ಓಟಾರ – ಶ್ರೀಲಂಕೆಯ ಯಶಸ್ವೀ ಮಹಿಳಾ ಉದ್ಯಮಿ

ಓಟಾರ ಗುಣೆವರ್ದೇನೆ ಶ್ರೀಲಂಕಾ ಮೂಲದ ಮಹಿಳಾ ಉದ್ಯಮಿ; ತನ್ನ ಸಂಸ್ಥೆಯನ್ನ ಪಬ್ಲಿಕ್ ಇಶ್ಯೂ ಗೆ ತೆರೆದಿಟ್ಟ ಪ್ರಥಮ ಶ್ರೀಲಂಕನ್ ಮಹಿಳೆ ಎನ್ನುವ ಹೆಗ್ಗಳಿಕೆ ಇವರದು.

ರಂಗಸ್ವಾಮಿ ಮೂಕನಹಳ್ಳಿ

ಶ್ರೀಲಂಕಾದ ಕೊಲಂಬೊದಲ್ಲಿ 30 ಆಗಸ್ಟ್ 1964ರಲ್ಲಿ ಜನಿಸಿದ ಇವರು ಅಮೆರಿಕಾದ ಓಹಿಯೋ ದಲ್ಲಿ ವೆಟರ್ನರಿ ಸೈನ್ಸ್ ನಲ್ಲಿ ಪದವಿಯನ್ನ ಪಡೆಯುತ್ತಾರೆ. ಇವರಿಗೆ ಪ್ರಾಣಿಗಳ ಸೇವೆಯನ್ನ ಮಾಡಿಕೊಂಡು ಜೀವನವನ್ನ ಕಳೆಯಬೇಕು ಎನ್ನುವ ಆಸೆ ಇರುತ್ತದೆ. ಆದರೆ ಬದುಕು ಇವರಿಗೆ ಬೇರೆಯ ದಾರಿಯನ್ನ ಆಯ್ದು ಕೊಂಡಿರುತ್ತದೆ.

ಬಿಡುವಿನ ಸಮಯದಲ್ಲಿ ಅಮೆರಿಕಾದಲ್ಲಿ ಮಾಡೆಲ್ಲಿಂಗ್ ಮಾಡುತ್ತಾ, ಶ್ರೀಲಂಕಾಗೆ ಪ್ರವಾಸ ಮಾಡಿಕೊಂಡು ಸಮವ ಕಳೆಯುತ್ತಾ ಇದ್ದವರಿಗೆ, ಅಮೆರಿಕಾದ ಫ್ಯಾಷನ್ ವಲ್ರ್ಡ್ ಅಪ್ಪಿಕೊಳ್ಳುತ್ತದೆ. ಪೂರ್ಣ ಪ್ರಮಾಣದ ಮಾಡೆಲ್ ಆಗಿ ಶ್ರೀಲಂಕಾ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಹೆಸರು ಗಳಿಸುತ್ತಾರೆ. 1989 ರಲ್ಲಿ ಶ್ರೀಲಂಕಾಗೆ ವಾಪಸ್ಸು ಹೋದಾಗ ಅಲ್ಲಿ ಗಾರ್ಮೆಂಟ್ ಉದ್ದಿಮೆಯಲ್ಲಿ ತೊಡಗಿಕೊಂಡಿರುವ ಗೆಳೆಯನ ಸಹಾಯದಿಂದ ತಮ್ಮ ಕಾರ್‍ನಲ್ಲಿ ಬಟ್ಟೆ ಮಾರುವ ಸಣ್ಣ ವ್ಯಾಪಾರವನ್ನ ಶುರು ಮಾಡುತ್ತಾರೆ. ಅದಕ್ಕೆ ಅವರು ಹೂಡಿದ್ದ ಬಂಡವಾಳ ಕೇವಲ ಐವತ್ತು ಡಾಲರ್! 

