ಕಂಠಶೋಷಣೆ

ವೆಂಕಟೇಶ ಮಾಚಕನೂರ

ನಾನೀಗ ಕಂಠಶೋಷಣೆ ಕುರಿತು ಮಾತ್ರ ನಿಮ್ಮನ್ನು ಸ್ವಲ್ಪ ಶೋಷಣೆ ಮಾಡಲೆತ್ನಿಸುತ್ತೇನೆ. ಶೋಷಣೆ ಅನ್ನುವುದು ತುಳಿತ, ದಮನಿತ ಅನ್ನುವ ಅರ್ಥ ನೀಡಿದರೆ, ಕಂಠಶೋಷಣೆ ಅನ್ನುವುದು ಫಲವಿಲ್ಲದ ಮಾತನಾಡುವಿಕೆ ಎಂದರ್ಥ ನೀಡುತ್ತದೆ.

ಕಂಠಶೋಷಣೆ ಎಂಬ ಶಬ್ದ ನನ್ನ ಕಿವಿಯ ಮೇಲೆ ಆಗಾಗ ಬೀಳತೊಡಗಿದ್ದು ಸುಮಾರು ಮೂರು ದಶಕಗಳ ಹಿಂದೆ. ನಾನಾಗ ಒಂದು ಸ್ಥಳೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ಮಾಸಿಕ ಸಭೆಯಲ್ಲಿ ಚುನಾಯಿತ ವಿರೋಧಿ ಪಕ್ಷದ ಸದಸ್ಯರೊಬ್ಬರು ಮೇಲಿಂದಮೇಲೆ ಶಬ್ದ ಬಳಸುತ್ತಿದ್ದರು. ಅವರು ಸಭಾಧ್ಯಕ್ಷರನ್ನುದ್ದೇಶಿಸಿ ಸ್ವಾಮಿ ನಾನು ಪ್ರತಿ ಸಭೆಯಲ್ಲಿ ಹೇಳುತ್ತಲೇ ಇದ್ದೇನೆ, ಅದು ಬರೀ ಕಂಠಶೋಷಣೆ ಆಗುತ್ತಿದೆ, ನನ್ನ ಕ್ಷೇತ್ರದ ಸಮಸ್ಯೆ ಬಗೆಹರಿಯುತ್ತಿಲ್ಲ, ಇನ್ನೂ ಎಷ್ಟು ಕಂಠಶೋಷಣೆ ಮಾಡಿಕೊಳ್ಳಬೇಕುಎಂದು ತಮ್ಮ ಸಮಸ್ಯೆ ಪರಿಹಾರವಾಗದ ಕುರಿತು ಅಲವತ್ತುಕೊಳ್ಳುತ್ತಿದ್ದರು. ಶಬ್ದ ನನಗೆ ಆನಂತರ ಮನೆ ಒಳಗೂ ಹೊರಗೂ ಅನುರಣನಗೊಳ್ಳುತ್ತ ಬಂದಿದೆ.

