ಎಲ್ಲಿದ್ದಾರೆ ಸ್ವಾಮೀ ಕನ್ನಡ ಕಟ್ಟುವವರು?

ಬರಹಗಾರರು ಹೆಚ್ಚುತ್ತಿದ್ದಾರೆ, ಶ್ರವಣ ಮಾಧ್ಯಮಗಳು, ದೃಶ್ಯ ಮಾಧ್ಯಮಗಳು ಹೆಚ್ಚುತ್ತಿವೆ, ಒಪ್ಪಿಕೊಳ್ಳೋಣ. ಆದರೆ ಇವು ಕನ್ನಡ ಭಾಷೆಯ ಅಭಿವೃದ್ಧಿಗೆ ಕೊಡುವ ಕಾಣಿಕೆಯಾದರೂ ಏನು?

-ಪ.ರಾಮಕೃಷ್ಣ ಶಾಸ್ತ್ರಿ

ಉತ್ತರ ಕರ್ನಾಟಕದ ಒಂದೂರಿನ ಊಟ ಮತ್ತು ಉಪಾಹಾರ ಗೃಹದ ಮುಂದೆ ನಿಲ್ಲಿಸಿದ ಫಲಕವೊಂದನ್ನು ನೋಡಿ. ‘ಫ್ಯಾಮಿಲಿ ರೋಮ’, ಅಂದರೆ ಏನರ್ಥ? ಇಲ್ಲಿ ಒಂದೇ ಒಂದು ಕನ್ನಡದ ಪದವಿಲ್ಲ. ಆ ಊರಿನಲ್ಲಿ ಕನ್ನಡ ಬಲ್ಲಂಥವರು ಇಲ್ಲವೆ, ಕನ್ನಡಾಭಿಮಾನಿಗಳಿಲ್ಲವೆ? ಕನ್ನಡ ಕಟ್ಟುವವರು ಎಂದಿರಾ? ಎಲ್ಲಿದ್ದಾರೆ ಸ್ವಾಮೀ ಅವರು? ನಿಜವಾಗಿಯೂ ಕನ್ನಡ ಭಾಷೆ ಬದುಕಿ ಬಾಳಲಿ ಎಂಬ ಕಾಳಜಿ ಅವರಲ್ಲಿದೆಯಾ?

ವೇದಿಕೆಯಲ್ಲಿ ನಿಂತು ಕನ್ನಡ ಭಾಷೆಗಾಗಿ ಜೀವವನ್ನೇ ತೆತ್ತೇವು ಎಂದು ಹೇಳುವ ಅನೇಕರ ಮಕ್ಕಳು ಓದುತ್ತಿರುವುದು ಆಂಗ್ಲ ಮಾಧ್ಯಮದಲ್ಲಿ. ಇವರ ಮಕ್ಕಳ ಕಿವಿಗೆ ಕನ್ನಡದ ಪದ ಬೀಳಲು ಮನೆಯ ಹೆಂಗಸರು ಬಿಡುತ್ತಾರೆಯೆ? ಅವನು ಮುಂದೆ ತಂತ್ರಜ್ಞನೋ ವೈದ್ಯನೋ ಆಗುವ ಕನಸಿನ ಮೂಟೆಯನ್ನು ಕಟ್ಟಿ ಇಟ್ಟಿದ್ದಾರೆ. ಮನೆಯಲ್ಲಿಯೂ ತನ್ನ ಆಂಗ್ಲ ಭಾಷಾಭಿವೃದ್ಧಿಗಾಗಿ ಅದೇ ಭಾಷೆಯನ್ನೇ ಬಳಸುವ ಇವರ ಮಗ ಮುಂದೆ ಕನ್ನಡದ ತೇರು ಎಳಿಯಲಿದ್ದಾನೆಯೇ?ಕನ್ನಡದಲ್ಲಿ ಮಾತನಾಡಿದರೆ ಅವನಿಗೆ ಅರ್ಥವೇ ಆಗುವುದಿಲ್ಲ. ಪದಗಳೇ ಅಪರಿಚಿತ. ಅಪ್ಪ, ಅಮ್ಮ ಇದ್ದಾರಾ? ಕೇಳಿದರೆ ಇಲ್ಲ ಅನ್ನುತ್ತಾನೆ. ಒಳಗೆ ಯಾರೋ ಮಾತನಾಡುವುದು ಕೇಳಿಸ್ತಿದೆ, ಯಾರು ಅಂತ ಪ್ರಶ್ನಿಸಿದರೆ ಅದು ಮಮ್ಮಿ ಮತ್ತು ಡ್ಯಾಡಿ ಎನ್ನುತ್ತಾನೆ.

