ಎಲ್ಲಿರಬೇಕಿತ್ತೋ ಅಲ್ಲಿಲ್ಲ; ಹೇಗಿರಬೇಕಿತ್ತೋ ಹಾಗಿಲ್ಲ!

ನಮ್ಮ ಪೃಥ್ವಿಯ ಪ್ರಸಕ್ತ ಸ್ಥಿತಿಯ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಸ್ಥಿತಿಯನ್ನು ನೋಡಬೇಕು. ಯಾವುದೇ ನಾಡು ಸುಭಿಕ್ಷವಾಗಿರಬೇಕಾದರೆ ಭೂಪ್ರದೇಶದ ಮೂರರಲ್ಲಿ ಎರಡು ಭಾಗ ಕಾಡಿರಬೇಕು ಎಂಬುದು ಒಂದು ಸೂಚಿ. ಕರ್ನಾಟಕದಲ್ಲಿ ಈಗ 16% ರಷ್ಟು ಕಾಡಿದೆ. ಅಂದರೆ ಎಷ್ಟಿರಬೇಕೋ ಅದರರ್ಧ; ಮೂವತ್ತುದಶಲಕ್ಷ ಹೆಕ್ಟೇರ್ ಕಾಡಿದೆ! ಹಾಗಾದರೆ ಹೆಜ್ಜೆ ತಪ್ಪಿದ್ದೆಲ್ಲಿ?

ಒಂದು ಲಕ್ಷದಿಂದ ಹತ್ತು ಸಾವಿರ ವರ್ಷಗಳ ಹಿಂದಿನವರೆಗೆ ಜಾಗತಿಕ ತಾಪಮಾನ ಈವತ್ತಿಗಿಂತ ನಾಲ್ಕರಿಂದ ಏಳು ಡಿಗ್ರಿ ಸೆಲ್ಸಿಯಸ್ ಕಡಿಮೆ ಇತ್ತು. ಆಗ ಭೂಮಿಯ ಮೇಲೆ ಮಾಸ್ಟರ್‌ಡಾನ್‌ಗಳು, ಮ್ಯಾಮೋತ್‌ಗಳು ಡೈರ್‌ತೋಳಗಳು, ಕೋರೆಹಲ್ಲಿನ ಬೆಕ್ಕುಗಳು ಓಡಾಡುತ್ತಿದ್ದವು. ಐದುಕೋಟಿ ವರ್ಷಗಳ ಹಿಂದೆ, ಆರ್ಕ್ಟಿಕ್‌ನಲ್ಲಿ ಉಷ್ಣ ವಲಯದ ಕಾಡಿತ್ತು. ಕೆನಡಾ, ಗ್ರೀನ್‌ಲ್ಯಾಂಡ್‌ನಲ್ಲಿ ಮೊಸಳೆಗಳು, ಆಮೆಗಳು ಹಾಗೂ ಅಲಾಸ್ಕಾದಲ್ಲಿ ತಾಳೆ ಮರಗಳೂ ಇದ್ದವು. ಧ್ರುವ ಪ್ರದೇಶದ ಮೇಲೆ ಹಿಮದ ಟೊಪ್ಪಿಗೆ ಇರಲಿಲ್ಲ. ಭೂಮಧ್ಯರೇಖೆಯ ಸುತ್ತಲಿನ ಸಮುದ್ರದ ನೀರು ಬಿಸಿಯಾಗಿತ್ತು. ಪೃಥ್ವಿ ಈಗಿರುವುದಕ್ಕಿಂತ ಐದರಿಂದ ಎಂಟು ಡಿಗ್ರಿ ಸೆಲ್ಸಿಯಸ್ ಹೆಚ್ಚು ಬೆಚ್ಚಗಿತ್ತು. ದೇಹದ ಉಷ್ಣತೆಯಂತೆಯೇ ಭೂಗೋಳದ ಉಷ್ಣತೆಯಲ್ಲೂ ಕೆಲವೇ ಡಿಗ್ರಿಯ ವ್ಯತ್ಯಾಸವು ಆರೋಗ್ಯ ಹಾಗೂ ಗಂಡಾಂತರದ ನಡುವಿನ ವ್ಯತ್ಯಾಸವಾಗಬಲ್ಲುದು.

ಭೂಮಿಯ ಮೇಲಿನ ಜೀವಿಗಳಲ್ಲಿ ಮನುಷ್ಯನ ಪ್ರಮಾಣ 0.01% ಮಾತ್ರ. ಆದರೂ ಪೃಥ್ವಿಯ ಮೇಲೆ ಮಾನವನ ಕೈವಾಡ ಅತ್ಯಧಿಕವಾದ ಈ ಕಾಲವನ್ನು ಅಂಥ್ರಪೊಸೇನ್ ಎಂದು ವಿಜ್ಞಾನಿಗಳು ಕರೆಯುತ್ತಾರೆೆ. ಹವಾಮಾನದ ಮೇಲೆ ಪರಿಣಾಮ ಬೀರುವ ನೈಸರ್ಗಿಕ ವಿದ್ಯಮಾನವನ್ನು ಗಮನಿಸಿದಲ್ಲಿ ಸದ್ಯದ ಜಾಗತಿಕತಾಪಮಾನಕ್ಕೆ ನೂರು ಶೇಕಡ ಕಾರಣ ಮನುಷ್ಯನ ಚಟುವಟಿಕೆ. ಹಾಗೂ ಇದೇ ಕಾಲದಲ್ಲಿ ಆರನೇ ಸಮೂಹಜೀವನಾಶವೂ ನಡೆಯುತ್ತಿರುವುದು ಆಕಸ್ಮಿಕವಲ್ಲ.

