ಎಲ್ಲಾ ಕೊರೊನಾ ವೈರಸ್ಗಳಿಗೆ ಒಂದೇ ಸಾರ್ವತ್ರಿಕ ಲಸಿಕೆ…?

ವಿವಿಧ ರೂಪಾಂತರಿ ವೈರಾಣುಗಳ ವಿರುದ್ಧ ಲಸಿಕೆಗಳ ಪ್ರಾಬಲ್ಯವನ್ನು ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿವೆ. ಆದರೆ, ದೀರ್ಘಾವಧಿಯಲ್ಲಿ ಹೊಸ ರೂಪಾಂತರಗಳಿಂದ ರಕ್ಷಣೆ ಪಡೆಯಲು ಸಾರ್ವತ್ರಿಕ ಲಸಿಕೆ ಉತ್ತಮ ಮಾರ್ಗವಾಗಲಿದೆ.

ಮೂಲ: ನ್ಯೂಸ್ವೀಕ್ ನಿಯತಕಾಲಿಕ

ಅನುವಾದ: ಎಂ.ಕೆ.ಆನಂದರಾಜೇ ಅರಸ್

ವಿವಿಧ ರೂಪಾಂತರಗಳಿಂದ ತಲೆನೋವಾಗಿ ಪರಿಣಮಿಸುತ್ತಿರುವ ನಾವೆಲ್ ಕೊರೋನಾ ವೈರಸ್‍ಗೆ ಹಾಗೂ ಕೊರೋನಾ ವೈರಸ್ ಕುಟುಂಬದ ವಿವಿಧ ವೈರಾಣುಗಳು ಹಾಗೂ ಅವುಗಳ ವಿವಿಧ ರೂಪಾಂತರಗಳೆಲ್ಲದರಿಂದ ರಕ್ಷಣೆಯನ್ನೊದಗಿಸುವ ಸಾರ್ವತ್ರಿಕ ಲಸಿಕೆ ಸಿದ್ಧಪಡಿಸಲು ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ಸಂಶೋಧಕರ ಪೈಕಿ ಯು.ಎಸ್.ಎ.ನ ನ್ಯಾಷನಲ್ ಇನ್ಸ್ಟಿಟ್ಯೂಟ್ಸ್ ಆಫ್ ಹೆಲ್ತ್‍ನ ಬಾರ್ನಿ ಗ್ರಹಮ್ ಹಾಗೂ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ರಚನಾತ್ಮಕ ಜೀವಶಾಸ್ತ್ರಜ್ಞರಾಗಿರುವ ಜೇಸನ್ ಮೆಕ್‍ಲೆಲ್ಲನ್ ಮುಂಚೂಣಿಯಲ್ಲಿದ್ದಾರೆ.

ಈಗಾಗಲೇ ಕೋಟ್ಯಾಂತರ ಜನರಿಗೆ ಕೋವಿಡ್-19 ರೋಗಾಣುವಿನಿಂದ ರಕ್ಷಣೆಯೊದಗಿಸುತ್ತಿರುವ ಮಾಡರ್ನ ಹಾಗೂ ಫೈಜರ್ ಸಂಸ್ಥೆಗಳು ಬಿಡುಗಡೆ ಮಾಡಿರುವ ಕೋವಿಡ್-19 ಲಸಿಕೆಗೆ ಈ ಇಬ್ಬರೂ ಸಂಶೋಧಕರು ಜನವರಿ 2020ರಲ್ಲಿ ಕೇವಲ ವಾರಾಂತ್ಯದಲ್ಲಿ ಅಭಿವೃದ್ಧಿ ಪಡಿಸಿದ್ದ ಹೊಸ ರೀತಿಯ ಲಸಿಕೆಯ ವಿನ್ಯಾಸವೇ ಆಧಾರವಾಗಿತ್ತು. ಆಗಲೇ, ಈ ಇಬ್ಬರು ವಿಜ್ಞಾನಿಗಳು ಭವಿಷ್ಯದ ಪಿಡುಗುಗಳನ್ನು ಹೇಗೆ ತಡೆಗಟ್ಟುವುದು ಹಾಗೂ ವೈರಾಣುಗಳಿಗಿಂತ ಒಂದು ಹೆಜ್ಜೆ ಹೇಗೆ ಮುಂದೆ ಸಾಗಬೇಕು ಎಂಬುದರ ಬಗ್ಗೆ ಆಲೋಚಿಸುತ್ತಿದ್ದರು.

