ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಅವಸ್ಥೆ!

ಭಾರತ ಒಕ್ಕೂಟ ವ್ಯವಸ್ಥೆಯ ಭಾಗವಾದ ಕರ್ನಾಟಕ ಬಹುಬಗೆಯ ಅನ್ಯಾಯ ಅನುಭವಿಸುತ್ತಿದೆ. ಈ ಸಮಸ್ಯೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಬಂಧವನ್ನು ಪುನರ್ ಪರಿಶೀಲನೆಗೆ ಒಳಪಡಿಸುವಷ್ಟು ಗಂಭೀರವಾಗಿವೆ. ಆದರೆ ಈ ಬಗ್ಗೆ ನಮ್ಮ ರಾಜಕಾರಣಿಗಳಿಗೆ ಕಿಂಚಿತ್ತೂ ಕಾಳಜಿ ಇಲ್ಲದಿರುವುದು ಅಕ್ಷಮ್ಯ.

ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಅಧಿಕಾರವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ: ಕೇಂದ್ರ ಪಟ್ಟಿ (ಕೇಂದ್ರ ಸರ್ಕಾರ ಅಧಿಕಾರ ಚಲಾಯಿಸಬಹುದು), ರಾಜ್ಯ ಪಟ್ಟಿ (ರಾಜ್ಯ ಸರ್ಕಾರ ಅಧಿಕಾರ ಚಲಾಯಿಸಬಹುದು) ಹಾಗೂ ಸಮವರ್ತಿ ಪಟ್ಟಿ (ಕೇಂದ್ರ-ರಾಜ್ಯ ಸರ್ಕಾರಗಳೆರಡೂ ಅಧಿಕಾರ ಚಲಾಯಿಸಬಹುದು, ಕೇಂದ್ರಕ್ಕೆ ಮೇಲುಗೈ ಇರುತ್ತದೆ). ಈ ಅಧಿಕಾರ ಹಂಚಿಕೆಯಲ್ಲಿ ಕಾಲಕಾಲಕ್ಕೆ ಬದಲಾವಣೆಗಳಾಗಿದ್ದು, ರಾಜ್ಯ ಪಟ್ಟಿಯಲ್ಲಿದ್ದ ಎಷ್ಟೋ ವಿಷಯಗಳು ಸಮವರ್ತಿ ಪಟ್ಟಿಗೆ, ಸಮವರ್ತಿ ಪಟ್ಟಿಯಲ್ಲಿದ್ದ ಎಷ್ಟೋ ವಿಷಯಗಳು ಕೇಂದ್ರ ಪಟ್ಟಿಗೆ ಹೋಗಿವೆ.

ಆದರೆ ಇಷ್ಟು ವರ್ಷಗಳಲ್ಲಿ ಕೇಂದ್ರ ಪಟ್ಟಿಯಿಂದ ಸಮವರ್ತಿ ಪಟ್ಟಿಗೆ, ಸಮವರ್ತಿ ಪಟ್ಟಿಯಿಂದ ರಾಜ್ಯ ಪಟ್ಟಿಗೆ ಯಾವ ವಿಷಯವೂ ಬಂದಿಲ್ಲ. ಇಷ್ಟು ಸಾಲದೆಂಬಂತೆ ಕೇಂದ್ರ ಸರ್ಕಾರ ರಾಜ್ಯ ಪಟ್ಟಿಯಲ್ಲಿರುವ ಎಷ್ಟೋ ವಿಷಯಗಳಿಗೆ ತಲೆ ಹಾಕುತ್ತಲೇ ಇರುತ್ತದೆ. ಇತ್ತೀಚೆಗಿನ ರಾಜಕೀಯ ವಿದ್ಯಮಾನಗಳು ಈ ಕೇಂದ್ರೀಕರಣ ಇನ್ನೂ ಹೆಚ್ಚಾಗಲಿದೆಯೆಂದೇ ಸೂಚಿಸುತ್ತಿವೆ. ಅಂದಿಗೆ ಹೋಲಿಸಿದರೆ ಇಂದು ರಾಜ್ಯಗಳ ಸ್ವಾಯತ್ತತೆ ಇನ್ನಷ್ಟು ಕುಸಿದಿದೆಯೇ ಹೊರತು ಹೆಚ್ಚಾಗಿಲ್ಲ. ಇದು ರಾಜ್ಯಗಳ ದೃಷ್ಟಿಯಿಂದ ಖಂಡಿತ ಒಳ್ಳೆಯ ಬೆಳವಣಿಗೆಯಲ್ಲ.

