ಓವರ್ ಹೆಡ್ ಟ್ಯಾಂಕು ಓವರ್ ವೇಟ್ ಓನರು!

-ಎಚ್.ಗೋಪಾಲಕೃಷ್ಣ

ಸರ್ವತಂತ್ರ ಸ್ವಾತಂತ್ರ್ಯ ಅನುಭವಿಸಬೇಕು ಅನ್ನುವ ಆಸೆ ಯಾರುಯಾರಿಗೆ ಇದೆಯೋ ಅವರಿಗೆ ನನ್ನ ಪುಕ್ಕಟೆ ಸಲಹೆ ಅಂದರೆ ಓವರ್ ಹೆಡ್ ಟ್ಯಾಂಕು ನೀವೇ ಸ್ವತಃ ಕ್ಲೀನ್ ಮಾಡಿ!

ಓವರ್ ಹೆಡ್ ಟ್ಯಾಂಕಿನಲ್ಲಿ ಎಷ್ಟು ನೀರಿದೆ ನೋಡಿ, ನಾಳೆ ನೀರು ಬರೋದು ಅಂತ ಆದೇಶ ಬಂತು. ಆದೇಶ ಯಾರಿಂದ ಬಂತು ಎಂದು ವಿಚಾರಿಸದೇ ಓವರ್ ಹೆಡ್ ಟ್ಯಾಂಕು ತಲಾಷಿಸಲು ಉದ್ಯುಕ್ತನಾದೆ.

ಅದಕ್ಕೆ ಮೊದಲು ನಿಮಗೆ ನಮ್ಮ ಮನೆಯ ಟೋಪೋಗ್ರಾಫಿ ವಿವರಿಸಬೇಕು.

ಮೊದಲು ನಲವತ್ತು ವರ್ಷ ಹಿಂದೆ ಮನೆಕಟ್ಟಿದಾಗ ಓವರ್ ಹೆಡ್ ಟ್ಯಾಂಕು, ಸಂಪು ಇಲ್ಲದೇನೆ ಬರೀ ಬೋಳುಮನೆ ಆಗಿತ್ತು. ನೆಲ ಬಗೆದರೆ ಐದು ಅಡಿಗೆ ನೀರು ಸಿಗೋದು, ಇಪ್ಪತ್ತು ಅಡಿ ತೋಡಿ ಒಂದು ಬಾವಿ ಕೂಡ ಮಾಡಿಕೊಂಡಿದ್ದೆವು. ಬಡಾವಣೆ ಬೆಳೀತು, ಕಾವೇರಿ ಬಂತು.

ಕಾವೇರಿ ನಿಧಾನಕ್ಕೆ ವಾರಕ್ಕೆ ಏಳು ದಿನದಿಂದ ನಾಲ್ಕು ದಿನಕ್ಕೆ ಒಮ್ಮೆಗೇ ಇಳಿದು ಕೊನೆಗೆ ನಾವು ‘ಇಳಿದು ಬಾ ತಾಯಿ ಇಳಿದು ಬಾ ತಾಯಿ ಜಲಮಂಡಳಿಯ ನೀರ್ ಮ್ಯಾನ್ ಮೂಲಕ ಬಾ ಬಾ ಬಾ…’ ಹೇಳೋ ಹಾಗೇ ಆದಾಗ ಮನೇಗೆ ಒಂದು ಸಂಪು ಸೇರಿತು, ಸಂಪು ಟ್ಯಾಂಕು ಬೇಕೇಬೇಕೂ ತಾನೆ. ಸಂಪು ಟ್ಯಾಂಕ್ ಗಂಡ ಹೆಂಡತಿ ಹಾಗಂತೆ!

ನೆಲ ಅಂತಸ್ತಿನಿಂದ ಮೊದಲನೇ ಅಂತಸ್ತಿಗೆ ಸಿಮೆಂಟಿನ ಮೆಟ್ಟಲು, ಅದರಿಂದ ಮೇಲಿನ ಅಂತಸ್ತಿಗೆ ಕಾಸಿಲ್ಲ ಅಂತ ಸ್ವಲ್ಪ ಕಡಿಮೆ ದುಡ್ಡಿನ ಕಬ್ಬಿಣದ ಮೆಟ್ಟಲು ಹಾಕಿದ್ದು. ಎರಡನೇ ಮಹಡಿ ಮೇಲೆ ಚಪ್ಪಡಿ ಹಾಕಿ ಅದರ ಮೇಲೆ ಮೂರುತಲಾ ಐನೂರು ಲೀಟರಿನ ಟ್ಯಾಂಕು ಕೂಡಿಸಿರೋದು. ಇದು ಒಂದೇ ಸಲ ಆಗಿದ್ದಲ್ಲ, ಮನೇಲಿ ವರಾತ ಹೆಚ್ಚಾದಾಗ ಒಂದು ರೂಮು ಎರಡು ರೂಮು ಒಂದು ಟಾಯ್ಲೆಟ್ಟು… ಹೀಗೆ ಆಡ್ ಆಡ್ ಆಡ್ ಆಕ್ಕೊಂಡು ಬಂದೋವು!