ಬಾರ್ನಿ ಗ್ರಹಮ್ ಹಾಗೂ ಮೆಕ್‍ಲೆಲ್ಲನ್ ರೀತಿಯಲ್ಲೇ ಹಲವಾರು ಸಂಶೋಧಕರು ಕೋವಿಡ್ ವಿರುದ್ಧದ ಲಸಿಕೆ ತಂತ್ರಜ್ಞಾನವನ್ನು ಇನ್ನಷ್ಟು ಆಧುನೀಕಕರಣಗೊಳಿಸಿ ಯಾವುದೇ ಬಗೆಯ ಕೋವಿಡ್ ಸೂಕ್ಷ್ಮಾಣು ಉದ್ಭವಿಸುತ್ತಿದ್ದಂತೆ ಅವುಗಳನ್ನು ಗುರಿಮಾಡಲು ಮಾರ್ಪಾಡು ಮಾಡಬಹುದಾದ ತಕ್ಷಣ ಸಿಗುವ ಪೂರ್ವತಯಾರಿ ಲಸಿಕೆಗಳ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. ಎಲ್ಲಾ ಬಗೆಯ ಕೊರೋನಾವೈರಸ್‍ಗಳಿಂದ ಒಂದೇ ಸಮಯದಲ್ಲಿ ರಕ್ಷಣೆ ಒದಗಿಸುವಂತಹ ಸಾರ್ವತ್ರಿಕ ಲಸಿಕೆ ಇದಾಗಿರುತ್ತದೆ.

ಮಾನವನಿಗೆ ಸೋಂಕು ಉಂಟುಮಾಡುವ ಇಪ್ಪತ್ತಾರು ಬಗೆಯ ವೈರಾಣು ಕುಟುಂಬಗಳು ನಮಗೆ ತಿಳಿದಿದ್ದು ಇವುಗಳಲ್ಲಿ ಕೊರೋನಾ ಕುಟುಂಬವು ಒಂದಾಗಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಕೊರೋನಾ ಕುಟುಂಬದ ಮೂರು ಹೊಸಬಗೆಯ ವೈರಾಣುಗಳು ಪ್ರಾಣಿಗಳಿಂದ ಮನುಷ್ಯನಿಗೆ ಬಂದಿವೆ. ವಿಜ್ಞಾನಿಗಳು ಇನ್ನು ಹೆಚ್ಚಿನ ಕೊರೋನಾ ವೈರಾಣುಗಳು ಮುಂಬರುವ ದಿನಗಳಲ್ಲಿ ಬರಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಪ್ರಸ್ತಾಪಿಸಿದ ಸಾರ್ವತ್ರಿಕ ಲಸಿಕೆ ಈ ವರ್ಷದಲ್ಲಿ ಅಥವಾ ಮುಂದಿನ ಮುಂದಿನ ವರ್ಷದಲ್ಲಿ ಬಾರದಿರಬಹುದು. ಆದರೆ ಅಂತಹದೊಂದು ಲಸಿಕೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.  “ನಾವು ಪ್ರತಿಕ್ರಿಯಾತ್ಮಕ ಧೋರಣೆಗಿಂತ ಪೂರ್ವಭಾವಿ ಸಿದ್ಧತೆ ನಡೆಸಿಕೊಳ್ಳಬೇಕು. ನಮ್ಮ ಉದ್ದೇಶ ಈಗಾಗಲೇ ಬಾವುಲಿಗಳಿಂದ ಮನುಷ್ಯನಿಗೆ ಬಂದಿರದ ಕೊರೋನಾವೈರಸ್ ಸೇರಿದಂತೆ ಎಲ್ಲಾ ಬಗೆಯ ಕೊರೋನಾವೈರಸ್‍ಗಳಿಂದ ರಕ್ಷಣೆ ಪಡೆಯುವುದಾಗಿದೆ,” ಎಂದು ಮೆಕ್‍ಲೆಲ್ಲನ್ ಹೇಳುತ್ತಾರೆ.

