ಓದುಗರ ಸಂವೇದನೆ ಕಲಕುವ ಕೃತಿ ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ

ಕನ್ನಡದ ಹೆಸರಾಂತ ಕವಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಅಂಕಣ ಬರಹಗಳ ಸಂಕಲನ ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ’ ಕೃತಿಯು ಆರು ತಿಂಗಳಲ್ಲಿ ಮರು ಮುದ್ರಣಗೊಂಡಿದೆ. ಸಂಸ್ಕೃತಿಕವಾಗಿ ಕನ್ನಡ ಸಾಹಿತ್ಯದ ಅಸ್ಮಿತೆಯನ್ನು ವಿಸ್ತರಿಸುತ್ತಿರುವ ಕೃತಿಯಾಗಿದೆ.

ನ್ನಡದ ಜನಪ್ರಿಯ ‘ಸುಧಾ’ ಸಾಪ್ತಾಹಿಕದ ‘ವಿಚಾರ ಲಹರಿ’ಯಲ್ಲಿ ನಿಯತವಾಗಿ ನಾಲ್ಕು ವರ್ಷಗಳ ಕಾಲ ಈ ಅಂಕಣ ಬರಹಗಳು ಪ್ರಕಟವಾಗಿದ್ದವು. ಸಾಮಾನ್ಯವಾಗಿ ಬಹುಸಂಖ್ಯಾತ ಜನರು ಓದುವ, ಮೆಚ್ಚುವ ಬರಹಗಳನ್ನು ಜನಪ್ರಿಯ ಎಂಬ ಹಣೆಪಟ್ಟಿಯನ್ನು ಅಂಟಿಸಿ ನೇತ್ಯಾತ್ಮಕವಾಗಿ ನೋಡಲಾಗುತ್ತದೆ. ಜನಪ್ರಿಯ ಬರಹಗಳು ಬಹುಜನರು ಒಪ್ಪುವ ಹಾಗಿರುತ್ತವೆ; ಬಹುತೇಕವಾಗಿ ಅವರ ನಿರೀಕ್ಷೆಗಳನ್ನು ತಣಿಸುವಂತೆಯೂ ಇರುತ್ತವೆ. ಆದರೆ ಮೂಡ್ನಾಕೂಡು ಅವರ ಅಂಕಣ ಬರಹಗಳ ಈ ಕೃತಿಯು ಜನಪ್ರಿಯವಾಗಿದ್ದರೂ ಓದುಗರನ್ನು ಬೇರೆ ಬೇರೆ ದೃಷ್ಟಿಕೋನಗಳಿಂದ ಲೋಕವನ್ನು ನೋಡಲು ಪ್ರೇರೇಪಿಸುತ್ತಿದೆ; ಗಂಭೀರ ಆಲೋಚನೆಗೂ ಪ್ರಚೋದಿಸುತ್ತಿದೆ.

ಫ್ರಾನ್ಸಿಸ್ ಬೇಕನ್‍ನ ಪ್ರಬಂಧಗಳಿಂದ ತಾವು ಪ್ರಭಾವಿತರಾಗಿರುವುದನ್ನು ಮೂಡ್ನಾಕೂಡು ಅವರು ಹೇಳಿಕೊಂಡಿದ್ದಾರೆ. ಬೇಕನ್‍ನ ಪ್ರಬಂಧಗಳಲ್ಲಿರುವ ವಿವೇಕ, ಚಿಂತನಶೀಲತೆ, ವಿಚಾರ ಸ್ಪಷ್ಟತೆ, ಸಹಜವಾಗಿಯೇ ಇಲ್ಲಿಯ ಬಹುತೇಕ ಬರಹಗಳಲ್ಲೂ ಎದ್ದು ಕಾಣುವ ಗುಣಗಳಾಗಿವೆ. ವಿಚಾರ ಲಹರಿ ಎಂದಾಕ್ಷಣ ಎಷ್ಟೋ ಸಲ ಅವು ಲೋಕಾಭಿರಾಮದ ಹರಟೆಗಳಾಗಿರುತ್ತವೆ; ಲಲಿತ ಪ್ರಬಂಧಗಳಲ್ಲಿ ಕಲ್ಪನೆಯ ಲಹರಿಯೊಂದು ಲೀಲಾಜಾಲವಾಗಿ ಹರಿಯುತ್ತದೆ. ಮೇಲ್ನೋಟಕ್ಕೆ ಮೂಡ್ನಾಕೂಡು ಅವರ ಅಂಕಣ ಬರಹಗಳಿಗೆ ಲಲಿತ ಪ್ರಬಂಧದ ಲಾಲಿತ್ಯವಿದೆ; ಸರಳವಾದ ಭಾಷಾ ನಿರೂಪಣೆಯ ಶೈಲಿಯೂ ಇದೆ. ಆದರೆ ಅವು ಕೇವಲ ಪ್ರಬಂಧಗಳಾಗಿ ಉಳಿಯದೇ ಅವುಗಳ ಆಂತಃರ್ಯದಲ್ಲಿ ಪ್ರಖರವಾದ ಚಿಂತನೆಗಳಿವೆ. ಭಾರತೀಯ ಪರಂಪರೆಯನ್ನು ಪ್ರತಿನಿಧಿಸುವ ತಾತ್ವಿಕ ಚರ್ಚೆಗಳಿವೆ. ಇಂದಿನ ಭಾರತ ಎದುರಿಸುತ್ತಿರುವ ಸಮಕಾಲೀನ ಬಿಕ್ಕಟ್ಟುಗಳ ಚಿತ್ರಣವಿದೆ.