ಹವಾಮಾನ ಬದಲಾವಣೆಯ ಚಕ್ರೀಯ ಮಾಡೆಲ್‌ಗಳ ಪ್ರಕಾರ ಈಗ ಭೂಮಿ ಹಿಮಕಾಲ (ಐಸ್‌ಏಜ್)ದಲ್ಲಿರಬೇಕು ಹಾಗೂ ಸ್ವಲ್ಪ ತಣ್ಣಗಿರಬೇಕು. ಹಾಗಿದ್ದರೂ ಪೃಥ್ವಿಯ ಈವರೆಗಿನ ಹತ್ತರಲ್ಲಿ ಒಂಬತ್ತು ಅತಿ ಬಿಸಿಯ ವರ್ಷಗಳು 2000ದ ಈಚೆ ಘಟಿಸಿವೆ. ಇಪ್ಪತ್ತೈದು ಕೋಟಿ ವರ್ಷಗಳ ಹಿಂದೆ ಆದ ಮಹಾಮರಣದ ಘಟನೆಯಲ್ಲಿ ಸೈಬೇರಿಯನ್ ಜ್ವಾಲಾಮುಖಿಗಳು ಇಡೀ ಅಮೆರಿಕವನ್ನು ಮುನ್ನೂರು ಮೀಟರ್ ಎತ್ತರಕ್ಕೆ ಮುಚ್ಚುವಷ್ಟು ಲಾವಾರಸವನ್ನು ಸುರಿಸಿದವು. ಇಂದು ನಾವು ಅದಕ್ಕಿಂತ ಹತ್ತು ಪಟ್ಟು ವೇಗದಲ್ಲಿ ವಾತಾವರಣಕ್ಕೆ ಹಸಿರುಮನೆ ಅನಿಲಗಳನ್ನು ಸೇರಿಸುತ್ತಿದ್ದೇವೆ.

ಮಾನವ ಚಟುವಟಿಕೆಗಳಿಂದ ವಾತಾವರಣ ಸೇರುವ ಹಸಿರುಮನೆ ಅನಿಲಗಳಲ್ಲಿ ಇಂಗಾಲದ ಡಯಾಕ್ಸೈಡ್ ಶೇ.82, ಇದು ಬಹುಮುಖ್ಯವಾಗಿ ಕಾರ್ಖಾನೆಗಳು, ಸಾರಿಗೆ ಹಾಗೂ ವಿದ್ಯುತ್ ಉಪಯೋಗದಿಂದ ಬಿಡುಗಡೆಯಾಗುವುದು. ಔದ್ಯೋಗಿಕ ಕ್ರಾಂತಿಯ ನಂತರ ವಾತಾವರಣದಲ್ಲಿ CO2 ಶೇ40 ಹೆಚ್ಚಾಗಿದೆ. ಮಿಥೇನ್ ಹಾಗೂ ನೈಟ್ರಸ್‌ಆಕ್ಸೈಡ್ ಇನ್ನೆರಡು ಮುಖ್ಯ ಹಸಿರು ಮನೆ ಅನಿಲಗಳು. ಜಾಗತಿಕ ತಾಪಮಾನವನ್ನುಂಟುಮಾಡುವ ಸಾಮರ್ಥ್ಯದಲ್ಲಿ ಎಲ್ಲ ಹಸಿರುಮನೆ ಅನಿಲಗಳು ಒಂದೇ ಅಲ್ಲ.

ನೂರು ವರ್ಷಗಳ ಕಾಲದಲ್ಲಿ ಮಿಥೇನ್ ಸಾಮರ್ಥ್ಯ CO2ಗಿಂತ 34 ಪಟ್ಟು ಹೆಚ್ಚು ಹಾಗೂ ನೈಟ್ರಸ್‌ಆಕ್ಸೈಡ್ 310 ಪಟ್ಟು. ಬೇರೆಬೇರೆಯ ಹವಾಮಾನ ವಿಜ್ಞಾನಿಗಳು ಹಸಿರು ಮನೆ ಅನಿಲಗಳ ಹೆಚ್ಚಳವನ್ನು ನಿಯಂತ್ರಿಸಲು ಬೇರೆಬೇರೆ ಗಡುವುಗಳನ್ನು ಕೊಡುತ್ತಿದ್ದಾರೆ. ಹವಾಮಾನ ಬದಲಾವಣೆ ಕ್ಯಾನ್ಸರ್ ಇದ್ದ ಹಾಗೆ. ಕ್ಯಾನ್ಸರ್ ಜೀವಕೋಶಗಳು ಮಾರಕವಾಗಿ ವೃದ್ಧಿ ಹೊಂದುವ ಮೊದಲು ಅವುಗಳನ್ನು ತೆಗೆದು ಹಾಕಬೇಕು. ನಮ್ಮ ಗ್ರಹವೂ ಒಂದಿಷ್ಟು ತಾಪಮಾನ ಹೆಚ್ಚಳವನ್ನ಼ಷ್ಟೇ ತಡೆದುಕೊಳ್ಳಬಲ್ಲದು. ಅದರ ನಂತರ ಧನಾತ್ಮಕ ಹಿಮ್ಮಾಹಿತಿ ಕುಣಿಕೆಯಿಂದ ನಿಲ್ಲಿಸಲಾಗದ ಹವಾಮಾನ ಬದಲಾವಣೆ ಸಂಭವಿಸುತ್ತದೆ. ಅಂತಹ ಅತ್ಯಂತ ಬಲಯುತವಾದ ಕುಣಿಕೆಗಳಲ್ಲೊಂದು ಅಲ್-ಬಿಡೋ ಪರಿಣಾಮ. ಸಮುದ್ರಗಳು ಬಿಸಿಲಿನ ಶಾಖವನ್ನು ಹೀರಿಕೊಂಡರೆ ಬಿಳಿ ಹಿಮ ಪದರಗಳು ಪ್ರತಿಫಲಿಸುತ್ತವೆ. ಭೂಮಿ ಕಾದಂತೆ ಬಿಸಿಲನ್ನು ಪ್ರತಿಫಲಿಸುವ ಹಿಮ ಕಡಿಮೆಯಾಗಿ ಶಾಖವನ್ನು ಹೀರಿಕೊಳ್ಳುವ ಸಾಗರ ಹಾಗೂ ಭೂಮಿ ಹೆಚ್ಚಾಗುತ್ತದೆ. ಸಾಗರಗಳು ಕಾಯುತ್ತವೆ. ಹಿಮ ಇನ್ನೂ ವೇಗವಾಗಿ ಕರಗುತ್ತದೆ.

