ಓದುಗರ ಪ್ರತಕ್ರಿಯೆಗಳು

ಕಾಪಿರೈಟ್ ಪ್ರಶ್ನೆ ಅಲ್ಲ!

-ಎಚ್.ಎಸ್.ದೊರೆಸ್ವಾಮಿ, ಬೆಂಗಳೂರು.

ಬಹುರಾಷ್ಟಿಯ ಕಂಪನಿಗಳನ್ನು ಭಾರತಕ್ಕೆ ಬರಮಾಡಿಕೊಂಡ ದಿನದಿಂದ ನಾನು ಅವುಗಳ ವಿರುದ್ಧ ಮತ್ತು ಸರ್ಕಾರದ ನೀತಿಯ ವಿರುದ್ಧ ಬರೆದಿದ್ದೇನೆ, ಚಳವಳಿಗಳನ್ನು ಮಾಡಿದ್ದೇನೆ. ಗ್ಯಾಟ್ ಒಪ್ಪಂದಕ್ಕೆ ಪಾರ್ಲಿಮೆಂಟ್ ಒಪ್ಪಿಗೆ ಪಡೆಯದೆ ಪಿ.ವಿ.ನರಸಿಂಹರಾಯರು ಸಹಿ ಹಾಕಿ ಬಂದದ್ದನ್ನು ಕುರಿತು ಟೀಕೆ ಮಾಡಿದ್ದೇನೆ. ರೈತರು ಬಿತ್ತನೆ ಬೀಜ ತಯಾರಿಸಬಾರದು; ಬಹುರಾಷ್ಟಿಯ ಕಂಪೆನಿ ಕೊಟ್ಟ ಬೀಜವನ್ನೇ ಬಿತ್ತನೆಗೆ ಬಳಸಬೇಕು, ಬಿತ್ತನೆ ಬೀಜವನ್ನು ರೈತ ಮಾಡಿಕೊಂಡರೆ ಆತನಿಗೆ ಶಿಕ್ಷೆ ವಿಧಿಸಲಾಗುತ್ತದೆ ಎಂಬ ಆದೇಶ ಇತ್ತು. ಈ ಬಿತ್ತನೆ ಬೀಜ ಮಾರಾಟ ಮಾಡುತ್ತಿದ್ದ ಕಾರ್ಗಿಲ್ ಎಂಬ ಬಹುರಾಷ್ಟಿಯ ಕಂಪೆನಿಯ ಕಚೇರಿಯ ಎದುರು ಪ್ರತಿಭಟನೆ ನಡೆಸಿದ್ದೇನೆ. ಅದಕ್ಕೂ ಮೊದಲೇ ಭಾರತಕ್ಕೆ ಬಂದಿದ್ದ ನೆಸಲೆ ಮತ್ತು ಕ್ಯಾಡಬರೀಸ್ ಕಂಪೆನಿಗಳ ಬಗೆಗೂ ಚಳವಳಿಗಳಾದವು. ನೆಸಲೆ ಕಂಪನಿ ತಾನು ತಯಾರಿಸಿದ್ದ ಹಾಲಿನ ಪುಡಿಯನ್ನು ಹಾಲು ಕುಡಿಯುವ ಎಳೆ ಮಕ್ಕಳಿಗೆಂದು ತಯಾರಿಸುತ್ತಿತ್ತು. ಎದೆಹಾಲು ಕೊಡುವುದರಿಂದ ತಾಯಂದಿರ ಅಂಗಸೌಷ್ಠವ ಕೆಟ್ಟು ಹೋಗುತ್ತದೆಂದು ಕಂಪೆನಿ ಪ್ರಚಾರ ಮಾಡುತ್ತಿತ್ತು. ನೆಸಲೆ ಹಾಲಿನಪುಡಿ ಬಳಸಿ ಎಂದು ಸಲಹೆ ನೀಡುತ್ತಿತ್ತು.

ಆಸ್ಪತ್ರೆಯಲ್ಲಿ ಮಕ್ಕಳನ್ನು ಹೆತ್ತ ಹೆಣ್ಣು ಮಕ್ಕಳಿಗೆ ಬಳುವಳಿಯಾಗಿ ಒಂದು ಡಬ್ಬ ಹಾಲಿನಪುಡಿಯನ್ನು ಉಚಿತವಾಗಿ ನೀಡುತ್ತಿತ್ತು. ಕ್ಯಾಡ್‌ಬರಿ ಕಂಪೆನಿಯ ವಿಚಾರವಾಗಿ ಈಗಾಗಲೇ ಸಾಕಷ್ಟು ಪ್ರಸ್ತಾಪವಾಗಿದೆ. ನಾನು ಕಟ್ಟುಕತೆ ಸೃಷ್ಟಿಸುವ ಜಾಯಮಾನದವನಲ್ಲ. ಪತ್ರಿಕೆಗಳು ಮತ್ತು ಬಹುರಾಷ್ಟೀಯ ಕಂಪೆನಿಗಳ ವಿರೋಧವಾಗಿ ಚಳವಳಿ ಮಾಡುತ್ತಿದ್ದ, ಅನೇಕ ಜವಾಬ್ದಾರಿಯುಳ್ಳ ಸಂಘಟನೆಗಳೂ ಆ ಕಾಲದಲ್ಲಿ ಕ್ಯಾಡ್‌ಬರಿ ಸೇರಿದಂತೆ ಅನೇಕ ಕಂಪನಿಗಳ ಹುನ್ನಾರಗಳನ್ನು ಕುರಿತು ದನಿ ಎತ್ತುತ್ತಿದ್ದವು.

