ಒಡನಾಡಿಗಳು ಕಂಡತೆ ನಮ್ಮ ಅರಸು

ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡಿದ್ದ ಬಸವರಾಜು ಮೇಗಲಕೇರಿ ಈಗ ‘ವಾರ್ತಾಭಾರತಿ’ ಪತ್ರಿಕೆಯ ಬೆಂಗಳೂರು ಕಚೇರಿಯ ಸ್ಥಾನಿಕ ಸಂಪಾದಕರು. ವಾರ್ತಾಭಾರತಿಗೆ ಬರೆದ ಲೇಖನಮಾಲೆಯ ಸಂಗ್ರಹವನ್ನು ‘ನಮ್ಮ ಅರಸು’ ಶೀರ್ಷಿಕೆಯಲ್ಲಿ ಹೊರತರಲಾಗಿದೆ. ಅರಸು ವ್ಯಕ್ತಿತ್ವದ ಒಂದೊOದು ಮಗ್ಗುಲನ್ನು ಒಬ್ಬೊಬ್ಬರು ಅನಾವರಣಗೊಳಿಸುತ್ತಾ ಹೋಗುವ ಈ ಪುಸ್ತಕ ನಿಧಾನವಾಗಿ ಎಲ್ಲ ಮಗ್ಗುಲುಗಳನ್ನೂ ತೆರೆದು ಹೇಳುವ ಚರಿತ್ರೆಯಾಗಿದೆ. ಇದು ಅರಸುಅವರ ಸಾಧನೆಗಳ ಜೊತೆಗೆ ಅವರ ಇತಿಮಿತಿ, ದರ್ಪ, ತಪ್ಪುಗಳು ಹಾಗೂ ದೌರ್ಬಲ್ಯಗಳನ್ನೂ ಹೇಳುವ ಪುಸ್ತಕವಾಗಿದೆ. ಸಮಾಜಮುಖಿಯ ಈ ಸಂಚಿಕೆಯ ಮುಖ್ಯಚರ್ಚೆಗೆ ಪೂರಕವಾಗಿ ಅರಸು ಮತ್ತು ಇಂದಿರಾಗಾAಧಿಯವರ ನಡುವಿನ ಸಂಬAಧದ ಮಗ್ಗುಲನ್ನು ತಿಳಿಹೇಳುವ ಆರು ಬರಹಗಳ ಆಯ್ದ ಭಾಗಗಳನ್ನು ಇಲ್ಲಿ ನೀಡಲಾಗಿದೆ.

ಬಿ.ಎ.ಮೊಹಿದೀನ್

ಅರಸು ಮತ್ತು ಇಂದಿರಾ ನಡುವೆ ಬಿರುಕು-ವೈಮನಸ್ಯ ಏಕೆ, ಹೇಗೆ, ಏನಾಯ್ತು?

ಅದೊಂದು ದೊಡ್ಡ ಕತೆ. 1978ರ ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆಯಲ್ಲಿ ಇಂದಿರಾಗಾAಧಿ ಅವರ ಭರ್ಜರಿ ವಿಜಯದ ನಂತರ ದೇವರಾಜ ಅರಸು ಅವರ ದುರಂತದ ದಿನಗಳು ಪ್ರಾರಂಭವಾದವು. ದೇವರಾಜ ಅರಸರ ಜನಪ್ರಿಯತೆಯನ್ನು ಕಂಡು ಅಸೂಯೆ ಪಡುವ ಕೆಲವರು ಕಾಂಗ್ರೆಸ್‌ನಲ್ಲಿದ್ದರು ಮತ್ತು ಅವರು ನಿರಂತರವಾಗಿ ಅರಸರ ವಿರುದ್ಧ ಪಿತೂರಿ ಮಾಡುತ್ತಲೇ ಇದ್ದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಇಂದಿರಾಗಾOಧಿಯವರ ಪುತ್ರ ಸಂಜಯ ಗಾಂಧಿಗೆ ನಿಕಟವರ್ತಿಗಳಾಗಿದ್ದಂತಹ ಗುಂಡೂರಾವ್, ಎಫ್.ಎಂ.ಖಾನ್, ಸಿ.ಕೆ.ಜಾಫರ್ ಶರೀಫ್; ಸಂಜಯಗಾOಧಿಯವರನ್ನು ದೇವರಾಜ ಅರಸರ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಲೇ ಇದ್ದರು. ಜೊತೆಗೆ ಚಿಕ್ಕಮಗಳೂರು ಚುನಾವಣೆಯ ವಿಜಯದ ನಂತರ ಅರಸರನ್ನು ಇಡೀ ರಾಷ್ಟç ಗಮನಿಸಿದ್ದು ಮತ್ತು ಕೆಲವು ಮಾಧ್ಯಮಗಳು ಅರಸರನ್ನು ಹೊಗಳಿ ಅಟ್ಟಕ್ಕೇರಿಸಿದ್ದು, ಇವರ ಕಣ್ಣುರಿಗೆ ಕಾರಣವಾಗಿತ್ತು.

1979ರ ಜನವರಿಯಲ್ಲಿ ಗುಜರಾತ್‌ನ ಕ್ಷತ್ರಿಯ ಸಮಾಜದವರು ಅರಸರಿಗೆ ಒಂದು ಗೌರವ ಸನ್ಮಾನ ಏರ್ಪಡಿಸಿದ್ದರು. ಈ ಕ್ಷತ್ರಿಯ ಸಮಾಜದವರು ಅಂದು ಅರಸರಿಗೆ ಏರ್ಪಡಿಸಿದ ಸನ್ಮಾನ ಪತ್ರದಲ್ಲಿ ದಕ್ಷಿಣ ಭಾರತದ ಈ ಮಹಾ ಕ್ಷತ್ರಿಯನ ಗುಣ ವಿಶೇಷತೆಗಳ ವರ್ಣನೆ ಮಾಡುವುದರೊಂದಿಗೆ ಅರಸು ಅವರಿಗೆ `ಪೃಥ್ವಿವಲ್ಲಭ’ ಎಂಬಬಿರುದನ್ನು ನೀಡಿದರು. ಈ ಎಲ್ಲ ಬೆಳವಣಿಗೆಗಳು ಇಂದಿರಾ ಗಾಂಧಿ ಅವರಿಗೆ ಅರಸರ ಮೇಲೆ ಅಸಹನೆಯನ್ನು ಹೆಚ್ಚಿಸಲು ಕಾರಣವಾಯಿತು. ಇದೇ ಸಂದರ್ಭದಲ್ಲಿ, ಹಾಸನ ಜಿಲ್ಲೆಯ ಅರಸೀಕೆರೆ ಬಳಿಯ ಗ್ರಾಮವೊಂದರಲ್ಲಿ ಪುರಾತನ ತಾಳೆಗರಿ ಬರಹ ಓದಿ ಭವಿಷ್ಯ ನುಡಿಯುವ ಕೋಡಿ ಮಠದ ಸ್ವಾಮೀಜಿಯೊಬ್ಬರು `ಅರಸು ಅವರಿಗೆ ಭಾರತದ ಪ್ರಧಾನಿ ಆಗುವ ಯೋಗವಿದೆ’ ಎಂಬ ಭವಿಷ್ಯವಾಣಿ ನುಡಿದಿದ್ದು ಎಲ್ಲಾ ಕಡೆ ಪ್ರಚಾರವಾಯಿತು. ಕಾಕತಾಳೀಯವೋ ಏನೋ, ಇದೇ ಸ್ವಾಮೀಜಿ ಇಂದಿರಾಗಾAಧಿಗೂ ಭವಿಷ್ಯ ಹೇಳಿದ್ದರು. ಕಾಂಗ್ರೆಸ್ಸಿನ ಹಿರಿಯ ನಾಯಕರೊಬ್ಬರು ಅವರನ್ನು ದೆಹಲಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದರು. ಹಾಗಾಗಿ, ಆ ಸ್ವಾಮೀಜಿಯ ಮಾತಿಗೆ, ಭವಿಷ್ಯಕ್ಕೆ ರಾಜಕೀಯ ವಲಯದಲ್ಲಿ ಬೆಲೆ ಇತ್ತು.

1979ರ ಜನವರಿಯಲ್ಲಿಯೇ ದಿಲ್ಲಿಯಲ್ಲಿ ಅಖಿಲ ಭಾರತ ಇಂದಿರಾ ಕಾಂಗ್ರೆಸಿನ ಮಹಾಸಭೆಯಲ್ಲಿ ಅರಸು “ತಮ್ಮ ಪಕ್ಷ ವಂಶಾಡಳಿತಕ್ಕೆ ಜೋತುಬಿದ್ದ ಜೀತದಾಳುಗಳ ಕೂಟವೆಂಬ ಅಪಖ್ಯಾತಿಯನ್ನು ನಿವಾರಿಸಿಕೊಳ್ಳಬೇಕು’’ ಎಂದು ಭಾಷಣ ಮಾಡಿದರು. ಅಂದು ಇಂದಿರಾ ಕಾಂಗ್ರೆಸ್‌ನಲ್ಲಿ ಸಂಜಯಗಾOಧಿ ನಡೆಸಿಕೊಂಡು ಬರುತ್ತಿದ್ದ ಅತಿ ಅಬ್ಬರದ ರಾಜಕೀಯವನ್ನು ಅರಸರು ಸ್ವಲ್ಪ ನೇರವಾಗಿಯೇ ಟೀಕಿಸಿದ್ದರು. ಇದರಿಂದ ವಂಶಾಡಳಿತದ ಶಿಶುವಾದ ಸಂಜಯಗಾOಧಿ ಸಿಡಿಮಿಡಿಗೊಂಡರು. ಅರಸರನ್ನು ಮುಗಿಸಿಯೇ ಬಿಡುವೆನೆಂದು ಬಹಿರಂಗವಾಗಿಯೇ ಮಾತನಾಡಲು ಶುರು ಮಾಡಿದರು. ಇದೇ ಸಮಯಕ್ಕಾಗಿ ಕಾಯುತ್ತಿದ್ದ, ಅರಸು ಸಂಪುಟದಲ್ಲಿ ಸಚಿವರಾಗಿದ್ದ ಆರ್.ಗುಂಡೂರಾವ್ ತಮ್ಮ ಆಪ್ತ ಪತ್ರಕರ್ತರಲ್ಲಿ `ಸಂಜಯ್ ಗಾಂಧಿಗೆ ದೇವರಾಜ ಅರಸರು ಬೆಲೆ ಕೊಡುತ್ತಿಲ್ಲ’ ಎಂಬ ದೂರನ್ನು ಹೇಳಿಕೊಂಡದ್ದು ದೊಡ್ಡ ಸುದ್ದಿಯಾಗಿ ಹಬ್ಬಿತು.

1979 ಮೇ ತಿಂಗಳಲ್ಲಿ ಇಂದಿರಾ ಗಾಂಧಿ ಮತ್ತು ಅರಸರ ನಡುವಿನ ವಿರಸ ದೊಡ್ಡ ಸುದ್ದಿಯಾಯಿತು. ಇಂದಿರಾ ಗಾಂಧಿಯವರು ಗುಂಡೂರಾವ್, ಜಾಫರ್ ಶರೀಫ್, ಎಫ್.ಎಂ.ಖಾನ್ ಇವರನ್ನೆಲ್ಲ ಬಳಸಿಕೊಂಡು ಅರಸರ ಕಾಲೆಳೆಯುವ ಕೆಲಸಕ್ಕೆ ಕೈಹಾಕಿದರು. ಅರಸರು ಮುಖ್ಯಮಂತ್ರಿಯಾಗಿದ್ದರು ಮತ್ತು ಕರ್ನಾಟಕ ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷರು ಸಹ ಆಗಿದ್ದರು. ಇಂದಿರಾಗಾOಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆಯನ್ನು ತ್ಯಜಿಸಲು ಅರಸರಿಗೆ ಸೂಚಿಸಿದರು. ಆದರೆ ಅರಸರು ಸರ್ಪಸುತ್ತು ಎಂಬ ಕಾಯಿಲೆಗೆ ತುತ್ತಾಗಿ, ಅನಾರೋಗ್ಯದಿಂದ ಬಳಲುತ್ತ ಚಿಕಿತ್ಸೆ ಪಡೆಯುತ್ತಿದ್ದರು. `ಚಿಕಿತ್ಸೆ ಮುಗಿಸಿದ ಬಳಿಕ ನಿಮ್ಮನ್ನು ಭೇಟಿಯಾಗುತ್ತೇನೆ, ಕುಳಿತು ಮಾತನಾಡೋಣ’ ಎಂದು ದೇವರಾಜ ಅರಸರು ತಿಳಿಸಿದರೂ ಅದಕ್ಕೆ ಒಪ್ಪದ ಇಂದಿರಾ ಗಾಂಧಿ 1979ರ ಜೂನ್ ತಿಂಗಳ 20ನೆಯ ತಾರೀಖು ಅವರನ್ನು ಇಂದಿರಾ ಕಾಂಗ್ರೆಸ್‌ನ ಅಧ್ಯಕ್ಷತೆಯಿಂದ ವಜಾಗೊಳಿಸಿದರು.

ಈ ಸಂದರ್ಭದಲ್ಲಿ ಅರಸರಿಗೆ ಅತ್ಯಂತ ಆಘಾತವಾದದ್ದೆಂದರೆ, ಹಿಂದಿನ ದಿನದರಾತ್ರಿಯವರೆಗೂ ಅವರೊಂದಿಗಿದ್ದು, ಮುಂದಕ್ಕೂ ನಿಮ್ಮ ಜೊತೆಗೇ ಇರುತ್ತೇನೆ ಎಂಬ ಭರವಸೆಯನ್ನೂ ನೀಡಿದ್ದಂತಹ ಎಸ್. ಬಂಗಾರಪ್ಪ, ಮಾರನೆಯ ದಿನ ಕಾಂಗ್ರೆಸ್‌ನ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು. ಇಂದಿರಾಗಾAಧಿಯವರು ಬಂಗಾರಪ್ಪರನ್ನು ಕರ್ನಾಟಕ ರಾಜ್ಯ ಇಂದಿರಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಅದುವರೆಗೂ ಅರಸರಿಗೆ ಅಚಲ ನಿಷ್ಠೆಯನ್ನು ತೋರಿಸುತ್ತಿದ್ದ ಹಿಂದುಳಿದ ವರ್ಗಗಳ ಶಾಸಕರು ಒಬ್ಬೊಬ್ಬರಾಗಿ ಅವರಿಂದ ದೂರ ಸರಿಯತೊಡಗಿದರು. ವೀರಪ್ಪ ಮೊಯ್ಲಿ, ಧರಂಸಿOಗ್, ಮಲ್ಲಿಕಾರ್ಜುನ ಖರ್ಗೆ, ವೆಂಕಟರಮಣ, ಶ್ರೀಮತಿ ರೇಣುಕಾ ರಾಜೇಂದ್ರನ್, ಕೆ. ವೆಂಕಟಪ್ಪ, ಬಿ. ರಾಮಯ್ಯ, ವೈ. ರಾಮಕೃಷ್ಣ ಇಂತಹ ನಾಯಕರೆಲ್ಲ ಅರಸು ಅವರಿಂದ ದೂರವಾದರು. ರಾಜ್ಯದ ವಿಧಾನಸಭೆಯಲ್ಲಿ ಇಂದಿರಾ ಕಾಂಗ್ರೆಸ್‌ನ ಪ್ರತ್ಯೇಕ ಘಟಕ ರಚನೆಯಾಯಿತು. ಅರಸು ನಾಯಕತ್ವದ ಕಾಂಗ್ರೆಸ್ ಪಕ್ಷದ ಸಂಖ್ಯೆಯ ಬಲ ಕುಸಿಯಿತು. ಸುಮಾರು 40ಕ್ಕೂ ಹೆಚ್ಚು ಶಾಸಕರು ಅರಸು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಇಂದಿರಾ ಕಾಂಗ್ರೆಸನ್ನು ಸೇರಿದರು. ಈ ಹೊಸ ವಿದ್ಯಮಾನದಿಂದ ಅರಸರಿಗೆ ಜನತಾ ಪಕ್ಷದ ಕೆಲವು ಗಣ್ಯರ ಸಹಾನುಭೂತಿ ದೊರೆಯಿತು. ಜೆ.ಎಚ್. ಪಟೇಲ್, ಜೀವರಾಜ ಆಳ್ವ, ಪ್ರಮೀಳಾ ನೇಸರ್ಗಿ ಮುಂತಾದ 25 ಮಂದಿ ಜನತಾ ಪಕ್ಷದ ಶಾಸಕರು ಅರಸರನ್ನು ಬೆಂಬಲಿಸಿದರು. ಇದರಿಂದಾಗಿ ಅರಸರ ಸರಕಾರ ಪತನಗೊಳ್ಳುವದರಿಂದ ರಕ್ಷಿಸಲ್ಪಟ್ಟಿತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರಲ್ಲಿ ವೀರಪ್ಪ ಮೊಯ್ಲಿ ಅವರೊಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಅರಸರ ಜೊತೆಗೆ ನಿಂತೆವು.

ನಮಗೂ ಇದು ಬಹಳ ಸಂದಿಗ್ಧ ಸಂಕಟದ ಪರಿಸ್ಥಿತಿಯಾಗಿತ್ತು. ಕೆಲವು ದಿನಗಳ ಹಿಂದೆ ಇಂದಿರಾಗಾOಧಿಯವರು ಬೆಂಗಳೂರಿಗೆ ಬಂದಿದ್ದಾಗ ನನ್ನನ್ನು ಮತ್ತು ರಮೇಶ್‌ಕುಮಾರ್ ಅವರನ್ನು, ಅವರು ಉಳಿದುಕೊಂಡಿದ್ದ ಅತಿಥಿಗೃಹಕ್ಕೆ ಕರೆಸಿ ಮಾತನಾಡಿದ್ದರು. `ನೀವಿಬ್ಬರೂ ನನ್ನ ಜೊತೆಗೆ ಇರಬೇಕು’ಎಂದು ಕೇಳಿಕೊಂಡಿದ್ದರು. `ನಾವು ಇರುತ್ತೇವೆ ಮೇಡಂ’ಎOದು ಹೇಳಿ ಅಲ್ಲಿಂದ ಹೊರಬಂದಿದ್ದೆವು. ಆದರೆ ನಾವು ಭೇಟಿಯಾದ ಸುದ್ದಿ ತಿಳಿದ ಅರಸರು ನಮ್ಮಿಬ್ಬರನ್ನು ಕರೆಸಿಕೊಂಡು `ಏನಪ್ಪಾ, ನೀವೂ ನನ್ನನ್ನು ಬಿಟ್ಟು ಹೋಗುತ್ತೀರಾ?’ ಎಂದು ಕೇಳಿದಾಗ ನಾವು ಮೂಕರಾಗಿಬಿಟ್ಟಿದ್ದೆವು. ಅರಸು ಅವರು ನಮ್ಮ ಪಾಲಿಗೆ ಎಲ್ಲವೂ ಆಗಿದ್ದರು. ಅವರನ್ನು ಬಿಟ್ಟು ಹೋಗಲು ನಮ್ಮ ಮನಸ್ಸು ಒಪ್ಪಲಿಲ್ಲ. ನಾವು ಅವರೊಂದಿಗೆ ಉಳಿದುಕೊಂಡೆವು.