ನಮ್ಮ ಪೃಥ್ವಿಯ ಸ್ಥಿತಿಯ ಕುರಿತ ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಸ್ಥಿತಿಯನ್ನು ನೋಡಬೇಕು. ಯಾವುದೇ ನಾಡು ಸುಭಿಕ್ಷವಾಗಿರಬೇಕಾದರೆ ಮೂರರಲ್ಲಿ ಎರಡು ಭಾಗ ಭೂಪ್ರದೇಶ ಕಾಡಿರಬೇಕು ಎಂಬುದು ಒಂದು ಸೂಚಿ. ಕರ್ನಾಟಕದಲ್ಲಿ ಈಗ 16% ರಷ್ಟು ಕಾಡಿದೆ. ಅಂದರೆ ಎಷ್ಟಿರಬೇಕೋ ಅದರರ್ಧ; ಮೂವತ್ತುದಶಲಕ್ಷ ಹೆಕ್ಟೇರ್ ಕಾಡಿದೆ. ಅದರಲ್ಲಿ 5% ಅತಿದಟ್ಟ ಕಾಡು. 56% ಸಾಮಾನ್ಯ ದಟ್ಟ ಕಾಡು ಹಾಗೂ 39% ತೆರೆದ ಕಾಡು. ಅಂದರೆ ಕುರುಚಲು. ನಮ್ಮಲ್ಲಿ ಉಷ್ಣವಲಯದ ಹಸಿಹಸಿರು, ನಿತ್ಯಹಸಿರು ಕಾಡು, ಅರೆನಿತ್ಯ ಹಸಿರು ಕಾಡು ಹೀಗೆಯೇ ಹತ್ತೊಂಬತ್ತು ರೀತಿಯ ಕಾಡುಗಳಿವೆ.

ಇದರಲ್ಲಿ 2004-10ರಲ್ಲಿ ಮಾಡಿದ ಅಧ್ಯಯನವೊಂದರ ಪ್ರಕಾರ 5733 ಚ.ಕಿ.ಮೀ ಅಂದರೆ ರಾಜ್ಯದ 3% ಭಾಗಗಳಲ್ಲಿ ಅರಣ್ಯವಲ್ಲದ ಮರಗಳ ಪ್ರದೇಶವಿದೆ. ಇವುಗಳಲ್ಲಿ ತೋಟಪಟ್ಟಿ ಹಾಗೂ ರಸ್ತೆಯ ಪಕ್ಕದ ಮರಗಳು ಸೇರಿವೆ. ತೋಟಗಳೇನೋ ಹೆಚ್ಚಾಗುತ್ತಿವೆಯಾದರೂ ರಸ್ತೆ ಪಕ್ಕದ ಗಿಡಗಳು ಹಲವು ಕಾರಣಗಳಿಗೆ, ಮುಖ್ಯವಾಗಿ ಹೊಸ ರಸ್ತೆಗಳ ಹೆಸರಲ್ಲಿ ಮಾಯವಾಗುತ್ತಿವೆ. ಯೋಜನೆಗಳ ಕಾರಣದಿಂದ ಕಡಿಯಲ್ಪಡುವ ಮರಗಳು ಎಷ್ಟಿವೆಯೆಂದರೆ ಮರಕಡಿಯುವ ಲಾಬಿಯೇ ಇದೆ ಎಂಬ ಮಾತು ಹೌದೆನಿಸುತ್ತದೆ. ಅಭಿವೃದ್ಧಿ ಯೋಜನೆಗಳಿಂದ ಕಡಿತಲೆಯಾಗುವ ಗಿಡಗಳ ಸಂಖ್ಯೆಯನ್ನು ನೋಡಿ. ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗಕ್ಕೆ 15 ಲಕ್ಷ ಗಿಡಗಳು, ವಿದ್ಯುತ್ ಪ್ರಸರಣ ಮಾರ್ಗಕ್ಕಾಗಿ 5 ಲಕ್ಷ, ಕಳಸಾ ಬಂಡೂರಿ ಯೋಜನೆಗೆ 15 ಲಕ್ಷ, ಕೈಗಾ ವಿಸ್ತರಣೆಗೆ 2 ಲಕ್ಷ ಗಿಡಗಳು ಹೀಗೆ ಮೂವತ್ತೇಳು ಲಕ್ಷ ಮರಗಳ ತಲೆಯ ಮೇಲೆ ಸದ್ಯ ಕತ್ತಿ ತೂಗುತ್ತಿದೆ.