ಕ್ಯಾಂಪ್ಕೊ ಕಂಪೆನಿ ಆಗ ಮುಚ್ಚಿ ಹೋಯಿತು ಎಂದು ನಾನು ಹೇಳಿದ್ದೇನೆ. ಆದರೆ ಅದು ಮುಚ್ಚಿ ಹೋಗಲಿಲ್ಲ ನಿಜ. ಆದರೆ ಕ್ಯಾಡ್‌ಬರಿಯ ಅನೀತಿಯುತ ಪೈಪೋಟಿಯಿಂದ ಕ್ಯಾಂಪ್ಕೊ ಕಂಪೆನಿಗೆ ಆತಂಕ ಉಂಟಾಗಿದ್ದು ನಿಜ.

ಸೋದರಿ ಸಹನಾ ಅವರು ನಾನು ರೈತರ ಸಮಸ್ಯೆ ತಿಳಿಯದವನು ಎಂದು ಹೇಳಿದ್ದಾರೆ. ನಾನು ರೈತರ ಮನೆಯಲ್ಲಿ ಹುಟ್ಟಿದವನು. ನನ್ನ ತಾತ ಶಾನುಭೋಗರಾಗಿದ್ದರು. ನಾನು ವಿನೋಬಾರವರ ಭೂದಾನ ಚಳವಳಿಯಲ್ಲೂ ತೊಡಗಿಕೊಂಡು ೨ ವರ್ಷ ಕಾಲ ಕಾಲ್ನಡಿಗೆಯಲ್ಲಿ ಹಳ್ಳಿಗಳಿಗೆ ಹೋಗಿದ್ದೇನೆ. ರೈತರ ಸಮಸ್ಯೆಗಳನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ನಂಜುಂಡಸ್ವಾಮಿಯವರು ರೈತಸಂಘ ಕಟ್ಟಿದಾಗ, ಅವರು ಏರ್ಪಡಿಸುತ್ತಿದ್ದ ರೈತರ ಶಿಬಿರಗಳಲ್ಲಿ ಭಾಷಣಕಾರನಾಗಿ ನನ್ನನ್ನು ಆಹ್ವಾನಿಸುತ್ತಿದ್ದರು. ರೈತರಲ್ಲಿ ಸಂಭಾಷಣೆ ಮಾಡುತ್ತಿದ್ದೆ. ಆದ್ದರಿಂದ ನಾನು ರೈತರ ವಿಷಯ ಬರೆಯುವುದಕ್ಕೆ ಎಲ್ಲ ಅರ್ಹತೆ ಪಡೆದಿದ್ದೇನೆ ಎಂದು ಹೇಳಬಯಸುತ್ತೇನೆ.

ರೈತರ ಸಮಸ್ಯೆ ಕುರಿತು ರೈತರೇ ಬರೆಯಬೇಕೆಂಬ ನಿಯಮವಿಲ್ಲ. ಆರ್ಥಿಕ ತಜ್ಞರು, ರೈತರ ಸಮಸ್ಯೆಗಳ ಬಗ್ಗೆ ತಿಳಿವಳಿಕೆ, ಕಳಕಳಿ ಇರುವವರು ಎಲ್ಲರೂ ರೈತರ ಸಮಸ್ಯೆ ಕುರಿತು ಬರೆಯಬಹುದು. ಇದು ಕಾಪಿರೈಟ್ ಪ್ರಶ್ನೆ ಅಲ್ಲ!

ಪ್ರೊ.ಸಿ.ಡಿ.ಎನ್. ಮಾದರಿ

-ಪ್ರೊ.ಸಿ.ಎನ್.ಶ್ರೀನಾಥ್, ಮೈಸೂರು.