ರಾಜ್ಯಗಳ ಸ್ವಾಯತ್ತತೆ ಕುಸಿದಿದ್ದರೂ ರಾಜ್ಯಗಳ ಮೇಲಿರುವ ಜವಾಬ್ದಾರಿಗಳು ಹೆಚ್ಚಾಗಿಯೇ ಉಳಿದಿವೆ. ಜನಜೀವನಕ್ಕೆ ಬೇಕಾದ ಬಹುತೇಕ ಎಲ್ಲ ಮೂಲಭೂತ ಸೌಕರ್ಯಗಳನ್ನೊದಗಿಸುವುದು ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ. ಆದರೆ ಈ ಸೌಕರ್ಯಗಳನ್ನು ಒದಗಿಸಲು ತಮಗೆ ಬೇಕಾದಷ್ಟು ಹಣವನ್ನು ಖರ್ಚು ಮಾಡುವ, ತಮಗೆ ಬೇಕಾದಂತಹ ಯೋಜನೆಗಳನ್ನು ರೂಪಿಸುವ ಸ್ವಾತಂತ್ರ್ಯ ರಾಜ್ಯಗಳಿಗಿಲ್ಲ. ಕುಸಿದ ಸ್ವಾಯತ್ತತೆಯಲ್ಲಿ ಹೆಚ್ಚಾಗಿರುವ ಜವಾಬ್ದಾರಿಯನ್ನು ನಿಭಾಯಿಸಲಾಗದೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಒದ್ದಾಡುತ್ತಿವೆ.

ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ನೆರೆಯಂತಹ ಅಹಿತಕರ ಘಟನೆಗಳು ಎದುರಾದಾಗ ಅವುಗಳ ಪರಿಹಾರ ಕಾರ್ಯಗಳಿಗೆ ಪ್ರತ್ಯೇಕವಾಗಿ ಹಣವನ್ನು ಹೇಗೆ ಏರ್ಪಡಿಸುವುದೆಂದೂ ತಿಳಿಯಲಾಗದೆ ರಾಜ್ಯಗಳು ಕಂಗಾಲಾಗುವುದನ್ನು ಇಂದು ನಮ್ಮ ರಾಜ್ಯದಲ್ಲೇ ನಾವು ನೋಡುತ್ತಿದ್ದೇವೆ. ಲಕ್ಷ ಕೋಟಿಗೂ ಹೆಚ್ಚು ತೆರಿಗೆ ಆದಾಯ ಸಂಗ್ರಹಿಸಿಕೊಟ್ಟರೂ ಇಂದು ನೆರೆ ಪರಿಹಾರಕ್ಕೆ ದೆಹಲಿಯನ್ನು ಬೇಡುತ್ತ, ಕಾಯುವ ಸ್ಥಿತಿ ಕರ್ನಾಟಕದಂತಹ ರಾಜ್ಯಕ್ಕೆ ಒದಗಿರುವುದು ರಾಜ್ಯಗಳಿಗೆ ಆರ್ಥಿಕ ಸ್ವಾಯತ್ತೆ ಇಲ್ಲದ ಪರಿಣಾಮವನ್ನೇ ಎತ್ತಿ ತೋರುತ್ತಿದೆ.

ತೆರಿಗೆ ಹಂಚಿಕೆ ವಿಧಾನದ ಲೋಪ

ರಾಜ್ಯ ಸರ್ಕಾರಗಳ ಸ್ವಾಯತ್ತತೆ ಹಾಗೂ ಜವಾಬ್ದಾರಿಗಳ ನಡುವಿರುವ ಈ ಅಸಮತೋಲನಕ್ಕೆ ನಮ್ಮಲ್ಲಿರುವ ತೆರಿಗೆ ಹಂಚಿಕೆ ವ್ಯವಸ್ಥೆಯೂ ಮುಖ್ಯ ಕಾರಣ. ದೇಶದಲ್ಲಿ ಹಣಕಾಸು ನಿಯೋಗವೆಂಬ ಸಾಂವಿಧಾನಿಕ ಸಂಸ್ಥೆಯೊಂದು ಕೇಂದ್ರ ಮಟ್ಟದಲ್ಲಿ ಸಂಗ್ರಹವಾಗುವ ತೆರಿಗೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಹಂಚುವ ವಿಧಾನವನ್ನು ಸಿದ್ಧಪಡಿಸುತ್ತದೆ. ಈ ನಿಯೋಗದ ಶಿಫಾರಸುಗಳನ್ನನುಸರಿಸಿ ಕೇಂದ್ರವು ರಾಜ್ಯಗಳಿಗೆ ತೆರಿಗೆ ಹಂಚುತ್ತದೆ.