ಇವುಗಳನ್ನು ಕೇವಲ ಚಿಂತನಶೀಲ ಅಂಕಣ ಬರೆಹಗಳೆಂದು ಕರೆಯುವುದು ಕಷ್ಟ. ಯಾಕೆಂದರೆ ತನ್ನ ಕಾಲದ ಅಸಂಖ್ಯಾತ ವಿದ್ಯಮಾನಗಳೊಂದಿಗೆ ಇವು ಮುಖಾಮುಖಿಯಾಗಿವೆ; ತನಗೆ ಒಪ್ಪಿತವಲ್ಲದ ವಿಚಾರಗಳೊಂದಿಗೆ ಸಂವಾದದಲ್ಲಿ ತೊಡಗಿ ಭಿನ್ನಮತಗಳನ್ನು ದಾಖಲಿಸುತ್ತವೆ. ಸಮಕಾಲೀನ ಕಾಲದಲ್ಲಿ ಎದುರಾಗಿರುವ ಹಿಂಸೆ, ಸಂಕಟ, ತಲ್ಲಣಗಳನ್ನು ವಿಷಾದನೀಯ ಧಾಟಿಯಿಂದ ನೋಡದೆ ಅವುಗಳ ಹಿಂದಿರುವ ಸಾಂಸ್ಕತಿಕ ರಾಜಕಾರಣವನ್ನು ವಿಶ್ಲೇಷಿಸುತ್ತವೆ. ಆದ್ದರಿಂದಲೇ ಈ ಬರಹಗಳು ದಮನಿತ, ಅಂಚಿನ ಸಮುದಾಯಗಳ ಸಂಕಥನಗಳಾಗಿ ರೂಪಾಂತರಗೊಂಡಿವೆ. ಈ ಸಂಕಥನಗಳು ಎಲ್ಲ ರೀತಿಯ ಸ್ಥಾಪಿತ ಮೌಲ್ಯಗಳನ್ನು ನಿರಾಕರಿಸುತ್ತವೆ; ಅಸಮಾನತೆಯ ವ್ಯವಸ್ಥೆಯನ್ನು ಸಮರ್ಥಿಸುವ ಯಥಾಸ್ಥಿತಿವಾದಗಳನ್ನು ನಿರ್ಭಿಡೆಯಿಂದ ಪ್ರತಿರೋಧಿಸುತ್ತವೆ; ನಿಂತ ನೆಲೆಯಲ್ಲಿಯೇ ಸಂಕಷ್ಟದಿಂದ ಬದುಕುತ್ತಿರುವ ಸಮುದಾಯಗಳ ಅಸ್ಮಿತೆಯನ್ನು ಹುಡುಕುವ, ಗುರುತಿಸುವ ಹಾಗೂ ಹೊಸತನ್ನು ಕಟ್ಟುವ ಹೊಳಹುಗಳನ್ನು ಕಾಣಿಸುವಂತೆ ಮಾಡಿವೆ. ಅಷ್ಟೇ ಅಲ್ಲದೆ, ಏಕರೂಪಿತನವನ್ನು ರೂಪಿಸಲು ಹೆಣಗುತ್ತಿರುವ ಅಧಿಕಾರ ಕೇಂದ್ರಗಳನ್ನು ನಿರಾಕರಿಸುವ ಛಾತಿಯನ್ನೂ ತೋರುತ್ತವೆ.

ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಅಸ್ಪøಶ್ಯತೆ, ಜಾತಿ ಪದ್ಧತಿ, ವರ್ಗ ತಾರತಮ್ಯಗಳು ಭಾರತೀಯ ಸಾಮಾಜಿಕ ಸಂರಚನೆಯ ಮೂಲಾಧಾರಗಳಾಗಿವೆ. ಇಂತಹ ಶ್ರೇಣೀರಣದ ವ್ಯವಸ್ಥೆಯು ಬೇರೆಬೇರೆ ಅಧಿಕಾರ ಕೇಂದ್ರಗಳ ಮೂಲಕ ಸಾಂಸ್ಥಿಕವಾಗಿ ಪೋಷಣೆಯಾಗುವುದನ್ನು ಈ ಕೃತಿಯ ಬಹುತೇಕ ಲೇಖನಗಳು ಪ್ರಶ್ನಿಸುತ್ತವೆ. ಅಸಮಾನತೆಯ ಬೇರುಗಳನ್ನು ಗುರುತಿಸಿ ಕೇವಲ ಟೀಕೆ, ವಿಮರ್ಶೆ, ಪ್ರತಿರೋಧಗಳನ್ನಷ್ಟೇ ವ್ಯಕ್ತಪಡಿಸದೆ ಅದಕ್ಕೆ ಕೊಡಲಿ ಪೆಟ್ಟುಗಳನ್ನು ನೀಡುತ್ತದೆ. ಇದು ನೇರಾನೇರ ಮಾರಾಮಾರಿಯ ಭಾಷೆಯಲ್ಲಿರುವುದಿಲ್ಲ; ಭಾವನಾತ್ಮಕ ಆಕ್ರೋಶದ ರೂಪದಲ್ಲಿಯೂ ಇಲ್ಲ. ಚಾರಿತ್ರಿಕ ಹಿನ್ನೆಲೆಯಲ್ಲಿ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಲೋಹಿಯಾ ಮೊದಲಾದವರು ಇಡುತ್ತ ಬಂದಿರುವ ಹೆಜ್ಜೆಗಳನ್ನು ಅನುಸರಿಸುತ್ತದೆ. ಅವರ ನಡೆ, ನುಡಿ, ಹೋರಾಟ, ಸಂಘರ್ಷಗಳ ಮಾದರಿಗಳನ್ನು ಅಲ್ಲಲ್ಲಿ ನಿದರ್ಶನಗಳನ್ನಾಗಿ ಓದುಗರ ಮುಂದೆ ಇಡುತ್ತ ಹೋಗುತ್ತದೆ. ಅದರಲ್ಲೂ ಬುದ್ಧನ ಚಿಂತನೆಗಳ ತಾತ್ವಿಕತೆಯನ್ನು ವಿವರಿಸುತ್ತದೆ; ಬುದ್ಧನ ತತ್ವಜ್ಞಾನದ ಬೆಳಕಿನಲ್ಲಿ ಏಕರೂಪಿತನದಿಂದ ಬಳಲುತ್ತಿರುವ ಭಾರತಕ್ಕೆ ಹೊಸ ಚಹರೆಗಳನ್ನು ನೀಡಲು ಪ್ರಯತ್ನಿಸುತ್ತದೆ. ಭಾರತವೆಂದರೆ ಭಾಷೆ, ಜನಾಂಗ, ಮತ, ಪಂಥ, ಧರ್ಮ, ಆಚರಣೆ, ಪರಂಪರೆಗಳನ್ನು ಬಹುತ್ವದ ಮೂಲಕವೇ ಹುಡುಕಾಟ ನಡೆಸುತ್ತದೆ. ಸಂಸ್ಕೃತಿಕ ವೈವಿಧ್ಯವನ್ನು ಮುಂಚೂಣಿಗೆ ತಂದು ಮಂಡಿಸುತ್ತದೆ.

