ಏನಿದು ಅಸಾಮಾನ್ಯ ಚಿತ್ರಣ..?

ಪ್ರಾತಿನಿಧಿಕ ಮಾದರಿ ಅಧ್ಯಯನದ ರೂಪುರೇಶೆ

ಇದೀಗ ಮತ್ತೆ ಚುನಾವಣಾ ಪರ್ವ. ಪಕ್ಷಗಳು ನಮ್ಮ ದೇಶದ ಬಡತನ ಮತ್ತು ನಿರುದ್ಯೋಗದ ಸಮಸ್ಯೆ ಬಗೆಹರಿಸಲು ಹೊಸಹೊಸ ಯೋಜನೆಗಳನ್ನು ರೂಪಿಸುವ ಸಮಯ. ಅಭ್ಯರ್ಥಿಗಳು ನಮ್ಮ ಅಗತ್ಯಗಳನ್ನು ನಮಗಿಂತಲೂ ಚೆನ್ನಾಗಿ ಅರಿತು ನಮ್ಮ ‘ಪ್ರಗತಿ-ವಿಕಾಸ-ಅಭಿವೃದ್ಧಿ’ಗೆ ಕಾರ್ಯಕ್ರಮಗಳನ್ನು ಘೋಷಿಸುವ ಸಮಯ. ನಮ್ಮಲ್ಲಿನ ಹಲವು ಅಸಹಾಯಕರಿಗಾಗಿ ‘ಭಾಗ್ಯ-ಭತ್ಯೆ-ಅನುದಾನ-ಕಲ್ಯಾಣ-ಪಿಂಚಣಿ’ ಭರವಸೆಗಳನ್ನು ನೀಡುವ ಸಮಯ. ‘ಸಮಗ್ರ-ಸರ್ವಾಂಗೀಣ’ ಅಭಿವೃದ್ಧಿಗೆ ‘ಆಮೂಲಾಗ್ರ’ವಾಗಿ ಎಲ್ಲ ಜಾತಿ-ವರ್ಗಗಳನ್ನು ಓಲೈಸಲು ಪ್ರಣಾಳಿಕೆಗಳಲ್ಲಿ ಗೊತ್ತು-ಗುರಿ-ಆಶಯ-ಉದ್ದೇಶಗಳನ್ನು ಹೇಳಿಕೊಳ್ಳುವ ಸಮಯ.

ಪ್ರಜಾಪ್ರಭುತ್ವದಲ್ಲಿ ಇದೆಲ್ಲವೂ ಸಹಜವೇ. ನಮ್ಮವರೇ ನಮ್ಮನ್ನು ಆಳುವ ಸಂದರ್ಭದಲ್ಲಿ ನಮ್ಮ ಬವಣೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕಾಗಿರುವುದು ಕೂಡಾ ಅನಿವಾರ್ಯ. ಆದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಈ ಪ್ರಕ್ರಿಯೆಯಲ್ಲಿಯೇ ನಾವು ಎಡವಿ ತಪ್ಪುದಾರಿಯಲ್ಲಿ ಸಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ಮೂಲ ರೂಪವನ್ನು ಅರಿಯದೆ ಕೇವಲ ಸಮಸ್ಯೆಯ ಅಭಿವ್ಯಕ್ತ ರೂಪವನ್ನು ಮಾತ್ರ ಕಾಣುವ ಹೆದರಿಕೆಯಿದೆ. ಸಮಸ್ಯೆಯನ್ನು ಅರಿಯಲು ಬೇಕಿರುವ ಸಿದ್ಧತೆ, ತಾಲೀಮು, ಮಾನಸಿಕತೆ ಮತ್ತು ಗಂಭೀರತೆ ಇಲ್ಲದೆ ಹೋಗಬಹುದು. ಸಮಸ್ಯೆಯ ಬಗೆಗಿನ ಅಂಕಿಅಂಶಗಳಾಗಲಿ ಅಥವಾ ಸಮಸ್ಯೆಯ ಆಯಾಮಗಳಾಗಲಿ ದೊರೆಯದೆ ಇರಬಹುದು. ಸಮಸ್ಯೆಯ ಆಳ-ಅಗಲಗಳನ್ನು ಅರಿಯಲಾಗದೆ ಮೇಲ್ಪದರ ತಿಳಿವಳಿಕೆಯ ಮೇಲೆಯೇ ‘ಪರಿಹಾರ’ವೊಂದನ್ನು ಘೋಷಣೆ ಮಾಡಿ ಅಲ್ಪತೃಪ್ತಿಗೆ ಒಳಗಾಗಬಹುದು. ಸಮಸ್ಯೆಯನ್ನೇ ಅರಿಯದೆ ಪರಿಹಾರಕ್ಕಾಗಿ ಸಮಯ-ಹಣ ಹೂಡಿಕೆ ಮಾಡಿ ಪ್ರಗತಿಪರರೆಂಬ ಆತ್ಮರತಿ ಮಾಡಿಕೊಳ್ಳಬಹುದು.

