ಎರಡು ವರ್ಷ: ಒಂದು ವಿಮರ್ಶೆ

ಒಂದು ಸರ್ಕಾರದ ವಿಮರ್ಶೆಗೆ ಎರಡು ವರ್ಷಗಳ ಅವಧಿ ಕಡಿಮೆಯೇ. ಅದರಲ್ಲೂ ಅತಿವೃಷ್ಟಿ, ಅನಾವೃಷ್ಟಿ, ಕೊರೊನೋತ್ತರ ಸಂಕಷ್ಟ ಕಾಲದ ಯಡಿಯೂರಪ್ಪ ಸರ್ಕಾರದ ಸಾಧನೆಯ ಅವಲೋಕನ ತಂತಿಮೇಲಿನ ನಡಿಗೆಯೇ! ಆದರೂ ಸರ್ಕಾರದ ಗುರಿಸಾಧನೆಯ ಪಥ ಗುರುತಿಸುವುದು ಅಗತ್ಯ.

-ಡಾ.ಬಿ.ಎಲ್.ಶಂಕರ್

ಪರಿಣಾಮ ಬೀರಿದ ಅಂಶಗಳು

ಮುಖ್ಯವಾಗಿ; ಕಪ್ಪುಹಣ ನಿಯಂತ್ರಣಕ್ಕಾಗಿ 2016ರಲ್ಲಿ ಒಕ್ಕೂಟ ಸರ್ಕಾರ ಜಾರಿಗೆ ತಂದ ನೋಟು ಅಮಾನ್ಯೀಕರಣ ಎಷ್ಟರಮಟ್ಟಿಗೆ ಉದ್ದೇಶವನ್ನು ಸಾಧಿಸುವಲ್ಲಿ ಸಫಲವಾಗಿದೆ ಎಂಬುದಕ್ಕೆ ಇಂದಿಗೂ ಸ್ಪಷ್ಟತೆಯಿಲ್ಲ. ಈ ದಿಢೀರ್ ನಿರ್ಧಾರ ಕೈಗೊಳ್ಳುವಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ನೆಲೆಯಲ್ಲಿ ರಿಸರ್ವ್ ಬ್ಯಾಂಕಿನ ಗವರ್ನರು ಸೇರಿದಂತೆ ಕೆಲವರು ರಾಜೀನಾಮೆ ನೀಡಿರುವುದು; ಈಗಲೂ ಅಲ್ಲಲ್ಲಿ ಕೋಟ್ಯಾಂತರ ಮೌಲ್ಯದ ನಿಷೇಧಿತ ನೋಟುಗಳು ಕಂತೆ ಕಂತೆಯಲ್ಲಿ ಸಿಗುತ್ತಿರುವುದು ಈ ಅಸ್ಪಷ್ಟತೆಯನ್ನು ಇನ್ನಷ್ಟು ಸ್ಫುಟಗೊಳಿಸುವಂತಿದೆ. ಅದೇನೇ ಇರಲಿ; ನೋಟು ಅಮಾನ್ಯೀಕರಣದ ನಿರ್ಧಾರ ರಾಜ್ಯಗಳ ಆರ್ಥಿಕ ಸ್ಥಿತಿಗತಿ ಮೇಲೆ ಬೀರಿದ ಪ್ರಭಾವ ನಾಲ್ಕು ವರ್ಷಗಳ ಬಳಿಕವೂ ಕಾಣುತ್ತಿರುವುದಂತೂ ಸತ್ಯ! ಇಷ್ಟು ಸಾಲದೆಂಬಂತೆ; ಇಡೀ ವಿಶ್ವದ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಕೊರೋನಾದ ಹೊಡೆತ ಅದಾಗಲೇ ಆಗಿದ್ದ ಗಾಯವನ್ನು ಇನ್ನಷ್ಟು ಆಳವಾಗಿಸಿದೆ. ರಾಜ್ಯದ ಆರ್ಥಿಕ ಸ್ಥಿತಿಗತಿ ಮೇಲೆ ಪರಿಣಾಮ ಬೀರಿದ ಇತರ ಅಂಶಗಳನ್ನು ಗಮನಿಸುವುದಾದರೆ:

 • ರಾಜ್ಯದ 23 ಜಿಲ್ಲೆಗಳ 130 ತಾಲೂಕುಗಳು ಪ್ರವಾಹ ಪರಿಸ್ಥಿತಿಯಿಂದ ತತ್ತರಿಸಿದ್ದು; 18 ಜಿಲ್ಲೆಗಳ 49 ತಾಲೂಕುಗಳು ಬರಪೀಡಿತವಾದುದು; ರಾಜ್ಯ ತೀವ್ರವಾದ ಅತಿವೃಷ್ಟಿಗೆ ಸಿಲುಕಿದ್ದಲ್ಲದೆ, ನಿರಂತರವಾಗಿ ಬರಪೀಡಿತವಾಗಿದ್ದರೂ, ಪರಿಹಾರ ನೀಡಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸಿದ್ದು;
 • ನೆರೆ-ಬರವನ್ನು ಎದುರಿಸುವಷ್ಟರಲ್ಲಿ ಬಂದೆರಗಿದ ಕೊರೋನಾ ಮಹಾಮಾರಿ ಒಟ್ಟಾರೆ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡಿದ್ದು;
 • ಸರ್ಕಾರದ ತೆರಿಗೆ ಸಂಗ್ರಹದಲ್ಲಿನ ಮುಖ್ಯವಾಗಿ; ವಾಣಿಜ್ಯ, ನೋಂದಣಿ ಮತ್ತು ಮುದ್ರಾಂಕ ಹಾಗೂ ಸಾರಿಗೆ ಇಲಾಖೆಗಳಿಂದ ರಾಜಸ್ವ ಸಂಗ್ರಹದಲ್ಲಿ ಉಂಟಾದ ಅಂದಾಜು 15000 ಸಾವಿರ ಕೋಟಿ ಖೋತಾ ಸರ್ಕಾರದ ಕೈಕಟ್ಟಿಹಾಕಿದ್ದು;
 • ಕೊರೋನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಯಾವುದೇ ಮುನ್ನೆಚ್ಚರಿಕೆ, ಪೂರ್ವತಯಾರಿಯ ಸೂಚನೆ ನೀಡದೆಯೇ ದಿಢೀರ್ ಲಾಕ್‍ಡೌನ್ ಘೋಷಿಸಿದ್ದು ರಾಜ್ಯ ಸರ್ಕಾರದ ಮಟ್ಟಿಗೆ “ಬಾಣಲೆಯಿಂದ ಬೆಂಕಿಗೆ ಬಿದ್ದ” ಅನುಭವ! ಜೊತೆಗೆ; ಈ ದಿಢೀರ್ ನಿರ್ಧಾರದಿಂದ ಇದ್ದಕ್ಕಿದ್ದಂತೆಯೇ ಹಳ್ಳಿಗಳಿಗೆ ಮರಳಿದ ಲಕ್ಷಾಂತರ ಮಂದಿ ಅಸಂಘಟಿತ ವಲಯದ ಕಾರ್ಮಿಕರು, ಸಣ್ಣರೈತರು, ಬೀದಿಬದಿ ವ್ಯಾಪಾರಿಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನೌಕರರ ಅಳಿವು-ಉಳಿವಿನ ಪ್ರಶ್ನೆ ಉದ್ಭವಿಸಿದಾಗ ಕೇಂದ್ರ ಸರ್ಕಾರವಾಗಲೀ, ರಾಜ್ಯ ಸರ್ಕಾರವಾಗಲೀ ಸಕಾಲದಲ್ಲಿ ಸ್ಪಂದಿಸಲಿಲ್ಲ. ರಾಜ್ಯದ ಮೂಲೆ ಮೂಲೆಗಳಲ್ಲಿ ಉದ್ಭವಿಸಿದ ಈ ದಿಢೀರ್ ಸಂಕಷ್ಟ ಪರಿಸ್ಥಿತಿಯ ನಿಭಾವಣೆಯಲ್ಲಿ ಆಡಳಿತ ಯಂತ್ರ ಸೋತಿತು. ಇಂಥ ವಿಷಮ ಘಳಿಗೆಯಲ್ಲೂ ಸರ್ಕಾರ ತಂದ ಸಾಲದ ಹಣವನ್ನು ಸಮರ್ಪಕವಾಗಿ ಬಳಸದ ಅಧಿಕಾರಿವರ್ಗವನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸೋತಿತು.

ಈ ಎಲ್ಲಾ ಸಂಕಷ್ಟ, ವೈರುಧ್ಯಗಳ ನಡುವೆಯೂ ಅಭಿವೃದ್ಧಿಗೆ ಸೆಣಸಾಡುವ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿತ್ತು ಸನ್ಮಾನ್ಯ ಯಡ್ಯೂರಪ್ಪನವರ ಸರ್ಕಾರ. ಇವೆಲ್ಲದರ ಒಟ್ಟು ಪರಿಣಾಮ ಸಾಲ ಹಾಗೇ ಉಳಿಯಿತು; ಯೋಜನೆಗಳು ಅರ್ಧಕ್ಕೇ ನಿಂತವು. ಸರ್ಕಾರದ ಬದ್ಧವೆಚ್ಚಗಳಾದ ಸಂಬಳ, ಸಾರಿಗೆ, ಸಾಲದ ಮೇಲಿನ ಬಡ್ಡಿ, ಸಾಲ ಮರುಪಾವತಿ, ತುರ್ತುವೆಚ್ಚ ಇತ್ಯಾದಿಗಳ ನಿರ್ವಹಣೆಯೇ ಮೊದಲ ಆದ್ಯತೆಯಾಗಿ ಹತ್ತುಹಲವು ಪ್ರಮುಖ ಯೋಜನೆಗಳಿಗೆ ತಿಲಾಂಜಲಿ ನೀಡಿ, ಅನುದಾನವನ್ನೂ ಕಡಿತಗೊಳಿಸಬೇಕಾಯಿತು. ಇವೆಲ್ಲದರ ಮಧ್ಯೆ ಮುಖ್ಯಮಂತ್ರಿಗಳು ‘ಏಕಾಂಗಿ’ಯಾಗಿ ಉತ್ತರದಾಯಿತ್ವಕ್ಕೆ ಒಳಗಾಗಬೇಕಾಯಿತೇ ಹೊರತು, ಒಂದು ಮಂತ್ರಿಮಂಡಲವಾಗಿ ರಾಜ್ಯದ ಜನತೆಗೆ ಇರಬೇಕಾದ ಉತ್ರರದಾಯಿತ್ವವಿರಲಿಲ್ಲ. ಇದು ಯಡ್ಯೂರಪ್ಪನವರ ಸರ್ಕಾರದ ಎರಡು ವರ್ಷಗಳ ಆಡಳಿತಾವÀಧಿಯ ಒಟ್ಟಾರೆ ಅವಲೋಕನ.