ಮೂರು ಟ್ಯಾಂಕು ಕಾಸು ಮಿಗಿಸೋಕ್ಕೆ ಅಂತ ಹಳೇದು ಪಳೆದು ಉಪಯೋಗಿಸಿ ಕೊಂಡಿದೀವಿ, ನಾವು ಪ್ರೊಲಿಟೇರಿಯನ್ಸು ಯಾವಾಗಲೂ ಮಿತವ್ಯಯ ಚಿಂತಿಸ್ತೀವಿ.

ಮೊದಮೊದಲು ನಾನು ಮನೆಯವರ ವರಾತ ತಪ್ಪಿಸಿಕೊಳ್ಳಲು ಮೇಲೆ ಹತ್ತಿ ಮೊಬೈಲ್ ಹಿಡಿದು ಕೂತುಬಿಡುತ್ತ ಇದ್ದೆ. ಆದರೆ ಟ್ಯಾಂಕ್ ಜವಾಬ್ದಾರಿ ಈಗ ನನಗೆ ಇಲ್ಲ! ಅದ್ಯಾಕ್ ಇಲ್ಲ ಅಂದರೆ ಅದರ ಹಿನ್ನೆಲೆ ಹೀಗೆ…

ಟ್ಯಾಂಕಿನ ಕ್ಲೀನಿಂಗ್ ನಾನೇ ಮೊದಲ ಸಲ ಮಾಡಿದ್ದೆ. ಅದು ಹೇಗೋ ಅದರೊಳಗೆ ಇಳಿದು ಪೊರಕೆಯಿಂದ ಅಕ್ಕಪಕ್ಕ ಉಜ್ಜಿ ಬಟ್ಟೆಯಿಂದ ಒರೆಸಿ ಕ್ಲೀನ್ ಮಾಡಿದ್ದೆ. ಹೀಗೆ ಮಾಡ್ತಾ ನಾನೇ ಟ್ಯಾಂಕಿನಲ್ಲಿ ಸಿಕ್ಕಿಕೊಂಡು ಬಿಟ್ಟೆ. ಪಕ್ಕದಲ್ಲಿ ಗಾರೆ ಕೆಲಸ ಮಾಡುತ್ತಿದ್ದವರನ್ನ ನಮ್ಮ ಬಾಸು ಹೋಗಿ ಕರಕೊಂಡು ಬಂದಿದ್ದರು.

ಗಾರೆಯವರು ‘ಎನ್ನಡಾ ಇಂದಾಳು ಆನೆ ಮಾದರಿ ಇರ್ಕಾ ಎಪ್ಪಾಡಿ ಎಲವರದಿ’ ಅಂತೇನೋ ಮಾತಾಡಿಕೊಂಡು ಹೇಗೋ ನನ್ನ ಹೊಟ್ಟೆಗೆ ಹಗ್ಗ ಸುತ್ತಿ ಮೇಲಕ್ಕೆ ಎಳೆದುಕೊಂಡಿದ್ದರು. ‘ಚಾರ್ ಏವುಳ ಕೇಜಿ ಇರ್ಕೆ ನೀ’ ಅಂತ ಕೇಳಿದ್ದ.

ಎರಡು ತಿಂಗಳ ಹಿಂದೆ ತೂಕ ನೋಡಿದಾಗ ನೂರಾ ಐವತ್ತು ಇದ್ದೆ ಅಂತ ಹೆಮ್ಮೆಯಿಂದ ಹೇಳಿದ್ದೆ.

ಅವರಲ್ಲೇ ಒಬ್ಬ ನನ್ನನ್ನ ಮೇಲೆ ಎಳೆದದ್ದು ಅವನ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಅದನ್ನ ಇಡೀ ತಮಿಳುನಾಡಿಗೆ, ತಮಿಳು ಮಾತಾಡೋ ಜನ ಇರೋ ಕಡೆ ವೈರಲ್ ಮಾಡಿದ್ದ. ಮೇಲೆ ಎತ್ತಿದ್ದಕ್ಕೆ ಆರು ಕೊಡಿ ಅಂತ ಶುರುಮಾಡಿ, ಒಂದೂವರೆ ಸಾವಿರ ಕಿತ್ತರು ಅಂತ ಒಂದು ವಾರದ ನಂತರ ನಮ್ಮ ಬಾಸು ಅಲವತ್ತುಕೊಂಡಿತ್ತು.