ನಾಯಕರ ಪಾಂಡಿತ್ಯ ಪರೀಕ್ಷೆ ಮಾಡುವ ಸಾಮಥ್ರ್ಯ ನಮ್ಮ ಪತ್ರಿಕೋದ್ಯಮಿಗಳಿಗೆ, ವಿಶ್ಲೇಷಕರಿಗೆ, ಸಂಶೋಧಕರಿಗೆ, ಬೋಧಕರಿಗೆ ಮತ್ತು ಪ್ರಜ್ಞಾವಂತರಿಗೆ ಅಗತ್ಯವಿದೆ. ಸಾರ್ವಜನಿಕ ನೀತಿ ನಿರೂಪಣೆಯ ಅನುಷ್ಠಾನದಲ್ಲಿ ತೊಡಗಿರುವ ಅಧಿಕಾರಿಗಳನ್ನು ಪ್ರಶ್ನಿಸಲು ಬೇಕಿರುವ ಸಾಮಥ್ರ್ಯವೂ ನಮ್ಮ ಮತದಾರ ಪ್ರಭುಗಳಿಗೆ ಆವಶ್ಯಕವಾಗಿದೆ.

ಸಾರ್ವಜನಿಕ ನೀತಿ-ನಿರೂಪಣೆ ಕೂಡಾ ಒಂದು ವಿಜ್ಞಾನವೇ. ಆಡಳಿತಾರೂಢ ರಾಜಕೀಯ ನಾಯಕರು ಹಾಗೂ ಉನ್ನತ ಅಧಿಕಾರಿಗಳು ಇದರಲ್ಲಿ ನೇರವಾಗಿ ಪಾಲ್ಗೊಳ್ಳುವುದಾದರೂ, ಈ ವಿಜ್ಞಾನದ ವಿದ್ಯಾರ್ಥಿಗಳಲ್ಲಿ ಸಮಾಜದ ಹಲವು ವಲಯಗಳು ಭಾಗವಹಿಸುತ್ತವೆ. ಇಂದಿನ ವಿರೋಧಿ ನಾಯಕ ನಾಳೆಯ ಶಾಸಕ-ಮಂತ್ರಿಯಾಗಬಹುದು. ಅಧಿಕಾರಕ್ಕೇರಿದ ನಂತರದಲ್ಲಿ ಕಲಿಯಲು ಲಭ್ಯವಿರುವ ಸೀಮಿತ ಅವಕಾಶಕ್ಕೆ ಕಾಯದೆ ನಮ್ಮ ರಾಜಕೀಯ ನಾಯಕರು ಮುಂಚಿತವಾಗಿ ಸ್ವಲ್ಪವಾದರೂ ಸಾರ್ವಜನಿಕ ನೀತಿಯ ವಿದ್ಯಾರ್ಥಿಗಳಾಗಬೇಕಾಗುತ್ತದೆ. ಈ ನೀತಿ ನಿರೂಪಣೆಯ ಪಾಂಡಿತ್ಯದ ಮೇಲೆಯೇ ಮತದಾರರು ಚುನಾವಣೆಯಲ್ಲಿ ನಾಯಕರನ್ನು ಆಯ್ಕೆ ಮಾಡುವುದು ಕೂಡಾ ಅಗತ್ಯವಿದೆ. ಈ ನಾಯಕರ ಪಾಂಡಿತ್ಯ ಪರೀಕ್ಷೆ ಮಾಡುವ ಸಾಮಥ್ರ್ಯ ನಮ್ಮ ಪತ್ರಿಕೋದ್ಯಮಿಗಳಿಗೆ, ವಿಶ್ಲೇಷಕರಿಗೆ, ಸಂಶೋಧಕರಿಗೆ, ಬೋಧಕರಿಗೆ ಮತ್ತು ಪ್ರಜ್ಞಾವಂತರಿಗೆ ಅಗತ್ಯವಿದೆ. ಸಾರ್ವಜನಿಕ ನೀತಿ ನಿರೂಪಣೆಯ ಅನುಷ್ಠಾನದಲ್ಲಿ ತೊಡಗಿರುವ ಅಧಿಕಾರಿಗಳನ್ನು ಪ್ರಶ್ನಿಸಲು ಬೇಕಿರುವ ಸಾಮಥ್ರ್ಯವೂ ನಮ್ಮ ಮತದಾರ ಪ್ರಭುಗಳಿಗೆ ಆವಶ್ಯಕವಾಗಿದೆ.

