ಒಗ್ಗರಣೆ ಲೋಕ

ಸಹನಾ ಕಾಂತಬೈಲು

ಅಡುಗೆಯಲ್ಲಿ ಮಾತ್ರವಲ್ಲ, ಸಾಹಿತ್ಯ ಸೃಷ್ಟಿಯಲ್ಲೂ ಹದವರಿತು ಒಗ್ಗರಣೆ ಕೊಡುವುದನ್ನು ತಿಳಿದಿರಬೇಕಾಗುತ್ತದೆ. ಸಾಹಿತ್ಯದಲ್ಲಿ ಕವಿಗಳು ಒಗ್ಗರಣೆ ಹಾಕುವಷ್ಟು ಇನ್ಯಾರೂ ಹಾಕುವುದಿಲ್ಲ. ಒಬ್ಬ ಸಾಮಾನ್ಯ ರೂಪಿನ ಹೆಣ್ಣನ್ನೂ ಕವಿ ಇಂದುಮುಖಿ, ಚಂದಿರವದನೆ, ಅಪ್ಸರೆ, ಸುರಸುಂದರಿ ಹೀಗೆಲ್ಲಾ ಕರೆಯುವುದು ಒಗ್ಗರಣೆ ಹಾಕುವುದಲ್ಲದೆ ಮತ್ತೇನು?

`ಊಟಕ್ಕೆ ಆಯ್ತಾ?’ ಗಂಡನ ಪ್ರಶ್ನೆ. `ಒಗ್ಗರಣೆ ಹಾಕಿದರೆ ಆಯಿತುನನ್ನ ಉತ್ತರ. ಇದು ಹೆಚ್ಚುಕಡಿಮೆ ದಿನಾ ನನ್ನ ಮನೆಯಲ್ಲಿ ನಮ್ಮಿಬ್ಬರ ನಡುವೆ ಮಧ್ಯಾಹ್ನ ನಡೆಯುವ ಸಂಭಾಷಣೆ. ಬಹುಶಃ ಎಲ್ಲರ ಮನೆಯಲ್ಲೂ ನಡೆಯುವ ಸಂಭಾಷಣೆ. ಹೌದು, ಮಾಡಿದ ಪದಾರ್ಥಗಳಿಗೆ ಒಗ್ಗರಣೆ ಹಾಕಿದಾಗಲೇ ಅಡುಗೆ ಪೂರ್ಣವಾಗುವುದು. ಅಡುಗೆಗೂ ಒಗ್ಗರಣೆಗೂ ಅವಿನಾಭಾವ ಸಂಬಂಧ. ಹಾಗೆಂದು ಒಗ್ಗರಣೆಯೇ ಅಡುಗೆ ಅಲ್ಲ. ಅದು ಅಡುಗೆಗೆ ಪರಿಮಳ ಕೊಡುತ್ತದೆ. ಅಡುಗೆಯ ರುಚಿ ಹೆಚ್ಚಿಸುತ್ತದೆ.

ಒಗ್ಗರಣೆಯಲ್ಲೂ ಎಷ್ಟೊಂದು ವಿಧ! ಇಂಗಿನ ಒಗ್ಗರಣೆ, ಜೀರಿಗೆ ಒಗ್ಗರಣೆ, ಮೆಂತೆ ಒಗ್ಗರಣೆ, ತುಪ್ಪದ ಒಗ್ಗರಣೆ, ಸಾಸಿವೆ ಒಗ್ಗರಣೆ, ಬೆಳ್ಳುಳ್ಳಿ ಒಗ್ಗರಣೆ, ಉದ್ದಿನಬೇಳೆ ಒಗ್ಗರಣೆ, ನೀರುಳ್ಳಿ ಒಗ್ಗರಣೆ, ಮೆಂತೆ ಒಗ್ಗರಣೆಮಾಡಿದ ಅಡುಗೆ ಪರಿಪೂರ್ಣವಾಗಬೇಕಾದರೆ ಒಗ್ಗರಣೆ ಹಾಕಲೇಬೇಕು. ಹಾಗೆಂದು ಎಲ್ಲ ಪಾಕಕ್ಕೂ ಒಂದೇ ಬಗೆಯ ಒಗ್ಗರಣೆ ಸರಿಹೊಂದುವುದಿಲ್ಲ. ಇಂತಿಂಥ ವ್ಯಂಜನಕ್ಕೆ ಇಂತಿಂಥ ಒಗ್ಗರಣೆ ಎಂಬ ನಿಯಮವನ್ನು ಮಾಡಿದ್ದಾರೆ ಪಾಕಶಾಸ್ತ್ರಜ್ಞರು.