ಟ್ಯಾಂಕಿನ ಒಳಗೆ ನೀರು ಎಷ್ಟಿದೆ ನೋಡಿ ಅಂತ ಹುಕುಂ ಆಗಿತ್ತಲ್ಲಾ?

ಮೊದಲನೇ ಮಹಡಿ ಏರಿದೆ. ಅಲ್ಲಿಂದ ಕಬ್ಬಿಣದ ಮೆಟ್ಟಲು ಹತ್ತಿ ಎರಡನೇದಕ್ಕೆ ಹೋಗಬೇಕು. ಮೂರು ಮೆಟ್ಟಲು ಹತ್ತಿದೆನಾ, ಯಾಕೋ ಮೆಟ್ಟಲು ಜಗ್ತಿದೆ ಅನಿಸಬೇಕೇ? ಇನ್ನೂ ಮೂರು ಮೆಟ್ಟಲು ಹತ್ತಿ ಅಂತಸ್ತಿಗೆ ಸೇರಿದೆ. ಅಲ್ಲಿಂದ ಏಣಿ ಹತ್ತಿ ಟ್ಯಾಂಕು ಇರಿಸಿರೋ ಕಡೆ ಹೋಗಬೇಕು. ಏಣಿ ಹತ್ತಿದೆ. ಕೊನೆ ನಾಲ್ಕು ಮೆಟ್ಟಲು ಇರಬೇಕಾದರೆ ಅಲ್ಲಿನ ಸಿಮೆಂಟ್ ಸ್ಲ್ಯಾಬಿನ ಮೇಲೆ ಎರಡೂ ಕೈ ಊರಿ ಮೇಲಕ್ಕೆ ಬರಬೇಕು. ಹಾಗೇ ಮಾಡಿ ಮೇಲೆ ಬಂದೆನಾ…

ಏಣಿ ಮೆಟ್ಟಲಿನ ಮೇಲೆ ಒಂದೇ ಸಲಕ್ಕೆ ಭಾರ ಬಿಟ್ಟಿದ್ದಕ್ಕೋ ಏನೋ ಏಣಿ ಮೆಟ್ಟಲು ಮೂರು ತುಂಡಾಯಿತು ಮತ್ತು ಪಕ್ಕಕ್ಕೆ ವಾಲಿಕೊಂಡು ಬಿದ್ದುಹೋಯಿತಾ… ಅಷ್ಟರಲ್ಲಿ ನಾನು ಮೇಲೆ ಹತ್ತಿ ಆಗಿತ್ತು. ಃಟessiಟಿg iಟಿ ಜisguise ಅಂತ ಖುಷಿ ಆಯಿತು. ಆದರೆ ಮುಂದಿನ ಪ್ರಾಬ್ಲಮ್ ಶುರು ಆಗಿದ್ದು ಈಗ..

ಇವಾಗ ನಾನು ಇಳಿಯೋದು ಹೇಗೆ?

ಮೇಲಿನಿಂದ ಬಾಸ್‍ನ ಕೂಗಿದರೆ ಅದಕ್ಕೆ ಕಿವಿ ಕೇಳಿಸದೇ ಹೋಯಿತೇ. ಒಂದು ಅರ್ಧ ಗಂಟೆ ಕೂಗಿದರೂ ಕೇಳಿಸದೇ ಇದ್ದಾಗ ಏನು ಮಾಡಬಹುದು? ಸರಿ, ಅದನ್ನೇ ಮಾಡಿದೆ… ತೆಪ್ಪಗೆ ಕೂತೆ.