ಮೆಚ್ಚಲೇಬೇಕಾದ ನಡೆಗಳು

ಕೊರೋನಾ ಸಂಕಷ್ಟ ಕಾಲವನ್ನು ಗಮನದಲ್ಲಿರಿಸಿ, ವಸ್ತುನಿಷ್ಠವಾಗಿ (ರಾಜಕಾರಣಕ್ಕಾಗಿ ರಾಜಕೀಯ ಮಾಡದೆ) ವಿಮರ್ಶೆ ಮಾಡುವುದಾದರೆ; ಮೆಚ್ಚಲೇಬೇಕಾದ ಕೆಲವೊಂದಷ್ಟು ವಿಚಾರಗಳೂ ಇವೆ. ಬಹುಮುಖ್ಯವಾಗಿ ಉಲ್ಲೇಖಿಸುವುದಾದಲ್ಲಿ;

 • ಪ್ರಸ್ತುತ ಆಯವ್ಯಯದಲ್ಲಿ ಕೃಷಿ, ತೋಟಗಾರಿಕೆ ವಲಯಕ್ಕೆ 7297 ಕೋಟಿ ಅನುದಾನ ಮೀಸಲಿರಿಸಿದ್ದು; ಸಾವಯವ ಕೃಷಿ ಉತ್ತೇಜನಕ್ಕೆ 500 ಕೋಟಿಯ ಯೋಜನೆ ರೂಪಿಸಿದ್ದು ಒಳ್ಳೆಯ ನಡೆ. ಜೊತೆಗೆ ನೀರಾವರಿ ಮತ್ತು ಮಾರುಕಟ್ಟೆ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ಕೃಷ್ಯುತ್ಪನ್ನ ಮಾರುಕಟ್ಟೆಗಳ ನಿರ್ಮಾಣಕ್ಕೆ ಆದ್ಯತೆ; ಒಟ್ಟಾರೆ ಕೃಷಿಕ್ಷೇತ್ರದ ಬೆಳವಣಿಗೆಗೆ ಪೂರಕವಾಗಬಲ್ಲ ನಿರ್ಧಾರಗಳು ಮತ್ತು ಸಮಯೋಚಿತವಾಗಿವೆ. ಇದು ಸಂಕಷ್ಟ ಕಾಲದಲ್ಲೂ ಕೃಷಿ ಕಲ್ಯಾಣದ ಸಂಕಲ್ಪವನ್ನು ಪ್ರದರ್ಶಿಸುತ್ತದೆ.
 • ಕೊರೋನಾ ಹೊಡೆತಕ್ಕೆ ನಲುಗಿದ ರೈತರು, ಅಸಂಘಟಿತ ವಲಯದ ಕಾರ್ಮಿಕರು, ಕ್ಷೌರಿಕರು, ಆಟೋಚಾಲಕರು, ಮಡಿವಾಳರು, ನೇಕಾರರಿಗೆ ಸಕಾಲದಲ್ಲಿ ಒದಗಿಸಿದ ನೆರವು ಸಮಯೋಚಿತವಾಗಿತ್ತು. ಆದರೆ; ಗಣನೀಯ ಸಂಖ್ಯೆಯ ಮಂದಿಗೆ ತಲುಪಿಲ್ಲವೆಂಬ ದೂರೂ ಇದೆ.
 • ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 51 ಲಕ್ಷ ರೈತರಿಗೆ ನೀಡಿದ ತಲಾ 2000 ರೂಪಾಯಿ ಅನುದಾನ; ಪ್ರಸಕ್ತ ಸಾಲಿನ ಪ್ರವಾಹದಿಂದ ಬೆಳೆನಷ್ಟ ಹೊಂದಿದ ಪ್ರವಾಹಪೀಡಿತ ರೈತರ ಬ್ಯಾಂಕು ಖಾತೆಗಳಿಗೆ ಸಹಾಯಧನವನ್ನು ನೇರ ಜಮೆ ಮಾಡುವ ಮೂಲಕ ಸಕಾಲದಲ್ಲಿ ನೆರವಾಗಿದ್ದು ಪ್ರಶಂಸನೀಯ.
 • ಲಾಕ್‍ಡೌನ್ ಸಂದರ್ಭದಲ್ಲಿ ದೇಶಕ್ಕೇ ಮಾದರಿಯಾಗುವಂತೆ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣ ಇಲಾಖೆ ‘ವಿದ್ಯಾಗಮ’ ಅನುಷ್ಠಾನಗೊಳಿಸಿದ್ದು; ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿದ್ದು; ಪ್ರವಾಹಪೀಡಿತ ಪ್ರದೇಶಗಳಲ್ಲಿ 5000ಕ್ಕೂ ಹೆಚ್ಚು ಶಾಲೆಗಳ ಪುನರ್ನಿರ್ಮಾಣ ಹಾಗೂ ನವೀಕರಣಕ್ಕೆ ಒತ್ತುನೀಡಿದ್ದು ಮೆಚ್ಚತಕ್ಕದ್ದೇ.
