ಕಟಕಟೆಯಲ್ಲಿ ಶಿಕ್ಷಣ

ಇತ್ತೀಚೆಗೆ ವಾಹಿನಿಯೊಂದರಲ್ಲಿ ‘ಕನ್ನಡದಲ್ಲಿ ಕೋಟ್ಯಧಿಪತಿ’ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಸ್ಪರ್ಧೆಯ ಹಲವು ಸುತ್ತುಗಳನ್ನು ದಾಟಿ ಅಂದು ಅಂತಿಮವಾಗಿ ಹಾಟ್‍ಸೀಟ್ ತಲುಪಿದ್ದವರು ಒಬ್ಬ ಮಹಿಳೆ. ಕಾರ್ಯಕ್ರಮವನ್ನು ಅತ್ಯಂತ ಆಪ್ತ ಧಾಟಿಯಲ್ಲಿ ನಡೆಸಿಕೊಡುವ ಪುನೀತ್ ರಾಜಕುಮಾರ್ ಆರಂಭಿಕ ಹಂತದ ಸಾಮಾನ್ಯ ಸರಳ ಪ್ರಶ್ನೆಗಳನ್ನು ಮಹಿಳೆಯ ಮುಂದಿಡುತ್ತಿದ್ದರು. ಆಗ ಕಂಪ್ಯೂಟರ್ ಪರದೆಯ ಮೇಲೆ ತೇಲಿಬಂದ ಪ್ರಶ್ನೆ: ‘ರಸಾಯನ ಶಾಸ್ತ್ರದಲ್ಲಿ ಬಳಸುವ ಆಮ್ಲಜನಕದ (ಆಕ್ಸಿಜನ್) ಸಂಕೇತಾಕ್ಷರ ಯಾವುದು?’ ಓಎಕ್ಸ್, ಓವೈ, ಓ ಇತ್ಯಾದಿ ಆಯ್ಕೆಗಳಿದ್ದವು.

ಹಾಟ್ ಸೀಟಿನಲ್ಲಿ ಕುಳಿತಿದ್ದರೂ ಉತ್ತರ ಗೊತ್ತಿಲ್ಲದ ಮಹಿಳೆಯ ಉಮೇದು ತಣ್ಣಗಾಗಿತ್ತು. ತಡವರಿಸಿದ ಆ ಮಹಿಳೆ ಸ್ಪರ್ಧೆಯ ನಿಯಮಾವಳಿಯಲ್ಲಿ ಲಭ್ಯವಿದ್ದ ಪ್ರೇಕ್ಷಕರ ನೆರವು ಪಡೆಯುವ ಆಯ್ಕೆಯನ್ನು ಆಯ್ದುಕೊಂಡರು. ಪ್ರೇಕ್ಷಕರ ಬಹುಮತದ ಉತ್ತರ ‘ಓ’ ಎಂದಾಗಿತ್ತು; ಅದು ಸರಿಯುತ್ತರವಾಗಿತ್ತು. ಸಾಮಾನ್ಯ ಜ್ಞಾನದ ಅತಿ ಸಾಮಾನ್ಯ ಪ್ರಶ್ನೆಗೆ ಉತ್ತರ ಗೊತ್ತಿಲ್ಲದ ಆಕೆ ಸಾಮಾನ್ಯ ಮಹಿಳೆಯಾಗಿರಲಿಲ್ಲ. ಕಂಪ್ಯೂಟರ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಮಾಡಿ, ಪದವಿ ಮುಗಿಸಿ ಸ್ನಾತಕೋತ್ತರ ಪದವಿಯನ್ನೂ ಗಳಿಸಿದ್ದಾರೆ. ಹಲವಾರು ವರ್ಷಗಳಿಂದ ಪ್ರತಿಷ್ಠಿತ ಸಾಫ್ಟ್‍ವೇರ್ ಸಂಸ್ಥೆಯಲ್ಲಿ ನೌಕರಿ ಮಾಡಿದ ಅನುಭವವೂ ಅವರ ಜೊತೆಗಿದೆ. ಆದರೂ ಪ್ರಾಥಮಿಕ ಶಾಲೆ ಮಟ್ಟದ ಪ್ರಶ್ನೆಗೆ ಉತ್ತರ ಗೊತ್ತಿಲ್ಲವೆಂದರೆ ಏನರ್ಥ?

ಪ್ರಚಲಿತ ಶಿಕ್ಷಣದ ರೀತಿ ಮತ್ತು ನೀತಿಯಲ್ಲಿ, ಅದರಲ್ಲೂ ವಿಶೇಷವಾಗಿ ಇಂಜಿನಿಯರಿಂಗ್ ವ್ಯಾಸಂಗದಲ್ಲಿ ‘ಮಾಹಿತಿ’ಯೇ ಪ್ರಧಾನವಾಗಿ ‘ಜ್ಞಾನ’ ನೇಪಥ್ಯ ಸೇರಿದೆ ಅಂಬ ಮಾತೂ ಇದೆ. ಅಷ್ಟಕ್ಕೂ ಇಲ್ಲಿ ಮಹಿಳೆಯೆದುರು ಇರಿಸಿದ ಪ್ರಶ್ನೆಯಲ್ಲಿ ಅಡಕವಾಗಿದ್ದು ಕೂಡ ಮಾಹಿತಿಯ ಪರೀಕ್ಷೆಯೇ! ಅಂದರೆ ಇಂದಿನ ವಿದ್ಯಾರ್ಥಿಗಳ ಮಿದುಳಲ್ಲಿ ಜ್ಞಾನದ ಪದರುಗಳನ್ನು ಹೆಚ್ಚಿಸುವಲ್ಲಿ ಹಾಗೂ ಮಾಹಿತಿ ಕಣಜ ತುಂಬಿಸುವಲ್ಲಿ ಏಕಕಾಲಕ್ಕೆ ಸೋಲುಂಟಾಗಿದೆ.