ಆದರೆ ಇಂತಹ ಪರಿಸ್ಥಿತಿಯಲ್ಲಿ ಯಾವ ಹುಲುಮಾನವ ತಾನೇ ತೆಪ್ಪಗೆ ಕುಳಿತಾನು? ಚಡಪಡಿಕೆ ಶುರುವಾಯಿತು. ಇನ್ನೊಂದು ಗೊತ್ತಾ? ಇಂತಹ ಸಮಯದಲ್ಲೇ ನಿಮಗೆ ನೀರಡಿಕೆ, ಹೊಟ್ಟೆಯಲ್ಲಿ ಒತ್ತಡ, ಮೊಬೈಲ್ ನೋಡಬೇಕು ಅನ್ನುವ ಹಠ, ಹಸಿವು ಇದೆಲ್ಲಾ ಒತ್ತರಿಸಿಕ್ಕೊಂಡು ಬರುತ್ತೆ.ಇಂತಹ ಹಲವಾರು ಸಮಸ್ಯೆಗಳನ್ನು ನನ್ನ ಜೀವಮಾನದಲ್ಲಿ ಎಷ್ಟೋ ಸಲ ಅನುಭವಿಸಿರುವುದರಿಂದ ನಾನು ಹತ್ತು ಹಲವು ಪಾಠ ಕಲಿತಿದ್ದೇನೆ. ಅದರ ಪ್ರಕಾರ ಎಂತಹ ಸಾಯುವಂತಹ ಒತ್ತಡ ಇದ್ದರೂ ಹತ್ತು ಸಲ ದೀರ್ಘ ಉಸಿರು ಎಳೆದುಕೊಳ್ಳಬೇಕಂತೆ, ನಂತರ ಲಂಬಾ ಲಂಬಾ ಅಂಗಾತ ಹಾ ದಾಮೋದರಾ, ಹಾ ಚಂದ್ರಶೇಖರ, ಹಾ ಕೃಷ್ಣಾ, ಹಾ ರಂಗನಾಥ… ಅಂತ ದೇವರ ಮೇಲೆ ಭಾರ ಹಾಕಿ  ಬಿದ್ದುಕೋಬೇಕಂತೆ…

ನಾನು ಅದನ್ನೇ ಮಾಡಿದ್ದು. ಲಂಬಲಂಬಾ ಮಲಗಿದೆನಾ ಮುಖಕ್ಕೆ ಹೊಡಿತಿರೋ ಬಿಸಿಲು, ಬೀಸುತ್ತಿದ್ದ ತಂಗಾಳಿ, ದೂರದ ಮರದ ಮೇಲೆ ಕೂತು ಗಿಡಗಂಟೆಗಳ ಕೊರಳೊಳಗಿನ ಹಕ್ಕಿ ಹಾಡು…

ಹೀಗಿದ್ದಾಗ ಯಾವ ಜೀವಂತ ಪ್ರಾಣಿಗೆ ತಾನೇ ಮಂಪರು ಬರೋದಿಲ್ಲ? ಮನಸ್ಸಿಗೆ ಮಂಪರು ಆವರಿಸಿತು. ನಿದ್ದೆಗೆ ಜಾರಿದೆ ಅಂತ ಕಾಣುತ್ತೆ… ಅದೆಷ್ಟು ಹೊತ್ತು ಹಾಗೇ ಬಿದ್ದಿದ್ದೆನೋ ಅರಿವಿಲ್ಲ.

ಮೈಮೇಲೆ ಜೋರು ಮಳೆ ಸುರಿದ ಹಾಗಾಯಿತು. ಕಷ್ಟಪಟ್ಟು ಕಣ್ಣು ಬಿಟ್ಟೆ. ಎದುರಿಗೆ ಕಂಡಿದ್ದೇನು?

ಸುತ್ತ ಮುತ್ತ ಮನೆಗಳ ಮೇಲೆ ಜನ ಸಾವಿರಗಟ್ಟಲೆ ನಿಂತಿದಾರೆ. ಕೆಲವರ ಕೈನಲ್ಲಿ ದೊಡ್ಡ ಉದ್ದನೆಯ ನೀರಿನ ರಬ್ಬರ್ ಪೈಪು ಇದೆ. ಮತ್ತೊಂದು ಮನೆ ಮೇಲೆ ಮನೆ ಹತ್ತಿರದ ಭಜನಾ ಮಂಡಳಿಯ ಭಕ್ತರು ಮೃದಂಗ, ಡೋಲು, ನಾಗಸ್ವರ, ಖಂಜಿರ, ಹಾರ್ಮೋನಿಯಮ್ಮು ತಗುಲಿಹಾಕಿಕೊಂಡು ಬೆವರು ಹರಿಸುತ್ತ ನಿಂತಿದಾರೆ…

‘ಎದ್ದರು ಹೋ ಹೋ ಹೋ’ ಅಂತ ಕೂಗು ಕೇಳಿಸಿತು. ಗುಂಪಿನಲ್ಲಿ ಎಲ್ಲೋ ನನ್ನಾಕೆ ಮುಖ ಕಾಣಿಸಿತು. ಪಕ್ಕದ ಮನೆ ಮೇಲೆ ಸೊಸೆ ಮಗ ಕಾಣಿಸಿದರು. ಇನ್ನೊಂದು ಕಡೆ ಮಗಳು ಅಳಿಯ ಕೂಸು ಎತ್ತಿಕೊಂಡು ನಿಂತಿದ್ದು ಕಾಣಿಸಿತು.