 • ಕೋವಿಡ್-19ರ ನಿರ್ವಹಣೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿ ನಿಂತು ಸಂಕಷ್ಟ ಕಾಲದ ನಿರ್ವಹಣೆಗೆ ಮಾದರಿಯಾದದ್ದು ಸುಳ್ಳಲ್ಲ. ಕೋವಿಡ್-19 ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕ್ಷೇತ್ರಕ್ಕೆ ಘೋಷಿಸಿರುವ 11900 ಕೋಟಿ ಅನುದಾನ; ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ, ಆಯುಷ್ ವಿಶ್ವವಿದ್ಯಾಲಯ ಇತ್ಯಾದಿ ಯೋಜನೆಗಳು ಉಪಯುಕ್ತ ನಿರ್ಧಾರಗಳು.
 • ಲಾಕ್‍ಡೌನ್ ಸಂದರ್ಭದಲ್ಲಿ ನಗರಗಳಿಂದ ಹಳ್ಳಿಗಳಿಗೆ ಮರಳಿದವರಿಗೆ ನರೇಗಾ ಯೋಜನೆಯಡಿ 10 ಕೋಟಿ ಮಾನವ ದಿನಗಳ ಕೆಲಸವನ್ನು ಸೃಜಿಸಿ ಒಂದಷ್ಟು ದಿನ ನೆಮ್ಮದಿಯಾಗಿ ಉಸಿರಾಡಲು ಅವಕಾಶ ಮಾಡಿಕೊಟ್ಟದ್ದು ಸಮಯೋಚಿತ ನಡೆಯೇ.
 • ಜಾಗತಿಕ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕೈಗಾರಿಕೆಗಳ ಅಗತ್ಯಗಳಿಗೆ ತಕ್ಕಂತೆ ರಾಜ್ಯದಲ್ಲಿ ನುರಿತ ಮಾನವ ಸಂಪನ್ಮೂಲ ಸೃಷ್ಟಿಸುವ ನಿಟ್ಟಿನಲ್ಲಿ ಟಾಟಾ ಟೆಕ್ನಾಲಜೀಸ್ ಸಹಯೋಗದಲ್ಲಿ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) ಉನ್ನತೀಕರಿಸಲು 4636 ಕೋಟಿ ಹೂಡಿಕೆಗೆ (ಟಾಟಾ ಪಾಲು ಶೇ.88 ಮತ್ತು ಉಳಿದ ಶೇ.12 ಸರ್ಕಾರದ್ದು) ನಿರ್ಧರಿಸಿರುವುದು ಉತ್ತಮ ಬೆಳವಣಿಗೆ.

ಆಶಾದಾಯಕ ಲಕ್ಷಣಗಳು

2021-22ರ ಆಯವ್ಯಯದಲ್ಲಿ ಜನಪ್ರಿಯತೆ ಬದಲಿಗೆ ಜನಪರತೆಗೆ ಒತ್ತು ನೀಡಿದ್ದು; ಹೊಸ ತೆರಿಗೆ ಹಾಕದಿರುವುದು; ಸೀಮಿತ ಸಂಪನ್ಮೂಲದಲ್ಲೇ ಅಭಿವೃದ್ಧಿಗೆ ಆದ್ಯತೆ ನೀಡಿದ್ದು; ಕೇಂದ್ರದ ಪ್ರಮುಖ ಯೋಜನೆಗಳಾದ ರಾಷ್ಟ್ರೀಯ ಆಹಾರಭದ್ರತಾ ಯೋಜನೆ, ನರೇಗಾ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಪ್ರಧಾನಮಂತ್ರಿ ಆವಾಸ ಯೋಜನೆ, ರಾಷ್ಟ್ರೀಯ ಗ್ರಾಮೀಣ ನೀರುಪೂರೈಕೆ, ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಿಸಾನ್ ಸಮ್ಮಾನ್, ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಕೆಲವು ಯೋಜನೆಗಳು, ಸೆಂಟ್ರಲ್ ರೋಡ್ ಫಂಡ್, ಗಡಿ ಪ್ರದೇಶಾಭಿವೃದ್ಧಿ ಅನುದಾನ ನಿಧಿ, ಸ್ವಚ್ಛ ಭಾರತ್, ಜೀವನೋಪಾಯ ಮಿಷನ್ ಮುಂತಾದವುಗಳು ಅಬಾಧಿತವಾಗಿ ಮುಂದುವರಿಯಲಿರುವುದು ಕರ್ನಾಟಕ ಸರ್ಕಾರಕ್ಕೆ ಒಂದಷ್ಟು ನೆಮ್ಮದಿಯ ಕ್ಷಣಗಳು.

