ಓದುಗರ ಅಭಿಪ್ರಾಯಗಳು

ಅತ್ಯುತ್ತಮ ಪತ್ರಕರ್ತ ರಾಯ್

ಪದ್ಮರಾಜ ದಂಡಾವತಿ ಅವರ ಪ್ರಣಯ್ ರಾಯ್ ಮತ್ತು ದೊರಬ್ ಸೋಪಾರಿವಾಲ್ ಅವರು ಕೂಡಿ ಬರೆದ ‘The verdict’ ಕೃತಿಯ ಮುಖ್ಯಾಂಶಗಳನ್ನು ಪರಿಚಯಿಸಿದ ಲೇಖನ ಎಲ್ಲರ ಗಮನ ಸೆಳೆಯುವಂತಹದ್ದು.

ಪ್ರಣಯ್ ರಾಯ್ ಅವರು ಈ ದೇಶ ಕಂಡ ಒಬ್ಬ ಅತ್ಯುತ್ತಮ ಪತ್ರಕರ್ತ ಹಾಗೂ ಟಿವಿ ವಿಶ್ಲೇಷಕ. 80ರ ಅಂಚಿನ ಹಾಗೂ 90ರ ದಶಕದಲ್ಲಿ, ರಾಯ್ ಅವರು ಹಿಂದಿಯ ಪತ್ರಕರ್ತ ವಿನೋದ್ ದುವ ಜೊತೆ, ಅವರದೇ ಆದ ಎನ್.ಡಿ.ಟಿ.ವಿ. ಸಂಸ್ಥೆಯ ಮುಖಾಂತರ ಪ್ರಸಾರಗೊಳ್ಳುತ್ತಿದ್ದ ಫಲಿತಾಂಶಪೂರ್ವ ಹಾಗೂ ಫಲಿತಾಂಶದಿನದ ‘The verdict’ ಕಾರ್ಯಕ್ರಮ ಕುತೂಹಲ ಹಾಗೂ ಆಸಕ್ತಿಕರವಾಗಿದ್ದವು. ರಾಯ್ ಆಂಗ್ಲ ಮತ್ತು ದುವಾ ಹಿಂದಿ ಭಾಷೆಯಲ್ಲಿ ಪೈಪೋಟಿಯಲ್ಲಿ ಹಿಂದಿನ-ಪ್ರಸ್ತುತ ಚುನಾವಣೆ, ರಾಜಕೀಯ ಧುರೀಣರ ಹೇಳಿಕೆಗಳನ್ನು ಸಮರ್ಥ ವಾಗಿ ವಿಶ್ಲೇಷಿಸಿ ಧುರೀಣರ ಹೊಯ್ದಾಟಗಳನ್ನ ಹೊರಗೆಳೆಯುತ್ತಿದ್ದರು.

ಆಯಾ ವಾರಗಳ ಜಗತ್ತಿನ ವಿದ್ಯಮಾನಗಳನ್ನು ಪತ್ರಿಕೆಯಲ್ಲಿ ಓದಿದ ನಮಗೆ ಪ್ರತಿ ಶನಿವಾರ ರಾತ್ರಿ 11 ಗಂಟೆಗೆ ರಾಯ್ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ ‘The world this week’ ಕಪ್ಪುಬಿಳುಪಿನ ಟಿವಿಯಲ್ಲಿ ರೋಮಾಂಚನಗೊಳಿಸುತ್ತಿತ್ತು. ಕಾರ್ಯಕ್ರಮದ ಕೊನೆಯಲ್ಲಿ before vanishing from the screen ಪದಗಳು ಇಂದಿಗೂ ನನಗೆ ನೆನಪಿವೆ.

ದಂಡಾವತಿ ಅವರು ಪ್ರಸ್ತಾಪಿಸಿದಂತೆ, ಅಂದಿನ ಜನತಾ-ಬಿಜೆಪಿ ಮೈತ್ರಿ ಸರ್ಕಾರದ ನೇತೃತ್ವ ವಹಿಸಿದ್ದ ಹೆಗಡೆ 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಪರಿಣಾಮವಾಗಿ ನೈತಿಕ ಹಿನ್ನೆಲೆಯಲ್ಲಿ ವಿಧಾನಸಭೆಯನ್ನು ವಿಸರ್ಜಿಸಿ ಹೊಸ ಆದೇಶಕ್ಕಾಗಿ ಜನತೆಗೆ ಮೊರೆ ಹೋಗಿದ್ದರು. ಆಗಿನ ಚುನಾವನಾ ಸಂದರ್ಭದಲ್ಲಿ ಹೆಗಡೆಯವರು ಮಹಿಳೆಯರ ಆಕರ್ಷಣೆಗಾಗಿ ತಮ್ಮ ಪತ್ನಿಯನ್ನು ಪ್ರಚಾರಕ್ಕೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು.

ನನ್ನ ನೆನಪಿನ ಮೂಸೆಯಲ್ಲಿ ಮರೆಯಾಗಿದ್ದ ಸಂಗತಿಗಳನ್ನು ಜ್ಞಾಪಿಸಿದ್ದಕ್ಕೆ ಪದ್ಮರಾಜ ದಂಡಾವತಿ ಹಾಗೂ ಸಮಾಜಮುಖಿಗೆ ಧನ್ಯವಾದಗಳು.

