ಓದಿನ ಹಾದಿಗೆ ಸ್ಫೂರ್ತಿ ಈ ‘ಅಬ್ಬೆ’

ಆ ಊರಿನ ಬಹುತೇಕರು ಅಬ್ಬೆ ಎಂದು ಕರೆಯುತ್ತಾರೆ. ಅವರ ಪಕ್ಕದ ಮನೆಯವನಾದ ನನಗೆ ತಿಳಿವಳಿಕೆ ಬಂದಾಗಿನಿಂದ ನಾನು ಕೂಡ ಅವರನ್ನು ಹಾಗೆಯೇ ಕರೆಯುತ್ತಾ ಬಂದಿದ್ದೇನೆ. 82ರ ಇಳಿವಯಸ್ಸಿನಲ್ಲಿಯೂ ಪುಸ್ತಕಪ್ರೀತಿ ಹೊಂದಿರುವ ಉತ್ತರಕನ್ನಡ ಜಿಲ್ಲೆಯ, ಯಲ್ಲಾಪುರ ತಾಲೂಕಿನ, ಗಿಡಗಾರಿ ಎಂಬ ಕುಗ್ರಾಮದ ಗಾಯತ್ರಿ ವಿಶ್ವನಾಥ ಭಟ್ಟ ಒಬ್ಬ ಅಕ್ಷರದಾಹಿ. ಓದುವಿಕೆಯ ಸುಖವನ್ನು ಅರಿತು ಪುಸ್ತಕದ ಜತೆ ನಂಟು ಬೆಳೆಸಿಕೊಂಡವರು. ಓದಿನ ಹಾದಿಯಲ್ಲಿ ಅಬ್ಬೆ ನಮಗೆಲ್ಲರಿಗೂ ಸ್ಫೂರ್ತಿ ಮತ್ತು ಮಾದರಿ. ಇದು ಅಬ್ಬೆ ಜತೆಗಿನ ಮಾತುಕತೆ.

ಅಬ್ಬೆ ನಮಸ್ಕಾರ, ನೀವು ಶಾಲೆಗೆ ಹೋಗಿದ್ದಿರಾ?

(ನಸುನಗುತ್ತಾ) ಆಗಿನ ಕಾಲದಲ್ಲಿ ಶಾಲೆಯೇ!? ಮನೆ ತುಂಬಾ ಮಕ್ಕಳು ತುಂಬಿಕೊಂಡಿರುತ್ತಿದ್ದ ಕಾಲವದು. ಆ ಸಮಯದಲ್ಲಿ ಅವರಿಗೆ ಹೊಟ್ಟೆಬಟ್ಟೆಗೆ ಪೂರೈಸುವುದೇ ಕಷ್ಟವಾಗಿತ್ತು. ಅಂತಹದರಲ್ಲಿ ನಮ್ಮಂತಹ ಸ್ತ್ರೀಯರಿಗಂತೂ ಶಿಕ್ಷಣದ ಅವಕಾಶ ತೀರಾ ಕಡಿಮೆ ಇತ್ತು. ಅದನ್ನು ಹಿರಿಯರಲ್ಲಿ ಪ್ರಶ್ನಿಸುವ ಧೈರ್ಯವೂ ನಮಗಿರಲಿಲ್ಲ.

ಆಗಿನ ಕಾಲದಲ್ಲಿ ನಿಮ್ಮ ಮನೆಯ ಸಮೀಪದ ಶಾಲೆ ಇತ್ತೇ?

ಇಲ್ಲ, ಸುಮಾರು 8 ಕಿಲೋಮೀಟರ್ ದೂರದ ವಜ್ರಳ್ಳಿ ಎಂಬಲ್ಲಿ ಒಂದು ಧರ್ಮಶಾಲೆಯನ್ನು ನಡೆಸುತ್ತಿದ್ದರು.

ಹಾಗಾದರೆ ನೀವು ಕನ್ನಡವನ್ನು ಓದಲು ಕಲಿತದ್ದು ಹೇಗೆ?

ನನ್ನ ತಂದೆ ನಾನು 14 ವರ್ಷದವಳಿದ್ದಾಗಲೇ ಅನಾರೋಗ್ಯದಿಂದ ತೀರಿಕೊಂಡರು. ಆದರೆ ಅದಕ್ಕಿಂತ ಮುಂಚೆ ನಮಗೆ ಜೀವನಪಾಠವನ್ನು ಹೇಳಿಕೊಟ್ಟಿದ್ದರು. ಜೊತೆಗೆ ನನಗೆ ಕನ್ನಡದ ವರ್ಣಮಾಲೆಯನ್ನೂ, ಮಗ್ಗಿಯನ್ನೂ ಬಾಯಿಪಾಠ ಮಾಡಿಸಿ ಕಲಿಸಿದ್ದರು. ಅದರಿಂದಲೇ ನನಗೆ ಓದುವ ಪರಿಕಲ್ಪನೆ ಬಂದದ್ದು.

ಓದಲು ದಿನಪತ್ರಿಕೆ, ವಾರಪತ್ರಿಕೆ ಸಿಗುತ್ತಿತ್ತೇ?

ಸಾಧ್ಯವೇ ಇರಲಿಲ್ಲ. ಅದನ್ನು ನಮ್ಮ ಮನೆಗಂತೂ ತರಿಸುತ್ತಲೂ ಇರಲಿಲ್ಲ. ತರಿಸಿದ್ದರೂ ಆಯಾ ದಿನದ ಪತ್ರಿಕೆ 4 ದಿನ ಅಥವಾ ಒಂದುವಾರ ತಡವಾಗಿ ನಮ್ಮ ಊರಿಗೆ ಬಂದು ಸೇರುವ ಪರಿಸ್ಥಿತಿ ಇತ್ತು.

