ಐಎಎಸ್‍ಗೆ ಅರ್ಹತೆ ಪಡೆದ ಬಳ್ಳಾರಿಯ ಆಶ್ವೀಜ

ಈ ಬಾರಿ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಐಎಎಸ್‍ಗೆ ಅರ್ಹತೆ ಪಡೆದಿರುವ ಬಳ್ಳಾರಿಯ ಆಶ್ವೀಜ ಅವರ ಮನದ ಮಾತುಗಳು ಇಲ್ಲಿವೆ

ನಿಮ್ಮ ಬಾಲ್ಯದ ಶಿಕ್ಷಣ ಹಾಗೂ ಮನೆಯಲ್ಲಿನ ವಾತಾವರಣದ ಬಗ್ಗೆ ತಿಳಿಸುವಿರಾ?

ಮೊದಲನೆಯ ತರಗತಿಯಿಂದ ಹತ್ತನೇ ತರಗತಿಯವರೆಗೂ ಬಳ್ಳಾರಿ ಯ ಡ್ರೀಮ್ ವರ್ಲ್ಡ್ ಶಾಲೆಯಲ್ಲಿ ಓದಿದೆ. ಆ ಶಾಲೆಯ ಮೊದಲನೇ ಬ್ಯಾಚ್ ವಿದ್ಯಾರ್ಥಿನಿ ಎಂಬ ಹೆಮ್ಮೆ ನನಗೆ. ನಂದಿ ಕಾಲೇಜಿನಲ್ಲಿ ಪಿಯು ಶಿಕ್ಷಣವನ್ನು ಪಡೆದೆ.

ನಿಮ್ಮ ನೆಚ್ಚಿನ ಶಿಕ್ಷಕರು ಅಥವಾ ಸ್ಫೂರ್ತಿ ನೀಡಿದವರು ಯಾರು?

ನನ್ನ ಪ್ರತಿಭೆಯನ್ನು ಗುರುತಿಸಿ ಪೋಷಿಸಿದ ಶ್ರೇಯಸ್ಸು ಡ್ರೀಮ್ ವರ್ಲ್ಡ್ ಶಾಲೆಯ ಅನಿಲ್‍ಬಾಬು ಅವರಿಗೆ ಸಲ್ಲುತ್ತದೆ. ಅದೇ ರೀತಿ ತಿಪ್ಪಾರೆಡ್ಡಿ ಸಾರ್ ಅವರು ನನ್ನಲ್ಲಿನ ಟ್ಯಾಲೆಂಟ್ ಗುರುತಿಸಿ ಸಿವಿಲ್ ಸರ್ವಿಸಸ್ ಗೆ ತಯಾರು ಮಾಡಿಸಿ ಎಂದು ನಮ್ಮ ತಂದೆಯವರಿಗೆ ಹೇಳಿದ್ದರು.

ಸಿವಿಲ್ ಸರ್ವಿಸಸ್ ಪರೀಕ್ಷೆಯ ಬಗ್ಗೆ ಕನಸು ಚಿಗುರೊಡೆದಿದ್ದು ಯಾವಾಗ?

ಬಹಳ ಹಿಂದೆ ಜಿಲ್ಲಾಧಿಕಾರಿಗಳಾದ ಜಾವೇದ್ ಅಖ್ತರ್ ಅವರು ಗುಡಾರನಗರ ಭೇಟಿ ಸಂದರ್ಭದಲ್ಲಿ ಆಡಿದ ಮಾತುಗಳು ನನ್ನ ಮನಸ್ಸಿಗೆ ನಾಟಿದವು ಮತ್ತು ಹರ್ಷಗುಪ್ತ ಅವರ ಕಾರ್ಯವನ್ನು ನಾನು ಗಮನಿಸಿರುವೆ. ಇಡೀ ಸಮಾಜ ಅಥವಾ ಸಮುದಾಯಕ್ಕೆ ಕೊಡುಗೆಯನ್ನು ನೀಡಲು ಈ ಸಿವಿಲ್ ಸರ್ವಿಸಸ್ ಪದವಿಗಳು ಹೆಚ್ಚು ಸಹಕಾರಿ ಎಂದು ನಾನು ತಿಳಿದು ಈ ನಿಟ್ಟಿನಲ್ಲಿ ಗಮನ ಹರಿಸಿದೆ.