ಈಗಿನ ವಿಶ್ವವಿದ್ಯಾಲಯದ ಅವನತಿಗೆ ನಾನಾ ಕಾರಣಗಳಿವೆ. ಆದರೆ ನಾವು ಶೈಕ್ಷಣಿಕ ಕಾರಣಗಳನ್ನು ಹೇಳುವುದಾದರೆ ಸಂಶೋಧನೆಯಿರಲಿ, ಶಿಕ್ಷಣ ಕೊಠಡಿಗಳಲ್ಲೇ ವಾತಾವರಣ ಕಲುಷಿತವಾಗಿದೆ. ಹಿಂದಿನ ತಲೆಮಾರಿನಲ್ಲಿ ಹಿರಿಯ ವಿದ್ವಾಂಸರು ಇದ್ದರೂ ಸಂಶೋಧನೆಯ ದೃಷ್ಟಿಯಿಂದ ಹೆಚ್ಚು ಗಮನಾರ್ಹವಾಗಿರಲಿಲ್ಲ ಅನ್ನುವ ಮಾತು ಬಂದಿತ್ತು. ಆದರೆ ಕ್ಲಾಸ್ ರೂಮಿನಲ್ಲಿ ಆಗಿನ ಕಾಲದಲ್ಲಿದ್ದ ಲವಲವಿಕೆ, ಉತ್ಸಾಹ, ಗಂಭೀರತೆ ಈಗ ಕಾಣುವುದಿಲ್ಲ.

ಒಂದು ವಿಶ್ವವಿದ್ಯಾಲಯದ ಮುಖ್ಯ ಧ್ಯೇಯ ಗುರು ಶಿಷ್ಯ ಸಂವಾದ, ಚರ್ಚೆ ವಿಷಯದ ಸಮಗ್ರ ಅಧ್ಯಯನ. ಇದು ನಿರಂತರವಾಗಿ ಸಮರ್ಪಕವಾಗಿ ಕ್ರಿಯಾಶೀಲತೆಯಿಂದ ನಡೆಯುತ್ತಿದ್ದರೆ ವಿಶ್ವವಿದ್ಯಾಲಯ ದ ಒಂದು ಮುಖ್ಯ ಉದ್ದೇಶ ಕಾರ್ಯಗತವಾದ ಹಾಗೆಯೇ ಸರಿ. ಬೇಂದ್ರೆ ಕಾವ್ಯವನ್ನು ಹೊಸ ದೃಷ್ಟಿಯಲ್ಲಿ ವಿಶ್ಲೇಷಣೆ ಮಾಡುವುದು, ವಾಹನದಲ್ಲಿ ಕಮ್ಮಿ ಇಂಧನವನ್ನು ಬಳಸುವ ತಾಂತ್ರಿಕ ಉಪಾಯದಷ್ಟೇ ಮುಖ್ಯ. ನಾನು ಸಾಹಿತ್ಯ ಓದುವ ಅಧ್ಯಾಪಕನಾದ್ದರಿಂದ ಈ ಉದಾಹರಣೆಯನ್ನು ಕೊಡಬಲ್ಲೆ.

ಮತ್ತೊಂದು ರೀತಿಯ ಕೊಡುಗೆಯೆಂದರೆ ಪಠ್ಯಕ್ರಮದಲ್ಲಿ ವಸ್ತುವನ್ನು ಪುರ‍್ರಚನೆ ಮಾಡುವುದು. ಉದಾಹರಣೆಗೆ ೬೦ರ ದಶಕದಲ್ಲಿ ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಪ್ರೊ.ಸಿ.ಡಿ.ನರಸಿಂಹಯ್ಯ ನವರ ನೇತೃತ್ವದಲ್ಲಿ ಬೇಕಾದಷ್ಟು ರಚನಾತ್ಮಕ ಬದಲಾವಣೆಗಳಾಯಿತು. ಅಮೆರಿಕನ್ ಸಾಹಿತ್ಯವನ್ನು ಆಗಲೇ ಎಂ.ಎ. ವಿದ್ಯಾರ್ಥಿಗಳಿಗೆ ಪಠ್ಯವಾಗಿಸಿದ್ದರು. ನನಗೆ ತಿಳಿದ ಹಾಗೆ ೧೫ ವರ್ಷಗಳಾದ ಮೇಲೆ ೧೯೭೨ರಲ್ಲಿ ಆರ್ಕ್ಸ್ಫಡ್ ಯೂನಿರ್ವಸಿಟಿಯಲ್ಲಿ ಅದನ್ನು ಶಿಕ್ಷಣಕ್ಕೆ ಸೇರಿಸಿದ್ದರು. ಭಾರತದಲ್ಲಿ ದೇಶಾದ್ಯಂತ ನಾನಾ ಸೆಮಿನಾರ್‌ಗಳನ್ನು ಮಾಡಿ ಲೇಖನಗಳನ್ನು ಬರೆದು ನೂತನವಾದ ಅಮೆರಿಕನ್ ಸಾಹಿತ್ಯವನ್ನು ನಮ್ಮ ಇಂಗ್ಲಿಷ್ ಶಾಖೆಗಳಿಗೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುವುದು.