ಸಾಮಾನ್ಯವಾಗಿ ತಂಬುಳಿಗಳಿಗೆ ಜೀರಿಗೆ ಒಗ್ಗರಣೆ ಕೊಡುತ್ತಾರೆ. ಚಟ್ನಿಗೆ ಬೆಳ್ಳುಳ್ಳಿ ಒಗ್ಗರಣೆ, ಸಾರಿಗೆ ಇಂಗಿನ ಒಗ್ಗರಣೆ, ಸಾಂಬಾರಿಗೆ ಸಾಸಿವೆ ಒಗ್ಗರಣೆ ಹೀಗೆ. ನಮ್ಮ ರುಚಿಗೆ ತಕ್ಕಂತೆ ಇದನ್ನು ಬದಲಾಯಿಸಲೂ ಬಹುದು. ಕೆಲವು ಪದಾರ್ಥಗಳಿಗೆ ತುಪ್ಪದಿಂದ ಒಗ್ಗರಿಸಿದರೆ ರುಚಿ ಹೆಚ್ಚು. ಯಾವ ವಿಧದ ಒಗ್ಗರಣೆಯೇ ಆಗಲಿ ಕರಿಬೇವಂತೂ ಇರಲೇ ಬೇಕು. ಒಗ್ಗರಣೆಯಲ್ಲಿ ಕರಿಬೇವಿನದ್ದೇ ಪ್ರಧಾನ ಪಾತ್ರ. ಇಡೀ ಅಡುಗೆಯ ಪರಿಮಳ ಹೆಚ್ಚಿಸುವುದೇ ಅದು. ಸಾಸಿವೆ ಹೊಟ್ಟಿಸಿ ಕರಿಬೇವಿನ ಎಸಳು ಹಾಕಿದರೇನೇ ಘಮ್ಮಂತ ಪರಿಮಳ ಹೊರಹೊಮ್ಮುವುದು. ವಿಶೇಷವೆಂದರೆ ಇಂಥ ಮಹತ್ವದ ಕರಿಬೇವನ್ನು ಯಾರೂ ತಿನ್ನುವುದಿಲ್ಲ. ಅದರ ಸ್ಥಾನ ಎಲೆಯ ಮೂಲೆಯಲ್ಲಿ. ಬಳಸಿ ಬಿಸಾಡುವ ನಮ್ಮ ಈಗಿನ ಸಂಸ್ಕøತಿಗೆ ಅದೊಂದು ಅದ್ಭುತ ರೂಪಕ.

ಕೆಲವರು ಮಾಡುವ ಅಡುಗೆ ಪರಿಮಳ ಉಂಡು ಕೈ ತೊಳೆದ ಮೇಲೂ ಹೋಗುವುದಿಲ್ಲ. ಇದಕ್ಕೆ ಕಾರಣ ಅವರು ಹಾಕುವ ಒಗ್ಗರಣೆ. ನನ್ನ ಅಮ್ಮನ ಬಸಳೆ ಸಾಂಬಾರು ಲೋಕ ಪ್ರಸಿದ್ಧಿ. ಅವಳು ಒಂದು ಡಜನ್ ಬೆಳ್ಳುಳ್ಳಿ ಎಸಳನ್ನು ಸಿಪ್ಪೆ ಬಿಡಿಸಿ ಸಾಸಿವೆ ಜೊತೆ ಕುದಿವ ಬಸಳೆ ಸಾಂಬಾರಿಗೆ ಒಗ್ಗರಣೆ ಕೊಟ್ಟಳೆಂದರೆ ಅದರ ಘಮ ಅಂಗಳ ದಾಟಿ ಹೋಗುವುದು. ನಾನು ಚಿಕ್ಕವಳಿರುವಾಗ ಅಮ್ಮ ಮುಟ್ಟಾದ ದಿನಗಳಲ್ಲಿ ಅಜ್ಜಿಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡಬೇಕಿತ್ತು. ಅಜ್ಜಿ ಮಾಡಿಟ್ಟ ಪದಾರ್ಥಗಳಿಗೆ ಒಗ್ಗರಣೆ ಕೊಡುವ ಕೆಲಸ ನನ್ನದಾಗಿತ್ತು.