ನೀವು ಗೃಹಸ್ಥರಾಗಿದ್ದರೆ ನಿಮ್ಮ ಮನೆಗಳಲ್ಲಿ `ನಾ ಒದರೂದ ಕೇಳೂದಿಲ್ಲನ್ರಿ ನಿಮಗ, ಆವಾಗಿಂದ ಗಂಟ್ಲ ಹರಕೊತಿದ್ದೀನಿಎಂದೋ ` ಎಷ್ಟ ಒದರಬೇಕ್ರೋ ನಿಮಗ, ಬಾ ಅಂದ್ರ ಲಗೂನ ಬರಾಂಗಿಲ್ಲಎಂದು ಮಕ್ಕಳಿಗೆ ಶ್ರೀಮತಿಯರು ಕೂಗಾಡುದು, ತಾರಕ ಸ್ವರದಲ್ಲಿ ಗದರಿಸುವುದು ನಿತ್ಯ ನಡೆಯುತ್ತಲೇ ಇರುವುದನ್ನು ಗಮನಿಸಿರುತ್ತೀರಿ. ಪ್ರಾಥಮಿಕ, ಮಾಧ್ಯಮಿಕ ಶಾಲಾ ಹಂತದಲ್ಲಿ ಶಿಕ್ಷಕರು ಹೇಳುವಷ್ಟು ಹೇಳಿ, ಒದರುವಷ್ಟು ಒದರಿ, ಅವರ ಎಷ್ಟು ಕಂಠಶೋಷಣೆ ಮಾಡಿಕೊಂಡರೂ ವಿಷಯ ವಿದ್ಯಾರ್ಥಿಗಳ ತಲೆಯಲ್ಲಿ ಹೋಗದಿದ್ದರೆ ಬೆತ್ತ ಪ್ರಯೋಗ ಮಾಡಿ ವಿಷಯ ತಿಳಿಸುವ ಕ್ರಮವನ್ನು ಕೂಡ ತಾವು ನೋಡಿರುತ್ತೀರಿ ಮತ್ತು ಅನುಭವಿಸಿರುತ್ತೀರಿ. ಈಗ ಶಾಲೆಗಳಲ್ಲಿ ಬೆತ್ತ ಪ್ರಯೋಗ ನಿಷಿದ್ಧವಾಗಿರುವುದರಿಂದ ಉಳಿದಿರುವುದು ಕಂಠಶೋಷಣೆ ಮಾತ್ರ. ನೀವು ಸರಕಾರಿ ಸೇವೆಗೆ ಸೇರಿದವರಾಗಿದ್ದರೆ, ಕಚೇರಿಯಲ್ಲಿ ಮೇಲಾಧಿಕಾರಿ ಆಗದ ಕೆಲಸದ ಬಗ್ಗೆ ಸಿಬ್ಬಂದಿಗೆ ಆಗಾಗ ಕೂಗಾಡುವುದು, ಕಚೇರಿ ಸಿಬ್ಬಂದಿ ಮೇಲಾಧಿಕಾರಿ ಕುರಿತು ಬೆನ್ನಹಿಂದೆ ಮಾತನಾಡುವದು, ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿನ ಕಾರ್ಯ ವಿಧಾನ ಕುರಿತು ಆಗಾಗ ಕಂಠಶೋಷಣೆ ಮಾಡಿಕೊಳ್ಳುವುದು ನಿಮ್ಮ ಕಿವಿಗಳ ಮೇಲೆ ಬಿದ್ದೇ ಇರುತ್ತವೆ.

ಸಮಾಜದಲ್ಲಿ ಅನಾದಿ ಕಾಲದಿಂದ ನಾನಾ ರೀತಿಯ ಶೋಷಣೆಗಳು ಪ್ರಚಲಿತವಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಶೋಷಣೆ ರಹಿತ ಸಮಾಜ ನಿರ್ಮಾಣದ ಕ್ರಮಗಳು ಸತತ ಜಾರಿಯಲ್ಲಿದ್ದರೂ ಸಂಪೂರ್ಣ ಶೋಷಣೆ ಅಂತೂ ನಿಂತಿಲ್ಲ. ಅದು ಬಹಳ ದೊಡ್ಡ ವಿಷಯ. ನಾನೀಗ ಕಂಠಶೋಷಣೆ ಕುರಿತು ಮಾತ್ರ ನಿಮ್ಮನ್ನು ಸ್ವಲ್ಪ ಶೋಷಣೆ ಮಾಡಲೆತ್ನಿಸುತ್ತೇನೆ. ಶೋಷಣೆ ಅನ್ನುವುದು ತುಳಿತ, ದಮನಿತ ಅನ್ನುವ ಅರ್ಥ ನೀಡಿದರೆ, ಕಂಠಶೋಷಣೆ ಅನ್ನುವುದು ಫಲವಿಲ್ಲದ ಮಾತನಾಡುವಿಕೆ ಎಂದರ್ಥ ನೀಡುತ್ತದೆ.

