ಒಬ್ಬ ರೈತನಾಗಿ 2021ರ ಕನಸು ಕಾಣುತ್ತ…

-ಸುಬ್ರಾಯ ಮತ್ತೀಹಳ್ಳಿ

ಮಹಾರೋಗ, ಮಹಾಮಳೆ, ಮಹಾಯುದ್ಧಗಳ ಭಯಭೀತ ಕ್ಷಣಗಳೇ ಇಡಿಕಿರಿದು ತುಂಬಿದ 2020ನೇ ಇಸವಿ, ಜಗತ್ತಿನ ಮಾನವೇತಿಹಾಸದ ಅದ್ಭುತ ಅಧ್ಯಾಯವಾಗಿ ರೂಪುಗೊಂಡಿದ್ದು, ಅವಿಸ್ಮರಣೀಯ. ಆಧುನಿಕ ಬದುಕು, ವಿಜ್ಞಾನ ತಂತ್ರಜ್ಞಾನದ ದತ್ತುಮಗನಾಗಿ, ಹಣ ಅಧಿಕಾರ ವೈಭೋಗಗಳ ಆಡುಂಬೋಲವಾಗಿ, ಅಹಮಿಕೆಯ ತುತ್ತತುದಿಗೇರಿ ಕುಳಿತಿದ್ದಾಗ, ಒಮ್ಮೆಲೇ ಕೋವಿಡ್ ಎಂಬ ಮಹಾಶಿಕ್ಷಕ ಮನುಷ್ಯನನ್ನ ಮತ್ತೆ ಮುಟ್ಟಿನೋಡಿಕೊಳ್ಳುವ, ತನ್ನ ವಾಸ್ತವ, ತನ್ನ ಮಿತಿಗಳನ್ನು ಸೂಕ್ಷ÷್ಮವಾಗಿ ಅವಲೋಕಿಸಿಕೊಳ್ಳುವ ಸಂದರ್ಭಕ್ಕೆ ಈಡುಮಾಡಿದ್ದು, ನಿಜಕ್ಕೂ ಕುತೂಹಲಕಾರೀ ಬೆಳವಣಿಗೆ.

ಅದೆಷ್ಟು ಆಪ್ತರಾಗಿರಲಿ, ಎದುರು ಬಂದರೆ ಸಾವೇ ಎದುರುಬಂದAತೇ ಭಾಸವಾಗುವ ಭಯಾನಕ ಪರಿಸ್ಥಿತಿ ಎದುರಾದಾಗ, ಮಾನವ ಸಂಬAಧಗಳ ಸರಪಣಿಯೇ ತುಂಡಾದAತೆನ್ನಿಸಿದ ಅಯೋಮಯ ಸ್ಥಿತಿಯಲ್ಲಿ, ಸೂಕ್ಷ÷್ಮ ಮನಸ್ಥಿತಿಯ ಎಲ್ಲ ಮನಸ್ಸುಗಳೂ ಆತ್ಮವಿಮರ್ಶೆಗೆ ತೊಡಗಿಕೊಂಡಿದ್ದAತೂ ಸುಳ್ಳಲ್ಲ. ಹಸ್ತಲಾಘವಕ್ಕಿಂತ ಕೈಮುಗಿಯುವುದೇ ಲೇಸು, ಎಂಬುದು ಜಗತ್ಪçಖ್ಯಾತವಾದಾಗ, ಅತೀ ಮುಂದುವರೆದ ರಾಷ್ಟçಗಳೆಲ್ಲ, ಕೊರೋನಾ ಸಂಕಟದಲ್ಲಿ ತೊಳಲಾಡುತ್ತಿರುವಾಗ, ನಮ್ಮ ದೇಶದ ಹಿಂದುಳಿದಿರುವಿಕೆಯೇ ವರವಾಯಿತು. ರೋಗನಿರೋಧಕ ಶಕ್ತಿ ನಮ್ಮೊಳಗೇ ಇದೆ ಎಂಬ ನಿರ್ಣಯಕ್ಕೆ ಕೆಲವರು ಬಂದಾಗ, ಹೆಮ್ಮೆ ಪಟ್ಟವರೆಷ್ಟೋ, ನಕ್ಕು ಸುಮ್ಮನಾದವರೆಷ್ಟೋ.

