ಎರಡನೆಯ ನಾಗವರ್ಮನ ‘ಕರ್ಣಾಟಕ ಭಾಷಾಭೂಷಣ’

ರಾಜಶೇಖರ ಬಿರಾದಾರ

ಕನ್ನಡದ ಮೊದಲ ಲಭ್ಯ ವ್ಯಾಕರಣ ಕೃತಿಯೆಂದರೆ, ಎರಡನೆಯ ನಾಗವರ್ಮನಕರ್ಣಾಟಕ ಭಾಷಾಭೂಷಣಂ. ‘ಅಭಿನವ ಶರ್ವವರ್ಮ, ‘ಕವಿತಾ ಗುಣೋದಯಎಂಬ ಬಿರುದಾಂಕಿತ ನಾಗವರ್ಮನ ಸಂಕ್ಷಿಪ್ತ ಪರಿಚಯದೊಂದಿಗೆ ಕನ್ನಡ ವ್ಯಾಕರಣ ಕೃತಿಗಳಲ್ಲಿಕರ್ಣಾಟಕ ಭಾಷಾಭೂಷಣಂ ಸ್ಥಾನವನ್ನು ವಿಶ್ಲೇಷಣೆ ಮಾಡುವುದು ಲೇಖನದ ಉದ್ದೇಶವಾಗಿದೆ.

ವ್ಯಾಕರಣದಿಂದೆ ಪದಮಾ

ವ್ಯಾಕರಣದ ಪದದಿನರ್ಥಮರ್ಥದೆ ತತ್ವಾ

ಲೋಕಂ ತತ್ವಾಲೋಕದಿ

ನಾಕಾಂಕ್ಷಿಪ ಮುಕ್ತಿಯಕ್ಕುಮಿದೆ ಬುದರ್ಗೆ ಫಲಂ

(ಶಬ್ದಮಣಿದರ್ಪಣಂ, ಪೀಠಿಕೆ-10)

ಕೇಶಿರಾಜನ ಮಾತುಗಳು ವ್ಯಾಕರಣದ ಸಮಗ್ರ ಮಹತ್ವವನ್ನು ತಿಳಿಸಿಕೊಡುತ್ತವೆ. ಯಾವುದೇ ವಿಷಯದ ತಲಸ್ಪರ್ಶಿ ಅಧ್ಯಯನಕ್ಕೆ ಮೂಲ ಭಾಷೆಯ ಅಧ್ಯಯನ. ಭಾಷೆಯ ಅಧ್ಯಯನವು ಆರಂಭವಾಗುವುದು ಅಕ್ಷರ, ಪದ, ಪದಪುಂಜಗಳ ಮೂಲಕ. ಇವುಗಳನ್ನು ಸರಿಯಾಗಿ ಅಭ್ಯಸಿಸಿದರೆ, ಯಾವುದೇ ವಿಷಯವು ಅದು ತತ್ವಜ್ಞಾನದಂತಹ ಕ್ಲಿಷ್ಟ ಸಂಗತಿಯಾದರೂಸರಿಯಾಗಿ ಮನವರಿಕೆಯಾಗುತ್ತದೆ. ಆತ್ಯಂತಿಕವಾಗಿ ವ್ಯಕ್ತಿಯ ಸಕಲ ಇಷ್ಟಾರ್ಥಗಳ ಈಡೇರಿಕೆಗೂ ವ್ಯಾಕರಣದ ಅಧ್ಯಯನವೇ ತಳಹದಿಯಾಗಿದೆ. ಇಂತಹ ವ್ಯಾಕರಣ ಕೃತಿ ರಚನೆಯು ಕನ್ನಡದಲ್ಲಿ ಬಹು ಪ್ರಾಚೀನ ಇತಿಹಾಸವನ್ನು ಹೊಂದಿದೆ.

