ಒಂದು ಕನ್ನಡ ಶಾಲೆಯ ಕತೆ ಹಲವು ಸಾಧ್ಯತೆಗಳ ದೀವಿಗೆ!

-ವೀರಣ್ಣ ಮಡಿವಾಳರ

ಒಬ್ಬ ಶಿಕ್ಷಕನ ಮನಸು ಮತ್ತು ಕನಸು ಬೆರೆತರೆ ಒಂದು ಸರ್ಕಾರಿ ಶಾಲೆ ಹೇಗೆ ಅರಳಬಹುದು, ಮಕ್ಕಳು ನಳನಳಿಸಬಹುದು, ನೆರವು ಹರಿದುಬರಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಜೀವಂತ ನಿದರ್ಶನ. ಸರ್ಕಾರಿ ಶಾಲೆಯನ್ನು ಮಾದರಿಯಾಗಿ ರೂಪಿಸಿದ ಶಿಕ್ಷಕರೇ ಸ್ವತಃ ತಮ್ಮ ಅನುಭವಗಾಥೆ ನಿರೂಪಿಸಿದ್ದಾರೆ. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಈ ಪ್ರಯೋಗ ಹಲವು ಶಿಕ್ಷಕರಿಗೆ ಪ್ರೇರಣೆಯಗಲಿ ಎಂಬುದು ಸಮಾಜಮುಖಿಯ ಆಶಯ.

ಕಣ್ಣಿರುವುದು ಕನಸಿಗೋ ಕಣ್ಣೀರಿಗೋ ಎಂಬ ಅನುಮಾನವೇ ಹಾಸುಹೊಕ್ಕಾಗಿದ್ದ ದಿನಗಳವು. ಓದು, ತಿರುಗಾಟ ಶಿಬಿರ ಕಮ್ಮಟಗಳ ಒಡನಾಟಕ್ಕೆ ಸಿಕ್ಕಮೇಲೆ ಚೂರು ನೆಮ್ಮದಿ ಸಿಕ್ಕಿತ್ತು. ಕಪ್ಪತ್ತಗುಡ್ಡದ ಗಿಡಗಂಟೆಯ ಕೊರಳದನಿ ಕಿವಿ ಮನಸು ತುಂಬಿಕೊಂಡು ಓಡಾಡುತ್ತಿದ್ದೆ. ಖಾಲಿಬೀದಿಯ ಪ್ರವರಗಳಿಂದ ದಿನದಿನ ಹೊಸಪಾಠ ನನಗೆ. ಓದು ಹೋರಾಟ ತಿರುಗಾಟ ಹಾಡು ಭಾಷಣ ಹಸಿವು ಕವಿತೆ ಕಣ್ಣೀರು ಕಲಸುಮೇಲೋಗರಗೊಂಡು ನನ್ನ ಬದುಕು ನನಗೇ ಒಂದು ಕೊಲಾಜ್ ರೀತಿ ಕಂಡು ಕೀಳರಿಮೆ ಸಹಿಸಿ ಹಾಗೂ ಹೀಗೂ ನಗುತ್ತಲೇ ಇರುತ್ತಿದ್ದೆ. ಬದುಕಿನ ಆಳ ಅಗಲ ವಿಸ್ತಾರಗಳನೆಲ್ಲ ಓಡಾಡಿ ಮುಟ್ಟಿ ಮಾತನಾಡಿಸಿ ಬಂದು ನಾನು ಕನ್ನಡ ಸಾಲಿ ಮಾಸ್ತರನಾದಾಗ ನನಗೆ ಇಪ್ಪತ್ಮೂರು ವರ್ಷ. ಆಗಬೇಕು ಅಂದುಕೊಂಡದ್ದು ಏನೆಲ್ಲ, ಆಗಿದ್ದು ಮಾತ್ರ ಆಗಬೇಕಾದದ್ದೆ.