ತೆರಿಗೆ ಹೆಚ್ಚಳಕ್ಕಿರುವುದು ಸೀಮಿತ ಅವಕಾಶ ಎಂಬುದು ಮುಖ್ಯಮಂತ್ರಿಗಳಿಗೆ ತಿಳಿದ ವಿಚಾರವೇ. ಭೂಮಿ ಗುತ್ತಿಗೆ ಅಥವಾ ಮಾರಾಟ; ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಮಿಯನ್ನು ಬಾಡಿಗೆ ನೀಡುವುದು, ತೆರಿಗೆಯೇತರ ಆದಾಯ ಹೆಚ್ಚಳ; ಗಣಿಗಾರಿಕೆಯಿಂದ ಆದಾಯವೃದ್ಧಿಯ ಮೂಲಗಳನ್ನು ಸೃಷ್ಟಿಸುವ ಇರಾದೆ ಇದ್ದಂತೆ ಕಾಣುತ್ತಿದ್ದು, ಸಕಾಲಿಕವೂ ಹೌದು.

ಎಚ್ಚರಿಕೆಯ ಗಂಟೆ

ರೈತಸಿರಿ ಯೋಜನೆ, ಹನಿ ಮತ್ತು ತುಂತುರು ನೀರಾವರಿ, ಕೇಂದ್ರ ಅನುದಾನಿತ ಅಟಲ್ ಭೂಜಲ ಯೋಜನೆ, ಸಮಗ್ರ ವರಾಹ ಅಭಿವೃದ್ಧಿ ಯೋಜನೆ, ಮುಖ್ಯಮಂತ್ರಿಗಳ ಕೌಶಲ ಯೋಜನೆಗಳಿಗೆ ಗ್ರಹಣ ಹಿಡಿಯಿತು. ಹಣಕಾಸಿನ ಅಲಭ್ಯತೆ ಕಾರಣಕ್ಕೆ 16ಕ್ಕಿಂತ ಹೆಚ್ಚು ಯೋಜನೆಗಳಿಗೆ ಬಿಡಿಗಾಸೂ ಮಂಜೂರಾಗಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ಕನ್ನಡ ಮತ್ತು ಸಂಸ್ಕøತಿ, ಲೋಕೋಪಯೋಗಿ, ಜಲಸಂಪನ್ಮೂಲ ಇಲಾಖೆಗಳ ಆಯವ್ಯಯ ಪರಿಷ್ಕರಿಸಿದ್ದಲ್ಲದೆ ಹಿಂದಿನ ಸರ್ಕಾರದ ಯೋಜನೆಗಳಿಗೆ ಇತಿಶ್ರೀ ಹಾಡಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ), ಕೇಂದ್ರ ವಲಯ, ಕೇಂದ್ರ ಪುರಸ್ಕøತ ಯೋಜನೆ, ಉಪಯೋಜನೆ ಮತ್ತು ಕಾರ್ಯಕ್ರಮಗಳಲ್ಲಿ ಅನುದಾನ ಹಂಚಿಕೆ ಅನುಪಾತದಲ್ಲಿ ವ್ಯತ್ಯಾಸಗಳಾಗಿವೆ. 14ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕೃಷಿ ಸಂಬಂಧಿತ, ಸಾಮಾಜಿಕ ನ್ಯಾಯದಡಿ 30 ಯೋಜನೆಗಳ ಅನುದಾನ ಹಂಚಿಕೆ ಅನುಪಾತದಲ್ಲಿ ಪರಿವರ್ತನೆಯಾಗಿದೆ. 15ನೇ ಹಣಕಾಸು ಆಯೋಗ ತೆರಿಗೆ ಸಂಪನ್ಮೂಲ ಕ್ರೋಢೀಕರಣ ಆಧರಿಸಿ ನಿಗದಿತ ಶೇ.42ರಲ್ಲಿ ಮತ್ತಷ್ಟು ಕಡಿತಗೊಳಿಸಿದೆ. 