ಈ ಹಂಚಿಕೆಯ ವಿಧಾನವು ಐತಿಹಾಸಿಕವಾಗಿ ಕೇಂದ್ರದ ಕೈಯ್ಯಲ್ಲಿ ಬಹುಪಾಲು ತೆರಿಗೆಯನ್ನುಳಿಸಿ ರಾಜ್ಯಗಳಿಗೆ ಮಿಕ್ಕ ತೆರಿಗೆಯನ್ನು ಹಂಚುವಂತಿತ್ತು. ಪ್ರಸಕ್ತ ಹದಿನಾಲ್ಕನೆ ನಿಯೋಗದ ಪ್ರಕಾರ ತೆರಿಗೆ ಹಂಚಿಕೆ ನಡೆಯುತ್ತಿದ್ದು, ಈ ನಿಯೋಗವು ರಾಜ್ಯಗಳಿಗೆ ಹಿಂದಿಗಿಂತ ಕೊಂಚ ಹೆಚ್ಚಿನ ಹಣವನ್ನು ಹಂಚಿದೆ. ಆದರೆ ಕೇಂದ್ರ ಪ್ರಾಯೋಜಿತ ಯೋಜನೆಗಳು ಅಂತ ಏನಿದ್ದವೋ ಅವುಗಳಿಗೆ ಅನುದಾನ ಕಡಿತಗೊಳಿಸಿ ಈ ಕೈಯಲ್ಲಿ ಕೊಟ್ಟು, ಆ ಕೈಯಲ್ಲಿ ಇಸಿದುಕೊಳ್ಳುವ ಕೆಲಸವೂ ಆಗಿದೆ. ಆದರೂ ರಾಜ್ಯವೊಂದು ಯಾವ ಆದ್ಯತೆಗೆ ತನ್ನ ಪಾಲಿನ ಹಣ ಖರ್ಚು ಮಾಡಬೇಕು ಎಂದು ನಿರ್ಧರಿಸುವ ವಿಷಯದಲ್ಲಿ ಹಿಂದಿಗಿಂತ ಕೊಂಚ ಹೆಚ್ಚು ಅವಕಾಶವನ್ನು ಹದಿನಾಲ್ಕನೆ ಆಯೋಗ ರಾಜ್ಯಗಳಿಗೆ ನೀಡಿತ್ತು. ಆದರೆ ಅದರ ಲಾಭ ಕೊಂಚವಾದರೂ ಅನುಭವಿಸುವ ಮುನ್ನ ಜಿ.ಎಸ್.ಟಿ. ತೆರಿಗೆ ಕಾಯ್ದೆ ಜಾರಿಯಾಯಿತು.

ಒಂದು ದೇಶ, ಒಂದು ತೆರಿಗೆ ಅನ್ನುವ ಹೆಸರಲ್ಲಿ ಕೇಳಲು ಆಕರ್ಷಕವಾಗಿ ಬಂದ ಈ ತೆರಿಗೆ ರಾಜ್ಯಗಳಿಗೆ ಚೂರುಪಾರು ಇದ್ದ ತೆರಿಗೆ ಸಂಗ್ರಹದಲ್ಲಿನ ಸ್ವಾಯತ್ತೆಯನ್ನು ಕಿತ್ತುಕೊಂಡು, ಕೇಂದ್ರ ಸರ್ಕಾರವೇ ಬಹುಪಾಲು ನಿಯಂತ್ರಿಸುವ ಜಿ.ಎಸ್.ಟಿ. ಕೌನ್ಸಿಲ್ ಅನ್ನುವ ಮಂಡಳಿಯ ಮರ್ಜಿಗೆ ರಾಜ್ಯಗಳನ್ನು ಕಟ್ಟಿಹಾಕಿದೆ. ಈಗ ಕುಸಿದಿರುವ ಆರ್ಥಿಕ ಬೆಳವಣಿಗೆ ದರ ಕೇಂದ್ರದ ತೆರಿಗೆ ಸಂಗ್ರಹದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತಿದೆ. ಅದರ ಪರಿಣಾಮವಾಗಿ ‘ನೇರ’ ತೆರಿಗೆಯಿಂದ ಹಿಡಿದು ಜಿ.ಎಸ್.ಟಿ. ತರಹದ ‘ವಾರೆ’ ತೆರಿಗೆಯವರೆಗೆ ಕೇಂದ್ರ ಸರ್ಕಾರ ಸಂಗ್ರಹ ಮಾಡಬಹುದಾದ ತೆರಿಗೆಯ ಪ್ರಮಾಣದಲ್ಲಿ ಇಳಿಕೆಯಾಗುವ ಸೂಚನೆಗಳಿವೆ. ಹೀಗಾದಾಗ ಅದಕ್ಕೆ ತಕ್ಕಂತೆ ರಾಜ್ಯಗಳಿಗೆ ದಕ್ಕುವ ತೆರಿಗೆ ಪಾಲು ಕಿರಿದಾಗುತ್ತದೆ.