ನಮ್ಮಲ್ಲಿ ಕಂಠಶೋಷಣೆಗೆ ಒಳಗಾದ ಮೊದಲ ವ್ಯಕ್ತಿ ಅಂದರೆ ನೀಲಕಂಠ ಅಥವಾ ಶಿವಮಹಾದೇವ. ದೇವರು ದಾನವರ ಮಧ್ಯ ಮೇಲಾಟಕ್ಕಾಗಿ ನಡೆದ ವಿವಾದದಲ್ಲಿ, ದೇವರು ಒಂದು ಕಡೆ ದಾನವರು ಒಂದು ಕಡೆ ಆಗಿ ಮೇರು ಪರ್ವತವನ್ನು ಕಡಗೋಲನ್ನಾಗಿಸಿ, ವಾಸುಕಿ ಸರ್ಪವನ್ನು ಹಗ್ಗವನ್ನಾಗಿ ಮಾಡಿಕೊಂಡು ಸಮುದ್ರ ಮಂಥನ ಮಾಡಿದಾಗ ಅಮೃತದೊಂದಿಗೆ ವಿಷ ಕೂಡ ಹೊರಬರುತ್ತದೆ. ದೇವತೆಗಳೆಲ್ಲ ಅಮೃತ ಕುಡಿದು ಅಮರರಾಗುತ್ತಾರೆ. ಆದರೆ ಮಂಥನದಲ್ಲಿ ಹೊರಬಂದ ವಿಷದಿಂದ ಸೃಷ್ಟಿಯಲ್ಲಿ ಅಲ್ಲೋಲಕಲ್ಲೋಲವಾಗಲು ದೇವತೆಗಳು ಶಿವನ ಮೊರೆ ಹೋಗುತ್ತಾರೆ. ಆಗ ಶಿವನು ಎಲ್ಲ ದೇವತೆಗಳೂ ಒಂದಿಷ್ಟು ವಿಷ ಕುಡಿಯಲಿ ಎಂದು ಹೇಳುವ ಬದಲು ಎಲ್ಲ ವಿಷವನ್ನು ತಾನೇ ಕುಡಿದು ಅದನ್ನು ಗಂಟಲಲ್ಲಿ ಹಿಡಿದಿಟ್ಟುಕೊಂಡು ವಿಷಕಂಠನಾಗಿಬಿಡುತ್ತಾನೆ. ಹೀಗೆ ದೇವತೆಗಳಿಂದಲೇ ಕಂಠಶೋಷಣೆಗೆ ಒಳಗಾದ ಮೊದಲ ವ್ಯಕ್ತಿ ಶಿವ. ನಂತರ ಅಂದಿನಿಂದ ಇಂದಿನವರೆಗೆ ಶಿವನ ಭಕ್ತವೃಂದವೆಲ್ಲ ಓಂ ಎಂದೋ, ಓಂ ನಮಃ ಶಿವಾಯ ಎಂದೋ, ಹರಹರ ಮಹಾದೇವನೆಂದೋ ಕಂಠಶೋಷಣೆ ಮಾಡಿಕೊಳ್ಳುತ್ತಲೇ ಇರುತ್ತಾರೆ. ಕೊರೊನಾದಂತಹ ಸಂಕಟ ಕಾಲದಲ್ಲಿ ಅದು ಇನ್ನೂ ಹೆಚ್ಚಿಗೆ ಆಗಿದೆ. ಆದರೆ ಭಕ್ತಾದಿಗಳು ಕಂಠಶೋಷಣೆ ಮಾಡಿಕೊಂಡದ್ದೇ ಬಂತು. ಶಿವನಿಗೆ ಅವರ ಆಲಾಪ ಕೇಳಿಸಿದಂತಿಲ್ಲ.