71000 ಕೋಟಿ ಸಾಲಮಾಡುತ್ತಿರುವುದು ಮುಂದಿನ ವರ್ಷಗಳಲ್ಲಿ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ರಾಜಸ್ವದ ಶೇ.10ರೊಳಗೆ ಇದ್ದ ಬಡ್ಡಿಪಾವತಿ ವರ್ಷ ಶೇ.14.2ಕ್ಕೆ ತಲುಪಿದ್ದು, ಮುಂದಿನ ದಿನಗಳಲ್ಲಿ ಶೇ.15 ಮೀರಲಿದೆಯೆಂಬ ಅಂದಾಜಿದೆ. ಪ್ರಸ್ತುತ ಬದ್ಧತಾವೆಚ್ಚ ಶೇ.88 ಇದ್ದುದು ಶೇ.92ನ್ನು ದಾಟುತ್ತಿದ್ದು, ರಾಜಸ್ವ ಕೊರತೆ ಶೇ.102 ಆಗುತ್ತಿದೆ. ವೆಚ್ಚದಲ್ಲಿ ನಿಯಂತ್ರಣ ಸಾಧಿಸದೇ ಹೋದಲ್ಲಿ ಸಾಲಮಾಡಿ ಸರ್ಕಾರದ ದೈನಂದಿನ ವೆಚ್ಚಗಳನ್ನು ಭರಿಸಬೇಕಾದ ಪರಿಸ್ಥಿತಿ ಉದ್ಭವಿಸೀತು; “ಮೂಗಿಗಿಂತ ಮೂಗುತಿಯೇ ಭಾರವಾದೀತು!

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೋಡುವುದಾದರೆ; ಜಾತಿ, ಧರ್ಮಾಧಾರಿತ ಅನುದಾನದ ಘೋಷಣೆ ತುಷ್ಟೀಕರಣದ ಪರಮಾವಧಿ. ಈ ರೀತಿಯ ತುಷ್ಟೀಕರಣ ಭವಿಷ್ಯದಲ್ಲಿ ರಾಜ್ಯದ ಒಟ್ಟಾರೆ ಪ್ರಗತಿಯ ಮೇಲೆ ಮಾರಕವಾಗುವುದರಲ್ಲಿ ಸಂದೇಹವಿಲ್ಲ. ಶತ್ರುಗಳನ್ನು ಅರಿತೇ ಯುದ್ಧದ ಯೋಜನೆ ರೂಪಿಸಬೇಕೆಂಬ ಪ್ರಾಜ್ಞರ ನುಡಿಯಿದೆ. ಒಂದರ್ಥದಲ್ಲಿ ಇಡೀ ಸನ್ನಿವೇಶವೇ ತಿರುಗಿನಿಂತ ಸಂಕ್ರಮಣ ಕಾಲದಲ್ಲಿದ್ದೇವೆ. ಅಧಿಕಾರಶಾಹಿಯ ಮಿತಿಮೀರಿದ ಮಧ್ಯಪ್ರವೇಶ, ರಾಜಕೀಯ ತುಷ್ಟೀಕರಣ, ಅನಾವಶ್ಯಕ ವೆಚ್ಚಗಳು, ಅನುತ್ಪಾದಕ ನಿಗಮ-ಮಂಡಳಿ-ಪ್ರಾಧಿಕಾರಿಗಳು ಇವೆಲ್ಲಾ ರಾಜ್ಯದ ಪ್ರಗತಿಗೆ ಅಡ್ಡಗಾಲಾಗುವ ಮೂಲಗಳೇ! ತುಷ್ಟೀಕರಣಕ್ಕೆ ಅತಿಯಾದ ಪ್ರಾಧಾನ್ಯ ನೀಡುತ್ತಿರುವ ಪರಿಣಾಮವಾಗಿ; ಮುಖ್ಯಮಂತ್ರಿಗಳಿಗೆ ಹಲವಾರು ಸಲಹೆಗಾರರ ನೇಮಕಾತಿ; ಅಭಿವೃದ್ಧಿ ನಿಗಮಗಳ ಸ್ಥಾಪನೆ; ಅವÀಕ್ಕೊಂದಷ್ಟು ಪದಾಧಿಕಾರಿಗಳ ನೇಮಕ, ಭತ್ಯೆ ಇತ್ಯಾದಿ ಸೌಕರ್ಯಗಳು -ಇವನ್ನೆಲ್ಲಾ ಯಾವುದೇ ದೃಷ್ಟಿಕೋನದಲ್ಲಿ ನೋಡಿದರೂ ಇವೆಲ್ಲಾ ರಾಜ್ಯದ ಪ್ರಗತಿಗೆ ಪೂರಕವೆಂದು ಸಾಬೀತಾಗುವ ಸಂದರ್ಭವೇ ಇಲ್ಲ.

