ಔಷಧಿ ಸೂಚಿಸುವುದು ವೈದ್ಯರ ಕೆಲಸವಲ್ಲ!

ಗರಿಷ್ಟ ಲಾಭದಿಂದಾಗಿ ಔಷಧ ಕಂಪನಿಗಳು ಸಹ ವೈದ್ಯರಿಗೆ ಕಮೀಷನ್ ನೀಡುತ್ತವೆ. ಕಾನ್ಫರೆನ್ಸ್ ಹೆಸರಿನಲ್ಲಿ ಮೋಜುಮಸ್ತಿಗಾಗಿ ಪುಸಲಾಯಿಸುತ್ತವೆ. ಹೀಗಾಗಿ ಔಷಧ ಮಾರಾಟವೂ ವೈದ್ಯರ ನಿಯಂತ್ರಣದಲ್ಲಿದೆ.

ಇಂದಿನ ಬದಲಾದ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರ, ಸೇವೆಯ ಬದಲಾಗಿ ಸುಲಿಗೆಯಾಗಿ ಮಾರ್ಪಟ್ಟಿದೆ. ಆರೋಗ್ಯ ತಪಾಸಣೆಯ ನೆಪದಲ್ಲಿ ಹಣ ಮಾಡಲಾಗುತ್ತಿದೆ. ಲ್ಯಾಬೋರೇಟರಿಗಳಿಂದ ಶೇಕಡಾ 70 ರಷ್ಟು ಕಮೀಷನ್ ವೈದ್ಯರಿಗೆ ದೊರೆಯುತ್ತಿದೆ. ಸಿಟಿ ಸ್ಕ್ಯಾನ್ ಗೆ ರೆಡಿಯಸ್ ಜಾಸ್ತಿ ಎಂದು ಹೇಳಿ ಎಮ್.ಅರ್.ಐ. ಮಾಡಿಸಲು ಹೇಳುತ್ತಾರೆ. ವೈದ್ಯರು ತಾವು ಸೂಚಿಸುವ ಕೇಂದ್ರದಲ್ಲಿ ಎಮ್.ಅರ್.ಐ. ಮಾಡಿಸಿಕೊಂಡು ಹೋಗದಿದ್ದರೆ, ರಿಪೊರ್ಟ್ ಸರಿಯಾಗಿಲ್ಲ ಎಂದು ತಿರಸ್ಕರಿಸುತ್ತಾರೆ. ರಕ್ತ, ಕಫ, ಶುಗರ್, ಕೊಲೆಸ್ಟರಾಲ್, ಎಕ್ಸರೇ ಎಲ್ಲವೂ ವೈದ್ಯರು ಸೂಚಿಸುವ ಪರೀಕ್ಷಾ ಕೇಂದ್ರದಲ್ಲಿಯೇ ಆಗಬೇಕು. ಇ.ಸಿ.ಜಿ., ಟ್ರೆಡ್ ಮಿಲ್, ಎಂಜಿಯೊಗ್ರಾಮ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಸೋಜಿಗ ಮತ್ತು ಗಂಭೀರ ಸಂಗತಿ ಎಂದರೆ ಇದೇ ಪರೀಕ್ಷೆಗಳನ್ನು ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಗಳಲ್ಲಿ ಮಾಡಿಸಿದರೆ ಅರ್ಧಕ್ಕಿಂತಲೂ ಕಡಿಮೆ ವೆಚ್ಚ ತಗಲುತ್ತದೆ. ಹೆಲ್ತ್ ಚೆಕಪ್ ಹೆಸರಿನಲ್ಲಿ ಇಂತಹ ಆಸ್ಪತ್ರೆಗಳು ಭಾರಿ ರಿಯಾಯಿತಿಯಲ್ಲಿ ಈ ಪರೀಕ್ಷೆಗಳನ್ನು ಮಾಡುತ್ತವೆ. ಹೀಗಾಗಿ ರೋಗವೇ ಇಲ್ಲದ ಹಲವರು, ರೋಗ ಇರಬಹುದು ಎಂಬ ಅನುಮಾನದಿಂದಲೇ ಇಂತಹ ಪರೀಕ್ಷೆಗಳನ್ನು ಮಾಡಿಸಿಕೊಂಡು ನಿಟ್ಟುಸಿರುಬಿಡುತ್ತಾರೆ.