ಈ ಪರೀಕ್ಷೆಗೆ ತಾವು ತಯಾರಿ ನಡೆಸಿದುದರ ಬಗ್ಗೆ ಸ್ವಲ್ಪ ತಿಳಿಸುವಿರಾ?

ವೈದ್ಯಕೀಯ ಕ್ಷೇತ್ರವನ್ನು ಬಿಟ್ಟು ಬಿಎಂಎಸ್ ಕಾಲೇಜಿನಲ್ಲಿ ಟೆಲಿಕಮ್ಯೂನಿಕೇಷನ್ ಎಂಜಿನಿಯರಿಂಗ್ ಪದವಿ ಮಾಡುವ ಸಂದರ್ಭದಲ್ಲಿ ಒಮ್ಮೆ ಈ ಪರೀಕ್ಷೆಯ ರೀತಿಯನ್ನು ತಿಳಿಯಲು ಯತ್ನಿಸಿದೆ. ಪದವಿಯ ನಂತರ ಸೀರಿಯಸ್ ಆಗಿ ತೆಗೆದುಕೊಂಡರೂ ಪ್ರಿಲಿಮ್ಸ್ ಕೂಡ ಪಾಸಾಗಲಿಲ್ಲ. ಮೂರನೆಯ ಪ್ರಯತ್ನದಲ್ಲಿ ಪ್ರಿಲಿಮ್ಸ್ ಮೇನ್ಸ್ ಮತ್ತು ಸಂದರ್ಶನ ಮೂರನ್ನು ಕ್ಲಿಯರ್ ಮಾಡಿದೆ.

ಸಿವಿಲ್ ಸರ್ವಿಸಸ್ ಪರೀಕ್ಷೆಯಲ್ಲಿ 423ನೇ ರ್ಯಾಂಕ್ ಪಡೆದಿರುವ ಯುವತಿ ಆಶ್ವೀಜ ಅವರ ತಾತ ದಿನಗೂಲಿ ನೌಕರರಾಗಿದ್ದರು. ಗ್ರಾಮೀಣ ಹಿನ್ನೆಲೆಯ ಈ ಬಡ ದಲಿತ ಕುಟುಂಬ ಶಿಕ್ಷಣಕ್ಕೆ ನೀಡಿದ ಮಹತ್ವದ ದೆಸೆಯಿಂದ ಇಂದು ಸದೃಢಗೊಳ್ಳಲು ಸಾಧ್ಯವಾಗಿದೆ: ತಂದೆ ಡಿ.ವೆಂಕಟರಮಣ ಸಿಂಧನೂರಿನಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ತಾಯಿ ಸುಮಾ ಗೃಹಿಣಿ, ಅಣ್ಣ ಬೆಂಗಳೂರಿನಲ್ಲಿ ಸರ್ಜನ್.

ತಮ್ಮ ಐಚ್ಛಿಕ ವಿಷಯ ಯಾವುದು?

ನಾನು ಇಂಜಿನಿಯರಿಂಗ್ ಪದವೀಧರೆಯಾದರೂ ರಾಜ್ಯಶಾಸ್ತ್ರ ವಿಷಯವನ್ನು ಆಯ್ದುಕೊಂಡೆ. ಮೊದಲು ಸ್ವಲ್ಪ ಕಷ್ಟವೂ ಆಯಿತು.

ತರಬೇತಿ ಕೇಂದ್ರಗಳು ಎಷ್ಟರ ಮಟ್ಟಿಗೆ ಸಹಕಾರಿ?