ಹಾಗೆಯೇ ಉನ್ನತ ವಿದ್ಯಾರ್ಹತೆ ಹೊಂದಿದ ಕೋಟ್ಯಧಿಪತಿ ಕನಸಿನ ಮಹಿಳೆಗೆ ಹೊಳೆಯದ ಉತ್ತರ ಸಾಮಾನ್ಯ ಪ್ರೇಕ್ಷಕ ಸಮೂಹಕ್ಕೆ ದಕ್ಕಲು ಸಾಧ್ಯವಾಗಿದ್ದು ಗಮನಾರ್ಹ. ಬಹುಶಃ ಜನಸಮುದಾಯದ ಸಾಮೂಹಿಕ ಪ್ರಜ್ಞೆಯಲ್ಲಿ ಜ್ಞಾನ ಮತ್ತು ಮಾಹಿತಿ ಸಹಜವಾಗಿ ಶೇಖರಗೊಂಡಿರುತ್ತದೆ; ಅದನ್ನು ಉದ್ದೀಪಿಸುವ, ಪ್ರಕಟಣೆಗೆ ಅವಕಾಶ ಕಲ್ಪಿಸುವ ಕಾರ್ಯವಾಗಬೇಕಷ್ಟೇ!

ಇದು ಆ ಮಹಿಳೆಯನ್ನು ಹಂಗಿಸುವ ಅಥವಾ ಟೀಕಿಸುವ ಸೀಮಿತ ಉದ್ದೇಶದ ಟಿಪ್ಪಣಿಯಲ್ಲ; ಈ ಪ್ರಸಂಗ ನಮ್ಮ ಇಡೀ ಶಿಕ್ಷಣ ವ್ಯವಸ್ಥೆಯನ್ನು ಕಟಕಟೆಯಲ್ಲಿ ನಿಲ್ಲಿಸಿ ಪಾಟೀಸವಾಲಿಗೆ ಒಳಪಡಿಸುವ ಅಗತ್ಯವನ್ನು ಸೂಚಿಸುತ್ತದೆ. ಅದಕ್ಕಾಗಿ ಈ ಸಂಚಿಕೆಯಲ್ಲಿ ಶಿಕ್ಷಣ ಕ್ಷೇತ್ರದ ತಳಪಾಯವಾದ ಶಿಕ್ಷಕರನ್ನು ಕೇಂದ್ರೀಕರಿಸಿದ ಅತಿ ಮುಖ್ಯಚರ್ಚೆ ಆರಂಭಿಸಿದ್ದೇವೆ. ಇದಕ್ಕೆ ಪೂರಕವಾಗಿ ದೆಹಲಿಯ ಕೇಜ್ರೀವಾಲ್ ನೇತೃತ್ವದ ಸರ್ಕಾರ ಶಿಕ್ಷಣರಂಗಲ್ಲಿ ನಡೆಸಿರುವ ಅಪರೂಪದ ಪ್ರಯೋಗವನ್ನು ‘ಒಂದು ಮಾದರಿ’ಯಾಗಿ ಮಂಡಿಸಿದ್ದೇವೆ. ಸರ್ಕಾರ, ಇಲಾಖೆ, ಸಂಸ್ಥೆಗಳು, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಈ ವಿಷಯದತ್ತ ತಮ್ಮ ಚಿತ್ತ ತಿರುಗಿಸಲಿ ಎಂಬ ಆಸೆ, ಆಗ್ರಹ ನಮ್ಮದು

ಸಮಾಜಮುಖಿಯಂತಹ ವಿಷಯ ಪ್ರಧಾನ ಪತ್ರಿಕೆಗೆ ನುಣುಪುಹಾಳೆ ಮೇಲಿನ ಬಹುವರ್ಣ ಮುದ್ರಣ ಬೇಕೇ ಎಂದು ಅನೇಕ ಹಿತೈಷಿಗಳು ಆಕ್ಷೇಪಿಸುತ್ತಲೇ ಇದ್ದರು. ಅವರ ದನಿಯಲ್ಲಿ ಪತ್ರಿಕೆ ಹೊತ್ತುಕೊಳ್ಳುವ ಹಣಕಾಸಿನ ಹೊರೆ ಬಗ್ಗೆ ಕಾಳಜಿ, ಕಳಕಳಿ ಬೆರೆತಿತ್ತು. ಈ ಸಂಚಿಕೆಯ ಬಾಹ್ಯ ಸ್ವರೂಪದಲ್ಲಿ ಒಂದಿಷ್ಟು ಪ್ರಯೋಗ ಮಾಡಿದ್ದೇವೆ; ಅಂತಃಸತ್ವ ಅಬಾಧಿತ.

One Response to "ಕಟಕಟೆಯಲ್ಲಿ ಶಿಕ್ಷಣ"

Leave a Reply

Your email address will not be published.