ಕಂಬಳ ಎಂಬ ಕಲರ್‍ಫುಲ್ ಕ್ರೀಡೆ

ಶರವೇಗದಿಂದ ಓಡಿ ದಾಖಲೆ ಸೃಷ್ಟಿಸಿರುವ ತುಳುನಾಡಿನ ಶ್ರೀನಿವಾಸಗೌಡ ಮತ್ತು ನಿಶಾಂತ್ ಶೆಟ್ಟಿ ಭಾರತದ ಉಸೇನ್ ಬೋಲ್ಟ್ ಎನ್ನಿಸಿಕೊಂಡಿದ್ದಾರೆ! ಅವರ ಸಾಧನೆಯ ಸಂದರ್ಭದಲ್ಲಿ ಕಂಬಳ ಕ್ರೀಡೆ ಕುರಿತ ಕುತೂಹಲಕಾರಿ ಲೇಖನ.

ಕೆ.ವಿ.ಪರಮೇಶ್

ಐತಿಹಾಸಿಕ ಹಿನ್ನೆಲೆಯುಳ್ಳ ಕರಾವಳಿ ನಾಡಿನ ಈ ಸಾಂಪ್ರದಾಯಿಕ ಕಂಬಳ ಒಂದಿಲ್ಲೊಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿರುತ್ತದೆ. ಇದನ್ನು ಸಂಪ್ರದಾಯ, ಆಚರಣೆ, ಕ್ರೀಡೆ, ಜಾನಪದ ಹೀಗೆ ಹತ್ತು ಹಲವು ಬಗೆಯಲ್ಲಿ ವ್ಯಾಖ್ಯಾನಿಸಬಹುದು. ಯಾವ ನೆಲೆಗಟ್ಟಿನಲ್ಲಿ ಅವಲೋಕಿಸಿದರೂ ಅದಕ್ಕೆ ಅದರದ್ದೇ ಆದ ಐತಿಹಾಸಿಕ ಹಿನ್ನೆಲೆಯಿದೆ, ಸಂಪ್ರದಾಯಕ್ಕೆ ತನ್ನದೇ ಅರ್ಥವಿದೆ, ಆಚರಣೆಗೂ ಒಂದು ಸ್ಪಷ್ಟ ಉದ್ದೇಶವಿದೆ. ಇಷ್ಟೆಲ್ಲ ತಳಹದಿ ಹೊಂದಿದ ಕಂಬಳ ಮತ್ತೊಮ್ಮೆ ಮೇರು ಮಟ್ಟದಲ್ಲಿ ವಿಜೃಂಭಿಸಿದೆ.

ಕರಾವಳಿಯ ಜಾನಪದ ಕ್ರೀಡೆ ಈಗ ವಿವಾದದಿಂದ ದೂರ. ಕೃಷಿ ಕೆಲಸಗಳಿಗೆ ಬಳಸುವ ಕೋಣಗಳು ಅನಾದಿ ಕಾಲದಿಂದಲೂ ಕಂಬಳ ಕ್ರೀಡೆಯ ಕೇಂದ್ರ ಬಿಂದುಗಳೂ ಹೌದು. ರಾಜರ ಆಡಳಿತ ಕಾಲದಿಂದಲೂ ಈ ಕ್ರೀಡೆಗೆ ಮನ್ನಣೆಯಿತ್ತು. ವಿಜಯನಗರ ಅರಸರ ಕಾಲದ ಶಾಸನಗಳೂ ಕಂಬಳವನ್ನು ಸಮರ್ಥಿಸುತ್ತವೆ. ರಾಜಾಶ್ರಯದಲ್ಲಿ ಕಂಬಳಗಳು ನಡೆದಿರುವ ನಿದರ್ಶನವಿದೆ. ಬಳಿಕ ಪ್ರಜಾಶ್ರಯದಲ್ಲಿ ನಡೆಯುತ್ತಾ ಬಂದವು. ಕಾಲಕ್ರಮೇಣ ಹಲವು ರೀತಿಯಲ್ಲಿ ಕಂಬಳ ರೂಪಾಂತರವಾಗಿದೆ.

