ಕಣ್ತೆರೆಸುವ ಮೀಸಲಾತಿ ವಿಶ್ಲೇಷಣೆ

-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ಸಮಾಜಮುಖಿ ಮಾರ್ಚ್ ಸಂಚಿಕೆ ತುಂಬ ಸರಿಯಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾಡುತ್ತಿರುವ ತಪ್ಪುಗಳೇನು? ಕುರಿತ ಎಲ್ಲ ಲೇಖನಗಳಲ್ಲೂ ಅರ್ಥಪೂರ್ಣ ಚರ್ಚೆ ನಡೆದಿದೆ. ಆದರೆ ಡಾ.ಬಿ.ವಿ.ವಸಂತಕುಮಾರ್ ಅವರ ವಾದವನ್ನು ಮಾತ್ರ ಒಪ್ಪಲಾಗಲಿಲ್ಲ. ಇವರು ಸಮಾಜಮುಖಿಯ ಪ್ರಶ್ನೆಯನ್ನೇ ಆರೆಸ್ಸೆಸ್ ಸಮರ್ಥನೆಗೆ ಬಳಸಿಕೊಳ್ಳಲು ಯತ್ನಿಸಿ ಎಡವಿ ಬಿದ್ದಿದ್ದಾರೆ. ಹೀಗಾಗಿ ಇವರು ಉಳಿದ ಲೇಖನಗಳ ಚರ್ಚೆಗೆ ಉತ್ತರಿಸುವ ಯತ್ನ ಮಾಡಲಿ ಎಂದು ಮಾತ್ರ ನಾವು ಆಶಿಸೋಣ.

ಈ ಮುಖ್ಯ ಚರ್ಚೆಗಿಂತಲೂ ‘ಸಮಕಾಲೀನ’ ವಿಭಾಗದಲ್ಲಿ ನಡೆದ ಮೀಸಲಾತಿ ಹೋರಾಟದ ವಿಶ್ಲೇಷಣೆಗಳು ನಿಜಕ್ಕೂ ನಮ್ಮೆಲ್ಲರ ಕಣ್ತೆರೆಸುವಂತಿವೆ. ಸಾವಿರಾರು ವರ್ಷಗಳಿಂದ ಯಾರು ಅಸ್ಪೃಶ್ಯತೆ, ದೇವದಾಸಿ ಪದ್ಧತಿಯಂಥ ಅಮಾನವೀಯ ಶೋಷಣೆಗೆ ಗುರಿಯಾಗಿದ್ದಾರೋ ಅವರಿಗೆ ಮಾತ್ರ ಮೀಸಲಾತಿಯ ಸಾಮಾಜಿಕ ನ್ಯಾಯ ದೊರೆಯಬೇಕೆಂಬುದು ಡಾ.ಅಂಬೇಡ್ಕರ್ ಅವರ ಗುರಿಯಾಗಿತ್ತು. ಆದರೆ ಈ ಮಾನವೀಯ ದೃಷ್ಟಿಯನ್ನು ಅರ್ಥಮಾಡಿಕೊಳ್ಳದ ಮೇಲ್ವರ್ಗದ ಜಾತಿಜನಾಂಗಗಳು ಇಂದು ಮಾಡುತ್ತಿರುವ ಹೋರಾಟ ತುಂಬಾ ಕ್ರೂರವಾದದ್ದಾಗಿದೆ. ಅಂತಹ ಕ್ರೌರ್ಯಕ್ಕೆ ಬುದ್ಧಿಹೀನ ರಾಜಕಾರಣಿಗಳು ಕೈಜೋಡಿಸಿರುವುದರ ಹಿಂದೆ ಸಂವಿಧಾನ ವಿರೋಧಿ ಮನಸ್ಸುಗಳ ನಿಗೂಢ ಸಂಚು ಇರುವುದು ಕೂಡ ಸ್ಪಷ್ಟವಾಗುತ್ತಿದೆ.

ಈ ಎಚ್ಚರ ವಿಶ್ವವಿದ್ಯಾಲಯಗಳಿಂದ ಪ್ರತಿವರ್ಷ ಹೊರಬರುವ ನಮ್ಮ ಸಾವಿರಾರು ಪದವೀಧರರಲ್ಲೂ ಕಂಡುಬರುವುದಿಲ್ಲ. ಅಂದರೆ ಅಷ್ಟರಮಟ್ಟಿಗಿನ ಅವೈಚಾರಿಕ ಶಿಕ್ಷಣ ನಮ್ಮ ವಿಶ್ವವಿದ್ಯಾಲಯಗಳಲ್ಲೂ ತುಂಬಿ ತುಳುಕುತ್ತಿದೆ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಸಮಾಜಮುಖಿ ತುಂಬಾ ಆರೋಗ್ಯಕರ ಚರ್ಚೆ, ವಿಶ್ಲೇಷಣೆ ನೀಡಿದೆ. ವಿಶ್ವವಿದ್ಯಾಲಯಗಳಲ್ಲೂ ಸಿಗದಿರುವ ವೈಚಾರಿಕತೆಯನ್ನು ಸಮಾಜಮುಖಿ ನಮ್ಮ ಸಮಾಜದಲ್ಲಿ ಬಿತ್ತಿ ಬೆಳೆಯುವ ಕಾರ್ಯ ಮಾಡುತ್ತಿರುವುದು ನಿಜಕ್ಕೂ ದೊಡ್ಡದು. ನಿಮ್ಮ ಈ ತರಹದ ಶ್ರಮಕ್ಕೆ ಧನ್ಯವಾದಗಳು.