ಪಾಶ್ಚಿಮಾತ್ಯ ವಿಶ್ವವಿದ್ಯಾನಿಲಯಗಳಲ್ಲಿ ಅತ್ಯಂತ ಜತನದಿಂದ ಬೋಧಿಸಲಾಗುವ ಈ ‘ಸಾರ್ವಜನಿಕ ನೀತಿ’ ಐಚ್ಛಿಕವನ್ನು ಹೇಳಿಕೊಡುವ ಸಾಮಥ್ರ್ಯ ನಮ್ಮ ವಿದ್ಯಾಸಂಸ್ಥೆಗಳಿಗೆ ಇಲ್ಲ. ಜೆಎನ್‍ಯು, ಡಿ-ಸ್ಕೂಲ್ ಮತ್ತಿತರ ಕೆಲವೇ ಸಂಸ್ಥೆಗಳನ್ನು ಹೊರತುಪಡಿಸಿದರೆ ನಮ್ಮ ಕಾನೂನು ವಿಶ್ವವಿದ್ಯಾಲಯಗಳಿಗೂ ಕೂಡಾ ಈ ಸಾಮಥ್ರ್ಯವಿಲ್ಲ. ಇತ್ತೀಚೆಗೆ ದೆಹಲಿಯ ‘ವಿಧಿ ಸೆಂಟರ್ ಫಾರ್ ಸಿವಿಲ್ ಸೊಸೈಟಿ’ ಮತ್ತು ಬೆಂಗಳೂರಿನ ‘ದಕ್ಷ್ ಇಂಡಿಯಾ’ ಮತ್ತಿತರ ಸ್ವಯಂಸೇವಾ ಸಂಸ್ಥೆಗಳು ಈ ತೆರನಾದ ಅಧ್ಯಯನ ಕೇಂದ್ರಗಳನ್ನು ತೆರೆದು ಸಾರ್ವಜನಿಕ ನೀತಿ ರಚನೆಯ ಬಗ್ಗೆ ಸಾಮಥ್ರ್ಯಪೂರ್ಣವಾಗಿ ವಿಮರ್ಶೆ ಮಾಡಲಾರಂಭಿಸಿವೆ. ಆದರೆ ಈ ತೆರನಾದ ಇನ್ನೂ ನೂರಾರು ಕೇಂದ್ರಗಳು ಕಾರ್ಯಾರಂಭ ಮಾಡುವಷ್ಟು ಅಗತ್ಯ-ಸಾಧ್ಯತೆಗಳು ನಮ್ಮ ಮುಂದಿವೆ.