ನಾನು ಹೈದರಾಬಾದಿನಲ್ಲಿ ಒಂದು ವರ್ಷ ಮತ್ತು ಬೆಂಗಳೂರಿನಲ್ಲಿ ಒಂದು ವರ್ಷ ತರಬೇತಿ ತೆಗೆದುಕೊಂಡೆ. 2018ರ ಜನೆವರಿಯಿಂದ ಬಳ್ಳಾರಿಯ ಮನೆಯಲ್ಲಿಯೇ ಅಭ್ಯಾಸ ಮಾಡಿದೆ. ತರಬೇತಿ ಕೇಂದ್ರಗಳ ಕೊಡುಗೆ ಮೂವತ್ತು ಪ್ರತಿಶತ ಇದ್ದರೆ, ನಮ್ಮ ಶ್ರಮ ಎಪ್ಪತ್ತು ಪ್ರತಿಶತ ಇರಬೇಕಾಗುತ್ತದೆ. ಇದು ನನ್ನ ಅನುಭವದ ಅನಿಸಿಕೆ. ಏಕೆಂದರೆ ಇಲ್ಲಿ ಒಂದೇ ಮಾದರಿ ಎನ್ನುವುದಿರುವುದಿಲ್ಲ.

ನಿಮ್ಮ ರೋಲ್ ಮಾಡೆಲ್? ಗಾಢ ಪ್ರಭಾವ ಬೀರಿದವರು?

ನನಗೆ ಮಲಾಲಳ one pen, one book can change the world ಎನ್ನುವ ಶಬ್ದಗಳು ನನಗೆ ಯಾವತ್ತೂ ಸ್ಫೂರ್ತಿದಾಯಕ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ಅಗತ್ಯ ಮತ್ತು ಅತ್ಯವಶ್ಯಕವೆಂದು ನಾನು ಭಾವಿಸಿರುವೆ.

ನಿಮ್ಮ ಅತ್ಯಂತ ಇಷ್ಟವಾದ ಕ್ಷೇತ್ರ?

ನನ್ನ ಇಂದಿನ ಈ ಸ್ಥಿತಿಗೆ, ನಾನು ಪಡೆಯುತ್ತಿರುವ ಪ್ರೀತಿಗೆ, ಅಭಿನಂದನೆಗಳಿಗೆ ಶಿಕ್ಷಣವೇ ಮುಖ್ಯವಾದ ಅಂಶ. ನಮ್ಮ ತಾತನವರು ದಿನಗೂಲಿ ನೌಕರರಾಗಿ ಕೆಲಸ ಮಾಡಿರುವರು. ತಂದೆ ಇಂಜಿನಿಯರ್ ಆದರು. ನಾನಿಂದು ಸಿವಿಲ್ ಸರ್ವಿಸಸ್‍ನಲ್ಲಿರುವೆ. ಹಾಗಾಗಿ ಶಿಕ್ಷಣ ಕ್ಷೇತ್ರವೇ ನನಗೆ ನೆಚ್ಚಿನ ಕ್ಷೇತ್ರ. ಅದರಲ್ಲೂ ಮಹಿಳೆಯರಿಗೆ ಈ ಕ್ಷೇತ್ರ ಹೆಚ್ಚಿನ ರೀತಿಯಲ್ಲಿ ಸಿಗುವಂತಾಗಬೇಕು ಎಂಬುದು ನನ್ನ ಅಭಿಪ್ರಾಯ.

ನಿಮ್ಮ ನಿರ್ದಿಷ್ಟ ಗುರಿಗಳು?

ಯಾವುದೇ ಜಿಲ್ಲೆ ಅಥವಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಾಗ ಅದನ್ನು ಮಾದರಿಯಾಗಿಸುವ ಬಗ್ಗೆ ಆಲೋಚನೆ, ಅಭಿಲಾಷೆ ಇದೆ. ಮಾನವ ಅಭಿವೃದ್ಧಿ ಮಾಪನದ ಅಂಕ ಉತ್ತಮಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂಬ ಅರಿವಿದೆ. ಹೆಣ್ಣುಮಕ್ಕಳು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು ಮತ್ತು ಸ್ವಸಹಾಯ ಗುಂಪುಗಳು ಹೆಚ್ಚು ಸ್ವಾಯತ್ತತೆ ಪಡೆಯಬೇಕು.