ಕಂಬಳದಲ್ಲಿ ಓಡುವ ಕೋಣಗಳನ್ನು ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸುತ್ತಾರೆ. ಅವುಗಳನ್ನು ಮನೆ ಮಕ್ಕಳಂತೆ ಸಾಕುತ್ತಾರೆ. ಪ್ರತಿನಿತ್ಯ ಆತ್ಮೀಯವಾಗಿ ಮೈತೊಳೆದು ಎಣ್ಣೆ ಉಜ್ಜಿ ಸ್ನಾನ ಮಾಡಿಸುತ್ತಾರೆ. ಆ ಕೋಣಗಳಿಗೆ ದುಬಾರಿ ಮತ್ತು ಪೌಷ್ಟಿಕ ಆಹಾರ ಪದಾರ್ಥಗಳನ್ನು ತಿನ್ನಿಸುತ್ತಾರೆ. ಬಹುಶಃ ಒಂದು ಸಾಮಾನ್ಯ ಕುಟುಂಬ ನಿರ್ವಹಣೆ ಮಾಡಬಹುದಾದಷ್ಟು ವೆಚ್ಚವನ್ನು ಒಂದು ಜತೆ ಕೋಣಗಳನ್ನು ಸಾಕಲು ಖರ್ಚು ಮಾಡುವುದಿದೆ. ಕಂಬಳ ಓಡಿಸುವವನಿಗೆ ವರ್ಷಪೂರ್ತಿ ವೇತನ ಕೊಟ್ಟು ಕೋಣಗಳ ಯಜಮಾನ ಒಬ್ಬ ಕ್ರೀಡಾಪಟುವನ್ನು ಪೋಷಣೆ ಮಾಡುವುದಕ್ಕಿಂತಲೂ ಹೆಚ್ಚು ಕಾಳಜಿವಹಿಸುವುದಿದೆ.

ಕೋಣ ಮತ್ತು ಕೋಣಗಳನ್ನು ಓಡಿಸುವವನ ಮೇಲೆ ಮಾಡಿದ ಲಕ್ಷಾಂತರ ರೂಪಾಯಿ ಹೂಡಿಕೆ ಕಂಬಳ ಸ್ಪರ್ಧೆಯಲ್ಲಿ ಕೋಣ ಮತ್ತು ಕೋಣ ಓಡಿಸುವವನು ತಂದು ಕೊಡುವ ಒಂದು ಚಿನ್ನದ ಪದಕ, ಹಲವು ಸಾವಿರ ರೂಪಾಯಿ ಬಹುಮಾನಕ್ಕೆ ಸಮವಾಗಲಾರದು. ಆದರೆ ಅಭಿಮಾನ ಮಾತ್ರ ಎಲ್ಲವನ್ನೂ ಮರೆಸಿಬಿಡುತ್ತದೆ.

ಕಂಬಳ ಸ್ಪರ್ಧೆಯಲ್ಲಿ ನಮ್ಮ ಕೋಣಗಳು ಗೆಲ್ಲಬೇಕು ಎನ್ನುವುದನ್ನು ಬಿಟ್ಟರೆ ಕೋಣಗಳ ಯಜಮಾನರು ತಾವು ಮಾಡುವ ಖರ್ಚು ನಗಣ್ಯವೆನ್ನುತ್ತಾರೆ. ಕಂಬಳದಲ್ಲಿ ಗೆದ್ದ ಕೋಣಗಳ ಮೆರವಣಿಗೆ, ಅದರ ಮೈಮೇಲೆ ಹೊದಿಸುವ ಬಟ್ಟೆ, ಕಂಬಳ ಓಡಿಸಿದವನಿಗೆ ಮಾಡುವ ಸನ್ಮಾನ, ಕೊಡುವ ಮನ್ನಣೆಗೆ ಎಣೆಯಿಲ್ಲ, ಎಲ್ಲಕ್ಕಿಂತ ದೊಡ್ಡದು ಅಭಿಮಾನ ಮತ್ತು ಗೆಲುವಿನ ಸ್ವಾಭಿಮಾನ.

ಡಿಸೆಂಬರ್ ಬಂತೆಂದರೆ ತುಳುನಾಡಿನಲ್ಲಿ ಕಂಬಳದ್ದೇ ಮಾತು. ಈ ಬಾರಿ ದಾಖಲೆಗಳು ಜತೆಗೂಡಿರುವುದು ಸಂಭ್ರಮವನ್ನು ನೂರ್ಮಡಿಗೊಳಿಸಿದೆ. ಶರವೇಗದ ಓಟದ ಮೂಲಕ ಸಂಚಲನ ಸೃಷ್ಟಿಸಿರುವ ತುಳುನಾಡಿನ ಕಂಬಳ ಹೀರೋ ಶ್ರೀನಿವಾಸಗೌಡ ದಾಖಲೆಯನ್ನು ಮುರಿಯುವ ಮೂಲಕ ಭಾರತದಲ್ಲಿ ಮತ್ತೋರ್ವ ಉಸೇನ್ ಬೋಲ್ಟ್ ಹುಟ್ಟಿಕೊಂಡಿದ್ದಾನೆ.