ಅದು ಭರ್ತಿ ಮಳೆಗಾಲ. ಮುಗಿಲ ಕಡಲು ಹರಿದು ಬಿದ್ದು ಹಾವೇರಿಯ ವರದೆಯ ಒಡಲು ತುಂಬಿ ಉಕ್ಕೇರುತ್ತಿದ್ದ ಹೊತ್ತದು. ಅದರ ದಂಡೆಯ ಮೇಲೆ ಸುಮ್ಮಾನ ಮಲಗಿದ್ದ ಪುಟ್ಟಹಳ್ಳಿ ಮೆಳ್ಳಾಗಟ್ಟಿಯ ಹೊಳೆಯಲ್ಲಿ ಮುಳುಗಿತ್ತು. ಹಾವು ಚೇಳು ಹುಳು ಹುಪ್ಪಟೆಗಳ ಕಾಟ ಹೆಚ್ಚಾಗಿ ಶಾಲಾ ಮಕ್ಕಳಿಗೂ ಪರದಾಟ ಎಂದು ವರದಿಯೊಂದು ಪತ್ರಿಕೆಯಲ್ಲಿ ಬಂದಿತ್ತು. ಆ ವರದಿಯನ್ನ ಓದಿ ಕೌನ್ಸೆಲಿಂಗ್‍ಗೆ ಹೋದೆ, ಮೆಳ್ಳಾಗಟ್ಟಿಯ ಶಾಲೆಯನ್ನೇ ಆಯ್ಕೆ ಮಾಡಿಕೊಂಡೆ.

ಅಲ್ಲಿಯೂ ಮಾದರಿ ತರಗತಿ ಕೋಣೆ ರೂಪಿಸಲು ಪ್ರಯತ್ನಿಸಿ ಮಕ್ಕಳ ಸಮೃದ್ಧ ಕಲಿಕೆಯ ಅನುಭವ ನೀಡಿದೆ. ಒಬ್ಬರಿಗೊಬ್ಬರು ತುಂಬಾ ಚೆನ್ನಾಗಿ ಕಲಿಯುತ್ತಿದ್ದರು. ನಂತರ ಚಿಕ್ಕೋಡಿಗೆ ವರ್ಗವಾಗಿ ಬಂದೆ. ಇಲ್ಲಿಯೂ ಕನಸಿನ ಶಾಲೆ ರೂಪಿಸಲು ಅನೇಕ ರೀತಿಯಲ್ಲಿ ಪ್ರಯತ್ನಪಟ್ಟೆ. ನಮ್ಮವರೇ ನಮಗೆ ಅಡ್ಡಗಾಲಾದರು. ಪ್ರಯತ್ನ ಮುಂದುವರೆಸಿದೆ.

ಗಡಿಭಾಗದ ಈ ಚಿಕ್ಕೋಡಿಯಲ್ಲಿ ಮಕ್ಕಳ ಬದುಕು ಅನೇಕ ರೀತಿಯಲ್ಲಿ ಹರಿದು ಹಂಚಿ ಹೋಗಿದೆ. ಅನೇಕ ಮಕ್ಕಳು ಕುರಿ ಕಾಯುತ್ತ, ಇಟ್ಟಂಗಿ ಭಟ್ಟಿಯಲ್ಲಿ ತಮ್ಮ ಸಮೃದ್ಧ ಬಾಲ್ಯವನ್ನ ಸುಟ್ಟುಕೊಳ್ಳುತ್ತ, ಅಕ್ಷರಶಃ ಕತ್ತೆ ಕಾಯುತ್ತಾ ಬಾಲ್ಯವೇ ಇಲ್ಲದೆ ಬದುಕುತ್ತಿದ್ದಾರೆ. ಇದನ್ನೆಲ್ಲ ಕಂಡುಂಡ ನಾನು ಕನಸಿನ ಶಾಲೆ ರೂಪಿಸಿ ಇಂಥ ಅನೇಕ ಮಕ್ಕಳಿಗೆ ಘನತೆಯ ಬದುಕು ಕಟ್ಟಿಕೊಳ್ಳಲು ನೆರವಾಗಬೇಕೆಂಬ ಹಂಬಲದಿಂದ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ ನಿಡಗುಂದಿಗೆ ವರ್ಗವಾಗಿ ಬಂದೆ.