ಹುಟ್ಟೂರು ಸಂಗನಕಲ್ಲಿಗೆ ತಮ್ಮ ಕೊಡುಗೆ?

ಕೆಲವು ವರುಷಗಳಿಂದ ನನ್ನ ಊರಿನ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಮತ್ತು ಕಂಪ್ಯೂಟರ್ ತರಬೇತಿಯನ್ನು ಉಚಿತವಾಗಿ ಕೊಡುತ್ತಾ ಬಂದಿದ್ದೇನೆ. ಬಳ್ಳಾರಿಯ ಕಾಲುವೆ ಗಡ್ಡೆ ಮಕ್ಕಳಿಗೂ ಉಚಿತ ಶಿಕ್ಷಣವನ್ನು ಬೇಸಿಗೆಯ ರಜಾದಲ್ಲಿ ನೀಡುತ್ತಿರುವೆನು. ಶಿಲಾಯುಗದ ಜನರು ವಾಸಿಸಿದ ಕುರುಹುಗಳಿರುವ ನಮ್ಮ ಪ್ರದೇಶಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಅಲ್ಲದೆ ಈ ಪ್ರದೇಶಕ್ಕೆ ಹೆಚ್ಚಿನ ಭದ್ರತೆಯ ಅವಶ್ಯಕತೆ ಇದೆ.

ನಿಮ್ಮ ಇನ್ನಿತರ ಆಸಕ್ತಿ ವಿಷಯಗಳು?

ಸತತವಾಗಿ ಐದು ವರ್ಷಗಳ ಕಾಲ ಪರಿಸರಸ್ನೇಹಿ ಮಣ್ಣಿನ ಗಣೇಶನನ್ನು ಜನರಿಗೆ ನೀಡುವತ್ತ ನಮ್ಮ ಸ್ನೇಹಿತರ ಬಳಗ ಕೆಲಸ ಮಾಡಿದೆ. ಪರಿಸರ ರಕ್ಷಣೆ ವಿಷಯ ಮನೆಯಿಂದಲೇ ಪ್ರಾರಂಭವಾಗಬೇಕು ಎಂದು ನಾನು ನಂಬಿರುವೆ. ಹಸಿಕಸ, ಒಣಕಸ ಬೇರ್ಪಡಿಸುವಿಕೆ ನಿಟ್ಟಿನಲ್ಲಿ ಜನರಿಗೆ ಅರಿವು ಮೂಡಿಸುವ ಅವಶ್ಯಕತೆ ಇದೆ.

ಮಾಧ್ಯಮಗಳ ಬಗ್ಗೆ ತಮ್ಮ ಅನಿಸಿಕೆ?

ಮಾಧ್ಯಮ ನಮ್ಮ ಪ್ರಜಾಪ್ರಭುತ್ವದ ಬಹುಮುಖ್ಯ ಅಂಗವಾಗಿದ್ದು ಒಂದು ತರಹದ ಸರ್ಜನ್ ಸ್ಕಾಲ್ಪೆಲ್ ಇದ್ದ ಹಾಗೆ; ಸರಿ ಇದ್ದರೆ ತಿದ್ದಬಲ್ಲದು, ಇಲ್ಲದಿದ್ದರೆ ಹಾಳು ಮಾಡಲು ಸಾಧ್ಯವಿದೆ.

One Response to " ಐಎಎಸ್‍ಗೆ ಅರ್ಹತೆ ಪಡೆದ ಬಳ್ಳಾರಿಯ ಆಶ್ವೀಜ

ಸಂದರ್ಶನ: ಡಾ.ಅರವಿಂದ  ಪಟೇಲ್

"

Leave a Reply

Your email address will not be published.