100 ಮೀಟರ್ ದೂರವನ್ನು 9.55 ಸೆಕೆಂಡ್‍ಗಳಲ್ಲಿ ತಲುಪಿದ್ದ ಶ್ರೀನಿವಾಸಗೌಡ ಅವರ ದಾಖಲೆಯನ್ನು ಪುಡಿಗಟ್ಟಿರುವ ಬಜಗೋಳಿಯ ಜೋಗಿಬೆಟ್ಟು ನಿಶಾಂತ್ ಶೆಟ್ಟಿ 9.52 ಸೆಕೆಂಡ್‍ಗಳಲ್ಲೇ ಈ ಸಾಧನೆ ಮಾಡಿದ್ದಾರೆ. ಫೆ.15, 16ರಂದು ನಡೆದ ವೇಣೂರು ಕಂಬಳ ಈ ಹೊಸ ದಾಖಲೆಗೆ ಸಾಕ್ಷಿಯಾಗಿದೆ. ದ್ವಿತೀಯ ಪಿಯುಸಿವರೆಗೆ ಓದಿರುವ ನಿಶಾಂತ್ ವೃತ್ತಿಯಲ್ಲಿ ಕೃಷಿಕ. ತಂದೆ ಕಂಬಳ ಓಟಗಾರನಾಗಿದ್ದರಿಂದ ಅವರಿಂದಲೇ ಮೊದಲ ತರಬೇತಿ ಪಡೆದಿದ್ದರು. ಬಳಿಕ ಗುಣಪಾಲ ಕಡಂಬ ನೇತೃತ್ವದ ಕಂಬಳ ಅಕಾಡೆಮಿಯಲ್ಲಿ ಪರಿಪೂರ್ಣ ತರಬೇತಿ ಸಿಕ್ಕಿತ್ತು. 6 ವರ್ಷಗಳಿಂದ ಹಗ್ಗ ಹಿರಿಯ ವಿಭಾಗದಲ್ಲಿ ಕೋಣಗಳನ್ನು ಓಡಿಸುತ್ತಿರುವ ಇವರು, ಇದುವರೆಗೆ 40 ಪದಕಗಳನ್ನು ಗೆದ್ದಿದ್ದಾರೆ. ಈ ಸಾಲಿನಲ್ಲಿ ಒಂದು ಚಿನ್ನ, ಮೂರು ಬೆಳ್ಳಿ ಪದಕ ಲಭಿಸಿವೆ.

ವೇಣೂರು ಕಂಬಳದಲ್ಲಿ ಶ್ರೀನಿವಾಸ ಗೌಡ 143 ಮೀ. ಉದ್ದದ ಕೆರೆಯಲ್ಲಿ 13.68 ಸೆಕೆಂಡ್‍ಗಳಲ್ಲಿ ಕೋಣಗಳನ್ನು ಓಡಿಸಿದ್ದರು. ಅಂದರೆ ಇದನ್ನು 100 ಮೀ.ಗೆ ಲೆಕ್ಕಿಸಿದಾಗ 9.55 ಸೆಕೆಂಡ್ ಎಂದಾಗುತ್ತದೆ. 143 ಮೀಟರ್ ಉದ್ದದ ಕಂಬಳ ಕೆರೆಯಲ್ಲಿ ನಿಶಾಂತ್ ಹಿರಿಯ ವಿಭಾಗದ ಸೆಮಿಫೈನಲ್‍ನಲ್ಲಿ ಪಾಲ್ಗೊಂಡು ಕೋಣಗಳನ್ನು 13.61 ಸೆಕೆಂಡ್‍ಗಳಲ್ಲಿ ಓಡಿಸಿದ್ದರು. ಆದರೆ ಇದೇ ಫಲಿತಾಂಶ ಫೈನಲ್‍ನಲ್ಲಿ ಪುನರಾವರ್ತಿಸಲು ಕೋಣಗಳು ಸಹಕರಿಸದ ಕಾರಣ ಸಾಧ್ಯವಾಗಲಿಲ್ಲ ಎಂಬುದು ಖೇದದ ಸಂಗತಿ.

