ಎಲ್ಲೆಲ್ಲೂ ತೇಲುವ ಹೆಣಗಳು!

ನಾನು ಚಿಕ್ಕವನಿದ್ದಾಗ ನನ್ನ ತಾಯಿಯ ತವರೂರಿನ ದೇವರಕೋಣೆಯಲ್ಲಿ ಒಂದು ಪುಟ್ಟ ತಾಮ್ರದ ಗಿಂಡಿ ಇಟ್ಟಿದ್ದರು. ಅದರ ಮೇಲ್ಭಾಗವನ್ನು ತಾಮ್ರದ ಹಾಳೆಯಿಂದ ಮುಚ್ಚಿ ಸೀಲ್ ಮಾಡಲಾಗಿತ್ತು. ಪ್ರತಿನಿತ್ಯ ದೇವರ ಪೂಜೆ ಮಾಡುವಾಗ ಆ ಗಿಂಡಿಗೂ ಅಗ್ರ ಪೂಜೆ ಸಲ್ಲುತ್ತಿತ್ತು. ಪ್ರಾಥಮಿಕ ಶಾಲೆಯಲ್ಲಿದ್ದ ನನಗೋ ಆ ಗಿಂಡಿಯೊಳಗೇನಿದೆ ಎಂದು ತಿಳಿಯುವ ಕುತೂಹಲ. ಆದರೆ ದೇವರು ಮತ್ತು ಸಂಪ್ರದಾಯದ ವಿಷಯದಲ್ಲಿ ಪ್ರಶ್ನೆ ಮಾಡುವ ಅವಕಾಶವಿರಲಿಲ್ಲ; ಸುಮ್ಮನೆ ಪಾಲಿಸುವುದಷ್ಟೇ ಆಗ ಚಿಕ್ಕವರ ಕರ್ತವ್ಯ.

 

ನಾನು ಬೆಳೆದಂತೆ ತಿಳಿದದ್ದು ಆ ಗಿಂಡಿಯೊಳಗೆ ಗಂಗಾ ನದಿಯ ನೀರನ್ನು ಸಂಗ್ರಹಿಸಿಡಲಾಗಿತ್ತು. ಬಹುಶಃ ಹಿರಿಯರಾರೋ, ಯಾವ ಕಾಲದಲ್ಲೋ ಕಾಶಿಗೆ ಹೋದಾಗ ಆ ಗಂಗೆ ತುಂಬಿದ ಗಿಂಡಿಯನ್ನು ತಂದಿರಬೇಕು. ಮನೆಯಲ್ಲಿ ಯಾರಾದರೂ ಸಾವಿನಂಚಿಗೆ ಸರಿದ ಕೊನೆಯ ಕ್ಷಣದಲ್ಲಿ ಪವಿತ್ರ ಗಂಗಾಜಲವನ್ನು ಬಾಯಿಗೆ ಬಿಡುವುದು ಉದ್ದೇಶ. ಊರ ಪಕ್ಕದಲ್ಲೇ ಹರಿಯುವ ವರದಾ ಹೊಳೆ ಇಟ್ಟುಕೊಂಡು ಸಾಯುವವರ ಬಾಯಿಗೆ ಹಾಕಲು ಎಂದೋ ತಂದ ಈ ಗಂಗೆಯ ನೀರೇ ಯಾಕೆ ಬೇಕು ಎಂಬ ನನ್ನ ಸಂದೇಹಕ್ಕೆ ಎಂದಿನಂತೆ ಹಿರಿಯರಿಂದ ವಿವರಣೆ ಸಿಗುವಂತಿರಲಿಲ್ಲ.

 

ಇದು ಪ್ರಶ್ನೋತ್ತರದಲ್ಲಿ ಮುಕ್ತಾಯ ಕಾಣುವ ನಡೆಯಲ್ಲ; ನಂಬಿಕೆ ಮತ್ತು ಪರಂಪರೆಯ ಭಾಗವಾಗಿ ಶತಮಾನಗಳಿಂದ ಹರಿದುಬಂದಿರುವ ಇಂತಹ ಪಾಲನೆಗಳು ಭಾರತೀಯರ ಬದುಕಿನ ಭಾಗವೇ ಆಗಿವೆ. ಈ ಕಾರಣಕ್ಕಾಗಿಯೇ ಎಲ್ಲೋ ಹರಿಯುವ ಗಂಗೆ ಹಳ್ಳಿಹಳ್ಳಿಗಳ ಮನೆಮನಗಳನ್ನು ತಲುಪಲು ಸಾಧ್ಯವಾಗಿದೆ. ಹಾಗಾಗಿ ಪವಿತ್ರ ಗಂಗೆ ಜೊತೆಗೆ ಪ್ರಾಮಾಣಿಕ ನಂಬಿಕೆ-ಭಾವನೆಗಳನ್ನು ತುಂಬಿಸಿಟ್ಟ ತಾಮ್ರದ ಗಿಂಡಿಯೊಳಗೆ ಅನುಮಾನಕ್ಕೆ ಆಸ್ಪದವಿಲ್ಲ.

 

ಇತ್ತೀಚೆಗೆ ಗಂಗಾನದಿಯಲ್ಲಿ ನೂರಾರು ಹೆಣಗಳು ತೇಲಿಬಂದ ವರದಿ ಹಿನ್ನೆಲೆಯಲ್ಲಿ ನನ್ನ ಬಾಲ್ಯದಲ್ಲಿನ ಗಂಗಾಗಿಂಡಿ ನೆನಪು ಮರುಕಳಿಸುವಂತಾಯಿತು. ಇದುವರೆಗೆ ನಂಬಿಕೆ ರೂಪದಲ್ಲಿ ಮನೆಮನೆಗೆ ಹನಿಹನಿಯಾಗಿ ಹರಿದುಬಂದ ಗಂಗೆಗೆ ಇಂದು ಹೆಣಗಳನ್ನೇ ತನ್ನೊಡಲೊಳಗೆ ಸೆಳೆದುಕೊಳ್ಳುವ ಸ್ಥಿತಿ-ಸಂದರ್ಭ ಏರ್ಪಟ್ಟಿದ್ದಾದರೂ ಏಕೆ? ಹೇಗೆ? ಕಾರಣರಾರು?