ನಿಭಾಯಿಸಬೇಕಿರುವ ಸವಾಲುಗಳು

 • 2020-21ರ ಆರ್ಥಿಕ ವರ್ಷದಲ್ಲಿ ರಾಜ್ಯದ ರಾಜಸ್ವ ಸಂಗ್ರಹ ರೂ.1.80ಲಕ್ಷ ಕೋಟಿ ಎಂದು ಅಂದಾಜಿಸಲಾಗಿತ್ತು. ಈ ಪೈಕಿ ರಾಜ್ಯದ ಸ್ವಂತ ರಾಜಸ್ವ ಸಂಗ್ರಹ ರೂ.1.20ಲಕ್ಷ ಕೋಟಿಯ ಗುರಿಯಿತ್ತು. ಕೇಂದ್ರದ ಅನುದಾನ, ತೆರಿಗೆ ಪಾಲು ಮತ್ತು ಜಿಎಸ್‍ಟಿ ಪರಿಹಾರದ ರೂಪದಲ್ಲಿ 60,000 ಕೋಟಿಯ ನಿರೀಕ್ಷೆಯಿತ್ತು. ನ್ಯಾಯಸಮ್ಮತವಾಗಿ ಸಲ್ಲಬೇಕಾದ ತನ್ನ ಪಾ¯ನ್ನೂ ಪಡೆಯಲಾಗದ ಕರ್ನಾಟಕ ಸರ್ಕಾರದ ಈಗಿನ ಪರಿಸ್ಥಿತಿಯಲ್ಲಿ ಕುಸಿದ ಆದಾಯದ ಮಧ್ಯೆ ಸಂಪನ್ಮೂಲಗಳ ಕ್ರೋಢೀಕರಣ, ನಿಭಾಯಿಸುವಿಕೆಯೇ ಬಹುದೊಡ್ಡ ಸವಾಲು!
 • ರಾಜ್ಯದ ಹಣಕಾಸು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಮುನ್ಸೂಚನೆಯನ್ನು ರಾಜಸ್ವ ಕೊರತೆ ಹೆಚ್ಚಳ ಹೊರಹಾಕಿದೆ. ಸಬ್ಸಿಡಿಗಳ ಕಡಿತ ಸೇರಿದಂತೆ ವಿತ್ತೀಯ ಶಿಸ್ತಿನ ಹಲವು ಕ್ರಮಗಳತ್ತ ಸರ್ಕಾರ ಗಮನಹರಿಸಬೇಕಿದೆ. ರಾಜ್ಯದ ಜಿಎಸ್‍ಡಿಪಿ ಶೇ.2.6 ಕಡಿಮೆಯಾಗಿರುವುದರಿಂದ ಅನೇಕ ಪರಿಣಾಮಗಳು ಕಾಣಿಸಿಕೊಂಡಿವೆ.

ರಾಜಸ್ವ ಕೊರತೆ, ಸಾಲ (ಕೋಟಿ ರೂ.ಗಳಲ್ಲಿ)

ವರ್ಷ     ಕೊರತೆ   ಸಾಲ

2020-21 19486    398219

2021-22 15134    457899

2022-23 28088    512585

2023-24 47062    573790

2024-25 57993    642578

 • 2024-25ನೇ ಸಾಲಿಗೆ ರಾಜ್ಯದಲ್ಲಿ ಬಂಡವಾಳಕ್ಕೆ ಸಿಗಬಹುದಾದ ಹಣ ಕೇವಲ ರೂ.10942 ಕೋಟಿ ಮಾತ್ರ ಎಂಬುದನ್ನು ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿ ಸಲಹೆ ನೀಡಿದೆ.
 • ರಾಜಸ್ವ ಕೊರತೆಯಿಂದಾಗಿ ಬದ್ಧತಾ ವೆಚ್ಚ ಹೆಚ್ಚುವುದರಿಂದ ಇಲಾಖೆಗಳ ವಿಲೀನ ಹಾಗೂ ಹುದ್ದೆಗಳ ಪುನರ್ ಜೋಡಿಸುವ ಸರ್ಕಾರದ ಚರ್ಚೆಗೆ ಮತ್ತಷ್ಟು ಬಲ ಬಂದಿದೆ. ವೇತನಗಳಿಗೆ 2020-21ರಲ್ಲಿ 37,080 ಕೋಟಿ ಇರುವುದು 2021-22ನೇ ಸಾಲಿಗೆ 38,626 ಕೋಟಿಗಳಿಗೆ; 2024-25ನೇ ಸಾಲಿಗೆ 61,696 ಕೋಟಿಗೆ ತಲುಪಬಹುದು. ಆದ್ದರಿಂದಲೇ ಇಲಾಖೆಗಳ ವಿಲೀನ ತುರ್ತು ಅನಿವಾರ್ಯ ಎಂಬ ಸ್ಥಿತಿ ಉಂಟಾಗಿದೆ.

ಪ್ರಸ್ತುತ ಕಾಲಘಟ್ಟದಲ್ಲಿ ದೇಶ, ರಾಜ್ಯ ಎದುರಿಸುತ್ತಿರುವ ಸಂಕಷ್ಟ ಪರಿಸ್ಥಿತಿಯನ್ನು ಗಮನಿಸಬೇಕು. ಇಲಾಖಾವಾರು ಮಂತ್ರಿಗಳಿದ್ದರೂ ಪ್ರತೀ ಇಲಾಖೆಯ ಆಡಳಿತ ವೆಚ್ಚ ಮಿತಿಮೀರುತ್ತಿರುವುದು ಮಾತ್ರವಲ್ಲ; ಮಂತ್ರಿಗಳಿಗಿಂತ ಇಲಾಖೆಯ ಅಧಿಕಾರಶಾಹಿಯೇ ನಿರ್ಣಾಯಕವಾಗುತ್ತಿರುವುದು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಮಾರಕ ಬೆಳವಣಿಗೆ. ಅಧಿಕಾರಿಗಳ ಕಪಿಮುಷ್ಟಿಯಿಂದ ಸರ್ಕಾರವನ್ನು ಹೊರತರಬೇಕಾದ, ಇಂಥ ನಡವಳಿಕೆಗಳಿಗೆ ಶಾಶ್ವತವಾಗಿ ಇತಿಶ್ರೀ ಹಾಡಬೇಕಾದ ಅಗತ್ಯ ಅನುಭವೀ ರಾಜಕಾರಣಿಯಾದ, ಮುಖ್ಯಮಂತ್ರಿ ಯಡ್ಯೂರಪ್ಪನವರಿಗೆ ತಿಳಿಯದ ವಿಚಾರವೇನಲ್ಲ. ಆ ನಿಟ್ಟಿನಲ್ಲಿ ದೃಢವಾದ, ಧೈರ್ಯದ ಹೆಜ್ಜೆಗಳನ್ನಿಡಲು ಅವರು ಮನಸ್ಸು ಮಾಡಬೇಕು, ಅಷ್ಟೇ.