ನಮ್ಮ ಹುಬ್ಬಳ್ಳಿ ಧಾರವಾಡ ನಡುವಿನ ಬಿಆರ್ಟಿಎಸ್‌ಯೋಜನೆಗೆ ನಾಲ್ಕು ಸಾವಿರಕ್ಕೂ ಹೆಚ್ಚು ಬೆಳೆದ ಮರಗಳನ್ನು ಬಲಿ ಕೊಟ್ಟಾಯ್ತು. ಎಚ್ಚೆತ್ತ ಕೆಲವರು ಸೇರಿ ಜುಬ್ಲಿ ಸರ್ಕಲ್‌ನಿಂದ ನರೇಂದ್ರ ಕ್ರಾಸ್ ವರೆಗೆ ರಸ್ತೆ ಮಾಡುವಾಗ ಮರ ಕಡಿಯಬಾರದೆಂದು ಶಾಸಕರಿಗೆ ಹೇಳಿದೆವು. ಮರಗಳನ್ನು ಕಡಿಯದೇ ಹೇಗೆ ರಸ್ತೆ ಮಾಡಬಹುದೆಂಬ ಮಾದರಿಯನ್ನು ತೋರಿಸಿದೆವು. ಅವರೂ ಆ ಮಾದರಿಗೊಪ್ಪಿ ಮರಗಳನ್ನು ಉಳಿಸಿ ರಸ್ತೆಯಾಗುತ್ತದೆ ಎಂದು ಸೇರಿದ ನಾಗರಿಕರ ಮುಂದೆ ಹೇಳಿದರು. ರಸ್ತೆಯನ್ನು ಮಾಡುವ ಸಮಯದಲ್ಲಿ ರಾಷ್ಟ್ರೀಯ ಹೈವೇ ಪ್ರಾಧಿಕಾರದವರಿಗೆ ನಮ್ಮನ್ನು ಕೇಳಿ ರಸ್ತೆಯ ಯೋಜನೆಯನ್ನು ಅಂತಿಮಗೊಳಿಸಲು ಸೂಚಿಸಿದರು. ಮುಂದೆ ನಾಲ್ಕಾರು ಸಭೆಗಳು, ಸೈಟ್ ಭೇಟಿ ಎಲ್ಲಾ ಆಗಿಯೂ ಮರಗಳು ಉಳಿಯಲಿಲ್ಲ ಶೀಘ್ರವಾಗಿ ನಡೆದೇ ಹೋಯ್ತು, ಮರಗಳ ಕಟಾವು. ರಸ್ತೆ ಇನ್ನೂ ಕುಂಟುತ್ತಿದೆ. ಇದೊಂದು ಉದಾಹರಣೆ ಮಾತ್ರ.

ಹೀಗೆ ಕಾಡಲ್ಲದ ಪ್ರದೇಶದಲ್ಲಿರುವ ಮರಗಳೂ ಕಳೆದು ಹೋಗುತ್ತಿರುವುದು ನಮಗೆ ಅನಿವಾರ್ಯವಾಗಿ ಕಾಣುತ್ತಿರುವುದು ಆತಂಕಕಾರಿಯೇ ಹೌದು. ಬಯಲು ಸೀಮೆಯಲ್ಲಿ, ಕೃಷಿ ಭೂಮಿಯಲ್ಲಿ ಎಷ್ಟು ಮರಗಳಿವೆ ಎಂಬ ಕುತೂಹಲವಿತ್ತು ನನಗೆ. ಗದಗ ಜಿಲ್ಲೆಯ ಹಳ್ಳಿಯೊಂದರಲ್ಲಿ ಅಧ್ಯಯನ ಮಾಡಿದೆವು. ಸರಾಸರಿ ಮೂರು ಎಕರೆಯಲ್ಲಿ ಎರಡು ಮರಗಳು. ಹೆಚ್ಚಿನವು ಬನ್ನಿಮರ. ನಮ್ಮ ಗ್ರಾಮ ಪಂಚಾಯತ್‌ಗಳಲ್ಲಿ ಗಿಡ ನೆಡಲು, ನೀರು ಹಿಡಿಯಲು ಯೋಜನೆಗಳಿವೆ. ಆದರೆ ನಾನು ಭಾಗವಹಿಸಿದ ಯಾವ ವಾರ್ಡ್ ಸಭೆಯಲ್ಲೂ ಗ್ರಾಮ ಸಭೆಯಲ್ಲೂ ಅದು ಚರ್ಚೆಯಾಗಲೇ ಇಲ್ಲ. ಅವರು ಅಲ್ಲಿ ಚರ್ಚಿಸಿದ್ದೆಲ್ಲ ಸೀಸಿ ರಸ್ತೆ, ಸಮುದಾಯ ಭವನ, ಹೆಚ್ಚೆಂದರೆ ಕುಡಿಯುವ ನೀರು. ಶಿಕ್ಷಣ, ಆರೋಗ್ಯ ಇಲ್ಲ ನೀರು ಹಿಡಿಯುವ ಕುರಿತಿಲ್ಲ, ಪರಿಸರವಂತೂ ಇಲ್ಲವೇ ಇಲ್ಲ. ಪಂಚಾಯಿತಿಗೂ ಬೇಡ, ಸಮುದಾಯಕ್ಕೂ ಬೇಡ.

ಅಭಿವೃದ್ಧಿ ಸೂಚ್ಯಂಕದಲ್ಲಿ, ಸಂಪನ್ಮೂಲಗಳ ಬಳಕೆಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಹಿಂದಿರುವ ನಾವು ಪರಿಸರಕ್ಕಾಗಿ ನಮ್ಮ ಅಭಿವೃದ್ಧಿಯನ್ನು ಬಲಿಕೊಡಬೇಕೆ ಎಂಬುದೊಂದು ಗಂಭೀರವಾಗಿ ಪರಿಗಣಿಸಬೇಕಾದ ಪ್ರಶ್ನೆ. ಅಂತಾರಾಷ್ಟ್ರೀಯ ಪರಿಸರ ಸಮಾವೇಶಗಳಲ್ಲೂ ಚರ್ಚೆಯಾಗುತ್ತಿರುವ ವಿಷಯ. ಬಡ ದೇಶಗಳು ಪರಿಸರದ ಗುರಿಗಳನ್ನು -ಉದಾಹರಣೆಗೆ ಕಾರ್ಬನ್ ಸೂಸುವಿಕೆ ಕಡಿಮೆ ಮಾಡುವುದು, ಗಿಡಮರಗಳನ್ನು ನೆಡುವುದು- ಸಾಧಿಸಲು ಮುಂದುವರಿದ ದೇಶಗಳು ಆರ್ಥಿಕ ಹಾಗೂ ತಾಂತ್ರಿಕ ಸಹಾಯ ಒದಗಿಸಬೇಕೆಂಬುದು ಅಭಿವೃದ್ಧಿಯಲ್ಲಿ ಸಮಪಾಲಿಗಾಗಿ ಇರುವ ಹಕ್ಕೊತ್ತಾಯ.