-ನಾಗಭೂಷಣ ನಾಗಳ್ಳಿ, ಶಕ್ತಿನಗರ.


‘ಟೈಂ ಬ್ಯಾಂಕಿಂಗ್’ ಅನುಸರಿಸಲು ಅಲ್ಲ!

ಪೂರ್ಣಿಮಾ ಮಾಳಗಿಮನೆ ಅವರ ಲೇಖನದ ಶೀರ್ಷಿಕೆ ನೂತನವಾಗಿದೆ, ಆದರೆ ವಿಷಯ ಪುರಾತನವಾದುದು. ನಾವು ಹಳ್ಳಿಯಲ್ಲಿ ಕೃಷಿ ಮಾಡುವ ಸಂದರ್ಭದಲ್ಲಿ ‘ಮುಯ್ಯಾಳು’ ಪದ್ಧತಿ ರೂಢಿಯಲ್ಲಿತ್ತು. ಅಂದರೆ ನಮ್ಮ ಹೊಲದಲ್ಲಿ ಉಳುಮೆ ಮಾಡಲು, ಬೀಜ ಬಿತ್ತಲು, ನಾಟಿ ಮಾಡಲು, ಕೊಯ್ಲು ಮಾಡಲು, ಕಣದ ಕೆಲಸ ಮಾಡಲು -ಹೀಗೆ ಪ್ರತಿಯೊಂದು ಸಂದರ್ಭದಲ್ಲೂ ಆಳುಗಳನ್ನು ಕೂಲಿಗೆ ಕರೆಯುತ್ತಿರಲಿಲ್ಲ, ಇವೆಲ್ಲಾ ‘ಮುಯ್ಯಾಳು’ ಪದ್ಧತಿಯಲ್ಲಿ ನಡೆಯುತ್ತಿದ್ದವು. ಅರ್ಥಾತ್ ನಮ್ಮ ಹೊಲದ ಕೆಲಸವನ್ನು ನಮ್ಮ ಆಜುಬಾಜಿನ ಪರಿಚಿತರು ಬಂದು ಮಾಡುತ್ತಿದ್ದರು. ಅವರಿಗೆ ಅಗತ್ಯಬಿದ್ದಾಗ ನಾವು ಹೋಗಿ, ಕೆಲಸ ಮಾಡಿ ತೀರಿಸುತ್ತಿದ್ದೆವು. ಎಲ್ಲರಿಗೂ ತಿಳಿದಿರುವಂತೆ ಕೃಷಿ ಹೆಚ್ಚು ಜನರ ಶ್ರಮ ಬೇಡುತ್ತದೆ. ಜೊತೆಗೆ ಮಳೆಯನ್ನನುಸರಿಸಿ ಹೊಲದಲ್ಲಿ ಕೆಲಸ ಬೀಳುತ್ತದೆ. ಹಾಗಾಗಿ ಅಲ್ಲಿ ‘ಮುಯ್ಯಾಳು’ ಪದ್ಧತಿ ತೀರಾ ಅವಶ್ಯಕ.

ಆಕರ್ಷಕ ಹೆಸರಿನ ‘ಟೈಂ ಬ್ಯಾಂಕಿಂಗ್’, ಬೆಂಗಳೂರಿನಂಥ ನಗರಗಳಲ್ಲಿ ಜಾರಿಗೆ ಬರುವುದು ಸಾಧ್ಯವಿಲ್ಲ. ಏಕೆಂದರೆ ನಗರದ ನಾಗರಿಕರು ವಾಸಿಸುತ್ತಿರುವುದು ನಗರದಲ್ಲಾದರೂ, ಅವರ ಬದುಕಿನಕ್ರಮ ಕಾಡಿನ ಬದುಕಿನ ಕ್ರಮವಾಗಿದೆ. ಅಂದರೆ ನಗರದ ಜನರು ತಮ್ಮದೇ ಏರಿಯಾದ ಜನರ ಜೊತೆಯಾಗಲೀ, ತಾವು ವಾಸಿಸುತ್ತಿರುವ ರಸ್ತೆಯ ಜನರ ಜೊತೆಯಾಗಲೀ, ಕಡೆಗೆ ಪಕ್ಕದ ಮನೆಯ ಜನರ ಜೊತೆಯಾಗಲೀ ಯಾವುದೇ ಕೊಳು-ಕೊಡು ಸಂಬಂಧ, ಸಂಪರ್ಕ ಇಟ್ಟುಕೊಂಡಿರುವುದಿಲ್ಲ, ಒಬ್ಬರಜೊತೆ ಒಬ್ಬರು ಆತ್ಮೀಯವಾಗಿ ಮಾತಾಡುವುದಿಲ್ಲ, ಕಡೆಗೆ ಒಂದು ಮುಗುಳ್ನಗೆ ಕೂಡಾ ಇಲ್ಲ; ಶ್ರೀಮದ್ಗಾಂಭೀರ್ಯದಿಂದ ಇದ್ದುಬಿಡುತ್ತಾರೆ. ಇವರು ಪ್ರಪಂಚದ ಯಾವುದೋ ಮೂಲೆಯಲ್ಲಿರುವ ಯಾರೊಟ್ಟಿಗಾದರೂ ಕ್ಷಣಮಾತ್ರದಲ್ಲಿ, ಅಂತರ್ಜಾಲದ ಮೂಲಕ ವ್ಯವಹರಿಸಬಲ್ಲರು. ಆದರೆ ಪಕ್ಕದ ಮನೆಯವರು ಇವರಿಗೆ ಅಪರಿಚಿತರು, ಇವರು ಪಕ್ಕದ ಮನೆಯವರಿಗೆ ಅಪರಿಚಿತರು. ನಗರದ ಸಾಮಾಜಿಕ ವ್ಯವಸ್ಥೆ ಇಂಥ ಸ್ವಾರ್ಥಪೂರಿತವಾಗಿರುವಾಗ, ಅಲ್ಲಿ ‘ಟೈಂ ಬ್ಯಾಂಕಿಂಗ್’ ಸಾಧ್ಯವೇ? ಬೇರೆ ಯಾವುದೋ ದೇಶದಲ್ಲಿ ಈ ಪದ್ದತಿ ಜಾರಿಯಲ್ಲಿದೆ ಅಂದಮಾತ್ರಕ್ಕೆ ಭಾರತೀಯ ಸಾಮಾಜಿಕ ಸಂದರ್ಭದಲ್ಲೂ ಅದು ಒಗ್ಗುತ್ತದೆ ಎಂದು ತಿಳಿಯುವುದು ತಪ್ಪಾಗುತ್ತದೆ.