ಅದು ಪುರಾಣ ಪುಣ್ಯಕತೆಗಳ ಕಾಲವಾದರೆ, ಈಗ ನಾವು ಕಂಠಶೋಷಣೆಯ ನಿದರ್ಶನಗಳನ್ನು ಹೆಚ್ಚಾಗಿ ನೋಡುವುದು, ಕೇಳುವುದು ಚುನಾವಣೆ ಕಾಲದಲ್ಲಿ. ಚುನಾವಣೆ ಬಂದರೆ ಸಾಕು, ಎಲ್ಲ ಸಣ್ಣದೊಡ್ಡ ರಾಜಕೀಯ ನೇತಾರರು ತಮ್ಮ ನಾಲಿಗೆಗಳಿಗೆ ಸಾಣೆ ಹಿಡಿದು, ಕಂಠಗಳನ್ನು ಸದೃಢಗೊಳಿಸಿಕೊಂಡು, ದೇಶದ ಪ್ರಜೆಗಳ ಮುಂದೆ ಕಂಠಶೋಷಣೆ ಮಾಡಿಕೊಳ್ಳಲು ಸಜ್ಜಾಗಿ ಬರುತ್ತಾರೆ. ರಾಜಕೀಯ ವಿರೋಧಿಗಳ ಕುರಿತು ಕಂಠ, ಹೊಟ್ಟೆಯಲ್ಲಿದ್ದ ವಿಷವನ್ನು ಕಕ್ಕುತ್ತ, ಜನರಿಗೆ ಆಶ್ವಾಸನೆಗಳ ಹೊಳೆಹರಿಸುತ್ತ ನಾಡು, ದೇಶವನ್ನು ಸುತ್ತುತ್ತಾರೆ. ಮತ ಭಿಕ್ಷೆ ಬೇಡುತ್ತಾರೆ. ಜನ ಬೇರೆ ಉಪಾಯವಿಲ್ಲದೆ ಇವರಿಗೋ, ಅವರಿಗೋ ಅಧಿಕಾರವನ್ನು ಕರುಣಿಸುತ್ತಾರೆ.

ನೇತಾರರಿಗೆ ಕಂಠಶೋಷಣೆ ತೀರ ಅಪ್ರಯೋಜಕವೇನೂ ಆಗುವುದಿಲ್ಲ. ನಂತರ ಸಂಸತ್ತು, ಶಾಸನ ಸಭೆಗಳಲ್ಲಿ ಅವರು ಕಂಠಶೋಷಣೆ ಮಾಡಿಕೊಳ್ಳುತ್ತ, ಪ್ರಜಾಪ್ರಭುತ್ವ ತುಡಿಯುವಲ್ಲಿ ಸಕ್ರಿಯವಾದ ಪಾಲುದಾರರಾಗುತ್ತಾರೆ. ಇತ್ತ ಮತದಾರಪ್ರಭು ತನ್ನ ಬೇಡಿಕೆಗಳು, ಬೆಲೆ ಏರಿಕೆ, ಭ್ರಷ್ಟಾಚಾರ ಇತ್ಯಾದಿ ಕುರಿತು ವಿವಿಧ ವೇದಿಕೆಗಳ ಮುಖಾಂತರ ಕಂಠಶೋಷಣೆ ಮಾಡಿಕೊಳ್ಳುತ್ತ ಮತ್ತೊಂದು ಚುನಾವಣೆ ಬರುವವರೆಗೆ ಪ್ರಲಾಪಿಸುತ್ತ ಕೂಡ್ರುತ್ತಾನೆ. ಪ್ರತಿದಿನ ಚಾಲ್ತಿಯಲ್ಲಿರುವ ಕಂಠಗಳೆಂದರೆ ರಾಜಕಾರಣಿಗಳ ಕಂಠಗಳೆ. ಆಳುವ ಪಕ್ಷದಲ್ಲಿರಲಿ, ವಿರೋಧ ಪಕ್ಷದಲ್ಲಿರಲಿ ಅವರ ಕಂಠಗಳು ಸದಾ ಸಕ್ರಿಯವಾಗಿದ್ದಾಗಲೇ ಅವರು ಚಲಾವಣೆಯಲ್ಲಿರುತ್ತಾರೆ. ಕಂಠವೇ ಅವರ ಶಕ್ತಿ ಕೇಂದ್ರ. ಬಾಯಿಯೇ ಅವರ ಬಂಡವಾಳ. ಅವರಿಗೆ ಕಂಠಶೋಷಣೆ ಎಂಬುದು ಇರುವುದಿಲ್ಲ.

ವಿದ್ಯಾರ್ಥಿಗಳಿಗೆ ಕಂಠಶೋಷಣೆಯ ಅನುಭವ ಹೆಚ್ಚು. ಪ್ರಾಥಮಿಕ ಹಂತದಲ್ಲಿ ಶಿಕ್ಷಕರಿಗೆ ಕಂಠಶೋಷಣೆಯ ಅನುಭವವಾದರೆ, ನಂತರದ ಹಂತದಲ್ಲಿ ಕೆಲವು ಶಿಕ್ಷಕರ ಪಾಠ ಪ್ರವಚನಗಳು ವಿದ್ಯಾರ್ಥಿಗಳಿಗೆ ಅನುಭವ ನೀಡುತ್ತವೆ. ಲವಲವಿಕೆ, ನಾವೀನ್ಯ ಇಲ್ಲದ ನೀರಸ ಕಲಿಸುವಿಕೆಯ ಕ್ರಮಗಳು ಕಂಠಶೋಷಣೆಯ ಉತ್ತಮ ಉದಾಹರಣೆಗಳು. ಅವು ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ನಿದ್ರೆಗೆ ಎಳೆಯುತ್ತವೆ.

