ಎಲ್ಲರನ್ನೂ ಸಂಪ್ರೀತಿಗೊಳಿಸಿದ ಕೇಂದ್ರದ ಅರೆ-ಬಜೆಟ್

ಪೂರ್ಣ ಪ್ರಮಾನದ ಕೇಂದ್ರ ಬಜೆಟ್ ಮಂಡನೆಯನ್ನು ವಿರೋಧ ಪಕ್ಷಗಳು ಅಡ್ಡಿಪಡಿಸಿದ ಕಾರಣದಿಂದ ಕೇಂದ್ರದ ಮೋದಿ ಸರ್ಕಾರ “ರೋಗಿ ಬಯಸಿದ್ದೂ ಹಾಲುಅನ್ನ, ವೈದ್ಯ ಹೇಳಿದ್ದೂ ಹಾಲುಅನ್ನ” ಎನ್ನುವಂತೆ ಲಾಭ ಪಡೆದುಕೊಂಡಿದೆ. ಪೂರ್ಣ ಬಜೆಟ್‍ನಲ್ಲಿ ನೀಡಬೇಕಿರುವ ಕಹಿಗುಳಿಗೆಯನ್ನು ಸದ್ಯಕ್ಕೆ ಮುಂದೂಡಿ, ಚುನಾವಣೆಗೆ ತಕ್ಕಷ್ಟು ಸಿಹಿಗುಳಿಗೆ ನೀಡುವ ಪ್ರಯತ್ನದಲ್ಲಿ ಸಫಲವಾಗಿದೆ. ಅನಾರೋಗ್ಯ ಕಾರಣ ವಿತ್ತಮಂತ್ರಿ ಅರುಣ್ ಜೈಟ್ಲಿಯವರ ಅನುಪಸ್ಥಿತಿಯಲ್ಲಿ ಪೀಯುಷ್ ಗೋಯಲ್ ಕೇಂದ್ರಸರ್ಕಾರದ ಇಂಟೆರಿಮ್ ಬಜೆಟ್ ಮಂಡಿಸಿ ಎಲ್ಲರ ಮನ ಗೆದ್ದಿದ್ದಾರೆ.

ಮುಖ್ಯವಾಗಿ ರೂ.5,00,000 ಗಳವರೆಗೆ ಆದಾಯ ತೆರಿಗೆಯಿಲ್ಲ. ಸಂಬಳದಾರರಿಗೆ ಸ್ಟಾಂಡರ್ಡ್ ಡಿಡಕ್ಷನ್ ರೂ.40,000ದಿಂದ ರೂ.50,000 ಕ್ಕೆ ಏರಿಸಲಾಗಿದೆ. ತೆರಿಗೆದಾರರ ಎರಡನೇ ಮನೆಯನ್ನು ಕೂಡಾ ಸ್ವಬಳಕೆಗೆ ತೋರಿಸಿಕೊಳ್ಳಬಹುದಾಗಿದೆ. ಅಲ್ಪಮೊತ್ತದ ಹೂಡಿಕೆ ಮಾಡಿ ರೂ.7,00,000 ವವರೆಗೆ ಯಾವುದೇ ಆದಾಯ ತೆರಿಗೆ ಕಟ್ಟದಂತಾಗಿ ಮಧ್ಯಮವರ್ಗ ನಿರಾಳವಾದಂತಾಗಿದೆ.