ಕವಿರಾಜಮಾರ್ಗವು ಕನ್ನಡದ ಮೊದಲ ಉಪಲಬ್ದ ಕೃತಿಯಾದರೂ ಪ್ರಾಸಂಗಿಕವಾಗಿ ವ್ಯಾಕರಣಾಂಶಗಳನ್ನು ಚರ್ಚಿಸುವ ಮೊದಲ ಕೃತಿಯೂ ಆಗಿದೆ. ನಂತರ ಬಂದ ರನ್ನ, ಜನ್ನ, ನಯಸೇನರು ವೈಯಾಕರಣಿಗಳಾಗಿದ್ದರೆಂಬ ಸುಳಿಹು ಸಿಕ್ಕರೂ ಅವರ ವ್ಯಾಕರಣ ಕೃತಿಗಳು ಲಭ್ಯವಾಗಿಲ್ಲ. ಇದುವರೆಗೆ ಕನ್ನಡದ ಮೊದಲ ಲಭ್ಯ ವ್ಯಾಕರಣ ಕೃತಿಯೆಂದರೆ, ಎರಡನೆಯ ನಾಗವರ್ಮನಕರ್ಣಾಟಕ ಭಾಷಾಭೂಷಣಂ. ‘ಅಭಿನವ ಶರ್ವವರ್ಮ, ‘ಕವಿತಾ ಗುಣೋದಯಎಂಬ ಬಿರುದಾಂಕಿತ ನಾಗವರ್ಮನ ಸಂಕ್ಷಿಪ್ತ ಪರಿಚಯದೊಂದಿಗೆ ಕನ್ನಡ ವ್ಯಾಕರಣ ಕೃತಿಗಳಲ್ಲಿಕರ್ಣಾಟಕ ಭಾಷಾಭೂಷಣಂ ಸ್ಥಾನವನ್ನು ವಿಶ್ಲೇಷಣೆ ಮಾಡುವುದು ಲೇಖನ ಉದ್ದೇಶವಾಗಿದೆ.

ಪ್ರಣುತ ಗುಣರೆನಿಪ ವಿಬುಧಾ

ಗ್ರಣಿಗಳ ಕೆಯ್ಕೊಂಡು ಪೊಗಳೆ ಸಲೆ ನೆಗಳ್ದವು ಧಾ

ರಿಣಿಯೊಳಗೆ ಶಂಖವರ್ಮನ

ಗುಣವರ್ಮನ ನಾಗವರ್ಮನ ಧ್ವಾನಂಗಳ್

(ಕಾವ್ಯಾವಲೋಕನ, ಪು. 116)

ಕನ್ನಡದಲ್ಲಿ ಶಂಖವರ್ಮ, ಗುಣವರ್ಮ ಹಾಗೂ ನಾಗವರ್ಮರು ಪ್ರವರ್ತಿತ ಮೂರು ವ್ಯಾಕರಣ ಪಂಥಗಳು ಇದ್ದವುಎಂಬುದು ಪದ್ಯದಿಂದ ತಿಳಿದುಬರುತ್ತದೆ. ಆದರೆ ಮುಂದೆ ಬಂದ ಯಾವುದೇ ವೈಯಾಕರಣಿಗಳು, ಕವಿಗಳು ಪಂಥದ ಬಗ್ಗೆ ಉಲ್ಲೇಖ ಮಾಡಿಲ್ಲ.

ಜನಕಂ ವಿಪ್ರಕುಲಪ್ರದೀಪನನಘಂ ದಾಮೋದರಂ ಪೆತ್ತತಾಯ್

ವಿನಯಾಲಂಕೃತೆ ವೀರಕಬ್ಬೆ ವರಣಂ ಶ್ರೀ ವೀರಭಟ್ಟಾರಕಂ

ತನಯಂ ಸದ್ಗುಣಮಂಡನಂ ಮಧುವಲಂ ತಾನೆಂದೊಡಾದೊಂದು ಸೈ

ಪಿನ ಮಾನೋನ್ನತಿಗಿಂತು ನೋಂತ ನರನಾರೀ ನಾಗವರ್ಮರೆಂಬರಂ

(ವರ್ಧಮಾನ ಪುರಾಣ, ಪು. 1-23)

ನಾಗವರ್ಮನ ತಂದೆ ದಾಮೋದರ, ತಾಯಿ ವೀರಕಬ್ಬೆ. ನಾಗವರ್ಮನಿಗೆಕವಿತಾಗುಣೋದಯ, ‘ಅಭಿನವಶರ್ವವರ್ಮ, ‘ಕವಿಕರ್ಣಪೂರ, ಹಾಗೂಕವಿಕಂಠಾಭರಣಎಂಬ ಬಿರುದುಗಳಿದ್ದವು.

ಛಂಧೋವಿಚಿತಿಯಲಂಕೃತಿ

ಸಂದಭಿದಾವಸ್ತುಕೋಶ ಮೆಂಬಿವು ವಾಕ್ ಶ್ರೀ

ಸುಂದರಿಗೆ ರತ್ನಮಂಡನ

ದಂದದೊಳಿರ್ದಪುವು ನಾಗವರ್ಮನ ಕೃತಿಗಳ್

(ಕಾವ್ಯಾವಲೋಕನ, ಪು. 65)