ಕೊರೋನಾದ ಎದುರು ಮಹಾ ವಿಜ್ಞಾನಿಗಳಿಂದ ಪಾಮರರವರೆಗೂ ಅವಾಕ್ಕಾಗಿ, ಶೂನ್ಯ ಆವರಿಸಿ, ದಿಕ್ಕೇ ತೋಚದಂತ ವಾತಾವರಣ ಸೃಷ್ಟಿಯಾದಾಗ, ಎಲ್ಲರ ಅಹಮಿಕೆ ಕರಗಿ ಒಂದು ದೃಷ್ಟಿಯಲ್ಲಿ ಸಮಾನತೆ ಏರ್ಪಟ್ಟಿತೆನ್ನಬಹುದು.

ಇದೆಲ್ಲ ಘಟಿಸಿದ್ದು, ಸುಶೀಕ್ಷಿತರು ನಾಗರಿಕರು ಎಂದೆನ್ನಿಸಿಕೊAಡವರಲ್ಲಿ ಅಷ್ಟೇ. ನಮ್ಮ ಹಳ್ಳಿಗಳಲ್ಲಿಯಲ್ಲ. ಎಲ್ಲ ದಿನಗಳಂತೇ ಲಾಕ್ ಡೌನ್ ದಿನಗಳೂ ಸಹಜ ದಿನಗಳಾಗಿಯೇ ಇದ್ದವು. ಕೃಷಿಚಟುವಟಿಕೆ ಎಂದಿನAತೇ ನಿರಾಳವಾಗಿ ಸಾಗಿತು. ಲಾಕ್ ಡೌನ್ ವರವೇ ಆಯಿತು. ನಗರಗಳಿಗೆ ವಲಸೆಹೋದ ಸಾವಿರಾರು ಯುವಕರು ಊರಿಗೆ ಧಾವಿಸಿದರು. ಮುದಿಯರ ಮನೆ, ಮುದಿಯರ ಊರಾಗಿದ್ದ ನಮ್ಮ ಗ್ರಾಮಗಳು ಯುವಕರ ಕಲರವದಲ್ಲಿ ನಲಿದವು. ಕೃಷಿಚಟುವಟಿಕೆ ಗರಿಗೆದರಿತು. ಅದೆಷ್ಟೋ ವರ್ಷಗಳಿಂದ ಪಾಳುಬಿಟ್ಟ ಗದ್ದೆಗಳು ಹಸಿರಿಂದ ತುಂಬಿಕೊAಡವು. ತೋಟಪಟ್ಟಿಗಳು ಹೊಸ ಶಕ್ತಿತುಂಬಿಕೊAಡು ಚೈತನ್ಯ ಸೂಸತೊಡಗಿದವು.

ನಗರದಿಂದ ಆಗಮಿಸಿದ ನೂರಾರು ಯುವಕರು, ಲಾಕ್ ಡೌನ್ ಕಾಲದ ಕಟ್ಟುನಿಟ್ಟಿನ ನಡುವೆಯೇ ಹತ್ತು ಹಲವು ಸೇವಾಚಟುವಟಿಕೆಗಳಲ್ಲಿ ನಿರತರಾದರು. ಮನೆಮನೆಗೆ ಹಣ್ಣು ದಿನಸಿ, ತರಕಾರಿ, ಔಷಧಿಗಳನ್ನು ಸರಬರಾಜು ಮಾಡಿ ಸೈ ಎನ್ನಿಸಿಕೊಂಡರು. ಅಸ್ವಸ್ಥರನ್ನು ನಗರಗಳ ವೈದ್ಯರಲ್ಲಿ ಕೊಂಡೊಯ್ದು ಚಿಕಿತ್ಸೆ ಕೊಡಿಸುವಲ್ಲಿ, ತಮ್ಮ ವಾಹನಗಳೊಂದಿಗೆ ಸಿದ್ಧರಾಗಿ ನಿಂತಿದ್ದರು. ಸಮೂಹ ಮಾಧ್ಯಮಗಳು ತಾವೂ ಹೈರಾಣುಗೊಂಡು, ಜನರನ್ನೂ ಸಾವಿನ ಭಯದಲ್ಲಿ ನರಳುವಂತೆ ಮಾಡುತ್ತಿರುವ ಸಮಯದಲ್ಲೇ ನಮ್ಮ ಹಳ್ಳಿಗಳಲ್ಲಿ ಮನುಷ್ಯಪ್ರೀತಿ, ಸೇವಾಮನೋಭಾವ, ಕೃಷಿಯಮೇಲಣ ಆಸಕ್ತಿ ಗರಿಗೆದರುತ್ತಿತ್ತು.