ಹಾಗೆಯೇ ಕಾಮನ್‌ವೆಲ್ತ್ ಸಾಹಿತ್ಯ ಆಸ್ಟೆಲಿಯ, ಕೆನಡಾ, ವೆಸ್ಟ್ ಇಂಡೀಸ್, ಆಫ್ರಿಕಾ ದೇಶದ ಸಾಹಿತ್ಯವನ್ನು ಪರಿಚಯಿಸಿ ಹೊಸ ಸಂಶೋಧನಾ ವಲಯನ್ನು ಸೃಷ್ಟಿಸಿದ್ದೂ ಅಲ್ಲದೇ ಆ ಸಾಹಿತ್ಯವನ್ನು ನಮ್ಮದೇ ಭಾರತೀಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅಭ್ಯಾಸ ಮಾಡಿ ಹೊಸ ಮಾರ್ಗವನ್ನು ಸೃಷ್ಟಿಸಬೇಕೆಂದು ಪ್ರಯತ್ನಪಟ್ಟು ಪ್ರೊ.ಸಿ.ಡಿ.ಎನ್. ಅವರು ವಿಶ್ರಾಂತರಾದ ಮೇಲೆ ಧ್ವನ್ಯಾಲೋಕ ಎಂಬ ಸಾಂಸ್ಕೃತಿಕ ಸಂಶೋಧನಾ ಕೇಂದ್ರವನ್ನು ಮೈಸೂರಿನಲ್ಲಿ ಸ್ಥಾಪಿಸಿದರು. ಅಲ್ಲಿಗೆ ನೂರಾರು ಕವಿಗಳು ಕಾದಂಬರಿಕಾರರು, ಬರಹಗಾರರು ಬಂದು ವಾಸವಾಗಿ ಅಲ್ಲಿನ ಕಾರ್ಯ ಕ್ರಮಗಳಲ್ಲಿ ಭಾಗವಹಿಸಿರುವುದು ಬೇರೆ ವಿಷಯ.

ಈ ವಿಷಯ ಪ್ರಸ್ತಾಪಿಸುವ ಉದ್ದೇಶ ಇಷ್ಟೇ. ವಿಶ್ವವಿದ್ಯಾಲಯದ ಶಾಖೆಗಳನ್ನು ಜೀವಂತವಾಗಿಸಿ ಉನ್ನತ ಮಟ್ಟದ ಚರ್ಚೆ, ವಾದ, ಸಂಶೋ ಧನಗೆ ಪೂರಕವಾದ ವಾತಾವರಣ ಕಲ್ಪಿಸುವುದು ಈಗಲೂ ಸಾಧ್ಯ. ಅದು ಪ್ರಾಮಾಣಿಕ, ಸೃಜನಾತ್ಮಕ, ನಿಯತ್ತಿನ ಅಧ್ಯಾಪಕರಿಂದ ಸಾಧ್ಯ. ಅದನ್ನು ಪೋಷಿಸಿ ಮಾರ್ಗದರ್ಶನ ಕೊಡುವ ಕ್ರಿಯಾಶೀಲ ಆಡಳಿತಗಾರರು ಇರಬೇಕು. ಇದಾಗಬೇಕಾದರೆ ಸರಿಯಾದ ಆಯ್ಕೆಯಾಗಲೇಬೇಕು. ಬೇರೆ ದಾರಿಯೇ ಇಲ್ಲ.

ಪ್ರಾಣಿಧಾಮಗಳ ಅಗತ್ಯವಿದೆ

-ಮೈಲಾರಪ್ಪ ಬೂದಿಹಾಳ, ಮುಗಿಲಹಕ್ಕಿ.

ಮಾನವ ಮತ್ತು ಕರಡಿ ಸಂಘರ್ಷ ಕುರಿತಾಗಿ ಡಾ.ಸಮದ್ ಕೊಟ್ಟೂರು ಉಪಯುಕ್ತ ಮಾಹಿತಿ ನೀಡಿದ್ದಾರೆ. ಕರಡಿಯ ಆಹಾರ ಪದ್ಧತಿ, ಜೀವನ ಕ್ರಮ, ಸಂಘರ್ಷದ ಮೂಲ ಕಾರಣಗಳು, ಮಾನವನ ಮೇಲೆ ಕರಡಿ ದಾಳಿ ಮಾಡುವ ಸಂದರ್ಭ ಹಾಗೂ ಅದರಿಂದ ತಪ್ಪಿಸಿಕೊಳ್ಳುವ ಮಾರ್ಗೋಪಾಯಗಳು, ಸಂಘರ್ಷ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ.