ಇಲ್ಲಿ ನಾವು ಗಮನಿಸಲೇಬೇಕಾದ ಎರಡು ವಿಷಯಗಳಿವೆ. ಒಂದು, ಯಾರೇ ಪರಿಸರವನ್ನು ಕೆಡಿಸಿದರೂ ಮೊದಲು ಬೆಲೆ ತೆರಬೇಕಾದವರು ಬಡರಾಷ್ಟçಗಳು ಹಾಗೂ ಅಲ್ಲಿಯ ಬಡವರು. ಎರಡನೆಯದಾಗಿ ಆರ್ಥಿಕ ಹಾಗೂ ಪಾರಿಸರಿಕ ಅಭಿವೃದ್ಧಿಗಳು ಪರಸ್ಪರ ವಿರುದ್ಧವಾದ ಹಾಗೂ ಪರಸ್ಪರ ಪ್ರತ್ಯೇಕ (Mutually Exclusive) ವಿಷಯಗಳು ಅನ್ನುವುದೊಂದು ನಂಬಿಕೆಯಿದೆ. ಅಂದರೆ ಪಾರಿಸರಿಕ ಅಭಿವೃದ್ಧಿಯಾಗುವುದಾದರೆ ಆರ್ಥಿಕ ಹಿನ್ನಡೆಯಾಗುತ್ತದೆ ಹಾಗೂ ಪ್ರತಿಕ್ರಮವಾಗಿಯೂ ಅದೇ ಸರಿ ಅಂತ. ಹಾಗೇನಿಲ್ಲ, ಸುಸ್ಥಿರಾಭಿವೃದ್ಧಿ ಎನ್ನುವುದು ಎರಡನ್ನೂ ಪರಸ್ಪರ ಪೂರಕವಾಗಿ ಹೊಂದಿಸಿ ಅನುಷ್ಠಾನ ಮಾಡುವ ದಾರಿ. ಅಂತಹ ಹಲವು ಮಾದರಿಗಳು ಇಂದು ಇವೆ.

ನಾವು ಧಾರವಾಡದ ಸಮೀಪ ಮಾಡಿದ ಸೂರಶೆಟ್ಟಿಕೊಪ್ಪ ಮಾದರಿ ಅಭಿವೃದ್ಧಿಯು ಇಂಥದ್ದೊಂದು ಸುಸ್ಥಿರ ಮಾದರಿಯೇ ಹೌದು. ಅಲ್ಲಿಯ ಬಡವರು ಗಿಡ ನೆಟ್ಟು ನೀರು ಹಿಡಿದು ಅದ್ಭುತ ಆರ್ಥಿಕಾಭಿವೃದ್ಧಿ ಸಾಧಿಸಿದರು. ಆದರೆ ಅದಾಗಿ ಹದಿನೈದು ವರ್ಷಗಳಾದರೂ ಅದೊಂದು ಶ್ರೇಷ್ಠತೆಯ ದ್ವೀಪವಾಗಿ ಅಷ್ಟೇ ಉಳಿದಿದೆ. ಅಂತಹ ಮಾದರಿಗಳ ಮರುನಿರ್ಮಾಣದತ್ತ ಪ್ರಯತ್ನಗಳಾಗಿಲ್ಲ.

ಯಾವುದೇ ಯೋಜನೆಯಲ್ಲಿ ಮರಗಳನ್ನು ಕಡಿಯುವಾಗ ಮೊದಲೇ ಒಂದು ಗಿಡಕ್ಕೆ 10 ಗಿಡ ನೀಡಬೇಕೆಂಬುದು ಕಾನೂನು. ಮರಕಡಿಯುವವರೆಲ್ಲ್ಲ ಒಂದು ಗಿಡಕ್ಕೆ 10 ಗಿಡ ನೆಡುತ್ತೇವೆ ಎನ್ನುವವರೇ. ಎಲ್ಲಿ, ಯಾವ ಗಿಡ ಯಾವಾಗ ನೆಡುತ್ತಾರೆ ಎಂಬುದಕ್ಕೆಲ್ಲ ಉತ್ತರವಿಲ್ಲ. ನೆಟ್ಟರೂ ಆ ಗಿಡಗಳಲ್ಲಿ ಬದುಕುವುದು ಎಷ್ಟು? ಅದಕ್ಕೂ ಉತ್ತರ ಸಿಗಲಾರದು.

ಹುಬ್ಬಳ್ಳಿ ಧಾರವಾಡಗಳ ನಡುವಿನ ಬಿ.ಆರ್.ಟಿ.ಎಸ್ ರಸ್ತೆಯ ಅಕ್ಕಪಕ್ಕ ಕಡಿದ ಮರಗಳ ಬದಲಿಗೆ ವಿವಿಧ ಮರಗಳನ್ನು ನೆಡಲು ಯೋಜನೆಯಲ್ಲಿ ಬಜೆಟ್ ತೆಗೆದಿರಿಸಲಾಯ್ತು. ನಾನು ಯೋಜನೆಯ ಹಸಿರು ಬಿ.ಆರ್.ಟಿ.ಎಸ್ ಎಂಬ ಸಮಿತಿಯಲ್ಲಿದ್ದೆ. ಅಲ್ಲಿ-ಇಲ್ಲಿ ರಸ್ತೆಯಾಗುವ ಮೊದಲು ಗಿಡ ನೆಡಲಾಯ್ತು. ರಸ್ತೆ ಮುಗಿಯುವ ವೇಳೆಯಲ್ಲಿ ನೋಡಿದರೆ ಇಕ್ಕೆಲಗಳಲ್ಲಿ ಗಿಡ ನೆಡಲು 70 ಸೆಂ.ಮೀ. ಮಾತ್ರ ಕಾಂಕ್ರೀಟ್ ನಡುವೆ ಜಾಗ ಬಿಟ್ಟಿದ್ದರು. ದೊಡ್ಡಜಾತಿಯ ಮರ ನೆಡಲು ಸಾಧ್ಯವೇ ಇಲ್ಲ. ಯೋಜನೆ ಮುಗಿಯುತ್ತಿದ್ದಂತೆ ಗಿಡ ನೆಡುವ ಯೋಚನೆಯನ್ನೇ ಕೈಬಿಟ್ಟಿದ್ದಾರೆ. ಕಾಂಕ್ರೀಟ್ ಹಾಗೂ ಹಸಿರಿನ ನಡುವಿನ ಅನುಪಾತ ತೀವ್ರವಾಗಿ ಕೆಟ್ಟಿದೆ. ಬಿ.ಆರ್.ಟಿ.ಎಸ್ ಶಾಖವನ್ನು ಉಗುಳುವ ಕಾಂಕ್ರೀಟ್ ಪಟ್ಟಿಯಾಗಿದೆ.