ಮೂಡ್ನಾಕೂಡು ಅವರ ಕೃತಿಯ ಮತ್ತೊಂದು ವಿಶಿಷ್ಟವಾದ ಸಂಗತಿಯೆಂದರೆ ರಾಷ್ಟ್ರೀಯತೆಯ ಭರಾಟೆಯಲ್ಲಿ ಕಳೆದುಹೋಗುವಂತೆ ಮಾಡಲಾಗಿರುವ ಮತ್ತು ಮರೆವಿಗೆ ಸಂದಿರುವ ಭಾರತೀಯ ಬಹುತ್ವದ ಚಹರೆಗಳನ್ನು ಬೌದ್ಧ ಮೀಮಾಂಸೆಯ ನಿಟ್ಟಿನಿಂದ ಇಲ್ಲಿಯ ಅಂಕಣ ಬರೆಹಗಳುದ್ದಕ್ಕೂ ಅನುಸಂಧಾನ ಮಾಡಿರುವುದು.

ಎಲ್ಲವನ್ನೂ ಪ್ರತ್ಯೇಕಿಸಿ ನೋಡುವ ಜಡ್ಡುಗಟ್ಟಿರುವ ಮನಸ್ಸುಗಳಿಗೆ ಸಾಣೆ ಹಿಡಿಯುವ ಕೆಲಸವನ್ನು ಮಾಡುತ್ತದೆ. ಲೋಕದ ವ್ಯವಹಾರಗಳನ್ನು ಬಹುಮುಖಿ ಆಯಾಮಗಳಲ್ಲಿ ನೋಡುವುದರ ಮುಖಾಂತರ ಅಸಮಾನ ಭಾರತವನ್ನು ನಿರಾಕರಿಸುತ್ತದೆ. ಹಾಗಾಗಿ ಇದು ಕೇವಲ ಕನ್ನಡ ಭಾಷಿಕ ಸಮುದಾಯ, ಕನ್ನಡ ನಾಡು, ನುಡಿ, ಸಾಹಿತ್ಯವನ್ನಷ್ಟೇ ಕುರಿತ ಕೃತಿಯಲ್ಲ. ಇದರ ವ್ಯಾಪ್ತಿ ತುಂಬ ವಿಸ್ತಾರವಾದದ್ದು. ಸಂವಿಧಾನದ ಆಶಯದಂತೆ ‘ಭಾರತೀಯ ಪ್ರಜೆಗಳಾದ ನಾವು…’ (ವಿ ದ ಪೀಪಲ್ ಆಫ್ ಇಂಡಿಯಾ) ಎಂಬ ಎಲ್ಲರನ್ನು ಒಳಗೊಳ್ಳುವ ಸಾಮರಸ್ಯದ ಭಾರತವನ್ನು ಓದುಗರ ಮುಂದಿಡುತ್ತದೆ. ಇದು ಅಂಬೇಡ್ಕರ್ ಅವರು ಬಯಸಿದ್ದ ಸರ್ವರ ಸಮಾನತೆಯ ಭಾರತವೇ ಹೊರತು ಬರಿ ಉಳ್ಳವರ, ಮೇಲ್ವರ್ಗದವರ, ಪುರೋಹಿತರ, ಕಾರ್ಪೋರೇಟ್‍ಗಳ, ಒಡೆದಾಳುವ ರಾಜಕಾರಣಿಗಳ ಭಾರತವನ್ನಲ್ಲ. ಈ ಹಿನ್ನೆಲೆಯಲ್ಲಿ ಮೂಡ್ನಾಕೂಡು ಅವರ ಕೃತಿಯು ಸಾಂಸ್ಕತಿಕ ಮತ್ತು ರಾಜಕೀಯ ಚಿಂತನೆಗಳನ್ನೂ ಒಳಗೊಂಡಿದೆ. ಆದ್ದರಿಂದಲೇ ಅದಕ್ಕೊಂದು ವಿಸ್ತತವಾದ ಆಯಾಮ ಒದಗಿದೆ.