ಈಗ ಹಂಪಿ ದರೋಜಿ ಕರಡಿಧಾಮಗಳಂತಹ ಪಾರ್ಕುಗಳ ಅವಶ್ಯಕವಿದೆ. ಕಲ್ಲುಗಣಿಗಾರಿಕೆ ಕಾಡಿನಲ್ಲಿ ಮಾನವನ ಚಟುವಟಿಕೆಗಳ ನಿಯಂತ್ರಣ ಆಗಬೇಕಿದೆ. ಕಾಡಿನಲ್ಲಿ ಬೆಳೆಯುವ ಹಣ್ಣುಹಂಪಲು ಹೊತ್ತು ತರುವುದನ್ನು ನಿಷೇಧಿಸುವುದು ಅಗತ್ಯ. ಕೃಷಿಗಾಗಿ ಭೂಒತ್ತುವರಿ ನಿಯಂತ್ರಿಸುವುದು ತುರ್ತು ಕಾರ್ಯ.

ಜಾತಿ-ಸಾಹಿತ್ಯ, ಮೀಸಲಾತಿ

-ಪ್ರೊ.ಪದ್ಮನಾಭ ರಾವ್, ಬೆಂಗಳೂರು.

ಕನ್ನಡ ಸಾಹಿತ್ಯದಲ್ಲಿನ ಕಳೆದ ದಶಕವನ್ನು ಗಮನಿಸಿದಾಗ ಈ ಮೊದಲು ಇಲ್ಲದೆ ಇದ್ದ ಬ್ರಾಹ್ಮಣ, ಅಬ್ರಾಹ್ಮಣ ಸಾಹಿತ್ಯವೆಂಬ ಎರಡು ಪ್ರಕಾರಗಳು ಹುಟ್ಟಿವೆ. ಇದರ ಲಾಭ ಪ್ರಶಸ್ತಿ ಬಯಸುವ ಸಾಹಿತಿಗಳಿಗೆ ಮಾತ್ರ. ಯಾಕೆಂದರೆ ಅವರಿಗೆ ರಾಜಕಾರಣಿಗಳ ಸಾಮೀಪ್ಯ, ಸಾಂಗತ್ಯವಿದ್ದು, ಆಸ್ಥಾನ ವಿದ್ವಾಂಸರತೆ ವಿಜೃಂಭಿಸುತ್ತಾರೆ. ಈ ಬರಹಗಳು ಸಾಮಾನ್ಯವಾಗಿ, ಆಯಾ ಲೇಖಕರ ಜಾತಿಯನ್ನು, ಅವರು ಬದುಕು ಕಳೆದ, ಕಳೆಯುತ್ತಿರುವ ಸಮಾಜವನ್ನು ಪ್ರತಿನಿಧಿಸುತ್ತದೆ. ಕಾನೂರು ಹೆಗ್ಗಡತಿ, ಸಂಸ್ಕಾರ, ನಮ್ಮೂರಿನ ರಸಿಕರು, ದಾಟು, ಯಾವುದನ್ನೇ ತೆಗೆದುಕೊಳ್ಳಿ. ಆ ಲೇಖಕರ ಪ್ರಾಂತದ ಭಾಷೆ ಅಲ್ಲಿ ಎದ್ದು ತೋರುತ್ತದೆ.

ಈ ಬರಹಗಾರರು ತಮ್ಮ ಸುತ್ತಲಿನ ಅನುಭವ ಹೊರತಾಗಿ ಮತ್ತೇನನ್ನು ಸಮರ್ಥವಾಗಿ ಬರೆಯಲು ಸಾಧ್ಯ?  ಯಾವ ವ್ಯಕ್ತಿಯೂ ತಾನು ಇದೇ ಜಾತಿ ಎಂದು ಗುರುತಿಸಿಕೊಳ್ಳುವುದು ಶಾಲೆಗೆ ಹೋಗುವ ಮುನ್ನ, ಅಥವಾ ಓರಗೆಯ ಅಥವಾ ಬಾಲ್ಯದ ಒಡನಾಡಿಗಳು ತಿಳಿದೋ ತಿಳಿಯದೆಯೋ ಆ ವ್ಯಕ್ತಿಯ ಗಮನಕ್ಕೆ ತಂದಾದ ನಂತರ ಮಾತ್ರ.