ಇದೇನು ಹೊಸ ಆಲೋಚನೆಯಲ್ಲ. ಕೋವಿಡ್-19ಗೂ ಮೊದಲೇ ವಿಜ್ಞಾನಿಗಳು ಪ್ರಾಯೋಗಿಕ ಪ್ಯಾನ್-ಕೊರೋನಾವೈರಸ್ ಲಸಿಕೆಯ ಮೇಲೆ ಕೆಲಸ ಮಾಡುತ್ತಿದ್ದರು. ಕೋವಿಡ್-19 ಪಿಡುಗಿಗೂ ಮುನ್ನ ಇಂತಹ ಪ್ರಯತ್ನಗಳಿಗೆ ಕಡಿಮೆ ಪ್ರಮಾಣದಲ್ಲಿ ಬರುತ್ತಿದ ಧನಸಹಾಯ ಹಾಗೂ ತುರ್ತು ಅಗತ್ಯದ ಕೊರತೆ ಅಡ್ದಿಯನ್ನುಂಟುಮಾಡುತ್ತಿತ್ತು. ಆದರೆ ಈಗ ಕಳೆದ ಆರು ತಿಂಗಳಲ್ಲಿ ಅಮೇರಿಕಾದ ನ್ಯಾಷನಲ್ ಇನ್ಸ್ಟಿಟ್ಯೂಟ್ಸ್ ಆಫ್ ಹೆಲ್ತ್ `ವಿಶೇಷ ಆಸಕ್ತಿ’ ಆದೇಶ ಹೊರಡಿಸಿ ಸಾರ್ವತ್ರಿಕ ಕೊರೋನಾವೈರಸ್ ಲಸಿಕೆ ಅಭಿವೃದ್ಧಿಪಡಿಸಲು ಧನಸಹಾಯಕ್ಕೆ ಅರ್ಜಿ ಸಲ್ಲಿಸಲು ಕರೆ ನೀಡಿದೆ. ಡೆಮೋಕ್ರಾಟ್ ಪಕ್ಷವು ಇದಕ್ಕಾಗಿ ಒಂದು ಬಿಲಿಯನ್ ಯು.ಎಸ್. ಡಾಲರ್‍ಗಳಷ್ಟು ಸಹಾಯ ಒದಗಿಸುವ ಶಾಸನವನ್ನು ಪರಿಚಯಿಸಿದೆ.

ಯು.ಎಸ್.ಎ.ನ ಅತ್ಯಂತ ಹಿರಿಯ ಸೋಂಕು ರೋಗ ಪರಿಣಿತ ಡಾ. ಆಂಥೊನಿ ಪೌಚಿ ಇಂಥಹದೊಂದು ಪ್ರಯತ್ನದ ಪರವಾಗಿ ವಾದಿಸಿದ್ದಾರೆ. “ಎಲ್ಲಾ ಬಗೆಯ ಸಾರ್ಸ್ ಕೋವಿಡ್-2 ರೂಪಾಂತರಗಳು ಹಾಗೂ ಕೊರೋನಾವೈರಾಣು ಕುಟುಂಬದ ಎಲ್ಲಾ ವೈರಾಣುಗಳಿಂದ ರಕ್ಷಣೆ ನೀಡುವ ಲಸಿಕೆಯನ್ನು ಅಭಿವೃದ್ಧಿಪಡಿಸುವ ವೈಜ್ಞಾನಿಕ ಸಾಮರ್ಥ್ಯ ನಮಗಿದೆ ಎಂದು ನಾನು ನಂಬಿದ್ದೇನೆ. ಕಳೆದ 18 ವರ್ಷಗಳಲ್ಲಿ ಜಾಗತಿಕ ಪಿಡುಗನ್ನು ಉಂಟು ಮಾಡಿರುವ ಹಾಗೂ ಆ ಸಾಮರ್ಥ್ಯ ಹೊಂದಿದ್ದ ಮೂರು ಕೊರೋನಾವೈರಸ್‍ಗಳಿಂದ ನಾವು ಪೆಟ್ಟು ತಿಂದಿದ್ದೇವೆ. ನಾವು ಸಾರ್ವತ್ರಿಕ ಕೊರೋನಾಲಸಿಕೆ ಅಭಿವೃದ್ಧಿಪಡಿಸದಿದ್ದರೆ ಅದು ನಾಚಿಕೆ ತರುವಂತಹದ್ದು,” ಎಂದು ಪೌಚಿ ಹೇಳುತ್ತಾರೆ.

ನಮ್ಮ ದೇಹವು ಸೂಕ್ಷ್ಮಾಣುವಿನ ಮೇಲ್ಪದರದಲ್ಲಿ ರೂಪುಗೊಂಡಿರುವ ವಿಶಿಷ್ಟ ಆಕೃತಿಗಳನ್ನು ಗುರುತಿಸಿದಾಗ ಪ್ರತಿರೋಧ ಬೆಳೆಸಿಕೊಳ್ಳುತ್ತದೆ ಹಾಗೂ ನಂತರ ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ. ಈ ಪ್ರತಿಕ್ರಾಯಗಳು ಈ ವಿಶಿಷ್ಟ ಆಕೃತಿಗಳನ್ನು ಅರಸಿಕೊಂಡು ಹೋಗಿ ಇತರೇ ಪ್ರತಿರಕ್ಷಣಾ ಕೋಶಗಳು ಬಂದು ಆ ವಿಶಿಷ್ಟ ಆಕೃತಿಗಳನ್ನು ಹೊಂದಿರುವ ಸೂಕ್ಷ್ಮಾಣುಗಳನ್ನು ನಾಶಪಡಿಸುವವರೆಗೂ ಅವುಗಳನ್ನು ಹತೋಟಿಯಲ್ಲಿಡುತ್ತವೆ.