ಸಾವಿರಾರು ಕೋಟಿಯ ಇಂಥ ಯೋಜನೆಗಳಲ್ಲಿ ಒಂದೆರಡು ಶೇಕಡ ಬಜೆಟ್ಟನ್ನು ಗಿಡನೆಡಲು, ನೀರಿಂಗಿಸಲು ತೆಗೆದಿಟ್ಟು ಸರಿಯಾಗಿ ಕೆಲಸ ಮಾಡಿದಲ್ಲಿ ಪರಿಸ್ಥಿತಿ ಯೋಜನೆಯ ಮೊದಲಿಗಿಂತ ಚೆನ್ನಾಗಿ ಆಗುವಂತೆ ಮಾಡಬಹುದು. ನಮ್ಮ ರಾಜಕಾರಣಿಗಳು, ಅಧಿಕಾರಿಗಳು, ಇಂಜಿನಿಯರ್‌ಗಳು ಮನಸ್ಸು ಮಾಡಬೇಕಷ್ಟೇ. ಕೆಟ್ಟ ವಾತಾವರಣ ಹಾಗೂ ಹವಾಮಾನದ ಫಲವನ್ನು ಅವರೂ ಉಣ್ಣಬೇಕಾಗುತ್ತದೆ ಎನ್ನುವುದು ಅವರಿಗೆ ನೆನಪಿದ್ದರೆ ಅದು ಸಾಧ್ಯ.

ಭಾರತದಂತಹ ದೇಶದಲ್ಲಿ ವಾರ್ಷಿಕ ಸರಾಸರಿ ಮಳೆ 1000 ಮಿ.ಮೀ.ಗೂ ಹೆಚ್ಚಿರುವಲ್ಲಿ ನೀರಾವರಿಯ ಜಪವನ್ನೇ ಮಾಡುತ್ತಿರುವುದು ಒಂದೋ ಮೌಢ್ಯ ಅಥವಾ ದುರುದ್ದೇಶ. ಕರ್ನಾಟಕದಲ್ಲಿ, ಬಯಲು ಸೀಮೆಯಲ್ಲೂ ಪ್ರತಿಯೊಂದು ಎಕರೆಗೆ 24 ಲಕ್ಷ ಲೀಟರ್ ಮಳೆ ನೀರು ಬೀಳುತ್ತದೆ. ಅದರಲ್ಲಿ 80%ವರೆಗೆ ನೀರನ್ನು ಹಿಡಿದುಕೊಳ್ಳಬಹುದು. ರೈತನಿಗೆ ತನ್ನ ಹೊಲದಿಂದ, ಹಳ್ಳಿಗರಿಗೆ ತಮ್ಮೂರಿನಿಂದ ನೀರು ಹರಿದು ಹೊರಗೆ ಹೋದರೆ ಸಿಟ್ಟು ಬರಬೇಕು; ಮಹದಾಯಿ ಹರಿದು ಹೋದರಲ್ಲ. ಆಗ ಹೊಲ-ಹೊಲದಲ್ಲಿ, ಊರೂರಲ್ಲಿ ನೀರು ಹಿಡಿಯುವ ಚಳವಳಿ ಆಗುತ್ತದೆ. ಮಹದಾಯಿ ಚಳವಳಿಯಲ್ಲಿರುವವರಿಗೆ ನಾನೊಮ್ಮೆ ಸೂಚಿಸಿದೆ, ‘ಚಳವಳಿಯಲ್ಲಿ ಮಳೆ ನೀರು ಹಿಡಿಯುವುದನ್ನೂ ಸೇರಿಸೋಣ, ನಾನೂ ಬರುತ್ತೇನೆ’, ಎಂದು. ಗಟ್ಟಿ ಉತ್ತರ ಬರಲಿಲ್ಲ.

