ಓದುಗರ ಅಭಿಪ್ರಾಯಗಳು

ನೂರು ಪಟ್ಟು ಗುಣಮಟ್ಟ

ಹುಬ್ಬಳ್ಳಿಯ ಸ್ನೇಹಿತನ ಮನೆಯಲ್ಲಿ ‘ಸಮಾಜಮುಖಿ’ ನೋಡಿ ಬಹಳಷ್ಟು ಖುಷಿಯಾಯಿತು. ಪತ್ರಿಕೆಯಲ್ಲಿಯ ಲೇಖನಗಳು ಓದಿಸಿಕೊಂಡು ಹೋದವು. ಪತ್ರಿಕೆಯ ಗುಣಮಟ್ಟ ಇತರೇ ಪತ್ರಿಕೆಗೆಗಿಂತ 100 ಪಟ್ಟು ಹೆಚ್ಚಾಗಿರುವಂತೆ ತೋರಿತು. ಮಾಧ್ಯಮ ಭ್ರಷ್ಟಾಚಾರ ಕುರಿತಾದ ಲೇಖನಗಳು ಪ್ರಸ್ತುತವಾಗಿದ್ದವು. ಮೋದಿ ಕುರಿತಾದ ಬರಹಗಳು ಪತ್ರಿಕೆಯ ಘನತೆಯನ್ನು ಹೆಚ್ಚಿಸಿದ್ದವು. ಪೂರಕವೆಂಬಂತೆ ನಾಮದೇವ ಕಾಗದಗಾರ ಅವರ ವ್ಯಂಗ್ಯಚಿತ್ರಗಳು ಉತ್ತಮವಾಗಿದ್ದವು.

-ಪವನ್ ತಹಶೀಲ್ದಾರ ,ಮಲಗಿ.


ಮೋದಿ ಚಿತ್ರ ಏಕೆ?

ರಘುನಂದನ ಅವರ ಕವಿತೆ ಬಹಳ ಅದ್ಭುತವಾಗಿದೆ. ಆದರೆ ಈ ಕವಿ ಮತ್ತು ನಾಟಕಕಾರ ಇಬ್ಬರೂ ಅಡ್ರೆಸ್ ಮಾಡುತ್ತಿರುವುದು ಜನರನ್ನೇ ಹೊರತು ನಾಯಕನನ್ನಲ್ಲ. ಇವು ಆತ್ಮ ನಿರೀಕ್ಷಣೆಯ ಮಾತುಗಳೇ. ಇದಕ್ಕೆ ಮೋದಿ ಚಿತ್ರ ಬೇಡವಾಗಿತ್ತು.

-ನಿತ್ಯಾನಂದ ಶೆಟ್ಟಿ, ತುಮಕೂರು.


ಶ್ರೇಷ್ಠ ಸಾಲುಗಳ ಮುಖಾಮುಖಿ

ರಘುನಂದನ ಅವರ ‘ಶೇಕ್‍ಸ್ಪಿಯರ್-ಬ್ರೆಖ್ಟ್ ವಾದಿ-ಸಂವಾದಿ’ ಕವನವನ್ನು ಓದಿದೆ. ಜಗತ್ತಿನ ಇಬ್ಬರು ಶ್ರೇಷ್ಠ ನಾಟಕಕಾರರಾದ ಇಂಗ್ಲೆಂಡಿನ ವಿಲಿಯಂ ಶೇಕ್‍ಸ್ಪಿಯರ್ ಹಾಗೂ ಜರ್ಮನಿಯ ಬರ್ಟೋಲ್ಟ್ ಬ್ರೆಖ್ಟ್ -ಇವರ ಜಗತ್ಪ್ರಸಿದ್ಧ ನಾಟಕಗಳಾದ ಜೂಲಿಯಸ್ ಸೀಸರ್ ಮತ್ತು ಗೆಲಿಲಿಯೋ ನಾಟಕಗಳಿಂದ ಆಯ್ದ ಜಗದ್ವಿಖ್ಯಾತ ಸಾಲುಗಳನ್ನು ಪೋಣಿಸಿ ಈ ಕವನವನ್ನು ಅದ್ಭುತವಾಗಿ ಹೆಣೆಯಲಾಗಿದೆ.

ಸರ್ವಾಧಿಕಾರಿ ದಂಡನಾಯಕ ಸೀಸರನ ಕೈಕೆಳಗೆ ರೋಮ್ ಹೆಸರಿಗಷ್ಟೆ ರಿಪಬ್ಲಿಕ್. ಅಲ್ಲಿನ ಸೆನೆಟ್ ತನ್ನೆಲ್ಲಾ ಅಧಿಕಾರ ಕಳೆದುಕೊಂಡಿದೆ. ಸೆನೆಟ್ ಸದಸ್ಯರಲ್ಲೊಬ್ಬನಾದ ಕ್ಯಾಷಿಯಸ್ ಸೀಸರನ ಬಗ್ಗೆ ಅಸಹನೆಯಿಂದ ಹೇಳುತ್ತಾನೆ, ‘ಜನತೆ ಕುರಿಮಂದೆ ಎಂದು ತೋರದಿದ್ದರೆ ಸೀಸರ್ ತೋಳ ತಾನಾಗುತ್ತಿರಲಿಲ್ಲ. ರೋಮನ್ನರು ದುರ್ಬಲ ಹರಿಣಗಳಾಗದಿದ್ದರೆ ಸೀಸರ್ ಸಿಂಹವೂ ಆಗುತ್ತಿರಲಿಲ್ಲ…’

ನಮಗೆ ಎಪಿಕ್ ರಂಗಭೂಮಿಯನ್ನು ಪರಿಚಯಿಸಿದ ಬ್ರೆಖ್ಟ್ ಗೆಲಿಲಿಯೋ ನಾಟಕ ಬರೆದಾಗ ಜಾಗತಿಕ ರಾಜಕೀಯ ಸನ್ನಿವೇಶ ಬಹಳಷ್ಟು ಬದಲಾಗಿತ್ತು. ಮೊದಲ ಮಹಾಯುದ್ಧದ ನಂತರ ಸಂಪೂರ್ಣ ದಿವಾಳಿಯೆದ್ದು ಹತಾಶರಾಗಿದ್ದ ಜರ್ಮನರು, ತಮ್ಮಲ್ಲಿ ಬಲಿಷ್ಟತೆಯ ಭ್ರಮೆ ಹುಟ್ಟಿಸುವವನೊಬ್ಬನಿಗಾಗಿ ಹಪಹಪಿಸುತ್ತಿರುತ್ತಾರೆ. ಪರಿಸ್ಥಿತಿಯ ದುರ್ಲಾಭ ಪಡೆದ ಹಿಟ್ಲರ್ ತನ್ನ ಮೋಹಕ ಭಾಷಣಗಳಿಂದ ಜನರನ್ನು ತನ್ನತ್ತ ಸೆಳೆದ. ಜನಾಂಗೀಯವಾದದ ಭಯಾನಕ ನಾಝಿ ಸಿದ್ಧಾಂತವನ್ನು ಹರಡಿದ. ಜನರು ಸಮೂಹಸನ್ನಿಗೆ ಒಳಗಾಗಿ ತಮ್ಮ ಹೀರೋನನ್ನು ‘ಹೇಲ್ ಹಿಟ್ಲರ್.. ಹೇಲ್ ಹಿಟ್ಲರ್’ ಎಂದು ಅಪ್ಪಿಕೊಂಡರು. ಈ ಹಿನ್ನೆಲೆಯಲ್ಲಿ ನಾಟಕದ ಗೆಲಿಲಿಯೋ ಮತ್ತು ಅವನ ಶಿಷ್ಯ ಆಂದ್ರಿಯಾ ನಡುವಿನ ಸಂಭಾಷಣೆಯಲ್ಲಿ ಬರುವ ‘ಹೀರೋ’ ಪದವನ್ನು ನೋಡಬೇಕಿದೆ. ನಮ್ಮಲ್ಲೂ ಸಾಮರಸ್ಯವನ್ನು ಸುಟ್ಟುಹಾಕಿ, ಗಲಭೆಗಳನ್ನು ಹುಟ್ಟುಹಾಕಿ ಅಧಿಕಾರದ ಚುಕ್ಕಾಣಿ ಹಿಡಿಯುವ ನಾಯಕನ ಹಿಂದೆ ಜನರು ಹುಚ್ಚೆದ್ದು ಕುಣಿಯುವುದನ್ನು ಕಂಡಿದ್ದೇವೆ.

ಇದೇ ಸಂದರ್ಭದಲ್ಲಿ ನನಗೆ ಖ್ಯಾತ ಲೆಬನಾನ್-ಅಮೇರಿಕನ್ ಕವಿ, ದಾರ್ಶನಿಕ ಖಲೀಲ್ ಗಿಬ್ರಾನ್ ಬರೆದ, ಪುನೀತ್ ಅಪ್ಪು ಅನುವಾದಿಸಿದ ‘ಆ ದೇಶಕ್ಕಾಗಿ ಮರುಕ ಪಡು’ ಕವನದ ಕೆಲವು ಸಾಲುಗಳು ನೆನಪಿಗೆ ಬರುತ್ತಿದೆ. ‘ಪೀಡಕನನ್ನೇ ನಾಯಕನೆಂದು ತಿಳಿದಿರುವ, ಮಿನುಗು ಮಾತುಗಳನ್ನಾಡಿ ದೋಚುವ, ಲೂಟಿಕೋರನನ್ನೇ ದಾನಶೂರನೆಂದು ತಿಳಿದಿರುವ ಆ ದೇಶಕ್ಕಾಗಿ ಮರುಕಪಡು’.

16-17ನೇ ಶತಮಾನದ ನಾಟಕಕಾರ ಶೇಕ್‍ಸ್ಪಿಯರ್ ಹಾಗೂ 1920ನೇ ಶತಮಾನದ ನಾಟಕಕಾರ ಬ್ರೆಖ್ಟ್ ಇವರ ವಿಶ್ವವಿಖ್ಯಾತ ನಾಟಕಗಳ ಶ್ರೇಷ್ಠ ಸಾಲುಗಳನ್ನು ಮುಖಾಮುಖಿಯಾಗಿಸಿ, ಸುಂದರವಾಗಿ ಪೋಣಿಸಿ, ಸಾರ್ವಕಾಲಿಕ ಸತ್ಯಗಳನ್ನು ನಮ್ಮ ದೇಶದ ಸಮಕಾಲೀನ ಸಂದರ್ಭದಲ್ಲಿ ಕವಿ ಅನನ್ಯವಾಗಿ ಕಟ್ಟಿಕೊಟ್ಟಿದ್ದಾರೆ. ಕವನದ ಭಾವ ಮೇಲ್ನೋಟಕ್ಕೆ ವಿಷಾದದಂತೆ ಕಂಡುಬಂದರೂ, ಕವಿ ನಮ್ಮನ್ನು ಮತ್ತೆಮತ್ತೆ ಯೋಚನೆಗೆ ಹಚ್ಚುವ ಕೆಲಸವನ್ನು ಮಾಡಿದ್ದಾರೆ. ಶೇಕ್‍ಸ್ಪಿಯರ್, ಬ್ರೆಖ್ಟ್ ಮತ್ತು ಖಲೀಲ್ ಗಿಬ್ರಾನ್ ಅವರ ಸಮಾಜಮುಖಿ ಚಿಂತನೆಗಳನ್ನು ಅಚ್ಚರಿಯೆಂಬಂತೆ ಪೋಣಿಸಿದ ರಘುನಂದನ ಅವರು ಅದೇ ಹಿರಿಯರ ಪರಂಪರೆಗೆ ಸೇರುತ್ತಾರೆ. ಈ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಅದಮ್ಯ ಭರವಸೆ ಇಟ್ಟುಕೊಂಡಿದ್ದಾರೆ. ಅಭಿನಂದನೆಗಳು.

-ಪ್ರಭಾಕರ ಕಾಪಿಕಾಡ್, ಮಂಗಳೂರು.


ನಡಿಗೆಯಲ್ಲಿ ಭಾಗವಹಿಸುವ ಬಯಕೆ

‘ನಡೆದು ನೋಡು ಕರ್ನಾಟಕ’ ಪರಿಕಲ್ಪನೆ ನನಗೆ ನಿಜಕ್ಕೂ ಇಷ್ಟವಾಯ್ತು. ಈ ನಡಿಗೆಯು ಯುವಮನಗಳಿಗೆ ಒಂದು ಪ್ರದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಹತ್ತಿರದಿಂದ ನೋಡುವ, ಪರಿಹಾರ ಹುಡುಕುವ ಅವಕಾಶವನ್ನು ಕಲ್ಪಿಸುತ್ತದೆ. ಮುಂದೊಂದು ದಿನ ನಾನೂ ಈ ನಡಿಗೆಯಲ್ಲಿ ಭಾಗವಹಿಸಲು ಬಯಸುತ್ತೇನೆ.

-ಡಾ.ಪ್ರಕಾಶ ಮುಂಗಲಿ,ನ್ಯೂ ಯಾರ್ಕ್.


ಮಾರ್ಪಾಟುಗಳಿಗೆ ಕೊನೆಯಿಲ್ಲ

‘ಸಮಾಜಮುಖಿ’ಯಲ್ಲಿ ಓರ್ವ ಓದುಗರು ‘ಷ’ ಉಳಿಸಿಕೊಳ್ಳಬೇಕೆಂದು ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ. ಈ ಬಗೆಯ ಓಲೆಗಳಿಗೆ ನೀವು ತೆರಹು ನೀಡುತ್ತಿರುವುದು ಒಂದು ಮಾತುಕತೆಗೆ ಎಡೆ ಮಾಡಿಕೊಡುತ್ತದೆಂದು. ಯಾಕೆಂದರೆ ಇದರ ಕುರಿತು ಹಲವು ಅನಿಸಿಕೆಗಳು ಹಿಂದಿನಿಂದಲೂ ಮೂಡಿ ಬಂದಿವೆ. ಈ ಎಲ್ಲಾ ಅನಿಸಿಕೆಗಳು ಯಾವ ನೆಲೆಯಿಂದ ಬಂದಿವೆ ಎಂದು ನೋಡಿದರೆ ಹೆಚ್ಚು ಮಾರ್ಪಾಟು ಬೇಕಾಗಿಲ್ಲವೆಂಬ ನೆಲೆಯಿಂದ ಕಾಣುತ್ತದೆ ಹೊರತು ನುಡಿಯರಿಮೆಯ ನೆಲೆಯಲ್ಲಿ ಆಳಕ್ಕೆ ಇಳಿದು ನೋಡಿರುವುದು ತುಂಬಾ ಕಡಿಮೆ.

ಇನ್ನೂ ‘ಷ’ ಬಗ್ಗೆ ಮಾತನಾಡುವ ಮುನ್ನ, ನುಡಿ ಕುರಿತು ತಿಳಿದುಕೊಳ್ಳುವುದು ತುಂಬಾ ಮುಖ್ಯ. ನುಡಿಯಲ್ಲಿ ನಾವು ‘ಮಾತು’ ಮತ್ತು ‘ಬರಹ’ ಎಂಬ ಎರಡು ಬಗೆಗಳನ್ನು ಕಾಣಬಹುದು. ಮಾನವ ಬರೆಯುವ ಮುನ್ನವೇ ಮಾತನಾಡುತ್ತಿದ್ದ. ಮಾತನ್ನು ನೆನಪಿನಲ್ಲಿಟ್ಟುಕೊಳ್ಳುವುದಕ್ಕೆ ಬರಹ ಹುಟ್ಟಿತು ಹಾಗೂ ಹೆಚ್ಚು ಮಂದಿಯನ್ನು ತಲುಪುವುದಕ್ಕೆ ಬರಹದ ನೆರವು ಮಾನವನಿಗೆ ಬೇಕಾಗಿತ್ತು. ಹೀಗೆ ಹೊತ್ತು ಕಳೆದ ಹಾಗೆ ಬರಹಕ್ಕೆ ಹೆಚ್ಚುಗಾರಿಕೆ ದೊರೆಯಿತು. ಬರಹಕ್ಕೆ ಹೆಚ್ಚುಗಾರಿಕೆ ದೊರೆತ ಹಾಗೆ ಮಾತಿನ ಕುರಿತು ಒಂದು ತಪ್ಪು ಅನಿಸಿಕೆ ಮೂಡಿತು. ಅದೇನೆಂದರೆ ನಾವು ಮಾತನಾಡುವ ಹಾಗೆ ಬರೆಯಬಾರದೆಂದು. ಆದರೆ ಇದರಲ್ಲಿ ಒಂದನ್ನು ನಾವು ಮರೆತಿದ್ದೇವೆ, ಮಾತೇ ಮೊದಲು ಬರಹ ಆಮೇಲೆ.

ಮಕ್ಕಳು ಬರೆಯುವ ಮುನ್ನ ಮಾತನಾಡುತ್ತಾರೆ. ಎಲ್ಲರಿಗೂ ಮಾತು ತಾನಾಗೇ ತಾನು ಬರುತ್ತದೆ. ಆದರೆ ಬರಹವನ್ನು ಹೇಳಿಕೊಡಲೇಬೇಕು. ಮಾತು ಸಹಜ, ಆದರೆ ಬರಹ ಸಹಜವಲ್ಲ. ಬರಹಕ್ಕೆ ಒಂದು ಗುಣಮಟ್ಟ ಬೇಕು ಎಂಬ ಮಾತು ಸರಿ. ಆದರೆ ಅದು ಮಾತಿಗೆ ಹತ್ತಿರವಿದ್ದಶ್ಟು ಒಳಿತು, ಇಲ್ಲದಿದ್ದರೆ ಬರಹದ ಕೆಲಸ ಮಂದಿಗೆ ಹೆಚ್ಚು ತೊಡಕಾಗಿ ಕಾಣಿಸುತ್ತದೆ.

ನುಡಿಗೆ ಮಾತೇ ಮೊದಲು, ಬರಹ ಆಮೇಲೆ ಎಂದು ನಾವು ಎಂದೆಂದಿಗೂ ಮರೆಯಬಾರದು. ಮಾತನ್ನು ಹಾಳೆಗೆ ಅಂದರೆ ಬರಹಕ್ಕೆ ಇಳಿಸುವಾಗ ಅದಕ್ಕೂ ಮಾತಿಗೂ ಒಂದು ನಂಟಿದ್ದರೆ ಅದು ಸರಾಗವಾಗಿ ನಡೆಯುತ್ತದೆ. ಇಲ್ಲದಿದ್ದರೆ ಅದು ಒಂದು ಒತ್ತಡದ ಇಲ್ಲವೇ ತೊಡಕಿನ ಕೆಲಸವೆಂದು ಗಮನಿಸಬೇಕು. ಈಗ ಕನ್ನಡಿಗರ ಮಾತನ್ನು ನಾವು ಗಮಿನಿಸಿದರೆ ‘ಶ’ ಮತ್ತು ‘ಷ’ ಅಕ್ಕರಗಳ ನಡುವೆಯಿರುವ ಬೇರ್ಮೆ ಹೆಚ್ಚು ಕನ್ನಡಿಗರಿಗೆ ಎಟಕದು. ಇಲ್ಲಿ ಹೆಚ್ಚು ಪದಕ್ಕೆ ನಾವು ಒತ್ತು ನೀಡಬೇಕು. ಇದರಿಂದ ಹೆಚ್ಚು ಮಾತಿನಲ್ಲಿ ಮೂಡದ ಉಲಿಪು ಬರಹದಲ್ಲಿರುವುದು ಗೊಂದಲಕ್ಕೆ ಎಡೆ ಮಾಡಿಕೊಡುತ್ತದೆ. ಮಾತಿನಲ್ಲಿಲ್ಲದ ‘ಷ’ ಬರಹಕ್ಕೆ ಇಳಿಸುವಾಗ ಗೊಂದಲ ಉಂಟುಮಾಡುತ್ತದೆ. ಹಲವು ತತ್ಸಮ-ತದ್ಭವ ಪದಗಳನ್ನು ಗಮನಿಸಿದರೆ ‘ಷ’ ಅಕ್ಕರ ‘ಶ’ ಇಲ್ಲವೇ ‘ಸ’ ಆಗಿದೆ. ಕನ್ನಡ ಸೊಗಡಿಗೆ ಹೊಂದಿಕೊಳ್ಳುವುದಕ್ಕೆ ಹಲವು ತದ್ಭವ ಪದಗಳು ಹಿಂದಿನಿಂದಲೂ ಮೂಡಿಬಂದಿವೆ. ಇದು ಕಾಕತಾಳಿಯಲ್ಲ. ಯಾಕೆಂದರೆ ಹೆಚ್ಚು ಕನ್ನಡಿಗರಿಗೆ ಎಟಕದು ಈ ‘ಷ’ ಉಲಿಪು. ಕನ್ನಡದ ಸೊಗಡಿಗೆ ಮಾತಿನಲ್ಲಿಲ್ಲದ ‘ಷ’ ಬರಹದಲ್ಲಿರುವುದು ಒಂದು ಗೊಂದಲ ಹೊರತು ಮತ್ತೊಂದಲ್ಲ. ಕೆಲವರಿಗೆ ‘ಷ’ ಬರುತ್ತದೆ ಎಂದು ಅದನ್ನು ಎಲ್ಲರೂ ಬಳಸಲೇ ಬೇಕು ಎಂದು ಹೇಳುವುದಕ್ಕೆ ಆಗುವುದಿಲ್ಲ.

ಇದೇ ಮಾತನ್ನು ನಾವು “ಱ್” ಮತ್ತು “ೞ್” ಗೂ ತಗಲುತ್ತದೆ. ಈ ಎರಡು ಅಕ್ಕರಗಳು ಕನ್ನಡದಲ್ಲಿ ಹಿಂದೆ ಮಾತಿನಲ್ಲಿತ್ತು ಮತ್ತು ಬರಹದಲ್ಲೂ ಇತ್ತು. ಆದರೆ ಹೊತ್ತು ಕಳೆದ ಹಾಗೆ ಇವೆರಡು ಅಕ್ಕರ ಬಳಕೆಯಿಂದ ಬಿಟ್ಟುಹೋಗಿವೆ. ಕೆಲವರಿಗೆ ಈ ಉಲಿಪು ಬಂದರೂ ಹೆಚ್ಚು ಕನ್ನಡಿಗರಿಗೆ ಇದು ಎಟಕದ ಉಲಿಪು. ಹಾಗಾಗಿ ನುಡಿಯಲ್ಲಿ ಮಾರ್ಪಾಟುಗಳಿಗೆ ಮೊದಲಿಲ್ಲ ಕೊನೆಯಿಲ್ಲ. ನುಡಿಒಂದು ಹರಿಯುವ ಹೊನಲಿದ್ದ ಹಾಗೆ, ಇದರಲ್ಲಿ ಮಾರ್ಪಾಟುಗಳು ನಡೆಯುತ್ತಿರುತ್ತವೆ.

ಹಿಂದೆ “ಱ್” ಮತ್ತು “ೞ್” ಬಳಕೆಯಲ್ಲಿದ್ದಾಗ “ಅರಿ” ಮತ್ತು “ಅಱ”, “ತಿಳಿ” ಮತ್ತು “ತಿೞ” ಬೇರೆ ಪದಗಳಾಗಿದ್ದವು. ಆದರೆ ಱ್ ಮತ್ತು ೞ್ ಬಳಕೆಯಿಂದ ಬಿದ್ದ ಮೇಲೆ “ಅರಿ” ಮತ್ತು “ತಿಳಿ” ಬಳಕೆಯಲ್ಲಿದೆ ಮತ್ತು ಇದರಿಂದ ಯಾರಿಗೂ ಏನೂ ತೊಂದರೆಯಾಗಿಲ್ಲ. ಹಿಂದೆ ಮಾರ್ಪಾಟು ನಡೆದಾಗ ಈ ಅಕ್ಕರಗಳು ಬಳಕೆಯಿಂದ ಬಿದ್ದಾಗ ತುಸು ಹೊತ್ತು ಕಿರಿಕಿರಿ ಆಗಿದೆ ಎಂದು ಹೇಳಬಹುದು. ಆದರೆ ಹೊತ್ತು ಕಳೆದ ಹಾಗೆ ಇದಕ್ಕೆ ನಾವು ಹೊಂದಿಕೊಂಡಿದ್ದೇವೆ.

ಹಾಗಾಗಿ ಕನ್ನಡಿಗರಿಗೆ “ಷ” ಒಂದು ಬಗೆಯಲ್ಲಿ ಗೊಂದಲ ಉಂಟುಮಾಡುವ ಒಂದು ಅಕ್ಕರ ಹೊರತು ಮತ್ತೊಂದಲ್ಲ. ಇದನ್ನು ನಾವು ಎರವಲು ಪದಗಳನ್ನು ಬರೆಯುವುದಕ್ಕೆ ಬಳಸುತ್ತೇವೆ ಹೊರತು ಕನ್ನಡದ್ದೇ ಪದಗಳಲ್ಲಿ “ಷ” ಇಲ್ಲ. ಇದು ಹೆರನುಡಿ ಎರವಲಿನಿಂದ ಬಂದ ಒಂದು ಅಕ್ಕರ, ಇದು ಕನ್ನಡದ ಸೊಗಡಿಗೆ ಇಲ್ಲವೇ ನಮ್ಮ ಮಾತಿಗೆ ಹೊಂದದ ಅಕ್ಕರ. ಇದರ ಎಡೆಯಲ್ಲಿ “ಶ” ಮತ್ತು “ಸ” ಬಳಸಬಹುದು. ಕೊಂಚ ಹೊತ್ತು “ಷ” ಇಲ್ಲದೆ ಬರೆಯುವುದು ಕಿರಿಕಿರಿ ಯಾದರೂ ಹೊತ್ತು ಕಳೆದ ಹಾಗೆ ಇದಕ್ಕೆ ನಾವು ಹೊಂದಿಕೊಳ್ಳುತ್ತದೆ. ಹಾಗಾಗಿ ಹಿಂದೆ ಹೇಗೆ “ಱ್” ಮತ್ತು “ೞ್” ಅಕ್ಕರಗಳು ಹೊತ್ತು ಕಳೆದ ಹಾಗೆ ಬಳಕೆಯಿಂದ ನಿಂತಿದೆ ಅದೇ ಬಗೆಯಲ್ಲಿ ಕೂಡ ಈ ಮಾರ್ಪಾಟನ್ನು ಗಮನಿಸಬೇಕು. “ಷ” ಉಳಿಸಿಕೊಳ್ಳಬೇಕೆಂಬ ನಿಲುವಿಗಿಂತ ಕನ್ನಡಗರ ಮಾತಿನಲ್ಲಿರುವ ಅಕ್ಕರಗಳನ್ನು ಉಳಿಸಿಕೊಂಡರೆ ಲೇಸು.

-ವಿವೇಕ್ ಶಂಕರ್,ಬೆಂಗಳೂರು.

Leave a Reply

Your email address will not be published.