ಕಂಬಳ ಕರಾವಳಿಯಲ್ಲಿ ಮನರಂಜನಾ ಕ್ರೀಡೆಯಾಗಿ ಮಾತ್ರವೇ ಉಳಿದಿಲ್ಲ. ಅದೊಂದು ಪ್ರತಿಷ್ಠೆಯೇ ಆಗಿದೆ. ಇಂತಹ ಕ್ರೀಡೆಯಲ್ಲಿ ಸಾಕಷ್ಟು ಪ್ರತಿಭಾನ್ವಿತ ಓಟಗಾರರು ಕಣಕ್ಕಿಳಿಯುತ್ತಾರೆ. ತಮ್ಮ ಜೋಡಿ ಕೋಣಗಳನ್ನು ಆದಷ್ಟು ಕಡಿಮೆ ಸಮಯದಲ್ಲಿ ಗುರಿ ತಲುಪಿಸುವುದು ಇವರ ಗುರಿ. ಅನೇಕ ಪ್ರತಿಭಾನ್ವಿತ ಓಟಗಾರರಿಗೆ ಇದು ಜನ್ಮ ನೀಡಿದರೂ ಕಂಬಳದ ಅಂಗಳದಲ್ಲಷ್ಟೇ ಇವರಿಗೆ ಮನ್ನಣೆ. ಇಂತಹ ಓಟಗಾರರಿಗೆ ಮತ್ತಷ್ಟು ಉತ್ತೇಜನ ಸಿಗಬೇಕಾದ ಅನಿವಾರ್ಯತೆಯಿದೆ. ಆಗ ಖಂಡಿತಾ ಟ್ರ್ಯಾಕ್ ಓಟದಲ್ಲಿ ಬೋಲ್ಟ್ ದಾಖಲೆಯನ್ನು ಮೀರಲು ಅವಕಾಶ ಇದ್ದೆ ಇದೆ.

ನಿಷೇಧ ಭೀತಿಗೆ ಶಾಶ್ವತ ತೆರೆ

 

ಜನಪದ ಕ್ರೀಡೆ ಕಂಬಳಕ್ಕೆ ಅವಕಾಶ ಮಾಡಿಕೊಡುವುದಕ್ಕಾಗಿಯೇ ರಾಜ್ಯ ವಿಧಾನ ಮಂಡಳ ಅಂಗೀಕರಿಸಿದ್ದ ಪ್ರಾಣಿ ಹಿಂಸೆ (ಕರ್ನಾಟಕ ತಿದ್ದುಪಡಿ) ತಡೆ ವಿಧೇಯಕ-2017ಕ್ಕೆ ರಾಷ್ಟ್ರಪತಿಗಳ ಅಂಕಿತ ದೊರೆತಿದೆ. ಇದರಿಂದಾಗಿ ಕಂಬಳ ಕ್ರೀಡೆಯ ಮೇಲೆ ನೇತಾಡುತ್ತಿದ್ದ ನಿಷೇಧದ ಕತ್ತಿ 2018ರಿಂದ ಶಾಶ್ವತವಾಗಿ ದೂರವಾದಂತಾಗಿದೆ.

ಆರಂಭದಲ್ಲಿ ಸುಗ್ರೀವಾಜ್ಞೆಯ ಮೂಲಕ ಕಂಬಳಕ್ಕೆ ಅವಕಾಶ ನೀಡಿದ್ದ ರಾಜ್ಯ ಸರಕಾರ ನಂತರ ಈ ಸಂಬಂಧ ಕಾಯಿದೆಗೆ ತಿದ್ದುಪಡಿ ಮಾಡಿ ಅದನ್ನು ರಾಜ್ಯಪಾಲರಿಗೆ ರವಾನಿಸಿತ್ತು. ರಾಜ್ಯಪಾಲರು ರಾಷ್ಟ್ರಪತಿಗಳ ಅನುಮೋದನೆಗೆ ಈ ಮಸೂದೆಯನ್ನು ಕಳುಹಿಸಿದ್ದರು. ಸುಮಾರು 7 ತಿಂಗಳುಗಳ ಹಿಂದೆ ಕಳುಹಿಸಲಾಗಿದ್ದ ಮಸೂದೆಗೆ ಕೇಂದ್ರ ಗೃಹ ಇಲಾಖೆಯ ಸಲಹೆಯ ಮೇರೆಗೆ ಕೆಲ ಮಾರ್ಪಾಟುಗಳನ್ನು ಸೂಚಿಸಿ ರಾಷ್ಟ್ರಪತಿಗಳು ರಾಜ್ಯಕ್ಕೆ ವಾಪಾಸ್ ಕಳಿಸಿದ್ದರು. ಬಳಿಕ ಸೂಕ್ತ ಮಾರ್ಪಾಟುಗಳೊಂದಿಗೆ ಮತ್ತೊಮ್ಮೆ ಮಸೂದೆಯನ್ನು ಅಂಗೀಕರಿಸಿ ರಾಷ್ಟ್ರಪತಿಗಳಿಗೆ ಕಳಿಸಲಾಗಿತ್ತು. ಎರಡನೇ ಬಾರಿ ಕಳುಹಿಸಿದ ಮಸೂದೆಗೆ 2018ರ ಫೆ. 10ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕುವ ಮೂಲಕ ನಿಷೇಧ ಭೀತಿಗೆ ಶಾಶ್ವತ ತೆರೆ ಬಿದ್ದಿದೆ.