ಗ್ಯಾಸ್ ಸ್ಟವ್ ಇರದಿದ್ದ ಕಾಲ ಅದು. ಎಲ್ಲರ ಮನೆಯಲ್ಲೂ ಒಗ್ಗರಣೆ ಕೊಡಲೆಂದೇ ಒಗ್ಗರಣೆ ಸೌಟು ಎಂಬ ಉದ್ದ ಹಿಡಿಯುಳ್ಳ, ದಪ್ಪ ತಳದ ಕಬ್ಬಿಣದ ಸೌಟು ಇರುತ್ತಿತ್ತು. ಅದಕ್ಕೆ ಒಗ್ಗರಣೆ ಸಾಮಾನನ್ನು ಹಾಕಿ ನಿಗಿನಿಗಿ ಉರಿವ ಕೆಂಡದ ಮೇಲೆ ಅದನ್ನು ಇಟ್ಟು ಸಾಸಿವೆ ಸಿಡಿಸಿ ಒಗ್ಗರಣೆ ಹಾಕುತ್ತಿದ್ದದ್ದು ರೂಢಿ. ಒಮ್ಮೆ ಹೀಗೆ ಒಗ್ಗರಣೆ ಹಾಕುತ್ತಿರುವಾಗ ಅಜ್ಜಿಯಲ್ಲಿ ಕೇಳಿದೆ `ಅಜ್ಜೀ, ದಿನಾ ಅಡುಗೆಗೆ ಒಗ್ಗರಣೆ ಹಾಕಬೇಕೆಂದು ಏನು? ಅಪರೂಪಕ್ಕೆ ಹಾಕಿದರೆ ಸಾಕಲ್ಲವೇ?’ ಅಜ್ಜಿಯ ಪ್ರಕಾರ ಒಗ್ಗರಣೆ ಹಾಕದ ಪದಾರ್ಥವನ್ನು ಸೇವಿಸಲೇ ಬಾರದು. ಅಡುಗೆಯಲ್ಲಿದ್ದ ಕಲ್ಮಷವನ್ನು ಒಗ್ಗರಣೆ ತೆಗೆಯುತ್ತದೆ. ಹಿಂದೆ ಈಗಿನಂತೆ ಮಿಕ್ಸಿ ಇರಲಿಲ್ಲ. ರುಬ್ಬುವ ಕಲ್ಲಿನಲ್ಲ್ಲಿ ರುಬ್ಬುವುದು ಅನಿವಾರ್ಯವಾಗಿತ್ತು. ಹಾಗೆ ರುಬ್ಬುವಾಗ ಉಗುರಿನಲ್ಲಿರುವ ಕೊಳೆ ಅಥವಾ ಉಗುರು ಸವೆದು ಸೇರುವ ಅಪಾಯ ಇತ್ತು. ಇಂಥ ಕಶ್ಮಲಗಳನ್ನೆಲ್ಲ ಒಗ್ಗರಣೆ ಶುದ್ಧೀಕರಿಸುತ್ತದೆ ಎಂಬುದು ಹಿರಿಯರ ನಂಬಿಕೆ.

ಪಾಕ ಸಾಮ್ರಾಜ್ಯದಲ್ಲಿ ಒಗ್ಗರಣೆ ಹಾಕಬಾರದು ಎಂಬ ಅಡುಗೆಯೂ ಇದೆ ಎಂದು ನನಗೆ ಗೊತ್ತಾದದ್ದು ಕಳೆದ ಮಳೆಗಾಲದಲ್ಲಿ. ಕಾರಣ ಗೊತ್ತಿಲ್ಲ ನಮ್ಮ ಬ್ರಾಹ್ಮಣ ಸಮುದಾಯದಲ್ಲಿ ಅಣಬೆ ಸೇವನೆ ನಿಷಿದ್ಧ. ಬಹುಶಃ ಅದು ಕೊಳೆತ ಪದಾರ್ಥಗಳ ಮೇಲೆ ಬೆಳೆಯುವುದರಿಂದ ಮತ್ತು ಅದು ಸಸ್ಯ ಅಲ್ಲವಾದ್ದರಿಂದಲೋ ಏನೋ. ಆದರೆ ಅಣಬೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ನಾನು ಓದಿದ್ದೆ. ಮಳೆಗಾಲದಲ್ಲಿ ನಮ್ಮ ತೋಟದಲ್ಲಿ ಅದು ಹೆಡಿಗೆಗಟ್ಟಲೆ ಬೆಳೆಯುತ್ತದೆ. ಅದನ್ನೆಲ್ಲ ನಮ್ಮ ಮನೆಗೆ ಬರುವ ಕೂಲಿಯಾಳುಗಳೇ ಒಯ್ಯುವುದು.