ಒಂದು ಸರ್ಕಾರದ ಪ್ರಭುತ್ವಕ್ಕೆ ನ್ಯಾಯಸಮ್ಮತ ಅಧಿಕಾರ ಒದಗುವುದು ಅದಕ್ಕೆ ಇರುವ ತೆರಿಗೆ ವಿಧಿಸುವ ಹಕ್ಕಿನಿಂದಲೇ. ಅದು ಮೊಟಕಾದಾಗ ರಾಜ್ಯವೊಂದು ವೈಭವೀಕರಿಸಿದ ಮುನ್ಸಿಪಾಲಿಟಿಯಂತೆ ಭಾಸವಾದರೆ ಅದರಲ್ಲಿ ಅಚ್ಚರಿಯೇನಿಲ್ಲ.

ಶತಮಾನದ ದೊಡ್ಡ ನೆರೆಯಲ್ಲಿ ಸಿಲುಕಿ ಅಪಾರ ಹಾನಿ ಕಂಡಿರುವ ಕರ್ನಾಟಕಕ್ಕೆ ಇನ್ನೆರಡು ವರ್ಷ ತೆರಿಗೆಯ ಮೂಲಕ ದೊಡ್ಡ ಮಟ್ಟದಲ್ಲಿ ಸಂಪನ್ಮೂಲ ಹೊಂದಿಸಿಕೊಳ್ಳುವುದು ಬಹಳ ಕಷ್ಟವಾಗಲಿದೆ. ನಮ್ಮ ಸಂದರ್ಭಕ್ಕೆ, ನಮ್ಮ ಕಷ್ಟ-ಸುಖಕ್ಕೆ ಬೇಕಾದಂತೆ ಹೊಸತೊಂದು ತೆರಿಗೆಯನ್ನು ವಿಧಿಸುವುದೋ ಇಲ್ಲವೇ ಇರುವ ತೆರಿಗೆ ಪ್ರಮಾಣವನ್ನು ಬದಲಾಯಿಸುವುದೋ ಜಿ.ಎಸ್.ಟಿ. ದೆಸೆಯಿಂದ ಈಗ ಸಾಧ್ಯವಿಲ್ಲವಾಗಿದೆ. ಒಂದು ಸರ್ಕಾರದ ಪ್ರಭುತ್ವಕ್ಕೆ ನ್ಯಾಯಸಮ್ಮತ ಅಧಿಕಾರ ಒದಗುವುದು ಅದಕ್ಕೆ ಇರುವ ತೆರಿಗೆ ವಿಧಿಸುವ ಹಕ್ಕಿನಿಂದಲೇ. ಅದು ಮೊಟಕಾದಾಗ ರಾಜ್ಯವೊಂದು ವೈಭವೀಕರಿಸಿದ ಮುನ್ಸಿಪಾಲಿಟಿಯಂತೆ ಭಾಸವಾದರೆ ಅದರಲ್ಲಿ ಅಚ್ಚರಿಯೇನಿಲ್ಲ.