ನಮ್ಮ ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಗೆ ರೋಗಾಣುವಿನ ಕೆಲವು ನಿಶ್ಚಿತ ಭಾಗಗಳು ಮಾತ್ರ ಗೋಚರಿಸುತ್ತವೆ. ಬಹಳಷ್ಟು ರೋಗಾಣುಗಳು ಪ್ರೊಟೀನ್ ನಿಂದ ಸುತ್ತಲ್ಪಟ್ಟ ಹಾಗೂ ಸಾಬೂನಿನ ನೊರೆಯಂತಹ ಪೊರೆಯಲ್ಲಿ ಆವರಿಸಲ್ಪಟ್ಟ ಅನುವಂಶಿಕ ಪದಾರ್ಥವನ್ನು ಹೊಂದಿರುತ್ತವೆ. ಅತಿಥೆಯ ದುರ್ಬಲ ಕೋಶಗಳನ್ನು ಅಪಹರಿಸುವ ವೈರಾಣುವಿನ ಕೊಕ್ಕೆಯಂತೆ ಕಾಣುವ ಸ್ಪೈಕ್ ಪ್ರೊಟೀನ್ ಈ ಪೊರೆಯಿಂದ ಚಾಚಿಕೊಂಡಿರುತ್ತದೆ. ಈ ಕೊಕ್ಕೆಗಳು ವಿವಿಧ ವಿಶಿಷ್ಟ ಆಕಾರದಲ್ಲಿದ್ದು ಅವು ಗುರಿಮಾಡುವ ಚಾಚಿಕೊಂಡಿರುವ ಪ್ರೊಟೀನ್ ಗಳಿಗೆ ಹೊಂದಿಕೊಳ್ಳುವುದಕ್ಕೆ, ಹಾಗೂ ಬೀಗಕ್ಕೆ ಛಾವಿ ಹೊಂದಿಕೊಳ್ಳುವಂತೆ, ಬಂಧಿಸಿಕೊಳ್ಳಲು ಬೇಕಾದ ವಿನ್ಯಾಸವನ್ನು ಹೊಂದಿರುತ್ತವೆ. ತಾನು ದಾಳಿಮಾಡಲು ಉಪಯೋಗಿಸುವ ವೈರಾಣುವಿನ ಈ ಸ್ಪೈಕ್ ಪ್ರೊಟೀನ್ ಗಳು ಅವುಗಳ ದೌರ್ಬಲ್ಯವೂ ಆಗಿರುತ್ತದೆ.

2010ರ ಆರಂಭದಲ್ಲಿ ಆರ್.ಎಸ್.ವಿ. (ರೋಗಾಣು) ಯನ್ನು ಗುರಿಮಾಡುವ ಲಸಿಕೆಯನ್ನು ಅಭಿವೃದ್ಧಿ ಮಾಡಲು ಗ್ರಹಮ್ ಅವರು ಮೆಕ್‍ಲೆಲ್ಲನ್ ಅವರ ಜೊತೆ ಕೆಲಸ ಮಾಡಲು ಆರಂಭಿಸಿದರು. ಈ ರೋಗಾಣುವಿನ ವಿರುದ್ಧ ಲಸಿಕೆ ಅಭಿವೃದ್ಧಿ ಮಾಡುವುದು ಸವಾಲಾಗಿತ್ತು. ಏಕೆಂದರೆ ಮಕ್ಕಳಲ್ಲಿ ಮಾರಾಣಾಂತಿಕ ರೋಗದ ಪರಿಸ್ಥಿತಿಗೆ ಕಾರಣವಾಗುತ್ತಿದ್ದ ಈ ರೋಗಾಣುವಿನ ಪ್ರೊಟೀನ್ ಗಳು ಆಕಾರವನ್ನು ಬದಲಿಸಿಕೊಳ್ಳಲು ಸಮರ್ಥವಾಗಿದ್ದವು. ಇದೊಂದು `ಕ್ರೇಜಿ ಪ್ರೊಟೀನ್ ಯೋಗ’ದ ಬಗೆ ಹಾಗೂ ಅದರಿಂದ ಪ್ರತಿಕಾಯಗಳಿಗೆ ಅದನ್ನು ಗುರುತಿಸಲು ಕಷ್ಟವಾಗುತಿತ್ತು ಎಂದು ಒಬ್ಬ ಜೀವಶಾಸ್ತ್ರಜ್ಞ ವಿವರಿಸುತ್ತಾರೆ.