ಒಂದು ದಿನ ಹರಿಹರದ ಸಮೀಪ ಭಾನುವಳ್ಳಿಯಲ್ಲಿದ್ದೆ. ಭಾನುವಳ್ಳಿ ಹಾಗೂ ಸುತ್ತಲಿನ ಹಳ್ಳಿಗಳು ಭದ್ರಾಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿವೆ. ಅಲ್ಲಿಯ ಅಭಿವೃಧ್ಧಿ ಕಾರ್ಯಕರ್ತರೊಡನೆ ಸುತ್ತಲಿನ ಹಳ್ಳಿಗಳನ್ನು ನೋಡಹೊರಟೆ. ನೀರಾವರಿಯಲ್ಲಿ ಭತ್ತದ ಬೆಳೆ, ಅಲ್ಲಲ್ಲಿ ಹೊಸದಾಗಿ ಹಾಕಿದ ಅಡಕೆ ತೋಟ, ಒಣಗುತ್ತಿರುವ ಕೆಲವು ಹಳೆಯ ಎಲೆಬಳ್ಳಿ ತೋಟಗಳು, ತೆಂಗಿನ ತೋಟಗಳು, ಓಡಾಟದ ಮಧ್ಯದಲ್ಲಿ ಗೊತ್ತಾಗಿದ್ದು ಈಗಿರುವ ಬತ್ತದ ಬೆಳೆಯ ಹಿಂದಿನ ಎರಡು ಬೆಳೆಗಳನ್ನು ರೈತರು ಬೆಳೆಯಲೇ ಇಲ್ಲ. ಯಾಕೆಂದರೆ ಕಾಲುವೆಗಳಲ್ಲಿ ನೀರಿರಲಿಲ್ಲ. ರೈತರೊಡನೆ ಈ ಕುರಿತು ಮಾತಾಡಿದೆ. ರೈತರು ಗೊಂದಲದಲ್ಲಿದ್ದರು.  ಊರಿಗೆ ನೀರಾವರಿ ಬಂದು ನಾಲ್ಕು ದಶಕಗಳಾಗಿದ್ದವು.

ನೀರಾವರಿ ಹುಚ್ಚು ನಮ್ಮ ತಲೆಗೇರಿದೆ. ರೈತರಿಗೆ ನೀರುಕೊಡಿ. ಉಳಿದೆಲ್ಲಾ ತನ್ನಿಂದತಾನೇ ಸರಿಯಾಗ್ತದೆ ಎಂಬ ಮಾತು ಸರ್ವವ್ಯಾಪಿ. ಚುನಾವಣೆಯ ಕಾವಿನ ಮಧ್ಯೆ ಮಹದಾಯಿ ಕಾವೇರಿಗಳದೇ ಚರ್ಚೆ. ನಮಗೆ ನೀರು ತಂದು ಕೊಡುವವರಿಗೆ ತಮ್ಮ ಮತ ಎಂಬುದು ರೈತರ ನಿಲುವು. ತಾವೇ ತಂದುಕೊಡುವವರು ಎನ್ನುವುದು ಎಲ್ಲ ಪಕ್ಷಗಳ ಕ್ಲೇಮ್.

ನೀರು ನಮ್ಮ ಕೃಷಿಯ ಮಿತಿ ಎಂದು, ಮಿಸ್ಸಿಂಗ್ ಲಿಂಕ್ ಎಂದು ಒಪ್ಪಿಕೊಂಡರೂ ನೀರಾವರಿ ಅದಕ್ಕೆ ಉತ್ತರ ಎಂದಾಗಿದ್ದು ಮಾತ್ರ ವಿರ‍್ಯಾಸಕರ ಇತಿಹಾಸ. ಸಮಯಕ್ಕೆ ಸರಿಯಾಗಿ ಮುಗಿಯದ ಯೋಜನೆಗಳು, ಅಂತರ್‌ರಾಜ್ಯ ನೀರಿನ ಜಗಳಗಳು ನೀರಾವರಿಯಲ್ಲಿ ಪ್ರಾದೇಶಿಕ ಅಸಮಾನತೆ, ಸೌಳು ಜಮೀನಿನ ಸಮಸ್ಯೆ, ಹೆಚ್ಚುತ್ತಿರುವ ನೀರಾವರಿ ಯೋಜನೆಗಳ ವೆಚ್ಚ, ನೀರಾವರಿಯ ನಿರ್ವಹಣೆಯಿಂದಾಗುವ ನಷ್ಟ, ಕುಸಿಯುತ್ತಿರುವ ನೀರಿನ ಮಟ್ಟ ಇವೆಲ್ಲವೂ ನೀರಿನ ಸಮಸ್ಯೆಯ ಬೆಂಕಿಗೆ ತುಪ್ಪವಾಗಿವೆ.

ಇವೆಲ್ಲಕ್ಕಿಂತ ದೊಡ್ಡ ಸಮಸ್ಯೆಯೊಂದಿದೆ. ನೀರಾವರಿಯು ರೈತರು ಯೋಚಿಸುವ ರೀತಿಯನ್ನೆ ಬದಲಿಸುತ್ತದೆ. ಯಾವ ಬೆಳೆ ಬೆಳೆಯಬೇಕೆಂಬ ಆಯ್ಕೆಗಳು ನೀರಾವರಿಯಲ್ಲಿ ಪರಿಮಿತವಾಗುತ್ತವೆ. ಭತ್ತವೋ ಕಬ್ಬೋ ಏಕೈಕ ಬೆಳೆ. ನೀರಿನ ಅಡಚಣೆಯಾದಾಗ ಬೆಳೆಯನ್ನೇ ಬಿಟ್ಟಾರು, ಬೇರೆ ಬೆಳೆಯ ವಿಚಾರ ಮಾಡಲಾರರು. ಒಣ ಬೇಸಾಯದಲ್ಲಿ ಯಾವಾಗ ಮಳೆಯಾದರೆ ಯಾವ ಬೆಳೆ ಎಂಬ ಪ್ಲಾನ್‌ಗಳಿರುತ್ತವೆ. ನೀರಾವರಿಯಲ್ಲಿ ಆಯ್ಕೆಗಳಿಲ್ಲವೆಂಬಂತೆ ರೈತರು ಪರಿಭಾವಿಸುತ್ತಾರೆ, ನಡೆದುಕೊಳ್ಳುತ್ತಾರೆ.

