ಕನಕದಾಸರ ‘ಮೋಹನ ತರಂಗಿಣಿ’

ಭೋಗದ ವರ್ಣನೆ, ಶೃಂಗಾರದ ವರ್ಣನೆ, ಪುರದ ವರ್ಣನೆ, ಊಟದ ವರ್ಣನೆ, ಮಾತೃವಾತ್ಸಲ್ಯದ ವರ್ಣನೆ, ವಿರಹದ ವರ್ಣನೆ, ಯುದ್ಧ ವರ್ಣನೆ ಹೀಗೆ ಎಲ್ಲವೂ ಕನಕದಾಸರ ಕಾವ್ಯದಲ್ಲಿ ವರ್ಣನಾ ವೈಭವವಾಗಿ ಮೆರೆದಿರುವುದನ್ನು ಕಾಣಬಹುದಾಗಿದೆ.

ದಾಸಸಾಹಿತ್ಯದ ಅಪೂರ್ವ ರತ್ನ ಕನಕದಾಸರು ಕೇಶವನ ಆರಾಧಕನಾಗಿ, ಕವಿಯಾಗಿ, ಸಂತರಾಗಿ, ಧರ್ಮ ಸಮಾಜ ಸಂಸ್ಕೃತಿಯ ಹಿತಚಿಂತಕರಾಗಿ ಭಾರತೀಯ ಸಂಸ್ಕೃತಿಗೆ ನೀಡಿದ ಕಾಣಿಕೆ ಅತ್ಯಾದ್ಭುತವಾದದ್ದು.

ನಡುಗನ್ನಡ ಕಾಲದ ಮಹತ್ವದ ಕವಿಯಾಗಿ ಅಪಾರ ಲೋಕಾನುಭವ ಹಾಗೂ ಅಸಾಧರಣ ಪ್ರತಿಭೆಯಿಂದ ಸಾಮಾಜಿಕ ಪರಿವರ್ತನೆಗೆ ಹಾಗೂ ಜಾತಿ ವರ್ಣಭೇದದ ತಲ್ಲಣಗಳಿಗೆ ತಕ್ಕ ಉತ್ತರ ನೀಡಿದವರು ಕನಕದಾಸರು. ಕನ್ನಡ ನಾಡು ನುಡಿ ಸಂಸ್ಕತಿಯಲ್ಲಿ ಬೆರೆತು ಹೋಗಿರುವ ಕನಕದಾಸರು ಕೀರ್ತನಕಾರ ಮಾತ್ರವಲ್ಲ ಸಾಹಿತ್ಯ ಲೋಕದ ಮಹಾ ಕವಿಯೂ ಹೌದು.

ಕನಕದಾಸರು ಹರಿದಾಸ ಪರಂಪರೆಯ ಕೀರ್ತನಕಾರರಾಗಿ ಮಾತ್ರ ಉಳಿಯದೆ ಕವಿಯಾಗಿ ನಾಲ್ಕು ಕಾವ್ಯ ಕೃತಿಗಳನ್ನು ರಚಿಸಿದರು. ಇವರ ಮೋಹನ ತರಂಗಿಣಿಯು ಮಹಾಕಾವ್ಯದ ರೂಪದಲ್ಲಿದ್ದು, ಕನಕದಾಸರು ತಮ್ಮ ಕಾಲದ ಸ್ಥಿತಿಗತಿಗಳನ್ನು ಪೌರಾಣಿಕ ವಸ್ತುವನ್ನಾಗಿಸಿಕೊಂಡು ಬಿಂಬಿಸುವ ಪ್ರಯತ್ನವನ್ನು ಮಾಡಿದ್ದಾರೆ. ತಮ್ಮ ಬದುಕಿನಲ್ಲಿ ಕಂಡ ವಿಜಯನಗರದ ಸಾಮ್ರಾಜ್ಯದ ಏಳು-ಬೀಳುಗಳನ್ನು ಚಿತ್ರಿಸಿದ್ದಾರೆ.