‘ಸಾರ್, ಗಾಬರಿಯಾಗಬೇಡಿ’ ಅಂತ ಹೇಳುತ್ತಾ ಹೇಳುತ್ತಾ ಆರೇಳು ಜನ ಜಟ್ಟಿಗಳು ಮೇಲಕ್ಕೆ ಬಂದರು. ಬೆಡ್ ಶೀಟು ಹೊದಿಸಿದರು. ನಿಧಾನ ಅಂತ ಮೇಲಕ್ಕೆ ಎಬ್ಬಿಸಿದರು.

ಪಕ್ಕದಲ್ಲೇ ಏಣಿ ಇದೆ ಇಳಿಯೋದಿಕ್ಕೆ ಆಗುತ್ಯೇ…? ಅಂದರು.

ಕೂತು ಏಣಿ ಹಿಡಿದು ಇಳಿಯಲು ಯತ್ನಿಸಿದೆ. ಕೈಕಾಲು ಮೈ ನಡುಗಿತು. ‘ಬೇಡ ಬಿಡಿ ಬೇರೆ ಪ್ಲಾನ್ ಮಾಡೋಣ’ ಅಂದ ಅವರಲ್ಲಿ ಒಬ್ಬ.

‘ಅಲ್ಲಿ ಐವತ್ತು ಮಹಡಿಯ ಫ್ಲಾಟ್ ಕಟ್ಟುತ್ತಾ ಇದಾರಲ್ಲ ಅವರ ಹತ್ತಿರ ದೊಡ್ಡದೊಡ್ಡ ಟಾರುಪಾಲು ಇರುತ್ತೆ, ಇಸ್ಕೊಂಡು ಬನ್ನಿ. ಹೀಗಾಗಿದೆ ಯಜಮಾನರು ಮೇಲೆ ಸಿಕ್ಕಿಹಾಕ್ಕೊಂಡಿದಾರೆ, ತುಂಬಾ ತೂಕ, ಹತ್ತು ಜನರ ತೂಕ ಒಬ್ಬರೇ ಇದಾರೆ…’ ಅಂತ ಹೇಳಿ ಕೊಡ್ತಾರೆ ಅಂತ ಯಾರೋ ಯಾರಿಗೋ ಹೇಳಿದರು. ಯಾರೋ ಒಂದು ಡಜನ್ ಎಳನೀರು ತಂದರು, ಅದನ್ನ ಕೆತ್ತಿ ಕುಡೀರಿ ಸಾರ್ ಅಂದರು, ಕುಡಿದೆ.

ಇನ್ಯಾರೋ ಎರಡು ಲೀಟರಿನ ಜ್ಯುಸ್ ಬಾಟಲಿನ ಕ್ರೇಟ್ ತಂದ. ಜ್ಯುಸ್ ಬಾಟಲು ತೆಗೆದು ಕುಡೀರಿ ಸಾರ್ ಅಂದರು, ಕುಡಿದೆ.

ಅವರಿಗೆ ಎಳನೀರು ಜ್ಯುಸೂ ಕೊಡಬೇಡ್ರೋ… ಅವರಿಗೆ ಶುಗರ್ ಇದೆ ಅನ್ನುವ ಹೆಂಡತಿ ದನಿ ಎಲ್ಲೋ ಕೇಳಿಸುತ್ತಿತ್ತು…

ಮತ್ತೆ ನಿದ್ದೆ ಬಂದ ಹಾಗಾಯಿತು, ಕಣ್ಣು ಮುಚ್ಚಿತು…

*

ಟ್ಯಾಂಕಿನಲ್ಲಿ ನೀರು ಎಷ್ಟಿದೆ ಅಂತನೋಡಲು ಹೋದವನು ಎಷ್ಟು ಹೊತ್ತಾದರೂ ಬಂದಿಲ್ಲ ಅಂತ ಹೆಂಡತಿಗೆ ಏಳನೇ ಸೀರಿಯಲ್‍ನ ಕೊನೆಯಲ್ಲಿ ಅನ್ನಿಸಿತಂತೆ. ಮೇಲ್ಗಡೆನೆ ಫೋನು ಹಿಡಕೊಂಡು ಕೂತಿರುತ್ತೆ ದೆವ್ವ ಅಂದುಕೊಂಡು ಫೋನು ಮಾಡಿದಳು. ಫೋನು ಅಲ್ಲೇ ಗಣ ಗಣ ಅಂದಿತು. ಫೋನು ಇಲ್ಲೇ ಬಿಟ್ಟು ಹೋಗಿದೆ ಅಂತ ಅಂದುಕೊಂಡು ಆಚೆ ಎದ್ದು ಮಹಡಿ ಹತ್ತಿ ಬಂದರೆ ಏಣಿ ಮುರಿದು ಬಿದ್ದಿದೆ.