ಮಾನವನ ದೇಹದಲ್ಲಿ ಕ್ಯಾನ್ಸರಕಾರಕ, ಕ್ಷಯರೋಗದ ಅಥವಾ ಇತರ ಬ್ಯಾಕ್ಟೆರಿಯಾಗಳು ಇರುವುದು ಸಾಮಾನ್ಯ. ಏಷ್ಯಾ ಖಂಡದಲ್ಲಿ ಟಿ.ಬಿ. ಬ್ಯಾಕ್ಟೆರಿಯಾ ಇಲ್ಲದ ಪ್ರಾಣಿಗಳೇ ಇರಲಾರವು. ಹಲವು ರೋಗಗಳಿಗೆ ಅನುಮಾನವೇ ರಹದಾರಿ. ಕ್ಯಾನ್ಸರ್ ಇದೆ ಎಂದ ಕೂಡಲೇ ಮನುಷ್ಯ ಜರ್ಜಿತನಾಗುತ್ತಾನೆ. ರೇಡಿಯೋಥೇರೊಪಿ, ಕಿಮೋಥೇರೊಪಿ ಆರಂಭವಾಗಿಬಿಡುತ್ತದೆ. ಇದರಿಂದ ಸತ್ತ ಸೆಲ್ಸ್ ಗಳ ಜೊತೆ ಜೀವ ಇರುವ ಸೆಲ್ಸ್‍ಗಳು ನಾಶವಾಗುವ ಅರಿವಿದ್ದರೂ ಈ ಚಿಕಿತ್ಸೆ ಮುಂದುವರಿಯುತ್ತಿರುತ್ತದೆ. ಕ್ಯಾನ್ಸರ್‍ಗೆ ಮೂಲ ಕಾರಣ ತಂಬಾಕು ಸೇವನೆ ಮತ್ತು ಮದ್ಯಪಾನ ಎಂಬುದು ತಿಳಿದಿದ್ದರೂ ಇವುಗಳನ್ನು ಸರಕಾರ ನಿಷೇಧಿಸುವುದಿಲ್ಲ, ಗಾಂಜಾ ಗಿಡದ ಅಂಶದಿಂದ ಕ್ಯಾನ್ಸರ್ ಗುಣಪಡಿಸಬಹುದೆಂದು ವೈದ್ಯ ವಿಜ್ಞಾನಿಗಳು ಹೇಳುತ್ತಿದ್ದರೂ ಅನ್ವೇಷಣೆಗೆ ಅವಕಾಶವಾಗುತ್ತಿಲ್ಲ. ಆದರೆ ಗಾಂಜಾವನ್ನು ಬಳಸಿ ಕ್ಯಾನ್ಸರ್‍ಗೆ ಚಿಕಿತ್ಸೆ ನೀಡುವ ದೇಶಗಳನ್ನು ಹುಡುಕಿಕೊಂಡು ಹೋಗಿ ರಾಜಕಾರಣಿಗಳು ಚಿಕಿತ್ಸೆ ಪಡೆದುಕೊಂಡು ಬರುತ್ತಾರೆ. ಆರೋಗ್ಯ ರಕ್ಷಣೆಗೆ ಸರಕಾರ ಮಿಲಿಯನ್ ಗಟ್ಟಲೇ ಹಣ ಖರ್ಚು ಮಾಡುತ್ತಿದ್ದರೂ ಔಷಧಗಳ ಬೆಲೆಗಳನ್ನು ನಿಯಂತ್ರಿಸುತ್ತಿಲ್ಲ. ಔಷಧಿ ತಯಾರಕರು ಸರಕಾರಗಳನ್ನೇ ನಿಯಂತ್ರಿಸುವ ಮಟ್ಟಕ್ಕೆ ತಲುಪಿದ್ದಾರೆ. ಅವರ ಲಾಬಿ ಕೂಡ ಅಪಾಯಕಾರಿ ಮಟ್ಟ ಮುಟ್ಟಿದೆ.

ಇಲ್ಲಿ ಉಲ್ಟಾಪಲ್ಟಾ !

ಹೊರ ದೇಶಗಳಲ್ಲಿ ಫಾರ್ಮಾಸಿಸ್ಟಗಳೇ ವೈದ್ಯರಿಂದ ರೋಗದ ಬಗ್ಗೆ ಮಾಹಿತಿ ಪಡೆದು ರೋಗಿಗಳಿಗೆ ಔಷಧ ಸೂಚಿಸುತ್ತಾರೆ. ಆದರೆ ನಮ್ಮ ದೇಶದಲ್ಲಿ ಎಲ್ಲವೂ ಉಲ್ಟಾಪಲ್ಟಾ ವೈದ್ಯರು ಸೂಚಿಸಿದ ಔಷಧಗಳನ್ನು ಮಾತ್ರ ಫಾರ್ಮಾಸಿಸ್ಟಗಳು ವಿತರಿಸಬೇಕು. ಔಷಧಶಾಸ್ತ್ರ ಫಾರ್ಮಾಸಿಸ್ಟಗಳಿಂದಲೇ ಹುಟ್ಟಿ, ಮಾರಾಟವಾಗುತ್ತದೆಯಾದರೂ ಅವರನ್ನು ನಿರ್ಲಕ್ಷಿಸಲಾಗುತ್ತಿದೆ.