ಕನ್ನಡದ ಪತ್ರಿಕೆಗಳಿಗೆ ಬದುಕು ಇದೆ ಅಂದುಕೊಂಡಿರಾ? ಐದು ಲಕ್ಷ ದೈನಿಕ ಪ್ರಸಾರವಿರುವುದನ್ನೇ ಮಹತ್ಸಾಧನೆ ಎಂಬಂತೆ ಹೇಳಿಕೊಳ್ಳುವ ಹಲವು ಪತ್ರಿಕೆಗಳು ಅಸ್ತಿತ್ವ ಉಳಿಸಿಕೊಳ್ಳುವುದು ಹೇಗೆ ಎಂದು ಹೆಣಗಾಡುತ್ತಿವೆ. ಪ್ರಸಾರದ ದಾಖಲೆಯಿಂದ ನಿಯತಕಾಲಿಕೆಗಳು ದೂರ ಸರಿಯುತ್ತಿವೆ. ಒಂದು ಪತ್ರಿಕೆಯನ್ನು ಹತ್ತಾರು ಮಂದಿ ಓದುವ ಅಭಿಮಾನ ಶೂನ್ಯ ಜನಗಳು ಈಗ ಪತ್ರಿಕೆ ಅವಶ್ಯವೆನಿಸಿದರೆ ಜಂಗಮವಾಣಿಯಲ್ಲಿ ಓದಬಹುದು. ಕ್ರಮಶಃ ಮುದ್ರಣ ಮಾಧ್ಯಮ ವಿನಾಶ ಹೊಂದುತ್ತಿದೆ. ಪುಸ್ತಕಗಳ ಮಾತೆತ್ತಿದರೆ, ಪ್ರಕಾಶಕರು ಹಲವರು ಹುಟ್ಟಿಕೊಳ್ಳುತ್ತಾರೆ. ಪುಸ್ತಕಗಳು ಪ್ರಕಟವಾಗುತ್ತಿವೆ. ಬಹುತೇಕ ಪುಸ್ತಕಗಳು ಮಾರುಕಟ್ಟೆಗೆ ಬರುವುದಿಲ್ಲ. ಗ್ರಂಥಾಲಯಗಳಿಗೆ ಸರಕಾರ ಖರೀದಿಯನ್ನು ನಂಬಿ ಅದಕ್ಕೆಷ್ಟು ಬೇಕೋ ಅಷ್ಟು ಪುಸ್ತಕ ಮಾತ್ರ ಮುದ್ರಿಸಿ ಕೈತೊಳೆದುಕೊಳ್ಳುವ ಪ್ರಕಾಶಕರಿದ್ದಾರೆ. ಇನ್ನು ಉಚಿತವಾಗಿ ಒಬ್ಬರಿಗೆ ಒಂದು ಪುಸ್ತಕ ಕೊಟ್ಟರೆ ನಮ್ಮ ಕಣ್ಮುಂದೆಯೇ ಅದನ್ನು ದಿನದರ್ಶಿಕೆಯ ಹಾಗೆ ಸುರುಳಿ ಸುತ್ತಿ ಹಿಂಸಿಸುವ ನಿರಭಿಮಾನವನ್ನು ಕಾಣುತ್ತಿದ್ದೇವೆ.