ಖಂಡಿತವಾಗಿಯೂ ಈ ಒಂದು ಬಿರುಕನ್ನು ತಪ್ಪಿಸಬಹುದಿತ್ತು. ಹಿರಿಯ ಸಚಿವರುಗಳಾದಂತಹ ಸುಬ್ಬಯ್ಯ ಶೆಟ್ಟಿ ಹಾಗೂ ಇತರರು ಮನಸ್ಸು ಮಾಡಿದ್ದರೆ ಇಂದಿರಾ ಗಾಂಧಿ ಮತ್ತು ಅರಸರ ಮಧ್ಯೆ ಉಂಟಾಗಿದ್ದOತಹ ಈ ಸಣ್ಣ ಅನುಮಾನ ಬೀಜವನ್ನು ಮೊಳಕೆಯಲ್ಲೇ ಕಿತ್ತು ಹಾಕಬಹುದಿತ್ತು ಅಥವಾ ಅರಸರಿಗೆ ಮನವರಿಕೆ ಮಾಡಿಸಿ ಅವರನ್ನು ಕಾಂಗ್ರೆಸ್‌ನಲ್ಲೇ ಉಳಿಸಿಕೊಳ್ಳುವಂತೆ ಮಾಡಬಹುದಿತ್ತು. ಆದರೆ, ಅರಸರಿಗೆ ಇಲ್ಲಿ ಯಾರು ಮನದಟ್ಟು ಮಾಡಿಕೊಡಬೇಕಾಗಿತ್ತೋ ಅವರು ಆ ಕೆಲಸ ಮಾಡಲಿಲ್ಲ. ಅರಸರಿಗೆ ಒಬ್ಬಳು ಸಾಕು ಮಗಳಿದ್ದಳು. ಅವಳು ಐಎಫ್‌ಎಸ್ ಆಧಿಕಾರಿಯಾಗಿದ್ದಳು. ಅರಸರನ್ನು ತಪ್ಪುದಾರಿಗೆಳೆಯುವಲ್ಲಿ ಅವಳ ಪಾತ್ರವೂ ಬಹಳಷ್ಟು ಇತ್ತು. ಒಂದು ಅರ್ಥದಲ್ಲಿ ದೇವರಾಜ ಅರಸು ಸ್ವಾಭಿಮಾನ ಮತ್ತು ಓವರ್‌ಕಾನ್ಫಿಡೆನ್ಸ್ ಅವರನ್ನು ಹೀಗೆ ಪ್ರೇರೇಪಿಸಿತು ಎಂದೆನಿಸುತ್ತದೆ. ಕೆಲವು ಕೇಂದ್ರದ ನಾಯಕರು ಸಹ ಅವರಿಗೆ ಕುಮ್ಮಕ್ಕು ನೀಡಿ ರಾಷ್ಟç ನಾಯಕತ್ವದ ಕನಸನ್ನು ಅವರಲ್ಲಿ ಹುಟ್ಟಿಸಿದ್ದರು ಎಂದು ಕಾಣುತ್ತದೆ.

ಈ ಸಂದರ್ಭದಲ್ಲಿ ಒಂದು ಘಟನೆ ನನಗೆ ನೆನಪಿಗೆ ಬರುತ್ತಿದೆ. 1978ರ ರಾಜ್ಯಸಭಾ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿತ್ತು. ಕರ್ನಾಟಕದಿಂದ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಅದಕ್ಕೆ ಇಂದಿರಾಗಾAಧಿಯವರ ಅನುಮತಿಯನ್ನು ಪಡೆಯಲು ದೇವರಾಜ ಅರಸು ಆ ಪಟ್ಟಿಯನ್ನು ನನ್ನ ಕೈಯಲ್ಲಿ ಕೊಟ್ಟು ದಿಲ್ಲಿಗೆ ಕಳುಹಿಸಿದ್ದರು. ನಾನು ಆ ಪಟ್ಟಿಯನ್ನು ಹಿಡಿದುಕೊಂಡು ದಿಲ್ಲಿಯ ವಿಲ್ಲಿಂಗ್‌ಟನ್ ಅನೆಕ್ಸ್ ಎಂಬಲ್ಲಿಯ ಇಂದಿರಾ ಗಾಂಧಿ ನಿವಾಸಕ್ಕೆ ಹೋಗಿದ್ದೆ. ಪಡಸಾಲೆಯಲ್ಲಿ ನಾನು ಕುಳಿತು ಅವರಿಗಾಗಿ ಕಾಯುತ್ತಿರುವಾಗ ಖುದ್ದು ಇಂದಿರಾ ಗಾಂಧಿ ಅವರು ಕೈಯಾರೆ ಒಂದು ಕಪ್ ಕಾಫಿ ಹಿಡಿದುಕೊಂಡು ಬಂದು ನನಗೆ ಕೊಟ್ಟರು, ಎದ್ದು ನಿಂತಿದ್ದ ನನ್ನನ್ನು ಕುಳಿತುಕೊಳ್ಳಲು ಹೇಳಿ ಅವರು ಅಲ್ಲೇ ಪಕ್ಕದಲ್ಲಿ ಕುಳಿತುಕೊಂಡರು. ಹೀಗೆ ವಿಷಯ ಮಾತನಾಡುತ್ತಾ `ನಿಮ್ಮ ಅರಸು ಹೀಗೇಕೆ ಮಾಡುತ್ತಿದ್ದಾರೆ? ನಾನೇನು ಮಾಡಿದ್ದೇನೆ  ಅವರಿಗೆ?’ಎಂದು ಕೇಳಿದರು.

ನಾನು `ಅವರೇನು ಮಾಡಿದ್ದಾರೆ ಮೇಡಂ?’ ಎಂದು ಕೇಳಿದೆ. `ಅವರೇಕೆ ರಜನಿ ಪಟೇಲರ ಜೊತೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ?’ ಇಂದಿರಾಗಾOಧಿ ಮತ್ತಿನ್ನೇನನ್ನೂ ಕೇಳಲಿಲ್ಲ.

ಈ ವಿಷಯ ಇಂದಿರಾಗಾOಧಿ ನನ್ನ ಬಳಿ ಯಾಕೆ ಕೇಳಿದ್ದು ಗೊತ್ತಾ? ನಾನೇನು ದೊಡ್ಡಜನಾಂತ ಏನೂ ಹೇಳಿದ್ದಲ್ಲ. ನನ್ನನ್ನು ಅವರು ಸಂದೇಶವಾಹಕನಾಗಿ ಬಳಸಿಕೊಂಡರು. ಅವರಿಗೆ ಗೊತ್ತು ಈ ವಿಷಯವನ್ನು ನಾನು ಹೋಗಿ ಅರಸರಿಗೆ ತಲುಪಿಸುತ್ತೇನೆ ಎಂದು. ಬೆಂಗಳೂರಿಗೆ ಹಿಂದಿರುಗಿದ ನಾನು ಅರಸರಿಗೆ ಇಂದಿರಾಗಾAಧಿಯವರು ವ್ಯಕ್ತಪಡಿಸಿದ ಈ ವಿಷಯವನ್ನು ಮುಟ್ಟಿಸಿದೆ. ಅದಕ್ಕೆ ಪ್ರತಿಕ್ರಿಯಿಸಿದ ಅರಸು `ಅಯ್ಯೋ, ಆ ಅಮ್ಮ ಬಹಳ ಡೌಟು ಮಾಡ್ತಾರೆ ಮಾರಾಯ. ಏಕೆ ಹೀಗೆ ಮಾಡ್ತಾರೆ ಅವರು. ನಾನು ಅಂತಹದ್ದು ಏನೂ ಇಟ್ಟುಕೊಳ್ಳಲಿಲ್ಲ. ನನ್ನ ರಾಜ್ಯವನ್ನೇ ಪಣಕ್ಕಿಟ್ಟು ಆ ಅಮ್ಮನನ್ನು ಕರೆದು ಹೋರಾಡಿ ಅವರನ್ನು ಗೆಲ್ಲಿಸಿ ಕಳುಹಿಸಿದ್ದೇನೆ. ನಾನವರಿಗೆ ಮೋಸ ಮಾಡ್ತೀನಾ?’ ಎಂದು ವಿಷಾದಿಸಿದರು.

ಅರಸು ಅವರು ಆಡಿದ ಆ ಮಾತಿನ ಒಂದೊAದು ಪದಗಳು ಈಗಲೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ. ಅರಸು ಮತ್ತು ಇಂದಿರಾ ಮಧ್ಯೆ ಈ ಬಿರುಕನ್ನು ಸೃಷ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದವರು ಜಾಫರ್ ಶರೀಫ್, ಗುಂಡೂರಾವ್, ಎಫ್.ಎಂ. ಖಾನ್ ಮತ್ತು ಬಂಗಾರಪ್ಪ.

ಮಾರ್ಗರೆಟ್ ಆಳ್ವ

ವೆರಿ ಎಮೋಷನಲ್ ಮ್ಯಾನ್

ಚಿಕ್ಕಮಗಳೂರು ಉಪಚುನಾ ವಣೆಯಲ್ಲಿ ಇಂದಿರಾ ಗಾಂಧಿ ಗೆದ್ದರು. ಗೆದ್ದ ದಿನ ಅರಸು, ಮೇಡಂ ಮುಂದೆ ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತರು. ಆ ಸಂದರ್ಭದಲ್ಲಿ ಅವರಾಡಿದ ಮಾತು ಇವತ್ತಿಗೂ ನನ್ನ ನೆನಪಿನಲ್ಲಿದೆ, `ಐ ಹ್ಯಾಡ್ ಸ್ಟೇಕ್ ಮೈ ಪೊಲಿಟಿಕಲ್ ಫ್ಯೂಚರ್‌ಇನ್ ದಿಸ್ ವಿಕ್ಟರಿ’. ನನ್ನ ಅನುಭವದಲ್ಲಿ, ಅರಸು ಅತ್ತಿದ್ದನ್ನು ನಾನೆಂದೂ ಕಂಡಿರಲಿಲ್ಲ. ಅಷ್ಟು ದೊಡ್ಡ ಲೀಡರ್, ಹಾಗೆ ಮಗುವಿನಂತೆ ಅತ್ತಿದ್ದು, ಆ ಗೆಲುವಿಗಾಗಿ ಅವರೆಷ್ಟು ಎರ‍್ಟ್ ಹಾಕಿದ್ದರು ಎಂಬುದನ್ನು ಹೇಳುತ್ತಿತ್ತು. ದುರದೃಷ್ಟಕರ ಸಂಗತಿ ಎಂದರೆ, ಅರಸರ ಆ ನಿಷ್ಠೆ ಇಂದಿರಾಗಾAಧಿಯವರಿಗೆ ಅರ್ಥವೇ ಆಗಲಿಲ್ಲ!

ಅರಸು ಅವರು ಹೀಗೆ ಮಗು ಥರಾ ಅತ್ತದ್ದು ಇನ್ನೊಂದು ಸಲ- ಅವರ ಎರಡನೇ ಮಗಳು ನಾಗರತ್ನರ ಮೃತದೇಹವನ್ನು ನೋಡಿದಾಗ. ಚಿಕ್ಕ ಮಕ್ಕಳಂತೆ ಬಿಕ್ಕಿ ಬಿಕ್ಕಿಅತ್ತರು. ಯಾರು ಎಷ್ಟೇ ತಡೆದರೂ ನಿಲ್ಲಿಸಲಿಲ್ಲ. ಅವರು ಅಳುವುದನ್ನು ನೋಡಿ ನಮಗೂ ಅಳು ಬಂದು, ನಾವೆಲ್ಲ ಅತ್ತಿದ್ದೆವು. ವೆರಿ ಎಮೋಷನಲ್ ಮ್ಯಾನ್- ರಿಯಲ್ ಫಾದರ್-

ಆತುರದ ಅರಸು, ಮೊಂಡು ಮೇಡಂ

ಇAದಿರಾ ಗಾಂಧಿಯವರ ಗೆಲುವಿಗಾಗಿ ಅಷ್ಟೆಲ್ಲ ಕಷ್ಟಪಟ್ಟ ದೇವರಾಜ ಅರಸರಿಗೆ, ಕಾಂಗ್ರೆಸ್ ಹೈಕಮಾಂಡ್‌ನಿOದ ಗೆಲುವಿಗೆ ತಕ್ಕ ಗೌರವ ಸಿಗಲಿಲ್ಲ. ಗೌರವವಿರಲಿ, ಮುಖ್ಯಮಂತ್ರಿಯಾಗಿ ಮುಂದುವರೆಯಲೂ ಬಿಡಲಿಲ್ಲ. ರಾಜಕೀಯ ಪುನರ್ಜನ್ಮ ನೀಡಿದ ಅರಸು ಮೇಲೆ ಅನುಮಾನ ಶುರುವಾಯಿತು. ಅದಕ್ಕೆ ತಕ್ಕಂತೆ ಅರಸು ವಿರುದ್ಧವಿದ್ದ ನಮ್ಮದೇ ಪಕ್ಷದ ಕೆಲ ನಾಯಕರು ಇಲ್ಲಸಲ್ಲದ ಚಾಡಿ ಹೇಳುವುದು ಹೆಚ್ಚಾಯಿತು. ಸಂಜಯ ಗಾಂಧಿಗೆ ಅರಸು ಕಂಡರೆ ಕೊಂಚ ಅಸಮಾಧಾನವಿತ್ತು. ಕೆಲವರ ಚಿತಾವಣೆಯಿಂದ ಅದು ಇನ್ನಷ್ಟು ಗಟ್ಟಿಗೊಳ್ಳತೊಡಗಿತು.

ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಮತ್ತು ಮುಖ್ಯಮಂತ್ರಿ- ಎರಡೂ ಹುದ್ದೆಯಲ್ಲಿದ್ದ ದೇವರಾಜ ಅರಸು ಅವರಿಗೆ, ಒಂದು ಸ್ಥಾನ ತೆರವು ಮಾಡಿ ಎಂದು ಹೇಳಿದ್ದರೆ, ಖಂಡಿತ ಮಾಡುತ್ತಿದ್ದರು. ಆದರೆ ಇಂದಿರಾ ಗಾಂಧಿಯವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಪರೋಕ್ಷವಾಗಿ ಒತ್ತಡ ಹೇರತೊಡಗಿದರು. ಅರಸು ಹಠಕ್ಕೆ ಬಿದ್ದು ಮಾಡಲ್ಲ ಎಂದರು. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕು ಎನ್ನುವುದು ನಮ್ಮೆಲ್ಲರ ಬೇಡಿಕೆಯಾಗಿತ್ತು. ನಮ್ಮನ್ನು ಪಾರ್ಟಿಯಿಂದ ಎಕ್ಸ್ಪೆಲ್ ಮಾಡಿದರು. ಅರಸರಿಗೆ ಹರ್ಪಿಸ್ ಆಗಿ ಮನೆಯಲ್ಲಿ ಮಲಗಿದ್ದರು. ಆ ಸಮಯದಲ್ಲಿ, ಅಮಾನವೀಯವಾಗಿ ಶೋಕಾಸ್ ನೋಟಿಸ್ ಇಷ್ಯೂ ಮಾಡಿದರು. ಆ ನೋಟಿಸ್ ಅರಸರಿಗೆ ತಲುಪುವುದಕ್ಕೂ ಮೊದಲೇ ಡೆಲ್ಲಿಯಲ್ಲಿ ಆ ಪತ್ರವನ್ನು ಪ್ರೆಸ್‌ಗೆ ರಿಲೀಸ್ ಮಾಡಿದರು. ಇದು ಅರಸರಿಗೆ ಸಿಕ್ಕಾಪಟ್ಟೆ ಸಿಟ್ಟು ತರಿಸಿತು. `ಏನು ಮಾಡ್ತರೋ ಮಾಡ್ಲಿ’ ಎಂದು ಹಠಕ್ಕೆ ಬಿದ್ದರು.

ಇದ್ದಕ್ಕಿದ್ದಂತೆ ಒಂದು ದಿನ, ಇಂದಿರಾ ಮೇಡಂ ದೆಹಲಿಯಿಂದ ಹುಕುಂ ಚಲಾಯಿಸಿ, ಬಂಗಾರಪ್ಪನವರನ್ನು ಪಾರ್ಟಿ ಪ್ರೆಸಿಡೆಂಟ್ ಎಂದು ನೇಮಕ ಮಾಡಿದರು. ಆತುರಕ್ಕೆ ಬಿದ್ದ ಅರಸು ಹೊಸ ಪಕ್ಷ ರಚಿಸಿದರು. ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ನಿಲ್ಲಿಸಿದರು. ಆ ಸಮಯದಲ್ಲಿ ನಾನು ಅರಸು ಬಳಿಗೆ ಹೋಗಿ, `ನಿನ್ನೆಯವರೆಗೆ ನಾವು ಇಂದಿರಾಗಾOಧಿಯವರ ಪರವಾಗಿದ್ದು, ಅವರನ್ನು ಹಾಡಿ ಹೊಗಳಿದ್ದೇವೆ. ಅವರ ಕಾರ್ಯಕ್ರಮಗಳನ್ನು ತಲೆ ಮೇಲೆ ಹೊತ್ತು ತಿರುಗಿದ್ದೇವೆ. ಈಗ ಅವರ ವಿರುದ್ಧ ನಿಂತು, ತೆಗಳಿ ಮಾತನಾಡುವುದು ಕಷ್ಟವಿದೆ. ಹಾಗೆ ಮಾತನಾಡಿದರೂ ಜನ ನಮ್ಮನ್ನೇ ತಪ್ಪು ತಿಳಿಯುವ ಸಂಭವವಿದೆ. ದಯವಿಟ್ಟು ಈ ಹೊಸ ಪಾರ್ಟಿ, ಚುನಾವಣೆಯಾವುದೂ ಬೇಡ’ ಎಂದು ಪರಿಪರಿಯಾಗಿ ಬೇಡಿಕೊಂಡೆ.