‘ಸಮ್ಮಿಶ್ರ ಸರ್ಕಾರದ ಒಂದು ವರ್ಷದ ಸಾಧನೆ’ ಕುರಿತ ಚರ್ಚೆ ಅಪೂರ್ಣ ಮತ್ತು ಅವಸರದ ತೀರ್ಮಾನ. ವಿಷಯ ಕುರಿತಂತೆ ಆರುಜನ ವಿಷಯ ಪರಿಣತರ ಲೇಖನಗಳಿವೆ. ಈ ಯಾವ ಲೇಖನಗಳೂ ಸರ್ಕಾರದ ಸಾಧನೆ ಕುರಿತಂತೆ ಪೂರ್ಣಚಿತ್ರ ಕೊಡಲಾರವು. ಏಕೆಂದರೆ ಈ ವಿಷಯ ಪರಿಣತರು ತಮ್ಮತಮ್ಮ ಕ್ಷೇತ್ರದ ಅನುಭವದ ಹಿನ್ನೆಲೆಯಲ್ಲಿ, ಈ ಸಮ್ಮಿಶ್ರ ಸರ್ಕಾರದ ಸಾಧನೆಗಳ ಕುರಿತು ಹೇಳಿದ್ದಾರೆ. ಆದರೆ ಅದು ಅಪೂರ್ಣ. ನಿಜ ಹೇಳಬೇಕೆಂದರೆ, ಸಮಾಜಮುಖಿ ಬಳಗವು ಓದುಗರಿಗೆ ಕೇಳಿರುವ ಪ್ರಶ್ನೆ ಅವಸರದ್ದು ಎಂದು ನನಗನ್ನಿಸುತ್ತಿದೆ. ಏಕೆಂದರೆ ಯಾವುದೇ ಸರ್ಕಾರದ ಸಾಧನೆ ಕುರಿತು ಹೇಳಬೇಕಾದರೆ ಆ ಸರ್ಕಾರ, ಕನಿಷ್ಠ 5 ವರ್ಷಗಳ ಒಂದು ಅವಧಿಯನ್ನಾದರೂ ಪೂರೈಸಿರಬೇಕು. ಐದು ವರ್ಷಗಳ ಒಂದು ಪೂರ್ಣ ಅವಧಿಯನ್ನು ಪೂರೈಸಿಯೂ, ಏನೇನೂ ಸಾಧನೆ ಮಾಡದಿರುವ, ಕೇಂದ್ರದ ಮೋದಿ ಸರ್ಕಾರ ಕಣ್ಣೆದುರು ಇರುವಾಗ, ರಾಜ್ಯದ ಸಮ್ಮಿಶ್ರ ಸರ್ಕಾರದ ಒಂದು ವರ್ಷದ ಸಾಧನೆಯನ್ನು ತಿಳಿಯುವ ಕುತೂಹಲ ಮತ್ತು ಅವಸರ ಕರ್ನಾಟಕದ ಜನರಿಗೆ ಇರಲಾರದು ಎಂಬುದು ನನ್ನ ತಿಳಿವಳಿಕೆ.