ನನ್ನ ಸ್ವಂತ ಅನುಭವವನ್ನು ಹೇಳುವುದಾದರೆ, ನಮ್ಮ ತಂದೆ ಪ್ರೆಮರಿ ಶಾಲಾ ಮಾಸ್ತರರು, ಅಣ್ಣ ಹೈಸ್ಕೂಲಿನಲ್ಲಿ ಅಧ್ಯಾಪಕರು. ನಾನು ಕಾಲೇಜು ಅಧ್ಯಾಪಕ. ನಮ್ಮ ಮನೆಗೆ ಎಲ್ಲ ಜಾತಿಯ ವಿದ್ಯಾರ್ಥಿಗಳೂ ಬರುತ್ತಿದ್ದರು. ಕೆಲವರು ಊಟವನ್ನೂ ಮಾಡಿ ಹೋಗುತ್ತಿದ್ದರು. ನನ್ನ ತಂದೆ ನೀನು ಆ ಜಾತಿ, ಅಲ್ಲಿ ಕೂತುಕೋ, ನೀನು ಇಲ್ಲಿ, ಎಂದು ಕೂರಿಸುತ್ತಿರಲಿಲ್ಲ. ಹಾಗೆಂದು ನಾವು ಶ್ರೀಮಂತರಾಗಿರಲಿಲ್ಲ. ನನಗೆ ಬಾಲ್ಯದಲ್ಲಿ ಕೆಲವರು `ನಿನಗೇನಯ್ಯ? ಘಂಟೆ ಅಲ್ಲಾಡಿಸಿದರೆ ಸಾಕು; ಜನ ಹಣ ಕೊಡ್ತಾರೆ, ನಮಗೆ? ಹೊಲದಲ್ಲಿ ಗೇಯ್ದರೆ ಉಂಟು ಇಲ್ಲದಿದ್ರೆ ಇಲ್ಲ’ ಎಂದು ಹೇಳುತ್ತಿದ್ದುದುಂಟು. ಇದು ಒಂದು ತಮಾಷೆಯಾಗಿತ್ತೇ ಹೊರತು, ದ್ವೇಷ, ಅಸೂಯೆಯ ಮಾತಾಗಿರಲಿಲ್ಲವೆಂದೇ ನನ್ನ ಭಾವನೆ. ಆಗ ಯಾರೂ ನೀನು ಬ್ರಾಹ್ಮಣ, ಶೋಷಕ, ಎಂದು ನನ್ನನ್ನು ಗುರುತಿಸಿರಲಿಲ್ಲ. ನನ್ನ ಸಹಪಾಠಿಗಳೆಲ್ಲಾ ಸರಕಾರಿ ಸೇವೆಯಲ್ಲಿದ್ದಾರೆ. ನನಗೆ ಅದಕ್ಕೆ ಅವಕಾಶ ಸಿಕ್ಕಲ್ಲಿಲ್ಲ; ಕಾರಣ ನಾನು ಹುಟ್ಟಿದ ಜಾತಿ. ಇದಕ್ಕೆ ನಾನು ಯಾರನ್ನೂ ತೆಗಳುವುದಿಲ್ಲ. ಸಾಮಾಜಿಕ ವ್ಯವಸ್ಥೆಯಲ್ಲಿ ಮೀಸಲಾತಿ ಅತ್ಯವಶ್ಯ.

ಈ ಮೀಸಲಾತಿಯು ಜಾತಿ ಆಧಾರಿತವಾಗಿರಲೇಬೇಕು ಎನ್ನುವುದೇನೂ ಇಲ್ಲ; ಅದು ಮೊದಲ ಹೆಜ್ಜೆ, ಒಬ್ಬ ಹಿಂದುಳಿದಾತನಿಗೆ ಮೀಸಲಾತಿ ಸವಲತ್ತು  ದೊರೆತರೆ, ಅವನ ಕುಟುಂಬದ ಪರಿಸ್ಥಿತಿ ಸುಧಾರಿಸುತ್ತದೆ, ಅವನ ಮಗ ಮೊಮ್ಮಗ, ಮರಿಮಗ ಎಲ್ಲರೂ ಈ ಸವಲತ್ತು ಪಡೆದಾಗ, ಆ ಕುಟುಂಬ ಶ್ರೀಮಂತ ಕುಟುಂಬವಾಗುತ್ತದೆ, ಸಮಾಜದಲ್ಲಿ ಸ್ಥಾನಮಾನ ಹೆಚ್ಚುತ್ತದೆ.