ಕೇಂದ್ರವು ತೆಲಂಗಾಣದ ‘ರೈತುಬಂಧು’ ಹಾಗೂ ಓಡಿಶಾದ ‘ಕಾಲಿಯಾ’ ಯೋಜನೆಗಳನ್ನು ಎರವಲು ಪಡೆದು ರೈತವರ್ಗದ ಮನಸ್ಸು-ಮತ ಗೆಲ್ಲಲು ಸಜ್ಜಾಗಿದೆ. ಇದರಂತೆ ಐದು ಎಕರೆಗೂ ಕಡಿಮೆ ಉಳುವ ಭೂಮಿಯುಳ್ಳ ಪರಿವಾರಗಳಿಗೆ ಕೇಂದ್ರ ಸರ್ಕಾರವು ವಾರ್ಷಿಕ ರೂ.12,000 ಸಹಾಯಧನ ನೀಡುವುದಾಗಿ ಘೋಷಿಸಿದೆ. ಇದರಂತೆ ದೇಶದ 12 ಕೋಟಿ ರೈತ ಕುಟುಂಬಗಳಿಗೆ ಸಹಾಯಹಸ್ತ ಚಾಚಲು 2019-20ರ ವರ್ಷದಲ್ಲಿ ಕೇಂದ್ರಕ್ಕೆ ರೂ.75,000 ಖರ್ಚಾಗಲಿದೆ. ಈ ಯೋಜನೆಯನ್ನು ಈ 2018-19ರ ವಿತ್ತವರ್ಷದಿಂದಲೇ ಜಾರಿಗೆ ತರಲು ಈಗಿನ ಚಾಲ್ತಿ ವರ್ಷದಲ್ಲಿಯೇ ರೂ.12,000 ಕೋಟಿ ಬಳಕೆಗೆ ಉದ್ದೇಶಿಸಿದೆ. ‘ಪ್ರಧಾನಮಂತ್ರಿ-ಕಿಸಾನ್ ಸಮ್ಮಾನ್ ನಿಧಿ’ ಹೆಸರಿನ ಈ ಯೋಜನೆ ರೈತರ ಬವಣೆಗೆ ಸದ್ಯಕ್ಕಾದರೂ ಶಮನ ಮಾಡಿದಂತಿದೆ. ಈ ಸಹಾಯಧನವನ್ನು ಬರುವ ವರ್ಷದಲ್ಲಿ ರೂ.12,000 ದಿಂದ ರೂ.24,000ಕ್ಕೆ ಏರಿಸುವುದಾಗಿಯೂ ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಮೋದಿ ಸರ್ಕಾರವು ದೇಶದ ಅಸಂಘಟಿತ ವಲಯದ ಕಾರ್ಮಿಕರನ್ನು ಕೂಡಾ ತನ್ನ ವಶೀಲಿ ಜಾಲದಿಂದ ಹೊರಗುಳಿಯಲು ಬಿಟ್ಟಿಲ್ಲ. ಈ ಶ್ರಮಿಕರಿಗೆ 60 ವರ್ಷದ ನಂತರದ ವೃದ್ಧಾಪ್ಯ ವೇತನ ಘೋಷಿಸಲಾಗಿದೆ. ಸದ್ಯಕ್ಕೆ ತಿಂಗಳಿಗೆ ರೂ.3,000 ದಂತೆ ಪೆನ್ಶನ್ ನೀಡಲು ರೂಪಿಸಿದ ಈ ಯೋಜನೆಯಂತೆ ಶ್ರಮಿಕರು ತಿಂಗಳಿಗೆ ರೂ.100 ಕಟ್ಟಿ ನಂತರದ ದಿನಗಳಲ್ಲಿ ಮಾಸಿಕ ಪೆನ್ಶನ್ ಪಡೆಯಬಹುದಾಗಿದೆ.

ಕೇಂದ್ರದ ಈ ತತ್ಕಾಲೀನ ಬಜೆಟ್ ಪತ್ರದಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ ಸರ್ಕಾರದ ಮುಂದಿರುವ ಗೊತ್ತು-ಗುರಿ-ನಿಲುವುಗಳನ್ನು ಸ್ಪಷ್ಟೀಕರಿಸಲಾಗಿದೆ. 10 ಅಂಶಗಳ ಈ ‘ವಿಶನ್’ ದಾಖಲೆಯಲ್ಲಿ ಕೇಂದ್ರ ಸರ್ಕಾರದ ಮುಂದಿರುವ ಪ್ರಾಥಮಿಕತೆಗಳನ್ನು ಹೆಸರಿಸಲಾಗಿದೆ. ಮತ್ತೆ ಗೆದ್ದುಬಂದಲ್ಲಿ ಮೋದಿ ಸರ್ಕಾರವು ಕೈಗೆತ್ತಿಕೊಳ್ಳುವ ಕಾರ್ಯಕ್ರಮ-ಯೋಜನೆಗಳ ಸ್ಥೂಲ ಪರಿಚಯವೂ ಇಲ್ಲಿದೆ.
-ಚಾಣಕ್ಯ

Leave a Reply

Your email address will not be published.