ಎರಡನೆಯ ನಾಗವರ್ಮನುಛಂದೋವಿಚಿತಿ, ‘ಕಾವ್ಯಾವಲೋಕನ, ‘ಅಭಿದಾನವಸ್ತುಕೋಶ, ‘ಕರ್ಣಾಟಕ ಭಾಷಾಭೂಷಣಹಾಗೂವರ್ಧಮಾನ ಪುರಾಣಎಂಬ ಐದು ಕೃತಿಗಳನ್ನು ರಚಿಸಿ, ಕನ್ನಡ ಸಾರಸ್ವತ ಪ್ರಪಂಚವನ್ನು ಶ್ರೀಮಂತಗೊಳಿಸಿದ್ದಾನೆ. ಅಲ್ಲದೆವರ್ಧಮಾನ ಪುರಾಣದಲ್ಲಿ ಬರುವಗದ್ಯದೊಳಂ ಪದ್ಯದೊಳಂ ಛೋದ್ಯಮಿದೆನೆ ವತ್ಸರಾಜ ಚರಿತಾಗಮಮಂ ವಿದ್ಯಾನಿಧಿ ಬರೆದಂ ನಿರ ವದ್ಯಗು(ಣಂ) ನಾಗವರ್ಮನುಪಚಿತ ಶರ್ಮಂಎಂಬ ಪದ್ಯದಿಂದ ಈತವತ್ಸರಾಜಚರಿತಎಂಬ ಚಂಪೂ ಕೃತಿಯು ಕರ್ತೃವೂ ಆಗಿರುವಂತೆ ತಿಳಿದುಬರುತ್ತದೆ.

ಅಭಿದಾನವಸ್ತುಕೋಶ: ಇದು ಸಂಸ್ಕø ಶಬ್ದಗಳಿಗೆ ಕನ್ನಡದಲ್ಲಿ ಅರ್ಥ ತಿಳಿಸುವ ಮೊದಲನೆಯ ಸಂಸ್ಕøಕನ್ನಡ ದ್ವಿಭಾಷಿಕ ನಿಘಂಟು. ಕಂದ ಮತ್ತು ವೃತ್ತಗಳಲ್ಲಿ ರಚನೆಯಾಗಿರುವ ಕೋಶವು ಸಂಸ್ಕø ಕೋಶದ ಶಿಲ್ಪದಂತೆಏಕಾರ್ಥ ಕಾಂಡ, ‘ನಾನಾರ್ಥ ಕಾಂಡಮತ್ತುಸಾಮಾನ್ಯ ಕಾಂಡಎಂಬ ಮೂರು ಭಾಗಗಳನ್ನು ಹೊಂದಿದೆ. ಹದಿನೇಳು ವರ್ಗಗಳನ್ನು ಒಳಗೊಂಡಿರುವ ಕೋಶವನ್ನು, ವರರುಚಿ, ಹಲಾಯುಧ, ಭಾಗುರಿ, ಶಾಶ್ವತ, ಅಮರಸಿಂಹ ಮೊದಲಾದವರ ಕೋಶಗಳನ್ನು ನೋಡಿ ಬರೆದಿರುವುದಾಗಿ ನಾಗವರ್ಮ ಹೇಳಿಕೊಂಡಿದ್ದಾನೆ.

ವರರುಚಿ ಹಲಾಯುಧಂ ಭಾ

ಗುರಿ ಶಾಶ್ವತಮಮರಕೋಶಮೆಂಬಿವು ಮೊದಲಾ

ಗಿರೆ ಪೂರ್ವಶಾಸ್ತ್ರಮಂ ಸಂ

ಹರಿಸಿ ಮನಂಗೊಳೆ ನಿಘಂಟುಮಂ ವಿರಚಿಸುವೆಂ

(ಅಭಿದಾನವಸ್ತುಕೋಶ, ಪು. 9)

ಸಂಸ್ಕø ನಿಘಂಟುಗಳೇ ಕೋಶದ ರಚನೆಗೆ ಪ್ರೇರಣೆಯಾಗಿವೆಯೆಂದು ನಾಗವರ್ಮನೇ ಹೇಳಿಕೊಂಡಿದ್ದಾನೆ. ಸಂಸ್ಕø ಪರ್ಯಾಯ ಶಬ್ದಗಳನ್ನು ಹೇಳುವಾಗ ಸಂದರ್ಭಾನುಸಾರವಾಗಿ ದೇಶ್ಯ ಶಬ್ದಗಳನ್ನು ಸೇರಿಸಿರುವುದು ಹಾಗೂ ಕನ್ನಡ ಶಬ್ದಗಳಲ್ಲಿಯೇ ಅರ್ಥ ಹೇಳಲಾಗಿದೆ. ನಂತರ ಬಂದ ಅಭಿನವ ಮಂಗರಾಜ(1390) ಹಾಗೂ ದೇವೋತ್ತಮ(1600)ರು ನಾಗವರ್ಮನ ಕೋಶದಿಂದ ಪ್ರೇರಣೆ ಪಡೆದು ಕೋಶ ರಚಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಕಾವ್ಯಾವಲೋಕನ: ಇದೊಂದು ಅಲಂಕಾರ ಗ್ರಂಥವಾಗಿದ್ದು, ‘ಶಬ್ದಸ್ಮøತಿ, ‘ಕಾವ್ಯದೋಷ ವಿವರಣೆ, ‘ಗುಣ ವಿವೇಚನೆ, ‘ರೀತಿ ಮತ್ತು ರಸ ನಿರೂಪಣೆ, ಹಾಗೂಕವಿ ಸಮಯ’’ ಎಂಬ ಐದುಅಧಿಕರಣ(ಅಧ್ಯಾಯ)ಗಳನ್ನು ಒಳಗೊಂಡಿದೆ. ಮೊದಲ ಅಧಿಕರಣಶಬ್ದಸ್ಮøತಿಯಲ್ಲಿ ಕನ್ನಡ ವ್ಯಾಕರಣವನ್ನು ಸಂಗ್ರಹವಾಗಿ ಹೇಳಿದ್ದಾನೆ. ನಂತರದ ನಾಲ್ಕು ಅಧ್ಯಾಯಗಳಲ್ಲಿ ಕಾವ್ಯಮೀಮಾಂಸೆಯ ಕುರಿತ ಚರ್ಚೆ ಮಾಡಲಾಗಿದೆ.