*ಲೇಖಕರು ಮಾಜಿ ಸಭಾಪತಿಗಳು, ಕರ್ನಾಟಕ ವಿಧಾನಪರಿಷತ್ತು.

ಯಡಿಯೂರಪ್ಪನವರ ಏಕಾಂಗಿ ಓಡಾಟ!

ಮಂತ್ರಿಮಂಡಲ ರಚನಾ ನಂತರದಲ್ಲೂ ಬೆರಳೆಣಿಕೆಯ ಮಂದಿಯನ್ನು ಹೊರತುಪಡಿಸಿದಂತೆ ಬಹುತೇಕ ಸಚಿವರು ತಮ್ಮ ಮನಃಸ್ಥಿತಿಯನ್ನು ರಾಜ್ಯಮಟ್ಟಕ್ಕೆ ವಿಸ್ತರಿಸುವಲ್ಲಿ ವಿಫಲರಾಗಿದ್ದು; ಸಕ್ರಿಯವಲ್ಲದ ಈ ಸಚಿವರಿಗೆ ಪರ್ಯಾಯ ನಾಯಕತ್ವವನ್ನು ರೂಪಿಸದಿರುವುದು ರಾಜ್ಯ ಬಿಜೆಪಿಯ ದೌರ್ಬಲ್ಯ! ಅನುಭವಿಗಳೆನ್ನಿಸಿ ಕೊಂಡ ಹಲವಾರು ಸಚಿವರು ಬಹುಶಃ ಕೊರೋನಾ ಭೀತಿ ಕಾಡಿದ್ದರೆ ಕನಿಷ್ಠಪಕ್ಷ ತಮ್ಮ ಉಸ್ತುವಾರಿಯ ಜಿಲ್ಲೆಯಲ್ಲಾದರೂ ಸಕ್ರಿಯರಾಗಿದ್ದಲ್ಲಿ ಬಹುತೇಕ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಲಭಿಸುತ್ತಿತ್ತು. ಆ ಅದೃಷ್ಟವೂ ಜಿಲ್ಲೆಗಳ ಜನತೆಗೆ ಇಲ್ಲವಾಯಿತು. ಸಂಕಷ್ಟ ಕಾಲದಲ್ಲಿ ಕೇವಲ ತಮ್ಮ ಕ್ಷೇತ್ರಕ್ಕಷ್ಟೇ ಸೀಮಿತರಾಗುಳಿದವರ ಮನೋಧರ್ಮವನ್ನು ಚುನಾವಣಾ ಸಂದರ್ಭದಲ್ಲಾದರೂ ಜನತೆ ಪ್ರಶ್ನಿಸಬೇಕಿದೆ!

ಈ ಇಳಿವಯಸ್ಸಿನಲ್ಲೂ ಮುಖ್ಯಮಂತ್ರಿ ಯಡ್ಯೂರಪ್ಪನವರ ಅನುಭವ, ದಣಿವರಿಯದ ಓಡಾಟ; ಉತ್ಸಾಹ, ರೈತರ ಸಂಕಷ್ಟ ಗಳೆಡೆಗಿನ ತುಡಿತ ಅತಿವೃಷ್ಟಿ ಪೀಡಿತ ಪ್ರದೇಶಗಳ ಭೇಟಿಯಲ್ಲಿ ಪ್ರಾಮಾಣಿಕವಾಗಿಯೇ ಎದ್ದುಕಾಣುತ್ತಿತ್ತು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಏಕಾಂಗಿಯಾಗಿಯೇ ಓಡಾಡಿ, ಸಂತ್ರಸ್ತರಿಗೆ ಧೈರ್ಯತುಂಬಿದ ರೀತಿ ಮುತ್ಸದ್ದಿಯೊಬ್ಬನ ಸಂಕಲ್ಪಶಕ್ತಿ, ಬದ್ಧತೆಗೆ ಸಾಕ್ಷಿಯಾಗಿತ್ತೆಂದರೆ ತಪ್ಪಿಲ್ಲ.

Leave a Reply

Your email address will not be published.