ಬ್ರಿಟಿಷ್ ವಸಾಹತುಶಾಹಿ ಆಡಳಿತವು ಭಾರತೀಯ ಪಾರಂಪರಿಕ ಬಹುತ್ವಗಳನ್ನು ಹಲವು ವಿಧಗಳಲ್ಲಿ ನಿರ್ನಾಮ ಮಾಡುವುದರ ಮುಖಾಂತರ ಏಕರೂಪಿತನದ ರಾಷ್ಟ್ರೀಯತೆಯನ್ನು ರೂಪಿಸಿತು. ಇಂತಹ ರಾಷ್ಟ್ರೀಯತೆಯೇ ಭಾರತದಲ್ಲಿ ಬೇರೆ ಬೇರೆ ಜಾತಿ, ಮತ, ಪಂಥ, ಧರ್ಮದರನ್ನು ‘ಅನ್ಯ’ರಂತೆ ನೋಡುವ ಚಾಳಿಯೊಂದು ಭುಗಿಲೇಳಲು ಕಾರಣವಾಯಿತು. ಮೂಡ್ನಾಕೂಡು ಅವರ ಕೃತಿಯ ಮತ್ತೊಂದು ವಿಶಿಷ್ಟವಾದ ಸಂಗತಿಯೆಂದರೆ ರಾಷ್ಟ್ರೀಯತೆಯ ಭರಾಟೆಯಲ್ಲಿ ಕಳೆದುಹೋಗುವಂತೆ ಮಾಡಲಾಗಿರುವ ಮತ್ತು ಮರೆವಿಗೆ ಸಂದಿರುವ ಭಾರತೀಯ ಬಹುತ್ವದ ಚಹರೆಗಳನ್ನು ಬೌದ್ಧ ಮೀಮಾಂಸೆಯ ನಿಟ್ಟಿನಿಂದ ಇಲ್ಲಿಯ ಅಂಕಣ ಬರೆಹಗಳುದ್ದಕ್ಕೂ ಅನುಸಂಧಾನ ಮಾಡಿರುವುದು. ಈ ಮೊದಲು ಕನ್ನಡದಲ್ಲಿ ಜಿ.ಪಿ. ರಾಜರತ್ನಂ ಅವರಂತಹ ಪಂಡಿತರು ಬೌದ್ಧ ಸಾಹಿತ್ಯವನ್ನು ಜಾತಕ ಕತೆ, ದೃಷ್ಟಾಂತ, ಉಪದೇಶಾತ್ಮಕ ನೆಲೆಗಳಿಂದ ಪರಿಚಯಿಸುವ ಘನ ಕಾರ್ಯವನ್ನು ಮಾಡಿದ್ದಾರೆ. ವಿಮರ್ಶಕರಾದ ಡಿ.ಆರ್.ನಾಗರಾಜ್ ಮತ್ತು ನಟರಾಜ ಬೂದಾಳು ಅವರು ಅಕಾಡೆಮಿಕ್ ಹಿನ್ನೆಲೆಯಿಂದ ಬೌದ್ಧ ಮೀಮಾಂಸೆಯನ್ನು ಅಲ್ಲಮನ ವಚನಗಳೊಂದಿಗೆ ಗಂಭೀರವಾಗಿ ಚರ್ಚಿಸಿದ್ದಾರೆ.

ಅವರ ಬರಹಗಳು ಎತ್ತರದ ಪೀಠದಿಂದ ಉಪದೇಶ ನೀಡುವ ಅಹಂನಿಂದ ತಪ್ಪಿಸಿಕೊಂಡು ಆತ್ಮಾವಲೋಕನ ಮಾಡಿಕೊಳ್ಳುತ್ತವೆ; ಆತ್ಮಪ್ರಶಂಸೆಯಿಂದ ದೂರವಾಗಿವೆ.