ಸಭೆ ಸಮಾರಂಭಗಳಲ್ಲಿ ಕಂಠಶೋಷಣೆ ಮಾಡಿಕೊಳ್ಳುವ ಅನೇಕ ಮಹನೀಯರನ್ನು ನಾವು ಕಾಣುತ್ತೇವೆ. ಮೈಕ್ ಸಿಕ್ಕರೆ ಅಥವಾ ಮೈಕ್ ಎದುರಿಗೆ ನಿಂತರೆ ಕೆಲವರ ಗಂಟಲಿಗೆ ಅಪಾರ ಶಕ್ತಿ ಸಾಮಥ್ರ್ಯ ಬಂದುಬಿಡುತ್ತದೆ. ಅವರು ಕಂಠಶೋಷಣೆ ಮಾಡುತ್ತ ಸಭಿಕರ ಶೋಷಣೆ ಮಾಡುತ್ತಾರೆ. ಅದರಲ್ಲೂ ಹೊಗಳುಭಟ್ಟರು ಅಥವಾ ತೆಗಳು ಭಟ್ಟರಿದ್ದರೆ ಸಭಿಕರ ಕಣ್ಣು, ಕಿವಿ, ಮೈಮನಸ್ಸುಗಳು ಕೂಡ ಶೋಷಣೆಗೆ ಒಳಗಾಗಬೇಕಾಗುತ್ತದೆ. ಅಂಥಲ್ಲಿ ಕೇಳುಗರ ತಾಳ್ಮೆಯೇ ಶೋಷಣೆಗೆ ಒಳಗಾಗುತ್ತದೆ.

ಮಹಿಳೆಯರ ಕಂಠ ಶಕ್ತಿಗೆ ಸಾಟಿ ಇಲ್ಲ. ಅವರ ಕಂಠದ ಧಾರಣ ಶಕ್ತಿ ದೊಡ್ಡದು. ಅವರು ದಿನಗಟ್ಟಲೆ ವಿಷಯ ಇಲ್ಲದೆ ಹರಟಬಲ್ಲರು, ಜಗಳ ಕಾಯಬಲ್ಲರು. ಜಗಳಕ್ಕೆ ನಿಂತರೆ ವೇಳೆಯ ಪರಿವೆ ಇಲ್ಲದೇ ಕಂಠಶೋಷಣೆ ಮಾಡಿಕೊಳ್ಳಬಲ್ಲರು. ಗಂಡಸರ ಕಂಠವನ್ನು ಅವರು ಹೆಚ್ಚು ಶ್ರಮವಿಲ್ಲದೆ ಸೈಲನ್ಸ ಗೊಳಿಸಬಲ್ಲರು. ಇನ್ನು ಕಿರಿಗೂರಿನ ಗಯ್ಯಾಳಿಗಳಂಥವರ ಕಂಠಕ್ಕೆ ಬೆಚ್ಚದವರು ವಿರಳ.

