ಕತ್ತಿನಾಚೆ ಈಚೆ ಭುಜಗಳೇ ಇಲ್ಲ…

– ಸುರೇಶ ಎಲ್. ರಾಜಮಾನೆ

ಮೊಂಡಾದ ಕಡ್ಡಿಗಳ ಕಸಬರಿಗೆಯ ಮುಂದೆ

ಅವಳು ತನ್ನೆಲ್ಲ ಕಷ್ಟಗಳನ್ನು

ಹೇಳಿಕೊಳ್ಳುತ್ತಿದ್ದಾಳೆ

ಮಕ್ರ್ಯೂರಿ ಲೈಟಿನ ಕೆಳಗೆ ಮೈ ಉರಿಯ

ತಣ್ಣಗಾಗಿಸಿಕೊಳ್ಳಲು ಪರಿತಪಿಸುತ್ತಿದ್ದಾಳೆ

ಬೆವರನ್ನು ಬೆಚ್ಚಗಾಗಿಸಿಕೊಂಡು

ಒಂದೇ ಸವನೆ ಒಳಕೋಣೆಯಲಿ

ಒದ್ದಾಡುತ್ತಿದ್ದಾಳೆ…

ದಿನಸಿ ಅಂಗಡಿಗೆ ಹೋಗಿ ದಿವಸಕ್ಕಾಗುವಷ್ಟು

ಅಕ್ಕಿ ಕಾಳುಗಳ ಮೂಟೆ ಹೊತ್ತು ತಂದಳು

ಒಲೆಯಲಿ ಕೆಂಡ ನಗುತ್ತಿರುವುದನ್ನು ಗಮನಿಸಿ

ಒಂದೆರಡು ದೀರ್ಘ ಉಸಿರನ್ನು

ಹೊರಹಾಕಿದಳು

ಸಮಾಧಾನದ ಸಾರಿಗೆ ಹಸಿಬಿಸಿ ಅನ್ನ

ಬೆರೆತುಕೊಂಡು ಬಾಯಿಗಿಳಿಯಿತು

ಭಾರವಾದ ಎದೆಯಲಿ

ಬಾಗಿಲಿಗೆ ಚಿಲಕ ಬಿದ್ದಿತು.

ಚುಚ್ಚಿದ ಮುಳ್ಳುಗಳು ಅವಳ ಪರವಾಗಿ

ಧರಣಿ ಕುಳಿತಿವೆ

ಕುಳಿತ ಜಾಗದಲ್ಲೆಲ್ಲ ಆದ ಗಾಯಗಳ ವಿರುದ್ಧ

ನೋವು ಕೀವುಗಳ ಹೊಲಸು ವಾಸನೆಯೆದುರು

ಅಗರಬತ್ತಿಗೆ ಸೋಲು

ಮೇಲಿಂದಮೇಲೆ ಬಿದ್ದ ಜಾಗದಲ್ಲಿ

ಎದ್ದು ನಿಲ್ಲುವ ಹಟಕ್ಕೆ ಚಟ್ಟಕಟ್ಟಿ

ಇಟ್ಟಹೆಜ್ಜೆ, ಬಿಚ್ಚಿದ ಜಡೆ, ಕೊಟ್ಟ ಮಾತುಗಳೆಲ್ಲ

ಕತ್ತಿಯ ತುದಿಯಲಿ ಕುಳಿತು

ನೆತ್ತಿಯಮೇಲೆ ನೇತಾಡುತ್ತಿವೆ

ಕತ್ತಿನಾಚೆ ಈಚೆ

ಭುಜಗಳೇ ಇಲ್ಲ.

ಗಾಳಿಯ ಗಂಧ ಹಾಳೆಯಲಿ ಚಂದದ ಚಿತ್ರವಾಗಿದೆ

ವಿಚಿತ್ರವಾದ ಗೆರೆಗಳು ಅಲ್ಲಲ್ಲಿ ಮೂಡಿವೆ

ಕೆನ್ನೆಯಮೇಲಿನ ಮೊಡವೆಯೊಂದು

ವಯಸ್ಸಿನಲಿ ಅಂತರ ಕಾಯ್ದುಕೊಂಡರೂ

ಮನಸ್ಸಿನಲ್ಲಿನ ಮುಖ ಸುಕ್ಕುಗಟ್ಟಿದೆ

ಎದೆಯಮೇಲಿದ್ದ ಚಪ್ಪಡಿಕಲ್ಲುಗಳು

ಬಿರುಕುಬಿಟ್ಟಿರುವುದೂ ವಿಶೇಷ

ಇನ್ನೇನಿದೆ ಅಲ್ಲಿ ಅವಳಲ್ಲಿ ಅವಳೇ ಒಂದು ಕಸ

ಕಸಬರಿಗೆಯ ಕಡ್ಡಿಗಳೊಡನೆ ಬಂದಿಯಾಗಿದ್ದಾಳೆ

ಮೊಂಡು ಕಡ್ಡಿಗಳು ಮತ್ತೆ ಮತ್ತೆ

ಮನಸು ತೆರೆದುಕೊಳ್ಳುತ್ತಿವೆ.

Leave a Reply

Your email address will not be published.