ರಂಗನಾಥ ಕಂಟನಕುಂಟೆಯವರ ‘ಬದುಕುವುದು ಹೇಗೆ?’ ಲೇಖನದಿಂದ ಹಲವಾರು ಪುಸ್ತಕಗಳ ಓದಿನಿಂದ ದೊರೆಯಬಹುದಾದ ಜ್ಞಾನ ದೊರೆಯುತ್ತದೆ. ಈ ಲೇಖನದಲ್ಲಿ ಒತ್ತು ಇರುವುದು ‘ಅರಿವಿ’ನಿಂದ ಕೂಡಿದ ಬದುಕನ್ನು ಕುರಿತು. ಇಂಥ ಅದ್ಭುತ ಲೇಖನವನ್ನು ಪ್ರಕಟಿಸಿ ನನ್ನ ಮತ್ತು ನನ್ನಂಥ ಅನೇಕ ಓದುಗರ ‘ಅರಿವ’ನ್ನು ಹೆಚ್ಚಿಸಿದ್ದೀರಿ.

-ಸಿ.ಚಿಕ್ಕತಿಮ್ಮಯ್ಯ, ಹಂದನಕೆರೆ.


ಪತ್ರಿಕಾವೃತ್ತಿಯ ನೈತಿಕ ಅಧಃಪತನ

ಪತ್ರಕರ್ತ ವೃತ್ತಿಯನ್ನು ಪವಿತ್ರ ಎಂದು ಭಾವಿಸಿದ ಕಾಲವೊಂದಿತ್ತು. ಯಾರಾದರೂ, ‘ಏನು ಮಾಡ್ತಿಯಪ್ಪ?’ ಎಂದು ಕೇಳಿದಾಗ ಪತ್ರಕರ್ತ ಎಂದು ಉತ್ತರಿಸಿದರೆ, ‘ಮತ್ತೆ ಹೊಟ್ಟೆಗೆ ಏನು ಮಾಡ್ತಿಯಪ್ಪ? ಎಂದು ಮರು ಪ್ರಶ್ನಿಸುತ್ತಿದ್ದರು. ಅಂದರೆ ಮಾಧ್ಯಮ ಕ್ಷೇತ್ರದ ಕೆಲಸವೆಂದರೆ ಅದೊಂದು ಸೇವಾ ಕ್ಷೇತ್ರ ಎಂಬ ಭಾವನೆ ಇತ್ತು. ಪೈಜಾಮ, ಜುಬ್ಬಾ ಹೆಗಲಿಗೊಂದು ಬಟ್ಟೆಯ ಚೀಲ, ಕೈಲೊಂದು ಪೆನ್ನು ಹಿಡಿದರೆ ಅವನು ಪತ್ರಕರ್ತ ಎಂಬ ಭಾವನೆ ಇತ್ತು.

ಈಗ ಅದೆಲ್ಲಾ ಉಲ್ಟಾ ಹೊಡೆದಿದೆ. ಮೇಲಿನ ರೀತಿಯ ಡ್ರೆಸ್ ಹಾಕಿದರೆ ಇಲ್ಲವೇ ಪ್ರಾಮಾಣಿಕವಾಗಿ ಪತ್ರಕರ್ತ ವೃತ್ತಿ ನಿರ್ವಹಿಸಿದರೆ, ಅಂತಹವನನ್ನು ‘ಇವನು ಈ ಕಾಲಕ್ಕೆ ಸರಿ ಇಲ್ಲ ಬಿಡು’ ಎಂದೋ ಇಲ್ಲವೇ ‘ದ್ರ್ಯಾಬೇ’ ಎಂದೋ ಮಾತನಾಡಿಕೊಳ್ಳುವುದುಂಟು.

ಮಾಧ್ಯಮ ರಂಗದ ಇತ್ತೀಚೆಗಿನ ವಿದ್ಯಮಾನಗಳಿಂದ ಇಡೀ ಕ್ಷೇತ್ರವೇ ತಲೆತಗ್ಗಿಸುವಂತಾಗಿದೆ. ಇದಕ್ಕೆ ಕಡಿವಾಣ ಹಾಕುವುದು ಯಾರು ಎಂಬ ಪ್ರಶ್ನೆ ಈಗ ಪ್ರಮುಖವಾದುದಾಗಿದೆ. ಇಡೀ ಕ್ಷೇತ್ರವೇ ಕೊಳೆತು ನಾರುತ್ತಿದೆ. ನಾನು ಪತ್ರಕರ್ತ ಎಂದು ಹೇಳಿಕೊಳ್ಳಲೂ ಹಿಂಜರಿಯುವಂತಾಗಿದೆ.

ಸಾಹಿತಿ ಗೇಬ್ರಿಯಲ್ ಗಾರ್ಸಿಯಾ ಮಾಕ್ರ್ವೆಜ್ ಪತ್ರಿಕಾ ವೃತ್ತಿಯನ್ನು ‘ದೇವರ ಆಯ್ಕೆಯ ವೃತ್ತಿ’ ಎಂದು ಪ್ರಶಂಸಿದ್ದರು. ಅಂದರೆ ಈ ವೃತ್ತಿಗೆ ಎಷ್ಟೊಂದು ಪವಿತ್ರತೆಯ ಭಾವನೆ ಇತ್ತು ಎಂಬುದನ್ನು ನಾವು ಅರ್ಥೈಸಿಕೊಳ್ಳಬಹುದಾಗಿದೆ. ಭ್ರಷ್ಟಾಚಾರದ ವ್ಯಾಪಕತ್ವದ ವಿಚಾರದಲ್ಲಿ ಪತ್ತಿಕೋದ್ಯಮವು ಎಲ್ಲ ಕ್ಷೇತ್ರಗಳಿಗಿಂತ ಒಂದು ಹೆಜ್ಜೆ ಮುಂದೆ ಇದೆ. ಪತ್ರಕರ್ತರೊಬ್ಬರು ತಮಗೆ ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ ಎಂದು ರಾಜಕಾರಣಿಗಳು ದೂರು ನೀಡುವಷ್ಟರ ಮಟ್ಟಿಗೆ ಉಲ್ಬಣಿಸಿದೆ.

ಈ ಮೊದಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿ ಜೈಲಿಗೆ ಹೋಗಿದ್ದ ಬಳ್ಳಾರಿ ಕಡೆಯ ಒಬ್ಬ ಯುವ ರಾಜಕಾರಣಿಯ ಡೈರಿಯಲ್ಲಿ ಕೆಲ ಪತ್ರಕರ್ತರ ಹೆಸರುಗಳು, ಯಾರ್ಯಾರಿಗೆ ಎಷ್ಟು ಹಣ ಕೊಡಲಾಗಿದೆ ಎಂಬುದರ ವಿವರಗಳು ಲಭ್ಯವಾಗಿದ್ದು ಎಲ್ಲರಿಗೂ ಗೊತ್ತಿದೆ. ಒಟ್ಟಾರೆ ಪತ್ರಿಕೋದ್ಯಮದಲ್ಲಿನ ಭ್ರಷ್ಟಾಚಾರ ಕುರಿತು ಹೇಳುವುದಕ್ಕೆ ನಾಚಿಕೆಯಾಗುತ್ತಿದೆ. ಇದಕ್ಕೆ ಸ್ವತಃ ಪತ್ರಕರ್ತನಾದವನೇ ಕಡಿವಾಣ ಹಾಕಿಕೊಳ್ಳಬೇಕು. ತಾನು ನೈತಿಕವಾಗಿ ಅಧಃಪತನ ಹೊಂದುವುದನ್ನು ಅವನೇ ತಡೆಯಲು ಮುಂದಾಗಬೇಕಿದೆ. ಸ್ವತಃ ಅವನ ಮನಪರಿವರ್ತನೆಯಾಗದೇ ಯಾವುದೇ ಸಂಘಸಂಸ್ಥೆಗಳು ಇದನ್ನು ಸರಿಪಡಿಸಲು ಸಾಧ್ಯವಾಗದು. ತನ್ನ ಹೆಸರು ಕೆಟ್ಟ ಕಾರಣಕ್ಕೆ ಪ್ರಚಾರವಾಗುವುದನ್ನು ತಡೆಯಲು ಅವನು ಅದರಿಂದ ದೂರ ಇರಬೇಕು. ನೈತಿಕತೆ ಬಿಟ್ಟು ಬದುಕುವುದಾದರೂ ಹೇಗೆ ಎಂಬ ಪ್ರಶ್ನೆ ಸ್ವತಃ ಅವನ ಮನಸ್ಸಿನಾಳದಿಂದ ಎದ್ದುಬರಬೇಕು.

ಭ್ರಷ್ಟಾಚಾರ ನಿಗ್ರಹಕ್ಕೆ ಇರುವ ಸಂಸ್ಥೆಗಳು ಪತ್ರಕರ್ತರನ್ನು ವಿಚಾರಣೆಗೊಳಪಡಿಸಿದ ಉದಾಹರಣೆಗಳೇ ಇಲ್ಲ. ಕಾರಣ ಇಂತಹ ಪತ್ರಕರ್ತರ ವಿರುದ್ಧ ದೂರು ನೀಡಿದವರೂ ಇಲ್ಲ. ಅದೇಕೋ ಇತ್ತೀಚೆಗೆ ಕೆಲವರು ಪೊಲೀಸರಿಗೋ, ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರಿಗೋ ದೂರು ನೀಡುವ ಧೈರ್ಯ ಮಾಡಿರುವುದು ಮೆಚ್ಚತಕ್ಕ ಸಂಗತಿಯೇ ಹೌದು.

ಯಾರೂ ಸತ್ಯ ಹರಿಶ್ಚಂದ್ರರಲ್ಲ ಎಂದು ಸಿನಿಕತನದ ಮಾತನಾಡುತ್ತಾ, ಇಲ್ಲವೇ ನಮಗೇಕೆ ಬಿಡು ಎಂದು ಕೂರುವ ಬದಲು ಅದಕ್ಕೊಂದು ಕೊನೆ ಹಾಡಲು ಮಾಧ್ಯಮ ಕ್ಷೇತ್ರದವರೇ ಮುಂದಾಗಬೇಕಿದೆ.

-ಬೆನಕನಹಳ್ಳಿ ಶೇಖರಗೌಡ, ಬೆಂಗಳೂರು.


ಕೋಲಾಟ ಕ್ರೀಡೆಯಲ್ಲ!

ಕೆ.ವಿ.ಪರಮೇಶ್ ಅವರು ಕ್ರೀಡಾಂಕಣ ವಿಭಾಗದಲ್ಲಿ ‘ಲಗೋರಿ ಮತ್ತು ಕೋಲಾಟ’ ಕುರಿತು ಬರೆದಿದ್ದಾರೆ. ತುಂಬಾ ಒಳ್ಳೆಯ ಬರವಣಿಗೆ ಇದಾಗಿದ್ದು, ಓದುಗರಿಗೆ ನಮ್ಮ ಪ್ರಾಚೀನ ಕ್ರೀಡೆಗಳ ಮಾಹಿತಿಯನ್ನು ಒದಗಿಸುತ್ತದೆ.

ಆದರೆ, ಇಲ್ಲೊಂದು ಪ್ರಶ್ನೆ ಉದ್ಭವವಾಗುತ್ತದೆ. ಕ್ರೀಡಾಂಕಣದಲ್ಲಿ ಕ್ರೀಡೆಗಳನ್ನೇ ಕುರಿತು ಚರ್ಚಿಸುವುದು ವಿಷಯಕ್ಕೆ ನ್ಯಾಯ ಒದಗಿಸಿದಂತೆ. ‘ಕ್ರೀಡೆ’ ಎನ್ನುವ ಪದ ಸಂಸ್ಕೃತ ಪದವಾಗಿದ್ದು, ಕನ್ನಡದಲ್ಲಿ ‘ಆಟ’ವೆಂತಲೇ ಗುರುತಿಸಿಕೊಳ್ಳತ್ತದೆ. ಆಟ ಎನ್ನುವ ಪದ ಬಹು ವ್ಯಾಪಕವಾದಂಥ ಅರ್ಥವನ್ನು ಹೊಂದಿದ್ದು, ಕಲಾ ಪ್ರಕಾರಗಳಾದ ದೊಡ್ಡಾಟ, ಸಣ್ಣಾಟ, ಡೊಂಬರಾಟ, ಗೊಂದಲಿಗರ ಆಟ ಇತ್ಯಾದಿ ಕಲಾ ಪರಂಪರೆಯೂ ಇದರೊಳಗೇ ಸೇರಿಕೊಳ್ಳುತ್ತವೆ. ಹಾಗಾಗಿ ಆಟ ಎನ್ನುವ ಪದವನ್ನು ಕ್ರೀಡೆಗೆ ಸಂಯೋಜನೆಗೊಳಿಸುವಾಗ ತುಂಬಾ ಎಚ್ಚರಿಕೆ ವಹಿಸಬೇಕು.

ಲೇಖಕರು ಒದಗಿಸಿರುವ ಮಾಹಿತಿ ಜನಪದ ಕಲಾ ಪರಂಪರೆಯ ಕೋಲಾಟದ್ದಾಗಿದ್ದು, ಇದು ಒಂದು ಕ್ರೀಡೆ ಆಗಿರುವುದಿಲ್ಲ. ಏಕೆಂದರೆ, ಕೋಲಾಟವನ್ನು ದಿನನಿತ್ಯದ ಕ್ರೀಡಾ ರೂಪದಲ್ಲಿ ಆಡದೇ ಹಬ್ಬ ಹರಿದಿನ, ಜಾತ್ರೆ, ಉತ್ಸವಾದಿ ವಿಶೇಷ ಸಂದರ್ಭಗಳಲ್ಲಿ ಕಲಾ ಪ್ರದರ್ಶನ ರೂಪದಲ್ಲಿ ವ್ಯಕ್ತಗೊಳ್ಳುತ್ತದೆ. ಹಾಗಾಗಿ ಇಂಥ ಒಂದು ಕಲಾ ಪರಂಪರೆಯನ್ನು ಕ್ರೀಡೆಗೆ ಹೋಲಿಸಿ ವಿವರಣೆ ನೀಡಿರುವುದು ಅಷ್ಟು ಸಮಂಜಸ ಎನಿಸುವುದಿಲ್ಲ ಎಂಬುದು ನಮ್ಮ ಅಭಿಪ್ರಾಯವಾಗಿದೆ.

-ಡಾ.ನದಾಫ್ ಎಚ್.ಎಚ್
-ಡಾ.ರಾಜಶೇಖರ ಸಿ.ಡಿ., ಹಾವೇರಿ.


ತಿದ್ದುಪಡಿ

ಮೇ ಸಂಚಿಕೆಯ ಪುಸ್ತಕ ಪ್ರಪಂಚ ವಿಭಾಗದಲ್ಲಿ ಪ್ರಕಟವಾದ ‘ಮಲೆಗಳಲ್ಲಿ ಮದುಮಗಳು: ವಿಮರ್ಶೆಯ ಅವಸರ ಸಾವಧಾನದಿಂದ ಬೆನ್ನೇರಬೇಕು!’ ಲೇಖನ ಬರೆದ ಎನ್.ಬೋರಲಿಂಗಯ್ಯ ಅವರು ಮೈಸೂರು ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಎಂದು ತಪ್ಪಾಗಿ ಮುದ್ರಣವಾಗಿತ್ತು. ಅವರು ಮೈಸೂರು ಯುವರಾಜ ಕಾಲೇಜಿನ  ನಿವೃತ್ತ ಕನ್ನಡ ಪ್ರಾಧ್ಯಾಪಕರು. ಇದೇ ಲೇಖನದ 66ನೇ ಪುಟದ 2ನೇ ಪ್ಯಾರಾದಲ್ಲಿ ‘…1700 ಪುಟಗಳ ಒಂದು ಸಂಶೋಧನಾತ್ಮಕ ಕೃತಿ ಕಾನೂರು ಹೆಗ್ಗಡತಿ: ವಿವೇಚನೆ ಪ್ರಕಟವಾಗಿತ್ತು.’ ಎಂದಿದೆ. ಇಲ್ಲಿ ಪುಟಗಳ ಸಂಖ್ಯೆಯನ್ನು 170 ಎಂದು ಓದಿಕೊಳ್ಳಬೇಕು. ತಪ್ಪಿಗೆ ಕ್ಷಮೆ ಇರಲಿ.

-ಸಂ.


ನಿರ್ದೇಶಕರಿಂದ ಮೋಸ!

‘ಸಂಸ್ಕೃತಿ ಸಂಪದ’ ಅಂಕಣದಲ್ಲಿ ಕಿರುತೆರೆಯ ಧಾರಾವಾಹಿ ‘ಮಗಳು ಜಾನಕಿ’ ಬಗ್ಗೆ ವೈ.ಕೆ.ಸಂಧ್ಯಾ ಶರ್ಮ ಅವರು ಬರೆದಿರುವ ವಿಮರ್ಶೆ/ಲೇಖನ ಕುರಿತು ನನ್ನ ಪ್ರತಿಕ್ರಿಯೆ:

ಈ ಲೇಖನಕ್ಕೆ ಪತ್ರಿಕೆಯ ಎರಡೂವರೆ ಮೂರು ಪುಟಗಳಷ್ಟು ಜಾಗದ ಆವಶ್ಯಕತೆ ಇತ್ತೇ? ಬಹುಶಃ ಒಂದು ವರ್ಗ, ಒಂದು ಸಮುದಾಯದ ಜನ ಮಾತ್ರ ಮೆಚ್ಚಿಕೊಳ್ಳುವ ಟಿ.ಎನ್.ಸೀತಾರಾಮ್ ಅವರ ಧಾರಾವಾಹಿಗಳು ಹೆಸರು ಮಾಡಿರುವುದು ಅವುಗಳ ಕಥೆಗಳಿಗಿಂತ ಮಿಗಿಲಾಗಿ, ಶೀರ್ಷಿಕೆ ಹಾಡಿನ ಸಾಹಿತ್ಯ ಮತ್ತು ಸಂಗೀತಕ್ಕಾಗಿ ಎಂಬ ಬಲವಾದ ಅನುಮಾನವಿದೆ ನನಗೆ. 20-22 ವರ್ಷಗಳ ಅವಧಿಯಲ್ಲಿ ಪ್ರೇಕ್ಷಕರೇ ಕಥೆಗಾರ-ನಿರ್ದೇಶಕರಿಗಿಂತ ಹೆಚ್ಚು ಬೆಳೆದಿದ್ದಾರೆ.

`ಮಗಳು ಜಾನಕಿ’ ಇದುವರೆಗೆ ಹೆಸರಿಗಷ್ಟೇ, ಆದರೆ ಮೆರೆದಿರುವ ಪಾತ್ರಗಳು ಸಿ.ಎಸ್.ಪಿ. ಮತ್ತು ಭಾರ್ಗಿ. ಎಲ್ಲ ಅವಕಾಶಗಳು, ಸೌಲಭ್ಯಗಳು ಇದ್ದ ಮನೆ ಬಿಟ್ಟು ಬಂದ ಮೇಲೂ, ಕೇಳದೆಯೇ ಸುಲಭವಾಗಿ ಹಿತೈಷಿಗಳಿಂದ ಕೆಲಸ, ಮನೆ, ಸಾಲ, ಸಹಾಯ ಗಿಟ್ಟಿಸುವ ಜಾನಕಿ ತಾನೇ ಏನಾದರೂ ಸಾಧಿಸಬೇಕೆಂಬ ಕನಸಿರುವ ಸ್ವಾಭಿಮಾನಿ ಹುಡುಗಿ! ಪೊಲೀಸ್ ಅಧಿಕಾರಿಯಾಗಬೇಕೆಂಬ ಅವಳ ಆಸೆಗೆ ಕಾರಣವಂತೂ ಬಾಲಿಶ. ಭವಿಷ್ಯದ ಬಗ್ಗೆ ಅವಳ ಗೊಂದಲ ಬಗೆಹರಿಯಲು 220 ಸಂಚಿಕೆಗಳು ಬೇಕಾದವು. ಈಗ ಪ್ರೇಕ್ಷಕರ ಟೀಕೆಗೆ ಒಳಗಾಗಿ ಈ ಪಾತ್ರ ತಿರುವು ಪಡೆದಿದೆ ಅನಿಸುತ್ತಿದೆ.

ಜಾನಕಿಗೆ ಹೋಲಿಸಿದರೆ ಶ್ಯಾಮಲತ್ತೆ, ದೇವಯಾನಿ ಮತ್ತು ಸಂಜನಾ ಪಾತ್ರಗಳೇ ಗಟ್ಟಿಯಾಗಿವೆ. ತಕ್ಕಮಟ್ಟಿಗೆ ತನ್ನ ನಿರ್ಧಾರ ತಾನೇ ತೆಗೆದುಕೊಳ್ಳುವ, ಚಿಕ್ಕಪುಟ್ಟ ಹಣಕಾಸಿನ ವ್ಯವಹಾರ ನಡೆಸುವ, ಮಹಿಳಾ ಸಂಘದ ಸದಸ್ಯೆಯಾಗಿದ್ದು, ಕಾರ್ಪೊರೇಟರ್ ಆಗಬೇಕೆನ್ನುವ ಆಕಾಂಕ್ಷೆ ಹೊಂದಿರುವ ಶ್ಯಾಮಲತ್ತೆ ಪೆದ್ದಿ ಎಂಬಂತೆ ಬಿಂಬಿತಳಾಗಿ, ಎಲ್ಲರ ಅಪಹಾಸ್ಯಕ್ಕೆ ಗುರಿಯಾಗುತ್ತಿರುತ್ತಾಳೆ. ಉದ್ಯಮ ನಡೆಸಬೇಕೆನ್ನುವ, ಹಣ ಗಳಿಸಬೇಕೆನ್ನುವ ಮಹತ್ವಾಕಾಂಕ್ಷೆ ಇರುವ ಯುವತಿ ದೇವಯಾನಿ, ಬೇರೆ ಹೆಣ್ಣು ಪಾತ್ರಗಳ ಕಣ್ಣಿಗೂ ದುರಾಸೆ ಇರುವ ಖಳನಾಯಕಿಯಾಗಿ ಕಾಣಿಸುತ್ತಾಳೆ. ಇನ್ನು ಪ್ರಶ್ನಿಸುವ ಸಂಜನಾ ಜಗಳಗಂಟಿ! ಹೀಗಿರುವಾಗ ಚಂಚಲಳ ಪಾತ್ರ ಬೆಳೆಯುತ್ತದೆಯೇ?

ಕನ್ನಡ ಚಾನೆಲ್‍ಗಳಲ್ಲಿ ಬರುವ ಎಲ್ಲಾ ಧಾರಾವಾಹಿಗಳು ಹೆಂಗಸರ ಪಾತ್ರಗಳ ಚಿತ್ರಣ ಮತ್ತು ಅವುಗಳನ್ನು ಬಿಂಬಿಸುವಲ್ಲಿ ಅಧೋಗತಿಯ ಪರಾಕಾಷ್ಠೆ ಮುಟ್ಟಿವೆ. ಅವುಗಳೆಲ್ಲಾ ರಾಜಾರೋಷವಾಗಿ ಈ ಕೆಲಸ ಮಾಡುತ್ತಿವೆ. ಆದರೆ ಪ್ರಗತಿಶೀಲ ನಿರ್ದೇಶಕ ಎಂದು ಗುರುತಿಸಿಕೊಂಡಿರುವ ಟಿ.ಎನ್.ಸೀತಾರಾಮ್ ಅವರು ಪ್ರೇಕ್ಷಕರ ಕಣ್ಕಟ್ಟಿ ಮೋಸ ಮಾಡುತ್ತಿದ್ದಾರೆ. ಅವರಿಗೆ ಹೀಗೇ ಮುಂದುವರಿಯುವ ಯೋಜನೆಯಿದ್ದರೆ, ಇದೇ ಅವರ ಕಡೆಯ ಧಾರಾವಾಹಿಯಾಗುವುದು ಒಳಿತು. ಇಂದಿನ ಸಮಾಜದ, ಇಂದಿನ ಪೀಳಿಗೆಯ ಹೆಣ್ಣುಮಕ್ಕಳು ಈ ಧಾರಾವಾಹಿಯಿಂದ ಕಲಿಯಬೇಕಾದುದೇನೂ ಇಲ್ಲ. ಅವರು ಎದುರಿಸುತ್ತಿರುವ ಸವಾಲುಗಳಿಗೆ ಇದು ಅಪ್ರಸ್ತುತ.

-ಎನ್.ಲಕ್ಷ್ಮಿ, ಬೆಂಗಳೂರು.

(‘ಮಗಳು ಜಾನಕಿ’ ಧಾರಾವಾಹಿ ಕುರಿತ ಲೇಖನಕ್ಕೆ ಸಮಾಜಮುಖಿ ಸ್ಥಳಾವಕಾಶ ನೀಡಿದ್ದನ್ನು ಪ್ರಶ್ನಿಸುತ್ತಲೇ ವಿಮರ್ಶೆಯನ್ನು ವಿಸ್ತರಿಸಿದ್ದಕ್ಕೆ ಧನ್ಯವಾದಗಳು! -ಸಂ.)


Leave a Reply

Your email address will not be published.