ಆದರೆ ಅರಸು ಸುತ್ತ ಇದ್ದವರು ಅವರನ್ನು ಆಗಲೇ ಆಕ್ರಮಿಸಿಕೊಂಡಿದ್ದರು. ಭಟ್ಟಂಗಿಗಳ ವಶವಾಗಿದ್ದ ಅರಸು ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದರು. ಅದಕ್ಕೆ ತಕ್ಕಂತೆ ಇಂದಿರಾಗಾAಧಿಯವರು ಕೂಡ ಮೊಂಡುತನಕ್ಕೆ ಬಿದ್ದು ಅರಸರನ್ನು ಅವಮಾನಿಸಿದರು. ನಾನು ಅವರ ಬಳಿಯೂ, `ಅರಸರನ್ನು ಹೀಗೆ ನಡೆಸಿಕೊಂಡಿದ್ದು ಸರಿಯೇ’ ಎಂದು ಪ್ರಶ್ನಿಸಿದೆ. ಆದರೆ ಇಂದಿರಾಗಾAಧಿಯವರು ಉತ್ತರವನ್ನೇ ಕೊಡಲಿಲ್ಲ. ಅಷ್ಟೇ ಅಲ್ಲ, ಅರಸರ ವಿಷಯದಲ್ಲಿ ತುಂಬಾ ಒರಟಾಗಿ ನಡೆದುಕೊಂಡರು. ಕೊನೆಗೆ ಎಲೆಕ್ಷನ್‌ನಲ್ಲಿ ಅರಸು ಪಕ್ಷಕ್ಕೆ ಸೋಲಾಯಿತು, ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅಲ್ಲಿಗೆ ಇಂದಿರಾ-ಅರಸರ ಸುವರ್ಣಯುಗ ಮುಗಿದು, ಗುಂಡೂರಾವ್-ಎಫ್.ಎO. ಖಾನ್‌ಗಳ ಕರಾಳ ಕಾಲ ಶುರುವಾಗಿತ್ತು. ಅಂದು ಅರಸು ಜೊತೆ ಇದ್ದವರು ಡಿ.ಬಿ. ಚಂದ್ರೇಗೌಡ, ಸಚ್ಚಿದಾನಂದ ಸ್ವಾಮಿ, ಎಲ್.ಜಿ. ಹಾವನೂರು, ಎಚ್.ಆರ್. ಬಸವರಾಜು, ಆರ್.ಎಂ. ದೇಸಾಯಿ ಮತ್ತು ನಾನು… ಇಷ್ಟೇ ಜನ. ಕರ್ನಾಟಕವನ್ನು ಎರಡು ಸಲ ಮುಖ್ಯಮಂತ್ರಿಯಾಗಿ ಆಳಿದ ಅರಸು ನಿಜವಾಗಲೂ ಒಂಟಿಯಾಗಿದ್ದರು.

ಜಾಫರ್ ಶರೀಫ್

ದಾರಿ ತಪ್ಪಿದ ಅರಸು

ನನನ್ನ ಮತ್ತು ಅರಸು ಅವರ ನಡುವಿನ ಸಂಬAಧ 1976ರವರೆಗೂ ಚೆನ್ನಾಗಿತ್ತು. ತುರ್ತು ಪರಿಸ್ಥಿತಿ, ಆ ನಂತರದ 1977ರ ಲೋಕಸಭಾ ಚುನಾವಣೆ, ಇಂದಿರಾ ಗಾಂಧಿಯವರ ಸೋಲು. ಇದರಿಂದ ದೇಶದಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಯಿತು. ಅದೇ ಸಂದರ್ಭದಲ್ಲಿ ಅರಸು, ಇಲ್ಲಿ, ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ 26 ಸ್ಥಾನಗಳನ್ನು ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದ್ದರು. ಅದರ ನಂತರ ಬಂದ 1978ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಅರಸರ ನಡೆ-ನುಡಿಯಲ್ಲಿ ವ್ಯತ್ಯಾಸ ಕಾಣತೊಡಗಿತು.

ನನ್ನ ಪ್ರಾಮಾಣಿಕ ಅನಿಸಿಕೆ ಅಂದರೆ, ಅರಸು ತುಂಬಾ ಒಳ್ಳೆಯ ವ್ಯಕ್ತಿ. ಉತ್ತಮಗುಣ ಸ್ವಭಾವಗಳಿದ್ದ ಪ್ರಾಮಾಣಿಕ. ಸಣ್ಣಪುಟ್ಟ ಸಮುದಾಯದವರನ್ನು ಬೆಂಬಲಿಸಿ, ಅಧಿಕಾರ ಹಂಚುAಡು, ಅವರ ಪ್ರಗತಿಯೇ ನಾಡಿನ ಪ್ರಗತಿ ಎಂದ ಉದಾರಿ. ಆದರೆ ಇಂತಹ ಅರಸರನ್ನು ಉತ್ತರ ಭಾರತದ ಕೆಲ ರಾಜಕಾರಣಿಗಳು ಹಣದಾಸೆಗಾಗಿ, ಸ್ವಾರ್ಥಕ್ಕಾಗಿ, ಸೇಡಿಗಾಗಿ `ಇಂದಿರಾಗಾAಧಿ ಮುಗಿದು ಹೋದರು, ಮುಂದಿನ ಕಾಂಗ್ರೆಸ್ ನಾಯಕರು ನೀವೆ, ಪ್ರಧಾನಮಂತ್ರಿಯೂ ನೀವೇ’ ಅಂತೇಳಿ ತಲೆಕೆಡಿಸಿದರು. ಅವರು ಹೇಳಿದ್ದು ಅವರ ಸ್ವಾರ್ಥ ಸಾಧನೆಗಾಗಿ ಎನ್ನುವುದು ಅರಸರ ಅರಿವಿಗೆ ಬರಲಿಲ್ಲ.

ಅರಸು ಕೂಡ ಮನುಷ್ಯನಲ್ಲವೇ? ಮನುಷ್ಯ ಸಹಜ ಆಸೆ, ಆಕಾಂಕ್ಷೆ, ದೌರ್ಬಲ್ಯಗಳಿದ್ದವಲ್ಲ? ಅದೆಲ್ಲವನ್ನು ನಿಜವೆಂದು ಭಾವಿಸಿದರು. ಆ ಸಮಯದಲ್ಲಿ ಮಾಧ್ಯಮಗಳೂ ರಾಷ್ಟಿçÃಯ ನಾಯಕನಂತೆ ಬಿಂಬಿಸಿದವು. ಅಗತ್ಯಕ್ಕಿಂತ ಹೆಚ್ಚು ಪ್ರಚಾರ ನೀಡಿ ಆಕಾಶಕ್ಕೇರಿಸಿದವು. ಅಮಾಯಕ ಅರಸು ನಂಬಿದರು, ದಾರಿತಪ್ಪಿದರು. ಇದಕ್ಕೆ ಪೂರಕವಾಗಿ ಸಹೋದರ ಕೆಂಪರಾಜ್ ಅರಸು ಮತ್ತು ನಿರ್ಮಲಾ ಪ್ರಸಾದ್ ಎಂಬ ಹೆಂಗಸು ಇಂದಿರಾಗಾOಧಿಯವರ ಬಗ್ಗೆ ತೀರಾ ಕೀಳುಮಟ್ಟದ ಭಾಷೆ ಬಳಸಿ, ಹಗುರವಾಗಿ, ಸಾರ್ವಜನಿಕವಾಗಿ ಮಾತಾಡಿದರು. ಉತ್ತರ ಭಾರತದ ರಾಜಕಾರಣಿಗಳು ಮತ್ತು ಇಲ್ಲಿನ ಅವರ ಸುತ್ತಲಿನ ಆಪ್ತರು ಅರಸರ ಪತನಕ್ಕೆ ಕಾರಣರಾದರು.

ಇಷ್ಟಾದರೂ ನನ್ನ ಅವರ ನಡುವೆ ಯಾವ ಭಿನ್ನಾಭಿಪ್ರಾಯವೂ ಇರಲಿಲ್ಲ. ವೈಯಕ್ತಿಕವಾಗಿ ನನ್ನ-ಅವರ ಸಂಬAಧ ಕೆಟ್ಟಿರಲಿಲ್ಲ. ಯಾವಾಗ ಅರಸು ಇಂದಿರಾಗಾOಧಿಯವರ ವಿರುದ್ಧ ತಿರುಗಿ ಬಿದ್ದರೋ, ಅವತ್ತಿನಿಂದ ನಾನು ಅವರ ವಿರೋಧಿಯಾದೆ. ನನ್ನ ಪ್ರಕಾರ ಇಂದಿರಾಗಾOಧಿಯವರು ದೇವರಾಜ ಅರಸರನ್ನು ತುಂಬಾನೆ ಸಿಂಪಥಿಟಿಕ್ ಆಗಿ ನೋಡಿಕೊಂಡರು. ಆದರೆ ದೇವರಾಜ ಅರಸರೇ ಇಂದಿರಾಗಾAಧಿಯವರಿಗೆ ದ್ರೋಹ ಬಗೆದರು.

1978ರ ವಿಧಾನಸಭಾಚುನಾವಣಾ ವೇಳೆ ಅರಸು-ಇಂದಿರಾಗಾAಧಿಯವರ ನಡುವೆ ಮೊದಲ ಬಾರಿಗೆ ಅಸಮಾಧಾನದ ಹೊಗೆ ಏಳತೊಡಗಿತು. ನಾನು ಅವರ ಜೊತೆಯಲ್ಲಿಯೇ, ಅವರ ಭಾಷಣವನ್ನು ಕನ್ನಡಕ್ಕೆ ಅನುವಾದ ಮಾಡಲು ಪ್ರವಾಸ ಮಾಡುತ್ತಿದ್ದಾಗ, ದೇವರಾಜ ಅರಸು ಅವರ ಸಹೋದರ ಕೆಂಪರಾಜ್ ಅರಸು, `ನಮ್ಮಣ್ಣನಿಂದಲೇ ಎಲ್ಲ’ ಎಂಬ ಅಹಂನಿAದ ಇಂದಿರಾಗಾAಧಿಯವರ ಬಗ್ಗೆ ತೀರಾ ತುಚ್ಛವಾಗಿ ಮಾತನಾಡಿದ. ಅದನ್ನು ಕಂಡು ಸಹಿಸದಾದ ನಾನು, `ಇಷ್ಟೆಲ್ಲ ಅವಮಾನವಾದರೂ ಸಹಿಸಿಕೊಂಡು ಸುಮ್ಮನಿದ್ದೀರಲ್ಲ, ಇಷ್ಟಾದರೂ ಚುನಾವಣಾ ಪ್ರಚಾರಕಾರ್ಯ ಮುಂದುವರಿಸಿದ್ದೀರಲ್ಲ’ ಎಂದೆ. ಅದಕ್ಕೆ ಇಂದಿರಾ ಮೇಡಂ, `ಈ ಹೋರಾಟ ಅರಸುಗಾಗಲ್ಲ, ನನಗಾಗಿ. ನಾನಿವತ್ತು ಇಡೀ ಪ್ರಪಂಚಕ್ಕೆ ವಿರೋಧಿಗಳನ್ನು ಸಹಿಸದ ಹೆಂಗಸಾಗಿ ಕಂಗೊಳಿಸುತ್ತಿದೆನೆ. ಸರ್ವಾಧಿಕಾರಿಯಾಗಿ ಬಿಂಬಿಸಲ್ಪಟ್ಟಿದ್ದೇನೆ ಈ ಚುನಾವಣೆಯಲ್ಲಿ ಭಾಗವಹಿಸುವ ಮೂಲಕ ಆ ಕಳಂಕವನ್ನು ತೊಡೆದುಕೊಳ್ಳಬೇಕಿದೆ. ಆ ಮೂಲಕ ನನ್ನ ವಿರೋಧಿಗಳಿಗೆ ಉತ್ತರ ಕೊಡಬೇಕಾಗಿದೆ’ ಎಂದರು.

ಕೂರ್ಗ್ನಲ್ಲಿ ಮೇಡಂ-ಅನ್ಯಮನಸ್ಕ ಅರಸು

1978ರ ಚುನಾವಣೆ ಮುಗಿದು, ಕಾಂಗ್ರೆಸ್ ಜಯಭೇರಿ ಬಾರಿಸಿ, ದೇವರಾಜ ಅರಸು ಎರಡನೆ ಬಾರಿಗೆ ಮುಖ್ಯಮಂತ್ರಿಯಾಗುವುದನ್ನು ಇಂದಿರಾಗಾAಧಿಯವರೇ ಖುದ್ದು ನಿಂತು ನೋಡಿಕೊಂಡರು. ಆದರೆ ಅದೇ ಸಮಯದಲ್ಲಿ ದೆಹಲಿಯಲ್ಲಿ ಸೋತು ಸುಮ್ಮನೆ ಕೂತಿದ್ದ ಇಂದಿರಾಗಾAಧಿಯವರಿಗೆ ಬಯಾಗ್ರಫಿ ಬರೆಯಬೇಕೆನಿಸಿತು. ಆಗ ದೇಶದಲ್ಲಿ ಕಾಂಗ್ರೆಸ್ ಆಡಳಿತವಿದ್ದ ರಾಜ್ಯಗಳು ಎರಡು ಮೂರು ಮಾತ್ರ. ಅದರಲ್ಲೂ ಕರ್ನಾಟಕ ಅವರಿಗೆ ತುಂಬಾ ಇಷ್ಟವಾದ ರಾಜ್ಯವಾಗಿತ್ತು. ದೇವರಾಜ ಅರಸು ಮೆಚ್ಚಿನ ಮುಖ್ಯಮಂತ್ರಿಯಾಗಿದ್ದರು. ಆದಕಾರಣ ಮಡಿಕೇರಿ ಹತ್ತಿರದ ಒಂದು ಫಾರಂ ಹೌಸ್‌ಗೆ ಫ್ರೆಂಚ್ ಗೆಳೆಯನೊಂದಿಗೆ ಮೇಡಂ ಬಿಡುವು ಮಾಡಿಕೊಂಡು ಬಂದಿದ್ದರು. ಅವರು ಹೇಳುತ್ತಾ ಹೋಗುವುದು, ಆ ಫ್ರೆಂಚ್ ವ್ಯಕ್ತಿ ಬರೆದುಕೊಳ್ಳುತ್ತಾ ಹೋಗುವುದು ಎಂದು ನಿಗದಿಯಾಗಿತ್ತು. ಅದಕ್ಕಾಗಿ ಪ್ರಕೃತಿ ಸೊಬಗಿನ ಪ್ರಶಾಚಿತ ಮಡಿಕೇರಿಯನ್ನು ಆಯ್ಕೆ ಮಾಡಿಕೊಂಡಿದ್ದರು.

ಆ ಸಮಯದಲ್ಲಿ, ಗೆಳೆಯ ಎಚ್.ಸಿ. ಶ್ರೀಕಂಠಯ್ಯ ನನಗೆ ಫೋನ್ ಮಾಡಿ, `ಮೇಡಂ ಮರ್ಕೆರಾಗೆ ಬಂದಿದ್ದಾರೆ, ನೀನು ಬರ್ತಿನಿ ಅಂದರೆ ಹೋಗೋಣ’ ಅಂದ. ನಾನು ಆ ತಕ್ಷಣವೇ ಮರ್ಕೆರಾ ಗೆಸ್ಟ್ಹೌಸ್‌ಗೆ ಫೋನ್ ಮಾಡಿದೆ, ಮೇಡಂ ಜೊತೆ ಬಂದಿದ್ದ ನಿರ್ಮಲಾ ದೇಶಪಾಂಡೆ ಫೋನ್ ರಿಸೀವ್ ಮಾಡಿ, ಬಂದಿದಾರೆ ಎಂದು ಹೇಳುವಷ್ಟರಲ್ಲಿ, `ಮೇಡಂ ಬಂದ್ರು, ಅವರಿಗೇ ಕೊಡ್ತೇನೆ’ ಅಂದುಕೊಟ್ಟರು. ಮೇಡಂ `ಬನ್ನಿ’ ಎಂದರು. ಶ್ರೀಕಂಠಯ್ಯ ಕಾರ್ ತಂದ, ಹೋದೆವು. ಗೆಸ್ಟ್ಹೌಸ್‌ನಲ್ಲಿ ದೇವರಾಜ ಅರಸರ ಆಪ್ತ, ರಾಜ್ಯಸಭಾ ಸದಸ್ಯ ಸಚ್ಚಿದಾನಂದಸ್ವಾಮಿ ಇದ್ದರು. ಮೇಡಂ ಒಳಗಿದ್ದರು, ‘ಬನ್ನಿ ಜಾಫರ್’ ಎಂದು ಕರೆದರು. ನಾನು ಅವರಿದ್ದ ರೂಮಿನ ಕಡೆ ಹೋಗ್ತೇನೆ, ಅಲ್ಲಿ ಅವರಿಲ್ಲ. ಸ್ನಾನದಕೋಣೆಯ ಬಾಗಿಲನ್ನು ಅರ್ಧತೆಗೆದು, `ಜಾಫರ್ ಐ ಯಾಮ್ ಹಿಯರ್’ ಎಂದರು. ಹತ್ತಿರ ಹೋಗುತ್ತಿದ್ದಂತೆ, `ಐ ಯಾಮ್ ನಾಟ್ ಕಂಫರ್ಟಬಲ್ ಹಿಯರ್’ ಎಂದರು. ಧ್ವನಿ ಕ್ಷೀಣವಾಗಿತ್ತು, ಇನ್‌ಸೆಕ್ಯೂರ್ ಫೀಲಿಂಗ್‌ನಲ್ಲಿರುವAತೆ ಕಂಡರು. ಅಷ್ಟರಲ್ಲಾಗಲೇ ನಮ್ಮಿಬ್ಬರ ಮಾತನ್ನು ಕೇಳಿಸಿಕೊಳ್ಳಲು ಸಚ್ಚಿದಾನಂದಸ್ವಾಮಿ ಬಾಗಿಲ ಹಿಂದೆ ಇಣುಕಿದರು. ಇಂದಿರಾ ಮೇಡಂಗೆ ಕೋಪ ಬಂತು, `ಮಾತಾಡಲಿಕ್ಕೂ ಅಲೋ ಇಲ್ಲವಾ’ ಎಂದು ಗದರಿ ಕಳುಹಿಸಿದರು.