ಇದೆಲ್ಲದಕ್ಕಿಂತ ಗಂಭೀರವಾಗಿ ರಾಜ್ಯಕ್ಕೆ ಎದುರಾಗಿರುವ ಆತಂಕವೆಂದರೆ ಶೀಘ್ರದಲ್ಲೇ ಹೊರಬರಲಿರುವ ಹದಿನೈದನೆ ಹಣಕಾಸು ಆಯೋಗದ ವರದಿ. ತೆರಿಗೆ ಹಂಚಲು ಅದು ಬಳಸುವ ಮಾನದಂಡಗಳಲ್ಲಿ 1971ರ ಜನಗಣತಿಯ ಬದಲು 2011ರ ಜನಗಣತಿ ಬಳಸುವಂತೆ ಕೇಂದ್ರವು ಅದಕ್ಕೆ ನಿರ್ದೇಶನ ನೀಡಿದೆ. ಇದು ಜನಸಂಖ್ಯೆ ನಿಯಂತ್ರಣದತ್ತ ಪ್ರಾಮಾಣಿಕವಾಗಿ ದುಡಿದ ದಕ್ಷಿಣದ ರಾಜ್ಯಗಳಿಗೆ ದೊಡ್ಡ ಹೊಡೆತ ಕೊಟ್ಟರೆ, ಜನಸಂಖ್ಯೆಯ ವಿಪರೀತ ಬೆಳವಣಿಗೆಯನ್ನು ಕಾಣುತ್ತಿರುವ ಉತ್ತರದ ರಾಜ್ಯಗಳಿಗೆ ಬಹುಮಾನದ ರೂಪದಲ್ಲಿ ಇನ್ನಷ್ಟು ತೆರಿಗೆ ಸಂಪನ್ಮೂಲ ನೀಡಲಿದೆ.

ಟಿ.ಆಫ್.ಆರ್. ಕುಸಿತ

ಒಂದು ಸಮಾಜದ ಜನಸಂಖ್ಯೆಯ ಬೆಳವಣಿಗೆ ದರ ಏರದೇ ಇಳಿಯದೇ ಸಮತೋಲನ ಸಾಧಿಸಲು ಇರಬೇಕಾದ ಟಿ.ಎಫ್.ಆರ್. ಪ್ರಮಾಣ 2.1 ಅನ್ನುತ್ತೆ ವಿಶ್ವಸಂಸ್ಥೆ. ಇದರ ಅರ್ಥ ಒಂದು ಕುಟುಂಬದಲ್ಲಿ ಹೆಣ್ಣೊಬ್ಬಳು ಎರಡು ಮಕ್ಕಳಿಗೆ ಜನ್ಮ ಕೊಟ್ಟಲ್ಲಿ ಅಲ್ಲಿ ಜನಸಂಖ್ಯೆಯ ಬೆಳವಣಿಗೆ ಸಮತೋಲನದ ಮಟ್ಟದಲ್ಲಿದೆ ಎಂದು. ಕರ್ನಾಟಕವೂ ಸೇರಿದಂತೆ ದಕ್ಷಿಣದ ಎಲ್ಲ ರಾಜ್ಯಗಳು ಈಗಾಗಲೇ ಈ ಮಟ್ಟಕ್ಕಿಂತ ಕೆಳಗೆ ತಮ್ಮ ಟಿ.ಎಫ್.ಆರ್. ಪ್ರಮಾಣ ಹೊಂದಿವೆ. ಉತ್ತರದ ಹಿಂದಿ ಭಾಷಿಕ ರಾಜ್ಯಗಳಲ್ಲಿ ಇದು ಅತೀ ಹೆಚ್ಚಿನ ಪ್ರಮಾಣದಲ್ಲಿದ್ದು ಇನ್ನು ಮುಂದಿನ ಇಪ್ಪತ್ತೈದು ವರ್ಷಗಳ ಕಾಲದಲ್ಲಿ ಅತೀ ಹೆಚ್ಚಿನ ಜನಸಂಖ್ಯೆಯ ಏರಿಕೆ ಈ ರಾಜ್ಯಗಳಿಂದಲೇ ಆಗಲಿದೆ.