ಸಾರ್ವಜನಿಕ ನೀತಿಯ ಯಾವುದಾದರೊಂದು ಸವಾಲನ್ನು ಕೈಗೆತ್ತಿಕೊಂಡು ಪರಿಶೀಲಿಸೋಣ. ಸದ್ಯಕ್ಕೆ ಗ್ರಾಮೀಣ ಭಾಗದ ಬಡತನದ ಸಮಸ್ಯೆಯನ್ನೇ ತೆಗೆದುಕೊಳ್ಳಿ. ಈ ಸಮಸ್ಯೆಯಲ್ಲಿ ಗ್ರಾಮೀಣ ಜನರ ಭೂಮಿ ಒಡೆತನ, ಕೃಷಿ ಆದಾಯ, ಕೃಷಿಯೇತರ ಆದಾಯ ಮೂಲಗಳು, ಕೃಷಿ ಕಾರ್ಮಿಕರ ಸಮಸ್ಯೆಗಳು, ನಿರುದ್ಯೋಗ, ಅರೆ ಉದ್ಯೋಗ, ವರ್ಗ ಸಂಘರ್ಷ, ಜಾತಿ ಸಂಕೀರ್ಣತೆ ಮತ್ತಿತರ ಹತ್ತು ಹಲವು ಆಯಾಮಗಳು ತಳುಕು ಹಾಕಿಕೊಂಡಿರುತ್ತವೆ. ಈ ಆಯಾಮಗಳನ್ನು ಅರಿಯದೆ ನೀವು ಗ್ರಾಮೀಣ ಬಡತನದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯವಾಗಿರುತ್ತದೆ. ಗ್ರಾಮೀಣರ ಮಾಸಿಕ/ವಾರ್ಷಿಕ ಆದಾಯವನ್ನು ನೀವು ಅಂಕಿಅಂಶಗಳಲ್ಲಿ ಪಟ್ಟಿಮಾಡಬಹುದು. ಆದರೆ ಈ ಅಂಕಿಅಂಶಗಳು ಸಮಸ್ಯೆಯ ಅಭಿವ್ಯಕ್ತರೂಪ ಹೊರತೇ ಸಮಸ್ಯೆಯ ಮೂಲವಲ್ಲ. ಮೂಲವನ್ನು ಅರಿಯಬೇಕೆಂದರೆ ನೀವು ಬೇರೆಯದೇ ಅಧ್ಯಯನ ಮಾಡಬೇಕಾಗಬಹುದು.

ಗ್ರಾಮೀಣ ಬಡತನ ಒಂದು ಉದಾಹರಣೆಯಷ್ಟೇ. ಈ ರೀತಿಯ ಹಲವಾರು ಸಮಸ್ಯೆಗಳು ನಮ್ಮಲ್ಲಿವೆ. ಈ ಸಮಸ್ಯೆಗಳನ್ನು ಅರಿಯುವ ಮತ್ತು ಅವಕ್ಕೆ ಪರಿಹಾರ ಹುಡುಕುವ ವಿಜ್ಞಾನದಲ್ಲಿ ಈ ಕೆಲವು ಶಾಸ್ತ್ರೀಯ ಅಧ್ಯಯನ ಮಾರ್ಗಗಳಿವೆ.