ಇದು ಒಟ್ಟಾರೆ ಇಂದಿರಾ ಗಾಂಧಿಯವರನ್ನು ಬಂಧಿಸಿಟ್ಟOತೆ, ಅವರ ಆಣತಿಯಂತೆ ನಡೆದುಕೊಳ್ಳುವಂತೆ, ಅವರ ಕಣ್ತಪ್ಪಿಸಿ ಏನೂ ನಡೆಯದಂತೆ ನೋಡಿಕೊಳ್ಳುವ `ಹೌಸ್‌ಅರೆಸ್ಟ್’ ಆಗಿತ್ತು. ಅದು ಸ್ಪಷ್ಟವಾಗಿ ಕಾಣುತ್ತಿತ್ತು.

ಮಧ್ಯಾಹ್ನದ ಹೊತ್ತಿಗೆ ಮುಖ್ಯಮಂತ್ರಿ ದೇವರಾಜ ಅರಸು ಬಂದರು. ಅವರು ಬಂದಿದ್ದು ನೋಡಿ ಮೇಡಂ ಊಟಕ್ಕೆ ಕರೆದರು. ಅರಸು ಟೇಬಲ್ ಮುಂದೆ ಕೂತರು. ಮೇಡಂ ನನ್ನನ್ನು ಕರೆದು ಚೇರ್ ಹಾಕಿಸಿದರು. ನನ್ನನ್ನು ನೋಡುತ್ತಿದ್ದಂತೆ ದೇವರಾಜ ಅರಸು ಅವರ ಮುಖಭಾವವೇ ಬದಲಾಗಿ ಹೋಯಿತು. ಈತನೇಕೆ ಇಲ್ಲಿದ್ದಾನೆ, ಈತನೊಂದಿಗೆ ಊಟಕ್ಕೆ ಕೂರುವುದೇ ಎಂಬOತೆ ಮುಜುಗರಪಟ್ಟುಕೊಂಡು, `ಇಲ್ಲ, ನಾನು ಊಟ ಮಾಡಲ್ಲ, ಬ್ರೇಕ್‌ಫಾಸ್ಟ್ ಈಗಾಗಿದೆ’ ಎಂದರು. ಇಂದಿರಾ ಮೇಡಂ ಜೊತೆ ನಾನಿದ್ದದ್ದು ಅರಸುಗೆ ಇಷ್ಟವಿರಲಿಲ್ಲ.

ಆ ಇಡೀ ವಾತಾವರಣವೇ ಮೇಡಂಗೆ ಕಸಿವಿಸಿ ಹುಟ್ಟಿಸಿ, ತಮ್ಮ ಪ್ರವಾಸ, ಬಯಾಗ್ರಫಿ ಬರೆಯೋದು, ವಿಶ್ರಾಂತಿ ಪಡೆಯೋದು…ಎಲ್ಲವನ್ನು ಮೊಟಕುಗೊಳಿಸಿ ಬೆಂಗಳೂರಿನತ್ತ ಹೊರಡಲು ಸಿದ್ಧರಾದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರದೂ ಸೇರಿ ಹತ್ತು ಹನ್ನೆರಡು ಕಾರುಗಳು ಮಡಿಕೇರಿಯಿಂದ ಹೊರಟು ಹುಣಸೂರಿಗೆ ಬಂದರೂ, ಒಂದೇ ಒಂದು ಸ್ವಾಗತ ಕಮಾನುಗಳಿಲ್ಲ, ತಳಿರು ತೋರಣವಿಲ್ಲ, ಹೂವಿನ ಹಾರ ಹಾಕಿ ಸ್ವಾಗತಿಸುವ ಪಕ್ಷದ ಕಾರ್ಯಕರ್ತರಂತೂ ಕಾಣಲೇಇಲ್ಲ. ಮುಖ್ಯಮಂತ್ರಿಗಳ ಕ್ಷೇತ್ರ, ಆಗ ತಾನೆ ಚುನಾವಣೆ ನಡೆದಿದೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಅದು ಕಾಂಗ್ರೆಸ್ಸಿನ ಅಧಿನಾಯಕಿ ಇಂದಿರಾ ಮೇಡಂಗೆ ಬೇಸರ ತರಿಸಿತು. ಮಡಿಕೇರಿಯಿಂದ ಹೊರಟಾಗಲೇ ಮುಖ್ಯಮಂತ್ರಿಗಳು ಫೋನ್ ಮಾಡಿ ಅಧಿಕಾರಿಗಳಿಗೆ ಮತ್ತು ಕಾರ್ಯಕರ್ತರಿಗೆ ತಿಳಿಸಿದ್ದರೆ, ಹುಣಸೂರಿನಲ್ಲಿ ಒಂದಷ್ಟು ಜನರಿದ್ದು, ಹಾರ-ತುರಾಯಿಗಳ ಸ್ವಾಗತ ಸಿದ್ಧವಾಗಿರುತ್ತಿತ್ತು. ಆದರೆ ಅದಾಗಲಿಲ್ಲ.

ಅಲ್ಲಿಂದ ಮುಂದೆ ಮೈಸೂರಿಗೆ ಬಂದರೆ, ಅಲ್ಲೂ ಅದೇ ಕತೆ. ಯಾರೂ ಇಲ್ಲ. ಮೈಸೂರಿನ ಮುಂದಕ್ಕೊAದು ರೇಲ್ವೇಗೇಟ್ ಸಿಕ್ಕಿ ಕಾರುಗಳು ನಿಂತವು. ಆಗ ಮೇಡಂ, ಸೆಖೆಗೆ ಕಾರಿನಿಂದ ಇಳಿದು ಗಾಳಿಗಾಗಿ ಹತ್ತಿರದ ಮರದ ಕೆಳಗೆ ನಿಂತುಕೊAಡರು. ಅಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಇಂದಿರಾಗಾOಧಿಯವರನ್ನು ಗುರುತಿಸಿ, ಬಂದು ಮುತ್ತಿಕೊಂಡರು. ಕಾರಿನಲ್ಲಿದ್ದ ಹೂವು, ಹಣ್ಣುಗಳನ್ನೆಲ್ಲ ಅವರಿಗೆ ಕೊಟ್ಟು ಹೊರಡಲು ಅಣಿಯಾದರು.

ಅಲ್ಲಿಂದ ಇಂದಿರಾ ಮೇಡಂ ನೇರವಾಗಿ ಬೆಂಗಳೂರಿನ ಹತ್ತಿರದ ನಂದಿ ಬೆಟ್ಟಕ್ಕೆ ಬಂದರು. ಅಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಇತ್ತು. ಮುಖ್ಯಮಂತ್ರಿ ದೇವರಾಜ ಅರಸು ಅವರು ನಮ್ಮ ನಾಯಕಿ ಇಂದಿರಾಗಾAಧಿಗೆ ಹೀಗೆ ಅವಮಾನಿಸಿದ್ದು ನನಗೇಕೋ ಸರಿಕಾಣಲಿಲ್ಲ. ಆದ ಅವಮಾನವನ್ನು ಪ್ಯಾಚಪ್ ಮಾಡಲು ನಾನು ಮತ್ತು ಬಸವಲಿಂಗಪ್ಪ ಸೇರಿ ಪ್ಲಾನ್ ಮಾಡಿದೆವು. ಆ ತಕ್ಷಣವೇ ಕಾರ್ಯಕರ್ತರನ್ನು ಸಂಘಟಿಸಿ, ಆ ಸಭೆ ಮುಗಿಯುವುದರೊಳಗೆ, ನಂದಿ ಬೆಟ್ಟದಿಂದ ಏರ್‌ಪೋರ್ಟ್ವರೆಗೆ ಮೇಡಂಗೆ ಭವ್ಯವಾದ ತೋರಣಗಳು, ಹೂವಿನ ಹಾರಗಳನ್ನು ಹಿಡಿದು ನಿಂತ ಕಾರ್ಯಕರ್ತರನ್ನು ಆರ್ಗನೈಸ್ ಮಾಡಿದೆವು.

ಯಾವುದೇ ನಾಯಕನಿಗಾದರೂ ಸರಿ ಈ ರೀತಿ ರಸ್ತೆಯ ಇಕ್ಕೆಲಗಳಲ್ಲಿ ಕಾದು ನಿಲ್ಲುವುದು, ಸ್ವಾಗತಕೋರುವುದು, ಹಾರ ತುರಾಯಿ ಹಾಕಿ ಕೈ ಮುಗಿಯುವುದು, ಭೋ ಪರಾಕ್ ಕೂಗುವುದು ಇಷ್ಟವಾಗುತ್ತದೆ. ಅದರಲ್ಲಿ ಇಂದಿರಾ ಮೇಡಂ ಕೂಡ ಹೊರತಾಗಿರಲಿಲ್ಲ. ಸಹಜವಾಗಿಯೇ ಮೇಡಂ ಥ್ರಿಲ್ಲಾದರು. ಯಲಹಂಕದಲ್ಲಿ ರಸ್ತೆ ಬದಿಯ ಕಟ್ಟೆ ಮೇಲೆ ನಿಂತು ಪುಟ್ಟ ಭಾಷಣವನ್ನೂ ಮಾಡಿದರು. ಆ ಅರೇಂಜ್‌ಮೆAಟ್ಸ್ ನೋಡಿ ಇಬ್ಬರ ಮುಖಭಾವವೇ ಬದಲಾಯಿತು- ಮೇಡಂ ಖುಷಿಯಾದರು. ಅರಸು ಖಿನ್ನರಾದರು.

ಅಲ್ಲಿಂದ ಮುಂದಕ್ಕೆ ನನ್ನ-ಅರಸರ ಸಂಬAಧ ಅಷ್ಟು ಉತ್ತಮವಾಗಿರಲಿಲ್ಲ. ಸಂಪರ್ಕವೂ ಕಡಿದುಹೋಯಿತು. ಅವರೂ ಸಿಎಂ ಸ್ಥಾನದಿಂದ ಕೆಳಗಿಳಿದರು. ಅಧಿಕಾರ ಹೋದ ಮೇಲೆ ಒಬ್ಬಂಟಿಯಾದರು. ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡೇ ಅಂತಿಮ. ಅದಕ್ಕೇ ಸಡ್ಡು ಹೊಡೆದು ನಿಲ್ಲುವವನು ಪ್ರಬಲ ಜಾತಿಯವನು, ಅಪಾರ ಹಣವಂತನು, ಬುದ್ಧಿವಂತನು, ಶಕ್ತಿವಂತನಷ್ಟೇ ಅಲ್ಲ, ಅದಕ್ಕೂ ಮೀರಿದ ಚಾಣಾಕ್ಷನಾಗಿರಬೇಕು. 8 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ದೇವರಾಜ ಅರಸರಿಗೆ ಅಧಿಕಾರವಿದ್ದಾಗ ಎಲ್ಲವೂ ಇತ್ತು; ಅಧಿಕಾರವಿಲ್ಲದಾಗ ಯಾವುದೂ ಇರಲಿಲ್ಲ. ಇದು ರಾಜಕಾರಣಕ್ಕೆ ಬರುವ ವ್ಯಕ್ತಿಗಳಿಗೆ ಅಧ್ಯಯನಯೋಗ್ಯ ವಸ್ತು ಮತ್ತು ವಿಷಯ.

ಕೆ.ಎಂ.ನಾಗರಾಜ್

ನಾನು ಎಂಬ ಅಹಂ

ನನ್ನ ಪ್ರಕಾರ ಇಂದಿರಾಗಾOಧಿಯವರು ದೇವರಾಜ ಅರಸರಿಗೆ ಯಾವ ದ್ರೋಹವನ್ನು ಬಗೆಯಲಿಲ್ಲ. ಆದರೆ ಅರಸರು ಚಿಕ್ಕಮಗಳೂರಿನ ಉಪಚುನಾವಣೆಯ ಗೆಲುವಿನ ನಂತರ, ಇಂದಿರಾ ಗೆದ್ದಿದ್ದು ನನ್ನಿಂದ ಎಂದರು. ಇದಕ್ಕೂ ಹಿಂದೆ ನಡೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಬಹುಮತ ಸಿಕ್ಕಿತ್ತು. ಹೀಗಾಗಿ ಅರಸರು ಎಲ್ಲವೂ ನನ್ನಿಂದಲೇ ಎಂದು `ನಾನು’ ಎಂಬ ಅಹಂಗೆ ಒಳಗಾದರು. ಸುತ್ತಲಿದ್ದ ಭಟ್ಟಂಗಿಗಳಿಗೆ ಕಿವಿ ಕೊಟ್ಟು ಉಬ್ಬಿಹೋದರು. ಡೆಲ್ಲಿಯಲ್ಲಿ ಚರಣ್‌ಸಿಂಗ್ ಜೊತೆ ಗುರುತಿಸಿಕೊಂಡು ರಾಷ್ಟಿಯ ನಾಯಕರಂತೆ ಪೋಸು ಕೊಡತೊಡಗಿದರು. ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷ ದೇಶದಾದ್ಯಂತ ಸೋತು, ಅಧಿಕಾರವಿಲ್ಲದೆ ಸೊರಗಿರುವಾಗ ದೇವರಾಜ ಅರಸರು ಅವರ ಪರ ನಿಂತು ನೈತಿಕ ಸ್ಥೈರ್ಯ ತುಂಬಬೇಕಿತ್ತು. ಆದರೆ ವಿರೋಧಿಗಳ ಜೊತೆ ಕೈಜೋಡಿಸಿ, ಇಂದಿರಾರನ್ನು ಕಡೆಗಣಿಸಿದರು.

ಇದರಿಂದ ಮನನೊಂದ ಇಂದಿರಾಗಾಧಿಯವರು, ಅರಸು ನಮ್ಮ ವಿರೋಧಿಗಳೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ, ಅವರು ಹಾಗೇ ಮುಂದುವರೆದರೆ, ಮುಂದೊದು ದಿನ ಕಾಂಗ್ರೆಸ್ ಪಕ್ಷವೇ ನಿರ್ನಾಮವಾಗಬಹುದು, ನಾವು ನಮ್ಮ ಪಕ್ಷವನ್ನಾದರೂ ಉಳಿಸಿಕೊಳ್ಳೋಣವೆಂಬ ತೀರ್ಮಾನಕ್ಕೆ ಬಂದು, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಎಸ್. ಬಂಗಾರಪ್ಪನವರನ್ನು ನೇಮಕ ಮಾಡಿದರು.

ಈ ನೇಮಕವನ್ನೇ ನೆಪ ಮಾಡಿಕೊಂಡು, ಅದನ್ನೇ ಅವರಿಗೆ ಮಾಡಿದ ಅವಮಾನವೆಂದು ಭಾವಿಸಿದ ಅರಸು, ಇಂದಿರಾಗಾAಧಿ ವಿರುದ್ಧ ಸೆಟೆದು ನಿಂತರು, ಅರಸು ಪಕ್ಷ ಕಟ್ಟಿದರು. ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರು. ಅಲ್ಲಿ, ಚುನಾವಣೆಯಲ್ಲಿ ಅರಸು ಮತ್ತು ಇಂದಿರಾ- ಇಬ್ಬರ ನಡುವಿನ ವರ್ಚಸ್ಸು ತುಂಬಾ ಕ್ಲಿಯರ್ ಆಗಿ ಗೋಚರಿಸಿತು. ಅರಸರ ಅಭ್ಯರ್ಥಿಗಳಿಗೆ ಠೇವಣಿ ಹೋಯಿತು. ಸರಕಾರದ ಬಗ್ಗೆ ಜನರಲ್ಲಿ ವಿಶ್ವಾಸವಿಲ್ಲದಿರುವುದು ಗೊತ್ತಾಗುತ್ತಿದ್ದಂತೆ ಅರಸರು ರಾಜೀನಾಮೆ ಕೊಟ್ಟು ಅಧಿಕಾರದಿಂದ ಕೆಳಗಿಳಿದರು.

ಇಷ್ಟೆಲ್ಲ ಆದದ್ದು ಅರಸು ಅವರ ನಾನು ಎಂಬ ಅಹಂನಿAದಲೇ ಹೊರತು, ಇಂದಿರಾಗಾOಧಿಯಿOದಲ್ಲ.

