ಎರಡು ಮಲಯಾಳಂ ಕವಿತೆಗಳು

 

ಮೂಲ:ಸಂಧ್ಯಾ ಇ. ಅನುವಾದ:ತೇರ್‍ಳಿ ಎನ್. ಶೇಖರ್

ಕವಿತೆ ಏತಕೆ

ಪ್ರಿಯತಮ,
ನನ್ನ ಕವಿತೆಗಳು
ನಿನಗಿತ್ತ ಸಂದೇಶಗಳಾಗಿದ್ದವು
ಒಂದೊಂದು
ನಿನ್ನೆಡೆಗೆ ಬರುವ ಸೇತುವೆಗಳಾಗಿದ್ದವು
ಕವಿತೆಯಿಂದ ನಿನ್ನನ್ನು
ನನ್ನವನಾಗಿ ಮಾಡಿಕೊಳ್ಳಬಹುದೆಂದು ನಾನು ಇಚ್ಛಿಸಿದೆ
ನಿನ್ನೆಡೆಗಿರುವ ದೂರವನು ಇಲ್ಲದಂತೆ ಮಾಡಬಹುದೆಂದು ಆಶಿಸಿದೆ.
ನಿನ್ನ ಬಗ್ಗೆ ಮಾತ್ರ ನಾನು ಬರೆಯುವಾಗ
ನೀನು ನನ್ನೆಡೆಗೆ ಬರುವೆಯೆಂದು ಕನಸು ಕಂಡೆ.
ಆದುದರಿಂದ ಹಗಲು ರಾತ್ರಿ
ನಾನು ಕವಿತೆಗಳ ಬರೆದೆ.

ಒಂದು ದಿಕ್ಕಿನಲ್ಲಿ ಮಾತ್ರ ಪ್ರಯಾಣಿಸಬಹುದಾದ
ಸೇತುವೆಗಳಿರುವವು ಎಂದು
ಯಾವೊಂದು ಕವಿತೆಗೂ ಕಡಿಮೆಮಾಡಲಾಗದ
ದೂರಗಳು ಇರುವವು ಎಂದು
ಯಾರೂ ನನಗೆ ಹೇಳಿಕೊಡಲಿಲ್ಲ
ನೀನೂ ಕೂಡ

ಒಮ್ಮೆ ಸವಿದು ನೋಡಿ ನಿನಗೆ ಅಗಿದು ಉಗಿಯುವುದಕ್ಕೂ
ಒಮ್ಮೆ ಮೂಸಿ ನೋಡಿ ಉಡಾಯಿಸಿ ಎಸೆಯುವುದಕ್ಕೂ
ಒಮ್ಮೆ ಮುಟ್ಟಿ ನೋಡಿ ಎಳೆದು ಬಿಸಾಡುವುದಕ್ಕೂ
ಇನ್ನು ನಾನೇತಕೆ ಕವಿತೆಗಳ ಬರೆಯಬೇಕು?

ಕದ್ದು ಇಕ್ಕುವ ಮುತ್ತುಗಳು

ಎಷ್ತೋoದು ಸಲ ಮುತ್ತಿಕ್ಕಿರುವೆ,
ಎಲ್ಲೆಲ್ಲೊ!

ಮೊದಲನೆಯದು,
ತರಾತುರಿಯಿಂದ
ಮುತ್ತೆಂಬ ಮಾತು ಕೂಡ-
ಉಚ್ಚರಿಸದಿದ್ದ ಒಂದು ಕಾಲದಲ್ಲಿ
ಒಮ್ಮೆ ಕಣ್ಣಲ್ಲೂ ನೋಡದೆ….

ಬಳಿಕ,
ಆಕಾಶ ಸಾಕ್ಷಿಯಾಗಿ
ಕಡಲ ಸಾಕ್ಷಿಯಾಗಿ
ಮರಳು ನೆರಳುಗಳ
ತಾವರೆ ತುಂಬೆಗಳ
ಕಾಡು ಮೇಡುಗಳ
ಮರ ಮೇರುಗಳ ಸಾಕ್ಷಿಯಾಗಿ…

ಮತ್ತೊಮ್ಮೆ
ಮುತ್ತಿಕ್ಕುವುದಕ್ಕಾಗಿಯೇ ಒಂದು ರಜೆ ಹಾಕಿರುವುದಾಗಿ ಸಂದೇಶ ಕಳಿಸಿದೆ
ಒಂದು ದಿನ ಪೂರ್ತಿ
ಮುತ್ತಿಕ್ಕುತ್ತ ಮುತ್ತಿಕ್ಕುತ್ತ ಹಾಗೇ….

ಒಂದೊಂದು ಮುತ್ತನ್ನೂ-
ಬೀಗಹಾಕಿ ಇಟ್ಟಿರುವೆ ನಾನು,
ನಿನ್ನ ಮುತ್ತಿನ ಕೀಲಿಯಿಂದ ಮಾತ್ರ
ತೆರೆಯಬಹುದಾದ ಮುತ್ತಿನ ಪೆಟ್ಟಿಗೆಯಲ್ಲಿ.

ಆದರೆ,
ಆ ಗಡಿಬಿಡಿಯಲ್ಲಿ
ನಿನ್ನನ್ನೂ ನನ್ನನ್ನೂ ಬಲ್ಲವರ ನಡುವೆ
ಒಂದು ಎಳೆನೂಲಿನ-
ಮರೆಕೂಡ ಇಲ್ಲದಿದ್ದಾಗಲೂ
ನಿಮಿಷದ ನೂರಲ್ಲೊಂದು ಭಾಗದ
ಬಿಡುವಿನ ವೇಳೆಯಲ್ಲಿ
ನಿನ್ನ ತುಟಿಯಿಂದ
ನೀನು ಕಚ್ಚಿ ತೆಗೆದುಕೊಂಡು ಹೋದ

ಆ ಮುತ್ತಿನಷ್ಟು ದೀರ್ಘವಾಗಿ
ಮತ್ತೊಮ್ಮೆಯೂ-
ನೀನು ನನ್ನನು ಚುಂಬಿಸಿದ್ದಿಲ್ಲ.

Leave a Reply

Your email address will not be published.