ಕಿಡಿ ಕಾರಿದ್ದ ಡಿವಿಎಸ್

ಜನಪದ ಕಂಬಳ ಕ್ರೀಡೆಗೆ ಪೇಟಾ ಮತ್ತೆ ಅಡ್ಡಗಾಲು ಹಾಕಿದ್ದ ಹಿನ್ನೆಲೆಯಲ್ಲಿ ಪ್ರಾಣಿದಯಾ ಸಂಘದ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಾಗ್ದಾಳಿ ನಡೆಸಿದ್ದರು. ಪ್ರಾಣಿದಯಾ ಸಂಘದ್ದು ಯಾಕೋ ಅತಿಯಾಯಿತು ಎಂದು ಗುಡುಗಿದ್ದರು. ಪೇಟಾದವರು ಸಮಗ್ರ ಅಧ್ಯಯನ ಮಾಡಲಿ. ಕೋಣಗಳ ಪಾಲನೆ ಪೋಷಣೆ ಬಗ್ಗೆ ಅವರಿಗೆ ತಿಳಿದಿದೆಯೇ? ಸಾವಿರಾರು ಕೋಣಗಳ ಬಲಿ ದಿನನಿತ್ಯ ನಡೆಯುತ್ತಿರುವಾಗ ಕಸಾಯಿಖಾನೆಯ ವಿರುದ್ಧ ಪೇಟಾ ಏನು ಮಾಡಿದೆ ಎಂದು ಪ್ರಶ್ನಿಸಿದ್ದರು. ಕಂಬಳ ಕರಾವಳಿ ಭಾಗಕ್ಕಿರುವ ಏಕೈಕ ಮನರಂಜನಾ ಕ್ರೀಡೆ. ನಾವು ಕುದುರೆ ರೇಸಿಗೆ ಹೋಗಲ್ಲ. ಪೇಟಾದವರು ಕುದುರೆ ರೇಸಿಗೆ ಹೋಗಿಲ್ವಾ? ಕುದುರೆಗೆ ಹೊಡೆಯೋದನ್ನು ನೀವು ನೋಡಿಲ್ಲವೇ ಎಂದು ಸವಾಲೆಸೆದಿದ್ದರು.

ಕಂಬಳದ ಓಟಗಾರನಿಗೆ ಕೋಣಗಳೇ ಶಕ್ತಿ. ವಿಶ್ವದಾಖಲೆ ಓಟಗಾರ ಉಸೇನ್ ಬೋಲ್ಟ್ ದಾಖಲೆಯನ್ನು ಮುರಿಯಲು ಶ್ರೀನಿವಾಸಗೌಡ ಮತ್ತು ನಿಶಾಂತ್‍ಶೆಟ್ಟಿಗೆ ಸಾಧ್ಯವಾಗಲು ಕಾರಣವಾಗಿದ್ದೇ ಕೋಣಗಳು. ಕೋಣಗಳು ಓಟದಲ್ಲಿ ಉಸೇನ್ ಬೋಲ್ಟ್ ಅವರ ದಾಖಲೆಯನ್ನು ಮೀರಬಲ್ಲ ಸಾಮಥ್ರ್ಯವನ್ನು ಹೊಂದಿವೆ. ಕಂಬಳದ ಓಟಗಾರರು ಈ ಕೋಣಗಳ ವೇಗದಿಂದಲೇ ತಮ್ಮ ವೇಗವನ್ನು ಹೆಚ್ಚಿಸಿಕೊಳ್ಳುತ್ತಾರೆ. ಕೋಣಗಳನ್ನು ನಿಯಂತ್ರಣ ಮಾಡುವ ಹಗ್ಗದ ಸಹಾಯದಿಂದ ಈ ದಾಖಲೆಯ ನಿರ್ಮಾಣ ಸಾಧ್ಯವಾಗಿದೆ ಎಂಬುದು ಒಪ್ಪಿಕೊಳ್ಳಲೇ ಬೇಕಾದ ಸತ್ಯ.