ಮತ್ತೆ ‘ಯಡಿಯೂರಪ್ಪನವರ ಎರಡನೇ ಇನಿಂಗ್ಸ್: ಮಾಡಿದ್ದೇನು? ಬಿಟ್ಟಿದ್ದೇನು?’ ಎಂಬ ಪ್ರಶ್ನೆಗೆ ಉತ್ತರಿಸುವುದಾದರೆ ಯಡಿಯೂರಪ್ಪ ತಮ್ಮ ಎರಡನೆಯ ಇನಿಂಗ್ಸ್‍ನಲ್ಲಿ ಯಾರ ಪ್ರಶ್ನೆಗೂ ಉತ್ತರಿಸದೆ ಹಗಲಿರುಳು ತಮ್ಮ ಅಧಿಕಾರ ಉಳಿಸಿಕೊಳ್ಳವ ಪ್ರಶ್ನೆಗೆ ಮಾತ್ರ ತಮ್ಮ ಕಾರ್ಯಶೈಲಿಯಿಂದಲೇ ಉತ್ತರಿಸುತ್ತಿದ್ದಾರೆ!

ಒಂದು ವರದಿಯ ಪ್ರಕಾರ ಕರ್ನಾಟಕ ಸರ್ಕಾರಕ್ಕೆ 2 ಲಕ್ಷ ಸರಕಾರಿ ನೌಕರರ ಅಭಾವ ಕಾಡುತ್ತಿದೆ. ಆದರೆ ಈ ಅಭಾವ ನಿವಾರಿಸಲು ಖಜಾನೆಯಲ್ಲಿ ಹಣವಿಲ್ಲವೆಂದು ಅವರು ಹೇಳುತ್ತಾರೆ. ಕೊರೋನ ಸಂಕಷ್ಟವೆಂದು ಹೇಳುತ್ತಾರೆ. ಆದರೆ ಜಾತಿಗೊಂದು ನಿಗಮ-ಮಂಡಳಿ ಪ್ರಾಧಿಕಾರ ರಚಿಸಿ ಕೋಟ್ಯಂತರ ಹಣ ನೀಡಲು ಇವರಿಗೆ ಹೇಗೆ ಸಾಧ್ಯವಾಯಿತು? ರೈತರ ಆತ್ಮಹತ್ಯೆಯೂ ಮುಂದುವರೆದಿರುವಾಗ ಮಠಗಳಿಗೆ ಹಣ ನೀಡಲು ಹೇಗೆ ಸಾಧ್ಯವಾಯಿತು ಈ ತರಹದ ಪ್ರಶ್ನೆಗಳನ್ನು ಕೇಳಿಸಿಕೊಳ್ಳಲಾರದಷ್ಟು ಕಿವುಡು ಅವರಿಗೆ ಉಂಟಾಗಿದೆ. ಒಂದು ಕಡೆ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ಬಡವರ ಬದುಕಿಗೆ ಬರೆ ಎಳೆಯಲಾಗುತ್ತಿದೆ. ಮತ್ತೊಂದು ಕಡೆ ಮನೆಮನೆಗೂ ಮದ್ಯ ಸುಲಭವಾಗಿ ಸಿಗುವಂತೆ ಮಾಡಿ, ಬಡವ-ಶ್ರೀಮಂತರೆಲ್ಲರನ್ನೂ ಕುಡಿತದ ನರಕಕ್ಕೆ ಕಳಿಸಲಾಗುತ್ತಿದೆ. ಅಸಹಾಯಕರಾದ ಜನ ಬೀದಿಗಿಳಿದು ಹೋರಾಡುತ್ತಿದ್ದಾರೆ. ಆದರೆ ಯಡಿಯೂರಪ್ಪನವರಿಗೆ ಈ ಯಾವುದೂ ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಏಕೆಂದರೆ ಅವರ ಹಿಂದೆ ಬಲಿಷ್ಠ  ಜಾತಿಗಳಿವೆ, ಮಠಗಳು ಇವೆ

-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

Leave a Reply

Your email address will not be published.