನು ಕಳೆದಿದ್ದೆಷ್ಟು?- ಲೆಕ್ಕ ಇಟ್ಟಿಲ್ಲ. ಪಿತ್ರಾರ್ಜಿತ ಆಸ್ತಿ ಇನ್ನೂ ಬೇಜಾನ್ ಇದೆ!

ಇಂಥಾ ಎಣ್ಣೇಗೌಡನ ಬದುಕಿನ ದುರ್ದಿನಗಳೆಂದರೆ, ಅದು ಲಾಕ್‌ಡೌನ್!

ಒಂದು ದಿನ, ಅದೊಂದು ಮಂಗಳ ಮುಹೂರ್ತದಲ್ಲಿ ನಮ್ಮ ಘನ ಸರ್ಕಾರ ಮುಚ್ಚಿದ್ದ ಎಣ್ಣೆ ಅಂಗಡಿಗಳನ್ನು ತೆರೆಯಿತು. ಅದೃಷ್ಟ ನೋಡಿ. ಎಣ್ಣೇಗೌಡನ ಮನೆಯ ಸ್ಟಾಕ್ ಮುಗಿಯುವುದಕ್ಕೂ ಸರ್ಕಾರ ಎಣ್ಣೆ ಅಂಗಡಿಗಳನ್ನು ತೆರೆಯುವುದಕ್ಕೂ ಒಂದೇ ಆಯಿತು.

ಮುಂದೆ ಹೆಂಗೋ ಏನೋ!? ಯಾವುದಕ್ಕೂ ಮತ್ತೆ ಮನೆಯಲ್ಲಿ ಸಾಕಷ್ಟು ದಾಸ್ತಾನು ಇಟ್ಟುಕೊಳ್ಳುವುದು ಒಳ್ಳೆಯದಲ್ಲವೆ?

ಆವತ್ತು ಬೆಳಬೆಳಗ್ಗೆಯೇ ಮನೆಯಲ್ಲಿ ‘ಮಿತವ್ಯಯ’ ಸಾಧಿಸಿ ಉಳಿಸಿದ್ದನ್ನೆಲ್ಲಾ ಹೊಟ್ಟೆಗೆ ಹುಯ್ದುಕೊಂಡ ಎಣ್ಣೇಗೌಡ, ಎಣ್ಣೆ ಅಂಗಡಿಯ ಮುಂದೆ ನಿಂತ. ಅವನು ನಿಂತಲ್ಲೇ ನಿಂತಿದ್ದರೂ ಭೂಮಿ ತಿರುಗುತ್ತಿತ್ತು. ಭೂಮಿ ಏನು ಇವತ್ತಿನಿಂದ ತಿರುಗುತ್ತಿದೆಯಾ? ಅದಿರಲಿ, ಸಂತೋಷಾಧಿಕ್ಯದಿAದ ಅವನ ನಾಲಗೆ ತಡವರಿಸುತ್ತಿತ್ತು. ಕಷ್ಟಪಟ್ಟು ತನಗೆ ಬೇಕು ಬೇಕಾದಷ್ಟು ಎಣ್ಣೆಯನ್ನ ಪರ್ಚೇಸ್ ಮಾಡಿದ. ಆಮೇಲೆ ಏನನ್ನಿಸಿತೋ ಏನೊ, ಅಂಗಡಿಯವನನ್ನು ಕೇಳಿದ-

“ಬ್ರದರ್ರ್, ಲ್ಲಾಕ್‌ಡ್‌ಡೌನ್ ಅಂತ ಎಣ್‌ಣ್ಣೆ ಕ್ವಾಲ್‌ಲಿಟಿ ಕೆಟ್‌ಟ್ಟಿಲ್ಲ ತಾನೆ? ಒಳ್‌ಳ್ಳೆ ಮೈಲೇಜ್ ಕೊಡ್‌ತದೆ ಅಲ್‌ಲ್ವಾ?”

“ಡೌಟೇ ಇಲ್ಲ ಬ್ರದರ್! ಕ್ವಾಲಿಟಿ ಗ್ಯಾರಂಟಿ!”

(ಎಣ್ಣೆ ಅಂಗಡಿಯಲ್ಲಿ ಮಾರುವವನು, ಕೊಳ್ಳುವವನು ಇಬ್ಬರೂ ಬ್ರದರ‍್ಸೇ! ಅಲ್ಲಿರುವ ಭ್ರಾತೃತ್ವ ಇಡೀ ದೇಶದಲ್ಲಿದ್ದರೆ…?!)