ಹಾಗೆ ನೋಡಿದರೆ, ಇಂದಿರಾಗಾOಧಿಯವರು ದೇವರಾಜ ಅರಸು ಅವರನ್ನು ನಿರಂತರವಾಗಿ ಬೆಂಬಲಿಸುತ್ತಲೇ ಬಂದರು. 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ, ಇಂದಿರಾಗಾOಧಿಯವರ ಕಾಂಗ್ರೆಸ್‌ನಲ್ಲಿ ಬಲಾಢ್ಯಜಾತಿಗೆ ಸೇರಿದ ನಾಯಕರು ಹಲವರಿದ್ದರು. ಆದರೆ ಮೇಡಂ, ಅವರನ್ನೆಲ್ಲ ಬಿಟ್ಟು ಅತ್ಯಂತ ಕಡಿಮೆ ಜನಸಂಖ್ಯೆಯುಳ್ಳ ಜಾತಿಯ ದೇವರಾಜ ಅರಸರನ್ನು ಅಡ್ಹಾಕ್ ಸಮಿತಿಯ ಕನ್ವೀನರ್ ಮಾಡಿದರು. ಅಷ್ಟೇ ಅಲ್ಲ, ಕೇಂದ್ರ ರೇಷ್ಮೆ ಬೋರ್ಡ್ನ ಚೇರ್ಮನ್ ಮಾಡಿದರು. ಅಭ್ಯರ್ಥಿಗಳ ಆಯ್ಕೆಯ ಸ್ವಾತಂತ್ರö್ಯಕೊಟ್ಟರು. ಎರಡು ಸಲ ಮುಖ್ಯಮಂತ್ರಿಯಾಗುವ ಅವಕಾಶ ಕಲ್ಪಿಸಿಕೊಟ್ಟರು. ಪಕ್ಷದ ನಾಯಕರಿಂದ ಬಂದ ದೂರುಗಳನ್ನು ನಿರ್ಲಕ್ಷಿಸಿದರು. ಬಲಾಢ್ಯಜಾತಿಯ ನಾಯಕರು ಬಂಡಾಯವೆದ್ದರೂ, ಅರಸು ವಿರುದ್ಧ ಸೆಟೆದು ನಿಂತರೂ ಅವರಿಗೆ ಸೊಪ್ಪು ಹಾಕದೆ ತಣ್ಣಗಾಗಿಸಿದರು. ಕೆಂಗಲ್ ಹನುಮಂತಯ್ಯ, ಸಿದ್ಧವೀರಪ್ಪ, ಕೆ.ಎಸ್. ನಾಗರತ್ನಮ್ಮ, ಕೆ.ಎಚ್. ಪಾಟೀಲ್, ಕೆ.ಎಚ್. ರಂಗನಾಥ್…ಇವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಕಷ್ಟ ಕೊಟ್ಟರೂ ಇಂದಿರಾ ಗಾಂಧಿಯವರು ಇವರೆಲ್ಲರ ಬಾಯಿ ಮುಚ್ಚಿಸಿ, ಸುಮ್ಮನಿರಿಸಿದ್ದರು. ಅಷ್ಟೇ ಏಕೆ, ತಾವೇ ಕರೆದು ತಂದ ಎಸ್.ಎಂ. ಕೃಷ್ಣ ಅರಸರ ವಿರುದ್ಧ 70 ಶಾಸಕರ ಸಹಿ ಸಂಗ್ರಹಿಸಿದ್ದರು, ಮೇಡಂ ಅದನ್ನೂ ತೆಗೆದು ಪಕ್ಕಕ್ಕಿಟ್ಟು ಅರಸರ ಬೆನ್ನಿಗಿದ್ದರು. ಹೀಗಾಗಿ ಇಂದಿರಾ ಗಾಂಧಿಯವರ ಕೃಪಾಕಟಾಕ್ಷ ಅರಸರ ಮೇಲೆ ಸದಾ ಇತ್ತು. ಅವರ 20 ಅಂಶದ ಕಾರ್ಯಕ್ರಮಗಳ ಜೊತೆಗೆ ಕೆಲವು ಕ್ರಾಂತಿಕಾರಿ ಕ್ರಮಗಳ ಮೂಲಕ ಅರಸರು ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಬೆಳೆದರು. ಬೆಳೆದ ನಂತರ ಇಂದಿರಾರನ್ನು ನಿರ್ಲಕ್ಷಿಸಿದರು. ನನ್ನ ಪ್ರಕಾರ ಇದು ದೇವರಾಜ ಅರಸರ ದೊಡ್ಡ ತಪ್ಪು.

ಎಸ್.ಎಂ.ಕೃಷ್ಣ

ಅರಸು ಬೆನ್ನಿಗೆ ಸೋಷಲಿಸ್ಟರು

ಇಂದಿರಾಗಾAಧಿಯವರ ಈ ಬಡವರ ಪರವಾದ ಕಾರ್ಯಕ್ರಮಗಳನ್ನು ಜನರಲ್ಲಿಗೆ ಕೊಂಡೊಯ್ಯುವ, ಅವರಿಗೆ ಮನವರಿಕೆ ಮಾಡಿಕೊಡುವ ಕಾರ್ಯಕ್ಕೆ ದೇವರಾಜ ಅರಸು ಮುಂದಾದರು. ಇದು ಆ ರಾಜಕೀಯ ಸಂದಿಗ್ಧ ಸಂದರ್ಭದಲ್ಲಿ ಅರಸು ತೆಗೆದುಕೊಂಡು ಬೋಲ್ಡ್ ಸ್ಟೆಪ್ ಎಂದೇ ನಾನು ಪರಿಗಣಿಸುತ್ತೇನೆ. ನಿಜಲಿಂಗಪ್ಪನವರನ್ನು ಒಳಗೊಂಡOತೆ, ಹಿರಿಯ ನಾಯಕರು ಇಂದಿರಾ ಗಾಂಧಿ ವಿರುದ್ಧವಾಗಿದ್ದರು. ದೇವರಾಜ ಅರಸು ಇಂದಿರಾಗಾAಧಿಯವರ ಪರವಾಗಿದ್ದರು. ಅದರ ಫಲವಾಗಿ, 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾಯಿತು. ಇಂದಿರಾ ಗಾಂಧಿಯವರದೇ ಒಂದು ಗುಂಪು, ನಿಜಲಿಂಗಪ್ಪನವರದು ಇನ್ನೊಂದು ಗುಂಪು. ಇಂದಿರಾಜಿ ಗುಂಪಿನಲ್ಲಿ ಹೊಸಬರಿದ್ದರೆ, ನಿಜಲಿಂಗಪ್ಪನವರ ಗುಂಪಿನಲ್ಲಿ ಹಿರಿಯರು, ಅನುಭವಿಗಳು, ಮುಖಂಡರು ಹೆಚ್ಚಾಗಿದ್ದರು.

ರಾಜ್ಯ ಕಾಂಗ್ರೆಸ್‌ನಲ್ಲಿ, ಇಂದಿರಾಗಾOಧಿಯವರ ಗುಂಪಿಗೆ ದೇವರಾಜ ಅರಸು ಮುಂದಾಳು. ಆ ಸಂದರ್ಭದಲ್ಲಿ ಪ್ರಜಾ ಸೋಷಲಿಸ್ಟ್ ಪಕ್ಷದ ಶಾಸಕರಾದ ಸಾಹುಕಾರ್ ಚೆನ್ನಯ್ಯ, ಸಿದ್ಧವೀರಪ್ಪ, ಹುಚ್ಚಮಾಸ್ತಿಗೌಡರನ್ನು ಒಳಗೊಂಡ ನಾವೆಲ್ಲ ಒಂದು ಗುಂಪು, ಸಂಪೂರ್ಣವಾಗಿ ದೇವರಾಜ ಅರಸರ ಬೆಂಗಾವಲಿಗೆ ನಿಂತೆವು. ಸೋಷಲಿಸ್ಟ್ ಪಕ್ಷ ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನವಾಯಿತು.

ನಾಯಕತ್ವಕ್ಕಾಗಿ ಜಟಾಪಟಿ

ನಮ್ಮ ಸೋಷಲಿಸ್ಟ್ ಪಕ್ಷ ಇಂದಿರಾ ಗಾಂಧಿಯವರ ಕಾಂಗ್ರೆಸ್‌ನೊOದಿಗೆ ಸೇರ್ಪಡೆಯಾದ ನಂತರ, ನಮ್ಮ ಆಲೋಚನೆಗೆ ಹತ್ತಿರವಿದ್ದ ಬೇರೆ ಬೇರೆ ಪಕ್ಷದ ನಾಯಕರು ಬಂದು ಸೇರಿದ ಮೇಲೆ ಆ ಪಕ್ಷಕ್ಕೊಂದು ನೆಲೆ, ಬೆಲೆ ಬಂತು. ಆಗ ಅಲ್ಲಿ ನಾಯಕತ್ವಕ್ಕಾಗಿ ಇಬ್ಬರು ನಾಯಕರ ನಡುವೆ ಪೈಪೋಟಿ ಏರ್ಪಟ್ಟಿತು. ಬಹುಸಂಖ್ಯಾತ ಲಿಂಗಾಯತ ಜಾತಿಗೆ ಸೇರಿದ ಸಿದ್ಧವೀರಪ್ಪನವರು, ಹಿರಿಯರಾದ ಕಾರಣ ನಾಯಕರಾಗಲು ಪ್ರಯತ್ನಿಸಿದರು. ದೇವರಾಜ ಅರಸು ಕೂಡ ಮುಂಚೂಣಿಯಲ್ಲಿದ್ದರು.

ಈ ಸಮಯದಲ್ಲಿ ಒಂದು ಸ್ವಾರಸ್ಯಕರ ಘಟನೆ ನಡೆಯಿತು. ಸಾಹುಕಾರ್ ಚೆನ್ನಯ್ಯನವರು ಅಂದನಲ್ಲ, ಅವರು ನಮ್ಮ ಹಿರಿಯ ನಾಯಕರು. ನೆಹರೂ ಸಮಕಾಲೀನರು. ನೆಹರೂರೊಂದಿಗೆ ಉತ್ತಮ ಸ್ನೇಹ-ಸಂಪರ್ಕವಿಟ್ಟುಕೊOಡಿದ್ದವರು. ಈ ಕಾರಣಕ್ಕಾಗಿಯೇ ಇಂದಿರಾ ಗಾಂಧಿಯವರು, ಸಾಹುಕಾರ್ ಚೆನ್ನಯ್ಯನವರೆಂದರೆ ಬಹಳ ಗೌರವದಿಂದ ಕಾಣುತ್ತಿದ್ದರು. ಮತ್ತು ಅವರ ನಿಲುವು, ನಿರ್ಧಾರ, ಮಾತಿಗೆ ಬೆಲೆ ಕೊಡುತ್ತಿದ್ದರು.

ಈ ಸಾಹುಕಾರ್ ಚೆನ್ನಯ್ಯನವರಿಗೆ ನಮ್ಮ ತಂದೆ ಒಳ್ಳೆಯ ಸ್ನೇಹಿತರು. ಅವರ ಬಗ್ಗೆ ಅಗಾಧ ಗೌರವವನ್ನಿಟ್ಟುಕೊಂಡಿದ್ದರು. ಆ ಕಾರಣಕ್ಕಾಗಿ ಚೆನ್ನಯ್ಯನವರಿಗೆ ನಾನು ಹತ್ತಿರವಾದೆ. ನಮ್ಮಿಬ್ಬರ ನಡುವೆ ಅನ್ಯೋನ್ಯತೆ ಏರ್ಪಟ್ಟಿತ್ತು. ಯಾವುದೇ ವಿಷಯವನ್ನು ನನ್ನೊಂದಿಗೆ ಚರ್ಚಿಸದೆ ತೀರ್ಮಾನ ಕೈಗೊಂಡವರಲ್ಲ. ಹಾಗಾಗಿ, ನಾನು ಚೆನ್ನಯ್ಯನವರಿಗೆ ಹತ್ತಿರ, ಚೆನ್ನಯ್ಯನವರ ಮಾತನ್ನು ಇಂದಿರಾ ಗಾಂಧಿ ಕೇಳುತ್ತಾರೆ ಎನ್ನುವುದನ್ನು ದೇವರಾಜ ಅರಸು ಬಲ್ಲವರಾಗಿದ್ದರು. ಅರಸು ನೇರವಾಗಿ ನನ್ನ ಬಳಿ ಬಂದು, ತಮ್ಮ ಬಗ್ಗೆ ಚೆನ್ನಯ್ಯನವರಿಗೆ ಹೇಳಲು, ಅವರು ಇಂದಿರಾ ಗಾಂಧಿಗೆ ಶಿಫಾರಸ್ಸು ಮಾಡಲು ಕೇಳಿಕೊಂಡಿದ್ದರು.

ಏತನ್ಮಧ್ಯೆ, ಸಿದ್ಧವೀರಪ್ಪನವರೂ ಕೂಡ, ಸಾಹುಕಾರ್ ಚೆನ್ನಯ್ಯನವರನ್ನು ಒಲಿಸಿಕೊಳ್ಳಲು ಭಾರೀ ಪ್ರಯತ್ನವನ್ನೇ ಹಾಕಿದರು. ಹೀಗಿರುವಾಗಲೇ ದೆಹಲಿಯಿಂದ ಚೆನ್ನಯ್ಯನವರಿಗೆ ಬುಲಾವ್ ಬಂತು. ಸಾಹುಕಾರ್ ಚೆನ್ನಯ್ಯನವರು ತುಂಬಾ ಹಿರಿಯರು ಮತ್ತು ಅನುಭವಿಗಳು. ಅರಸು ಏನು, ಸಿದ್ಧವೀರಪ್ಪ ಎಂಥವರು ಎಂಬುದೆಲ್ಲವನ್ನು ಅರಿತಿದ್ದರು. ಇಂದಿರಾ ಗಾಂಧಿಯವರ ಮುಂದೆ ಖಡಕ್ ಅಭಿಪ್ರಾಯ ಮಂಡಿಸಿ, ದೇವರಾಜ ಅರಸು ಪರ ನಿಂತರು. ಇಂದಿರಾ ಗಾಂಧಿ ಕೂಡ ಅವರ ಮಾತಿಗೆ ಬೆಲೆ ಕೊಟ್ಟು, ಅರಸರನ್ನು ಕರ್ನಾಟಕ ಕಾಂಗ್ರೆಸ್‌ನ ಕನ್ವೀನರ್ ಆಗಿ ನೇಮಕ ಮಾಡಿದರು.

ಮಂತ್ರಿ ಮಾಡಿದ ಅರಸು

1972ರಲ್ಲಿ, ನಾನು ಆಗಲೇ ಎರಡು ಭಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಗೆದ್ದು ಸಂಸದನಾಗಿ ದೆಹಲಿಯತ್ತ ಮುಖ ಮಾಡಿದ್ದೆ. ದೇವರಾಜ ಅರಸರು ತಮ್ಮ ನಾಯಕತ್ವದಲ್ಲಿ ಕರ್ನಾಟಕವನ್ನು ಗೆದ್ದು ಮುಖ್ಯಮಂತ್ರಿಯಾದರು. ಅರಸರು ಅನುಭವಿಗಳು, ಕರ್ನಾಟಕದ ಜಾತಿರಾಜಕಾರಣವನ್ನು ಆಮೂಲಾಗ್ರವಾಗಿ ಅರಿತಿದ್ದರು. ಆ ಅನುಭವ, ಬುದ್ಧಿವಂತಿಕೆಯನ್ನು ನಿಕಷಕ್ಕೆ ಒಡ್ಡಿ, ಸಾಮಾಜಿಕ ನ್ಯಾಯವನ್ನು ಜಾರಿಗೊಳಿಸಲು ತಯಾರಿ ನಡೆಸಿದ್ದರು. ತಮಗೆ ಬೇಕಾದವರನ್ನು ಆರಿಸಿ ಮಂತ್ರಿಮAಡಲ ರಚಿಸಲು ಸಿದ್ಧರಾಗಿದ್ದರು. ಆ ಸಂದರ್ಭದಲ್ಲಿ ಅರಸರು, ಇಂದಿರಾಗಾAಧಿಯವರನ್ನು ಭೇಟಿ ಮಾಡಿ, `ಕೃಷ್ಣ ಅವರನ್ನು ಕಳುಹಿಸಿಕೊಡಿ, ಅವರನ್ನು ನಾನು ಮಂತ್ರಿ ಮಾಡಬೇಕು, ಕ್ಯಾಬಿನೆಟ್‌ನಲ್ಲಿಯುವ ಪ್ರತಿಭೆಗಳಿರಬೇಕು’ ಎಂದು ಬೇಡಿಕೆ ಇಟ್ಟಿದ್ದರು.

ಇಂದಿರಾಗಾAಧಿಯವರು, `ಅವರು ಒಪ್ಪಿದರೆ ನನ್ನದೇನು ಅಭ್ಯಂತರವಿಲ್ಲ’ ಎಂದರು. ಹೈಕಮಾಂಡಿನ ಸಿಗ್ನಲ್ ಸಿಕ್ಕ ಮೇಲೆ ಇನ್ನೇನು ಎಂದು ಅರಸರು ಬೆಂಗಳೂರಿಗೆ ಬಂದರು. ಇದು ನನ್ನ ಗಮನಕ್ಕೆ ಬಾರದಂತೆ ನಡೆದಿತ್ತು. ಇಂದಿರಾ ಗಾಂಧಿಯವರು ನನ್ನ ಕರೆದು, `ನೀನು ಸ್ಟೇಟ್‌ಗೆ ಹೋಗೋದು ಒಳ್ಳೆಯದು, ಅರಸರಿಗೆ ಮೇಜರ್ ಕಮ್ಯುನಿಟಿ ಸಪೋರ್ಟ್ ಬೇಕು. ನೀನು ಮತ್ತು ಸಾಹುಕಾರ್ ಮುಂದೆ ನಿಂತು, ಅರಸರಿಗೆ ಮೇಜರ್ ಕಮ್ಯುನಿಟಿಯಿಂದ ಎದುರಾಗುವ ತೊಡಕುಗಳನ್ನು, ಸಮಸ್ಯೆಗಳನ್ನು ನಿವಾರಿಸಬೇಕು’ ಎಂದರು.

ಕರ್ನಾಟಕದ ರಾಜಕಾರಣದಲ್ಲಿ ಬಹುಸಂಖ್ಯಾತರಾದ ಲಿಂಗಾಯತರು ಮತ್ತು ಒಕ್ಕಲಿಗರದೇ ಪ್ರಾಬಲ್ಯ. ಅಲ್ಲಿಯವರೆಗೆ ಮುಖ್ಯಮಂತ್ರಿಗಳಾದವರೂ ಕೂಡ ಅದೇ ಜಾತಿಯ ನಾಯಕರೆ. ಅಂತಹ ಸ್ಥಿತಿಯಲ್ಲಿ ಮೈನ್ಯೂಟ್ ಕಮ್ಯುನಿಟಿಯಿಂದ ಬಂದ ದೇವರಾಜ ಅರಸರು ಮುಖ್ಯಮಂತ್ರಿಯಾಗುವುದಕ್ಕೆ, ಕರ್ನಾಟಕ ಜನತೆಯ ಆಶೀರ್ವಾದ ಮತ್ತು ಇಂದಿರಾಗಾAಧಿಯವರ ಕೃಪಾಕಟಾಕ್ಷವಿತ್ತು. ಹಾಗಾಗಿ ಅರಸು ಮುಖ್ಯಮಂತ್ರಿಯಾಗುವುದನ್ನು ವಿರೋಧಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಅರಸು ಕೂಡ ತಮ್ಮ ಮಂತ್ರಿಮAಡಲದಲ್ಲಿ ಎಲ್ಲ ಜಾತಿ ಜನಾಂಗಗಳನ್ನು ತುಂಬಾ ಚೆನ್ನಾಗಿ ಬ್ಯಾಲೆನ್ಸ್ ಮಾಡಿದರು.

ನನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ವಾಣಿಜ್ಯ, ಕೈಗಾರಿಕೆ ಮತ್ತು ಸಂಸದೀಯ ವ್ಯವಹಾರ ಖಾತೆಯನ್ನು ಕೊಟ್ಟು ಮಂತ್ರಿ ಮಾಡಿದರು. ಮುಂದಕ್ಕೆ ವಿಧಾನಪರಿಷತ್ ಸದಸ್ಯನನ್ನಾಗಿ ಮಾಡಿದರು. ನನಗೂ ಆಗ ವಯಸ್ಸು, ಹುಮ್ಮಸ್ಸು ಇತ್ತು. ಉತ್ಸಾಹದಿಂದ ಅಪ್ಪರ್ ಕೃಷ್ಣಾ, ಕಾಳಿ ಯೋಜನೆ, ರಾಯಚೂರು ಥರ್ಮಲ್ ಪ್ಲಾಂಟ್- ಹೀಗೆ ಸುಮಾರು ಕೆಲಸ ಮಾಡಿದೆ. ಎಲ್ಲದಕ್ಕೂ ಅರಸು ಬೆಂಬಲವಾಗಿ ನಿಂತು ಪ್ರೋತ್ಸಾಹಿಸಿದರು.

ಹಳಿ ತಪ್ಪಿದ ರೈಲು

ಮೊದಲ ಅವಧಿ ಮುಗಿಯುವುದರೊಳಗೆ, ನನ್ನ ಅವರ ಸಂಬAಧದಲ್ಲಿ ಬಿರುಕುಬಿಟ್ಟಿತ್ತು. ವರುಣಾ ನಾಲೆಯ ವಿಚಾರವಾಗಿ ನಾನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಮಂಡ್ಯ ಜಿಲ್ಲೆಗೆ ಸೀಮಿತ ನಾಯಕನಾಗಲು, ಅವರ ವಿರುದ್ಧವೆ ನಿಲ್ಲುವಂತಹ ಸಂದರ್ಭ ಸೃಷ್ಟಿಯಾಗಿದ್ದು ವಿಪರ್ಯಾಸ. ಯಾರು ಭರವಸೆಯಿಟ್ಟು ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ತಮ್ಮ ಜೊತೆಗಿರಲಿ ಎಂದು ಮಂತ್ರಿ ಮಾಡಿದರೋ, ಅವರ ನಡುವೆಯೇ ಒಂದು ಕಂದಕ ಸೃಷ್ಟಿಯಾದದ್ದು ಇಟ್ಸ್ ಎ ಕ್ರೂಯಲ್ ಐರನಿ.

ನಂತರ ಅವರದೇ ಮಾರ್ಗ, ನನ್ನದೇ ಮಾರ್ಗ. ನಾವೆಲ್ಲ ಇಂದಿರಾ ಗಾಂಧಿ ಪರ ನಿಂತೆವು, ಅವರು ಇಂದಿರಾ ಗಾಂಧಿ ವಿರುದ್ಧ ಸಿಡಿದೆದ್ದರು, ರಾಷ್ಟç ರಾಜಕಾರಣದತ್ತ ಮುಖ ಮಾಡಿದರು. ಅದಕ್ಕೆ ತಕ್ಕಂತೆ ದೆಹಲಿ ನಾಯಕರ ಕೆಟ್ಟ ಸಹವಾಸ; ಎರಡು ವಿಧಾನಸಭೆ, ಎರಡು ಲೋಕಸಭೆ ಗೆದ್ದು, ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಅಧಿಕಾರದ ಮದ ಮತ್ತು ಮಾಧ್ಯಮಗಳು ಪ್ರಧಾನಮಂತ್ರಿಯಾಗುವ ಆಸೆ ಹುಟ್ಟಿಸಿ, ಹೊಗಳಿ ಅಟ್ಟಕ್ಕೇರಿಸಿ, ಹಳಿ ತಪ್ಪಿಸಿದರು. ಅವರದು ಹಳಿ ತಪ್ಪಿದ ರೈಲಾಯಿತು. ಅದೇ ಅವರಿಗೆ ಮುಳುವಾಯಿತು.

ಡಿ. ಬಿ. ಚಂದ್ರೇಗೌಡ

`ನೋ, ಐ ಡೋಂಟ್ ಕಂಟೆಸ್ಟ್’

ತುರ್ತು ಪರಿಸ್ಥಿತಿಯ ನಂತರ ಉತ್ತರ ಭಾರತದಲ್ಲಿ ಬಹುತೇಕ ಕಡೆ ಕಾಂಗ್ರೆಸ್ ನಿರ್ನಾಮವಾಗಿತ್ತು. ಆದರೆ ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನಗಳಲ್ಲಿ 26 ಗೆದ್ದಿತ್ತು. ಈ ಗೆಲುವಿನ ಹಿಂದಿದ್ದ ಧೀಶಕ್ತಿ ಅರಸು. ಅವರ ಸರಕಾರದ ಸಾಧನೆಗೆ ಸಂದ ಜಯ. ಆ ಸಂದರ್ಭದಲ್ಲಿ ಇಂದಿರಾ ಗಾಂಧಿಯವರನ್ನು ಮತ್ತೆ ಲೈಮ್‌ಲೈಟಿಗೆ ತರಬೇಕೆಂಬ ಚರ್ಚೆ ಶುರುವಾಯಿತು. ಅದೂ ಕರ್ನಾಟಕದಿಂದಲೇ. ಮೊದಲು ರಾಜ್ಯಸಭಾ ಎಂಪಿ ಮಾಡುವುದು ಎಂದರು. ಆಮೇಲೆ ಅರಸು ಅವರಿಗೆ ಏನನ್ನಿಸಿತೋ ನನ್ನನ್ನು ಕರೆದು ಸೂಕ್ಷö್ಮವಾಗಿ ತಿಳಿಸಿದರು. ಕೊನೆಗೆ `ಮೇಡಂ ಡೈರೆಕ್ಟಾಗಿ ಎಲೆಕ್ಷನ್ ಕಂಟೆಸ್ಟ್ ಮಾಡಿ, ಗೆದ್ದು ಬರಲಿ’ ಎಂಬ ತೀರ್ಮಾನಕ್ಕೆ ಬಂದರು.

ಹೀಗೆ ತೀರ್ಮಾನಿಸುತ್ತಿದ್ದಂತೆ ಯಾವ ಕ್ಷೇತ್ರದಿಂದ ಸ್ಪರ್ಧಿಸುವುದು, ಯಾವ ಕ್ಷೇತ್ರ ಸುರಕ್ಷಿತ ಎಂಬ ಪ್ರಶ್ನೆ ಎದುರಾಯಿತು. ಮುತ್ಸದ್ದಿ ಅರಸರಲ್ಲಿ ಅದಕ್ಕೂ ಮದ್ದಿತ್ತು. ಸೀದಾ ಚಿಕ್ಕಮಗಳೂರಿನ ಕೊಪ್ಪಕ್ಕೆ ಬಂದ ಅರಸು ನಾಲ್ಕೆöÊದು ಸಾವಿರ ಪಕ್ಷದ ಕಾರ್ಯಕರ್ತರ ಸಭೆ ಕರೆದರು. ನನಗೆ ಆಗಲೂ ಸ್ಥಾನ ತೆರವುಗೊಳಿಸುವ ಬಗ್ಗೆ ಸೂಚನೆಗಳಾಗಲಿ, ಸುಳಿವಾಗಲಿ ಸಿಗಲಿಲ್ಲ. ಆದರೆ ಕಾರ್ಯಕರ್ತರ ಸಭೆಯಲ್ಲಿ, `ಚಂದ್ರೇಗೌಡರನ್ನು ನನ್ನ ಕ್ಯಾಬಿನೆಟ್‌ನಲ್ಲಿ ಇಟ್ಕೋಬೇಕು, ಮಂತ್ರಿ ಮಾಡಿದರೆ ಹೇಗೆ?’ ಎಂಬ ಪ್ರಶ್ನೆ ಹಾಕಿದರು. ಎಲ್ಲಿಂದ ಎಲ್ಲಿಗೆ ಯೋಚನೆ. ಚಿಕ್ಕಮಗಳೂರು ಸುರಕ್ಷಿತವೆಂಬ ನಂಬಿಕೆ. ನನಗೆ ಒಂದು ಕ್ಷಣ ಅವರ ಆ ನಡೆಯ ಬಗ್ಗೆ ಮಾತೇ ಹೊರಡಲಿಲ್ಲ. ಆಮೇಲೆ ನಾನು ಎಂಪಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ, ನನ್ನನ್ನು ಎಂಎಲ್‌ಸಿ ಮಾಡಿದರು.

ಆಮೇಲಿನ ಬೆಳವಣಿಗೆಗಳನ್ನು ಕೇಳಿ… ಇಂದಿರಾಗಾOಧಿಯವರನ್ನು ಖುದ್ದಾಗಿ ಕಂಡು ಚುನಾವಣೆಗೆ ನಿಲ್ಲಲು ಒಪ್ಪಿಸುವ ಕೆಲಸವನ್ನು ನನಗೇ ವಹಿಸಲಾಯಿತು. ಡೆಲ್ಲಿಗೆ ಹೋದೆ, ಅವರನ್ನು ಕಂಡು ವಿಷಯ ಪ್ರಸ್ತಾಪಿಸಿದೆ. ಅವರಿಂದ ಬಂದ ಮಾತು ಒಂದೆ, `ನೋ, ಐ ಡೋಂಟ್ ಕಂಟೆಸ್ಟ್’ ಮುಂದೆ ಮಾತೇ ಇಲ್ಲ. ಇಂದಿರಾಗಾAಧಿಯವರು ಆ ರೀತಿ ಪ್ರತಿಕ್ರಿಯಿಸಲು, ತಿರಸ್ಕರಿಸಲು ಒಂದು ಕಾರಣವೂ ಇತ್ತು. ಅದು, ಮುಂಬೈನಲ್ಲಿ ಜನತಾಪಾರ್ಟಿಯ ಚಂದ್ರಶೇಖರ್ ಅವರನ್ನು ದೇವರಾಜ ಅರಸು ಗುಪ್ತವಾಗಿ ಭೇಟಿ ಮಾಡಿ ಮಾತುಕತೆಯಾಡಿದ್ದಾರೆಂಬ ಸುದ್ದಿ. ಆ ಥರದ್ದು ಏನೂ ಆಗಿರಲಿಲ್ಲ. ಆದರೆ ಇಂದಿರಾಗಾAಧಿಯವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದರು. ಅದು ಅವರಲ್ಲಿ ಅನುಮಾನದ ಬೀಜ ಬಿತ್ತಿತ್ತು. ಬೆಂಗಳೂರಿಗೆ ವಾಪಸ್ ಬಂದೆ. ದೇವರಾಜ ಅರಸು ಅವರನ್ನು ಕಂಡು ವಿಷಯ ತಿಳಿಸಿದೆ. ಅದಕ್ಕವರು, `ನಾನೇನು ಆಂಜನೇಯನಲ್ಲ, ಹೃದಯ ಬಗೆದು ತೋರಲು, ನಿಂತ್ರೆ ನಿಲ್ಲಲಿ ಇಲ್ಲಾಂದ್ರೆ ನೀವು ಸಿದ್ಧರಾಗಿ’ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿಯೇಬಿಟ್ಟರು. ಅವರು ಹಾಗೆ, ಇವರು ಹೀಗೆ.. ನಡುವೆ ನಾನು. ರಾಜೀನಾಮೆ ಬೇರೆ ಕೊಟ್ಟಿದ್ದೇನೆ. ಸಿಕ್ಕಾಪಟ್ಟೆ ಗೊಂದಲ…

ಆ ನಂತರ ಮತ್ತೆರಡು ಸಲ ಡೆಲ್ಲಿಗೆ ಹೋಗಿ ಇಂದಿರಾ ಅವರನ್ನು ಕಂಡು, `ಐ ಸ್ಪೇರ್ ಮೈ ಹೆಡ್, ಬಟ್ ನಾಟ್ ಯುವರ್ ಡಿಫೀಟ್’ ಎಂದು ಮನವೊಲಿಸಲು ಯತ್ನಿಸಿದೆ. ಆಗ ಅವರು `ಎಷ್ಟು ಜನ ಗೇಣಿದಾರರಿಗೆ ಭೂಮಿ ಕೊಟ್ಟಿದ್ದೀರಿ, ಮಧ್ಯಮ ವರ್ಗದವರ ಸಂಖ್ಯೆ ಎಷ್ಟು’ ಎಂದೆಲ್ಲ ಪ್ರಶ್ನಿಸಿದರೇ ಹೊರತು ಒಪ್ಪಿಕೊಳ್ಳಲಿಲ್ಲ. ಆಗ ನಾನು, ಅರಸು ಅವರ ವ್ಯಕ್ತಿತ್ವವನ್ನು, ಚರಿತ್ರಾರ್ಹ ನಿರ್ಧಾರದ ಹಿಂದಿನ ಘಟನಾವಳಿಗಳನ್ನು ವಿವರಿಸುತ್ತಾ. `ಅವರನ್ನು ನಂಬಿ ಮೇಡಂ, ಅವರನ್ನು ನಂಬಿ ಕೆಟ್ಟವರಿಲ್ಲ, ದೇಶದ, ಪಕ್ಷದ ಹಿತದೃಷ್ಟಿಯಿಂದ ನಾವು ಎಲ್ಲರನ್ನು ನಂಬಬೇಕಾಗುತ್ತದೆ’ ಎಂದು ಮನಮುಟ್ಟುವಂತೆ ಹೇಳಿದೆ. ಅಲ್ಲಿಯೆ ಇದ್ದ ಸಂಜಯಗಾAಧಿಯವರನ್ನು ಭೇಟಿ ಮಾಡಿ, ಚಿಕ್ಕಮಗಳೂರು ಜಿಲ್ಲೆಯ ಭೌಗೋಳಿಕ ಚಹರೆ ಮತ್ತು ಮತದಾರರ ಒಲವು ನಿಲುವುಗಳನ್ನು ಅಂಕಿಅAಶಗಳ ಸಮೇತ ವಿವರಿಸಿದೆ. ಅವರು ಕನ್ವಿನ್ಸ್ ಆದರು, `ನಾನು ಒಪ್ಪಿಸುತ್ತೇನೆ’ ಎಂಬ ಭರವಸೆ ನೀಡಿದರು. ಅದಾದ ಮೇಲೆ ಇಂದಿರಾ ಒಪ್ಪಿದರು. ಅಷ್ಟೊತ್ತಿಗಾಗಲೇ ನಾಮಪತ್ರ ಸಲ್ಲಿಸಲು ಕೊನೆದಿನವಾಗಿತ್ತು. ಡೆಲ್ಲಿಯಿಂದ ಗಡಿಬಿಡಿಯಲ್ಲಿ ಮುಂಬೈಗೆ, ಅಲ್ಲಿಂದ ಮಂಗಳೂರಿಗೆ ಬಂದು ಚಿಕ್ಕಮಗಳೂರು ತಲುಪಿ ನಾಮಪತ್ರ ಸಲ್ಲಿಸಿದೆವು. ಅದು ಭಾರತದ ರಾಜಕಾರಣದ ಮಟ್ಟಿಗೆ ಐತಿಹಾಸಿಕ ಚುನಾವಣೆ. 77 ಸಾವಿರ ಮತಗಳ ಅಂತರದಿAದ ಗೆದ್ದ ಇಂದಿರಾಗಾAಧಿಯವರ ರಾಜಕೀಯ ಬದುಕು ಪುನರ್ಜನ್ಮ ಪಡೆದಿತ್ತು.

ಈ ಗೆಲುವು ಅರಸು ಅವರ ಸಾಧನೆಯ ಮೈಲಿಗಲ್ಲು. ಅದರಿಂದ ವೃದ್ಧಿಸಿದ ಆತ್ಮವಿಶ್ವಾಸವೇ ಅವರನ್ನು ಅಜ್ಞಾನಕ್ಕೆ ದೂಡಿತು, ದಿಕ್ಕು ತಪ್ಪಿಸಿತು…

ಸೆಟೆದು ನಿಂತರು, ಸೋತರು, ರಾಜೀನಾಮೆ ಕೊಟ್ಟರು

ರಾರಾಜ್ಯದಲ್ಲಿ ಪ್ರಬಲವಾಗಿದ್ದ ಕಾಂಗ್ರೆಸ್ 1978ರ ನಂತರ, 2ನೇ ಬಾರಿಗೆ ವಿಭಜನೆಯಾದ ಮೇಲೆ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಾ ಸಾಗಿತು. ಹಾಗೆಯೇ ಅರಸು ಅವರ ಜನಪ್ರಿಯತೆಯ ಗ್ರಾಫ್ ಕೂಡ. ಇದು ನಿಚ್ಚಳವಾಗಿ ಕಂಡಿದ್ದು 1980ರಲ್ಲಿ ಲೋಕಸಭಾ ಚುನಾವಣೆ ಮತ್ತದರ ಫಲಿತಾಂಶದಿAದ. ಇಂದಿರಾಗಾOಧಿಯವರಿಗೆ ಸಡ್ಡು ಹೊಡೆದ ಅರಸು ತಮ್ಮದೇ ಒಂದು ಪಕ್ಷ ಕಟ್ಟಿದರು. ಆಶ್ಚರ್ಯವೆಂದರೆ, ಇಡೀ ಮಂತ್ರಿಮOಡಲ ಅರಸು ಅವರನ್ನು ಬೆಂಬಲಿಸಿತು. ಆ ಧೈರ್ಯದ ಮೇಲೆ ಲೋಕಸಭಾಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ದುರದೃಷ್ಟಕರ ಸಂಗತಿ ಎಂದರೆ, ಅರಸು ಪಕ್ಷದ ಅಷ್ಟೂ ಅಭ್ಯರ್ಥಿಗಳು ಸೋತರು. ಅಷ್ಟೇ ಅಲ್ಲ, 24 ಅಭ್ಯರ್ಥಿಗಳ ಠೇವಣಿ ಜಫ್ತಿಯಾಗಿತ್ತು.

ತಮಾಷೆ ಏನೆಂದರೆ, ಲೋಕಸಭೆ ಚುನಾವಣೆ ಫಲಿತಾಂಶದ ಹಿಂದಿನ ದಿನ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಸಂಪುಟ ಸದಸ್ಯರೆಲ್ಲರೂ ನಿಷ್ಠೆ ತೋರಿ, ಬಾವಿಗೆ ಬೀಳು ಅಂದರೆ ಬೀಳಲೂ ಸಿದ್ಧ ಎಂದಿದ್ದರು. ಮಾರನೇ ದಿನ ಫಲಿತಾಂಶ ಬಂದಾಗ, ಅರಸು ಕಾಂಗ್ರೆಸ್‌ನಿOದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಸೋತಾಗ, ಬಾವಿಗೆ ಬೀಳ್ತೀವಿ ಎಂದವರು ನಾಪತ್ತೆಯಾಗಿದ್ದರು. ಅರಸು ಅವರ ಹಿಂದೆ ಮುಂದೆ ಸುಳಿದಾಡುತ್ತಿದ್ದವರು ಇಂದಿರಾ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರು.