ಕುಸಿಯುತ್ತಿರುವ ಟಿ.ಎಫ್.ಆರ್. ಕರ್ನಾಟಕದಲ್ಲೇ ಕನ್ನಡಿಗರ ಎಣಿಕೆಯನ್ನು ವರ್ಷವರ್ಷಕ್ಕೂ ಕಡಿಮೆ ಮಾಡುವ ಅಪಾಯ ತಂದಿದೆ. ಜೊತೆಗೆ ಕರ್ನಾಟಕದಲ್ಲಿನ ಆರ್ಥಿಕ ಚಟುವಟಿಕೆಗಳು, ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ಜನಸಂಖ್ಯೆಯ ಸ್ಫೋಟದ ಸಮಸ್ಯೆ ಎದುರಿಸುತ್ತಿರುವ ರಾಜ್ಯಗಳಿಂದ ಮಿತಿಯಿರದ ಪ್ರಮಾಣದ ವಲಸೆಗೆ ಕಾರಣವಾಗಿವೆ; ಕರ್ನಾಟಕಕ್ಕಿರುವ ಕನ್ನಡದ ಜನಲಕ್ಷಣವನ್ನೇ ತಿದ್ದುವ ಅಪಾಯ ಕಾಣುತ್ತಿದೆ. ಇದರತ್ತ ಇನ್ನೂ ಯಾರ ಗಮನವೂ ಹರಿದಿಲ್ಲ. ನಮ್ಮ ಸರ್ಕಾರಗಳು ಈಗಲೂ ಜನಸಂಖ್ಯೆ ನಿಯಂತ್ರಣದ ಭಾಷೆಯನ್ನೇ ಮಾತನಾಡುತ್ತಿವೆ.

ಕಡಿತಗೊಳ್ಳುವ ಸಂಸದರ ಸಂಖ್ಯೆ

ಜನಸಂಖ್ಯೆಯ ಕುಸಿತದ ಬೆನ್ನಲ್ಲೇ ನಮಗೆ ಬಂದೆರಗಲಿರುವ ಇನ್ನೊಂದು ಸಮಸ್ಯೆಯೆಂದರೆ ನಮ್ಮ ಸಂಸದರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ. ಕರ್ನಾಟಕಕ್ಕೆ ಈಗ 28 ಸಂಸದರಿದ್ದಾರೆ. ಅವರಿಂದ ಕರ್ನಾಟಕಕ್ಕೆ ಎಷ್ಟು ಪ್ರಯೋಜನವಾಗಿದೆ ಅನ್ನುವುದು ಬೇರೆ ಪ್ರಶ್ನೆ. ಆದರೆ ಕರ್ನಾಟಕವನ್ನು ದೆಹಲಿಯಲ್ಲಿ ಪ್ರತಿನಿಧಿಸಲು ಇಂದು ನಮ್ಮ ಬಳಿ 28 ಜನರಿದ್ದಾರೆ. ನಮ್ಮ ಲೋಕಸಭೆಯ ಪ್ರತಿನಿಧಿತ್ವ ಜನಸಂಖ್ಯೆಯಾಧಾರಿತವಾದದ್ದು. ಯಾವ ರಾಜ್ಯದ ಜನಸಂಖ್ಯೆ ಹೆಚ್ಚಿದೆಯೋ ಅವರಿಗೆ ಹೆಚ್ಚಿನ ಪ್ರತಿನಿಧಿತ್ವ, ಯಾರಿಗೆ ಕಡಿಮೆ ಇದೆಯೋ ಅವರಿಗೆ ಕಡಿಮೆ ಪ್ರತಿನಿಧಿತ್ವ ಅನ್ನುವ ಸ್ವರೂಪದಲ್ಲಿ ಅದು ಇದೆ.