ಅಂಕಿಅಂಶ ಆಧಾರಿತ ಪ್ರಾಯೋಗಿಕ ಅಧ್ಯಯನ

ಅಂಕಿಅಂಶಗಳು ಹಾಗೂ ಸಂಖ್ಯಾಧಾರಿತ ಅಧ್ಯಯನವು ನಿಮಗೆ ಸಮಸ್ಯೆಯ ಸಮಷ್ಠಿ ಹಾಗೂ ನಿಖರ ಅಭಿವ್ಯಕ್ತರೂಪ ನೀಡಬಲ್ಲುದು. ಒಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಡತನದ ರೇಖೆಗಿಂತ ಕೆಳಗಿನ ಆದಾಯವುಳ್ಳ ಕುಟುಂಬಗಳ ಶೇಕಡಾವಾರು ಕೋಷ್ಟಕವು ನಿಮಗೆ ಯಾವ ಜಿಲ್ಲೆಗಳಲ್ಲಿ ಅತ್ಯಂತ ಹೆಚ್ಚು/ಕಡಿಮೆ ಬಡತನವಿದೆಯೆಂದು ತೋರುತ್ತದೆ. ಈ ಅಧ್ಯಯನ ಮಾರ್ಗವು ಸಮಸ್ಯೆಯ ಅಭಿವ್ಯಕ್ತರೂಪ ನೀಡುವುದಾದರೂ, ಇದು ಅತ್ಯಂತ ಪ್ರಮುಖವಾದ ಮತ್ತು ಕರಾರುವಾಕ್ಕಾದ ಮಾರ್ಗ. ಇದರಲ್ಲಿ ನಾವು ವೈಜ್ಞಾನಿಕವಾಗಿ ಪರಿಶೀಲಿಸಬಹುದಾದ ಹಾಗೂ ತೌಲನಿಕವಾಗಿ ಅಳೆದು ನೋಡಬಹುದಾದ ಫಲಿತಾಂಶ ದೊರೆಯುತ್ತದೆ. ಬಹುತೇಕ ಸರ್ಕಾರಿ ಸಂಸ್ಥೆಗಳು ಈ ಅಧ್ಯಯನಮಾರ್ಗವನ್ನು ಅವಲಂಬಿಸುತ್ತವೆ. ಗಣಿತ ಹಾಗೂ ಸಂಖ್ಯಾಶಾಸ್ತ್ರಕ್ಕೂ ಒಗ್ಗಿರುವ ಈ ಅಧ್ಯಯನ ವಿಧಾನವನ್ನು ಅಮೆರಿಕೆಯ ವಿಶ್ವವಿದ್ಯಾನಿಲಯಗಳು ಪ್ರೋತ್ಸಾಹಿಸುತ್ತವೆ. ಭಾರತದ ಸಂಖ್ಯಾಶಾಸ್ತ್ರ ವಿಭಾಗ, ಆರ್‍ಬಿಐ, ಭಾರತ ಜನಗಣತಿ, ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಮತ್ತಿತರ ಸಂಸ್ಥೆಗಳು ದೇಶದ ಆರ್ಥಿಕತೆಯ ಹಾಗೂ ಆರ್ಥಿಕ ಸಮಸ್ಯೆಗಳ ಬಗ್ಗೆ ತಮ್ಮ ಅಂಕಿಅಂಶ ಆಧಾರಿತ ವರದಿಗಳನ್ನು ಕಾಲಕಾಲಕ್ಕೆ ಬಿಡುಗಡೆ ಮಾಡುತ್ತವೆ.

ಭಾಗವಹಿಸುವಿಕೆಯ ಅಧ್ಯಯನ

ಕೇವಲ ಅಂಕಿಅಂಶಗಳು ಸಮಸ್ಯೆಯ ನಿಜರೂಪವನ್ನು ಅನಾವರಣ ಮಾಡುವುದಿಲ್ಲವೆಂದು ಅರಿತ ಸಂಶೋಧಕರು ಸಮಸ್ಯೆ ಹೊಂದಿದವರ ಜೊತೆಗೆ ಜೀವನ ಮಾಡಿ, ಕಾಲಕಳೆದು, ಸಮಸ್ಯೆಭರಿತರ ದುಃಖದುಮ್ಮಾನಗಳಲ್ಲಿ ಭಾಗವಹಿಸಿ ಸಮಸ್ಯೆಯ ಆಳಅಗಲಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಇಲ್ಲಿ ಸಮಷ್ಠಿ (ಮ್ಯಾಕ್ರೋ) ಅರ್ಥೈಸುವಿಕೆಯ ಬದಲಾಗಿ ವ್ಯಷ್ಠಿ (ಮೈಕ್ರೋ) ರೂಪದಲ್ಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನವಿದೆ. ಈ ಅಧ್ಯಯನದ ಫಲಿತಾಂಶವು ನಿಮಗೆ ಒಂದು ಕಥಾನಕವಾಗಿ ಅಥವಾ ಸಂಶೋಧನಾಗ್ರಂಥವಾಗಿ ಸಿಗಬಲ್ಲುದು. ಅಂಕಿಅಂಶಗಳ ಹೊರತಾದ ಸಮಸ್ಯೆಯ ಬಹುಆಯಾಮಗಳನ್ನು ನಿಮ್ಮ ಮುಂದೆ ಇಡಬಲ್ಲುದು.