ಕವಿಗಳ್ಗಿದು ಕೆಯ್ಗನ್ನಡಿ

ಕವಿತೆಗೆ ಬಾ¿õÉ್ಮೂದಲುದಾತ್ತ ವಾಗ್ದೇವತೆಗು

ದ್ಭವಹೇತು ಕೋಶಗೃಹಮೆನೆ

ಭುವನದೊಳಿದು ನಿಲ್ಪುದೊಂದಚ್ಚರಿಯೇ

(ಕಾವ್ಯಾವಲೋಕನ, ಪು. 16)

ಎಂದು ನಾಗವರ್ಮನು ತನ್ನ ಕೃತಿಯ ಮಹತ್ವವನ್ನು ಹೇಳಿದ್ದಾನೆ.

ವರ್ಧಮಾನ ಪುರಾಣ: ಜೈನ ಧರ್ಮದ ಇಪ್ಪತ್ನಾಲ್ಕನೆಯ ತೀರ್ಥಂಕರ ವರ್ಧಮಾನ ಮಹಾವೀರನ ಚರಿತ್ರೆಯನ್ನು ಸಾರುವ ಚಂಪೂ ಕೃತಿಯುಕನ್ನಡದ ಮೊದಲ ವರ್ಧಮಾನ ಪುರಾಣವಾಗಿದೆ. ಹದಿನಾರು ಆಶ್ವಾಸಗಳ ಕೃತಿಯು ದೊರೆಯುವುದಕ್ಕೆ ಮುಂಚೆ ಆಚಣ್ಣ ಕವಿಯವರ್ಧಮಾನ ಪುರಾಣವೇ ಕನ್ನಡದ ಮೊದಲನೆಯ ವರ್ಧಮಾನ ಪುರಾಣವೆಂದು ಪರಿಗಣಿತವಾಗಿತ್ತು.

ಕರ್ಣಾಟಕ ಭಾಷಾಭೂಷಣಂ: ನಾಗವರ್ಮನಕರ್ಣಾಟಕ ಭಾಷಾಭೂಷಣವು ಹೆಸರೇ ಸೂಚಿಸುವಂತೆ, ಕನ್ನಡ ವ್ಯಾಕರಣವನ್ನು ಸಂಸ್ಕø ಭಾಷೆಯಲ್ಲಿ ನಿರೂಪಿಸುವ ಕೃತಿಯಾಗಿದೆ. ಕನ್ನಡ ವ್ಯಾಕರಣದ ಸ್ವರೂಪವನ್ನು ಕೃತಿಯ ಮೂಲಕ ಅಖಿಲ ಭಾರತೀಯ ಎಲ್ಲ ಭಾಷೆಗಳ ವಾಚಕರಿಗೆ ತಲುಪಿಸಿದ್ದು, ಕನ್ನಡದ ಮೊಟ್ಟಮೊದಲ ವೈಯಾಕರಣಿಯಾಗಿರುವ ನಾಗವರ್ಮನ ಹೆಗ್ಗಳಿಕೆಯಾಗಿದೆ.