ಎಲ್ಲ ಶಾಲೆಗಳಂತೆಯೇ ಈ ಶಾಲೆ ಸಹ ಅನಾಕರ್ಷಕ, ಸಂಪನ್ಮೂಲ ರಹಿತ ಮತ್ತು ಜೇಡಗೂಡು ಕಟ್ಟಿದ್ದಂತೆ ಇತ್ತು. ಒತ್ತಾಯಪೂರ್ವಕವಾಗಿ ನನಗೇ ಪ್ರಭಾರ ವಹಿಸಿದ ಮೇಲೆ ನಾನು ಕಾರ್ಯಪ್ರವೃತ್ತನಾದೆ. ಶಾಲೆಯ ಸುತ್ತಲಿನ ಕಂಪೌಂಡ್ ಬೀಳುವ ಸ್ಥಿತಿಯಲ್ಲಿತ್ತು. ಸ್ಥಳೀಯ ಕೆಲಸಗಾರರ ನೆರವಿನಿಂದ ನನ್ನದೇ ಎಪ್ಪತ್ತೆರಡು ಸಾವಿರ ರೂಪಾಯಿ ಹಾಕಿ ಶಾಲೆಯ ಸುತ್ತಲಿನ ಕಂಪೌಂಡ್ ಅನ್ನು ಗಟ್ಟಿಗೊಳಿಸಿದೆ. ಹಾಸನದಲ್ಲಿ ಹಸಿರು ಭೂಮಿ ಪ್ರತಿಷ್ಠಾನದ ವತಿಯಿಂದ ಪರಿಸರ ಚಳವಳಿ ಒಂದು ಆಂದೋಲನದ ರೀತಿ ಕೆಲಸ ಮಾಡುತ್ತಿತ್ತು. ಸಹೋದರಿ ರೂಪ ಹಾಸನ ಅವರು ಅಲ್ಲಿ ನಡೆಯುತ್ತಿರುವ ಎಲ್ಲ ಚಟುವಟಿಕೆಗಳನ್ನ ನನಗೆ ವಾಟ್ಸಪ್ ಮೂಲಕ ಹಂಚಿಕೊಳ್ಳುತ್ತಿದ್ದರು. ಇದರಿಂದ ಪ್ರೇರಣೆಗೊಂಡ ನಾನು ನನ್ನ ಮಕ್ಕಳನ್ನ ಸೇರಿಸಿಕೊಂಡು ಶಾಲೆಗೊಂದು ಉದ್ಯಾನವನ ನಿರ್ಮಾಣ ಮಾಡುವ ಕನಸು ಕಂಡೆ.

ಮಿತ್ರ ರಾಜು ಸಂಕಪಾಳರವರು ಐದು ಸಾವಿರ ರೂಪಾಯಿ ಚಂದನೆಯ ಸಸ್ಯಗಳನ್ನ ತಾವೇ ಖುದ್ದಾಗಿ ಕೊಡಿಸಿದರು. ಅರಣ್ಯ ಇಲಾಖೆಯಿಂದ ಕೆಲವು ಸಸ್ಯಗಳನ್ನ ತಂದು ಮಕ್ಕಳೊಂದಿಗೆ ಸೇರಿ ಉದ್ಯಾನವನದ ನಿರ್ಮಾಣಕ್ಕೆ ಕಾಯಕಲ್ಪ ರೂಪಿಸಿದೆವು. ದಿನ ದಿನ ಹಸಿರು ದಿನದ ಪರಿಕಲ್ಪನೆಯಲ್ಲಿ ಪ್ರತಿನಿತ್ಯ ಒಂದಷ್ಟು ಹೊತ್ತು ಈ ಕೆಲಸಕ್ಕಾಗಿ ಮೀಸಲಿಟ್ಟೆವು. ನಮ್ಮ ಉದ್ಯಾನವನ ದಿನದಿನ ಹೊಸಹೊಸದಾಗಿ ಚಿಗುರತೊಡಗಿತು.