ನನಗೂ ಒಮ್ಮೆ ಅಣಬೆ ಪದಾರ್ಥ ಮಾಡಬೇಕೆಂದೆನಿಸಿ ನನ್ನ ಕೆಲಸದವಳು ಅವಳ ಮನೆಗೆ ಒಯ್ಯುವಾಗ ನಾನು ಪಡಕೊಂಡು ಪಲ್ಯ ಮಾಡಿದೆ. ಚಟಪಟ ಎಂದು ಸಾಸಿವೆ ಸಿಡಿಸಿ ನೀರುಳ್ಳಿ ಒಗ್ಗರಣೆ ಕೊಟ್ಟೆ. ಅರ್ಧ ದಾರಿ ಸಾಗಿದ್ದ ಅವಳು ಒಗ್ಗರಣೆ ಪರಿಮಳಕ್ಕೆ ಓಡಿ ಬಂದು `ಅಣಬೆ ಪದಾರ್ಥಕ್ಕೆ ಒಗ್ಗರಣೆ ಕೊಟ್ಟದ್ದಾ?’ ಕೇಳಿದಳು. `ಹೌದು. ಏನೀಗಎಂದೆ. ಅವಳು ಉದ್ವಿಗ್ನಳಾಗಿ `ಅಣಬೆ ಪದಾರ್ಥಕ್ಕೆ ಒಗ್ಗರಣೆ ಹಾಕಲೇಬಾರದುಎಂದಳು. `ಒಗ್ಗರಣೆ ಹಾಕಿದರೆ ಅಣಬೆಗೆ ಕೋಪ ಬರುತ್ತದಂತೆ. ಎಣ್ಣೆ ಕಾಯಿಸಿ ಸಾಸಿವೆ ಸಿಡಿಸಿ ತನ್ನ ಮೇಲೆ ಹಾಕಿದ ಸಿಟ್ಟಲ್ಲಿ ಅದು ಈಗ ಇರುವ ಜಾಗದಲ್ಲಿ ಮುಂದಿನ ವರ್ಷ ಏಳದೆ ಎಲ್ಲೋ ದೂರದಲ್ಲಿ ಹೋಗಿ ಏಳುತ್ತದಂತೆ. ಹಾಗಾಗಿ ನಮಗೆ ಮುಂದೆ ಅಣಬೆ ಸಿಗಲಿಕ್ಕಿಲ್ಲಎಂದು ಚಿಂತಾಕ್ರಾಂತಳಾಗಿ ನುಡಿದಳು. ಮಾತಿಗೆ ವೈಜ್ಞಾನಿಕ ಹಿನ್ನೆಲೆ ಇದೆಯೋ, ಇಲ್ಲವೋ ಗೊತ್ತಿಲ್ಲ; ನಮ್ಮ ಊರಲ್ಲಂತೂ ಅಣಬೆ ಪದಾರ್ಥಕ್ಕೆ ಯಾರೂ ಒಗ್ಗರಣೆ ಹಾಕುವುದಿಲ್ಲ.