ಜನಸಂಖ್ಯೆ ನಿಯಂತ್ರಣಕ್ಕೆ ಒತ್ತು ಕೊಡಬೇಕು ಅನ್ನುವ ಕಾರಣಕ್ಕೆ ಪ್ರತಿನಿಧಿತ್ವದ ಪ್ರಮಾಣವನ್ನು 1971ರ ಜನಗಣತಿಯ ಆಧಾರದ ಮೇಲೆ ಮಾಡಲಾಗಿತ್ತು. ಅಲ್ಲಿಂದಾಚೆಗೆ ಅದನ್ನು ಬದಲಾಯಿಸುವ ಕೆಲಸಕ್ಕೆ ಕೈಹಾಕುವ ಪ್ರಯತ್ನಗಳಾದರೂ ತಮಿಳುನಾಡಿನಂತಹ ರಾಜ್ಯದ ಪ್ರತಿರೋಧದಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಆದರೆ ಈಗ 2025ಕ್ಕೆ ಹೊಸ ಜನಗಣತಿಯ ಆಧಾರದ ಮೇಲೆ ರಾಜ್ಯವೊಂದರ ಪ್ರತಿನಿಧಿತ್ವ ನಿರ್ಧರಿಸುವ ಚರ್ಚೆಗಳಾಗುತ್ತಿವೆ. ಹಾಗೇನಾದರೂ ಆದಲ್ಲಿ ಜನಸಂಖ್ಯೆಯ ಕುಸಿತ ಕಾಣುತ್ತಿರುವ ಕರ್ನಾಟಕದಂತಹ ರಾಜ್ಯ ನಾಲ್ಕರಿಂದ ಐದು ಲೋಕಸಭೆ ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಅದೇ ಹೊತ್ತಲ್ಲಿ ಜನಸಂಖ್ಯೆಯ ಸ್ಫೋಟ ಎದುರಿಸುತ್ತಿರುವ ಉತ್ತರ ಪ್ರದೇಶದಂತಹ ರಾಜ್ಯಕ್ಕೆ ಹತ್ತಕ್ಕೂ ಹೆಚ್ಚು ಸ್ಥಾನಗಳು ಹೆಚ್ಚುವರಿಯಾಗಿ ದೊರೆಯಲಿವೆ. ಹಿಂದಿನಿಂದಲೂ ದೆಹಲಿಯ ಸರ್ಕಾರದ ದಾರಿ ಹಿಂದಿ ಭಾಷಿಕ ರಾಜ್ಯಗಳ ಮೂಲಕವೇ ಸಾಗಿದೆ. ಈಗ ಹೊಸತಾದ ಡಿಲಿಮಿಟೇಶನ್ ಅದನ್ನು ಇನ್ನಷ್ಟು ಗಟ್ಟಿಗೊಳಿಸುವುದರ ಜೊತೆ ಹಿಂದಿಯೇತರ ರಾಜ್ಯಗಳ ದನಿಯನ್ನು ಮತ್ತಷ್ಟು ಉಡುಗಿಸಲಿದೆ. ಎಂದಿನಂತೆಯೇ ಕರ್ನಾಟಕದಲ್ಲಿ ಈ ಬಗ್ಗೆ ಒಂದು ಸಣ್ಣ ಚರ್ಚೆ ಕೂಡ ಮಾಧ್ಯಮಗಳಲ್ಲಿ ನಡೆಯುತ್ತಿಲ್ಲ.

ಹೈಕಮಾಂಡ್ ರಾಜಕೀಯ ಸಂಸ್ಕೃತಿ

ನಮ್ಮೆಲ್ಲ ಸಮಸ್ಯೆಗಳಿಗೆ ಕಳಶವಿಟ್ಟಂತೆ ನಮ್ಮ ರಾಜಕಾರಣ ಸಂಪೂರ್ಣವಾಗಿ ದೆಹಲಿ ಹೈಕಮಾಂಡ್ ಹಿಡಿತದಲ್ಲಿ ಗಟ್ಟಿಯಾಗಿ ಕೂತಿದೆ. ತಮಿಳುನಾಡು, ಆಂಧ್ರ, ತೆಲಂಗಾಣದಂತಹ ಪಕ್ಕದ ರಾಜ್ಯಗಳಲ್ಲಿ ಅಲ್ಲಿನ ಜನರು ಸ್ಥಳೀಯ ಪಕ್ಷಗಳನ್ನೇ ಆಯ್ಕೆ ಮಾಡಿಕೊಂಡು ತಮ್ಮ ಜನರಿಗೆ ಹೆಚ್ಚು ಉತ್ತರದಾಯಿತ್ವ ಇರುವ ಸ್ಥಳೀಯವಾದ ಹೈಕಮಾಂಡ್ ಹುಟ್ಟು ಹಾಕಿಕೊಂಡಿದ್ದಾರೆ. ಇದರ ಪರಿಣಾಮ ಅವರಿಗೆ ದೆಹಲಿಯಲ್ಲಿ ಹೆಚ್ಚು ಬಾರ್ಗೇನಿಂಗ್ ಶಕ್ತಿ ಸಿಕ್ಕಿದೆ. ಆದರೆ ಹಿಂದೆ ನೆಹರೂ, ಇಂದಿರಾಗಾಂಧಿಯವರ ಮುಖ ನೋಡಿಯೋ, ಇಲ್ಲ ಈಗ ಮೋದಿಯವರ ಮುಖ ನೋಡಿಯೋ ಮತ ಹಾಕುವ ನಮ್ಮ ರಾಜ್ಯದಲ್ಲಿ ಸಹಜವಾಗಿಯೇ ದೆಹಲಿಯಲ್ಲಿ ನಮಗೆ ಸಿಗಬೇಕಿರುವ ಬಾರ್ಗೇನಿಂಗ್ ಶಕ್ತಿ ಸಿಕ್ಕಿಲ್ಲ. ಮಹದಾಯಿಯಿಂದ ಕಾವೇರಿವರೆಗೆ, ತೆರಿಗೆ ಹಂಚಿಕೆಯಿಂದ ನೆರೆ ಪರಿಹಾರದವರೆಗೆ, ಕೇಂದ್ರ ಸರ್ಕಾರಿ ಉದ್ಯೋಗ ನೇಮಕಾತಿಗಳಿಂದ ಭಾಷಾ ಹೇರಿಕೆಯವರೆಗೆ ನಮ್ಮ ಯಾವ ಸಮಸ್ಯೆಗಳು ದೆಹಲಿಯ ಕಿವಿ ತಲುಪುವುದೇ ಕಡಿಮೆ. ಇದಕ್ಕೆ ನೇರ ಕಾರಣ ನಾವು ಆಯ್ದುಕೊಳ್ಳುತ್ತಿರುವ ರಾಜಕೀಯದ ಮಾದರಿಯೆಂದರೆ ತಪ್ಪಾಗದು.