ನಮ್ಮ ಜೊತೆಗಿದ್ದವರೇ ಪಕ್ಷಾಂತರ ಮಾಡಿದಾಗ, ಪರಿಸ್ಥಿತಿಯ ಸೂಕ್ಷö್ಮತೆ ಅರಿತ ನಾನು, ಕೆ.ಎಚ್. ಶ್ರೀನಿವಾಸ್, ಸುಬ್ಬಯ್ಯಶೆಟ್ಟಿ, ಮೊಹಿದೀನ್ ಅಥವಾ ಹಾವನೂರು ಹೀಗೆ ನಾಲ್ಕೆOದು ಮಂದಿ ಅರಸು ಮನೆಗೆ ಹೋದೆವು. ಮುಂದೇನು ಎಂದಾಗ, `ರಾಜಭವನಕ್ಕೆ ಹೋಗೋಣ’ ಎಂದರು. ನಾವು ಡ್ರೈವ್ರ್-ಕಾರ್ ಎಂದು ಹುಡುಕುತ್ತಿದ್ದಗ ಅರಸು, `ಸಿಎಂ, ಕಾರುಎಲ್ಲಾ ಮುಗೀತು, ನಿಮ್ಮ ಕಾರಲ್ಲಿಯೇ ಹೋಗೋಣ’ ಎಂದರು. ನಂದೇ ಕಾರು, ನಾನೇ ಡ್ರೈವರ್, ಅರಸು ಮುಂದೆ, ನನ್ನ ಪಕ್ಕದಲ್ಲಿ ಕೂತಿದ್ದರು. ಹಿಂದೆ ಕೆ.ಎಚ್. ಶ್ರೀನಿವಾಸ್, ಸುಬ್ಬಯ್ಯ ಶೆಟ್ಟಿ, ಹಾವನೂರು ಇದ್ದರು. ರಾಜಭವನಕ್ಕೆ ಹೋಗಿ, `ಸಿಎಂ ಬಂದಿದಾರೆ ಎಂದು ತಿಳಿಸಪ್ಪಾ’ ಎಂದಾಗ, `ದೇವರಾಜ ಅರಸು ಎಂದು ಹೇಳಪ್ಪಾ’ ಎಂದರು ಅರಸು. ನಿಂತ ನಿಲುವಿನಲ್ಲಿಯೇ ಮುಖ್ಯಮಂತ್ರಿ ಹುದ್ದೆಯನ್ನು ನಿರಾಕರಿಸುವಷ್ಟು ದೊಡ್ಡತನ ಅವರಲ್ಲಿತ್ತು. ಅದನ್ನು ಹಾಗೆಯೇ ರಾಜ್ಯಪಾಲರ ಮುಂದೆಯೂ ಹೇಳಿದರು. `ಅಸೆಂಬ್ಲಿಯಲ್ಲಿ ಸೋತಿಲ್ಲ, ರಾಜೀನಾಮೆ ಏಕೆ’ ಎಂದು ರಾಜ್ಯಪಾಲರು ಕೇಳಿದಾಗ, `ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುವೆ’ ಎಂದರು. ಆಡಿದ ಮಾತಿಗೆ ತಪ್ಪದ ಅರಸು ಯಾರನ್ನೂ ಕೇಳದೆ, ಮಂತ್ರಿಮOಡಲದ ಸಭೆಯನ್ನೂ ಕರೆಯದೆ, ಸೋಲನ್ನು ಒಪ್ಪಿಕೊಂಡು ರಾಜೀನಾಮೆ ಕೊಟ್ಟು ತಣ್ಣಗೆ ಮನೆಗೆ ಬಂದರು. ಅದೇ ಅರಸು.

ಅತಿಯಾದ ಅಪಪ್ರಚಾರ

ದೇವರಾಜ ಅರಸು ಅವರ ಕಾರ್ಯಕ್ರಮಗಳು, ಆಡಳಿತಾತ್ಮಕ ನಿಲುವುಗಳು ಮತ್ತು ಅದರಿಂದಾದ ಸಾಮಾಜಿಕ ಬದಲಾವಣೆಗಳ ಬಗ್ಗೆ ನಾನು ಎಷ್ಟೇ ಒಳ್ಳೆಯ ಮಾತುಗಳನ್ನು ಆಡಬಹುದಾದರೂ, ಅವರ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿತ್ತು ಎನ್ನುವವರಿದ್ದಾರೆ. ಆದರೆ, ಅದು ಅಷ್ಟು ಸರಿ ಅಲ್ಲ. ಅವರನ್ನು ಹತ್ತಿರದಿಂದ ಬಲ್ಲ ನಾನೂ ಕೂಡ ಕಣ್ಣಾರೆ ಕಂಡಿದ್ದನ್ನು ಹೇಳದಿದ್ದರೆ ತಪ್ಪಾಗುತ್ತದೆ. ಅರಸರಿಗೆ ಎಸಗಿದ ಅಪಚಾರವಾಗುತ್ತದೆ. ಇನ್‌ಫ್ಯಾಕ್ಟ್, ಭ್ರಷ್ಟಾಚಾರದ ಬಗ್ಗೆ ನಾನು ಅವರ ಮೇಲೆ ಸಿಟ್ಟಾಗಿದ್ದೆ, ಅವರನ್ನೇ ನೇರವಾಗಿ `ಏನು ಇದೆಲ್ಲ’ ಎಂದು ಪ್ರಶ್ನೆ ಮಾಡಿದ್ದೆ. ಅದಕ್ಕವರು ಸಿಟ್ಟಾಗಲಿಲ್ಲ. `ಬಲಗೈನಲ್ಲಿ ತೆಗೆದುಕೊಂಡು ಎಡಗೈನಲ್ಲಿ ಬಿಸಾಡಿನೆ. ಆ ಹಣದಲ್ಲಿ ಒಂದು ಲೋಟ ಕಾಫಿ ಕೂಡ ಕುಡಿದಿಲ್ಲ’ ಎಂದು ಖಡಕ್ಕಾಗಿ ಹೇಳಿದ್ದರು.

ಇದಕ್ಕೆ ನನ್ನ ಅನುಭವಕ್ಕೆ ಬಂದ ಒಂದು ಉದಾಹರಣೆ ಕೊಡುತ್ತೇನೆ. ಒಮ್ಮೆ ಭದ್ರಾವತಿಯ ಸಿ.ಎಂ. ಇಬ್ರಾಹಿಂ ಬಾಲಬ್ರೂಯಿಯ ಹೊರಗೆ ಕಾಯುತ್ತಾ ಕೂತಿದ್ದರು. ನಾನು ಅರಸು ಅವರ ಆಪ್ತ ಒಡನಾಡಿ, ಅವರ ರೂಮಿಗೆ, ಮನೆಯೊಳಗೆ ಓಡಾಡುವಷ್ಟು ಸ್ವಾತಂತ್ರö್ಯವಿತ್ತು. ಆದರೆ ಅದೇ ಸ್ವಾತಂತ್ರö್ಯ ಇಬ್ರಾಹಿಂಗೆ ಇರಲಿಲ್ಲ. ಹಾಗಾಗಿ ಆತ ಹೊರಗೆ ಕೂತಿದ್ದ. ನಾನು ಹೋಗಿ ಅರಸು ಅವರಿಗೆ, `ಇಬ್ರಾಹಿಂ ಬಂದಿದಾನೆ, ಹೊರಗೆ ಕೂತಿದ್ದಾನೆ, ಕರೆದು ಮಾತನಾಡಿಸಬಾರದೆ?’ ಎಂದೆ. ಯರ‍್ಯಾರು ಏನೇನಕ್ಕೆ ಬರ್ತಾರೆ ಎನ್ನುವುದು ಅರಸು ಅವರಿಗೆ ತುಂಬಾ ಚೆನ್ನಾಗಿ ಗೊತ್ತಿತ್ತು. ಅದಕ್ಕೆ ಅರಸು, `ಇನ್ನೇನಕ್ಕೆ ಬರ್ತರೆ…’ ಎಂದಷ್ಟೇ ಹೇಳಿ, ಆಗಿನ ಅಬಕಾರಿ ಗುತ್ತಿಗೆದಾರ, ದುಡ್ಡಿದ್ದ ಧಣಿO ಬಸವರಾಜು ಅವರಿಗೆ ಫೋನ್ ಮಾಡಿದರು. ಫೋನ್ ಮಾಡಿ 15 ನಿಮಿಷವಾಗಿಲ್ಲ, ಬಸವರಾಜು ಸೂಟ್‌ಕೇಸ್ ಸಮೇತ ಬಂದರು, ಇಟ್ಟು ಹೊರಟುಹೋದರು. ಬಸವರಾಜು, ಅರಸು ಅವರ ಖಜಾಂಚಿಯತಿದ್ದರು. ಫೋನ್ ಎಂದಾಕ್ಷಣ ಅರ್ಥವಾಗುತ್ತಿತ್ತು. ತಂದಿಟ್ಟು ಹೋಗುತ್ತಿದ್ದರು. ಅರಸು ಅವರು, `ಕರರ‍್ರೀ… ಅವರನ್ನ’ ಎಂದು ಲಿಕ್ಕರ್ ಬಸವರಾಜು ಕೊಟ್ಟ ಸೂಟ್‌ಕೇಸನ್ನು ಆತನಿಗೆ ಕೊಟ್ಟರು. ನನಗೆ ಆಶ್ಚರ್ಯವಾಗಿದ್ದು, ಆ ಸೂಟ್‌ಕೇಸ್‌ನಲ್ಲಿ ಏನಿದೆ, ಎಷ್ಟಿದೆ ಎಂದು ಸಣ್ಣ ಕುತೂಹಲಕ್ಕಾದರೂ ನೋಡಲಿಲ್ಲ.

ಮನುಷ್ಯರು ಹೇಗಿರುತ್ತಾರೆಂದರೆ, ಅವತ್ತು ಹಣಕ್ಕಾಗಿ ಕಾದಿದ್ದು ಸೂಟ್‌ಕೇಸ್ ತೆಗೆದುಕೊಂಡ ಹೋದ ಮನುಷ್ಯ, ಮುಂದೊOದು ದಿನ ಪವಿತ್ರವಾದ ಶಾಸನಸಭೆಯಲ್ಲಿ ನಿಂತು, `ಅವರು ಆಟೋದಲ್ಲಿ ಹೋಗುತ್ತಿದ್ದುದು ಎಲ್ಲಿಗೆ, ಸ್ವಲ್ಪ ಫಾಲೋ ಮಾಡಿದ್ರೆ ಅವರ ಬಂಡವಾಳ ಬಯಲಾಗ್ತಿತ್ತು…’ ಎಂದು ವ್ಯಂಗ್ಯಮಿಶ್ರಿತ ಧಾಟಿಯಲ್ಲಿ ಅರಸು ಅವರ ಚಾರಿತ್ರ‍್ಯವಧೆ ಮಾಡಲು ಹವಣಿಸಿದ್ದರು. ಇಂಥವರೆಲ್ಲ ಈಗ ಕಾಂಗ್ರೆಸ್‌ನ ಅಗ್ರಗಣ್ಯ ನಾಯಕರು!

ಕಣ್ಣೀರಿಟ್ಟರು ಕಣ್ಮರೆಯಾದರು

ಜೂನ್ 6, 1982ರ ಬೆಳಗ್ಗೆ ದೇವರಾಜ ಅರಸು ಅವರು ಫೋನ್ ಮಾಡಿ `ಮಾತನಾಡಬೇಕು ಬಂದ್ಹೋಗಿ’ ಎಂದರು. ನನಗೆ ಅವತ್ತು ಕೋಲಾರಕ್ಕೆ ಹೋಗುವುದಿತ್ತು. ಅರಸು ಅವರನ್ನು ಕಾಣಲು ಅವರ ಮನೆಗೆ ಹೋದೆ. ಯಾರೂ ಇರಲಿಲ್ಲ. ಒಬ್ಬ ಜನಪ್ರಿಯ ಜನನಾಯಕ ಒಂಟಿಯಾಗಿ ಬದುಕುವುದು ಜೀವಂತ ನರಕ ಎನ್ನಿಸಿತು. ನಾನು ಹೋಗಿ ಅವರಿಗೆ ನಮಸ್ಕರಿಸುತ್ತಿದ್ದಂತೆ ಮಗನನ್ನು ಕಳೆದುಕೊಂಡ ತಂದೆಯOತೆ ಗಳಗಳನೆ ಅತ್ತುಬಿಟ್ಟರು. ಮಡುಗಟ್ಟಿದ ವೇದನೆ ಕರಗಿ ಕಣ್ಣೀರಿನ ಮೂಲಕ ಹೊರಬಂದಿತ್ತು. ನನಗೆ ನಿಂತ ನೆಲವೇ ಕುಸಿದಂತಾಗಿ, ನಾನು ಕೋಲಾರಕ್ಕೆ ಹೋಗಿ ಬರುತ್ತೇನೆ, ಸಂಜೆ ನಮ್ಮ ಸಮಾನ ಮನಸ್ಕರ ಸಭೆ ಇದೆ, ಆ ಸಭೆಯ ನಂತರ ಬಂದು ನಿಮ್ಮನ್ನು ಕಾಣುತ್ತೇನೆ, ನಮ್ಮದೇನಿದ್ದರೂ ತಾತ್ವಿಕ ಭಿನ್ನಾಭಿಪ್ರಾಯ, ಪರಿಹರಿಸಿಕೊಳ್ಳೋಣ ಎಂದೆಲ್ಲ ಹೇಳಿ ಬಿಟ್ಟುಹೋಗದ ಮನಸ್ಸಿನಲ್ಲಿ ಹೋದೆ. ಹೋಗಿ ಕೆಲವೇ ಹೊತ್ತಿನಲ್ಲಿ ಸುದ್ದಿ ಬಂತು- ಅರಸು ಇನ್ನಿಲ್ಲ ಎಂದು.

ನನ್ನ ಪಾಲಿಗೆ ಆ ದಿನ, ಆ ಕೊನೆಯ ಭೇಟಿ, ಒಬ್ಬರೆ ಕೂತಿದ್ದು, ಗಳಗಳನೆ ಅತ್ತಿದ್ದು ನಾನಿರುವವರೆಗೂ ನನ್ನ ಮನಸ್ಸಿನ ಮೂಲೆಯಲ್ಲಿ ಕೊರೆಯುತ್ತಿರುತ್ತದೆ. ಹಾಗೆಯೇ ಮರೆಯಲಾರದ ಕ್ಷಣವಾಗಿ ನೆನಪಿನಲ್ಲಿ ಉಳಿದಿರುತ್ತದೆ.

ಆಪ್ತರ ಮಾತುಗಳಲ್ಲಿ ಅರಸು ಆತ್ಮಚರಿತ್ರೆ

ಯಾವ ಜೀವನಚರಿತ್ರೆಗಳೂ ಯಾರದೇ ‘ಜೀವನ’ದ ಚರಿತ್ರೆಯಾಗಿರುವುದಿಲ್ಲ. ಇನ್ನೊಬ್ಬರ ಜೀವನವನ್ನು ಕಂಡ ರೀತಿಯ ಚರಿತೆಯಾಗಬಹುದಷ್ಟೆ. ‘ಆತ್ಮಚರಿತ್ರೆ’ಗಳು ಸಾಮಾನ್ಯವಾಗಿ ತಮ್ಮನ್ನು ತಾವು ವೈಭವೀಕರಿಸಿಕೊಳ್ಳುವ ಚಾಳಿಯಿಂದ ಹೊರಬರದೇ ತೊಳಲಾಡಿಕೊಂಡರೆ, ಇನ್ನೊಬ್ಬರ ಚರಿತ್ರೆ ಬರೆಯುವುದು ‘ಐದು ಕುರುಡರು ಆನೆಯೊಂದನ್ನು ವರ್ಣಿಸಿದ’ ಕಥೆಯಂತೆ ಎಂದೂ ಹೇಳಲಾಗುತ್ತದೆ.

ಅದರಲ್ಲಿಯೂ ಸಾರ್ವಜನಿಕ ಜೀವನದಲ್ಲಿ ಇದ್ದ ವ್ಯಕ್ತಿಯೊಬ್ಬನ ಜೀವನದ ಸಂಕೀರ್ಣತೆಯನ್ನು ಅಷ್ಟು ಸುಲಭ ಸಾಧ್ಯವಾಗಿ ಹೇಳಲಾಗುವುದಿಲ್ಲ.

ಕರ್ನಾಟಕದಲ್ಲಿ ಅಭಿನಂದನಾ ಗ್ರಂಥಗಳನ್ನು ಬರೆಯುವ ಹೊಸ ಪರಂಪರೆಯೊOದೂ ಮೂಡಿಬಂದಿದೆ. ಈ ಗ್ರಂಥಗಳಲ್ಲಿ ಅಧಿಕಾರಯುತ ಸಾರ್ವಜನಿಕ ವ್ಯಕ್ತಿಯೊಬ್ಬನ ಬಗ್ಗೆ ಹಲವರು ಪ್ರಶಂಸೆಯ ಸುರಿಮಳೆಯನ್ನೇ ಸುರಿಸಿರುತ್ತಾರೆ. ಯಾವುದೇ ಟೀಕೆ-ವಿಮರ್ಶೆಗಳಿಗೆ ಅಲ್ಲಿ ಆಸ್ಪದವಿರುವುದಿಲ್ಲ. ಏಕೆಂದರೆ ಆ ಸಾರ್ವಜನಿಕ ವ್ಯಕ್ತಿಯೇ ಬಹುತೇಕ ಆ ಪುಸ್ತಕದ ಪ್ರಕಾಶಕನೂ ಆಗಿರುತ್ತಾನೆ. ಅವನ ಹೊಗಳುಭಟ್ಟನೊಬ್ಬನನ್ನೇ ಸಂಪಾದಕ ಮಂಡಲಿಯ ಮುಖ್ಯಸ್ಥನನ್ನಾಗಿ ಮಾಡಲಾಗಿರುತ್ತದೆ. ಈ ತೆರನಾದ ಗ್ರಂಥಗಳಲ್ಲಿ ಒಂದೇ ಮಗ್ಗುಲಿನ ಅಭಿಪ್ರಾಯಗಳ ಜೊತೆಗೆ ಸತ್ಯದೂರವಾದ ಹೊಗಳಿಕೆಯ ಅಂಶಗಳೇ ತುಂಬಿರುತ್ತವೆ.