ಇದನ್ನು ಪರಿಹರಿಸಲು, ಮ್ಯಾಕ್‍ಲೆಲ್ಲನ್ ಹಾಗೂ ಬಾರ್ನಿ ಗ್ರಹಮ್ ಆರ್.ಎಸ್.ವಿ. ರೋಗಾಣುಗಳ ಮೇಲ್ಮೈಯಲ್ಲಿ ಕಾಣುವ ಪ್ರೊಟೀನ್ ಗಳ ಕೃತಿಮವಾಗಿ ಸಂಯೋಜಿತವಾಗಿರುವ (ಸಿಂಥೆಟಿಕ್)ಆವೃತ್ತಿಗಳನ್ನು ಸೃಷ್ಟಿಸುವ ತಂತ್ರವನ್ನು ಅಭಿವೃದ್ಧಿಪಡಿಸುತ್ತಾರೆ ಹೀಗೆ ಕೃತಿಮವಾಗಿ ಸಂಯೋಜಿತವಾಗಿರುವ ಸಿಂಥೆಟಿಕ್ ಪ್ರೊಟೀನ್ ಗಳ ಅನುವಂಶಿಕದಲ್ಲಿ ಜಾಗ್ರತೆಯಿಂದ ಆಯ್ದ ಕೆಲವು ಬದಲಾವಣೆಗಳನ್ನು ಮಾಡಿದ್ದುದರಿಂದ ಆ ಬದಲಾವಣೆಗಳು ಪ್ರೊಟೀನ್ ಗಳು ತಮ್ಮ ಆಕೃತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದನ್ನು ತಡೆದು ಅವು ಒಂದೇ ರೂಪದಲ್ಲಿರುವಂತೆ ಮಾಡುತ್ತವೆ. ಇದರಿಂದ ದೇಹಕ್ಕೆ ಈ ಪ್ರೊಟೀನ್ ಗಳ ವಿರುದ್ಧ ಶಕ್ತಿಶಾಲಿಯಾದ ಪ್ರತಿಕಾಯಗಳನ್ನು ಸೃಷ್ಟಿಸುವುದಕ್ಕೆ ಸಾಧ್ಯವಾಗುತ್ತದೆ.

ಗ್ರಹಮ್ ಅವರು ಈ ತಂತ್ರವನ್ನು ಉಪಯೋಗಿಸಿ ಲಸಿಕೆಯನ್ನು ತಯಾರಿಸಿ ಅದನ್ನು ಮೆಕಾಕ್ಯೂ ಕೋತಿಗಳ ಮೇಲೆ ಪ್ರಯೋಗಿಸಿದಾಗ ಅದು ಅವರು ಅಲ್ಲಿಯವರೆಗೆ ಕಂಡ ಅತ್ಯಂತ ಪ್ರಬಲವಾದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಸೃಷ್ಟಿಸುತ್ತದೆ. “ದೇಹವು ನೀವು ಯಾವುದೇ ಆಕೃತಿಯನ್ನು ತೋರಿಸಿದರೂ ಅದರ ವಿರುದ್ಧ ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ. ಆದರೆ ನೀವು ಅದಕ್ಕೆ ಸರಿಯಾದ ಆಕೃತಿಯನ್ನು ತೋರಿಸಬೇಕು, ನಾವು ಈಗಾಗಲೇ ಆರ್.ಎಸ್.ವೈರಾಣುವಿನ ವಿರುದ್ಧ ಅತ್ಯಂತ ಪ್ರಬಲವಾದ ಮಾನೋಕ್ಲೋನಲ್ ಪ್ರತಿಕಾಯಗಳನ್ನು ಹೊಂದಿದ್ದೇವೆ ಎಂದುಕೊಂಡಿದ್ದೆವು. ಆದರೆ ಇವು ಅದಕ್ಕಿಂತ ನೂರರಿಂದ ಸಾವಿರಪಟ್ಟು ಹೆಚ್ಚು ಪ್ರಬಲವಾಗಿವೆ,” ಎಂದು ಮೆಕ್‍ಲೆಲ್ಲನ್ ಹೇಳುತ್ತಾರೆ.