ಕರ್ಣಾಟಕ ಭಾಷಾಭೂಷಣದಲ್ಲಿ 269 ಸೂತ್ರಗಳಿದ್ದು, ಸಂಜ್ಞಾ, ಸಂಧಿ, ವಿಭಕ್ತಿ, ಕಾರಕ, ಯುಷ್ಮಾದಾದಿ, ಸಮಾಸ, ತದ್ಧಿತ, ಆಖ್ಯಾತ, ನಿಪಾತ ಎಂಬ ಹತ್ತು ಪರಿಚ್ಛೇದಗಳನ್ನು ಒಳಗೊಂಡಿದೆ. ಇದರಲ್ಲಿಯ ಸೂತ್ರಗಳು ಮತ್ತು ಸೂತ್ರಗಳಿಗೆ ನಾಗವರ್ಮನು ಬರೆದ ವೃತ್ತಿಗಳು ಸಂಸ್ಕøತದಲ್ಲಿವೆ; ಪ್ರಯೋಗಗಳು ಮಾತ್ರ ಕನ್ನಡದಲ್ಲಿವೆ. ಇವುಗಳಲ್ಲಿ ಬಹುತೇಕಶಬ್ದಸ್ಮøತಿಯಿಂದ ಆಯ್ದುಕೊಂಡವುಗಳಾಗಿವೆ. ಅಲ್ಲಿ ಸಂಗ್ರಹವಾಗಿ ನಿರೂಪಿತವಾದ ವಿಷಯಗಳೇ ಇಲ್ಲಿ ವಿಸ್ತಾರವನ್ನು ಪಡೆದಿವೆ. ಇಲ್ಲಿಯ ಸೂತ್ರಗಳು ಪಾಣಿನಿಯಅಷ್ಟಾಧ್ಯಾಯಿ ಮಾದರಿಯಲ್ಲಿ ರಚಿತವಾಗಿವೆ. ಕೆಲವು ಕಡೆಅಷ್ಟಾಧ್ಯಾಯಿ ಸೂತ್ರಗಳನ್ನು ಯಥಾವತ್ತಾಗಿ ಬಳಸಿಕೊಂಡರೆ, ಇನ್ನೂ ಕೆಲವು ಕಡೆ ಅಲ್ಪ ಮಾರ್ಪಾಡುಗಳೊಂದಿಗೆ ಬಳಸಿಕೊಳ್ಳಲಾಗಿದೆ. ಆರಂಭದಲ್ಲಿ ಕನ್ನಡ ವರ್ಣಮಾಲೆಯ ಪ್ರಸ್ತಾಪವಿದೆ; ವಾಕ್ಯ ರಚನೆಯ ಬಗ್ಗೆಯೂ ಅಲ್ಲಲ್ಲಿ ವಿವರಿಸಲಾಗಿದೆ. ಪ್ರಮುಖವಾಗಿ ಕನ್ನಡ ಪದರಚನೆಯ ಅಧ್ಯಯನವೇ ಇಲ್ಲಿ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ನಾಮಪದ, ಕ್ರಿಯಾಪದ, ಸಮಾಸ ಇವುಗಳ ಸ್ವರೂಪವನ್ನು ಕುರಿತ ವಿವೇಚನೆಯೇಭಾಷಾಭೂಷಣ ಬಹುಪಾಲು ವ್ಯಾಪಿಸಿದೆ.

ಎರಡನೆಯ ಪರಿಚ್ಛೇದದಲ್ಲಿಕನ್ನಡ ಸಂಧಿಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾನೆ. ಮೂರನೆಯದರಲ್ಲಿವಿಭಕ್ತಿಗಳ ವಿಷಯವನ್ನು ವಿಸ್ತಾರವಾಗಿ ಚರ್ಚಿಸಿದ್ದಾನೆ. ನಾಲ್ಕನೆಯ ಅಧ್ಯಾಯದಲ್ಲಿಕಾರಕಗಳಿಗೆ ಸಂಬಂಧಿಸಿದ ವಿವರಣೆಗಳಿವೆ. ಐದನೆಯದರಲ್ಲಿಸರ್ವನಾಮ, ಲಿಂಗಗಳು ಕನ್ನಡಕ್ಕೆ ಬರುವಾಗ ಸಂಸ್ಕø ಶಬ್ದಗಳಲ್ಲಾಗುವ ಬದಲಾವಣೆಗಳನ್ನು ವಿವರಿಸಿದೆ. ಏಳನೆಯದರಲ್ಲಿತದ್ಧಿತಗಳ ವಿಚಾರವೂ, ಎಂಟನೆಯದರಲ್ಲಿಆಖ್ಯಾತಗಳ ಬಗೆಗೆ ವಿವರವಾದ ಮಾಹಿತಿಯಿದೆ. ಒಂಬತ್ತನೆಯದರಲ್ಲಿಅವ್ಯಯಗಳನ್ನು, ಹತ್ತನೆಯದರಲ್ಲಿನಿಪಾತಗಳಿಗೆ ಸಂಬಂಧಿಸಿದ ವಿಷಯವನ್ನು ಚರ್ಚಿಸಲಾಗಿದೆ.