ಹುಟ್ಟಿನಿಂದ ಮೇಲು ಜಾತಿಯವನು ಎಂದ ಮಾತ್ರಕ್ಕೆ ಒಬ್ಬ ಅಭ್ಯರ್ಥಿ ಪ್ರತಿಭಾವಂತನಾದರೂ, ಕಾಲೇಜಿನಲ್ಲಿ ಸೀಟು ಸಿಗುವುದೇ ಹೊರತು, ಉದ್ಯೋಗದ ಖಾತರಿ ಇರುವುದೇ ಇಲ್ಲ. ಆಗ ಅವನು ಸರಕಾರಿ ಸೇವೆಯ ಪ್ರಯತ್ನ ಬಿಟ್ಟು, ಖಾಸಗಿ ಉದ್ಯೋಗವಲಯಕ್ಕೆ ಬರುತ್ತಾನೆ. ಇಲ್ಲಿ ಜಾತಿಗಣನೆ ಇರುವುದಿಲ್ಲ. ಒಬ್ಬ ವ್ಯಕ್ತಿ ಆ ಸಂಸ್ಥೆಗೆ ಎಷ್ಟು ಉಪಯುಕ್ತ, ಅವನಿಂದ ಉತ್ಪಾದನೆ, ಸೇವೆಗಳಿಗೆ ಎಷ್ಟು ಲಾಭವಿರುತ್ತದೆ ಎನ್ನುವುದು ಮಾತ್ರ ಅವರಿಗೆ ಮುಖ್ಯವಾಗಿರುತ್ತದೆ.  ಹೀಗೆ ಆಗುವುದರಿಂದ ಪ್ರತಿಭಾ ಪಲಾಯನ ಆಗಿ, ಅದರ ನಷ್ಟ ಸಮಾಜಕ್ಕೋ ಸರಕಾರಕ್ಕೋ? ಸರಕಾರಿ ಸೇವೆಯಲ್ಲಿ ಯಾರಿಗೂ ಟಾರ್ಗೆಟ್ ಇರುವುದಿಲ್ಲ. ಈ ವ್ಯಕ್ತಿಗಳ ಪದೋನ್ನತಿಯೂ ಮೀಸಲಾತಿ ಪದ್ಧತಿಯಂತೆ ನಡೆದರೆ, ಅಲ್ಲಿಯೂ ಈ ಸವಲತ್ತು ಪಡೆದವರ ಪಟ್ಟಿಯೇ ಪ್ರತ್ಯೇಕವಾಗಿರುತ್ತದೆ. ಈ ಪ್ರತ್ಯೇಕತೆ, ವಿಷಮಾಂತರ ಸತತವಾಗಿ ಮುಂದುವರೆಯುತ್ತಲೇ ಇರುತ್ತದೆ. ಹೀಗಾಗಿ ಸಾಮಾಜಿಕ ಸಮಾನತೆ, ಸಮಾನಾವಕಾಶ ಇವು ರಾಜಕೀಯ ಅಥವಾ ಸಾಹಿತ್ಯದ ಘೋಷ ವಾಕ್ಯಗಳಾಗಿ ಮಾತ್ರ ಉಳಿದುಬಿಡುತ್ತವೆ.

ಸಂಶೋಧನೆ ಒಂದು ತಪಸ್ಸು

-ಸಿ.ಚಿಕ್ಕತಿಮ್ಮಯ್ಯ, ಹಂದನಕೆರೆ.

ಮುಖ್ಯ ಚರ್ಚೆಯ ವಿಷಯದ ಅಡಿಯಲ್ಲಿ ಪ್ರಕಟವಾಗಿರುವ ಲೇಖನಗಳ ಪೈಕಿ ನನಗೆ ಡಾ.ಸಿ.ಕೆ.ರೇಣುಕಾರ್ಯ ಮತ್ತು ಡಾ.ಜ್ಯೋತಿಯವರ ಲೇಖನಗಳು ಮೆಚ್ಚುಗೆಯಾದವು. ಡಾ.ಸಿ.ಕೆ.ರೇಣುಕಾರ್ಯ ಅವರು ತಮ್ಮ ಲೇಖನದಲ್ಲಿ ಪಿ.ಹೆಚ್.ಡಿ ಪಡೆಯುವುದರ ಹಿಂದಿನ ಭ್ರಷ್ಟ ವ್ಯವಸ್ಥೆಗೆ ಕನ್ನಡಿ ಹಿಡಿದಿದ್ದಾರೆ. ‘ಅಧ್ಯಾಪಕರ ನೇಮಕ ಮತ್ತು ಬಡ್ತಿಗೆ ಪಿ.ಹೆಚ್.ಡಿ ಅವಶ್ಯಕವೆಂದು ಯು.ಜಿ.ಸಿ ನಿಗದಿ ಮಾಡಿರುವುದರಿಂದ ಪಿ.ಹೆಚ್.ಡಿ. ಗುಣಮಟ್ಟ ಕುಸಿದಿದೆ’ ಎಂದು ಅಭಿಪ್ರಾಯಪಡುತ್ತಾರೆ. ಬಹುಜನರ ಅಭಿಪ್ರಾಯವೂ ಇದೇ ಆಗಿದೆ. ಈ ಪಿ.ಹೆಚ್.ಡಿ ಗುಣಮಟ್ಟವನ್ನು ಮರುಸ್ಥಾಪಿಸಲು ಡಾ.ರೇಣುಕಾರ್ಯ ಅವರು  ಕೆಲವೊಂದು ಸೂಚನೆಗಳನ್ನು ಸೂಚಿಸಿದ್ದಾರೆ. ಆದರೆ ಅವು ಕಾರ್ಯಗತವಾಗುತ್ತವೆಯೇ? ಎಂಬುದೇ ದೊಡ್ಡ ಪ್ರಶ್ನೆ.