ಈ ಇಬ್ಬರು ವಿಜ್ಞಾನಿಗಳು 2013ರಲ್ಲಿ ತಮ್ಮ ಯಶಸ್ಸನ್ನು ವಿವರವಾಗಿ ಪ್ರಕಟಿಸುತ್ತಾರೆ. ಅದರಲ್ಲಿ ನಿರ್ದೇಶಿತವಾಗಿ ತಿದ್ದುಪಡಿಮಾಡಿರುವ ಪ್ರತಿಕಾಯಗಳನ್ನು ಸೃಷ್ಟಿಸಿ ಅವುಗಳನ್ನು ಸಾಮೂಹಿಕವಾಗಿ ಉತ್ಪಾದನೆ ಮಾಡಬಹುದಾದಂತಹ ಲಸಿಕೆಯಾಗಿ ಪರಿವರ್ತಿಸುವಂತಹ ಸಾಧ್ಯತೆಗಳನ್ನೊಳಗೊಂಡ ಹೊಸ ತಂತ್ರಜ್ಞಾನಗಳು ಹೇಗೆ ಲಸಿಕೆ ಅಭಿವೃದ್ಧಿಯಲ್ಲಿ ಹೊಸ ಯುಗಕ್ಕೆ ದಾರಿಮಾಡಿಕೊಡುವುದೆಂದು ಹೇಳಿದ್ದಾರೆ. ಈ ಲಸಿಕೆಯ ಮೂರನೇ ಹಂತದ ವೈದ್ಯಕೀಯ ಪ್ರಯೋಗಗಳು 2020ರ ಅಂತ್ಯದಲ್ಲಿ ಆರಂಭವಾಗಿದ್ದು ಅದರ ಫಲಿತಾಂಶಗಳು ಮುಂದಿನ ವರ್ಷ ಬರುವುದೆಂಬ ನಿರೀಕ್ಷೆಯಿದೆ. ಆರ್.ಎಸ್. ವೈರಾಣುವಿನ ಕುರಿತಂತಹ ಸಂಶೋಧನೆಗಳು ಪ್ರಕಟವಾಗುವ ಸಮಯದಲ್ಲಿ ಬಾರ್ನಿ ಗ್ರಹಮ್ ಹಾಗೂ ಮೆಕ್‍ಲೆಲ್ಲನ್ ಹಾಗೂ ಅವರ ಸಹವರ್ತಿಗಳು ಪಿಡುಗುಗಳನ್ನು ಎದುರಿಸಲು ತಮ್ಮ ವಿಧಾನಗಳನ್ನು ಮಾರ್ಪಾಡಿಸಿಕೊಳ್ಳುವುದರ ಬಗ್ಗೆ ಕೆಲಸ ಮಾಡುತ್ತಿದ್ದರು. ಅರೇಬಿಯನ್ ಪರ್ಯಾಯದ್ವೀಪದಲ್ಲಿ ಮಾರಾಣಾಂತಿಕ ಎಂ.ಇ.ಆರ್.ಎಸ್. ಸೋಂಕು ಹರಡಲು ಆರಂಭಿಸಿದಾಗ ಗ್ರಹಮ್ ಹಾಗೂ ಮ್ಯಾಕ್‍ಲೆಲ್ಲನ್ ಆ ಸೋಂಕನ್ನು ಹರಡುವ ವೈರಾಣುವಿನ ಕೊಕ್ಕೆಯಂತಹ ಪ್ರೊಟೀನ್ ಅನ್ನು ಗುರಿಮಾಡುವ ಲಸಿಕೆಯನ್ನು ಸೃಷ್ಟಿಸಲು ತಮ್ಮ ಹೊಸ ತಂತ್ರಜ್ಞಾನವನ್ನು ಬಳಸಿದ್ದರು. ಆದರೆ ಅದನ್ನು ಮಾನವನ ಮೇಲೆ ಪ್ರಯೋಗ ಮಾಡುವ ಮೊದಲೇ ಎಂ.ಇ.ಆರ್.ಎಸ್. ರೋಗಾಣು ಮರೆಯಾಗಿತ್ತು. ಆದರೆ ಈ ತಂತ್ರಜ್ಞಾನವು ಈಗ ಮಾಡರ್ನ್ ಹಾಗೂ ಫೈಜ್ರ್ ರ್ ಸಂಸ್ಥೆಗಳ ಲಸಿಕೆಯ ತಂತ್ರಜ್ಞಾನಕ್ಕೆ ಆಧಾರವಾಗಿದೆ.