ಏನಾಯಿತು ಇದಕ್ಕೆ, ಮುಗುಚಿಕೊಂಡು ಯಾರಮನೆ ಸಂದಿಲಾದರೂ ಇದು ಬಿದ್ದುಬಿಟ್ಟಿದೆಯೇನೋ ಅಂತ ಗಾಬರಿಯಿಂದ ಸುತ್ತಮುತ್ತಲಿನ ಮನೆ ಹಿತ್ತಲಿಗೆ ಹೋಗಿ ಹುಡುಕಿದಳಂತೆ. ಇವಳ ಪರದಾಟ ನೋಡಿ ಏನಾಯ್ತು ಏನಾಯ್ತು ಏನಾಯ್ತು ಅಂತ ಸುತ್ತಮುತ್ತಲಿನವರು ಕೇಳಿದರು. ಅಯ್ಯೋ ಮೇಡಂ ಇರಿ ಮೇಲೇನಾದರೂ ಇದಾರಾ ನೋಡೋಣ ಅಂತ ಕೆಳಗಿನಿಂದಲೇ ಶಕ್ತಿ ಎಲ್ಲಾ ಬಿಟ್ಟು ಕೂಗಿದರು. ಉತ್ತರ ಇಲ್ಲ. ಆಮೇಲೆ ಒಬ್ಬರು ಅವರ ಮಾಡಿ ಹತ್ತಿ ನೋಡಿದರೆ ನಾನು ಅಲ್ಲಿ ಬಿದ್ದುಕೊಂಡು ಗೊರಕೆ ಹೊಡೀತಿದ್ದೆ. ಮೊದಲು ಅದನ್ನ ಎಬ್ಬಿಸೋಣ ಅಂತ ನಮ್ಮಾಕೆ ಐಡಿಯಾ ಕೊಟ್ಟಳಂತೆ. ಸರಿ ನನ್ನನ್ನ ಎಬ್ಬಿಸೋಕ್ಕೆ ಕೂಗಿದರು, ನನಗೆ ಎಚ್ಚರ ಆಗಿಲ್ಲ. ಆಮೇಲೆ ಮನೆ ಹತ್ತಿರದ ದೇವಸ್ಥಾನದ ಭಜನೆ ಮಂಡಳಿ ಅವರು ಅವರ ಹತ್ತಿರ ಇರೋ ಎಲ್ಲಾ ವಾದ್ಯಗಳನ್ನೂ ತಂದು ಷಡ್ದದಲ್ಲಿ ಬಾರಿಸಿದರಂತೆ, ಎಚ್ಚರ ಆಗಲೇ ಇಲ್ಲವಂತೆ ಕುಂಭಕರ್ಣನಿಗೆ… ಅಂದರೆ ನನಗೆ.

ಇನ್ನೊಬ್ಬರು ಮತ್ತೊಂದು ಉಪಾಯ ಸಲಹೆ ಮಾಡಿದರು. ಪಕ್ಕದ ಮನೆ ಮೇಲಿಂದ ನೀರಿನ ಪೈಪ್‍ನಲ್ಲಿ ನನ್ನ ಮೇಲೆ ನೀರು ಬಿಡೋದು, ಬದುಕಿದ್ದರೆ ದೇಹ ಮಿಸುಕಾಡುತ್ತೆ… ಅಂತ!

ಕೊನೇ ಮನೇಲಿ ಇನ್ನೊಂದು ಟ್ಯಾಂಕು ನೀರಿದೆ. ಅದನ್ನೂ ಖಾಲಿ ಮಾಡೋಣ…. ಏಳಲಿಲ್ಲ ಅಂದರೆ ಪೊಲೀಸ್ರನ್ನ ಕೂಗೋಣ ಅಂತ ಪೈಪಿನಲ್ಲಿ ನೀರು ಹೊಡೆದರಂತೆ. ಈಗ ನೀರು ಹೊಡೆದವನು ಮೊದಲು ಫೈರ್ ಆಫೀಸಲ್ಲಿ ಇದ್ದೋನು. ನೀರು ಹೇಗೆ ಹೊಡಿಬೇಕು, ಅನ್ನುವುದರ ಬಗ್ಗೆ ಅಪಾರವಾದ ತಿಳಿವಳಿಕೆ ಇವನಿಗೆ. ಆಗಲೇ ನನ್ನ ದೇಹ ಮಿಸುಕಾಡಿದ್ದು.

