ಒಬ್ಬರ ಸಾವು ಇನ್ನೊಬ್ಬರ ಅವಕಾಶ?

-ರಮಾನಂದ ಶರ್ಮಾ

ಇತ್ತೀಚೆಗೆ ಕೇಂದ್ರಮಂತ್ರಿ ಅನಂತಕುಮಾರ್ ನಿಧನರಾದಾಗ, ಅವರ ಪಾರ್ಥಿವ ಶರೀರ ಚಿತೆ ಏರುವ, ಅಂತ್ಯ ಸಂಸ್ಕಾರ ಮುಗಿಯುವ ಮೊದಲೇ ಅವರ ಉತ್ತರಾಧಿಕಾರಿಯ ಬಗೆಗೆ, ಅವರ ಪತ್ನಿ ತೇಜಸ್ವಿನಿಯವರನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನಿಲ್ಲಿಸುವ ಬಗೆಗೆ ಮಾಧ್ಯಮದಲ್ಲಿ ಚರ್ಚೆ ಆರಂಭವಾಗಿತ್ತು!

ಅಯ್ಯೋ ಪಾಪ ಹೋಗಿಬಿಟ್ರಾ, ಇನ್ನು ಕೆಲಕಾಲ ಬದುಕಬಹುದಿತ್ತು, ಸಾಯುವ ವಯಸ್ಸಲ್ಲ, ಮುಂದೇನು? ಅಂತಿಮ ಸಂಸ್ಕಾರ ಹೇಗೆ? ಅವರ ಕುಟುಂಬಕ್ಕೆ ಆಸರೆ ಏನು? -ಹಿಂದೆ ಯಾರಾದರೂ ನಿಧನರಾದಾಗ ಸಾಮಾನ್ಯವಾಗಿ ಇಂಥ ಪ್ರತಿಕ್ರಿಯೆ ಕೇಳಿಬರುತ್ತಿತ್ತು. ನಿಧನರಾದವರು ಯಾರೇ ಇರಲಿ, ಅವರ ಹಿನ್ನೆಲೆ ನೋಡದೇ, ನಾಲ್ಕಾರು ಕನಿಕರದ ಮಾತುಗಳು ಬರುತ್ತಿದ್ದವು. ಅವರ ಬಗೆಗೆ, ಅವರ ಸಾದನೆ ಬಗೆಗೆ, ಸಮಾಜದೊಂದಿಗಿನ ಅವರ ಸಂಬಂಧದ ಬಗೆಗೆ, ಅವರು ನಾಲ್ಕು ಜನರಿಗೆ ಮಾಡಿದ ಸಹಾಯದ ಬಗೆಗೆ ಕೆಲಕಾಲ ಮಾತನಾಡುತ್ತಿದ್ದರು.

ಈಗ ಸಮಾಜ ಬದಲಾಗಿದೆ. ಎಲ್ಲಾ ವಿಷಯಗಳಂತೆ ಸಾವಿನ ಬಗೆಗೂ ಮನುಷ್ಯ ತನ್ನ ದೃಷ್ಟಿಕೋನವನ್ನು ಬದಲಾಯಿಸಿದ್ದಾನೆ. ನಿಧನದ ಸುದ್ದಿ ಕೇಳಿದಾಗ, ಮುಖ್ಯವಾಗಿ ಸೆಲೆಬ್ರಿಟಿಗಳು, ರಾಜಕಾರಿಣಿಗಳು ಮತ್ತು ಮುತ್ಸದ್ದಿಗಳ ಸಾವಿನ ಸುದ್ದಿ ಕೇಳಿದಾಗ ಮೊದಲು ಬರುವ ಪ್ರತಿಕ್ರಿಯೆ; ರಜೆ ಕೊಡುತ್ತಾರಾ? ಉಳಿದ ವಿಷಯಗಳು ಆಮೇಲೆ ಮತ್ತು ಅವು ಸಂಕ್ಷಿಪ್ತವಾಗಿ ಇರುತ್ತದೆ. ಪಡ್ಡೆ ಹುಡುಗರು, ಶಾಲಾಕಾಲೇಜು ಮಕ್ಕಳು ಮತ್ತು ಕೆಳದರ್ಜೆಯ ಸರ್ಕಾರಿ ಮತ್ತು ಸರ್ಕಾರೇತರ ನೌಕರರ ಜೊತೆಗೆ ಕೆಲವು ಉನ್ನತ ದರ್ಜೆಯ ಅಧಿಕಾರಿಗಳಲ್ಲಿ, ಪ್ರತಿಷ್ಠಿತರಲ್ಲಿ ಕೂಡಾ ಇಂತಹ ವರ್ತನೆ ಕಾಣುತ್ತದೆ. ಅಕಸ್ಮಾತ್ ಸಾವು ಭಾನುವಾರ ಆಥವಾ ಸಾರ್ವಜನಿಕ ರಜಾ ದಿನಗಳಂದು ಘಟಿಸಿ ಒಂದು ದಿನ ರಜಾ ನಷ್ಟವಾದರೆ, ‘ಬದುಕಿದ್ದಾಗ ಏನೂ ಮಾಡಿಲ್ಲ, ಹೋಗುವಾಗ ಕೂಡಾ ಒಂದು ದಿನ ರಜೆಯನ್ನೂ ದಯಪಾಲಿಸಲಿಲ್ಲ’ ಎಂದು ಅವಮಾನೀಯವಾಗಿ ತಮ್ಮೊಳಗೇ ಪ್ರತಿಕ್ರಿಯಿಸುವ ಉದಾಹರಣೆಗಳಿಲ್ಲದಿಲ್ಲ. ಸತ್ತವರ ಬಗೆಗೆ ಒಳ್ಳೆಯ ಮಾತುಗಳನ್ನು ಆಡುವ ಪರಿಪಾಠ ಕೂಡಾ ಬದಲಾಗಿದೆ. ದೊಡ್ಡದಾಗಿ ಅಲ್ಲದಿದ್ದರೂ, ತಮ್ಮತಮ್ಮೊಳಗೆ, ‘ಅಂತೂ ಹೋದ್ನಾ ಪುಣ್ಯಾತ್ಮ’ ಎಂದು ಹೇಳುವವರೂ ಇಲ್ಲದಿಲ್ಲ.