ಸಾಧ್ಯವಿರುವಲ್ಲಿ ಸಹಜವಾದ ಕನ್ನಡ ಪದಗಳ ಬದಲು ಉದ್ದೇಶಪೂರ್ವಕವಾಗಿ ಆಂಗ್ಲ ಪದವನ್ನು ಬಳಸುವ ಚಲನಚಿತ್ರ ಕಲಾವಿದರು, ದೃಶ್ಯ ಮಾಧ್ಯಮಗಳು ಕನ್ನಡದ ಕೊಲೆ ಮಾಡುತ್ತಿಲ್ಲವೆ?

ಬರಹಗಾರರು ಹೆಚ್ಚುತ್ತಿದ್ದಾರೆ, ಶ್ರವಣ ಮಾಧ್ಯಮಗಳು, ದೃಶ್ಯ ಮಾಧ್ಯಮಗಳು ಹೆಚ್ಚುತ್ತಿವೆ, ಒಪ್ಪಿಕೊಳ್ಳೋಣ. ಆದರೆ ಇವು ಕನ್ನಡ ಭಾಷೆಯ ಅಭಿವೃದ್ಧಿಗೆ ಕೊಡುವ ಕಾಣಿಕೆಯಾದರೂ ಏನು? ಭಾಷೆಯ ಬಗೆಗೆ ಜಾಗೃತಿ ಇದೆಯೆ? ಸರಕಾರದ ಭಾಷೆಯಲ್ಲಿ ಕನ್ನಡ ಮಾತನಾಡಲು ಕಷ್ಟವಾಗಬಹುದು. ಅಭಿಯಂತರರು, ಅಪರ ನ್ಯಾಯಾಧೀಶರು, ಮಂತ್ರಾಲಯ, ಆರಕ್ಷಕ ಠಾಣೆಯಂತಹ ಕೃತಕ ಪದಗಳು, ಧೂಮಶಕಟದಂತಿರುವ ವಿಚಿತ್ರ ಪ್ರಯೋಗಗಳು ಕನ್ನಡ ಭಾಷೆಯ ಅಭಿವೃದ್ಧಿಗೆ ಪೂರಕವಾಗುವುದು ಹಾಗಿರಲಿ, ಹಳ್ಳಿಯವರಿಗೂ ಅವು ಬಳಕೆಗೆ ಬೇಕಾಗಿಲ್ಲ. ಆದರೆ ಸಾಧ್ಯವಿರುವಲ್ಲಿ ಸಹಜವಾದ ಕನ್ನಡ ಪದಗಳ ಬದಲು ಉದ್ದೇಶಪೂರ್ವಕವಾಗಿ ಆಂಗ್ಲ ಪದವನ್ನು ಬಳಸುವ ಚಲನಚಿತ್ರ ಕಲಾವಿದರು, ದೃಶ್ಯ ಮಾಧ್ಯಮಗಳು ಕನ್ನಡದ ಕೊಲೆ ಮಾಡುತ್ತಿಲ್ಲವೆ? ಕನ್ನಡದ ಅನ್ನ ತಿಂದು ಬದುಕುವ, ಕನ್ನಡದ ನೆಲದಲ್ಲಿ ಹುಟ್ಟಿ ಬೆಳೆದ ನಟ, ನಟಿಯರಿಗೆ ಬೆರಕೆ ಭಾಷೆಯೇ ನಿಜವಾದ ಕನ್ನಡವೆಂಬಷ್ಟು ಹೊಲಸಾಗಿದೆ. ‘ಆ್ಯಕ್ಚುವಲ್ಲಿ’ ಅಂತ ಹೇಳಬೇಕಾ? ನಿಜವಾಗಿಯೂ ಅನ್ನಲು ಇವರಿಗೆ ಬರುವುದಿಲ್ಲವೆ?