ಇನ್ನು ಪ್ರತಿಭಟನಾಸಭೆ, ಮೆರವಣಿಗೆಗಳಲ್ಲಿ ಆಗುವ ಕಂಠಶೋಷಣೆಯ ಪರಿಗಳನ್ನು ನಾವು ದಿನಾಲು ಒಂದಿಲ್ಲ ಒಂದುಕಡೆ ನೋಡುತ್ತಲೇ ಇರುತ್ತೇವೆ. ಅವು ಉಚ್ಚ ಕಂಠಶೋಷಣೆಗಳು. ಯಾವುದೇ ಸಮಯ, ಎಂಥದ್ದೇ ಪ್ರತಿಭಟನೆಗಳಿರಲಿ ಅಲ್ಲಿ ಕಂಠಶಕ್ತಿಯ ಪ್ರದರ್ಶನ ಇರುತ್ತದೆ. `ಏನೇ ಬರಲಿ ಒಗ್ಗಟ್ಟಿರಲಿ, ಇಂಕ್ವಿಲಾಬ್ ಜಿಂದಾಬಾದ್, ಬೇಕೆಬೇಕು ನ್ಯಾಯಾಬೇಕುಇವು ಯಾವತ್ತು ಎಲ್ಲ ಪ್ರತಿಭಟನೆಗಳಲ್ಲಿ ಬಳಕೆಯಾಗುವ ಪದಪುಂಜಗಳು. ಇವುಗಳೊಂದಿಗೆ ಮುರ್ದಾಬಾದ್, ಜಿಂದಾಬಾದ್, ದಿಕ್ಕಾರಗಳಂತೂ ಇದ್ದೇ ಇರುತ್ತವೆ. ನೇತಾರರು ಚುನಾವಣೆಯಲ್ಲಿ ಸೋಲಲಿ ಗೆಲ್ಲಲಿ, ಮರಣಹೊಂದಲಿ, ಜೈಲಿಗೆ ಹೋಗಿಬರಲಿ, ಬಂಧನಕ್ಕೊಳಗಾಗಲಿ ಇವು ಕಂಠೋಕ್ತವಾದ ನುಡಿಗಟ್ಟುಗಳು. ಕಂಠಶೋಷಣೆಯೇ ಇಲ್ಲಿ ಮುಖ್ಯ. ಇಂಥ ಕಂಠಶೋಷಣೆಗಳು ಉಚಿತವಾಗಿರುವುದಿಲ್ಲ. ಎಲ್ಲದಕ್ಕೂ ಸಮಯ ಸಂದರ್ಭಾನುಸಾರ ಒಂದು ಬೆಲೆ ಇರುತ್ತದೆ. ಕೂಗಿಕೂಗಿ ದಣಿದ ಗಂಟಲುಗಳನ್ನು ತಣಿಸಲು ನಂತರ ಗುಂಡುತುಂಡಿನ ಸಮಾರಾಧನೆಯಂತೂ ಇದ್ದೇ ಇರುತ್ತದೆ.

ಇದು ಮನುಷ್ಯರ ಕಂಠಶೋಷಣೆ ವಿಚಾರವಾದರೆ, ಪ್ರಾಣಿ ಪ್ರಪಂಚದಲ್ಲಿ ಕಂಠಶೋಷಣೆ ಬಗೆ ಬೇರೆ ಸ್ವರದಲ್ಲಿರುತ್ತದೆ. ಕಂಠಶೋಷಣೆಯೇ ಪ್ರಾಣಿಗಳ ಸಂವಹನ ವಿಧಾನ ಆಗಿರಲೂಬಹುದು. ನಾಯಿ, ನರಿ, ತೋಳಗಳು, ಬೊಗಳುವ ಜಿಂಕೆಗಳು, ಅಷ್ಟೆ ಏಕೆ, ಎಲ್ಲ ಪ್ರಾಣಿಗಳು ಒಂದಿಲ್ಲೊಂದು ರೀತಿಯ ಧ್ವನಿ ಹೊರಡಿಸಿ ತಮ್ಮ ಬಳಗದೊಂದಿಗೆ ಅಥವಾ ಎದುರಾಳಿಗಳೊಂದಿಗೆ ಸಂವಹನ ನಡೆಸುತ್ತವೆ. ಉಳಿದ ಪ್ರಾಣಿಗಳ ವಿಷಯ ಹಾಗಿರಲಿ, ನಿತ್ಯ ನಮ್ಮೊಂದಿಗಿರುವ, ಅಥವಾ ನಮ್ಮ ನೆರೆಹೊರೆಯಲ್ಲಿರುವ ಸಾಕುನಾಯಿಗಳು, ಬೀದಿನಾಯಿಗಳ ಕಂಠಶೋಷಣೆ ಅನುಭವ ಎಲ್ಲರಿಗೂ ಇದ್ದೇ ಇರುತ್ತದೆ.