ಇಷ್ಟು ದಪ್ಪ ಇರೋರಿಗೆ ಏಣಿಯಿಂದ ಇಳಿಸೋದು ಕಷ್ಟ ಅನ್ನಿಸಿತು. ಫೈರ್ ಬ್ರಿಗೇಡ್ ಕರೆಸೋಣ ಅಂತ ಯಾರೋ ಹೇಳಿದರು. ಫೈರ್‍ನವರು ಬಂದರೆ ಮನೆ ಅಡ್ಡಾ ತಿಡ್ಡಿ ಕಟ್ಟಿದೀರಿ, ಫೈರ್ ಗಾಡಿ ಹೋಗೋಕ್ಕೆ ಆಗುಲ್ಲಾ ಅಂತ ಮನೆಗಳ್ನ ಒಡೆದು ಹಾಕ್ತಾರೆ ಅಂತ ಫೈರ್ ಬ್ರಿಗೇಡ್ ಕರೆಸೋ ಯೋಚನೆ ಕೈ ಬಿಟ್ಟು ಬೇರೆ ಯೋಚನೆ ಮಾಡಿದರು.

ಟಾರ್ಪಾಲು ತಂದು ಅದನ್ನ ಪೇರಿಸಿ ಪೇರಿಸಿ ಪೇರಿಸಿ ಎಂಟಡಿ ಎತ್ತರ ಮಾಡಿದರಂತೆ. ಆಮೇಲೆ ಮೆಲ್ಲ ಮೆಲ್ಲಗೆ ನನ್ನನ್ನು ಮೇಲಿಂದ ಒಂದನೇ ಅಂತಸ್ತಿನ ರೂಫಿಗೆ ನೂಕಿ ತಳ್ಳಿದರಂತೆ. ನಾನು ಉರುಳಿಕೊಂಡು ಕೆಳಗೆ ಬಂದಮೇಲೆ ಮಹಡಿಗೂ ಇದೇ ಪ್ರಿನ್ಸಿಪಲ್ ಉಪಯೋಗಿಸಿ ತಳ್ಳಿದರಂತೆ.

ಮತ್ತೆ ಆರು ಗಂಟೆಕಾಲ ಬಿದ್ದಿದ್ದರೂ ಏಳಲಿಲ್ಲ ಅಂತ ಡಾಕ್ಟರನ್ನ ಮನೇಗೆ ಕರಕೊಂಡುಬಂದರು. ಡಾಕ್ಟರು ಸ್ಟೆತೋಸ್ಕೊಪು ಇಟ್ಟು ಮೈಯೆಲ್ಲಾ ತಡಕಾಡಿ, ‘ಬದುಕಿದ್ದಾರೆ ಅಮ್ಮ, ಒಂದು ನಿಗಿನಿಗಿ ಕೆಂಡ ತಂದು ಹೊಟ್ಟೆ ಮೇಲಿಡಿ ರಾತ್ರಿ ಒಂಬತ್ತಕ್ಕೆ.. ಆಗಲೂ ಏಳಲಿಲ್ಲ ಅಂದರೆ ಬೇರೆ ಪ್ಲಾನ್ ಮಾಡೋಣ’ ಅಂತ ಹೇಳಿ ಫೀಸ್ ಇಸ್ಕೊಂಡು ಹೋದರು, ಆಗ ಸಂಜೆ ಐದೂವರೆ.

ಎಂಟೂವರೆವರೆಗೂ ಏಳ್ತೀನಿ ಅಂತ ಕಾದರು. ಆಮೇಲೆ ಪಕ್ಕದ ರಸ್ತೆ ಐರನ್ ಅಂಗಡಿಗೆ ಹೋಗಿ ಐರನ್ ಮಾಡುವ ಕಾಂತಿಮತಿ ಹತ್ತಿರ ಕೆಂಡ ತಂದರು.

‘ಕೊಳ್ಳಿ ತಂದು ನಿಮ್ಮ ತಲೆಗೆ ಬಿಸಿ ತಾಗಿಸಿದೆವು, ನಿಮಗೆ ಎಚ್ಚರ ಆಯಿತು… ಎಂಥ ಘಟೋತ್ಕಜನ ವಂಶ ನಿಮ್ಮದು… ಟಾರ್ಪಾಲು ತಂದವನು ನಾಲ್ಕು ಸಾವಿರ ಇಸ್ಕೊಂಡ, ನಾಲ್ಕು ಮನೆ ನೀರು ಖಾಲಿ ಆಯ್ತಲ್ಲಾ ಅವರ ಮನೇಗೆ ಟ್ಯಾಂಕರ್ ನೀರು ತರಿಸಿದೆ…’ ಅಂತ ನನ್ನಾಕೆ ಉತ್ತರಾರ್ಧದ ಕಥೆಯನ್ನು ನಾನು ಪೂರ್ತಿ ಎಚ್ಚರವಾಗಿ ಆರನೇ ಸಲ ತಟ್ಟೆಲಿ ಉಪ್ಪಿಟ್ಟು ಹಾಕ್ಕೊಂಡು ತಿನ್ನುತ್ತಿರಬೇಕಾದರೆ ವಿವರಿಸಿದಳು.