ಒಗ್ಗರಣೆ ಎನ್ನುವಾಗ ನನಗೆ ನನ್ನ ಚಿಕ್ಕಮ್ಮನ ನೆನಪಾಗುತ್ತಿದೆ. ಅವರಿಗೆ ಎಲ್ಲ ಕೆಲಸವೂ ಜಟ್ಪಟ್ ಆಗಬೇಕು. ಅಂತೆಯೇ ಅಡುಗೆ ಕೆಲಸವೂ. ದಿನಾ ಒಗ್ಗರಣೆ ಸಿಡಿಸುವುದು ಸಮಯ ಹಾಳು ಅದೂ ಅಲ್ಲದೆ ಪ್ರತೀ ಬಾರಿ ಒಗ್ಗರಣೆ ಕೊಟ್ಟಾಗಲೂ ಒಲೆಕಟ್ಟೆಗೆ ಸಿಡಿವ ಸಾಸಿವೆ, ಎಣ್ಣೆಯನ್ನು ಒರೆಸಿ ತೆಗೆಯುವ ಕೆಲಸ ಯಾರಿಗೆ ಆದೀತು ಎಂಬುದು ಅವರ ಭಾವನೆ. ಹಾಗೆಂದು ಒಗ್ಗರಣೆ ಹಾಕದೆ ಇರುವಂತೆಯೂ ಇಲ್ಲ. ಅದಕ್ಕೆ ಅವರು ಮಾಡುವ ಒಂದು ಉಪಾಯ ಹೀಗಿದೆ. ಅವರು ಒಂದು ಬಾಣಲೆಯಲ್ಲಿ ವಾರಕ್ಕಾಗುವಷ್ಟು ಸಾಸಿವೆ, ಒಣಮೆಣಸಿನ ತುಂಡು, ಕರಿಬೇವು ಎಸಳಿನ ಒಗ್ಗರಣೆಯನ್ನು ಸಿಡಿಸಿ ಅದನ್ನು ಒಂದು ಸ್ಟೀಲ್ ಡಬ್ಬದಲ್ಲಿ ಹಾಕಿಡುತ್ತಾರೆ. ಒಗ್ಗರಣೆ ಹಾಕಬೇಕಾದರೆ ವ್ಯಂಜನದ ಅಳತೆಗೆ ಅನುಸಾರವಾಗಿ ಅದರಿಂದ ಒಂದೆರಡು ಚಮಚ ತೆಗೆದು ಹಾಕುತ್ತಾರೆ.

ಒಗ್ಗರಣೆಗೆ ಸಂಬಂಧಿಸಿದಂತೆ ನನ್ನ ಪೇಟೆ ಗೆಳತಿ ಒಬ್ಬಳು ಈಚೆಗೆ ಹೇಳಿದ್ದನ್ನು ಕೇಳಿ ನನಗೆ ಆಶ್ಚರ್ಯವಾಯ್ತು. ಅದೆಂದರೆ ಈಗೀಗ ಕೆಲವು ಪೇಟೆವಾಸಿಗಳು ಅಡುಗೆಗೆ ಒಗ್ಗರಣೆ ಹಾಕುವುದನ್ನು ನಿಲ್ಲಿಸಿದ್ದಾರಂತೆ. ಒಗ್ಗರಣೆಯಲ್ಲಿ ಎಣ್ಣೆ ಅಂಶ ಇರುವುದರಿಂದ ಅದರ ಸೇವನೆ ಕೊಲೆಸ್ಟ್ರಾಲ್ ಅನ್ನು ಹೆಚ್ಚು ಮಾಡುತ್ತದಂತೆ. ನಿಲ್ಲಿಸಲಿ ಬಿಡಿ. ಅದರಿಂದ ನಷ್ಟ ಏನೂ ಇಲ್ಲ. ಆದರೆ ಶತಮಾನಗಳಿಂದ ಒಗ್ಗರಣೆ ಹಾಕಿದ ಅಡುಗೆ ಉಂಡ ನಮ್ಮ ತಾತಮುತ್ತಾತರು ಗಟ್ಟಿಮುಟ್ಟಾಗಿದ್ದರು; ಶತಾಯುಷಿಗಳಾಗಿದ್ದರು. ಹಾಗಾದರೆ ಅವರಿಗೆ ಬಾರದ ಕೊಲೆಸ್ಟ್ರಾಲ್ ಇಂದಿನವರಿಗೆ ಹೇಗೆ ಬಂತೋ ಗೊತ್ತಿಲ್ಲ.