ಡಾ.ಜ್ಯೋತಿಯವರು ತಮ್ಮ ಲೇಖನದಲ್ಲಿ ಪಿ.ಹೆಚ್.ಡಿ ಯ ಮಹತ್ವ ಕುರಿತು ಪ್ರಸ್ತಾಪಿಸುತ್ತಾರೆ. ಇಂದಿನವರು ಪಿ.ಹೆಚ್.ಡಿ ಯ ನಿಜವಾದ ಅರ್ಥವನ್ನು ಗ್ರಹಿಸದೆ ಅದನ್ನು ನೇಮಕ, ಬಡ್ತಿ ಮತ್ತು ಹೆಸರಿನ ಮುಂದೆ ಜೋಡಿಸಿಕೊಂಡು ಬೀಗುವುದಕ್ಕಾಗಿ ಪಡೆಯುತ್ತಾರೆ ಎಂದು ಸರಿಯಾಗಿಯೇ ಅಭಿಪ್ರಾಯಪಡುತ್ತಾರೆ. ಅವರು ತಮ್ಮ ಲೇಖನದಲ್ಲಿ ಬಳಸಿರುವ ವಾಕ್ಯಗಳು ತುಂಬಾ ಅರ್ಥವ್ಯಾಪ್ತಿಯನ್ನು ಹೊಂದಿ ಹೆಚ್ಚು ಪರಿಣಾಮಕಾರಿಯಾಗಿವೆ. ಉದಾಹರಣೆಗೆ ‘ಸಂಶೋಧನೆಯೆನ್ನುವುದು ಅರೆಕಾಲಿಕ ಕೆಲಸವಲ್ಲ’, ಸಂಶೋಧನೆಯೆನ್ನುವುದು ಫಾಸ್ಟ್ ಫುಡ್ ಡೆಲಿವರಿಯಲ್ಲ’, ‘ಸಂಶೋಧನೆಯೆನ್ನುವುದು ತಪಸ್ಸಿನಂತೆ, ಫಲ ದೊರೆಯುವವರೆಗೆ ತನು ಮನ ಮೀಸಲಿಡಬೆಕು’, ‘ಸಂಶೋಧನೆ ಸ್ವಪ್ರೇರಣೆಯಿಂದ ನಡೆಯಬೆಕಾದ ಕಾರ್ಯ, ಇದೊಂದು ಬಾಹ್ಯ ಒತ್ತಡ, ಆರ್ಥಿಕ ಲಾಭ ಅಥವಾ ಪದೋನ್ನತಿಗಾಗಿ ಮಾಡುವಂತ ಕೆಲಸವಲ್ಲ.’ -ಇಂಥ ವಾಕ್ಯಗಳ ಪ್ರಯೋಗ, ಡಾ.ಜ್ಯೋತಿಯವರ ಲೇಖನದ ಮೌಲ್ಯವನ್ನು ಹೆಚ್ಚಿಸಿದೆ.

ಪಿ.ಹೆಚ್.ಡಿ ಗುಣಮಟ್ಟ ಕುಸಿದಿರುವುದಕ್ಕೆ ಮತ್ತೂ ಎರಡು ಕಾರಣಗಳನ್ನು ಸೂಚಿಸಬಯಸುತ್ತೇನೆ. ನಮ್ಮಲ್ಲಿ ಗೌರವ ಡಾಕ್ಟರೇಟ್ ಮಾರುವ ಸಂಸ್ಥೆಗಳು ಕ್ರಿಯಾಶೀಲವಾಗಿರುವುದು ಹಾಗೂ ಕೆಲವು ವಿಶ್ವವಿದ್ಯಾಲಯಗಳು ಕೆಲ ಅರ್ಹರಲ್ಲದವರಿಗೂ ಗೌರವ ಡಾಕ್ಟರೆಟ್ ನೀಡುತ್ತಿರುವುದು. ಮುಂದೆಯೂ ಈ ವಿದ್ಯಮಾನಗಳು ಎಗ್ಗಿಲ್ಲದೆ ನಡೆಯುತ್ತಿರುತ್ತವೆ. ಹೀಗಾಗಿ ಯಾವ ಪದವಿಯನ್ನು ಜೀವಮಾನದ ವಿಶೇಷ ಸಾಧನೆ ಎಂದು ತಪಸ್ಸಿನಂತೆ ಧ್ಯಾನಿಸಿ ಪಡೆಯಲಾಗುತ್ತಿತ್ತೋ ಆ ಪದವಿ ಇಂದು ತನ್ನ ಮೌಲ್ಯವನ್ನು ಕಳೆದುಕೊಂಡಿರುವುದು ಸತ್ಯ.

 

 

Leave a Reply

Your email address will not be published.