ಅಕಸ್ಮಾತ್ ನಿಧನರಾದವರು ಜನಪ್ರತಿನಿಧಿಗಳಾದರೆ, ಅವರ ಸ್ಥಾನಕ್ಕೆ ಮುಂದೆ ಯಾರು ಎನ್ನುವ ಚರ್ಚೆ ಕೂಡಲೇ ಅರಂಭವಾಗುತ್ತದೆ. ಹಾಗೆಯೇ ಅನುಕಂಪದ ಅಲೆಯನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆದುಕೊಳ್ಳುವ ತಂತ್ರಗಳು ಚಾಲನೆಗೊಳ್ಳುತ್ತವೆ. ಇತ್ತೀಚೆಗೆ ಕೇಂದ್ರಮಂತ್ರಿ ಅನಂತಕುಮಾರ್ ನಿಧನರಾದಾಗ, ಅವರ ಪಾರ್ಥಿವ ಶರೀರ ಚಿತೆ ಏರುವ, ಅಂತ್ಯ ಸಂಸ್ಕಾರ ಮುಗಿಯುವ ಮೊದಲೇ ಅವರ ಉತ್ತರಾಧಿಕಾರಿಯ ಬಗೆಗೆ, ಅವರ ಪತ್ನಿ ತೇಜಸ್ವಿನಿಯವರನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನಿಲ್ಲಿಸುವ ಬಗೆಗೆ ಮಾಧ್ಯಮದಲ್ಲಿ ಚರ್ಚೆ ಆರಂಭವಾಗಿತ್ತು. ಇದನ್ನು ಜನಸಾಮಾನ್ಯರೂ ಮೌನವಾಗಿ ಖಂಡಿಸಿದರು. ಲೋಕಸಭೆಗೆ ಸ್ಪರ್ಧಿಸುವ ತೇಜಸ್ವಿನಿಯವರ ಅರ್ಹತೆ ಕುರಿತದ್ದು ಬೇರೆ ವಿಷಯ. ಅದರೆ, ಪ್ರತಿಯೊಂದಕ್ಕೂ ಕಾಲಘಟ್ಟ ಮತ್ತು ಸಮಯಪ್ರಜ್ಞೆ ಅಂತ ಇರುತ್ತದೆ. ಪತಿಯ ನಿಧನದಿಂದ ಇನ್ನೂ ಸಾವರಿಕೊಳ್ಳುವ ಮೊದಲೇ, ಅವರ ಹೆಸರನ್ನು ಎಳೆಯುವ ರಾಜಕೀಯ ಧಾವಂತ, ನಮ್ಮ ರಾಜಕೀಯ ವ್ಯವಸ್ಥೆಗೆ ಹಿಡಿದ ಕನ್ನಡಿ.

ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ, ಸಾವನ್ನು ಇನ್ನೊಬ್ಬ ರಿಗೆ ದೊರಕುವ ಅವಕಾಶ ಎಂದು ಪರಿಗಣಿಸಲಾಗುತ್ತದೆ. ಸಾವನ್ನು ಭಾವನಾತ್ಮಕವಾಗಿ ನೋಡದೇ, ಅದನ್ನು ಸಹಜ ಮತ್ತು ನೈಸರ್ಗಿಕ ಕ್ರಿಯೆ ಎಂದು ಭಾವಿಸುತ್ತಾರೆ. ‘ಇಂದಲ್ಲದಿದ್ದರೆ ನಾಳೆ’ ಎಂದು ಎಂದು ಪರಿಭಾವಿಸುವ ಅವರು ಸಾವನ್ನು ಭಾರತೀಯರಂತೆ ಹೆಚ್ಚು ಕಾಲ ನೆನೆಸುವುದಿಲ್ಲ. ಒಬ್ಬನು ಇಲ್ಲವಾದರೆ, ಅವನ ಬದಲಿಗೆ ಇನ್ನೊಬ್ಬನಿಗೆ ಅವಕಾಶದೊರಕುತ್ತದೆ. ಅತ ಇನ್ನೂ ಇನೋವೇಟಿವ್ ಅಗಿ ಕೆಲಸ ಮಾಡಬಹುದು, ಹೊಸದನ್ನು ಸಾಧಿಸಬಹುದು ಎನ್ನುವ ಚಿಂತನೆ ಆ ದೇಶಗಳಲ್ಲಿ ಇದೆ.

ಆಫ್ರಿಕನ್ ದೇಶದ ಸಂಸ್ಥೆಯೊಂದರಲ್ಲಿ ಒಬ್ಬ ಸಿಬ್ಬಂದಿ ನಿಧನರಾದ ಮಾಹಿತಿ ದೊರಕಿದ ತಕ್ಷಣ, ನಿರುದ್ಯೋಗಿಯೊಬ್ಬ, ಆ ಸಿಬ್ಬಂದಿಯ ಸಾವನ್ನು ಉಲ್ಲೇಖಿಸಿ, ತನಗೇ ಉದ್ಯೋಗವನ್ನು ನೀಡಬೇಕೆಂದು ಅರ್ಜಿ ಹಿಡಿದು ಬಂದಿದ್ದನಂತೆ. ಈ ಸುದ್ದಿ ಜಗತ್ತಿನಾದ್ಯಂತ ವೈರಲ್ ಅಗಿತ್ತು.

ಚುನಾವಣಾ ಸುಧಾರಣಾ ಸಂಬಂಧ ನಡೆದ ಒಂದು ಸಣ್ಣ ಚರ್ಚೆಯಲ್ಲಿ, ಪದೇಪದೇ ಚುನಾವಣೆಗಳನ್ನು ತಪ್ಪಿಸಲು ಜನಪ್ರತಿನಿಧಿಗಳ ನಿಧನದಿಂದ ತೆರವಾದ ಸ್ಥಳವನ್ನು ಚುನಾವಣೆ ನಡೆಸದೇ, ಎರಡನೇ ಅತಿ ಹೆಚ್ಚು ಮತ ಪಡೆದವರಿಗೆ ಅವಕಾಶ ನೀಡಬೇಕು ಎನ್ನುವ ಪ್ರಸ್ತಾವವನ್ನು ಚರ್ಚಾಪಟುವೊಬ್ಬರು ಸೂಚಿಸಿದರಂತೆ. ಇದನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸುತ್ತಾರೆ. ಇದಕ್ಕೆ ಅವರು ಕೊಡುವ ಕಾರಣ, ‘ಇದರಿಂದ ಜನಪ್ರತಿನಿಧಿಗಳ ಸಾವಿನ ಸಂಖ್ಯೆ ಹೆಚ್ಚಾಗಬಹುದು’.

ಸಾವು ತನ್ನ ಹಿಂದಿನ ಅರ್ಥ ಕಳೆದುಕೊಂಡಿದೆ ಮತ್ತು ಅವಕಾಶವನ್ನು ತನ್ನದಾಗಿಸುವ ಮತ್ತು ಬಾಚಿಕೊಳ್ಳುವ ಘಟನೆಯಾಗುತ್ತಿದೆ ಎನ್ನುವುದಕ್ಕೆ ಬೇರೆ ಉದಾಹರಣೆ ಬೇಕೇ? ಇಂದು ವಿದ್ಯಾವಂತ ಜನಾಂಗ ಸಾವನ್ನು ನೋಡುವ ದೃಷ್ಟಿ ಬದಲಾಗಿದೆ. ಹಳೆಯ ತಲೆಮಾರಿನವರಂತೆ ಅದನ್ನು ಭಾವನಾತ್ಮಕವಾಗಿ ನೋಡಿ ಕೊರಗದೇ, ಅದನ್ನು ಪ್ರತಿಯೊಬ್ಬರೂ ನೋಡಲೇ ಬೇಕಾದ ಜೀವನದ ಅನಿವಾರ್ಯ ಘಟನೆಗಳು ಎಂದು ಭಾವಿಸುತ್ತಾರೆ.

Leave a Reply

Your email address will not be published.