ಈ ಹಿನ್ನೆಲೆಯಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿಯವರು ಬೌದ್ಧ ಚಿಂತಕರಾಗಿ, ಬುದ್ಧನ ಅನುಯಾಯಿಯಾಗಿ, ಕಳೆದ ನಾಲ್ಕು ದಶಕಗಳಿಂದ ಕನ್ನಡ ನಾಡಿನ ಚಳವಳಿಗಳಲ್ಲಿ ಭಾಗಿಯಾಗುತ್ತ ಬಂದವರು. ಸಂಸ್ಕೃತಿಕ ಸ್ಥಿತ್ಯಂತರಗಳನ್ನು ಸಮೀಪದಿಂದ ಕಂಡವರು. ತಮ್ಮ ವೈಯಕ್ತಿಕ ಅನುಭವ ಮತ್ತು ಅಪಾರವಾದ ಸಾರ್ವಜನಿಕ ಬದುಕಿನ ಅನುಭವವನ್ನು ಎಂದೂ ಸಿನಿಕತನದಿಂದ ನೋಡದೆ ಅವುಗಳನ್ನು ಕಲಾತ್ಮಕಗೊಳಿಸುವ ಕಡೆಗೆ ಆಸಕ್ತರಾದವರು. ಬುದ್ಧನ ಸಮಾನತೆಯ ತತ್ವಗಳನ್ನು ಹಾಗೂ ಬೌದ್ಧ ಚಿಂತನೆಗಳನ್ನು ಸಾಮಾನ್ಯ ಜನರಿಗೂ ನಿಲುಕುವಂತೆ ವಿವರಿಸುವ ಧಾಟಿಯನ್ನು ಕರಗತ ಮಾಡಿಕೊಂಡವರು. ಬುದ್ಧನ ಸರಳತೆ ಮತ್ತು ನಿರಾಡಂಬರತೆ ಅವರ ಬರಹಗಳ ಭಾಷೆಯಲ್ಲಿ ಹಾಸುಹೊಕ್ಕಾಗಿವೆ. ಅಷ್ಟೇ ಅಲ್ಲದೆ ಭಾಷೆಯು ಪರಿಭಾಷೆಗಳ ಭಾರದಿಂದ ಬಳಲುವುದಿಲ್ಲ. ತಮ್ಮ ಮನಸ್ಸನ್ನು ಘಾಸಿಗೊಳಿಸುವ ಲೋಕದ ಯಾವ ವಿದ್ಯಮಾನಗಳೂ ಅವರ ತೀಕ್ಷ್ಣವಾದ ಗ್ರಹಿಕೆಯಿಂದ ಹೊರಗುಳಿಯಲಾರವು. ಆದರೂ ಯಾರಿಗೂ ತಿಳಿಯದ ಸಂಗತಿಗಳನ್ನೇ ತಾನು ಹೇಳುತ್ತಿದ್ದೇನೆ ಎಂಬ ಕೂಗು ದನಿಯೂ ಇರುವುದಿಲ್ಲ. ಹೇಳಬೇಕಾದ ವಿಷಯ ಬೇರೆಯವರಿಗೆ ಎಷ್ಟೇ ಕ್ಷುಲ್ಲಕವೆನಿಸಿದರೂ ಅದು ತನಗೆ ಮುಖ್ಯವಾಗಿ ಕಂಡಿದ್ದನ್ನು ಹೇಳದೆ ಇರುವುದಿಲ್ಲ. ಅವರ ಬರಹಗಳು ಎತ್ತರದ ಪೀಠದಿಂದ ಉಪದೇಶ ನೀಡುವ ಅಹಂನಿಂದ ತಪ್ಪಿಸಿಕೊಂಡು ಆತ್ಮಾವಲೋಕನ ಮಾಡಿಕೊಳ್ಳುತ್ತವೆ; ಆತ್ಮಪ್ರಶಂಸೆಯಿಂದ ದೂರವಾಗಿವೆ. ಹೀಗಾಗಿ ಈ ಲೇಖನಗಳು ಸಹಜವಾಗಿಯೇ ಚರ್ಚೆ, ಸಂವಾದ, ವಾಗ್ವಾದಗಳಿಗೆ ಆಹ್ವಾನ ನೀಡುವಂತಿವೆ. ಓದುಗರ ಸಂವೇದನೆಯನ್ನು ಕಲಕುವಂತಿವೆ.