ನೀರಾವರಿ ಕಾರ್ಯಯೋಜನೆಗಳೆಲ್ಲವು ಹೆಚ್ಚು ನೀರು ಬೇಡುವ ಕಬ್ಬು ಭತ್ತಗಳನ್ನು ಬೆಳೆಯಬಾರದೆಂದು ಆ ಬೆಳೆಗಳಿಗೆ ನೀರು ಒದಗಿಸಬಾರದೆಂದು ಹೇಳುತ್ತವಾದರು ಯೋಜನೆ ಜಾರಿಯಾಗಿ ನೀರು ಬಂದಾಗ ರೈತರು ಬೆಳೆಯುವುದು ಈ ಬೆಳೆಗಳನ್ನೆ. ಸಂಬಂಧಪಟ್ಟವರೆಲ್ಲ ಕಣ್ಣು ಮುಚ್ಚಿ ಇದನ್ನು ಒಪ್ಪ್ಪಿಕೊಳ್ಳುತ್ತಾರೆ. ಬೆಳೆ ವೈವಿಧ್ಯದ ನಾಶ ನೀರಾವರಿ ಪ್ರದೇಶದ ಇನ್ನೊಂದು ದೊಡ್ಡ ಸಮಸ್ಯೆ. ಒಂದು ಪ್ರದೇಶದಲ್ಲಿ ನಾಶವಾಗುವ ಒಂದೊಂದು ಬೆಳೆಯೂ ಅಲ್ಲಿಯ ಕೃಷಿಜ್ಞಾನದ ಒಂದೊಂದು ಆಧ್ಯಾಯದ ನಷ್ಟ. ಬೆಳೆ ವೈವಿಧ್ಯದ ಸವಕಳಿ ರೈತರ ಅಪಾಯ ನಿರೋಧಕತೆಯ ನಾಶಕ್ಕೆ ಕಾರಣವಾಗುತ್ತದೆ.

ವಿಜ್ಞಾನಿಗಳು ಇನ್ನು ಮುಂದೆ ಎರಡು ವರ್ಷಗಳಿಗೊಮ್ಮೆ ಬರ ಬರಬಹುದೆಂದು ಹೇಳುತ್ತಿದ್ದಾರೆ. ಜಾಗತಿಕ ತಾಪಮಾನ- ಹವಾಮಾನ ವೈಪರೀತ್ಯ ಎಂಬ ಅವಳಿ ಭೂತಗಳು ನಮ್ಮೆದುರು ನಿಂತಿವೆ. ನಮ್ಮ ಭೂಮಿಯ ಮೇಲಿನ ಜೀವಸಂಕುಲದ ಭವಿಷ್ಯವೇ ಅತಂತ್ರವಾಗಿರುವ ಸಂಧರ್ಭದಲ್ಲಿ ನಾವಿದ್ದೇವೆ. ಸಮಸ್ಯೆಗಳಿಗೆ ಜನಪ್ರಿಯ ಪರಿಹಾರಗಳನ್ನಷ್ಟೇ ಮುಂದುಮಾಡುತ್ತಾ ಕುಳಿತುಕೊಳ್ಳುವ ದಿನಗಳಲ್ಲ ಇವು. ದೀರ್ಘಕಾಲೀನ ಪರಿಹಾರಗಳ ಕುರಿತು ಯೋಚಿಸಲೇಬೇಕಾದ ಸಂದರ್ಭ. ಈಗ ನಮ್ಮ ಹೀರೋಗಳಾಗಿರುವ ಕಾಲುವೆ ನೀರಾವರಿ, ಕೊಳವೆ ಬಾವಿಗಳನ್ನು ಪದಚ್ಯುತಗೊಳಿಸಿ ಅವುಗಳ ಸ್ಥಾನಗಳಲ್ಲಿ ಮಳೆನೀರು ಸಂಗ್ರಹ, ಕೆರೆ, ಬಾವಿ ತೊರೆಗಳ ಪುನರುಜ್ಜೀವನ, ವೃಕ್ಷಾರೋಪಣಗಳನ್ನು ಕೂರಿಸದಿದ್ದಲ್ಲಿ ಬರುವ ದಿನಗಳಲ್ಲಿ ನಮ್ಮ ಜೀವನ ಇನ್ನೂ ಕಷ್ಟಕರವಾಗುವುದು ಖಚಿತ.

ನಮ್ಮ ಘನ ಸರಕಾರಗಳು ಮನಸ್ಸು ಮಾಡಬೇಕು. ಪ್ರತಿಯೊಬ್ಬರು ತಮ್ಮ ಹೊಲದಲ್ಲಿ ಬೀಳುವ ಶೇ.50 ನೀರನ್ನಾದರೂ ಹಿಡಿಯಬೇಕು. ಪ್ರತಿ ಎಕರೆಯಲ್ಲಿ ಕನಿಷ್ಠ 100 ವಿವಿಧೋದ್ದೇಶ ಮರಗಳಿರಬೇಕು. ಹಾಗೆ ಸಾಧಿಸಿದವರಿಗೆ ಕರ ವಿನಾಯಿತಿ ಕೊಡುವುದು ಕಷ್ಟವೇನಲ್ಲ. ಬ್ಯಾಂಕ್ ಸಾಲ ಕೊಡುವಲ್ಲೂ ಈ ಷರತ್ತನ್ನು ವಿಧಿಸಬೇಕು. ಆದರೆ ಸರಕಾರಗಳು ಅದನ್ನು ಮಾಡುವುದು ಸಂದೇಹಾಸ್ಪದ. ಯಾಕೆಂದರೆ ಇದು ಜನಪ್ರಿಯ ಕ್ರಮ ಆಗಲಾರದು. ರಾಜಕೀಯ, ಆಡಳಿತಾತ್ಮಕ ಇಚ್ಛಾಶಕ್ತಿ ಇದ್ದರೆ ಸಾಧಿಸಿಯೇವು.

*ಲೇಖಕರು ಪೀಪಲ್ ಫಸ್ಟ್ ಸಂಘಟನೆ ಸಂಸ್ಥಾಪಕರು, ಪರಿಸರ ತಜ್ಞರು. ಧಾರವಾಡದಲ್ಲಿ ನೆಲೆಸಿದ್ದಾರೆ.

Leave a Reply

Your email address will not be published.