ಮಕ್ಕಳ ಮನಸ್ಸಿನಲ್ಲಿ ಭಾಷೆಯನ್ನು ಕಾಪಿಡಬೇಕಿದ್ದರೆ ಸಾಹಿತ್ಯದಲ್ಲಿ ಆಸಕ್ತಿ ಇರಬೇಕು. ಹಿಂದಿನವರು ಮಕ್ಕಳಿಗೆ ಮಲಗುವ ಮುನ್ನ ಒಂದು ಕತೆ ಹೇಳುತ್ತಿದ್ದರು. ಇದರಿಂದ ಮಗುವಿನ ಪದ ಸಂಪತ್ತು, ವಿಷಯದಲ್ಲಿ ಕುತೂಹಲ, ಓದುವ ಆಸಕ್ತಿ ಎಲ್ಲವೂ ಹೆಚ್ಚುತ್ತಿತ್ತು. ಈಗ ಅಂತರ್ಜಾಲದಲ್ಲಿ ಪತ್ರಿಕೆಗಳು ಬರುತ್ತಿರಬಹುದು. ಅದನ್ನು ಓದುವ ಸಾಮಾನ್ಯ ಜನವರ್ಗ ಹೆಚ್ಚಿಲ್ಲ. ನಮಗೆ ಕಲಬೆರಕೆಯಾಗದ ಭಾಷೆ ಬೇಕು. ಮುದ್ರಣ ಮಾಧ್ಯಮ ಉಳಿಯಬೇಕು. ಮಲಯಾಳಿಗಳನ್ನು ಉದಾಹರಿಸುತ್ತೇವೆ. ಮನೆಯಲ್ಲಿರುವ ಪ್ರತಿಯೊಬ್ಬರೂ ಒಂದು ಪತ್ರಿಕೆ ಕೊಳ್ಳುತ್ತಾರೆ, ಬೇರೆಯವರ ಪತ್ರಿಕೆ ಓದುವುದಿಲ್ಲ. ಕರ್ನಾಟಕಕ್ಕಿಂತ ಚಿಕ್ಕ ರಾಜ್ಯವಾದರೂ ಅಲ್ಲಿ ಪತ್ರಿಕೆಗಳ ಪ್ರಸಾರ ಅತ್ಯಧಿಕವಾಗಿದೆ.

ಭಾಷೆ ವೇದಿಕೆಗಳಲ್ಲಿ ಬಿಗಿಯುವ ಭಾಷಣದಿಂದ ಉಳಿಯುವುದಿಲ್ಲ. ಪ್ರಖರ ಲೇಖನಗಳಿಂದಲೂ ಆಸಕ್ತಿ ಹೆಚ್ಚಿಸಲು ಸಾಧ್ಯವಿಲ್ಲ. ಬದುಕಿಗಾಗಿ ಆಂಗ್ಲ ಭಾಷೆ ಕಲಿತರೂ ನಮ್ಮ ಮಗ ಅಥವಾ ಮಗಳು ದಿನದಲ್ಲಿ ಅರ್ಧ ಗಂಟೆ ಸಾಹಿತ್ಯದ ಓದಿಗೆ ಮೀಸಲಿಡಬೇಕು ಎಂದು ಪ್ರತಿಯೊಬ್ಬ ತಾಯಿ ಮತ್ತು ತಂದೆ ಅಂತಃಕರಣ ಪೂರ್ವಕವಾಗಿ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸಲು ಶ್ರಮಿಸಬೇಕು. ರಾಜ್ಯೋತ್ಸವದ ದಿನ ಮಲಗಿದ್ದ ಕನ್ನಡದ ಮಗಳನ್ನು ಬಡಿದೆಬ್ಬಿಸಿ ಕನ್ನಡೋತ್ಸಾಹ ಪ್ರದರ್ಶಿಸುವ ಬರಿಯ ನಾಟಕಗಳು ಸಾಯುತ್ತಿರುವ ಭಾಷೆಗೆ ಜೀವಜಲವಾಗುವುದು ಕನಸಿನ ಮಾತು.

Leave a Reply

Your email address will not be published.