ಸದರಿ ಕೃತಿಯ ಐದು ವಿಭಾಗಗಳಲ್ಲಿ ಹಂಚಿಕೆಯಾಗಿರುವ ನೂರಕ್ಕೂ ಹೆಚ್ಚು ಕಿರು ಲೇಖನಗಳಿವೆ. ಯಾವ ಲೇಖನಗಳೂ ಮೂರು ಪುಟಗಳನ್ನು ದಾಟಲಾರವು. ಇಷ್ಟೊಂದು ಮಿತವ್ಯಯದ ಪದಗಳಲ್ಲಿ ಗಹನವಾದ ವೈಚಾರಿಕತೆಯನ್ನು, ಚಿಂತನೆಯನ್ನು ಹರಳುಗಟ್ಟಿಸಿರುವುದು ಕನ್ನಡ ಸಾಹಿತ್ಯಕ್ಕೆ ಅಪರೂಪದ ಕೊಡುಗೆಯಾಗಿದೆ. ಸಾಮಾನ್ಯವಾಗಿ ಅಂಕಣವನ್ನು ನಿಯತವಾಗಿ ಮತ್ತು ನಿರಂತರವಾಗಿ ಬರೆಯುವಾಗ ಒಂದು ಬಗೆಯ ಏಕತಾನತೆ ಆವರಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಎಷ್ಟೋ ಸಲ ಲೇಖಕರಿಗೂ ಗೊತ್ತಿಲ್ಲದೆಯೇ ಸಿದ್ಧ ಮಾದರಿಯೊಂದು ನಿರ್ಮಾಣವಾಗುತ್ತಿರುತ್ತದೆ. ಆದರೆ ಮೂಡ್ನಾಕೂಡು ಅವರ ಕೃತಿಯ ವಿಷಯದಲ್ಲಿ ಇದರ ಪ್ರಮಾಣ ಕಡಿಮೆ ಎಂದೇ ಹೇಳಬೇಕು. ಯಾಕೆಂದರೆ ವಿಷಯ ವೈವಿಧ್ಯಗಳಿಂದ, ನಿರೂಪಣೆಯ ವಿಧಾನಗಳಿಂದ, ತೆಗೆದುಕೊಳ್ಳುವ ನಿಲುವುಗಳಿಂದ, ಇಲ್ಲಿಯ ಲೇಖನಗಳು ಸಿದ್ಧ ಮಾದರಿಯ ಶೈಲಿ ಮತ್ತು ಏಕರೂಪದ ಚೌಕಟ್ಟನ್ನು ಮೀರಲೆತ್ನಿಸಿವೆ. ಅನೇಕ ಲೇಖನಗಳು ಮಾರ್ಕಸ್ ಅರಿಲಿಯಸ್, ಎಪಿಕ್ಟಿಟಸ್, ಸ್ಪಿನೋಜ್, ಖಲೀಲ್ ಗಿಬ್ರಾನ್ ಅವರ ಚಿಂತನೆಗಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲವು. ಎಲ್ಲಕ್ಕಿಂತ ಮಿಗಿಲಾಗಿ ಬೌದ್ಧ ಚಿಂತನೆಗಳನ್ನು ಬದುಕಿನಲ್ಲಿ ಅಕ್ಷರಶಃ ಪಾಲಿಸುವವರಾದ ಮೂಡ್ನಾಕೂಡು ಅವರು ಕನ್ನಡ ಲೋಕಕ್ಕೆ ಬೌದ್ಧ ಮೀಮಾಂಸೆಯನ್ನು ಕಟ್ಟಿಕೊಡುತ್ತಿರುವ ಮುಖ್ಯ ವಿದ್ವಾಂಸರಾಗಿದ್ದಾರೆ.

*ಲೇಖಕರು ಬೆಳಗಾವಿ ಜಿಲ್ಲೆ ನಂದಗಾಂವ ಊರಿನವರು. ಮೈಸೂರು ವಿವಿಯಿಂದ ಎಂಎ, ಹಂಪಿ ಕನ್ನಡ ವಿವಿಯಿಂದ ಪಿಎಚ್‍ಡಿ ಪದವಿ ಪಡೆದಿದ್ದಾರೆ. ಸಾಹಿತ್ಯ ವಿಮರ್ಶೆ, ಸಂಶೋಧನೆ, ಸಿನಿಮಾ ಅಧ್ಯಯನ, ಫೋಟೋಗ್ರಾಫಿ ಹಾಗೂ ಅನುವಾದದಲ್ಲಿ ಆಸಕ್ತಿ. ಪ್ರಸ್ತುತ ಯಲಹಂಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿಯೋಜನೆ ಮೇರೆಗೆ ಪ್ರಾಧ್ಯಾಪಕರು.

ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ
ಡಾ.ಮೂಡ್ನಾಕೂಡು ಚಿನ್ನಸ್ವಾಮಿ
ಪುಟ: 296, ಮುದ್ರಣ: 2018
ಪ್ರಕಾಶನ: ಲಡಾಯಿ ಪ್ರಕಾಶನ, ಗದಗ.

Leave a Reply

Your email address will not be published.