ನಾಗವರ್ಮನ ವ್ಯಾಕರಣ ಕೃತಿಯು ಕೇಶಿರಾಜನ ಕೃತಿಗಿಂತಲೂ ವೈಜ್ಞಾನಿಕವಾಗಿದೆ. ಕನ್ನಡದಲ್ಲಿ ಮಹಾಪ್ರಾಣಗಳನ್ನು ಕುರಿತ ಅವರಿಬ್ಬರ ವಿಚಾರಗಳನ್ನು ರೀತಿಯಿವೆ:

ಸೂತ್ರ: “ನಾತ್ರ ಪ್ರಾಯೇಣ ವರ್ಗಾಣಾಂ ದ್ವಿತೀಯ ಚತುರ್ಥಾಃ(ಸಂಜ್ಞಾ ಪ್ರಕರಣ, ಸೂತ್ರ, 11)

ತಾತ್ಪರ್ಯ: ಕರ್ಣಾಟಕ ಭಾಷೆಯಲ್ಲಿ ವರ್ಗಗಳ ಎರಡನೆಯ ನಾಲ್ಕನೆಯ ವರ್ಣಗಳಾದ ,,,,,,,,, ಎಂಬ ವರ್ಣಗಳು ಇಲ್ಲ. ಅದೇ ಸೂತ್ರದಲ್ಲಿಪಾಯೇಣಎಂಬ ಪದವಿರುವುದರಿಂದ ಸಂಖ್ಯೆ, ಅನುಕರಣ ಮುಂತಾದವುಗಳಲ್ಲಿ ಕಾಣಲ್ಪಡುವುವು.

ಇಲ್ಲಿ ನಾಗವರ್ಮನು ಸ್ಪಷ್ಟವಾಗಿ ಕನ್ನಡದಲ್ಲಿ ಮಹಾಪ್ರಾಣಗಳಿಲ್ಲವೆಂಬ ಅಂಶವನ್ನು ಗಮನಿಸಿದ್ದಾನೆ. ಆದರೆ ಕೇಶಿರಾಜನಶಬ್ದಮಣಿದರ್ಪಣದಲ್ಲಿ ಮಹಾಪ್ರಾಣಗಳಿಗೆ ಸಂಬಂಧಿಸಿದ ಸೂತ್ರ ನಾಗವರ್ಮನಿಗೆ ಉತ್ತರ ನೀಡಿದಂತಿದೆ:

ಒಳವು ಮಹಾಪ್ರಾಣಂಗಳ್

ವಿಳಸತ್ಕರ್ಣಾಟ ಭಾಷೆಯೊಳ್ ಕೆಲವು ನಿಜೋ

ಜ್ವಳಮಾಗಿ ವರ್ಗದಂತ್ಯಂ

ಗಳನರಿಯನುನಾಸಿಕಾಖ್ಯೆಯಂ ತಳೆದಿರ್ಕುಂ

(ಶಬ್ದಮಣಿದರ್ಪಣಂ, 1-25)

ಮಹಾಪ್ರಾಣಗಳು ಕನ್ನಡದಲ್ಲಿ ಇವೆಎಂದು ಕೇಶಿರಾಜ ಇಲ್ಲಿ ಹೇಳಿರುತ್ತಾನೆ. ಕುತೂಹಲದ ಸಂಗತಿಯೆಂದರೆ, ನಾಗವರ್ಮನು ತನ್ನ ಸೂತ್ರವನ್ನು(ಇಲ್ಲ) ಎಂದು ಆರಂಭಿಸಿದ್ದರೆ, ಕೇಶಿರಾಜನು ತನ್ನ ಸೂತ್ರವನ್ನುಒಳವು(ಇವೆ) ಎಂದು ಆರಂಭಿಸಿದ್ದಾನೆ. ನಾಗವರ್ಮನು ತನ್ನ ಕೃತಿಗಳಲ್ಲಿ ನೀಡಿರುವ ಅನೇಕ ಪ್ರಯೋಗಗಳನ್ನು ಕೇಶಿರಾಜ ಅನಾಮತ್ತಾಗಿ ತನ್ನ ಸೂತ್ರಗಳಿಗೆ ಪ್ರಯೋಗಗಳಾಗಿ ಬಳಸಿಕೊಂಡಿರುವುದು ಕೂಡ ನಾಗವರ್ಮನ ಪ್ರಭಾವವನ್ನು ಸೂಚಿಸುತ್ತದೆ.