ಎಂ.ಇ.ಆರ್.ಎಸ್. ಸ್ಫೋಟವಾದ ನಂತರ, ಭವಿಷ್ಯದ ಪಿಡುಗುಗಳಿಂದ ರಕ್ಷಣೆ ಪಡೆಯಲು ನೆರವಾಗುವಂತಹ ಲಸಿಕೆಗಳ ಸಂಪನ್ಮೂಲಗಳಿಗಾಗಿ ನೀಲಿನಕ್ಷೆಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಗ್ರಹಮ್ ಅವರು ತಮ್ಮ ಮೇಲಧಿಕಾರಿ ಅಂಥೋನಿ ಪೌಚಿಯವರ ಜೊತೆ ಮಾತನಾಡುತ್ತಾರೆ. ಈ ನೀಲಿನಕ್ಷೆಯ ಉದ್ದೇಶ ಮಾನವನಿಗೆ ಸೋಂಕನ್ನುಂಟುಮಾಡುವ ನಮಗೆ ತಿಳಿದಿರುವ 26 ವೈರಾಣು ಕುಟುಂಬಗಳ ಕನಿಷ್ಠ ಒಂದು ವೈರಾಣು ಪ್ರತಿನಿಧಿಯನ್ನು ಗುರಿಮಾಡಿ ಲಸಿಕೆ ಮೂಲಮಾದರಿಗಳನ್ನು ಅಭಿವೃದ್ಧಿಪಡಿಸಿಕೊಂಡು, ಆ ಲಸಿಕೆಗಳ ತಯಾರಿಕೆಗೆ ಬೇಕಾದ ಪದಾರ್ಥಗಳನ್ನು  ದಾಸ್ತಾನುಮಾಡಿಕೊಳ್ಳುವುದಾಗಿರುತ್ತದೆ. ಈ ಕುರಿತಂತೆ ಅಧಿಕೃತವಾಗಿ 2019ರಲ್ಲಿ `ಪ್ರೋಟೋಟೈಪ್ ಪ್ಯಾಥೋಜೆನ್ ಅಪ್ರೋಚ್ ಪಾರ್  ಪ್ಯಾಂಡೆಮಿಕ್ ಪ್ರೆಪೇರ್ಡ್‍ನೆಸ್’ ಎಂಬ ಕಾಗದವನ್ನು ಸಹ ಪ್ರಕಟಿಸಲಾಗುತ್ತದೆ. ಅದು ಪ್ರಕಟವಾಗುವ ಮುಂಚೆಯೇ ಗ್ರಹಮ್ ಕೊರೋನಾ ವೈರಸ್‍ಗೆ ಲಸಿಕೆಗಾಗಿ ಮೂಲಮಾದರಿಯ ಕಾರ್ಯಸಾಧ್ಯತೆಯ ಪ್ರಾತ್ಯಕ್ಷಿಕೆಗಾಗಿ ಮಾಡರ್ನ ಸಂಸ್ಥೆಯ ಜೊತೆ ಸಹಯೋಗ ಮಾಡಿಕೊಂಡಿರುತ್ತಾರೆ.

ಅಷ್ಟರಲ್ಲಿ ಕೊರೋನಾ ಪಿಡುಗು ಅಪ್ಪಳಿಸುತ್ತದೆ. ಚೈನಾದ ಸಂಶೋಧಕರು ಜನವರಿಯ ಆರಂಭದಲ್ಲಿ ಕೋವಿಡ್-19 ಜೀನೋಮ್ ಅನ್ನು ಪ್ರಕಟಿಸುತ್ತಾರೆ. ಮೆಕ್‍ಲೆಲ್ಲನ್  ಹಾಗು ಗ್ರಹಮ್ ಎಂ.ಇ.ಆರ್.ಎಸ್. ಲಸಿಕೆಗೆ ಸಿದ್ಧಪಡಿಸಿದ್ದ ಯೋಜನೆಯನ್ನು ಹೊರತೆಗೆದು ಆ ರೋಗಾಣುವಿನ ಕೊಕ್ಕೆಯಂತಹ ಪ್ರೊಟೀನ್ ಅನ್ನು ಸ್ಥಿರಗೊಳಿಸಲು ಉಪಯೋಗಿಸಿದ್ದ ಅನುವಂಶಿಕ ಸೂಚನೆಗಳನ್ನು ನಕಲು ಮಾಡಿಕೊಂಡು ನಂತರ ಈ ತಂತ್ರವನ್ನು ಅಳವಡಿಸಿಕೊಂಡು ಕೊರೋನಾ ವಿರುದ್ಧ ಕೆಲಸ ಮಾಡುವುದೆಂದು ಅವರು ನಂಬುವ ಲಸಿಕೆ ವಿಧಾನವನ್ನು ಮಾಡರ್ನ ಸಂಸ್ಥೆ ಹಾಗೂ ಕೆಲವು ಇತರೆ ಔಷಧಿ ತಯಾರಕ ಸಂಸ್ಥೆಗಳಿಗೆ ಕಳುಹಿಸುತ್ತಾರೆ. “ಯು.ಎಸ್.ಗೆ ಕೊರೋನಾ ಬರುವ ಮೊದಲೇ ನಾವು ಇದನ್ನೆಲ್ಲಾ ಮಾಡಿದ್ದೆವು,” ಎಂದು ಗ್ರಹಮ್ ಹೇಳುತ್ತಾರೆ.