ನಡುನಡುವೆ ಗ್ರಾಮಾಂತರಗಳಲ್ಲಿ ಮದುವೆ ಮುಂಜಿ, ಅಪರ ಕಾರ್ಯಕ್ರಮಗಳು, ಯಾವ ದುಂದು ಅದ್ದೂರಿತನವಿಲ್ಲದೇ ಕಟ್ಟುನಿಟ್ಟಾಗಿ ದೈಹಿಕ ಅಂತರ, ಸಂಖ್ಯಾಮಿತಿಗಳನ್ನು ಪಾಲಿಸಿ ಮಾದರಿಯಾದರು. ಅನಿವಾರ್ಯವಾಗಿ ಸಾಲ ಸೋಲ ಮಾಡಿ ಸಾವಿರ ಸಾವಿರ ಜನರನ್ನು ಸೇರಿಸುತ್ತ, ನಗರಗಳ ಛತ್ರಗಳಲ್ಲಿ ದುಂದುಗೈಯುತ್ತಿದ್ದ ಪರಂಪರೆ ತನ್ನಂತಾನೇ ಸ್ತಬ್ಧಗೊಂಡು, ಸರಳಸೌಂದರ್ಯದಲ್ಲಿ ಮಿಂಚಿತು.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ಪ್ರತೀ ವರ್ಷವೂ ಕನಿಷ್ಠ ಮೂರುತಿಂಗಳು ಲಾಕ್ ಡೌನ್ ಸಾರಿದರೆ ನಮ್ಮ ಗ್ರಾಮಗಳೂ ಉಳಿದಾವು, ನಮ್ಮ ವಾತಾವರಣವೂ ಶುದ್ಧವಾದೀತು. ಅನಿವಾರ್ಯವಾಗಿ ಹಳ್ಳಿಗಳು ವೃದ್ಧಾಶ್ರಮಗಳಾಗುವುದನ್ನು, ತಾತ್ಕಾಲಿಕವಾಗಿಯಾದರೂ ತಪ್ಪಿಸಲು ಸಾಧ್ಯವಾಗಬಹುದಲ್ಲ, ಎಂದೆನ್ನಿಸಿದರೆ ಆಶ್ಚರ್ಯವೇನಿಲ್ಲ.

ಆದರೆ ಎಂದು ಮಳೆಗಾಲ ಕಾಲಿಟ್ಟಿತೋ ಮತ್ತೆ ನಮ್ಮ ಗ್ರಾಮಗಳು ಸೋತು ಸುಣ್ಣವಾದವು. ಕೊರೋನಾದಂಥ ಮಹಾರೋಗಕ್ಕೇ ಭಯಪಡದ ಗ್ರಾಮೀಣ ಮನಸ್ಸು ಮಹಾಮಳೆ, ಮಹಾಪೂರಗಳ ಆಕ್ರಮಣದಲ್ಲಿ ನಜ್ಜುಗುಜ್ಜಾದವು. ಸ್ವಾವಲಂಬಿಗಳಾದ ರೈತರೂ, ಸರಕಾರದ ಎದುರು ಕೈಚಾಚುವಂಥ ಸ್ಥಿತಿ ನಿರ್ಮಾಣವಾದುದು ವಿಷಾದನೀಯ.

ಕೋವಿಡ್ ಒಂದು ಹಂತಕ್ಕೆ ಬಂದ ಕೂಡಲೇ ನಮ್ಮ ಕೇಂದ್ರಸರಕಾರಕ್ಕೂ ಹಳೇಚಾಳಿ ಮರುಕಳಿಸಿದೆ. ಒಮ್ಮಿಂದೊಮ್ಮೆಲೇ ರೈತರ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. ರಾತ್ರಿ ಬೆಳಗಾಗುವುದರ ಒಳಗೇ ಆತುರಾತುರವಾಗಿ ಕೃಷಿಮಸೂದೆಯನ್ನು ಮಂಡಿಸಿ ಪಾಸುಮಾಡಲಾಯಿತು. ವಿರೋಧ ಪಕ್ಷಗಳ ಸಹಕಾರದಲ್ಲಿ ದೇಶಾದ್ಯಂತ ಮಸೂದೆಗಳ ವಿರುದ್ಧವಾಗಿ ಚಳವಳಿಯೂ ಪ್ರಾರಂಭಗೊAಡಿದೆ. ಮಸೂದೆಮಂಡನೆಯೂ ರೈತರ ಪ್ರಗತಿಗಾಗಿ, ವಿರೋಧವೂ ರೈತರ ರಕ್ಷಣೆಗಾಗಿ. ತಮ್ಮ ತಮ್ಮ ಮತಬ್ಯಾಂಕ್ ರಕ್ಷಣೆಗಾಗಿ ಪಣತೊಟ್ಟಿರುವ ಆಳುವ ಮತ್ತು ವಿರೋಧ ಪಕ್ಷಗಳ ರೈತಪ್ರೀತಿಯೇ ಗುಮಾನಿಯಲ್ಲಿರುವುದರಿಂದ, ನಿಜವಾದ ರೈತರು ಕಂಗಾಲು ಸ್ಥಿತಿಗೆ ತಲುಪಿದ್ದಾರೆ. ರಾಜಕೀಯ ಹಿತಾಸಕ್ತಿಯ ಕಾಲ್ಚೆಂಡಾಗಿ ಕೃಷಿಕ ಉಪಯೋಗಿಸಲ್ಪಡುತ್ತಿರುವುದು ದೊಡ್ಡ ದುರಂತ. ಹೊಸ ವರ್ಷದ ಹೊಸಿಲಲ್ಲಿ, ದೇಶಾದ್ಯಂತ ಮಹಾಚಳವಳಿಯಾಗಿ ರೂಪುಗೊಳ್ಳುತ್ತಿರುವ ಈ ವರ್ತಮಾನದಲ್ಲಿ ಒಬ್ಬ ರೈತನಾಗಿ 2021ರ ಕನಸನ್ನು ಹೆಣೆಯಬೇಕಾಗಿದೆ.

ದೇಶದ ಎಲ್ಲ ಸಾರ್ವಜನಿಕ ಆರ್ಥಿಕ ಸಂಸ್ಥೆಗಳನ್ನು ಖಾಸಗಿ ಕಂಪನಿಗಳಿಗೆ ಕೈಯೆತ್ತಿ ಧಾರೆಯೆರೆಯುತ್ತಿರುವ ಸರಕಾರದ ಹುನ್ನಾರಗಳನ್ನು ಕಂಡರೆ, ಶೇಕಡಾ ಎಂಬತ್ತರಷ್ಟು ತುಂಡು ರೈತರಿಂದ ಕೂಡಿರುವ ಭಾರತೀಯ ಕೃಷಿರಂಗ, ಪಾರಂಪರಿಕ ನೆಲೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆಯೇ ಎಂಬ ಅನುಮಾನ ಮೂಡುತ್ತಿದೆ. ಬ್ಯಾಂಕ್ ಅಂಚೆ ಸಾರಿಗೆ ವಿಮಾನ, ರಕ್ಷಣಾ ಸಾಮಗ್ರಿ ತಯಾರಿಕೆ ಆರೋಗ್ಯ ಮುಂತಾದ ಎಲ್ಲ ಉತ್ಪಾದನಾ ವ್ಯವಸ್ಥೆಗಳನ್ನೂ ಖಾಸಗೀಕರಣದ ಕಪಿಮುಷ್ಠಿಗೆ ನೂಕುತ್ತಿರುವ ಕ್ಷಣದಲ್ಲಿ, ಕಸಾಯಿಖಾನೆಯೆದುರು ಕಟ್ಟಿಹಾಕಿದ ಕುರಿಗಳ ಸಾಲಂತೇ ನಮ್ಮ ರೈತಸಮುದಾಯಗಳು ಕಾಣುತ್ತಿವೆ.