ಕಂಬಳದ ಓಟದ ರೀತಿಯೇ ಬೇರೆ. ಟ್ರ್ಯಾಕ್ ರೇಸ್‍ನ ರೀತಿಯೇ ಬೇರೆ. ಹಾಗೆ ನೋಡಿದರೆ ಟ್ರ್ಯಾಕ್‍ರೇಸ್‍ಗಿಂತ ಕಂಬಳದ ಓಟ ಕಠಿಣ. ಇಲ್ಲಿ ಬರಿಗಾಲಲ್ಲಿ ಓಡುತ್ತಾರೆ. ಅದರಲ್ಲೂ ಪಾದ ಮಟ್ಟದವರೆಗಿನ ಕೆಸರು ನೀರಿನಲ್ಲಿ ಕಂಬಳದ ಓಟಗಾರರು ಓಡಬೇಕು. ಆದರೆ ಟ್ರ್ಯಾಕ್ ಸ್ಪರ್ಧಿಗಳಿಗೆ ಹಾಗಿಲ್ಲ. ಆಧುನಿಕ ಟ್ರ್ಯಾಕ್‍ನಲ್ಲಿ ಶೂಗಳನ್ನು ಧರಿಸಿಕೊಂಡು ಓಡಲಾಗುತ್ತದೆ. ಹಾಗಾಗಿ ಇವೆರಡನ್ನೂ ಹೋಲಿಸುವುದು ಸರಿಕಾಣದು.

ಕಂಬಳ ವೀರ ಶ್ರೀನಿವಾಸಗೌಡ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಂತೆಯೇ ಕಂಬಳ ಕ್ರೀಡೆ ಸಿನಿಮಾ ಆಗುವ ಸುದ್ದಿ ಬಂದಿದೆ. ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆಯೂ ನೋಂದಣಿಯಾಗಿದೆ. ಡಾ.ನಿಖಿಲ್ ಮಂಜು ಈ ಚಿತ್ರ ನಿರ್ದೇಶಿಸಲಿದ್ದಾರೆ.

ಕಂಬಳ ಕುರಿತ ಸಿನಿಮಾ ನಿರ್ಮಾಣ ಐದು ವರ್ಷದ ಹಿಂದಿನ ಯೋಜನೆ. ಈ ಚಿತ್ರವನ್ನು ಮೊದಲು ಬಾಲಿವುಡ್‍ನಲ್ಲಿ ಮಾಡುವ ಉದ್ದೇಶ ಹೊಂದಲಾಗಿತ್ತು. ಅಷ್ಟೆ ಅಲ್ಲದೆ ಬಾಲಿವುಡ್ ಖ್ಯಾತನಟ ಕರಾವಳಿ ಮೂಲದ ಸುನೀಲ್ ಶೆಟ್ಟಿ, ಪ್ರಕಾಶ್ ಭಂಡಾರಿ ಸೇರಿದಂತೆ ಪ್ರಮುಖರ ಜತೆ ಸಮಾಲೋಚನೆಯೂ ನಡೆದಿತ್ತು. ಆದರೆ ಇದೀಗ ಸ್ವಲ್ಪ ಬದಲಾವಣೆ

ಮಾಡಿ ಮೊದಲಿಗೆ ಮಾತೃಭಾಷೆ ತುಳುವಿನಲ್ಲಿ ಮತ್ತು ಕನ್ನಡದಲ್ಲಿ ಕಂಬಳ ಸಿನಿಮಾ ತೆರೆಗೆ ತಂದು ಬಳಿಕ ಬಾಲಿವುಡ್‍ಗೆ ಕೊಂಡೊಯ್ಯಲು ನಿರ್ಧರಿಸಲಾಗಿದೆ.                           

Leave a Reply

Your email address will not be published.