ಪ್ರಾತಿನಿಧಿಕ ಮಾದರಿಗಳ ಅಧ್ಯಯನ

ಭಾಗವಹಿಸುವಿಕೆಯ ಅಧ್ಯಯನದ ಫಲಿತಾಂಶವು ಅತ್ಯಂತ ಸಣ್ಣ ಪ್ರಮಾಣದ ಅರಿವನ್ನು ಸಮಷ್ಠಿ ರೂಪದಲ್ಲಿ ಬಿಂಬಿಸಲು ಪ್ರಯತ್ನಿಸಬಹುದೆಂಬ ಸಂದೇಹದಲ್ಲಿ ಈ ಸಮ್ಮಿಳಿತ ಅಧ್ಯಯನ ಮಾದರಿ ರೂಪುಗೊಂಡಿದೆ. ಇದರಲ್ಲಿ ಸಮಸ್ಯೆಯನ್ನು ಒಳಗೊಂಡ ಹಲವಾರು ವ್ಯಷ್ಠಿ ಮಾದರಿಗಳನ್ನು (ಉದಾ: ಕುಟುಂಬಗಳನ್ನು ಅಥವಾ ರೋಗಿಗಳನ್ನು) ಅಧ್ಯಯನ ಮಾಡಿ ಸ್ಥೂಲವಾಗಿಯಾದರೂ ಸಮಷ್ಠಿ ಚಿತ್ರಣ ನೀಡಬಯಸುವ ಪ್ರಯತ್ನವಿದೆ. ಹತ್ತಿಪ್ಪತ್ತು ಮಾದರಿಗಳನ್ನು ಒಂದೇ ಚೌಕಟ್ಟಿನಲ್ಲಿ ಅಧ್ಯಯನ ಮಾಡಿ ನಂಬಲರ್ಹ ಸ್ಥೂಲ ಫಲಿತಾಂಶಗಳನ್ನು ನೀಡುವುದು ಕೂಡಾ ಇಲ್ಲಿ ಸಾಧ್ಯವಿದೆ. ಆದರೆ ಮಾದರಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಪ್ರಾತಿನಿಧಿಕತೆಯನ್ನು ಸಾಧಿಸಲು ಅತ್ಯಂತ ಜಾಗರೂಕ ಹಾಗೂ ಶಾಸ್ತ್ರೀಯವಾಗಿ ಇರಬೇಕಾದ ಅಗತ್ಯವೂ ಇದೆ. ಇಲ್ಲವಾದಲ್ಲಿ ಅಧ್ಯಯನದ ಫಲಿತಾಂಶ ಸತ್ಯದೂರವಾಗಿರುವ ಸಾಧ್ಯತೆಯೂ ಇದೆ.