ನಾನು ಮಾಡುತ್ತಿರುವ ಪ್ರತಿಕೆಲಸವನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದೆ. ಅದಕ್ಕೆ ಅದ್ಭುತ ಮತ್ತು ಬೆರಗು ಎನ್ನುವ ರೀತಿಯಲ್ಲಿ ಸ್ಪಂದನೆ ಸಿಗುತ್ತಿತ್ತು. ನನ್ನ ರಜಾ ದಿನಗಳು ಪೂರ್ಣ ಶಾಲೆಗಾಗಿ ಸದ್ವಿನಿಯೋಗವಾಗತೊಡಗಿದವು. ನಂತರ ಶಾಲೆಯ ಹೊರ ವಾತಾವರಣ ಮತ್ತು ತರಗತಿಗಳ ಆಂತರಿಕ ವಾತಾವರಣಗಳನ್ನ ಪೂರ್ಣ ಬದಲಾಯಿಸಲು ಪಣತೊಟ್ಟೆ.

ಶಿಕ್ಷಕ-ಮಿತ್ರ ಪ್ರಕಾಶ ಪುರ್ವೆ ಆಗಾಗ ಬಂದು ನನ್ನ ಕೆಲಸಕ್ಕೆ ಜೊತೆಯಾಗುತ್ತಿದ್ದರು. ಪ್ರತಿದಿನದ ಕೆಲಸವನ್ನ ವಿಡಿಯೋ ಮತ್ತು ಫೋಟೊಗಳ ಮೂಲಕ ಸಾಮಾಜಿಕ ಮಾಧ್ಯಮಗಳ ಮೂಲಕ ಅಪ್ ಡೇಟ್ ಮಾಡತೊಡಗಿದೆ. ಇಡೀ ಶಾಲೆಗೆ ಅತ್ಯಾಕರ್ಷಕ ರೂಪ ಬರತೊಡಗಿತು. ಹಲವಾರು ಜನ ಧನಸಹಾಯ ಮಾಡತೊಡಗಿದರು. ಅವರ ಪ್ರತಿಯೊಂದು ರೂಪಾಯಿಗೂ ಲೆಕ್ಕ ಕೊಡುತ್ತ ಶಾಲೆಯ ವಾತಾವರಣವನ್ನ ಬದಲಿಸತೊಡಗಿದೆ.

ಸ್ಮಾರ್ಟ್ ಪ್ಲಸ್ ತರಗತಿಗಳನ್ನ ರೂಪಿಸುವ ಕನಸು ನನಸಾಗುತ್ತ ಬಂದಿತು. ಅನೇಕ ರೀತಿಯ ಕಲಿಕಾ ಸಂಪನ್ಮೂಲಗಳಿರುವ ಸಮೃದ್ಧ ಮಾದರಿ ತರಗತಿ ಕೋಣೆಗಳು ಸಿದ್ಧವಾಗುತ್ತ ಬಂದವು. ಚನ್ನಪಟ್ಟಣದ ಶಿಕ್ಷಣಪ್ರೇಮಿ ಯತೀಶ್ ಚಂದ್ರರವರು ಮೂವತ್ತೈದು ಸಾವಿರ ರೂಪಾಯಿಯ ಒಂದು ಸ್ಮಾರ್ಟ್ ಪ್ಲಸ್ ಟಿವಿ ಮತ್ತು ಬೆಂಗಳೂರಿನ ಉಪನ್ಯಾಸಕರಾದ ಶಶಿಧರ ಟಿ.ಎಂ. ಅವರು ಇಪ್ಪತ್ತೈದು ಸಾವಿರ ರೂಪಾಯಿಯ ಮತ್ತೊಂದು ಸ್ಮಾರ್ಟ್ ಪ್ಲಸ್ ಟಿವಿ ಕೊಡಿಸಿದರು. ಶಿಕ್ಷಕ ಮಿತ್ರ ಶಿವರಾಜ್ ಸಣ್ಣಮನಿ ರೂಪಿಸಿರುವ ನಲಿಕಲಿ ಡಿಜಿಟಲ್ ಪಾಠಗಳನ್ನ ನಮ್ಮ ಮಕ್ಕಳು ಆಸ್ಥೆಯಿಂದ ಕಲಿಯತೊಡಗಿದರು.