ಇನ್ನು ಕೆಲವು ಜೀವನ ಚರಿತ್ರೆಗಳನ್ನು ಸಾರ್ವಜನಿಕ ವ್ಯಕ್ತಿಯ ಮಕ್ಕಳು-ಕುಟುಂಬದವರು ಬರೆಸಿರುತ್ತಾರೆ. ಈ ಪರಿವಾರದವರ ಅಧಿಕಾರದ ಸಮಯವಿನ್ನೂ ಮುಗಿಯದ ಕಾರಣ ಚರಿತ್ರೆಯುದ್ದಕ್ಕೂ ಆ ಸಾರ್ವಜನಿಕ ವ್ಯಕ್ತಿಯ ಬಗ್ಗೆ ಹೆದರಿಕೆಯುಕ್ತ ಗುಣಗಾನವೇ ಇರುತ್ತದೆ. ಇಲ್ಲೂ ಸಹಾ ಮುಕ್ತ ವಿಮರ್ಶೆಯ ಯಾವುದೇ ಸಾಧ್ಯತೆಗಳು ಕಂಡುಬರುವುದಿಲ್ಲ. ಮೇಲಾಗಿ ಇಂತಹಾ ಪುಸ್ತಕಗಳ ಪ್ರಕಾಶನವೇ ವ್ಯಕ್ತಿಯೊಬ್ಬನನ್ನು ಹೊಗಳಿಕೆಯ ಹೊನ್ನಶೂಲಕ್ಕೆ ಏರಿಸಿ ಪ್ರತಿಫಲಿತ ವೈಭವದಲ್ಲಿ ಮೆರೆದಾಡುವುದು ಆಗಿರುತ್ತದೆ.

ಬಸವರಾಜು ಮೇಗಲಕೇರಿಯವರ ‘ನಮ್ಮ ಅರಸು’ ಮೇಲೆ ಹೇಳಿದ

ಬಸವರಾಜು ಮೇಗಲಕೇರಿ ಅವರ ‘ನಮ್ಮ ಅರಸು

ಎಲ್ಲ ಪ್ರಕಾಶನಗಳಿಗೆ ವಿಭಿನ್ನವಾಗಿದೆ. ದೇವರಾಜ ಅರಸುರವರ ಜೀವನ-ಸಾಧನೆ-ವೈಫಲ್ಯಗಳ ಬಗ್ಗೆ ಅರವತ್ತಕ್ಕೂ ಹೆಚ್ಚಿನ ಲೇಖಕರು ಒಂದೊOದು ಅಧ್ಯಾಯಗಳನ್ನು ಬರೆದಿರುವ ಈ ಬೃಹದ್-ಗ್ರಂಥದಲ್ಲಿ ಅರಸು ವ್ಯಕ್ತಿತ್ವದ ಬಹುತೇಕ ಎಲ್ಲ ಕೋನ-ಆಯಾಮಗಳ ವರ್ಣನೆಯಿದೆ. ಹೊಗಳುವವರು ಮನಸಾರೆ ಬರೆದಿದ್ದರೆ ತೆಗಳುವವರು ಮನಬಿಚ್ಚಿ ಮಾತನಾಡಿದ್ದಾರೆ. ಅರಸುರವರ ನಿಧನದ 38 ವರ್ಷಗಳ ನಂತರದ ಸಮಯದಲ್ಲಿ ಹಾಗೂ ಅರಸು ಕುಟುಂಬದಯಾರೂ ಈಗಿನ ರಾಜಕೀಯದಲ್ಲಿ ಪ್ರಭಾವಿಗಳಾಗಿರದ ಕಾಲದಲ್ಲಿ ಈ ಪುಸ್ತಕ ನಿಜವಾದ ‘ಜೀವನಚರಿತ್ರೆ’ ಹೇಳುವ ಇತಿಹಾಸದ ದಾಖಲೆಯಾಗಿದೆ. ಅರಸುರವರೊಡನೆ ಹತ್ತಿರದ ಒಡನಾಟದ ಈ ಅರವತ್ತು ಲೇಖಕರು-ಮಾತುಗಾರರ ಅನಿಸಿಕೆಗಳು ಸಾರ್ವಜನಿಕ ಬದುಕಿನಲ್ಲಿ ಸಾಧ್ಯವಾಗುವ ಮುಕ್ತ ರೂಪದಲ್ಲಿವೆ.

ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡಿದ್ದ ಬಸವರಾಜು ಮೇಗಲಕೇರಿಯವರು ನಂತರದ ದಿನಗಳಲ್ಲಿ ‘ವಾರ್ತಾಭಾರತಿ’ಯ ಸುದ್ದಿ ಸಂಪಾದಕರಾಗಿ ಕೆಲಸ ಮಾಡುತ್ತಾ ಅದೇ ಪತ್ರಿಕೆಗೆ ಬರೆದ ಲೇಖನಮಾಲೆಯ ಸಂಗ್ರಹ ಇದಾಗಿದೆ. ಅರಸು ವ್ಯಕ್ತಿತ್ವದ ಒಂದೊOದು ಮಗ್ಗುಲನ್ನು ಒಬ್ಬೊಬ್ಬ ಲೇಖಕರು ಅನಾವರಣಗೊಳಿಸುತ್ತಾ ಹೋಗುವ ಈ ಪುಸ್ತಕ ನಿಧಾನವಾಗಿ ಎಲ್ಲ ಮಗ್ಗುಲುಗಳನ್ನೂ ತೆರೆದು ಹೇಳುವ ಚರಿತ್ರೆಯಾಗಿದೆ. ಅರಸುರವರ ಸಾಧನೆಗಳ ಜೊತೆಗೆ ಅವರ ಇತಿಮಿತಿ, ದರ್ಪ, ತಪ್ಪುಗಳು ಹಾಗೂ ದೌರ್ಬಲ್ಯಗಳನ್ನೂ ಹೇಳುವ ಪುಸ್ತಕವಾಗಿದೆ.

ಈ ಹಿಂದೆ ಅರಸುರರ ಬಗ್ಗೆ ಹಲವು ಪುಸ್ತಕಗಳು ಬಂದಿವೆ. ಅತ್ಯಂತ ನಿಷ್ಠುರವಾಗಿ ಹಾಗೂ ವಸ್ತುನಿಷ್ಟವಾಗಿ ‘ಮುಂಗಾರು’ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟಿಯವರು ‘ಬಹುರೂಪಿ ಅರಸು’ ಹೆಸರಿನಲ್ಲಿ ತಂದಿದ್ದರು. ಕೆ. ಪುಟ್ಟಸ್ವಾಮಿಯವರು ಅರಸುರವರ ‘ಚಿತ್ರಕಥಾಕೋಶ’ವೊಂದನ್ನು ಆಕರ್ಷಕವಾಗಿ ತಂದಿದ್ದಾರೆ. ಎನ್.ಎಸ್.ಶಂಕರ್ ಅವರು ‘ಅರಸುಯುಗ’ ದಾಖಲಿಸಿದ್ದಾರೆ. ಆದರೆ ಈ ಎಲ್ಲ ಪುಸ್ತಕಗಳಿಂತಲೂ ಹೆಚ್ಚು ಸೂಕ್ಷö್ಮವಾಗಿ ಹಾಗೂ ಬಹು-ಆಯಾಮಯುಕ್ತ ವಿಶದ ಸಂಪುಟವಾಗಿ ಈ ಹೊತ್ತಿಗೆ ಹೊರಬಂದಿದೆ. ಅರಸುರವರ ಜೀವನ-ರಾಜಕೀಯವನ್ನು ಅರಿಯಬೇಕೆಂದು ಹೊರಟ ಯಾವುದೇ ಆಸಕ್ತನ ಆಕರಗ್ರಂಥವಾಗಿದೆ. 70ರ ಮತ್ತು 80ರ ದಶಕದ ಕರ್ನಾಟಕ ರಾಜಕೀಯದ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿದ್ದ ಅರಸುರವರ ಜೀವನಚರಿತ್ರೆ ಹೇಳುವ ಸಂದರ್ಭದಲ್ಲಿ ಕರ್ನಾಟಕ ರಾಜಕೀಯ ತಿಳಿಹೇಳುವ ಅಧಿಕಾರಯುಕ್ತ ಇತಿಹಾಸವಾಗಿದೆ.

ಈ ಪುಸ್ತಕವನ್ನು ನೀವು ಓದಿ ನೋಡಿ. ಸದ್ಯಕ್ಕೆ ಈ ಸಂಚಿಕೆಯ ಮುಖ್ಯಚರ್ಚೆಗೆ ಪೂರಕವಾಗಿ ಅರಸು ಮತ್ತು ಇಂದಿರಾಗಾOಧಿಯವರ ನಡುವಿನ ಸಂಬAಧದ ಮಗ್ಗುಲನ್ನು ತಿಳಿಹೇಳುವ ಆರೇಳು ಲೇಖಕರ ಬರೆಹಗಳ ಆಯ್ದ ಭಾಗಗಳನ್ನು ಇಲ್ಲಿ ನೀಡಲಾಗಿದೆ. ಈ ಸಂಪಾದಿತ ತುಣುಕುಗಳಲ್ಲಿಯೇ ನಿಮಗೆ ವಂಶಪಾರAರ‍್ಯದ ರಾಜಕೀಯ ಪಕ್ಷವೊಂದು ಸ್ವಯಂಭು ಜನನಾಯಕನೊಬ್ಬನನ್ನು ನೋಡಿದ ಹಾಗೂ ನಡೆಸಿಕೊಂಡ ಪರಿಯ ಚಿತ್ರಣ ನಿಮಗೆ ಸಿಗುತ್ತದೆ. ಮುಖ್ಯಚರ್ಚೆ ಎತ್ತಿರುವ ಕೆಲವು ಪ್ರಶ್ನೆಗಳಿಗೆ ಸಾಂರ್ಭಿಕತೆ ಒದಗಿಸುತ್ತದೆ.

-ಮೋಹನದಾಸ್

ಅರಸು ಕುರಿತ ಆಯ್ದ ಕೃತಿಗಳು

 

 

 

 

 

 

 

 

 1. ಅನ್ನಪೂರ್ಣ ವೆಂಕಟನAಜಪ್ಪ (ಸಾಮಾಜಿಕ ಕ್ರಾಂತಿಯ ಹರಿಕಾರಡಿ.ದೇವರಾಜ ಅರಸು)
 1. ಕೆಂಪರಾಜ ಅರಸ್ (ಅರವತ್ತು ವರ್ಷಗಳು -ಜೀವನಚರಿತ್ರೆ)
 2. ಗುರುಲಿಂಗಯ್ಯ ಎಂ.ಕೆ. (ದುರ್ಬಲರ ಆಶಾಕಿರಣ: ದೇವರಾಜ ಅರಸು)
 3. ಚಂದ್ರಮ ಕಣಗಲಿ (ಚಿಂತನೆ ಸಾಧನೆ ದೇವರಾಜ ಅರಸು)
 4. ಐ.ಕೆ. ಜಾಗೀರದಾರ್ 1979. (ಅರಸು ಆಡಳಿತ ರಂಗ, ಚಾಣಕ್ಯ

 ಪ್ರಕಾಶನ, ಬೆಂಗಳೂರು)

 1. ಐ.ಕೆ. ಜಾಗೀರದಾರ್ (ಅರಸು ಆಡಳಿತ ತರಂಗ. ಚಾಣಕ್ಯ ಪ್ರಕಾಶನ,

 ಬೆಂಗಳೂರು)

 1. ಡಿ.ಕೆ. ನಾಯ್ಕರ್, 2000 (ನಾ ಕಂಡ ದೇವರಾಜ ಅರಸು, ಮಹಾಮನೆ

 ಪ್ರಕಾಶನ, ಧಾರವಾಡ)

 1. ನಿಂಗಣ್ಣ ಚಿ.ಸಿ. (ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ. ದೇವರಾಜ

 ಅರಸು)

 1. ಮಧುಕೇಶ ಡಿ. (ದೇವರಾಜ ಅರಸು ಅವರ ಜೀವನ ಚರಿತ್ರೆ)
 2. ಮಾಯಿಗೌಡ ಕೆ. 2010 (ಸಚಿವದ್ವಯರು -ಅರಸು ಮತ್ತು ಬಸವಲಿಂಗಪ್ಪ,

 ನೇಗಿಲಯೋಗಿ ಪ್ರಕಾಶನ, ಮಂಡ್ಯ)

 1. ಮೋಹನ ಚಂದ್ರಗುತ್ತಿ (ದೇವರಾಜ ಅರಸು: ಬದಲಾವಣೆಯ ಬೀಸುಗಾಳಿ)
 2. ಯಲ್ಲಪ್ಪ ರೆಡ್ಡಿ ಆ.ನ. 2001 (ಅರಸು ಯುಗದ ಅರಣ್ಯ ಪರ್ವ, ನಳಂದ

 ಮಂಟಪ, ಬೆಂಗಳೂರು)

 1. ಬೆಳಕವಾಡಿ ರಂಗಸ್ವಾಮಿ (ಧೀಮಂತ ನಾಯಕ ಡಿ.ದೇವರಾಜ ಅರಸು)
 2. ವಡ್ಡರ್ಸೆ ರಘುರಾಮಶೆಟ್ಟಿ, 2000 (ಬಹುರೂಪಿ ಅರಸು, ಸಪ್ನಾ ಬುಕ್

 ಹೌಸ್, ಬೆಂಗಳೂರು)

 1. ರಾಮಪ್ರಸಾದ್ ಎನ್.ಎಸ್. (ಡಿ. ದೇವರಾಜ ಅರಸು)
 2. ರಾವ್ ಬಹದ್ದೂರ್, 1979 (ಅರಸು ದಶಕ, ಪ್ರಗತಿಪರ ದಶಕ,

 ಅವಲೋಕನ ಸಮಿತಿ, ಬೆಂಗಳೂರು)

 1. ಶಂಕರ್ ಎನ್.ಎಸ್., 2016 (ಅರಸು ಯುಗ, ಡಿ.ದೇವರಾಜ ಅರಸು

 ಶತಮಾನೋತ್ಸವ ಸಮಿತಿ, ಬೆಂಗಳೂರು)

 1. ಶೂದ್ರ ಶ್ರೀನಿವಾಸ, 2006 (ದೇವರಾಜ ಅರಸು- ಒಂದು ಅವಲೋಕನ,

 ಕನ್ನಡ ಮತ್ತು ಸಂಸ್ಕöÈತಿ ಇಲಾಖೆ)

 1. ಹಣಮಂತ್ರಾಯ ದೊಡ್ಡಮನಿ (ದೇವರಾಜ ಅರಸು ಮತ್ತು ಕರ್ನಾಟಕದ

 ರಾಜಕಾರಣ)

 ಸಂಪಾದಿತ ಕೃತಿಗಳು

 1. ಹಾ.ಮಾ. ನಾಯಕ, 1976 (ಕರ್ನಾಟಕಕ್ಕೆ ಶುಭವಾಗಲಿ -ದೇವರಾಜ

 ಅರಸರ ಆಯ್ದ ಐವತ್ತು ಭಾಷಣಗಳು)

 1. ಹಾ.ಮಾ. ನಾಯಕ, 1976 (ಪ್ರಗತಿ ಪಥ-ದೇವರಾಜ ಅರಸರ

 ಆಯ್ದ ಐವತ್ತು ಭಾಷಣಗಳು)

 1. ಪುಟ್ಟಸ್ವಾಮಿ ಕೆ., 2016 (ಡಿ.ದೇವರಾಜ ಅರಸು ಚಿತ್ರಕಥಾಕೋಶ

 ಡಿ.ದೇವರಾಜ ಅರಸು ಶತಮಾನೋತ್ಸವ ಸಮಿತಿ, ಬೆಂಗಳೂರು)

 1. ದಿನೇಶ್ ಅಮೀನ್ ಮಟ್ಟು (2016) ಸಂಪಾದಕತ್ವದಲ್ಲಿ, ಡಿ.ದೇವರಾಜ

 ಅರಸು ಶತಮಾನೋತ್ಸವ ಸಮಿತಿ:

 1. ಚಂದ್ರಪೂಜಾರಿ ಎಂ. 2016 (ಅರಸು ಮತ್ತು ಭೂಸುಧಾರಣೆ)
 2. ನಾರಾಯಣ ಎ. 2016 (ದೇವರಾಜ ಅರಸು ಆಡಳಿತದ ಅಜ್ಞಾತ

 ಆಯಾಮಗಳು)

 1. ಹೆಗಡೆ, ದಿನೇಶ್ ಎಂ. 2016 (ಅರಸು ಮತ್ತು ರಾಜಕೀಯ)
 2. ಮಹದೇವ ಪ್ರಕಾಶ್, 2016 (ವಿಧಾನ ಮಂಡಲದಲ್ಲಿ ಅರಸು- ದಿಕ್ಕು

 ಬದಲಿಸಿದ ಕನಸುಗಾರ)

 1. ಲಕ್ಷ÷್ಮಣ ಕೊಡಸೆ, ಷರೀಫಾ ಕೆ., 2016 (ಒಡನಾಡಿ ಅರಸು)
 2. ವೆಂಕಟೇಶ್ ಎಚ್.ಎ., ಕೃಷ್ಣಮೂರ್ತಿ ಹನೂರು, ರಾಮಚಂದ್ರೇಗೌಡ

 ಹಿ.ಶಿ., 2000 (ಕರ್ನಾಟಕದ ಅರಸು, ರಚನಾ ಪ್ರಕಾಶನ, ಹಲ್ಲೇಗೆರೆ,

 ಕೆರಗೋಡು ಮಾರ್ಗ ಮಂಡ್ಯ)

 1. ವೆಂಕಪ್ಪಗೌಡ ಕೋಣಂದೂರು, 1981 (ಪರಿವರ್ತನೆಯ ಹರಿಕಾರ)
 2. ಸದಾನಂದ ಜೆ.ಎಸ್. (ಡಿ.ದೇವರಾಜ ಅರಸು- ಪ್ರತಿಭಾವಂತ

 ಸಂಸದೀಯ ಪಟುಗಳ ಮಾಲಿಕೆ)

 1. ಸಿದ್ದರಾಮಯ್ಯ ಎಸ್.ಜಿ., 2016 (ಅರಸು ನವಯುಗ ನಾಯಕ)

Leave a Reply

Your email address will not be published.