ಕಳೆದೊಂದು ವರ್ಷ ಕ್ಯಾಲೆಂಡರ್‌ನಲ್ಲಿ ಮಾತ್ರ ಅಸ್ತಿತ್ವ ಪಡೆದಂತಾಯಿತು. ಇಡೀದೇಶ ಉತ್ಪಾದಕತೆಯಲ್ಲಿ ಹಿಂದುಳಿಯಿತು. ಕೃಷಿಕ್ಷೇತ್ರ ಮಾತ್ರ ದಾಖಲೆಯ ಉತ್ಪಾದನೆಗೈದಿತು.

ನಮ್ಮ ಹಳ್ಳಿಗಳಿಗೆ ಹೊಸ ಯೌವ್ವನ ಬಂದಿದೆ. ಸಾಕಷ್ಟು ಸುಶಿಕ್ಷಿತ ಯುವಕರು, ಹೊಸ ಕೃಷಿಯ ಕನಸು ಹೊತ್ತು ಹಳ್ಳಿಗೆ ಮರಳಿದ್ದಾರೆ. ಮನೆಯಿಂದಲೇ ಕೆಲಸ ಮಾಡುತ್ತ, ತನ್ನ ಮನೆಯ ಸುಖ ದುಃಖಗಳಿಗೂ ಸ್ಪಂದಿಸುತ್ತ, ಖುಷಿನೀಡುತ್ತಿದ್ದಾರೆ. ವ್ಯವಸ್ಥಿತ ಅಂತರ್ಜಾಲ ಸೌಲಭ್ಯ, ಸಾರಿಗೆ ಸಂಪರ್ಕಗಳು ಗ್ರಾಮಗಳಿಗೂ ಒದಗಿದರೆ ಚಿತ್ರಣವೇ ಬದಲಾದೀತು.

ನಗರಗಳಲ್ಲಿ ಹುಟ್ಟಿದ ರೋಗಭೀತಿ ಒಂದು ದೃಷ್ಟಿಯಲ್ಲಿ ನಮ್ಮ ಗ್ರಾಮಗಳಿಗೆ ಸಂಜೀವಿನಿಯಾಗ ಬಹುದಾಗಿದೆ. ಮಹಾನಗರದಲ್ಲಿರುವವ ಮಾತ್ರ ಮನುಷ್ಯ ಎಂಬ ಹುಸಿಭ್ರಮೆ ಕರಗಿ ನಗರಗಳಿಗೆ ಗುಳೇಹೋಗುವ ಪ್ರವೃತ್ತಿಗೆ ಕಡಿವಾಣ ಬೀಳುವ ವಾತಾವರಣವನ್ನು ಪ್ರಕೃತಿಯೇ ನಿರ್ಮಿಸಿದೆ.

ಹೊಸವರ್ಷ ನಮ್ಮ ಬದುಕಿಗೊಂದು ವಿಶಿಷ್ಟವಾದ, ರೋಚಕವಾದ ತಿರುವನ್ನು ಸೃಷ್ಟಿಸಬಹುದಾಗಿದೆ. ಕೋವಿಡ್ ಅತಿಥಿಯಂತೂ ಅಲ್ಲ. ನಮ್ಮ ನೆಲದ ಖಾಯಂ ಗುತ್ತಿಗೆದಾರ. ನೈತಿಕ ನೆಲೆಗಟ್ಟಿಲ್ಲದ ಬದುಕಿನ ವೇಗಕ್ಕೆ ತಡೆನೀಡಿ, ಸಾವು ಮತ್ತು ನೋವಿನ ವಿಟೋ ಜಾರಿಮಾಡಿ, ಗಂಭೀರವಾದ ಆತ್ಮವಿಮರ್ಶೆಗೆ ತೊಡಗಿಸಿದರೆ, ಮಹಾರೋಗದ ಉದ್ದೇಶ ಕೇವಲ ನಾಶವಲ್ಲ, ಮಾನವೀಯತೆಯ ಪುನಃಸೃಷ್ಟಿ ಎಂದು ಧನಾತ್ಮಕವಾಗಿ ಅರ್ಥೈಸಿಕೊಂಡAತಾಗುವುದು.

Leave a Reply

Your email address will not be published.