ಸಾಕು ನಾಯಿಗಳಾದರೆ ತಮ್ಮ ವಾಸದ ಮನೆ ಹಿಂದೆ ಮುಂದೆ ಯಾರಾದರೂ ಕುಲಬಾಂಧವರು ಅಥವಾ ಆಗಂತುಕರು ಸುಳಿದಾಡಿದರೆ ಗಂಟಲು ಹರಿಯುವಂತೆ ಕಿರುಚುತ್ತವೆ. ಒಂದೊಂದು ತಳಿಯ ನಾಯಿಗಳದ್ದು ಒಂದೊಂದು ರೀತಿಯ ಕಂಠನಾದ. ಆದರೆ ಬೀದಿನಾಯಿಗಳ ಕಂಠಶೋಷಣೆ, ಅವುಗಳ ಕಂಠದ ಧಾರಣಶಕ್ತಿ ನನ್ನನ್ನು ಬೆರಗುಗೊಳಿಸುತ್ತಲೇ ಬಂದಿದೆ. ಅಪರಾತ್ರಿಯಲ್ಲಿ ಅವು ಯಾವ ಕಾರಣವೂ ಇಲ್ಲದೆ ಗಂಟೆಗಟ್ಟಲೇ ಕಂಠಶೋಷಣೆ ಮಾಡಿಕೊಳ್ಳಬಲ್ಲವು. ತಮ್ಮ ಪ್ರದೇಶ ವ್ಯಾಪ್ತಿಯಲ್ಲಿ ಯಾರಾದರು ಕುಲಬಾಂಧವರ ಅತಿಕ್ರಮಣ ಪ್ರವೇಶ ಆಗಿದ್ದಲ್ಲಿ, ಅಥವಾ ಅಪರಿಚಿತ ಮಾನವ ಪ್ರಾಣಿಯ ಪ್ರವೇಶವಾಗಿದ್ದಲ್ಲಿ, ಅಥವಾ ದೂರದ ಯಾವುದೋ ಕರೆಗೆ ಪ್ರತಿಕ್ರಿಯೆ ರೂಪದಲ್ಲಿ ಅವು ಮಾಡಿಕೊಳ್ಳುವ ಕಂಠಶೋಷಣೆ ಅಸದಳವಾದದ್ದು.

ಇನ್ನು ಯುದ್ಧಕ್ಕೆ ನಿಂತರಂತೂ ಮುಗಿಯಿತು. ಕಂಠಬಿರಿದಂತೆ ಮಾಡುತ್ತವೆ. ಅವು ಉಂಟು ಮಾಡುವ ನಿದ್ರಾಭಂಗ, ಇತರೆ ಅವಾಂತರಗಳು ಹಲವು. ಪ್ರಾಣಿದಯಾ ಸಂಘಗಳು ಹಾಗೂ ನಗರಪಾಲಿಕೆಗಳ ಕೃಪೆಯಿಂದ ನಮ್ಮಲ್ಲಿ ಬೀದಿನಾಯಿಗಳ ಸಂತಾನ ಸಮೃದ್ಧಿಯಲ್ಲಿದ್ದು, ಅವುಗಳ ಕಂಠಶೋಷಣೆಯನ್ನು ಅನವರತ ನಾವು ಸಹಿಸಿಕೊಂಡಿರಲೇಬೇಕಾಗುತ್ತದೆ. ನಾಯಿಗಳ ಬೊಗಳುವಿಕೆಯನ್ನು, ದ್ವನಿಯ ಗಾತ್ರವನ್ನು ಕುಗ್ಗಿಸಲು ಅವುಗಳ ಕೊರಳಿಗೆ ಒಂದು ಸಾಧನ ಅಳವಡಿಸುವ ಕ್ರಮ ಕೆಲವು ದೇಶಗಳಲ್ಲಿ ಪ್ರಚಲಿತದಲ್ಲಿದೆಯಂತೆ. ತುರ್ತಾಗಿ ನಮ್ಮಲ್ಲಿ ಅಂಥ ಸಾಧನ ಒಂದು ಬೇಕಿರುವುದು ನಮ್ಮ ರಾಜಕೀಯ ನೇತಾರರಿಗೆ, ನಮ್ಮ ಟಿವ್ಹಿ ಸುದ್ದಿ ಮಾಧ್ಯಮಗಳಿಗೆ. ಅವರ ದೈನಂದಿನ ಅನವಶ್ಯಕ ಕಂಠಶೋಷಣೆಗಳು ನಿಂತರೆ ಜನ ಎಷ್ಟೋ ನೆಮ್ಮದಿಯಿಂದಿರಬಹುದು. ಸಮಾಜದಲ್ಲಿ ಶಾಂತಿ ನೆಲೆಸಬಹುದು. ಆದರೆ ನಮ್ಮ ಸಂವಿಧಾನವೇ ಅವರ ಕಂಠಗಳಿಗೆ ಧ್ವನಿ ನೀಡಿರುವಾಗ ಅವರ ವಾಕ್ ಸ್ವಾತಂತ್ರ್ಯದ ನಿಯಂತ್ರಣ ಸಾಧ್ಯವೆ?