 

ಒಂದು ಕ್ಷಣ ಧ್ಯಾನಸ್ಥ ಮನದಿಂದ ಯೋಚಿಸಿ: ನಿಜಕ್ಕೂ ಹೆಣಗಳು ತೇಲುತ್ತಿರುವುದು ಗಂಗಾನದಿಯಲ್ಲಿ ಮಾತ್ರವೇ…? ಈಗ ಇವು ಇದ್ದಕ್ಕಿದ್ದಂತೆ ತೇಲತೊಡಗಿದವೇ…? ಖಂಡಿತಾ ಅಲ್ಲ. ಇದೀಗ ಗಂಗೆಯಲ್ಲಿ ತೇಲುತ್ತಿರುವುದು ಹಲವು ಬಗೆಯಲ್ಲಿ ನಮ್ಮ ಸಾರ್ವಜನಿಕ ಮತ್ತು ವೈಯಕ್ತಿಕ ಬದುಕಿನಲ್ಲಿ ಹೆಣವಾದ ಮೌಲ್ಯಗಳ ಮೂರ್ತರೂಪವಷ್ಟೇ! ಈ ಪ್ರಕ್ರಿಯೆ ಶುರುವಾಗಿ ಬಹಳ ಕಾಲ ಗತಿಸಿದೆ. ಸ್ವಾರ್ಥಕ್ಕಾಗಿ, ಹಣಕ್ಕಾಗಿ, ಅಧಿಕಾರಕ್ಕಾಗಿ ಒಳ್ಳೆಯದನ್ನೆಲ್ಲಾ ಒಂದೊಂದಾಗಿ ಸಾಯಿಸುತ್ತಾ ಬಂದ ಕಾರಣ ಹೆಣ ಹೂಳಲು, ದಹಿಸಲು ಸ್ಮಶಾನ ಸಾಲದಾಗಿದೆ.

 

ಇತ್ತೀಚೆಗಿನ ದೇಶದ ಆಗುಹೋಗುಗಳನ್ನೇ ಪರಿಗಣಿಸುವುದಾದರೆ ನಮ್ಮನ್ನು ಆಳುವವರು ಸಾಯಿಸಿದ ಅಥವಾ ಅರೆಜೀವವಾಗಿಸಿದ ಸಾಂವಿಧಾನಿಕ ಸಂಸ್ಥೆಗಳು, ವ್ಯವಸ್ಥೆಗಳು ಒಂದೆರಡಲ್ಲ ಎಂಬುದು ಗೋಚರಿಸುತ್ತದೆ. ಮೂಲೆಗುಂಪಾಗಿಸಿದ ಮೌಲ್ಯಗಳ ಸಂಖ್ಯೆ ಲೆಕ್ಕಕ್ಕೆ ಸಿಕ್ಕಲಿಕ್ಕಿಲ್ಲ. ಸರ್ಕಾರದ ಚುಕ್ಕಾಣಿ ಹಿಡಿದವರು ಸುಳ್ಳು ಮತ್ತು ಭ್ರಮೆಗಳ ಬೂದಿಯಲ್ಲಿ ಎಷ್ಟು ಹೆಣಗಳನ್ನು, ಎಷ್ಟು ಕಾಲ ಮುಚ್ಚಿಡಲು ಸಾಧ್ಯ?

 

ಈಗ ಹೂತ ಹೆಣ ಹೊರಗೆ ತೆಗೆಯುವ ಕಾಲ ಬಂದಿದೆ. ಎಲ್ಲ ಸಾವುಗಳ ಮರಣೋತ್ತರ ಪರೀಕ್ಷೆಯಲ್ಲಿ ಕಾರಣಗಳನ್ನು ಹುಡುಕುವುದು, ಅರೆಜೀವಗಳಿಗೆ ಮರುಜೀವ ಕೊಡುವುದು ಇಂದಿನ ತುರ್ತು ಅಗತ್ಯ. ಇಂತಹ ಕಾರ್ಯದಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ನಿಮ್ಮ ‘ಸಮಾಜಮುಖಿ’ ಜೊತೆಗೆ ನೀವೂ ಇರುವಿರಿ ಎಂಬ ನಂಬಿಕೆ ನಮ್ಮದು. ಈ ಸಂಚಿಕೆಯಲ್ಲಿ ಪತ್ರಿಕಾರಂಗವನ್ನು ಮರಣೋತ್ತರ ವಿಶ್ಲೇಷಣೆಗೆ ಒಳಪಡಿಸುವ ಪ್ರಯತ್ನ ಮಾಡಲಾಗಿದೆ. ಆರಂಭದಿಂದಲೂ ನಾವು ಪ್ರತಿಪಾದಿಸುತ್ತಿರುವ ಸ್ವತಂತ್ರ ಪತ್ರಿಕೋದ್ಯಮದ ಮಹತ್ವ ಇಲ್ಲಿನ ಚರ್ಚೆಯಲ್ಲಿ ಮತ್ತೊಮ್ಮೆ ಫಳಫಳಿಸುವುದನ್ನು ನೀವು ಗಮನಿಸಬಹುದು.

-ಸಂಪಾದಕ

Leave a Reply

Your email address will not be published.