ಇದೇ ಹೊತ್ತಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಎಸ್.ಜಿ.ಸಿದ್ಧರಾಮಯ್ಯನವರ ಕನ್ನಡ ಕಾಳಜಿಯ ರೂಪಕವಾಗಿ ನಮ್ಮ ಶಾಲೆಗೆ ಒಂದು ಲಕ್ಷ ರೂಪಾಯಿ ಪಾಠೋಪಕರಣ ಮತ್ತು ಪೀಠೋಪಕರಣ ಖರೀದಿಗಾಗಿ ಅನುದಾನ ಮಂಜೂರಾಯಿತು. ನಾನು ಅನೇಕ ಅಂಗಡಿಗಳನ್ನ ತಿರುಗಾಡಿ ಕೊನೆಗೆ ತೇರದಾಳದ ಶಿಕ್ಷಣಪ್ರೇಮಿ ಹುಡುಗನೊಬ್ಬನಿಗೆ ಪೂರ್ಣ ಟೆಂಡರ್ ಕೊಟ್ಟೆ. ಕಣ್ಣುಕೋರೈಸುವಂಥ ಯಾವ ಕಚೇರಿಗೂ ಕಡಿಮೆಯಲ್ಲದ ನಮ್ಮ ಸ್ಟಾಫ್ ರೂಮು ಮತ್ತು ಎಲ್ಲ ಮಕ್ಕಳಿಗೂ ಖುರ್ಚಿ ಟೇಬಲ್ ಬಂದವು. ನಮ್ಮ ಮಕ್ಕಳ ಖುಷಿಗೆ ಪಾರವೇ ಇರಲಿಲ್ಲ. ನಮ್ಮ ಶಾಲೆಯಲ್ಲಿ ಕಲಿಕೆ ಮಾತ್ರವಲ್ಲ ಇಲ್ಲಿನ ಬಡ ಕೂಲಿಕಾರ್ಮಿಕ ಮಕ್ಕಳಿಗೆ ಸಮೃದ್ಧ ಬಾಲ್ಯ ನೀಡುತ್ತಿದ್ದೇವೆ ಎಂಬ ಸಾರ್ಥಕ ಭಾವ ನನ್ನದು.

ಶಾಲೆಗೊಂದು ವೆಬ್‍ಸೈಟ್ ರೂಪಗೊಂಡಿತು. ಮಕ್ಕಳ ಆಟ ಪಾಠ ಚಟುವಟಿಕೆಗಳೆಲ್ಲ ದಾಖಲಾಗುತ್ತ ಹೋಯಿತು.

ಶಾಲೆಯ ಉದ್ಯಾನವನಕ್ಕೆ ಇಲಾಖೆಯ ಅನುದಾನದಿಂದ ‘ತೇಜಸ್ವಿ ಜೀವತಾಣ’ ಎಂದು ನಾಮಕರಣ ಮಾಡಿ ಅನೇಕ ಪಕ್ಷಿಗಳಿಗೆ ಕೃತಕ ಗೂಡುಗಳನ್ನ ನಿರ್ಮಿಸಿದೆವು. ಈಗಾಗಲೇ ನಮ್ಮ ಶಾಲೆಯ ಆವರಣದಲ್ಲಿ ಹತ್ತಾರು ಜನರೇಷನ್‍ಗಳ ನೂರಾರು ಗುಬ್ಬಿಗಳು ಹುಟ್ಟಿ ಬೆಳೆದಿವೆ, ಅವುಗಳದೇ ಸಹಜರೀತಿಯಲ್ಲಿ. ಹೀಗೆ ನಮ್ಮ ಮಕ್ಕಳಿಗೆ ಜೀವಪ್ರೇಮದ ಪಾಠವೂ ಒಟ್ಟೊಟ್ಟಿಗೆ ಪ್ರಾಯೋಗಿಕವಾಗಿ ಸಿಗುತ್ತಿದೆ.