ಸೂಕ್ಷ್ಮಗ್ರಹಣದ ಅಧ್ಯಯನ

ಇಲ್ಲಿ ಅಧ್ಯಯನ ಮಾದರಿಗಿಂತ ಅಧ್ಯಯನ ಮಾಡುವ ಸಂಶೋಧಕನ ಸಿದ್ಧತೆ ಮತ್ತು ಅರ್ಹತೆ ಮುಖ್ಯವಾಗಿರುತ್ತದೆ. ತನಗೆ ದೊರಕಿದ ಅಂಕಿಅಂಶಗಳು, ನಿಜಜೀವನದ ಭಾಗವಹಿಸುವಿಕೆಯಿಂದ ದೊರೆತ ಚಿತ್ರಣಗಳು ಹಾಗೂ ಪ್ರಾತಿನಿಧಿಕ ಮಾದರಿ ಚಿತ್ರಣಗಳ ಆಧಾರದ ಮೇಲೆ ಶಾಸ್ತ್ರಿಯೊಬ್ಬ ತನ್ನ ಬುದ್ಧಿಮತ್ತೆ ಮತ್ತು ಸೂಕ್ಷ್ಮಗ್ರಹಿಕೆಯ ಭಟ್ಟಿಯಿಂದ ಅಧ್ಯಯನ ಫಲಿತಾಂಶವನ್ನು ಹೊರತರುತ್ತಾನೆ. ಶ್ರೇಷ್ಠ ಸಾಹಿತಿಯೊಬ್ಬ ತನ್ನ ಸೃಜನಶೀಲ ಬರವಣಿಗೆಯಲ್ಲಿ ಕೂಡಾ ಸಮಸ್ಯೆಯೊಂದರ ಆಳಕ್ಕೆ ಹೊಕ್ಕು ಸತ್ಯಶೋಧನೆ ಮಾಡುವ ಸಾಮಥ್ರ್ಯ ತೋರುತ್ತಾನೆ. ಆದರೆ ಹಲವರು ಸೂಕ್ತ ಅರ್ಹತೆಯಿಲ್ಲದೆ ಸೂಕ್ಷ್ಮಗ್ರಹಿಕೆಯ ಅಧ್ಯಯನ ಮಾಡಲು ಹೊರಟು ಈ ಅಧ್ಯಯನದ ಫಲಿತಾಂಶದ ಮಹತ್ವವನ್ನು ಕಡಿಮೆ ಮಾಡಿದ್ದಾರೆ.

ಈ ಸಂಚಿಕೆಯಲ್ಲಿ ನಾವು ಯಾವುದೇ ಸಮಸ್ಯೆಯನ್ನು ಅರಿಯಲು ಹೊರಟಿಲ್ಲ. ಬದಲಿಗೆ ಸಾಮಾನ್ಯ ಕನ್ನಡಿಗನ ಜೀವನವನ್ನು ಚಿತ್ರಿಸುವ ಮತ್ತು ಅವನ ಗೊತ್ತುಗುರಿಗಳಿಗೆ ಸವಾಲಾಗಿರುವ ಅಡೆತಡೆಗಳನ್ನು ಅರಿಯುವ ಉದ್ದೇಶವನ್ನು ಹೊಂದಿದ್ದೇವೆ. ಈ ಮುಂದಿನ ಕೆಲವು ಚಿತ್ರಣಗಳು ನಮಗೆ ದೊರೆತ ಮಾದರಿಗಳಷ್ಟೇ. ಈ ಮಾದರಿಗಳನ್ನು ಒಳಗೊಂಡ ಒಟ್ಟು ಚಿತ್ರಣವು ಸಾಮಾನ್ಯ ಕನ್ನಡಿಗನ ಬದುಕಿಗೆ ಪ್ರಾತಿನಿಧಿಕವಾಗಿದೆ ಎಂಬ ದಾಷ್ಟ್ರ್ಯವೂ ನಮಗಿಲ್ಲ. ಆದರೆ ಈ ಅಧ್ಯಯನ ಮಾದರಿಯಲ್ಲಿ ಶಿಸ್ತುಬದ್ಧವಾಗಿ ಮುಂದುವರೆದರೆ ಸಾಮಾನ್ಯ ಕನ್ನಡಿಗನೊಬ್ಬನ ಚಿತ್ರಣ ನಿಮಗೆ ಸಿಗುತ್ತದೆ ಎಂಬ ಸ್ಪಷ್ಟನೆ ನಮ್ಮದು. ಇದುವರೆಗೂ ಕನ್ನಡ ಪತ್ರಿಕೋದ್ಯಮದಲ್ಲಿ ನಾವು ಕಾಣದ ಇಲ್ಲಿನ ಅಧ್ಯಯನವು ಈ ಕಾರಣಕ್ಕೆ ‘ಅಸಾಮಾನ್ಯ’ವಾಗುತ್ತದೆ. ಈ ಅಧ್ಯಯನದಿಂದ ಕರ್ನಾಟಕದ ಸಾರ್ವಜನಿಕ ನೀತಿ ರೂಪಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತುಸುವಾದರೂ ಸಹಾಯವಾದರೆ ನಮ್ಮ ಪ್ರಯತ್ನ ಸಾರ್ಥಕವೆಂದು ನಮ್ಮ ನಂಬಿಕೆ.

Leave a Reply

Your email address will not be published.