ಶೃಂಗಾರ ಕಾವ್ಯವಾಗಿ ಮೂಡಿಬಂದಿರುವ ಮೋಹನ ತರಂಗಿಣಿಯಲ್ಲಿ ಭಾರತ, ಭಾಗವತ, ಹರಿವಂಶ ಪುರಾಣ, ವಿಷ್ಣು ಪುರಾಣದಲ್ಲಿರುವ ಶ್ರೀಕೃಷ್ಣನ ಕತೆಯು ಅಡಕವಾಗಿದೆ. ಶಬ್ದಲಂಕಾರ ಅರ್ಥಲಂಕಾರಗಳಿಂದ ಕೂಡಿರುವ ಈ ಕಾವ್ಯ ಮೊಟ್ಟ ಮೊದಲ ಸಾಂಗತ್ಯ ಕೃತಿ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

ಶ್ರೀಕೃಷ್ಣನನ್ನು ಪ್ರಧಾನ ನಾಯಕನನ್ನಾಗಿಸಿರುವ ಈ ಕೃತಿಯನ್ನು ಕನಕದಾಸರು ‘ಕೃಷ್ಣಚರಿತೆ’ ಎಂದೂ ಕರೆದಿದ್ದಾರೆ. 42 ಸಂಧಿಗಳನ್ನೊಳಗೊಂಡ ಈ ಸಾಂಗತ್ಯ ಕೃತಿಯಲ್ಲಿ 2800 ಪದ್ಯಗಳಿವೆ.

ಕನಕದಾಸರ ಸೂಕ್ಷ್ಮ ದೃಷ್ಟಿ ‘ಮೋಹನ ತರಂಗಿಣಿ’ಯ ಮುಖ್ಯ ಮೋಹಿನಿಯೆಂದರೆ ವಿವಿಧ ವರ್ಣನೆಗಳ ವೈವಿಧ್ಯ ಮತ್ತು ಸ್ವಭಮೋಕ್ತಿ. 16ನೇ ಶತಮಾನದ ಕಾಲದ ಭೋಗದ ವರ್ಣನೆ, ಶೃಂಗಾರದ ವರ್ಣನೆ, ಪುರದ ವರ್ಣನೆ, ಊಟದ ವರ್ಣನೆ, ಮಾತೃವಾತ್ಸಲ್ಯದ ವರ್ಣನೆ, ವಿರಹದ ವರ್ಣನೆ, ಯುದ್ಧ ವರ್ಣನೆ ಹೀಗೆ ಎಲ್ಲವೂ ಕನಕದಾಸರ ಕಾವ್ಯದಲ್ಲಿ ವರ್ಣನಾ ವೈಭವವಾಗಿ ಮೆರೆದಿರುವುದನ್ನು ಕಾಣಬಹುದಾಗಿದೆ.

ಹೆಣ್ಣು ಗಂಡುಗಳ ಪ್ರೇಮ ಅನುಪಮವಾಗಿ ಅಭಿವ್ಯಕ್ತಿಯಾಗುವುದು ಹೆಣ್ಣಿನಲ್ಲಿ ಎಂಬುವುದನ್ನು ಇಲ್ಲಿನ ಹೆಣ್ಣಿನ ಪಾತ್ರಗಳು ಸಾದರಪಡಿಸುತ್ತವೆ. ಹೆಣ್ಣು ಸಂಗಾತಿಯಾಗಿ ತಾಯಿಯಾಗಿ, ಜೀವದ ಕಾಮವನ್ನು ತೋರುವ ಪ್ರೇಮ ಕಥನವಾಗಿ ಮೋಹನ ತರಂಗಿಣಿ ಕಂಡು ಬರುತ್ತದೆ. ಶ್ರೀ ಕೃಷ್ಣ-ರುಕ್ಮಿಣಿ, ರತಿ-ಮನ್ಮಥ, ಉಷಾ-ಅನಿರುದ್ಧ ಈ ಮೂರು ಕಥೆಗಳಲ್ಲಿ ಪ್ರೇಮ ಮತ್ತು ಕಾಮಗಳ ಫಲವಂತಿಕೆಯ ರೂಪವು ಹೆಣ್ಣಿನಲ್ಲೇ ಮೂರ್ತಗೊಳ್ಳುವುದನ್ನು ಕಾಣಬಹುದಾಗಿದೆ.