ಹಾಗಾದರೆ ನಿಮಗೆ ಓದಲು ಕಲಿಸಿದ ಪುಸ್ತಕಗಳು ಯಾವುವು?

ನಮ್ಮ ಮನೆಯಲ್ಲಿ ರಾಮಾಯಣ, ಮಹಾಭಾರತ ಇನ್ನೂ ಅನೇಕ ಆಧ್ಯಾತ್ಮಿಕ, ವೈಚಾರಿಕ ಮತ್ತು ಪೌರಾಣಿಕ ಪುಸ್ತಕಗಳಿದ್ದವು. ಅವುಗಳಿಂದಲೇ ಓದಲು ಆರಂಭ ಮಾಡಿದ್ದರಿಂದ ನನಗೆ ಅವು ಮತ್ತಷ್ಟು ಅಧ್ಯಯನದಲ್ಲಿ ಆಸಕ್ತಿ ಹುಟ್ಟುವಂತೆ ಮಾಡಿದವು.

ಆಗಿನ ಕಾಲದಲ್ಲಿ ಮನರಂಜನೆಯ ಮಾಧ್ಯಮಗಳು ಯಾವಿದ್ದವು ?

ಮನರಂಜನೆಯ ಮುಖ್ಯ ಮಾಧ್ಯಮವೆಂದರೆ ಯಕ್ಷಗಾನ; ನಂತರದಲ್ಲಿ ನಾಟಕ ಇತ್ಯಾದಿ. ಆಗಿನ ಕಾಲದಲ್ಲಿ ಪೌರಾಣಿಕ ಯಕ್ಷಗಾನಗಳೇ ನಡೆಯುತ್ತಿದ್ದರಿಂದ ಯಕ್ಷಗಾನದ ಬಗ್ಗೆ ಒಲವನ್ನು ಬೆಳೆಸಿಕೊಂಡಿದ್ದೆ. ಅವುಗಳೇ ನಾನು ಪೌರಾಣಿಕ ಪುಸ್ತಕಗಳನ್ನು ಹೆಚ್ಚಿಗೆ ಓದಲು ಪ್ರೇರಣೆಯಾದವು.

ಈ ವಯಸ್ಸಿನಲ್ಲಿಯೂ ಓದುತ್ತೀರಲ್ಲ! ಅದರಿಂದ ನಿಮಗೇನು ಲಭಿಸುತ್ತಿದೆ?

ನನಗಂತೂ ಓದುವುದರಿಂದ ಮನಸ್ಸಿಗೆ ನೆಮ್ಮದಿ, ಉಲ್ಲಾಸ ದೊರಕುತ್ತಿದೆ. ಒತ್ತಡದ ಮನಸ್ಸು ಶಾಂತವಾಗುತ್ತದೆ. ಜ್ಞಾನ ಪಡೆದುಕೊಳ್ಳುವುದು ನಿರಂತರ ಪ್ರಕ್ರಿಯೆ. ಅದಕ್ಕೆ ವಯಸ್ಸಿನ ಹಂಗಿಲ್ಲ.

ನೀವು ಕಲಿತದ್ದನ್ನು ಬೇರೆ ಯಾರಿಗಾದರೂ ಹಂಚಿದ್ದೀರಾ?

ಕಲಿತಿದ್ದನ್ನು ವಿನಿಮಯ ಮಾಡಿಕೊಳ್ಳುವುದು ನನ್ನ ಪ್ರಕಾರ ಬಹು ಪುಣ್ಯದ ಕೆಲಸ. ಹಾಗಾಗಿ ನಾನು ಮದುವೆಯಾದ ಹೊಸತರಲ್ಲಿ (ಸುಮಾರು 14 ವರ್ಷ) ನಮ್ಮ ಭಾವನಿಗೆ (ಪತಿಯ ತಮ್ಮ) ಮಗ್ಗಿಯನ್ನೂ, ಕನ್ನಡ ವರ್ಣಮಾಲೆಯನ್ನೂ ಕಲಿಸಿದ್ದು ನೆನಪಿದೆ. ಅದನ್ನು ಬಿಟ್ಟು ಸಂದರ್ಭಕ್ಕನುಸಾರವಾಗಿ ಮಕ್ಕಳಿಗೆ, ಮೊಮ್ಮಕ್ಕಳಿಗೆ ಜೀವನ ಮಾರ್ಗವನ್ನೂ, ನೈತಿಕ ಪಾಠವನ್ನು ಹೇಳುತ್ತಲೇ ಬಂದಿದ್ದೇನೆ.

ಸರಿ, ಪುಸ್ತಕ ಓದುವಿಕೆಗೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳಿಗೆ, ಯುವಜನತೆಗೆ ನೀವು ನೀಡುವ ಸಂದೇಶವೇನು?

ನನಗೆ ಇಂದಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲ. ಆದರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಆಯಾ ವಿಷಯದ ಆಳಕ್ಕೆ ಇಳಿದು ಓದಿದರೆ ಮಾತ್ರ ವಿದ್ಯಾರ್ಜನೆ ಸಾಧ್ಯವಾಗುತ್ತದೆ. ಅದು ಕಲಿಕೆಯ ಗಟ್ಟಿತನವನ್ನು ಹೆಚ್ಚಿಸುತ್ತದೆ. ಆ ದೆಸೆಯಲ್ಲಿ ಎಲ್ಲರೂ ಕಠಿಣ ಪರಿಶ್ರಮ ಪಡಬೇಕೆಂಬುದು ನನ್ನ ಆಶಯ.

Leave a Reply

Your email address will not be published.