ಒಗ್ಗರಣೆ ದೆಸೆಯಿಂದ ಊಟ ಮಾಡಲಿಕ್ಕಾಗದ ಉತ್ತರಕರ್ನಾಟಕದ ಮಿತ್ರರೊಬ್ಬರ ಕತೆಯನ್ನು ನಾನು ಇಲ್ಲಿ ಹೇಳಲೇಬೇಕು. ಅವರು ನಮ್ಮ ಮನೆಗೆ ಈಚೆಗೆ ಎರಡು ದಿನ ಇದ್ದು ಹೋಗಲೆಂದು ಪ್ರಥಮಬಾರಿಗೆ ಬಂದಿದ್ದರು. ಅತಿಥಿಯಲ್ಲಿ ದೇವರನ್ನು ಕಾಣುವ ನಾನು ಅವರಿಗಾಗಿ ಬಗೆಬಗೆ ಪಲ್ಯ, ಕೋಸಂಬರಿ, ಸಾರು, ಸಾಂಬಾರುಗಳನ್ನೆಲ್ಲ ಮಾಡಿದೆ. ನನ್ನ ಗಂಡ, ಮಕ್ಕಳು ಘಮಘಮಿಸುವ ತೆಂಗಿನೆಣ್ಣೆ ಒಗ್ಗರಣೆಗೆ ಮೂಗರಳಿಸಿ ಆಹಾ! ಎನ್ನುತ್ತ ಸುರಿದು ಉಣ್ಣುತ್ತಿದ್ದರೆ ಮಿತ್ರರು ತಿಂದ ಶಾಸ್ತ್ರ ಮಾಡುತ್ತಿದ್ದರು. ಎಲ್ಲರೂ ನಾನು ಮಾಡುವ ಅಡುಗೆಯನ್ನು ಕೊಂಡಾಡುವಾಗ ಇವರು ಮಾತ್ರ ಯಾಕೆ ಹೀಗೆ ಎಂದು ನನಗೆ ಚಿಂತೆಯಾಯಿತು. ಅವರು ಊರಿಗೆ ಹೊರಡುವಾಗ ಹೇಳಿದರು, `ಮುಂದಿನ್ ಸಲ ಬರುವಾಗ ನಾನು ಎಣ್ಣಿ ಪ್ಯಾಕೀಟ ಹಿಡಕೊಂಡ ಬರತೇನಿ. ನನಗ ನಿಮ್ಮ ಕೊಬರಿ ಎಣ್ಣೀ ವಗ್ಗರಣಿ ಅಡುಗಿ ಬಿಲ್ಕುಲ್ ಸೇರೂದಿಲ್ಲ. ಅದನ್ನ ತಿಂದರ ಹೊಟ್ಟಿ ತೊಳಸ್ತದ. ಅದ ತೇಗ ಬರತದ. ನಾವು ಕೊಬರಿ ಎಣ್ಣೀನ ತಲಿಗ ಮಾತ್ರ ಹಚ್ಚಿಗೋತೇವಿ. ಅಡುಗಿಗೆ ಶೇಂಗಾ ಎಣ್ಣಿ, ಸುರೇಪಾನದೆಣ್ಣಿ ಬಳಸ್ತೇವಿ‘. `ಆದರೆ ನಮಗೆ ಒಗ್ಗರಣೆಗೆ ತೆಂಗಿನೆಣ್ಣೆ ಬಿಟ್ಟು ಬೇರೆ ಎಣ್ಣ್ಣೆ ಹಿಡಿಸುವುದಿಲ್ಲಎಂದು ಹೇಳಬೇಕಿರುವ ನನ್ನ ಮಾತು ಯಾಕೋ ಗಂಟಲಲ್ಲೇ ಉಳಿಯಿತು.