ಕರ್ಣಾಟಕ ಭಾಷಾಭೂಷಣದಲ್ಲಿ ಶುಷ್ಕ, ನೀರಸವಾದ ವ್ಯಾಕರಣದ ವಿಷಯವನ್ನು ಈತನು ಸ್ವಾರಸ್ಯವುಳ್ಳದನ್ನಾಗಿ ಮಾಡಲು, ಪೂರ್ವಕವಿಗಳ ಗ್ರಂಥಗಳಿಂದ, ಶಾಸನಗಳಿಂದ ಅಖಂಡವಾದ ಪದ್ಯಗಳನ್ನು ಸ್ವಾರಸ್ಯಕರವಾಗಿ ಬಳಸಿಕೊಂಡಿದ್ದಾನೆ. ಬಹುಪಾಲು ಪ್ರಯೋಗಗಳನ್ನು ಪಂಪ, ಗುಣವರ್ಮ, ಪೊನ್ನ, ರನ್ನ, ನಾಗಚಂದ್ರ ರಿಂದ ಪಡೆದುಕೊಂಡಿದ್ದರೆ; ಸುಮಾರು ಐವತ್ತರಷ್ಟು ಪದ್ಯಗಳು ಸಂಸ್ಕøತದಿಂದ ಅನುವಾದಿತವಾಗಿರುವುದು ಕಾಣಬಹುದು.

1880ರಲ್ಲಿ ಅಳಸಿಂಗಾಚಾರ್ಯರುಕರ್ಣಾಟಕ ಭಾಷಾಭೂಷಣವನ್ನು ಮೊಟ್ಟಮೊದಲು ಪ್ರಕಟಿಸಿದರು. ನಂತರ 1884ರಲ್ಲಿ ಬಿ.ಎಲ್.ರೈಸ್ ಅವರಿಂದ ಪ್ರಕಟಗೊಂಡಿತು. 1903ರಲ್ಲಿ ಆರ್.ನರಸಿಂಹಾಚಾರ್ಯರು ಹೊಸ ಹಸ್ತಪ್ರತಿಗಳ ಸಹಾಯದಿಂದ ಪರಿಷ್ಕರಿಸಿ ಪ್ರಕಟಿಸಿದರು. 1939ರಲ್ಲಿ ಎಚ್.ಆರ್.ರಂಗಸ್ವಾಮಿ ಅಯ್ಯಂಗಾರ್ ಅವರು ಎರಡು ಓಲೆಪ್ರತಿಗಳ ಸಹಾಯದಿಂದ ಮತ್ತೆ ಪರಿಷ್ಕರಿಸಿದರು. ಆರ್. ನರಸಿಂಹಾಚಾರ್ಯರಕನ್ನಡ ಸಾಹಿತ್ಯದಲ್ಲಿ ನಾಗವರ್ಮರುಎಂಬ ಲೇಖನದೊಂದಿಗೆ 1975ರಲ್ಲಿ ಮರುಮುದ್ರಣಗೊಂಡಿತು. ಎಸ್.ಎಸ್.ಅಂಗಡಿಯವರು ಎಲ್ಲ ಆವೃತ್ತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ, 2007ರಲ್ಲಿಕರ್ಣಾಟಕ ಭಾಷಾಭೂಷಣಂಅನ್ನು ಪ್ರಕಟಿಸಿದ್ದಾರೆ. ಅರ್ಥಪೂರ್ಣ ಪ್ರಸ್ತಾವನೆಯೊಂದಿಗೆ, ಪ್ರತಿಯೊಂದು ಸೂತ್ರ ಹಾಗೂ ವೃತ್ತಿಯ ನಂತರ ವೃತ್ತಿಯ ಹೊಸಗನ್ನಡ ಅನುವಾದವನ್ನು ಕೊಟ್ಟಿದ್ದಾರೆ. ಕೊನೆಯಲ್ಲಿ ಸೂತ್ರಗಳ ಅಕಾರಾದಿ, ‘ಕರ್ಣಾಟಕ ಭಾಷಾಭೂಷಣದಲ್ಲಿಯ ಸೂತ್ರಗಳಿಗೆ ಸಂವಾದಿಗಳಾದಕಾವ್ಯಾವಲೋಕನ, ‘ಶಬ್ದಮಣಿದರ್ಪಣಮತ್ತುಕರ್ಣಾಟಕ ಶಬ್ದಾನುಶಾಸನದಲ್ಲಿಯ ಸೂತ್ರಗಳ ಕ್ರಮ ಸಂಖ್ಯೆಗಳ ಪಟ್ಟಿಯನ್ನು ಕೊಟ್ಟಿದ್ದಾರೆ. ಕೊನೆಯಲ್ಲಿ ಕೊಟ್ಟಿರುವವ್ಯಾಕರಣದ ಪರಿಭಾಷೆಗಳ ಅಕಾರಾದಿಯು ಹೊಸದಾಗಿ ವ್ಯಾಕರಣ ಅಭ್ಯಾಸ ಮಾಡುವವರಿಗೆ ಅತ್ಯುಪಯುಕ್ತವಾಗಿದೆ.