ವಿಪರ್ಯಾಸವೆಂದರೆ ಫಾರ್ಮಸಿ ಪದವೀಧರರ ಬದಲಾಗಿ ಬೇರೆಯವರೇ ಫಾರ್ಮಾಸಿಸ್ಟಗಳ ಹೆಸರಿನಲ್ಲಿ ಔಷಧ ಮಾರಾಟಕ್ಕೆ ಬರುತ್ತಿದ್ದಾರೆ. ಇದು ಗಂಭೀರವಾದ ಅಪಾಯ. ಹೊರ ದೇಶದಲ್ಲಿ ಫಾರ್ಮಸಿಸ್ಟಗಳಿಗೆ ಪ್ರಾಧಾನ್ಯವಿದ್ದರೆ, ಭಾರತದಂತಹ ದೇಶದಲ್ಲಿ ವೈದ್ಯರಿಗೆ ಪ್ರಾಧಾನ್ಯವಿದೆ. ಔಷಧ ವಿಜ್ಞಾನ ಅಭ್ಯಾಸ ಮಾಡಿದವರು ಔಷಧ ಸೂಚಿಸುವಂತಿಲ್ಲ. ವೈದ್ಯಕೀಯ ವಿಜ್ಞಾನ ಕಲಿತವರೇ ಔಷಧ ಸೂಚಿಸುತ್ತಾರೆ. ಅದನ್ನೆ ಬಾಯಿಬಿಡದೆ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲಿದೆ. 

ಗರಿಷ್ಟ ಲಾಭದಿಂದಾಗಿ ಔಷಧ ಕಂಪನಿಗಳು ಸಹ ವೈದ್ಯರಿಗೆ ಕಮೀಷನ್ ನೀಡುತ್ತವೆ. ಕಾನ್ಫರೆನ್ಸ್ ಹೆಸರಿನಲ್ಲಿ ಮೋಜುಮಸ್ತಿಗಾಗಿ ಪುಸಲಾಯಿಸುತ್ತವೆ. ಹೀಗಾಗಿ ಔಷಧ ಮಾರಾಟವೂ ವೈದ್ಯರ ನಿಯಂತ್ರಣದಲ್ಲಿದೆ. ಈ ಕ್ಷೇತ್ರ ಇಷ್ಟು ಹದಗೆಡಲು ಪದವೀಧರ ವೈದ್ಯರಿಗಿಂತ ನಕಲಿ ವೈದ್ಯರ ಪಾಲು ಹೆಚ್ಚಾಗಿದೆ. ಪ್ರಪಗಂಡಾ ಕಮ್ ಡಿಸ್ಟ್ರಿಬ್ಯೂಷನ್ ಹೆಸರಿನಲ್ಲಿ ಹಲವು ಕಂಪನಿಗಳು, ನಕಲಿ ಮತ್ತು ಅನರ್ಹ ವ್ಯಕ್ತಿಗಳು ನಡೆಸುವ ವೈದ್ಯಕೀಯ ವೃತ್ತಿನಿರತರಿಗೆ ಗಾಳಹಾಕಿ ಅವರನ್ನು ಬ್ಯಾಂಕಾಕ್, ಥಾಯಲ್ಯಾಂಡನಂತಹ ದೇಶಗಳಿಗೆ ಕರೆದುಕೊಂಡುಹೋಗಿ ಮಜಾ ಮಾಡಿಸಿ, ಲಾಭ ಗಿಟ್ಟಿಸಿಕೊಳ್ಳುತ್ತಿವೆ; ರೋಗಿಗಳಿಗೆ ಔಷಧಿಗಳ ಹೆಸರಿನಲ್ಲಿ ವಿಷ ಉಣಿಸಲಾಗುತ್ತಿದೆ.