ಇದು ನಾನು ಎಲ್ಲೋ ಓದಿದ್ದು. ಖ್ಯಾತ ಪತ್ರಕರ್ತ ಹಾಗೂ ಅಂಕಣಕಾರರಾದ ವೈಎನ್ಕೆ ಅವರು ದಿನಾ ಸಂಜೆ ಗುಂಡು ಹಾಕಲು ಹೋಗುತ್ತಿದ್ದರಂತೆ. ದೇವರ ತಲೆ ಮೇಲೆ ಹೂ ತಪ್ಪಿದರೂ ಅವರ ಗುಂಡು ಪಾರ್ಟಿ ತಪ್ಪುತ್ತಿರಲಿಲ್ಲವಂತೆ. ನಿತ್ಯ ಕುಡಿದು ಮುಗಿಸಿದ ಮೇಲೆ ಮನೆಗೆ ಹೋಗಲೆಂದು ಕಾರು ಹತ್ತುವ ಮೊದಲು ಮನೆಯ ಅಡುಗೆಯವನಿಗೆ ಕರೆ ಮಾಡಿ ಒಂದೇ ಒಂದು ಶಬ್ದ ಹೇಳುತ್ತಿದ್ದರಂತೆ. ಅದೆಂದರೆ `ಒಗ್ಗರಣೆ‘. ಅವರು ಬರುವಷ್ಟರಲ್ಲಿ ಅಡುಗೆಯವನು ಮಾಡಿದ ಪದಾರ್ಥಗಳಿಗೆ ಒಗ್ಗರಣೆ ಹಾಕಿ ಊಟದ ಟೇಬಲ್ ಮೇಲೆ ಜೋಡಿಸಿಡುತ್ತಿದ್ದನಂತೆ. ನಿಜ. ಆಗ ತಾನೇ ಹಾಕಿದ ಒಗ್ಗರಣೆ ಅಡುಗೆಯನ್ನು ತಾಜಾ ಆಗಿ ಕಾಣುವಂತೆ ಮಾಡುತ್ತದೆ. ಇದು ಒಮ್ಮೊಮ್ಮೆ ನಮ್ಮನ್ನು ಮೋಸ ಗೊಳಿಸುವುದೂ ಉಂಟು. ಹೇಗೆಂದರೆ ಹಾಳಾದ, ಕೊಳೆತ ತರಕಾರಿ ಬಳಸಿ ಮಾಡಿದ ಅಡುಗೆಗೆ ಭರ್ಜರಿ ಒಗ್ಗರಣೆ ಕೊಟ್ಟುಬಿಟ್ಟರೆ ಅದರ ಕಂಪು ಕೊಳೆತ ವಾಸನೆಯನ್ನು ಮರೆಮಾಚುತ್ತದೆ.

ಅಡುಗೆಯಲ್ಲಿ ಮಾತ್ರವಲ್ಲ, ಸಾಹಿತ್ಯ ಸೃಷ್ಟಿಯಲ್ಲೂ ಹದವರಿತು ಒಗ್ಗರಣೆ ಕೊಡುವುದನ್ನು ತಿಳಿದಿರಬೇಕಾಗುತ್ತದೆ. ಆಗಲೇ ಸಾಹಿತ್ಯಕ್ಕೊಂದು ಸ್ವಾದ. ನನಗೆ ಹಿರಿಯ ಕತೆಗಾರರೊಬ್ಬರು ಫೋನ್ ಮಾಡುವಾಗಲೆಲ್ಲಾ `ಕತೆ ಬರೆಯಿರಿ. ನಿಮಗೆ ಸಾಮಥ್ರ್ಯ ಇದೆಎನ್ನುತ್ತಿದ್ದರು. ಅವರು ಇಷ್ಟು ಒತ್ತಾಯಿಸುವಾಗ ಕತೆ ಬರೆಯದಿದ್ದರೆ ಹೇಗೆ? ನೋಡೇ ಬಿಡೋಣ ಎಂದು ನಾನು ಒಂದು ಕತೆ ಬರೆದು ಅವರಿಗೆ ಕಳಿಸಿದೆ. ಓದಿದ ಅವರು `ಹೀಗೆ ಬರೆದರೆ ಕತೆ ಆಗುವುದಿಲ್ಲ. ಇದಕ್ಕೆ ಒಂಚೂರು ಮಸಾಲೆ ಸೇರಿಸಿ ಒಗ್ಗರಣೆ ಹಾಕಬೇಕು. ಆಗ ಸ್ವಾರಸ್ಯಕರವಾಗಿರುತ್ತದೆ. ಇಲ್ಲದಿದ್ದರೆ ಬರಿ ವರದಿ ಆಗುತ್ತದೆಎಂದು ಹೇಳಿದರು. ಆಮೇಲೆ ಅವರು ನನಗೆ ಕತೆ ಬರೆಯಲು ಒತ್ತಾಯಿಸಲಿಲ್ಲವೆನ್ನಿ. ನನ್ನ ಪ್ರಕಾರ, ಸಾಹಿತ್ಯದಲ್ಲಿ ಕವಿಗಳು ಒಗ್ಗರಣೆ ಹಾಕುವಷ್ಟು ಇನ್ಯಾರೂ ಹಾಕುವುದಿಲ್ಲ. ಒಬ್ಬ ಸಾಮಾನ್ಯ ರೂಪಿನ ಹೆಣ್ಣನ್ನೂ ಕವಿ ಇಂದುಮುಖಿ, ಚಂದಿರವದನೆ, ಅಪ್ಸರೆ, ಸುರಸುಂದರಿ ಹೀಗೆಲ್ಲಾ ಕರೆಯುವುದು ಒಗ್ಗರಣೆ ಹಾಕುವುದಲ್ಲದೆ ಮತ್ತೇನು?