ಇವರ ಬಟ್ಟೆಗಳನ್ನ ಜನ ಇಷ್ಟ ಪಡುತ್ತಾರೆ, ಹತ್ತು ವರ್ಷದ ನಂತರ ಅಂದರೆ 1999ರಲ್ಲಿ ಪ್ರಥಮ ಮಳಿಗೆ ‘ಓಡೆಲ್’ ತೆರೆಯುತ್ತಾರೆ. ಇಂದಿಗೆ ಶ್ರೀಲಂಕಾದ ಉದ್ದಗಲಕ್ಕೂ 20 ಕ್ಕೂ ಹೆಚ್ಚು ಮಳಿಗೆಗಳನ್ನ ಹೊಂದಿದ್ದಾರೆ. 2010ರಲ್ಲಿ ತಮ್ಮ ಸಂಸ್ಥೆಯನ್ನ ಐಪಿಒ ಮೂಲಕ ಇನ್ನೊಂದು ಉನ್ನತ ಮಟ್ಟಕ್ಕೆ ಒಯ್ದ ಪ್ರಥಮ ಶ್ರೀಲಂಕನ್ ಮಹಿಳೆ, ಶ್ರೀಲಂಕಾದ ರಿಚ್ ಲಿಸ್ಟ್ ನಲ್ಲಿ ಸ್ಥಾನ, ವಿಶ್ವದ ಬಲಿಷ್ಠ ಮಹಿಳೆಯರ ಸಾಲಿನಲ್ಲಿ ಜಾಗ, ಹೀಗೆ ಇವರ ಸಾಧನೆಯ ಪಟ್ಟಿ ದೊಡ್ಡದಿದೆ.

ಇವರ ಜೀವನದ ಪ್ರಥಮ ಉದ್ದೇಶ ಪ್ರಾಣಿಗಳ ಸೇವೆ ಮಾಡುವುದಾಗಿತ್ತು. 2005ರಲ್ಲಿ ಬೀದಿ ನಾಯಿಯನ್ನ ಕಂಡಾಗ ಇವರ ಜೀವನದ ಪಥ ಮತ್ತೊಮ್ಮೆ ಬದಲಾಗುತ್ತದೆ. ತಮ್ಮ ಸಂಸ್ಥೆಯ ಸಿಎಸ್‍ಆರ್ ಅಂದರೆ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಮೂಲಕ `ಎಂಬಾರ್ಕ್’ ಎನ್ನುವ ಬೀದಿ ನಾಯಿಗಳನ್ನ ರಕ್ಷಿಸುವ ಮತ್ತು ಸಲಹುವ ಸಂಸ್ಥೆಯನ್ನ ತೆರೆಯುತ್ತಾರೆ. ಇಲ್ಲಿ ಇದರ ಜೊತೆಗೆ ಬಟ್ಟೆ, ಆಟಿಗೆಗಳನ್ನ ಮಾರಲು ಶುರು ಮಾಡುತ್ತಾರೆ. ಇಲ್ಲಿ ಎಲ್ಲವೂ ನಾಯಿ ರಕ್ಷಣೆಯ ಥೀಮ್ ಹೊತ್ತ ಬಟ್ಟೆಗಳು, ಪ್ರಕೃತ್ತಿಯನ್ನ ಉಳಿಸುವ ಥೀಮ್ ಇರುವ ವಸ್ತುಗಳನ್ನ ಮಾರಾಟ ಮಾಡುತ್ತಿದ್ದಾರೆ. ಇದು ಕೂಡ ಅತ್ಯಂತ ಯಶಸ್ವಿಯಾಗಿದೆ.

ಒಂದು ಸಂಸ್ಥೆ ಬಹಳಷ್ಟು ಯಶಸ್ಸು ಪಡೆದರೆ ಅದಕ್ಕೆ ಸಮಾಜದ ಕೊಡುಗೆ ಬಹಳ ದೊಡ್ಡದು. ಹೀಗಾಗಿ ಇಂತಹ ಸಂಸ್ಥೆಗಳಿಗೆ ಕೂಡ ಸಮಾಜಕ್ಕೆ ಏನಾದರೂ ಹಿಂತಿರುಗಿಸುವ ಜವಾಬ್ದಾರಿ ಇರುತ್ತದೆ. ಇದನ್ನು ಈ ಮಹಿಳೆ ಯಶಸ್ವಿಯಾಗಿ ಪಾಲಿಸಿದ್ದಾರೆ.

Leave a Reply

Your email address will not be published.