ನಾವು ಸೇವಿಸುವ ಔಷಧಗಳ ಅಡ್ಡ ಪರಿಣಾಮಗಳಿಂದಲೇ ದೇಹದಲ್ಲಿ ಹೊಸಹೊಸ ರೋಗಗಳು ಹುಟ್ಟಿಕೊಳ್ಳುತ್ತಿವೆ. ಇದೇ ಕಾರಣಕ್ಕೆ ಮತ್ತಷ್ಟು ಔಷಧಗಳನ್ನು ಅನವಶ್ಯಕವಾಗಿ ರೋಗಿ ಸೇವಿಸಬೇಕಾಗುತ್ತದೆ. ಹೃದಯ ವೈಫಲ್ಯಕ್ಕೆ ಕೇವಲ ಕೊಲೆಸ್ಟರಾಲ್ ಒಂದೇ ಕಾರಣವಲ್ಲ ಎಂದು ತಜ್ಞರು ಹೇಳಿದ್ದರೂ ಕೊಲೆಸ್ಟರಾಲ್ ಕಡಿಮೆ ಮಾಡುವ ಔಷಧಗಳನ್ನು ವೈದ್ಯರು ಬರೆಯುವುದನ್ನು ಬಿಟ್ಟಿಲ್ಲ. ಹೃದಯದಲ್ಲಿ ರಕ್ತ ಸಂಚಾರ ಸುಗಮವಾಗಲಿ ಎಂದು ಬಳಸುವ ಔಷಧ ಸೇವನೆಯಿಂದ ಮಿದುಳಿನಲ್ಲಿ ರಕ್ತ ಸ್ರಾವ ಉಂಟಾಗುತ್ತದೆ ಎಂದು ತಿಳಿದುಬಂದಿದ್ದರೂ ಅಂತಹ ಔಷಧದ ಬಳಕೆ ಇನ್ನೂ ನಿಂತಿಲ್ಲ. ಸಕ್ಕರೆ ಕಾಯಿಲೆ ಎಂದವರಿಗೆ ಮೂರು ತಿಂಗಳಿಗೊಮ್ಮೆ HbA1c ಪರೀಕ್ಷೆ ಮಾಡಿದರೆ ಸಾಕಾಗುತ್ತದೆಯಾದರೂ ಫಾಸ್ಟಿಂಗ್, ಪೋಸ್ಟ್ ಪ್ರ್ಯಾಂಡಿಯಲ್, ರ್ಯಾಂಡಮ್ ಶುಗರನ್ನು ಪರೀಕ್ಷಿಸಲಾಗುತ್ತದೆ.

ಜಪಾನ್ ಮಾದರಿ

ಅಮೆರಿಕಾದಲ್ಲಿ ಮಿಲಿಯನ್ ಗಟ್ಟಲೆ ಹಣವನ್ನು ವೈದ್ಯಕೀಯ ಕ್ಷೇತ್ರಕ್ಕಾಗಿ ಖರ್ಚು ಮಾಡುತ್ತಿದ್ದರೂ, ವೈದ್ಯರ ಸಂಖ್ಯೆ ಹೆಚ್ಚಿದ್ದರೂ ಅಲ್ಲಿ ರೋಗಗಳಿಗೆ ಕೊರತೆ ಇಲ್ಲ. ಆದರೆ ಜಪಾನ್ ದೇಶದಲ್ಲಿ ವೈದ್ಯಕೀಯ ವೆಚ್ಚ ಕೇವಲ ಶೇಕಡಾ 1 ರಷ್ಟಿದೆ. ವೈದ್ಯರ ಸಂಖ್ಯೆ ತುಂಬಾ ಕಡಿಮೆ ಇದೆ. ಅಲ್ಲಿ ರೋಗಗಳ ಸಂಖ್ಯೆಯೂ ಕಡಿಮೆ! ಔಷಧಿಗಳ ಸಂಖ್ಯೆ, ವೈದ್ಯರ ಸಂಖ್ಯೆ ಮತ್ತು ಬಜೆಟ್ ಹೆಚ್ಚಾದ ಮಾತ್ರಕ್ಕೆ ರೋಗಗಳು ಕಡಿಮೆಯಾಗುವುದಿಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ

ಸಾವಿರಾರು ವರ್ಷಗಳಿಂದ ಭಾರತದೇಶದಲ್ಲಿ ಸ್ವದೇಶಿ ಔಷಧಗಳಿದ್ದರೂ ಪಾಶ್ಚಾತ್ಯ ಔಷಧಗಳಿಗೆ ಆಯುರ್ವೇದ ಪದವಿ ವೈದ್ಯರೇ ಮಾರುಹೋಗಿದ್ದಾರೆ. ನಮ್ಮ ಆಹಾರ ಪದ್ಧತಿಯಲ್ಲೇ ಔಷಧಯುಕ್ತ ಅಂಶಗಳಿವೆ. ಬಳ್ಳೊಳ್ಳಿ, ಕರಿಬೇವು, ಜೀರಿಗೆ, ಈರುಳ್ಳಿ ಮುಂತಾದವುಗಳನ್ನು ನಾವು ಹೆಸರಿಸಬಹುದು. ಇಂಗ್ಲೀಷ್ ಮೆಡಿಸನ್‍ಗಳ ಲಾಭಕೋರ ದಂಧೆ ಆಯುರ್ವೇದ, ಹೋಮಿಯೋ ಔಷಧಗಳಿಗೂ ವ್ಯಾಪಿಸಿದೆ. ಹೀಗಾಗಿ ಯಾವ ಪದ್ಧತಿಯನ್ನು ನಾವು ಮೆಚ್ಚಿ ಕೂರುವ ಹಾಗಿಲ್ಲ. ಯೋಗವನ್ನು ಪ್ರಚಾರ ಮಾಡುವ ಮೂಲಕ ಯೋಗಗುರು ಎಂದೇ ಕರೆಯಿಸಿಕೊಳ್ಳುವವರೂ ಆಯುರ್ವೇದ ಔಷಧಗಳ ಉತ್ಪನ್ನಕ್ಕೆಕೈಹಾಕಿದ್ದಾರೆ. ಇದರಿಂದ ನಮ್ಮ ಜನರಿಗೆ ಒಳಿತಾಗುವುದಾದರೆ ಅಭ್ಯಂತರವಿಲ್ಲ; ಅವರೂ ಲಾಭಕೊರರಾದರೆ ಬಹಳ ಕಷ್ಟ.

ಅಲೋಪತಿ, ಆಯುರ್ವೇದ, ಯುನಾನಿ, ಹೋಮಿಯೋಪತಿ, ಸಿದ್ಧ… ಯಾವ ವೈದ್ಯಕೀಯ ಪದ್ಧತಿಯೇ ಇರಲಿ ಆಹಾರ ಕ್ರಮಗಳನ್ನು ಅನುಸರಿಸಲು ಸೂಚಿಸಬೇಕು. ಗೋಧಿಯಲ್ಲಿ ಗ್ಲುಕೋಟಿನ್ ಅಂಶ ಇದೆ, ಇದು ಕ್ಯಾನ್ಸರಕಾರಕ ಎಂದರೂ ಗೋಧಿ ಆಹಾರಗಳನ್ನು ಸೇವಿಸಲು ಸೂಚಿಸಲಾಗುತ್ತಿದೆ. ಗೋಧಿ ಉತ್ಪನ್ನ ಮಾಡುವ ಅಮೆರಿಕಾ ದೇಶವಾಸಿಗಳೆ ನಿಯಮಿತವಾಗಿ ಅಕ್ಕಿ ಸೇವನೆ ಮಾಡುತ್ತಿದ್ದಾರೆ.

ಹೀಗೆ ಹಲವು ಗೊಂದಲ-ಗೋಜುಗಳನ್ನು ನಿವಾರಿಸಲು ವೈದ್ಯಕೀಯ ಕ್ಷೇತ್ರ ಬದಲಾಗಲು ಸೇವಾ ಸಂಸ್ಥೆಗಳು ಈ ಕ್ಷೇತ್ರಕ್ಕೆ ಬರಬೇಕಾಗಿದೆ. ಮನೆವೈದ್ಯರ ಮೇಲೆ ನಂಬಿಕೆ ಇಟ್ಟು ಅವರ ಸಲಹೆ-ಸೂಚನೆಗಳನ್ನು ಪಾಲಿಸಬೇಕು. ಜನಸಾಮಾನ್ಯರು ತಮ್ಮ ಆರೋಗ್ಯದ ಬಗ್ಗೆ ಅನಗತ್ಯ ಭಯ ಇಟ್ಟುಕೊಳ್ಳದೆ ಜಾಗರೂಕತೆಯಿಂದ ಮತ್ತು ಸೂಕ್ತ ಸಮಾಲೋಚನೆ ನಂತರ ಆರೋಗ್ಯ ತಪಾಸಣೆಗೆ, ಚಿಕಿತ್ಸೆಗೆ ಮುಂದಾಗಬೇಕು.

*ಲೇಖಕರು ಗಂಗಾವತಿಯವರು, ಔಷಧ ತಜ್ಞರು ಮತ್ತು ನ್ಯಾಯವಾದಿ.

Leave a Reply

Your email address will not be published.