ಖ್ಯಾತ ಸಂಗೀತಗಾರರ ಗಾಯನ, ಸಂಗೀತವನ್ನು ಕಂಠಶೋಷಣೆ ಅನ್ನಲಾದೀತೆ. ಸಂಗೀತಗಾರರ ಕಂಠ ಶೋಷಣೆ ಸ್ವರೂಪದ್ದಲ್ಲ, ಅದು ಪೆೀಷಣೆ ಸ್ವರೂಪದ್ದು. ಇನ್ನು ಪಾಶ್ಚಾತ್ಯ ಸಂಗೀತ ನಮಗೆ ಕರ್ಣಕಠೋರ ಕಂಠಶೋಷಣೆಯಂತೆ ಕಂಡರೂ ಅದಕ್ಕೆ ಹುಚ್ಚೆದ್ದು ಕುಣಿವ ಯುವ ಪೀಳಿಗೆಯುಂಟು.

ಕಂಠಶೋಷಣೆಗಳ ಬಗ್ಗೆ ಏನೇ ಹೇಳಲಿ, ಕೆಲವು ಕಂಠ ಶೋಷಣೆ ಕ್ರಮಗಳು ಸಾರ್ವಜನಿಕ ವ್ಯವಸ್ಥೆಯಲ್ಲಿ ಸತತ ಜಾರಿಯಲ್ಲಿರಬೇಕಾಗುತ್ತವೆ. ಅದು ಸರಕಾರದ ದಬ್ಬಾಳಿಕೆ, ದಮನಕಾರಿ, ಭ್ರಷ್ಟ, ಅನೈತಿಕ ರೀತಿನೀತಿಗಳ ವಿರುದ್ಧವಾಗಿರಬಹುದು, ಶೋಷಕ, ಶಿಥಿಲ, ಅಪಾರದರ್ಶಕ ಅಡಳಿತ ಕ್ರಮಗಳ ವಿರುದ್ಧವಾಗಿರಬಹುದು ಕಂಠಶೋಷಣೆ ಮಾಡಿಕೊಳ್ಳುತ್ತಲೇ ಇರಬೇಕಾಗುತ್ತದೆ. ನಮ್ಮ ದ್ವನಿಗಳನ್ನು ಕೇಳಿಸಿಕೊಳ್ಳುವ ಸಂವೇದನಶೀಲ ಮನಸ್ಸುಗಳು ಅಲ್ಲಲ್ಲಿ ಇರುತ್ತವೆ. ಎಲ್ಲ ಬಗೆಯ ಶೋಷಣೆಗಳ ವಿರುದ್ಧದ ಮೆತ್ತನೆಯ ಆದರೆ ಗಟ್ಟಿ ದ್ವನಿಯ ಮಾರ್ಗಪ್ರವರ್ತಕರಾಗಿ ಗಾಂಧೀಜಿ ನಮ್ಮ ಮುಂದೆ ಇದ್ದಾರೆ.

`ಏನ್ ಮಾಡ್ತಾ ಇದ್ದೀರಿ, ಊಟಕ್ಕ ಬರ್ರಿ ಅಂತ ನಾ ಆವಾಗಿಂದ ಒದರ್ತಾನ ಇದೀನಿಅಂತ ಅಡಿಗಿ ಮನಿಯಿಂದ ಕೂಗು ಬರ್ತಾ ಇದೆ. ಕೊರೆದದ್ದು ಸಾಕು.

Leave a Reply

Your email address will not be published.