ಈಗಾಗಲೇ ವಿವಿಧ ರೂಪಾಂತರಗಳ ವಿರುದ್ಧ ಲಸಿಕೆಗಳ ಪ್ರಾಬಲ್ಯವನ್ನು ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿವೆ. ಆದರೆ, ದೀರ್ಘಾವಧಿಯಲ್ಲಿ ಹೊಸ ರೂಪಾಂತರಗಳಿಂದ ರಕ್ಷಣೆ ಪಡೆಯಲು ಸಾರ್ವತ್ರಿಕ ಲಸಿಕೆ ಉತ್ತಮ ಮಾರ್ಗವಾಗಲಿದೆ. ಏಕೆಂದರೆ ಅಂತಹದೊಂದು ಲಸಿಕೆ ನಾವೆಲ್ ಕೊರೋನಾ ವೈರಸ್ ವಿರುದ್ಧ ಸಹ ಕೆಲಸ ಮಾಡಲಿದೆ. ಈಗಾಗಲೇ, ಮೆಕ್‍ಲೆಲ್ಲನ್ ತಮ್ಮ ಪ್ರಯೋಗಾಲಯದಲ್ಲಿ ವಿವಿಧ ರೂಪಾಂತರಗಳಲ್ಲಿ ಸಹ ಕೊರೋನಾವೈರಸ್‍ಗಳು ಹೆಚ್ಚಿನ ಮಟ್ಟದಲ್ಲಿ ಸಂರಕ್ಷಿಸಿಕೊಂಡಿರುವ ಸ್ಪೈಕ್ ಪ್ರೊಟೀನ್ ನ ಭಾಗವನ್ನು ಗುರುತಿಸಿದ್ದಾರೆ. ಹಾಗೂ ಒಂದೇ ಆಕೃತಿಯಲ್ಲಿ ಹೆಚ್ಚು ಕಾಲ ಉಳಿದು ಬೇಕಾದ ಪ್ರತಿಕಾಯಗಳನ್ನು ಸೃಷ್ಟಿಸಲು ನೆರವಾಗುವ ಸ್ಥಿರವಾದ ಪ್ರೊಟೀನ್ ರಚನೆಯನ್ನು ಸೃಷ್ಟಿಸುವ ಬಗ್ಗೆ ಪ್ರಯೋಗವನ್ನು ಈಗ ಆರಂಭಿಸಿದ್ದಾರೆ.

ಗ್ರಹಮ್ ಸಹ ಸಾರ್ವತ್ರಿಕ ಲಸಿಕೆ ಸಿದ್ಧಪಡಿಸಲು ವಾಷಿಂಗ್‍ಟನ್ ವಿಶ್ವವಿದ್ಯಾಲಯದ ರಚನಾತ್ಮಕ ಪ್ರೊಟೀನ್ ಜೀವಶಾಸ್ತ್ರಜ್ಞ ನೀಲ್ ಕಿಂಗ್ ಅವರ ಸಹಯೋಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್-19ಗೂ ಮುನ್ನ ಆರು ವಿವಿಧ ಕೊರೋನಾವೈರಸ್‍ಗಳ ಸ್ಪೈಕ್‍ಗಳೊಂದಿಗೆ ಒಂದು ಲಸಿಕೆಯ ಆವೃತ್ತಿಯನ್ನು ಇಲಿಯ ಮೇಲೆ ಪ್ರಯೋಗ ಮಾಡಲು ಆರಂಭಿಸಿದ್ದರು. ಅವರಿಗಿರುವ ಭರವಸೆಯೆಂದರೆ ಮುಂದೆ ಬರುವ ಯಾವುದೇ ಹೊಸ ಕೊರೋನಾ ವೈರಸ್ ಈ ಆರು ಚುಚ್ಚುಮದ್ದಿನ ತಳಿಗಳಲ್ಲಿ ಒಂದಕ್ಕೆ ಹೋಲಿಕೆ ಹೊಂದಿರಬಹುದು ಹಾಗೂ ಅದರಿಂದ ದೇಹದಲ್ಲಿ ಪ್ರತಿಕ್ರಿಯೆ ಉಂಟಾಗಿ ಅದರ ವಿರುದ್ಧ ಕೆಲಸ ಮಾಡುವುದು ಎಂಬುದಾಗಿದೆ. “ಈ ವಿಧಾನ ಕೆಲಸ ಮಾಡಿದರೆ, ನಾವು ವ್ಯಾಪಕವಾಗಿ ರಕ್ಷಣೆ ನೀಡುವಂತಹ ಕೊರೋನಾ ಲಸಿಕೆಯನ್ನು ಸೃಷ್ಟಿಮಾಡಿದ್ದೇವೆ ಎಂದಾಗುತ್ತದೆ,” ಎಂದು ಕಿಂಗ್ ಹೇಳುತ್ತಾರೆ.

Leave a Reply

Your email address will not be published.