ಇದರ ಅಂದರೆ ನಾನು ಟ್ಯಾಂಕ್‍ನಲ್ಲಿ ನೀರು ಎಷ್ಟಿದೆ ಎಂದು ನೋಡಲು ಹೋದ ನಂತರದ ಎಫೆಕ್ಟುಗಳು…

ಇನ್ನುಮುಂದೆ ನಾನು ಟ್ಯಾಂಕಿನಲ್ಲಿ ನೀರು ಎಷ್ಟಿದೆ ಎಂದು ನೋಡಲೇಬಾರದು.

ಹೊಸಾ ನಿಕ್ ನೇಮುಗಳು ನಮ್ಮ ಸುತ್ತಮುತ್ತ ಹೆಂಗಸರು ಕೊಟ್ಟಿರೋದು… ಕುಂಭಕರ್ಣ, ಘಟೋತ್ಕಜ, ಜರಾಸಂಧ, ರಾವಣ, ನಿದ್ದೆ ಹಣಮಂತ್… ಹೀಗೆ.

ರಸ್ತೇಲಿ ಹಾಲುಪಾಲು ತರಲು ಹೋದರೆ ಕೂಲಿ ಹೆಂಗಸರು ಗಂಡಸರು ಸುತ್ತಲೂ ಮುತ್ಕೋತಾರೆ. ‘ಎನ್ನಾ ಚಾರ್ ಎಪ್ಪಡಿ ಇರುಕ್ಕೆ ವಾ ಕಾಪಿ ಚಾಪೆಟ್ಲಾ’ ಅಂತ ಕೂಗುತ್ತಾರೆ. ‘ಇಟ್ಟಲಿ ಚಾ ಪಾ ಟ್ಲಾ ವಾ’ ಅಂತ ಕೂಲಿಯವರು ಪ್ರೀತಿ ತೋರಿಸ್ತಾರೆ. ಟಾರ್ಪಾಲು ನೀಡಿ ಸಹಾಯ ಮಾಡಿದ್ದ ಸೇಠು, ‘ಅಯ್ಯೋ ಕ್ಯಾ ಸಾಬ್ ಭಗವಾನ್ ಬಚ್ ಗಯಾ’ ಅಂತ ತಬ್ಬಿಕೊತಾನೆ…

…ಒಟ್ಟಿನಲ್ಲಿ ನಮ್ಮ ಏರಿಯಾದಲ್ಲಿ ಈಗ ನಾನು ಬಾರಿ ಪಾಪ್ಯುಲರು!

ಈಗ ನಾನು ಕೆಳಗಡೆ ಮನೇಲೇ ಕೂತು ಅದೆಷ್ಟು ಹೊತ್ತು ಬೇಕಾದರೂ ಫೋನು ನೋಡಿಕೊಂಡು ವಾಟ್ಸಾಪು ಮಾಡಿಕೊಂಡು ಚಾಟ್ ಮಾಡುತ್ತಾ… ನನ್ನ ಜಾಲ ತಾಣದಲ್ಲಿ ನಿರಾತಂಕನಾಗಿ ‘ಅರಸನ ಅಂಕೆ ದೆವ್ವದ ಕಾಟ’ ಇಲ್ಲದೇ ಮುಳುಗಿರೋದು, ಸರ್ವತಂತ್ರ ಸ್ವಾತಂತ್ರ ಅನುಭವಿಸುತ್ತಿರುವುದು!

*ಲೇಖಕರು ಬಿಇಎಲ್ ಸಂಸ್ಥೆಯ ನಿವೃತ್ತ ನೌಕರರು; ಹಾಸ್ಯ ಬ್ರಹ್ಮ ಟ್ರಸ್ಟ್ ರೂವಾರಿಗಳಲ್ಲಿ ಒಬ್ಬರು. ಮೂವತ್ತಕ್ಕೂ ಮೀರಿ ಪುಸ್ತಕಗಳು ಬೆಳಕು ಕಂಡಿವೆ. ‘ಕಳೆದ ನಾಲ್ಕು ದಶಕಗಳಿಂದ ಗೀಚುತ್ತಿದ್ದರೂ ಇನ್ನೂ ಬರವಣಿಗೆ ಇಂಪ್ರೂವ್ ಆಗಿಲ್ಲ’ ಅಂತ ತಮ್ಮನ್ನೇ ಹಾಸ್ಯಕ್ಕೀಡು ಮಾಡಿಕೊಳ್ಳುತ್ತಾರೆ.

Leave a Reply

Your email address will not be published.