ಒಟ್ಟಾರೆಯಾಗಿ ಕನ್ನಡ ವ್ಯಾಕರಣಕ್ಕೆ ವ್ಯವಸ್ಥಿತವಾದ ಅಡಿಪಾಯವನ್ನು ಹಾಕಿದವನು ಎರಡನೆಯ ನಾಗವರ್ಮ. ಅವನಕರ್ಣಾಟಕ ಭಾಷಾಭೂಷಣವು ಇತರ ಭಾಷೆಗಳ ವ್ಯಾಕರಣ ಕೃತಿಗಳ ಮೇಲೂ ದಟ್ಟವಾದ ಪ್ರಭಾವವನ್ನು ಬೀರಿದೆ. ತೆಲುಗಿನ ಕೇತನನಆಂಧ್ರಭಾಷಾ ಭೂಷಣ(ಕೃತಿಯ ಹೆಸರಿನಲ್ಲಿಯೂ ಸಾಮ್ಯವಿದೆ) ಮತ್ತು ಮಲಯಾಳಂನಲೀಲಾತಿಲಕಎಂಬ ವ್ಯಾಕರಣ ಕೃತಿಗಳ ಮೇಲೆ ನಾಗವರ್ಮನ ಕೃತಿಯ ಪ್ರಭಾವವು ಬಹುಮಟ್ಟಿಗೆ ಆಗಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಕನ್ನಡ ವ್ಯಾಕರಣ ಕೃತಿಗಳಾದಶಬ್ದಮಣಿದರ್ಪಣಮತ್ತುಶಬ್ದಾನುಶಾಸನಗಳ ಮೇಲೆಯೂ ನಾಗವರ್ಮನ ಪ್ರಭಾವವಿರುವುದನ್ನು ಗುರುತಿಸಬಹುದು. ಕೇಶಿರಾಜನಂತೂ ಇವನಿಂದ ಬಹಳ ಉಪಕೃತನಾಗಿದ್ದಾನೆ. ವಿಷಯಗಳನ್ನು ಮಾತ್ರವೇ ಅಲ್ಲದೆ, ಉದಾಹರಣೆಗಳನ್ನು ಕೂಡ ಹಲವೆಡೆ ನಾಗವರ್ಮನಿಂದ ಸ್ವೀಕರಿಸಿದ್ದಾನೆ. ಇಂತಹ ಅಪೂರ್ವ ವ್ಯಾಕರಣ ಕೃತಿಯ ಅಧ್ಯಯನದಿಂದ ನಮ್ಮ ಭಾಷೆ ಹಾಗೂ ಭಾವ ಎರಡೂ ಶುದ್ಧಿಯಾಗಲಿವೆ.

ಆಕರಗಳು:

1. ಅಂಗಡಿ ಎಸ್.ಎಸ್. (ಸಂ): ಕರ್ಣಾಟಕ ಭಾಷಾಭೂಷಣ: ವಿದ್ಯಾನಿಧಿ ಪ್ರಕಾಶನ, ಗದಗ, 2007.

2. ನರಸಿಂಹಾಚಾರ್ ಡಿ. ಎಲ್.: ಕೇಶಿರಾಜ ವಿರಚಿತ ಶಬ್ದಮಣಿದರ್ಪಣಂ : ಡಿ. ವಿ. ಕೆ. ಮೂರ್ತಿ ಪ್ರಕಾಶನ, ಮೈಸೂರು, 2001.

3. ಶಂಕರಭಟ್ಟ ಡಿ.ಎನ್.: ಕನ್ನಡ ವ್ಯಾಕರಣ ಪರಂಪರೆ: ಕನ್ನಡ ವಿಶ್ವವಿದ್ಯಾಲಯ, ಹಂಪಿ.

4. ಸೀತಾರಾಮಯ್ಯ ಎಂ.ವೀ.: ಪ್ರಾಚೀನ ಕನ್ನಡ ವ್ಯಾಕರಣಗಳು: ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, 1979.

*ಲೇಖಕರು ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರು; ‘ಸಾಹಿತ್ಯ ಆಸ್ವಾದನೆ, ‘ವಚನ ಸಾಹಿತ್ಯ: ಮರು ಓದುಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಮಹಾಪ್ರಬಂಧದ ವಿಷಯ– ‘ಶಿವರಾಮ ಕಾರಂತ ಹಾಗೂ ರವೀಂದ್ರನಾಥ ಠಾಕೂರರ ಕಾದಂಬರಿಗಳಲ್ಲಿ ಆಧುನಿಕತೆತೌಲನಿಕ ಅಧ್ಯಯನ.

Leave a Reply

Your email address will not be published.