ಮೋಹನ ತರಂಗಿಣಿ ಕಾವ್ಯವೂ ಪೌರಾಣಿಕ ಹಿನ್ನೆಲೆಯ ಪ್ರಮುಖ ಅಂಶಗಳನ್ನು ಈ ಕೆಳಗಿನ ಪದ್ಯಗಳಲ್ಲಿ ಗುರುತಿಸಬಹುದಾಗಿದೆ.

ಪೂಸರದಹನ ಕಾಮೋತ್ಪತ್ತಿ ವರಶಂಬ
ರಾಸುರವಧೆ ಕಂತುಸುತನ
ಭಾಸುರಲೀಲೆ ಬಾಣನ ಗೆದ್ದ ಜಯಲ
ಕ್ಷ್ಮೀಶನ ಕೃತಿಯ ವರ್ಣಿಪೆನು

ಮನ್ಮಥ ದಹನ, ಕಾಮೋತ್ಪತ್ತಿ, ಶಂಬರಾಸುರನ ವಧೆ, ಮನ್ಮಥನ ಪ್ರಜ್ವಲ ಲೀಲೆ, ಬಾಣನ ಗೆದ್ದ ಜಯಲಕ್ಷ್ಮೀಶನ ಕೃಪೆಯನ್ನು ವರ್ಣಿಸುವೆನೆಂದು ಪೀಠಿಕೆಯಲ್ಲಿಯೇ ಕನಕದಾಸರು ಜಯ ಸಾಧಿಸಿದ್ದಾರೆ.

ವಾಣಿಯ ಧವನೆಂಬ ವ್ಯವಹಾರಿ ಪಟ್ಟಿಯ
ಗೋಣಿಯೊಳ್ ತುಂಬಿದ ರತ್ನ
ಓಣಿಯೊಳ್ ಚೆಲ್ಲಿದಂತಿದೆ ನಿನ್ನ ಕೃತಿಯೆಂಬ
ಮಾಣಿಕ ಮನ್ಮನೋನಾಥ

ವಾಗ್ದೇವಿಯ ಪತಿಯೆಂಬ ವ್ಯವಹಾರಿ ರೇಷ್ಮೆಯ ಗೋಣಿಚೀಲದಲ್ಲಿ ತುಂಬಿದ ರತ್ನವನ್ನು ಓಣಿಯಲ್ಲಿ ಚೆಲ್ಲಿದಂತಿದೆ ನಿನ್ನ ಕೃತಿ ರತ್ನ ಎನ್ನುತ್ತಾ ಕನಕರು ವಿಜಯನಗರವನ್ನು ದ್ವಾರಕೆಗೆ ಹೋಲಿಸಿ ಕೃಷ್ಣದೇವರಾಯನನ್ನು ಶ್ರೀ ಕೃಷ್ಣನಿಗೆ ಹೋಲಿಸುತ್ತಾ ಕಾವ್ಯ ಹೇಳಲು ಪ್ರಾರಂಭಿಸುತ್ತಾರೆ.

ದ್ವಾರಕಾಪುರ ವರ್ಣನೆಯಲ್ಲಿ ಕಂಡು ಬರುವ ಪ್ರಮುಖ

ಕಂಚುಗಾರರು, ಆಯುಧಗಾರರು, ಕಮ್ಮಾರರು ಹೊಳೆಯುವ ಚಿನ್ನದ ಮಂಚ ತಯಾರಕರು, ಶಿಲ್ಪಿಗಳು, ಕುಶಲ ವಿದ್ಯಾವಂತರಾದ ಅಕ್ಕಸಾಲಿಗರು ಹೀಗೆ ಬೀದಿಯ ಎರಡೂ ಬದಿಯಲ್ಲಿ ಪಂಚಾಳರಿದ್ದರು ಎಂದು ಕನಕದಾಸರು ವಿಜಯನಗರವನ್ನೇ ದ್ವಾರಕೆಗೆ ಹೋಲಿಸಿ ಕೃಷ್ಣದೇವರಾಯನನ್ನು ಶ್ರೀ ಕೃಷ್ಣನಿಗೆ ಹೋಲಿಸುತ್ತಾರೆ.

ಕಂಚುರರ, ಕೈದುಗಾರರು ಹೊಳೆವ
ಮಂಚಗಾರರು ಶಿಲ್ಪಿಗರು
ಸಂಚುