ಓದುಗರ ಪ್ರತಕ್ರಿಯೆಗಳು

ಕಳೆದುಕೊಳ್ಳುವ ಪ್ರಶ್ನೆ ಎಲ್ಲಿ?

-ಪದ್ಮರಾಜ ದಂಡಾವತಿ, ಬೆಂಗಳೂರು.

ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ‘ಕಾಂಗ್ರೆಸ್ ಮುಕ್ತ ಭಾರತ ಅನಿವಾರ್ಯವೇ…? ಸದ್ಯಕ್ಕೆ ಬೇಡವೇ…?’ ಕುರಿತ ಮುಖ್ಯ ಚರ್ಚೆಯಲ್ಲಿ ಪಾಲ್ಗೊಂಡು ಸುಧೀಂದ್ರ ಕುಲಕರ್ಣಿ ಅವರು ಬರೆದಿರುವ ಲೇಖನದಲ್ಲಿ ‘ವಿ.ಪಿ.ಸಿಂಗ್, ಬಿಜು ಪಟ್ನಾಯಕ ಮತ್ತು ರಾಮಕೃಷ್ಣ ಹೆಗಡೆಯವರಂಥ ಜನಪ್ರಿಯ ನಾಯಕರನ್ನು ಕಾಂಗ್ರೆಸ್ ಕಳೆದುಕೊಂಡಿತು’ ಎಂಬ ಮಾಹಿತಿ ಇದೆ.

ಬಿಜು ಪಟ್ನಾಯಕ್ ಮತ್ತು ರಾಮಕೃಷ್ಣ ಹೆಗಡೆಯವರು 1969ರಲ್ಲಿ ಕಾಂಗ್ರೆಸ್ ವಿಭಜನೆಯಾದಾಗಲೇ (ಆಗ ಹುಟ್ಟಿಕೊಂಡ ಎರಡು ಪಕ್ಷಗಳನ್ನು ಇಂಡಿಕೇಟ್, ಸಿಂಡಿಕೇಟ್ ಎಂದು ಕರೆಯಲಾಗಿತ್ತು) ಇಂದಿರಾ ಗಾಂಧಿ ಅವರ ಜೊತೆಗೆ ಹೋಗಿರಲಿಲ್ಲ. ತುರ್ತುಪರಿಸ್ಥಿತಿ ನಂತರ 1977ರಲ್ಲಿ ಸಿಂಡಿಕೇಟ್ ಪಕ್ಷವು ಜನತಾ ಪಕ್ಷವಾಗಿ ರೂಪುಗೊಂಡಿತು. ಈ ಇಬ್ಬರು ನಾಯಕರು ಜನತಾ ಪಕ್ಷದ ಅತ್ಯಂತ ಹಿರಿಯ ಸದಸ್ಯರಲ್ಲಿ ಸೇರಿದ್ದರು. ತುರ್ತು ಸ್ಥಿತಿಯಲ್ಲಿ ಹೆಗಡೆ ಮತ್ತು ಪಟ್ನಾಯಕ್ ಅವರಿಬ್ಬರನ್ನೂ ಬಂಧಿಸಿ ಜೈಲಿಗೆ ಅಟ್ಟಲಾಗಿತ್ತು.

ಹೆಗಡೆಯವರು ಕರ್ನಾಟಕದ ಕಾಂಗ್ರೆಸ್ಸೇತರ ಮೊದಲ ಮುಖ್ಯಮಂತ್ರಿ ಎಂದು ಹೆಸರಾಗಿದ್ದರೆ ಪಟ್ನಾಯಕ್ ಅವರು 1969ರಲ್ಲಿಯೇ ಉತ್ಕಲ ಕಾಂಗ್ರೆಸ್ ಎಂಬ ಪಕ್ಷ ಕಟ್ಟಿ ತನ್ಮೂಲಕ ಒರಿಸ್ಸಾ (ಆಗಿನ) ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಹೆಗಡೆಯವರು ಇಂದಿರಾ ಗಾಂಧಿ ಅವರ ಕಟು ಟೀಕಾಕಾರರಾಗಿದ್ದರು. ‘ವಿಧವೆಯಾಗಿದ್ದ ಇಂದಿರಾ ಅವರಿಗೆ ವಿಧವೆಯರ ಕಷ್ಟ ಅರ್ಥವಾಗಲಿಲ್ಲ’ ಎಂದು ಅವರು ತಾವು ಮುಖ್ಯಮಂತ್ರಿಯಾಗಿದ್ದಾಗ ವಿಧವಾ ವೇತನ ಆರಂಭಿಸಿದರು. ಹೆಗಡೆ ಮತ್ತು ರಾಜೀವ ಗಾಂಧಿಯವರ ಸಂಬಂಧ ಎಂದೂ ಮಧುರವಾಗಿರಲಿಲ್ಲ. ಹಾಗಿರುವಾಗ ಇವರನ್ನು ಕಾಂಗ್ರೆಸ್ ಕಳೆದುಕೊಳ್ಳುವ ಪ್ರಶ್ನೆ ಎಲ್ಲಿ ಬಂತು?

ಇನ್ನು, ಅರಸು ಕುರಿತ ಪುಟಗಳು ಜಾಸ್ತಿ ಆಯಿತೇನೋ? ಕನೆಕ್ಟ್ ಮಾಡುವುದು ಕಷ್ಟ ಆಗ್ತದೆ. ಅಂದರೆ ಅಷ್ಟೆಲ್ಲ ಪುಟ ವ್ಯಯ ಮಾಡಿ ಏನು ಹೇಳಲು ಪ್ರಯತ್ನ ಮಾಡುತ್ತೇವೆ? ಲೇಖನಗಳು ಒಂದು ರೀತಿ ಮರಣೋತ್ತರ ಪರೀಕ್ಷೆಯಂತೆ ಇವೆ.

ರೇಪು ಚೇಸ್ತಾನು!

-ಟಿ.ಕೆ.ಗಂಗಾಧರ ಪತ್ತಾರ, ಬಳ್ಳಾರಿ.

ಎಸ್.ಎನ್.ಲಕ್ಷ್ಮೀನಾರಾಯಣ ಅವರ ಭಾಷಾ ಪ್ರಮಾದದ ‘ಮ್ಯಾನೇಜರ್ ನೇಣೀಸ್ಕುನ್ನಾಡಪೋ’ -ವಿನೋದ ಲೇಖನ ಸಹಜ ಹಾಸ್ಯದಿಂದ ರಂಜಿಸುತ್ತದೆ. ಇದನ್ನು ಓದಿ ಸರ್ಕಾರಿ ಕಚೇರಿಯಲ್ಲಿ ನಡೆದ ಒಂದು ಪ್ರಸಂಗ ನೆನಪಾಯ್ತು.

ಮುಖ್ಯಾಧಿಕಾರಿ-ಒಬ್ಬ ಮಹಿಳೆ. ತೆಲುಗಿನ ಕ್ಲರ್ಕ್ ಒಬ್ಬನಿಗೆ ಕನ್ನಡ ಅಷ್ಟಾಗಿ ಬರುತ್ತಿರಲಿಲ್ಲ. ಅಧಿಕಾರಿಣಿ ಏಳೆಂಟು ದಿನಗಳಿಂದ ಪ್ರಮುಖ ಕಡತವೊಂದರ ಶೀಘ್ರ ವಿಲೇವಾರಿಗೆ ಒತ್ತಾಯಿಸುತ್ತಿದ್ದಳು. ಸ್ವಲ್ಪ ಆಲಸಿಯೂ ಆಗಿದ್ದ ಕ್ಲರ್ಕ್ ನಾಲ್ಕು ದಿನ ದೇಹಾಲಸ್ಯ ನಿಮಿತ್ತ ಹಾಕಿದ್ದ ಸಾಂದರ್ಭಿಕ ರಜೆ ಮುಗಿಸಿ ಬಂದ ಕೂಡಲೇ ಸಿಟ್ಟಿನಲ್ಲಿದ್ದ ಅಧಿಕಾರಿಣಿ ಆ ಕಡತ ಅರ್ಜಂಟ್ ತರುವಂತೆ ಹೇಳಿ ಕಳಿಸಿದರು. ಅಂದೇ ಕಚೇರಿಗೆ ಬಂದಿದ್ದ ಕ್ಲರ್ಕ್ ಕೆದರಿದ ಕೂದಲು, ವ್ಯಗ್ರ ಮನಸ್ಥಿತಿಯಿಂದ ಛೇಂಬರ್ ಪ್ರವೇಶಿಸಿ ‘ರೇಪು ಚೇಸ್ತಾನು ಮೇಡಂ’ ಎಂದು ತೊದಲುತ್ತ ನುಡಿದಾಗ ಸಿಟ್ಟಿಗೆದ್ದ ಅಧಿಕಾರಿಣಿ ಜೋರಾಗಿ ಕೂಗಿದ್ದಕ್ಕೆ ಏನು ಅನಾಹುತವಾಯ್ತೊ ಅಂತಾ ಸಿಬ್ಬಂದಿವರ್ಗದವರೆಲ್ಲರೂ ಛೇಂಬರ್‍ಗೆ ಧಾವಿಸಿದರು.

ಕಾರ್ಯದರ್ಶಿ ಮುಂದೆ ಬಂದು ‘ಏನಾಯ್ತು ಮೇಡಂ?’ ಎಂದು ಕೇಳಿದರು. ‘ನೋಡ್ರೀ ಫೈಲ್ ಕೇಳಿದರೆ ರೇಪ್ ಮಾಡ್ತೀನಿ ಅಂತಾ ಹೆದರಿಸೋಕೆ ಎಷ್ಟು ಧೈರ್ಯ ಇವ್ನಿಗೆ’ ಅಂದ್ರು. ಕಾರ್ಯದರ್ಶಿ, ‘ಸಾರೀ ಮೇಡಂ! ಇವ್ನಿಗೆ ಕನ್ನಡ ಬರಲ್ಲ. ತೆಲುಗಿನಲ್ಲಿ ರೇಪು ಅಂದ್ರೆ ನಾಳೆ ಅಂತ ಅರ್ಥ’ ಎಂದಾಗ ವಾತಾವರಣ ತಿಳಿಯಾಯ್ತು

ನಗು ಮೂಡಿಸಿದ ಇಮೋಜಿ

-ಮಂಜುನಾಥ  ಡಿ.ಎಸ್., ಬೆಂಗಳೂರು.

ಮಾನವನ ಪ್ರಮುಖ ಅಗತ್ಯಗಳಲ್ಲಿ ಸಂವಹನವೂ ಸೇರಿದೆ.  ಕಾಲಾನುಕ್ರಮದಲ್ಲಿ ಸಂವಹನ ವಿಧಾನವೂ ಬದಲಾಗಿದೆ.  ಭಾವನೆಗಳನ್ನು ತುಳುಕಿಸುವ ಇಮೋಜಿಗಳು ಶೈಶವಾವಸ್ಥೆಯಲ್ಲಿಯೇ ಅತ್ಯಂತ ಜನಪ್ರಿಯತೆ ಗಳಿಸಿವೆ.  ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ, ಇಮೋಜಿಗಳ ಕುರಿತ ಲೇಖನ ಆಕರ್ಷಕವಾಗಿದ್ದು ನನ್ನ ಮುಖದಲ್ಲೂ ನಗು ಮೂಡಿಸಿತು!  ಲೇಖಕಿಗೆ ಅಭಿನಂದನೆಗಳು

ಪ್ರೊ.ಸೂರಪ್ಪ ಪ್ರಕರಣ: ಸ್ವತಂತ್ರ ಬೌದ್ಧಿಕತೆಗೆ ಸಂಚಕಾರ

-ಡಾ.ಪ್ರವೀಣ ಟಿ.ಎಲ್., ದಾವಣಗೆರೆ.

ವಿಶ್ವವಿದ್ಯಾಲಯಗಳು ಜ್ಞಾನ ಕೇಂದ್ರಗಳು. ಅಲ್ಲಿ ಪ್ರಪಂಚದ ಕುರಿತ ವಸ್ತುನಿಷ್ಠ ಜ್ಞಾನದ ಉತ್ಪಾದನೆ ಮತ್ತು ಪ್ರಸರಣ ನಡೆಯಬೇಕೆಂಬುದು ಮೂಲ ಉದ್ದೇಶ. ಆದರೆ ಇತ್ತೀಚೆಗೆ ಇಂತಹ ಸಂಸ್ಥೆಗಳು ಪ್ರಚಾರಕ್ಕೆ ಬರುತ್ತಿರುವುದು ಅಲ್ಲಿನ ರಾಜಕೀಯ ಕಾರಣಗಳಿಗಾಗಿ. ಮುಖ್ಯವಾಗಿ ಎರಡು ರೀತಿಯ ರಾಜಕಾರಣವನ್ನು ಗಮನಿಸಬಹುದು. ಒಂದು, ಆಂತರಿಕ ಮತ್ತೊಂದು ಬಾಹ್ಯ. ವಿವಿಯ ಒಳಗೆ ರಾಜಕಾರಣಿಗಳನ್ನು ಮೀರಿಸುವ ರಾಜಕೀಯ ಪ್ರಕ್ರಿಯೆಗಳು ಜರುಗುತ್ತವೆ. ಮತ್ತೊಂದು ರಾಜಕೀಯ ಪಕ್ಷಗಳು, ಪ್ರಭುತ್ವಗಳು ತಮ್ಮ ಅಣತಿಯಂತೆ ವಿವಿಯ ಕಾರ್ಯಚಟುವಟಿಕೆಗಳು ಜರುಗುವಂತೆ ಒತ್ತಾಯಿಸುವುದು.

ಈ ಕುರಿತು ಪೃಥ್ವಿದತ್ತ ಚಂದ್ರಶೋಭಿಯವರು ಕಳೆದ ಸಂಚಿಕೆಯಲ್ಲಿ ನಮ್ಮ ಗಮನಕ್ಕೆ ತಂದಿದ್ದಾರೆ. ಅವರು ಚೆನ್ನೈನ ಅಣ್ಣಾ ವಿವಿ ಕುಲಪತಿ ಪ್ರೊ.ಎಂ.ಕೆ.ಸೂರಪ್ಪ ಮತ್ತು ಪಳನಿಸ್ವಾಮಿ ಸರ್ಕಾರದ ನಡುವಿನ ತಕ್ಕಾಟ ವಿಶ್ಲೇಷಿಸುವ ಮುಖೇನ ಪ್ರಾರಂಭಿಸಿದ ಚರ್ಚೆಗೆ ಅತ್ಯಂತ ಮಹತ್ವವಿದ್ದು, ಅದನ್ನು ಮುಂದುವರೆಸುವ ಅಗತ್ಯವಿದೆ. ಏಕೆಂದರೆ ಉನ್ನತ ಶಿಕ್ಷಣ/ವಿವಿಗಳ ಗುಣಮಟ್ಟದ ಬಗ್ಗೆ ಮಾತನಾಡುವಾಗ ರಾಜಕೀಯ ಹಸ್ತಕ್ಷೇಪದ ಕುರಿತು ಗಮನಹರಿಸಬೇಕಿದೆ.

ಸೂರಪ್ಪ ಪ್ರಕರಣ ಇಂದಿಗೂ ಮುಂದುವರೆಯುತ್ತಿದೆ. ಈ ವಿಶ್ವವಿದ್ಯಾಲಯಕ್ಕೆ ಕೇಂದ್ರ ನೀಡಿದ ಉತ್ಕøಷ್ಟ ಸಂಸ್ಥೆಯ ಮಾನ್ಯತೆಯನ್ನು ತಿರಸ್ಕರಿಸುವಂತೆ ಪಳನಿಸ್ವಾಮಿ ತಂಡ ಒತ್ತಾಯಿಸುತ್ತಿದೆ. ಇಲ್ಲದಿದ್ದರೆ ವಿವಿಗೆ ರಾಜ್ಯ ಸರ್ಕಾರವು ಅನುದಾನವನ್ನು ನೀಡುವುದಿಲ್ಲ ಎಂಬ ಬೆದರಿಕೆ. ಅದಕ್ಕೆ ಮಣಿಯದಿದ್ದಾಗ ಭ್ರಷ್ಟಾಚಾರ ಮತ್ತಿತರ ಇಲ್ಲಸಲ್ಲದ ಆರೋಪಗಳನ್ನು ಕುಲಪತಿಗಳ ಮೇಲೆ ಹೊರಿಸಲಾಗುತ್ತಿದೆ. ಇಡೀ ಪ್ರಕರಣದಲ್ಲಿ ಸರ್ಕಾರವೇ ಒಂದರ್ಥದಲ್ಲಿ ಅಸಹಾಯಕವಾಗುತ್ತಿರುವ ಲಕ್ಷಣ ಗೋಚರಿಸುತ್ತಿದೆ.

ಕಾರಣ, 1. ಸೂರಪ್ಪನವರ ಪರವಾಗಿ ಅಧ್ಯಾಪಕ ವರ್ಗ ಮತ್ತು ವಿದ್ಯಾರ್ಥಿ ಬಳಗವು ಬೆಂಬಲಕ್ಕೆ ನಿಂತಿರುವುದು. 2. ಸೂರಪ್ಪನವರ ಬೌದ್ಧಿಕ ಮತ್ತು ಆಡಳಿತ ವೈಖರಿಯ ಇತಿಹಾಸ. 3. ಸರ್ಕಾರವೇ ಅವರ ವಿರುದ್ಧ ಯಾರಾದರೂ ದೂರುನೀಡುವುದಿದ್ದರೆ ನೀಡಿ ಎಂದು ಆಹ್ವಾನ ನೀಡುತ್ತಿರುವ ಪರಿ. ಆದರೂ ಈ ಸಂಸ್ಥೆಗಳು ರಾಜ್ಯ ಸರ್ಕಾರದ ಅಧೀನದಲ್ಲಿಯೇ ಬರುವುದರಿಂದ, ಸರ್ಕಾರವು ತಮ್ಮ ಕಾರ್ಯದಲ್ಲಿ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ. ಒಂದೊಮ್ಮೆ ಹಾಗೆಯೇ ಆದರೆ ಅಣ್ಣಾ ವಿವಿಯ ಹಿತದೃಷ್ಟಿಯಿಂದ ದೊಡ್ಡ ನಷ್ಟವೇ ಆಗಲಿದೆ.

ಇದೊಂದು ತಾಜಾ ಮತ್ತು ಚಾಲ್ತಿಯಲ್ಲಿರುವ ಘಟನೆ. ಇಂತಹ ಘಟನೆಗಳು ಕರ್ನಾಟಕದಲ್ಲಿಯೂ ಜರುಗಿವೆ. ಮಹತ್ವಾಕಾಂಕ್ಷಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು, ಸಂಶೋಧನಾ ಕೇಂದ್ರಗಳನ್ನು ಮುಖ್ಯಮಂತ್ರಿಗಳೇ ‘ಮುತುವರ್ಜಿ’ಯಿಂದ ಮುಚ್ಚಿಸಿರುವ ಉದಾಹರಣೆಗಳಿವೆ. ಹಾಗಾಗಿ ಇಲ್ಲಿ ವಿವೇಚಿಸಬೇಕಿರುವುದು ಜ್ಞಾನಕ್ಕೂ ಅಧಿಕಾರಕ್ಕೂ ಇರುವ ಸಂಬಂಧದ ಸ್ವರೂಪದ ಕುರಿತು. ರಾಜಕೀಯ ವ್ಯಕ್ತಿಗಳಿಗೆ, ಪಕ್ಷಗಳಿಗೆ ಮತ್ತು ಅವುಗಳ ಐಡಿಯಾಲಜಿಗಳಿಗೆ, ಪ್ರಭುತ್ವಗಳಿಗೆ ನಿಷ್ಠೆ ತೋರಿಸುವ ಅಧ್ಯಯನ, ಸಂಶೋಧನೆ ಮತ್ತು ಆಡಳಿತ ತೀರ್ಮಾನಗಳು ಜರುಗಬೇಕೆಂದರೆ ಹೇಗೆ? ಜ್ಞಾನವು ಅಧಿಕಾರದ ಅಡಿಯಾಳಾಗುವುದು ಸರಿಯೇ? ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ.

ಪ್ರಾಚೀನ ಗ್ರೀಕ್ ಮತ್ತು ರೋಮನ್ ಇತಿಹಾಸದಲ್ಲಿ ಸ್ವತಂತ್ರ ಆಲೋಚನೆಗಳಿಗಿದ್ದ ಅವಕಾಶಗಳು, ಮಧ್ಯಕಾಲೀನ ಐರೋಪ್ಯ ಇತಿಹಾಸದ ಸಂದರ್ಭದಲ್ಲಿ ಮೊಟಕಾಗುತ್ತಾ ಸಾಗಿದ್ದನ್ನು ಗಮನಿಸಬಹುದು. ಕೋಪರ್ನಿಕಸ್, ಗೆಲಿಲಿಯೋರಂತಹ ಜ್ಞಾನಮಾರ್ಗಿಗಳು ಅನುಭವಿಸಿದ ಸಂಕಟಗಳು ಅಂದಿನ ಅಧಿಕಾರ ಕೇಂದ್ರಗಳು/ಮತಕೇಂದ್ರಗಳು ಜ್ಞಾನಪರಂಪರೆಯ ಮೇಲೆ ಹೊಂದಿದ್ದ ಪ್ರಭಾವ, ನಿಯಂತ್ರಣವನ್ನು ಸೂಚಿಸುತ್ತದೆ. ಕ್ರಮೇಣ ಅವುಗಳ ನೇರಪ್ರಭಾವದಿಂದ ಕಳಚಿಕೊಂಡಂತೆ ಕಂಡುಬಂದರೂ, ಅವುಗಳ ಆಲೋಚನೆಗಳು ಆಧುನಿಕ ಪಾಶ್ಚಾತ್ಯ ಚಿಂತನೆಯಲ್ಲಿ ಅವ್ಯಕ್ತವಾಗಿರುವುದು ಸ್ಪಷ್ಟ.

ಲಿಬರಲ್ ಚಿಂತನೆಯ ಹೆಸರಿನಲ್ಲಿ ಕ್ರಿಶ್ಚಿಯನ್ ಆಲೋಚನೆಗಳು ಪ್ರಪಂಚದಾದ್ಯಂತ ಪಸರಿಸಿದ ಪರಿಯನ್ನು ಹಲವು ಚಿಂತಕರು ಗುರುತಿಸಿದ್ದಾರೆ. ಹಾಗೆಯೇ ಭಾರತದಲ್ಲಿಯೂ ರಾಜನ ಕಾರ್ಯ, ಕರ್ತವ್ಯಗಳ ಕುರಿತು ವಿಮರ್ಶಾತ್ಮಕವಾಗಿ ಮಾತನಾಡುವ ಕೃತಿಗಳ ಜೊತೆಗೆ ಪ್ರಭುವನ್ನು, ಪ್ರಭುತ್ವವನ್ನು ಹೊಗಳಿ ಅಟ್ಟಕ್ಕೇರಿಸುವ ಕೃತಿಗಳು ಸೃಷ್ಟಿಯಾಗಿದ್ದನ್ನು ನೆನಪಿಸಿಕೊಳ್ಳಬಹುದು. ಬೌದ್ಧಿಕತೆ, ವೈಜ್ಞಾನಿಕತೆ ಎಂಬುದು ಹೊಗಳಿಕೆಯ/ಓಲೈಕೆಯ ಸಾಧನವಲ್ಲ. ಬದಲಾಗಿ ನಮ್ಮ ಈಗಿನ ನಂಬಿಕೆಗಳು/ ತಿಳಿವಳಿಕೆಗಳು ಪುನರ್‍ವಿಮರ್ಶೆಗೆ ಒಳಗಾಗುವ ಮತ್ತು ಹೊಸ ಆಲೋಚನೆಗಳು, ಆವಿಷ್ಕಾರಗಳು ಹುಟ್ಟಿಕೊಳ್ಳುವ ಪ್ರಕ್ರಿಯೆ. ಅದನ್ನು ರಾಜಕೀಯ ಉದ್ದೇಶಕ್ಕಾಗಿ, ರಿಲಿಜನ್ನಿನ ನಂಬಿಕೆಗಳ ಕಾರಣಕ್ಕಾಗಿ ಅಥವಾ ವೈಯಕ್ತಿಕ ಅಸ್ತಿತ್ವದ/ಪ್ರತಿಷ್ಠೆಯ ಕಾರಣಕ್ಕಾಗಿ ವಿರೋಧಿಸುವ, ಹತ್ತಿಕ್ಕುವ ಪ್ರಯತ್ನಗಳಾದರೆ ಪ್ರಪಂಚದ ಜ್ಞಾನ ಪರಂಪರೆಯು ವಿಸ್ತಾರಗೊಳ್ಳುವ ಬದಲು ಸಂಕುಚಿತಗೊಳ್ಳುತ್ತಾ ಸಾಗುತ್ತದೆ.

ಎನ್‍ಲೈಟನ್ಮೆಂಟ್ ಕಾಲಘಟ್ಟದ ನಂತರ ಸ್ವತಂತ್ರ ಚಿಂತನೆಗಳಿಗೆ ಒತ್ತುನೀಡಬೇಕೆಂಬ ಆಲೋಚನೆಗಳು ಹುಟ್ಟಿಕೊಂಡವು. ಸರ್ಕಾರಗಳು ಅಥವಾ ಯಾವುದೇ ಸಂಸ್ಥೆಗಳಾಗಲೀ ವ್ಯಕ್ತಿಯ ಮೇಲೆ ಹಾಗೂ ಆತನ ಆವಿಷ್ಕಾರಗಳ ಮೇಲೆ ಹಸ್ತಕ್ಷೇಪವನ್ನು ಮಾಡಬಾರದು ಎಂಬ ನಿಲುವು ಪ್ರಬಲವಾಯಿತು. ಜೊತೆಗೆ ವಿಜ್ಞಾನದ ಬೆಳವಣಿಗೆಯು ಸಮಾಜ ಮತ್ತು ನಿಸರ್ಗದ ಕುರಿತು ವಸ್ತುನಿಷ್ಠ ವಿವರಣೆಯನ್ನು ಸೃಷ್ಟಿಸುವ ಬೌದ್ಧಿಕತೆಯನ್ನು/ವಿಧಾನಗಳನ್ನು ಪರಿಚಯಿಸಿತು. ಆದರೆ ಪ್ರಜಾಪ್ರಭುತ್ವ ಮತ್ತು ಸಮಾಜವಾದಿ ಚಿಂತನೆಗಳು ಮುಖಾಮುಖಿಯಾದಾಗ ಅಥವಾ ಸಂಘರ್ಷಕ್ಕಿಳಿದಾಗ, ಅಮೆರಿಕಾ ಮತ್ತಿತರ ಪ್ರಮುಖ ರಾಷ್ಟ್ರಗಳ ಪ್ರಭುತ್ವಗಳೇ ಹಣಕಾಸು ನೆರವನ್ನು ಒದಗಿಸಿ, ಪ್ರಜಾಪ್ರಭುತ್ವವನ್ನು ಸಮರ್ಥಿಸುವ, ಸಮಾಜವಾದಿ ಆಲೋಚನೆಗಳನ್ನು ಟೀಕಿಸುವ ಅಧ್ಯಯನಗಳನ್ನು ಪ್ರೋತ್ಸಾಹಿಸಿದ ಉದಾಹರಣೆಗಳಿವೆ.

ಹಾಗೆಯೇ ರಾಜಕೀಯ ಐಡಿಯಾಲಜಿಗಳನ್ನು ಸಮರ್ಥಿಸುವ, ಪೋಷಿಸುವ ನಿಟ್ಟಿನ ಬೌದ್ಧಿಕತೆಯನ್ನು ರೂಪಿಸುವ ಯತ್ನಗಳನ್ನು ನಡೆಸಿವೆ ಎನ್ನಲಾಗುತ್ತದೆ. ಹಾಗೆಯೇ ಕಾಂಗ್ರೆಸ್ ಸಂದರ್ಭದಲ್ಲಿ ಎಡಪಂಥೀಯ ಚಿಂತನೆಗಳನ್ನು ಪೋಷಿಸುವ, ಪಠ್ಯಗಳಲ್ಲಿ ಸೇರಿಸುವ ಪ್ರಯತ್ನಗಳು; ಬಿ.ಜೆ.ಪಿ ಸಂದರ್ಭದಲ್ಲಿ ಬಲಪಂಥೀಯ ಆಲೋಚನೆಗಳನ್ನು ಪಸರಿಸುವ ನಿಟ್ಟಿನ ಸಂಶೋಧನೆಗಳಾಗುವುದು; ಎ.ಐ.ಎ.ಡಿ.ಎಂ.ಕೆ., ಡಿ.ಎಂ.ಕೆ. ಪಕ್ಷಗಳು ಅಧಿಕಾರದಲ್ಲಿರುವ ಕಡೆ ದ್ರಾವಿಡರನ್ನು ಓಲೈಸುವ, ಇತರರನ್ನು ದ್ವೇಷಿಸುವ ಆಲೋಚನೆಗಳನ್ನು ಪ್ರೋತ್ಸಾಹಿಸುವುದು ಅಪಾಯಕಾರಿ. ಹೀಗೆ ರಾಜಕಾರಣವನ್ನು ಓಲೈಸುವ/ಟೀಕಿಸುವ ಬೌದ್ಧಿಕತೆಗೆ ಭಾರತವೂ ಸಾಕ್ಷಿಯಾಗಿದೆ. ಹಾಗಾಗಿಯೇ, ಬೌದ್ಧಿಕ ಚಿಂತನೆಗಳನ್ನು ಒಂದೋ ಎಡವೆಂದೂ ಇಲ್ಲವೇ ಬಲವೆಂಬ ವರ್ಗೀಕರಣದೊಳಗೆ ಸೇರಿಸಲು ಉತ್ಸುಕರಾಗಿರುತ್ತಾರೆ. ರಾಜಕೀಯ/ಅಧಿಕಾರದ ಜೊತೆ ನಂಟಿಲ್ಲದ ವಸ್ತುನಿಷ್ಠ ಆಲೋಚನೆಗಳಿವೆ ಎಂಬುದೇ ಒಂದು ಮಿಥ್ ಎಂಬಂತಾಗಿದೆ. ಆದರೆ ವಿಶ್ವಮಟ್ಟದಲ್ಲಿ ಒಂದಷ್ಟು ಚಿಂತನಾ ಪರಂಪರೆಗಳು ಮತ್ತು ತತ್ವಶಾಸ್ತ್ರೀಯ ಆಲೋಚನೆಗಳು ಸ್ವತಂತ್ರ ಬೌದ್ಧಿಕತೆಯ ಪರವಾಗಿ ವಾದಿಸುತ್ತಲೇ ಬಂದಿವೆ. ಅಲ್ಲದೇ ಅದು ಸಾಧ್ಯ ಎಂದೂ ನಂಬಿಕೊಂಡಿವೆ.

ಡಾ.ಶೋಭಿಯವರು ಹೇಳಿದಂತೆ, ಲಿಬರಲ್ ಆಟ್ರ್ಸ್ ಶಿಕ್ಷಣದ ಕುರಿತು ಮಾತನಾಡುವ ಈ ಸಮಯದಲ್ಲಿ ಬೌದ್ಧಿಕ ಸಂಸ್ಥೆಗಳ ಲಿಬರ್ಟಿಯನ್ನೇ ಕಿತ್ತುಕೊಳ್ಳುವ ಪ್ರಯತ್ನಗಳು ಜರುಗುತ್ತಿರುವುದು ವಿಪರ್ಯಾಸ. ಕುಲಪತಿಗಳನ್ನು ಭ್ರಷ್ಟರು ಎನ್ನುವ ಮೊದಲು ಅವರ ನೇಮಕಾತಿಯಲ್ಲಿನ ಸರ್ಕಾರದ ಪ್ರಾಮಾಣಿಕತೆಯನ್ನು ಪರಾಮರ್ಶಿಸುವುದು ಮುಖ್ಯ ಎನ್ನುವ ಅಭಿಪ್ರಾಯಗಳಿವೆ. ವಿಶ್ವವಿದ್ಯಾಲಯಗಳ ಬಗೆಗೆ ರಾಜಕಾರಣಿಗಳಿಗೆ, ಸರ್ಕಾರಕ್ಕೆ ಆಗ ಇಲ್ಲದ ‘ಕಾಳಜಿ’ಯು ಆನಂತರ ಅವರ ರಾಜಕೀಯ ಅಥವಾ ಪ್ರತಿಷ್ಠೆಯ ನಿಲುವುಗಳಿಗೆ ಸ್ಪಂದಿಸಲಿಲ್ಲವೆಂದಾಕ್ಷಣ ಹುಟ್ಟಿಕೊಳ್ಳಲು ಕಾರಣವೇನು? ಎಲ್ಲಾ ಕ್ಷೇತ್ರಗಳಲ್ಲಿಯೂ ರಾಜಕೀಯ ಹಸ್ತಕ್ಷೇಪ ದಿನೇ ದಿನೇ ಹೆಚ್ಚುತ್ತಿರುವುದನ್ನು ಕಾಣುತ್ತೇವೆ. ಆದರೆ ಅಪಾಯಕಾರಿ ಎನಿಸುವಷ್ಟು ಹಸ್ತಕ್ಷೇಪಗಳು ಶಿಕ್ಷಣ ಕ್ಷೇತ್ರದ ಮೇಲೆ ನಡೆಯುತ್ತಿವೆ. ಅಪಾಯಕಾರಿ ಏಕೆಂದರೆ, ಸ್ವತಂತ್ರಆಲೋಚನೆಗಳನ್ನು, ಸಂಶೋಧನೆಗಳನ್ನು ಮೊಟಕುಗೊಳಿಸುವ ಪ್ರಯತ್ನಗಳು ಶಿಕ್ಷಣದ ನಿಜವಾದ ಆಶಯವನ್ನೇ ಕೊಂದುಬಿಡುತ್ತವೆ. ರಾಜಕೀಯ ಹಸ್ತಕ್ಷೇಪದಿಂದಾಗಿ, ವಿವಿಗಳು ತಮ್ಮ ಸ್ವಾಯತ್ತತೆಗಳನ್ನೆಲ್ಲಾ ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ.

  1. ವಿವಿಯ ಅಧ್ಯಾಪಕರನ್ನು ಸರ್ಕಾರವೇ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ನೇಮಕಾತಿ ಮಾಡಿಕೊಳ್ಳುವುದರ ಕಡೆಗೆ ಚಿಂತಿಸುತ್ತಿದೆ. ನೇಮಕ, ಸಂಬಳ, ಭತ್ಯೆ, ಆಡಳಿತಾಧಿಕಾರಿಗಳ ನೇಮಕ, ಪಠ್ಯಕ್ರಮದಲ್ಲಿ ಹಸ್ತಕ್ಷೇಪ ಹೀಗೆ ಒಂದೊಂದೆ ಅಧಿಕಾರಗಳು ಮೊಟಕುಗೊಳ್ಳುತ್ತಿವೆ. ಸ್ವಾಯತ್ತ ಅಧಿಕಾರಗಳನ್ನು ಕಿತ್ತುಕೊಂಡು ಎಲ್ಲಾ ವಿಷಯಗಳಲ್ಲಿಯೂ ರಾಜಕೀಯ ಹಸ್ತಕ್ಷೇಪವಾದರೆ, ಬೆನ್ನುಮೂಳೆ ಮುರಿದ ಪ್ರಾಣಿಯ ಸ್ಥಿತಿ ವಿವಿಗಳದ್ದಾಗಲಿದೆ.
  2. ವಿವಿಗಳು ಪಿ.ಜಿ ಕೋರ್ಸ್‍ಗಳಿಗೆ ಅವಕಾಶ ನೀಡುತ್ತಿದ್ದವು ಮತ್ತು ಸಂಶೋಧನೆಯು ಸಹ ವಿವಿ ಆವರಣದ ಪ್ರಮುಖ ಕಾರ್ಯಚಟುವಟಿಕೆಯಾಗಿತ್ತು. ಆದರೆ ಇತ್ತೀಚೆಗೆ ಸರ್ಕಾರಿ ಕಾಲೇಜುಗಳಿಗೂ ವಿಸ್ತರಿಸುವ ಮೂಲಕ ಉನ್ನತ ಶಿಕ್ಷಣ ಪಡೆದವರ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಒಂದೆಡೆ, ಉನ್ನತ ಶಿಕ್ಷಣದ ಘನತೆಯನ್ನು ‘ಅಂಕಿ ಸಂಖ್ಯೆ’ಗೆ ಇಳಿಸುವಲ್ಲಿ ಯಶಸ್ವಿಯಾಗುತ್ತಿರುವ ಪ್ರಭುತ್ವಗಳು, ಮತ್ತೊಂದೆಡೆ, ಗುಣಮಟ್ಟದ ಬಗೆಗೆ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿವೆ. ರಾಜಕಾರಣಿಗಳು ತಮ್ಮ ಪ್ರತಿಷ್ಠೆಗೋಸ್ಕರ ತಮ್ಮ ವ್ಯಾಪ್ತಿಯ ಕಾಲೇಜಿಗೆ ಪಿಜಿ ಕೋರ್ಸ್‍ಗಳನ್ನು ಪರಿಚಯಿಸಲು ಒತ್ತಾಯಿಸುತ್ತಾರೆ ಮತ್ತು ಯಶಸ್ವಿಯೂ ಆಗುತ್ತಾರೆ. ಆದರೆ ವಿಶ್ವವಿದ್ಯಾಲಯದ ವಾತಾವರಣಕ್ಕೂ ಕಾಲೇಜುಗಳ ವಾತಾವರಣಕ್ಕೂ ತುಂಬಾ ವ್ಯತ್ಯಾಸವಿರುವುದನ್ನು ಗುರುತಿಸದ ಪ್ರತಿನಿಧಿಗಳು, ಗ್ರಾಮೀಣ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಮಾಡಿಕೊಡುತ್ತಿದ್ದೇವೆ ಎಂಬ ಭ್ರಮೆಯಲ್ಲಿರುತ್ತಾರೆ. ಆದರೆ ವಾಸ್ತವದಲ್ಲಿ ಉನ್ನತ ಶಿಕ್ಷಣದ ಸೂಕ್ತ ಪರಿಸರವಿಲ್ಲದೇ ವಿದ್ಯಾರ್ಥಿಗಳು ಅನ್ಯಾಯಕ್ಕೊಳಗಾಗುತ್ತಿರುತ್ತಾರೆ.

ಈಗ ಸಂಶೋಧನೆಯನ್ನೂ ಕಾಲೇಜುಗಳಿಗೂ ವಿಸ್ತರಿಸಲು ಮುಂದಾಗುತ್ತಿದ್ದು, ಸಂಶೋಧನೆಯ ಸಂಸ್ಕøತಿಗೆ ವಿವಿಗಳೇ ಎಳ್ಳುನೀರು ಬಿಟ್ಟಿರುವ ಈ ಸಮಯದಲ್ಲಿ ಕಾಲೇಜುಗಳಲ್ಲಿ ಅಂತಹ ವಾತಾವರಣವನ್ನು ಊಹಿಸುವುದೂ ಕಷ್ಟವೇ ಸರಿ. ಹಾಗಾಗಿ ವಿವಿಗಳ ಸ್ವಾಯತ್ತತೆ, ಸ್ಥಾನಮಾನ ಮತ್ತು ಘನತೆಗೆ ದಕ್ಕೆಬರುತ್ತಿರುವುದನ್ನು ನೋಡುತ್ತೇವೆ. ಬೌದ್ಧಿಕ ವಾತಾವರಣವನ್ನು ವೃದ್ಧಿಸಲು ಹೊಸ ಶಿಕ್ಷಣ ನೀತಿಯು ಸಹಕಾರಿಯಾದರೆ ಅದೊಂದು ಸಾಹಸವೇ ಸರಿ.

ಈ ಪಟ್ಟಿಯನ್ನು ಇನ್ನೂ ಬೆಳೆಸಬಹುದಾದರೂ, ಸದ್ಯಕ್ಕೆ ಇಷ್ಟು ಸಾಕು. ಕುಲಪತಿಗಳ ನೇಮಕದ ಸಂದರ್ಭದಲ್ಲಿಯೇ ಎಲ್ಲಾ ಒತ್ತಡಗಳನ್ನೂ ಬದಿಗಿಟ್ಟು, ಬೌದ್ಧಿಕವಾಗಿ ದೂರದೃಷ್ಟಿಯಿರುವ ಮತ್ತು ಆಡಳಿತಾತ್ಮಕ ಗುಣಗಳಿರುವವರನ್ನು ಆಯ್ಕೆಮಾಡಿದರೆ ವಿಶ್ವವಿದ್ಯಾಲಯವು ಉತ್ತಮ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ರಾಜಕೀಯ ಕಾರಣ ಮತ್ತು ಉದ್ದೇಶಗಳಿಗಾಗಿ ಅವರ ಮೇಲೆ ವಿನಾಕಾರಣ ಒತ್ತಡ ತರುವ ಪ್ರಯತ್ನಗಳಾಗಬಾರದು. ಹಾಗೂ ವಿವಿಯ ಮೂಲ ಉದ್ದೇಶಗಳ ಕಡೆಗೆ ಸಾಗುವ ಪ್ರಯತ್ನಕ್ಕೆ ಪ್ರಭುತ್ವಗಳು ಪೂರಕವಾದ ವಾತಾವರಣವನ್ನು, ಅವಕಾಶಗಳನ್ನು ಒದಗಿಸಿಕೊಡಬೇಕು. ಇಲ್ಲವಾದಲ್ಲಿ ಕುಲಪತಿಗಳು ವಿವಿಯಲ್ಲಿರುವುದಕ್ಕಿಂತ ವಿಧಾನಸೌಧÀದಲ್ಲಿಯೇ ಹೆಚ್ಚು ಸಮಯ ವಿನಿಯೋಗಿಸುವ ಪರಿಸ್ಥಿತಿ ಬರುತ್ತದೆ.

ಸರ್ಕಾರ, ರಾಜಕೀಯ ಪಕ್ಷಗಳು, ರಾಜಕಾರಣಿಗಳು, ಐಡಿಯಾಲಜಿಗಳ ಕನಿಷ್ಠ ಹಸ್ತಕ್ಷೇಪವಿದ್ದರೆ ಹೇಗೋ ಸಹಿಸಬಹುದು. ಆದರೆ ಕನಿಷ್ಟ ಹಸ್ತಕ್ಷೇಪವೂ ಇಲ್ಲದಂತೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವುದು ಉತ್ತಮ. ವಿವಿಗಳು ಅಧ್ಯಯನ ಮತ್ತು ಸಂಶೋಧನೆಗೆ ತಮ್ಮ ಹೆಚ್ಚಿನ ಸಮಯಾವಕಾಶಗಳನ್ನು ವಿನಿಯೋಗಿಸುವಂತೆ, ಅವುಗಳನ್ನು ಶತಾಯಗತಾಯ ಪ್ರೋತ್ಸಾಹಿಸುವಂತೆ ನೋಡಿಕೊಳ್ಳುವ ಪರಿಸ್ಥಿತಿಯು ನಿರ್ಮಾಣವಾದರೆ ಮಾತ್ರ ನಿಜವಾದ ಬೌದ್ಧಿಕತೆಯು ಸಾಕಾರವಾಗಲಿದೆ. ಬೌದ್ಧಿಕ ಅವಶ್ಯಕತೆಗಳನ್ನು ಈಡೇರಿಸುವುದು ಸುಲಭ, ರಾಜಕೀಯ ಬೇಡಿಕೆಗಳನ್ನು ನಿಭಾಯಿಸುವುದು ಕಷ್ಟ. ವಿವಿಗಳು ಬೌದ್ಧಿಕ ಅವಶ್ಯಕತೆಗಳಿಗೆ ಗಮನಕೊಡಬೇಕು ಮತ್ತು ರಾಜಕೀಯ ಕೈಗೊಂಬೆಯಾಗದಂತಾಗಬೇಕು. ಪ್ರೊ.ಸೂರಪ್ಪ ಪ್ರಕರಣವು ರಾಜಕೀಯ ಕೈಗೊಂಬೆಯಾಗಿಸುವ ತಂತ್ರದಂತೆ ಗೋಚರಿಸುತ್ತದೆ. ಬೌದ್ಧಿಕತೆಯ ದೃಷ್ಟಿಯಲ್ಲಿ ವಿವಿಗೆ ಅನುಕೂಲವಾಗುವಂತೆ ಈ ಪ್ರಕರಣವು ಇತ್ಯರ್ಥವಾಗಲೆಂದು ಹಾರೈಸುತ್ತೇವೆ. ಅಧಿಕಾರ ಸಂಸ್ಥೆಗಳ ಹಸ್ತಕ್ಷೇಪವು ಕಡಿಮೆಯಾದರೆ, ವಿವಿಯ ಆಂತರಿಕ ಮತ್ತು ಬಾಹ್ಯ ರಾಜಕಾರಣಗಳು ನಿಯಂತ್ರಣವಾಗಿ, ಉತ್ಕøಷ್ಟ ಜ್ಞಾನಪರಂಪರೆಗೆ ಅವಕಾಶವಾಗಲಿದೆ. ಇದು ಈ ಕಾಲದ ತುರ್ತು ಕೂಡ.

ಅತ್ತೆ ಒಡೆದ ಮಡಕೆಗೆ ಬೆಲೆ ಇಲ್ಲ!

-ಪ್ರೊ.ಶಿವರಾಮಯ್ಯ, ಬೆಂಗಳೂರು.

‘ಜಗದರಿವು’ ವಿಭಾಗದಲ್ಲಿ ಯಶವಂತ ಟಿ.ಎಸ್. ಅವರ ‘ಅಭಿವ್ಯಕ್ತಿ ಸ್ವಾತಂತ್ರ್ಯದ ಹಿಂದಿನ ಸಂಚುಗಳು’ ಎಂಬ ಲೇಖನ ಓದಿಯಾದ ಮೇಲೆ ಅನ್ನಿಸಿದ್ದು:

ಯಶವಂತ ಅವರ ಲೇಖನಕ್ಕೆ ಆಧಾರ ಫ್ರಾನ್ಸ್‍ನಲ್ಲಿ ನಡೆದ ಒಂದು ಘಟನೆ. ಅದು ಹೀಗಿದೆ: ಇತ್ತೀಚೆಗೆ ಫ್ರಾನ್ಸ್‍ನಲ್ಲಿ ಪ್ರವಾದಿ ಮೊಹಮ್ಮದರ ಬಗೆಗೆ ‘ಚಾರ್ಲಿ ಹೆಬ್ದೋ’ ಎಂಬ ಪತ್ರಿಕೆ ಪ್ರಕಟಿಸಿದ್ದ ವ್ಯಂಗ್ಯ ಚಿತ್ರಗಳನ್ನು ತನ್ನ ವಿದ್ಯಾರ್ಥಿಗಳಿಗೆ ತೋರಿಸಿದ ಶಿಕ್ಷಕನ ತಲೆ ಕಡಿಯಲಾಯಿತು. ಆದರೆ ಫ್ರೆಂಚ್ ಸರ್ಕಾರ ಅತ್ಯಂತ ಬೇಜವಾಬ್ದಾರಿಯಿಂದ ಆ ವ್ಯಂಗ್ಯ ಚಿತ್ರಗಳನ್ನು ಸರ್ಕಾರಿ ಕಟ್ಟಡಗಳ ಮೇಲೆ ಪ್ರದರ್ಶಿಸಿತು. ಈ ಎರಡು ಘಟನೆಗಳು ಒಂದಕ್ಕಿಂತ ಒಂದು ಬರ್ಬರವಾಗಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದವು. ಈ ಕುರಿತು ಯಶವಂತ್ ಅವರು ಹೆಬ್ದೋ ಪತ್ರಿಕೆಯ ವ್ಯಂಗ್ಯ, ಫ್ರಾನ್ಸ್‍ನ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಪ್ರತಿಪಾದನೆ ಮತ್ತು ಪ್ರಸ್ತುತ ಸಂದರ್ಭದಲ್ಲಿ ಈ ರೀತಿಯ ಸ್ವಾತಂತ್ರ್ಯವನ್ನು ವಿಶ್ವಾತ್ಮಕಗೊಳಿಸುವುದು ಒಂದು ರಾಜಕೀಯ ನಡೆ ಎಂಬುದನ್ನು ಸುವಿಸ್ತಾರವಾಗಿ ವಿವೇಚಿಸುತ್ತಾರೆ.

ಮುಂದುವರಿದ ರಾಷ್ಟ್ರಗಳು ಪ್ರಜಾಪ್ರಭುತ್ವದ ಹೆಸರಿನಲ್ಲಿ ಏನು ಮಾಡಿದರೂ ಸರಿಯೇ. ಆದರೆ ಅದೇ ಕೆಲಸವನ್ನು ಬಡರಾಷ್ಟ್ರಗಳು ಮಾಡಿದ್ದಾದರೆ ಅವಕ್ಕೆ ಉಳಿಗಾಲವಿಲ್ಲ. ಇದು ‘ಅತ್ತೆ ಒಡೆದ ಮಡಕೆಗೆ ಬೆಲೆ ಇಲ್ಲ, ಸೊಸೆ ಒಡೆದರೆ ತಾನೆ ಬೆಲೆ’ ಎಂಬ ಗಾದೆ ಮಾತಿಗೆ ಸಮನಾಗುತ್ತದೆ. ಆದರೆ ಇದು ಅನ್ಯಾಯ.

ಇದಕ್ಕೆ ಸರಿಮಿಗಿಲಾಗಿ ಈಗ್ಗೆ 18 ವರ್ಷಗಳ ಹಿಂದೆ ಅಮೆರಿಕದ ಮ್ಯಾಕ್ಸಿಮ್ ಎಂಬ ಪತ್ರಿಕೆಯು ನಮ್ಮ ರಾಷ್ಟ್ರಪಿತ ಗಾಂಧೀಜಿಯ ಬಗ್ಗೆ ತೋರಿದ ಅಸಹನೆ, ವ್ಯಂಗ್ಯ ನೆನಪಿಗೆ ಬರುತ್ತಿದೆ. ಆಗ ಅಮೆರಿಕದ ಅಧ್ಯಕ್ಷ ಜಾರ್ಜ್‍ಬುಷ್. ಪಿಟಿಐ ವರದಿ ಪ್ರಕಾರ, ಜನವರಿ 30, 2003 ರ ಗಾಂಧೀ ಪುಣ್ಯತಿಥಿ ದಿನದಂದು ಆ ಪತ್ರಿಕೆ ‘ಹಿಂಸಾಚಾರದಿಂದ ಬಲವೃದ್ಧಿ’ ಎಂಬ ಅಗ್ರ ಲೇಖನವೊಂದನ್ನು ಬರೆದು, ಮಹಾತ್ಮಾಗಾಂಧಿ ಮೇಲೆ ಒಬ್ಬ ದಾಂಡಿಗ ಹಲ್ಲೆ ನಡೆಸುವ ಸರಣಿ ಚಿತ್ರಗಳನ್ನು ಪ್ರಕಟಿಸಿ ಅವಮಾನಿಸಿತು. ಅದೂ ಶ್ವೇತಭವನ ನೆರಳಲ್ಲಿಯೇ. ಅದೇ ಸೌಧದ ಆವರಣದಲ್ಲಿ ಗಾಂಧಿ ಪ್ರತಿಮೆ ಕೂಡ ಇದೆ. ಇದೆಂಥ ಕಠೋರ ವ್ಯಂಗ್ಯ? ಇದಕ್ಕೆ ಅಮೆರಿಕ ಸರ್ಕಾರ ಏನೂ ಕ್ರಮ ತೆಗೆದು ಕೊಳ್ಳಲಿಲ್ಲ. ಮತ್ತು ಭಾರತವೂ ಸಹ ಪ್ರತಿರೋಧ ವ್ಯಕ್ತಪಡಿಸಲಿಲ್ಲ. ಆದರೆ ಇದೆಲ್ಲದರ ಹಿಂದಿರುವ ‘ಹಿಡನ್ ಅಜೆಂಡಾ’ ಏನು ಎಂಬುದು ಲೋಕವಿದಿತ.

‘ಹಿಂಸಾಚಾರದಿಂದ ಬಲವೃದ್ಧಿ’ (ಇmಠಿoತಿeಡಿeಜ bಥಿ ಗಿioಟeಟಿಛಿe) ಎಂಬ ಈ ಲೇಖನ ಕೇವಲ ಸಾಂಕೇತಿಕ ಮಾತ್ರವಾಗಿತ್ತು. ಇಷ್ಟಕ್ಕೂ ಇದರ ಹಿನ್ನೆಲೆ ಏನು? ಯಾಕಾಗಿ ಇಂಥ ಲೇಖನಗಳು, ವ್ಯಂಗ್ಯ ಚಿತ್ರಗಳು, ಹುಟ್ಟಿಕೊಳ್ಳುತ್ತವೆ? ಇವುಗಳನ್ನು ಹೇಗೆ ಗ್ರಹಿಸಬೇಕು? ಹೇಗೆ ಪ್ರತಿಕ್ರಿಯಿಸಬೇಕು? ಇಂಥ ದುರಾಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಇಲ್ಲವೆ? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸುವುದು ಸಹಜ. ಅವುಗಳನ್ನು ಕೆದಕಿ ನೋಡಿದರೆ ಪ್ರಸ್ತುತ ಯಶವಂತ ಅವರು ವಿವೇಚಿಸಿರುವಂತೆ ಫ್ರಾನ್ಸಿನ ಚಾರ್ಲಿ ಹೆಬ್ದೋ ಪತ್ರಿಕೆಯ ವ್ಯಂಗ್ಯ, ಫ್ರಾನ್ಸಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಪ್ರತಿಪಾದನೆ ಇವು ಏನನ್ನೋ ಸಾರಿ ಹೇಳುತ್ತಿರುವುವೋ ಇದೂ ಸಹ ಇದೇ ಸಂದೇಶ; ಅದೇ ಧರ್ಮ ರಾಜಕಾರಣ; ಅದೇ ಹಿಂಸಾಕಾಂಡದ ಪುನರಾವರ್ತನೆ ಆಗಿದೆ.

ಅಮೆರಿಕದ ವಿಚಾರಕ್ಕೆ ಬಂದರೆ, ವಿಶ್ವ ಯುದ್ಧಗಳು ಜರುಗಿದ ಮೇಲೆ ಆ ದೇಶ ವಿಶ್ವ ಸಂಸ್ಥೆಯಲ್ಲಿ ‘ವೀಟೋ’ ಚಲಾಯಿಸುವ ಮೂಲಕ ಜಗತ್ತಿನ ನಾಗರಿಕ ರಾಷ್ಟ್ರಗಳನ್ನು ತನ್ನ ಕೈಗೊಂಬೆಗಳನ್ನಾಗಿ ಮಾಡಿಕೊಳ್ಳುತ್ತಿರುವ ವಿಚಾರ ಎಲ್ಲರಿಗೂ ತಿಳಿದದ್ದೇ. ಅಲ್ಲದೆ ಶಸ್ತ್ರಾಸ್ತ್ರ ಉದ್ಯಮದಿಂದಲೇ ಅಭಿವೃದ್ಧಿ ಸಾಧಿಸುತ್ತಿರುವ ಅಮೆರಿಕವು ಅವುಗಳ ಮಾರಾಟಕ್ಕಾಗಿ ಅನ್ಯ ರಾಷ್ಟ್ರಗಳ ನಡುವೆ ಅಂತರಂಗದಲ್ಲಿ ಯುದ್ಧವನ್ನೇ ಬಯಸಿ, ಬಹಿರಂಗದಲ್ಲಿ ಮಾತ್ರ ಶಾಂತಿಯ ಮಾತುಕತೆಗೆ ಪ್ರೋತ್ಸಾಹಿಸುವ ನಾಟಕ ಆಡುತ್ತಿದೆ. ವಿಶ್ವಬ್ಯಾಂಕ್ ಹಾಗೂ ವಿಶ್ವ ನಿಧಿಯಲ್ಲಿ ಲಯನ್ ಷೇರ್ ಹೊಂದಿರುವ ಅಮೆರಿಕದ ಭಯೋತ್ಪಾದನೆಗೆ ಉಳಿದ ದೇಶಗಳು ‘ದೊಡ್ಡವರ ಸಹವಾಸ ಗೋಣಿ ಚೀಲ ಕೊಡವಿ ಹಾಸ’ ಎಂಬಂತೆ ಗಪ್‍ಚುಪ್.

ಈಗ್ಗೆ ಎರಡು ದಶಕದ ಹಿಂದೆ ಅಮೆರಿಕ ತೈಲ ಸಾಮ್ರಾಜ್ಯದ ಸ್ವಾಮ್ಯತೆಗಾಗಿ ಅಧ್ಯಕ್ಷ ಸದ್ದಾಂ ಹುಸೇನನ ಇರಾಕಿನ ಮೇಲೆ ಯುದ್ಧ ಸಾರಿ, ಅದರ ಮೇಲೆ ಸ್ಯಾಂಕ್ಷನ್ ಹೇರಿದ್ದಲ್ಲದೆ, ಆಮೇಲೆ ಅದು ಅಣ್ವಸ್ತ್ರಗಳನ್ನು ಹುದುಗಿಸಿಟ್ಟುಕೊಂಡಿದೆ ಎಂದು ವೃಥಾ ಆಕ್ರಮಣ ಮಾಡಿ, ಚುನಾಯಿತ ಅಧ್ಯಕ್ಷನನ್ನು ಸೆರೆ ಹಿಡಿದು ನೆಪಕ್ಕೆ ಮಾರ್ಷಲ್ ಕೋರ್ಟಿನಲ್ಲಿ ವಿಚಾರಣೆ ನಡೆಸಿ, ಆ ತೀರ್ಪಿನಂತೆ ಹಾಡುಹಗಲೇ ಅವನ ಕೊಂದು ಹಾಕಿತಲ್ಲಾ! ಅದಕ್ಕೆ ಸಾಥ್ ನೀಡಿದ್ದು ಇದರ ತಮ್ಮನಂತಿರುವ ಬ್ರಿಟನ್. ಆದರೆ ಅಲ್ಲಿ ಅಣ್ವಸ್ತ್ರಗಳೇ ಇರಲಿಲ್ಲ. ಬ್ರಹ್ಮಾಂಡವನ್ನು ಕ್ಷಣಾರ್ಧದಲ್ಲಿ ಸುಟ್ಟು ಬಿಟ್ಟಿಡುವಷ್ಟು ಅಣ್ವಸ್ತ್ರಗಳನ್ನು ಪೆಂಟಗಾನ್ ನೆಲಮಾಳಿಗೆಯಲ್ಲಿ ತುಂಬಿಟ್ಟುಕೊಂಡಿರುವ ಅಮೆರಿಕಾಕ್ಕೆ ಇನ್ನೊಂದು ರಾಷ್ಟ್ರ ಅಣ್ವಸ್ತ್ರವನ್ನು ಹೊಂದಿದೆ ಅಥವಾ ತಯಾರಿಸುತ್ತಿದೆ ಎಂದು ದೂರುವ ಮತ್ತು ಅದರ ವಿರುದ್ಧ ಕ್ರಮ ಕೈಗೊಳ್ಳುವ ಹಾಗೂ ಪ್ರಶ್ನಿಸುವ ನೈತಿಕ ಹಕ್ಕು ಹೇಗೆ ಬರುತ್ತದೆ? ಸದ್ಯ ಜಾಗತೀಕರಣವೆಂದರೆ ಇಂಥ ಅನೈತಿಕ ಮೌಲ್ಯವನ್ನು ಮೌಲ್ಯವೆಂದು ಒಪ್ಪುವ ವಿಷಮ ಕಾಲ ಬಂದಿದೆ.

ಹೀಗಾಗಿ ಅಮೆರಿಕಾದ ಮ್ಯಾಕ್ಸಿಮ್ ಪತ್ರಿಕೆ ಅಥವಾ ಫ್ರಾನ್ಸಿನ ಚಾರ್ಲಿ ಹೆಬ್ದೊ ಅಂಥ ಪತ್ರಿಕೆಗಳು ಆಯಾ ದೇಶಗಳ ‘ಹಿಡನ್ ಅಜೆಂಡಾ’ ವನ್ನೇ ನಿರ್ಭೀತಿಯಿಂದ ಬಹಿರಂಗಗೊಳಿಸುತ್ತಿವೆ ಅಷ್ಟೆ. ಆದ್ದರಿಂದಲೇ ಆ ಪತ್ರಿಕೆಗಳಿಗೆ ಮಹಾತ್ಮ ಗಾಂಧೀಜಿಯ ಬಗ್ಗೆಯಾಗಲಿ, ಪ್ರವಾದಿ ಮೊಹಮ್ಮದರ ಬಗ್ಗೆಯಾಗಲಿ ಕೀಳಾಗಿ ಬರೆದು ಪ್ರಕಟಿಸುವ ಸೊಕ್ಕು ಬಂದುಬಿಡುತ್ತದೆ. ತನ್ಮೂಲಕ ಅಹಿಂಸಾ ಪ್ರಸ್ತಾವವನ್ನು ಮಂಡಿಸುವ ಜಾಗತಿಕ ದೇಶಗಳಿಗೆ ಕೊಡುವ ಈ ಹಿಂಸಾರಭಸಮತಿಗಳ ಎಚ್ಚರಿಕೆ ಕೂಡ ಎನ್ನಬಹುದಾಗಿದೆ. ಇದು ಜಗತ್ತಿನ ಶಾಂತಿಪ್ರಿಯ ದೇಶಗಳಿಗೆ ಮಾಡುತ್ತಿರುವ ಪರೋಕ್ಷ ಅವಮಾನವೇ ಸರಿ.

ಇಷ್ಟಕ್ಕೂ ಅಮೆರಿಕ ಅಥವಾ ಯೂರೋಪಿನ ರಾಷ್ಟ್ರಗಳು ಮಾಡುತ್ತಿರುವುದೇನು? ಈ ದೇಶಗಳಲ್ಲಿ ಮುಂದೆ ಇನ್ನೂ ಒಂದು ಶತಮಾನಕ್ಕೆ ಸಾಕಾಗುವಷ್ಟು ಕಲ್ಲಿದ್ದಲು, ತೈಲ ಹಾಗೂ ಖನಿಜ ನಿಕ್ಷೇಪಗಳನ್ನು ಕಾಯ್ದಿರಿಸಿಕೊಂಡು, ಅಣ್ವಸ್ತ್ರಗಳನ್ನು ತಯಾರಿಸಿಕೊಂಡು, ಅಪರಿಮಿತ ಸೈನಿಕ ಶಕ್ತಿಯನ್ನು ರೂಢಿಸಿಕೊಂಡು ಬೀಗುತ್ತಿದ್ದರೂ ಅನ್ಯ ರಾಷ್ಟ್ರಗಳ ಸಂಪನ್ಮೂಲಗಳ ಲೂಟಿಗೆ ಹಾತೊರೆಯುತ್ತಿವೆ. ಅದನ್ನು ಪ್ರತಿರೋಧಿಸಿ ಅಡ್ಡ ನಿಲ್ಲುವ ದೇಶಗಳನ್ನು ಪ್ರಜಾಪ್ರಭುತ್ವ ಸಂಸ್ಥಾಪನೆ, ಶಾಂತಿ ಪರಿಪಾಲನೆ ಮುಂತಾದ ಸೋಗಿನಲ್ಲಿ ಸೈನ್ಯ ನುಗ್ಗಿಸಿ ಮಟ್ಟ ಹಾಕುತ್ತವೆ.

ಹಿಂದೆ ಡಬ್ಲ್ಯೂ ಜಾರ್ಜ್ ಬುಷ್‍ನ ಅಪ್ಪ ಜಾರ್ಜ್ ಬುಷ್ ಮಧ್ಯಪ್ರಾಚ್ಯ ಕೊಲ್ಲಿಯಲ್ಲಿ ತೈಲ ಸ್ವಾಮ್ಯತೆಗೆ ಮಾಡಿದ ಕದನದಿಂದ ಸಮುದ್ರದ ಮೇಲ್ಭಾಗದಲ್ಲಿ ಎಣ್ಣೆ ಹೆಪ್ಪುಗಟ್ಟಿ ಅದರೊಳಗಣ ಜಲಚರ ಪಕ್ಷಿ ಸಂಕುಲಕ್ಕೆ ಪ್ರಾಣಾಂತಿಕ ಹಾನಿ ಉಂಟಾಯಿತು. ಅಲ್ಲಿ ಕವಿದ ಸಿಡಿಮದ್ದಿನ ಹೊಗೆ ಹಿಮಾಲಯದ ಸ್ವಚ್ಛ ಹಿಮಶಿಖರಗಳಿಗೂ ಮುತ್ತಿತು ಎಂದು ಅಮೆರಿಕನ್ ವಿಜ್ಞಾನಿಗಳೇ ಹೇಳಿದರು. ಇದೆಲ್ಲವನ್ನೂ ಸಮೀಕ್ಷಿಸಿದ ಅಮೆರಿಕದ ಸಾಮಾಜಿಕ ವಿಮರ್ಶಕ ಭಾಷಾವಿಜ್ಞಾನಿ ಪ್ರೊ. ನೋಮ್ ಚಾಮ್‍ಸ್ಕಿ ಎಂಬುವವರು ಅಮೆರಿಕವೇ ಮೊದಲ ಜಾಗತಿಕ ಭಯೋತ್ಪಾದಕ ರಾಷ್ಟ್ರ ಎಂದು ಕರೆದರು.

ಇನ್ನು ಎರಡನೇ ವಿಶ್ವಯುದ್ಧದ ತರುವಾಯ ಎಡಪಂಥೀಯ ವಿಯಟ್ನಾಂನ್ನು ತನ್ನ ಅಧೀನಕ್ಕೆ ಒಳಪಡಿಸಿಕೊಳ್ಳಲು ಸುಮಾರು 25 ವರ್ಷಗಳ ಕಾಲ ಹೋರಾಡಿತು. ವಿಯಟ್ನಾಮಿನ ಸಾವು ನೋವು ಹಾಗಿರಲಿ, ಅಮೆರಿಕದ ದೇಶವೇ ತನ್ನ ಸಾವಿರಾರು ಯೋಧರನ್ನು ಕೊಲೆಕೊಟ್ಟಿತು, ಕಡೆಗೆ ಸ್ವದೇಶದ ನಾಗರಿಕರ ಅಹಿಂಸಾತ್ಮಕ ಪ್ರತಿರೋಧಕ್ಕೆ ಮಣಿದು ಅಲ್ಲಿಂದ ಕಾಲ್ತೆಗೆದದ್ದು ಇತ್ಯಾದಿ ಬೇರೊಂದೇ ದುರಂತ ಅಧ್ಯಾಯ.

ನಾವೀಗ ಪುನಃ ಭಾರತದತ್ತ ನೋಡಿದರೆ, 2003ರಲ್ಲಿ ವಾಷಿಂಗ್‍ಟನ್ನಿನ ಮ್ಯಾಕ್ಸಮ್ ಪತ್ರಿಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ, ‘ಹಿಂಸಾಚಾರದಿಂದಲೇ ಬಲವೃದ್ಧಿ’ ಎಂದು ಗಾಂಧೀಜಿಗೆ ಮಾಡಿದ ಅವಮಾನದ ವ್ಯಂಗ್ಯ ಚಿತ್ರಗಳನ್ನು ಪ್ರಕಟಿಸಿದಾಗ ಅಲ್ಲಿಯೇ ಇದ್ದ ನಮ್ಮ ವಿದೇಶಾಂಗ ಕಚೆÉೀರಿ ಅಧಿಕಾರಿಗಳು ಏನು ಮಾಡುತ್ತಿದ್ದರು? ಯಾಕೆ ಪ್ರತಿರೋಧವನ್ನು ದಾಖಲಿಸಲಿಲ್ಲ? ಇತ್ತ ಭಾರತವಾದರೂ ಯಾಕೆ ತಟಸ್ಥವಾಗಿತ್ತು? ಎಂಬ ಪ್ರಶ್ನೆಗಳು ಮೂಡುವುದು ಸಹಜ. ಆದರೆ ಈ ದುಃಸ್ಥಿತಿಯ ಆಳಕ್ಕೆ ಇಣಿಕಿ ನೋಡಿದರೆ ಉತ್ತರ ಸಿಕ್ಕುವುದೇನು ಕಷ್ಟವಲ್ಲ. ಆಗಲೂ ಕೇಂದ್ರದಲ್ಲಿ ಅಧಿಕಾರದಲ್ಲಿದ್ದುದು ಸಂಘ ಪರಿವಾರ ನಾಯಕತ್ವದ ವಾಜಪೇಯಿ ಅವರ ಸರಕಾರ. ಗಾಂಧೀಜಿಯ ಅಹಿಂಸಾ ತತ್ವ ಸಿದ್ಧಾಂತದಲ್ಲಿ ನಂಬಿಕೆ ಇಲ್ಲದ ಹಿಂದುತ್ವವಾದಿಗಳ ಆಡಳಿತ.

ಹೀಗಿರುತ್ತ, ದೂರದ ಅಮೆರಿಕದ ಮಾದರಿ ಪ್ರಜಾಪ್ರಭುತ್ವ ಎಂದು ಬೀಗುವ ರಾಜಧಾನಿಯಲ್ಲಿ ಗಾಂಧೀಜಿಯ ಬಗ್ಗೆ ಮ್ಯಾಕ್ಸಿಮ್ ಪತ್ರಿಕೆಯು ‘ಹಿಂಸಾಚಾರದಿಂದ ಬಲವೃದ್ಧಿ’ ಎಂಬ ಲೇಖನ ಪ್ರಕಟಿಸಿ, ದಾಂಡಿಗನು ಗಾಂಧೀಜಿಯನ್ನು ಒದೆಯುವಂತ ವ್ಯಂಗ್ಯ ಚಿತ್ರಗಳನ್ನು ಬರೆದುದಲ್ಲದೆ ‘ಅಸಹ್ಯ ಗಂಡ, ಹೊಲಸು ತಂದೆ ಹಾಗೂ ಬಡ ಮಾದರಿ’ ಎಂದೆಲ್ಲಾ ಹಿಯ್ಯಾಳಿಸಿದರೆ ಈ ಹಿಂದುತ್ವವಾದಿ ಸರ್ಕಾರಕ್ಕಾಗಲಿ, ಅದನ್ನು ಅಧಿಕಾರಕ್ಕೆ ಕೂರಿಸಿದ ಜನರಿಗಾಗಲಿ ಆಗಬೇಕಾದ್ದೇನು? ಇದೂ ಹಾಗಿರಲಿ. ಇನ್ನು ಅಮೆರಿಕದ ಬಗ್ಗೆ ಹೇಳುವುದಾದರೆ, ಗುಲಗಂಜಿ ತನ್ನ ತಳದ ಕಪ್ಪನ್ನು ಕಾಣದೆ ಉಬ್ಬಿ ಮಾತಾಡಿದಂತೆ ಅದರ ವರ್ತನೆ. ಅಲ್ಲಿನ ಡೌನ್‍ಟೌನ್‍ಗಳಲ್ಲಿರುವ ಅನಾಥ ಮಕ್ಕಳು, ನ್ಯೂಯಾರ್ಕಿನ ಕೊಳೆಗೇರಿಗಳ ದಾರಿದ್ರ್ಯ, ಮುಳ್ಳುತಂತಿ ಶಿಬಿರದ ಹಿಂದಿರುವ ರೆಡ್ ಇಂಡಿಯನ್ ಬುಡಕಟ್ಟುಗಳ ಅರಣ್ಯ ರೋದನ ಇವೆಲ್ಲವನ್ನೂ ಮರೆತು ಅಮೆರಿಕದ ಭೋಗಭಾಗ್ಯವನ್ನೇ ಕೊಂಡಾಡುವ ಜನರಿಗೆ ಹಾಗೂ ಮಾಧ್ಯಮಗಳಿಗೆ ಏನೆನ್ನಬೇಕು?

ಇನ್ನು ಮುಂದಾದರೂ ಮ್ಯಾಕ್ಸಿಮ್ ಹಾಗೂ ಚಾರ್ಲಿ ಹೆಬ್ದೋ ಅಂಥ ಪತ್ರಿಕೆಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಹದ್ದು ಮೀರಿ ವರ್ತಿಸಬಾರದು. ಮತ್ತು ಹಾಗೆ ಅವು ವರ್ತಿಸದಂತೆ ಸಂಬಂಧಪಟ್ಟ ದೇಶಗಳ ವಿದೇಶಾಂಗ ನೀತಿ ಕಣ್ಗಾವಲಿರಬೇಕು. ಇಲ್ಲವಾದರೆ ವಿಶ್ವ ಶಾಂತಿಯನ್ನು ಕದಡುವ ಅನರ್ಥಗಳು ಸಂಭವಿಸಬಹುದು.

ಹದಿನೈದು ವರ್ಷ ಆಳಲಿ

-ವೀರೇಶ ಬ್ಯಾಲಾಳ, ಹೊಸಪೇಟೆ.

ಡಿಸೆಂಬರ್ ಸಂಚಿಕೆಯ ಸಂಪಾದಕೀಯ ಕುರಿತು:

ನೆಪೋಟಿಸಂ (ಸ್ವಜನ ಪಕ್ಷಪಾತದ) ರಾಜಕೀಯ ಕಾಲ ಮುಗಿದು ನಿಜ ಕಾರ್ಯಕರ್ತರ ರಾಜಕೀಯ ಪರ್ವ ಶುರುವಾಗಿದೆ. ಉತ್ತಮ ಆಡಳಿತದಿಂದ ದೇಶದ ಪುರಾತನ ಸಮಸ್ಯೆಗಳು ಸೌಹಾರ್ದಯುತವಾಗಿ ಬಗೆಹರಿಯುತ್ತಿವೆ. ಓಲೈಕೆ ಮತ್ತು ತೋರಿಕೆಯ ಅಭಿವೃದ್ಧಿ ತೊರೆದು ಎಲ್ಲಾ ರಂಗದಲ್ಲೂ ಸರ್ವೋತ್ತಮ ಅಭಿವೃದ್ಧಿಯಿಂದ ದೇಶ ಮುನ್ನಡೆಯತ್ತ ಸಾಗುತ್ತಿದೆ. ಕನಿಷ್ಠ ಇನ್ನೂ ಹದಿನೈದು ವರ್ಷ ಆಳಲು ಸಮಯ ಕೊಟ್ಟು ಹರಸೋಣ. ಅದೇ ಸಮಯದಲ್ಲಿ ಆಡಳಿತ ಪಕ್ಷಕ್ಕಿಂತ ಉತ್ತಮವಾದ ಪ್ರತಿಪಕ್ಷ ಕಟ್ಟಲು ಪರಿಶ್ರಮಿಸಬಹುದು.

ಒಳ್ಳೆಯ ಬರಹ

-ಡಾ.ಇಂದಿರಾ ಹೆಗ್ಗಡೆ, ಬೆಂಗಳೂರು.

ಶಿರೂರು ಹನುಮಂತರೆಡ್ಡಿಯವರ ಬರಹ ಜಗದರಿವು ಅಮೆರಿಕದ ಇಂದಿನ ರಾಜಕೀಯ ಸ್ಥಿತಿಗತಿಗಳನ್ನು ಪರಿಚಯಿಸಿತು. ಒಳ್ಳೆಯ ಬರಹ.

ತಿದ್ದುಪಡಿ

-ಸಂ.

ಡಿಸೆಂಬರ್ ಸಂಚಿಕೆಯ ಪುಸ್ತಕ ಪ್ರಪಂಚಲ್ಲಿ ಪ್ರಕಟವಾದಂತೆ ‘ನಮ್ಮ ಅರಸು’ ಕೃತಿಯ ಲೇಖಕರಾದ ಬಸವರಾಜು ಮೇಗಲಕೇರಿ ಅವರು ವಾರ್ತಾಭಾರತಿ ಪತ್ರಿಕೆಯ ಸುದ್ದಿ ಸಂಪಾದಕರಲ್ಲ; ಅವರು ವಾರ್ತಾಭಾರತಿ ಬೆಂಗಳೂರು ಕಚೇರಿಯ ಸ್ಥಾನಿಕ ಸಂಪಾದಕರು.

Leave a Reply

Your email address will not be published.