ಅಂದ್ಹಾಗೆ ಈಚೆಗೆ ನನ್ನ `ಆನೆ ಸಾಕಲು ಹೊರಟವಳುಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಪುಸ್ತಕ ಬಹುಮಾನ ಬಂತು. ಮುನ್ನುಡಿ ಬರೆದ ನಾಗೇಶ್ ಹೆಗಡೆಯವರಿಗೆ ಕರೆ ಮಾಡಿ ವಿಷಯ ತಿಳಿಸಿ `ನಿಮ್ಮ ಮುನ್ನುಡಿಯಿಂದಾಗಿಯೇ ಪುಸ್ತಕಕ್ಕೆ ಬಹುಮಾನ ಸಿಕ್ಕಿದ್ದು. ಚಂದದ ಮುನ್ನುಡಿ ಬರೆದಿದ್ದೀರಿಅಂದೆ. ಅದಕ್ಕೆ ಅವರು `ಪಾಕ ಚೆನ್ನಾಗಿದ್ದರೆ ಒಗ್ಗರಣೆಯೂ ಚೆನ್ನಾಗಿರುತ್ತದೆಎಂದರು.

ಕೆಲವರಿಗೆ ಮಾತಿನಲ್ಲಿ ಒಗ್ಗರಣೆ ಹಾಕುವ ಚಟ ಇರುತ್ತದೆ. ಇಂಥವರು `ಇಲಿ ಹೋದಲ್ಲಿ ಹುಲಿ ಹೋಯಿತುಎಂಬಂತೆ ಮಾತಾಡುತ್ತಾರೆ; ಇರುವ ಮಾತಿಗೆ ಇಲ್ಲದ್ದನ್ನು ಸೇರಿಸಿ ಹೇಳುತ್ತಾರೆ. ಇಂಥವರ ಬಾಯಿಗೆ ಸಿಕ್ಕಿದರೆ ಹೋಯಿತು. ಊಟದಲ್ಲಿ ಉಪ್ಪಿನಕಾಯಿ ಬಳಸುವಂತೆ ಮಾತಿನಲ್ಲಿ ಒಗ್ಗರಣೆ ಸೇರಿಸಿದರೆ ಹಾನಿಯಿಲ್ಲ. ಆದರೆ ಇತ್ತೀಚೆಗೆ ಸುದ್ದಿ, ಮಾಧ್ಯಮ ಯಾವುದನ್ನು ತೆಗೆದುಕೊಂಡರೂ ಒಗ್ಗರಣೆ ಸದ್ದೇ ಜಾಸ್ತಿಯಾಗಿದೆ. ಟಿವಿಯಲ್ಲಿ ಬರುವ ವಾರ್ತೆಯನ್ನು ಕೇಳುವಾಗ ನಮ್ಮ ತಲೆ ಕೆಟ್ಟು ಹೋಗುತ್ತದೆ. ಒಂದು ಸಣ್ಣ ಸುದ್ದಿಯನ್ನೂ ಒಗ್ಗರಣೆ ಹಾಕಿ ಅತಿರಂಜಿತ ಮಾಡಿ ಸುದ್ದಿಯ ಹಾದಿ ತಪ್ಪಿಸಿ ಬಿಡುತ್ತಾರೆ.

ಪರಿಮಳಕ್ಕೆ ಒಗ್ಗರಣೆ ಬೇಕು ನಿಜ. ಆದರೆ ವ್ಯಂಜನಕ್ಕಿಂತ ಒಗ್ಗರಣೆಯೇ ಜಾಸ್ತಿಯಾದರೆ ಹೇಗೆ?

Leave a Reply

Your email address will not be published.