“ಬ್ರ್ ಬ್ರ್ದರ್, ಇಲ್ಲಿ ನಾವು ಒಬ್ಬ ಒಂದ್ ನೈಂಟಿ ಹಾ..ಹಾಕಿದ್ರೆ ಎಷ್‌ಷ್ಟ್ ಕಿಲ್ಲೋ ಮೀಟ್ರ್ ಮೈಲೇಜ್ ಕೊಡುತ್ತೆ?”

“ಸಾರಿ ಬ್ರದರ್, ಅರ್ಥವಾಗಲಿಲ್ಲ”.

“ಹೋಗ್‌ಲಿ ಬುಡು ಬ್ರದ್‌ರ‍್ರ್, ಇಇದನ್ನಾರಾ ಯೆಯೇಳು…ನಾವು ಒಂದ್‌ದ್ ಲೀಟ್ರು ತತತತಕ್ಕೊಂಡ್ರೆ ನಮ್ಮ್ ಸರ್‌ರ್‌ಕಾರಕ್ಕೆ ಎಷ್‌ಷ್ಟ್ ದಿವ್‌ಸ ಮೈಲೇಜ್ ಕ್‌ಕೊಡುತ್ತೆ?”

“ಸಾರಿ ಬ್ರದರ್, ಎಕ್ಸೆಸ್ ಮಿನಿಷ್ಟ್ರು ಕೇಳಿ ಹೇಳ್ತೀನಿ. ಆಗಬಹುದಾ?”

ಪ್ರಸಂಗ ನಾಲ್ಕು:

ಕೊರೊನಾ ಲಾಕ್‌ಡೌನ್ ಇಷ್ಟಿಷ್ಟೇ ತೆರವಾಗುತ್ತಿತ್ತು. ಸರ್ಕಾರಿ ಕಚೇರಿಗಳೂ ಒಂದೊಂದಾಗಿ ತೆರೆಯುತ್ತಿದ್ದವು. ಎರಡು ತಿಂಗಳು ಮನೆಯಲ್ಲೇ ಕುಕ್ಕುರು ಬಡಿದಿದ್ದ ಗಂಡ ಅದೊಂದು ಶುಭ ಸೋಮವಾರ ಸ್ನಾನ ಮಡಿ ಮಾಡಿಕೊಂಡು, ಶುಚೀರ್ಭೂತನಾಗಿ, ಮನೆದೇವರಿಗೊಂದು ನಮಸ್ಕಾರ ಹಾಕಿ ಆಫೀಸಿಗೆ ಹೊರಡುವ ಮುನ್ನ ಹೆಂಡತಿಯನ್ನು ಕೇಳಿದ-

“ಏನೇ, ಹೊರಗಡೆ ಹೋಗ್ತಾ ಇದ್ದೀನಿ, ಏನಾದ್ರೂ ಬೇಕಿತ್ತಾ?”

“ಏನಂದ್ರೀ?”

“ಹೊರಗಡೆ ಹೋಗ್ತಾ ಇದ್ದೀನಿ, ಏನಾದ್ರೂ ಬೇಕಿತ್ತಾ?”

“ಹೊರಗಡೆ ಹೋಗ್ತಾ ಇದ್ದೀರಾ?”

“ಹೌದು”

“ಅಷ್ಟು ಸಾಕು!”

ಸನ್ಮಾನ್ಯ ಓದುಗರೇ, ಮಾತು ಮುಗಿಸುವ ಮೊದಲು ಮತ್ತೆ ಹೇಳಿಬಿಡ್ತೀನಿ. ನೀವು ದೇವರಂಥವರು. ನಾನು ನಿಜ ಹೇಳಿದರೂ ಕೇಳ್ತೀರಿ, ಸುಳ್ಳು ಹೇಳಿದರೂ ಕೇಳ್ತೀರಿ. ಆದರೂ ನಿಮ್ಮ ಸಮಯ ಹಾಳು ಮಾಡಿದೆ ಎಂದು ನಿಮಗನ್ನಿಸಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ. ಈವರೆಗೆ ಹೀಗೆ ಸಮಯ ಹಾಳು ಮಾಡಿದ ಎಷ್ಟು ಜನರನ್ನು ಕ್ಷಮಿಸಿಲ್ಲ ನೀವು? ನಿಮಗೆ ನಾನೊಬ್ಬ ಹೆಚ್ಚಾಗ್ತೀನಾ?

ಮತ್ತೆ ಭೇಟಿಯಾಗೋಣ.

*ಲೇಖಕರು ಖ್ಯಾತ ಹಾಸ್ಯ ಭಾಷಣಕಾರರು; ನಿವೃತ್ತ ಕನ್ನಡ ಪ್ರಾಧ್ಯಾಪಕರು, ಮೈಸೂರು ನಿವಾಸಿಗಳು.

Leave a Reply

Your email address will not be published.