ಯುವ ತಲೆಮಾರಿನ ಕನ್ನಡಿಗರಲ್ಲಿ ಈ ಬಗ್ಗೆ ಸಾಕಷ್ಟು ಅರಿವು ಮೂಡುತ್ತಿದೆ ಮತ್ತು ಅದರ ಪರಿಣಾಮ ಕರ್ನಾಟಕದ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಲೇಬೇಕಾದ ಒತ್ತಡ ನಮ್ಮ ಮೂರೂ ಪಕ್ಷಗಳ ರಾಜಕಾರಣಿಗಳ ಮೇಲೆ ಉಂಟಾಗುತ್ತಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಈಗ ಸ್ಪಷ್ಟವಾಗಿ ಗುರುತಿಸಬಹುದು. ಇದು ಮುಂದೊಂದು ದಿನ ಕರ್ನಾಟಕದ ಪರವಾದ ಒಂದು ರಾಜಕೀಯ ಶಕ್ತಿಯ ಉದಯಕ್ಕೆ ಕಾರಣವಾದರೆ ಈ ಹೈಕಮಾಂಡ್ ರಾಜಕಾರಣದ ಅಬ್ಬರಕ್ಕೆ ಕೊಂಚ ಕಡಿವಾಣ ಬೀಳಬಹುದು ಮತ್ತು ಅದು ಕೊಡುವ ರಾಜಕೀಯ ಶಕ್ತಿ ನಮ್ಮ ಸಮಸ್ಯೆಗಳ ಪರಿಹಾರಕ್ಕೆ ನೆರವೂ ನೀಡಬಹುದು.

ಕನ್ನಡಿಗರು ಹಿಂದೆ ಅರ್ಧ ಭಾರತವನ್ನು ಆಳಿದವರು. ಹಾಗೇ ಆಳಲು ಕಾರಣ ಗಟ್ಟಿಯಾಗಿದ್ದ ನಮ್ಮ ರಾಜಕೀಯ ನಾಯಕತ್ವ. ಈಗ ದೆಹಲಿ ನಾಯಕರ ಮುಂದೆ ನಿಲ್ಲಲು ಹೆದರುವ ನಮ್ಮ ರಾಜಕಾರಣಿಗಳನ್ನು ಕಂಡಾಗ ಹಿಂದಿನ ನಮ್ಮ ಹಿರಿಯರ ಸಾಧನೆಯೆಲ್ಲ ಒಂದು ಕನಸೇ ಅನ್ನಿಸುತ್ತದೆ. ಆದರೂ ನಿರಾಶರಾಗಬೇಕಿಲ್ಲ, ಯಾಕೆಂದರೆ ಭರವಸೆಯ ಮೇಲೆ ಬದುಕು ನಿಂತಿದೆ.

*ಲೇಖಕರು ಬೆಂಗಳೂರಿನವರು; ನ್ಯಾಶನಲ್ ಲಾ ಸ್ಕೂಲ್ ನಲ್ಲಿ ಪಬ್ಲಿಕ್ ಪಾಲಿಸಿ ಮೇಲೆ ಮಾಸ್ಟರ್ಸ್ ಓದುತ್ತಿರುವ ವಿದ್ಯಾರ್ಥಿ.

Leave a Reply

Your email address will not be published.