ಶಾಲೆ ಬೆಳೆಯಿತು, ಮಕ್ಕಳ ಸಂಖ್ಯೆ ಈಗ ನೂರ ಇಪ್ಪತ್ತಕ್ಕೇರಿದೆ. ಶಾಲಾ ಆವರಣ ಕಿರಿದಾಗುತ್ತ ಬಂತು. ಶಾಲೆಗೆ ಈಗ ಸಾರ್ವಜನಿಕರ ಸಹಕಾರದಿಂದ ಹತ್ತು ಗುಂಟೆ ಜಾಗವನ್ನ ನಾಲ್ಕು ಲಕ್ಷ ರೂಪಾಯಿಗೆ ಕೊಂಡುಕೊಳ್ಳಲು ನಿರ್ಧರಿಸಿದ್ದೇವೆ. ಮಾನ್ಯ ಶಿಕ್ಷಣ ಸಚಿವರು ಸಹ ಇದಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಕ್ಷೇತ್ರದ ಶಾಸಕರಾದ ಶಿಕ್ಷಣಪ್ರೇಮಿ ಪಿ.ರಾಜೀವ್ ನಮ್ಮ ಶಾಲೆಯ ಬೆಳವಣಿಗೆಗೆ ಶ್ರೀರಕ್ಷೆಯಾಗಿ ನಿಂತಿದ್ದಾರೆ.

ಈಗ ನಮ್ಮ ಶಾಲೆಯಲ್ಲಿ ಇಲಾಖೆಯ ನೆರವಿನಿಂದ ಮತ್ತು ಸದ್ಯ ಬೀದರ್ ಜಿಲ್ಲಾಧಿಕಾರಿಗಳಾಗಿರುವ ಮಾನ್ಯ ರಾಮಚಂದ್ರನ್ ಹಾಗೂ ಮಾನ್ಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಡಿಡಿಪಿಐಗಳಾದ ಮನ್ನಿಕೇರಿ ಅವರ ಪ್ರೋತ್ಸಾಹ ಬೆಂಬಲದಿಂದ ನಮ್ಮ ಶಾಲೆಯಲ್ಲಿ ಹೆಣ್ಣುಮಕ್ಕಳಿಗೆ ಗಂಡು ಮಕ್ಕಳಿಗೆ ಪ್ರತ್ಯೇಕವಾದ ಹೈಟೆಕ್ ಶೌಚಾಲಯ, ಸ್ನಾನದ ಕೋಣೆಗಳು ಮತ್ತು ಮೂತ್ರಿಗಳನ್ನು ನಿರ್ಮಿಸಿದ್ದೇವೆ.

ಎಕ್ಯರೆಕ್ಸ್ ಕಂಪನಿಯ ಚೇರ್ಮನ್ನರಾದ ರಾಮಮೋಹನ್ ಅವರ ಪ್ರೀತಿ, ಕಾಳಜಿ ಮತ್ತು ನೆರವಿನಿಂದಾಗಿ ಸದ್ಯದಲ್ಲೇ ನಮ್ಮ ಶಾಲೆಗೆ ಮತ್ತೊಂದು ತರಗತಿ ಕೋಣೆ ನಿರ್ಮಾಣವಾಗಲಿದೆ.

ಇಂದು ಅನೇಕ ಆಧುನಿಕ ಸವಲತ್ತುಗಳಿರುವ ಕಾಲಕ್ಕೆ ತಕ್ಕಂಥ ಎಲ್ಲ ತಾಂತ್ರಿಕ ಅಗತ್ಯಗಳಿಂದ ತುಂಬಿರುವ ನಮ್ಮ ಶಾಲೆ ಮಾದರಿ ಶಾಲೆಯಾಗಿ ರೂಪುಗೊಂಡಿದೆ. ನಮ್ಮ ಕನಸುಗಳಿಗೆ ಗಡಿಗಳಿಲ್ಲ, ಬೇಲಿಗಳೂ ಬಂದರೂ ದಾಟುತ್ತೇವೆ ಎಂಬ ವಿಶ್ವಾಸವಿದೆ.

Leave a Reply

Your email address will not be published.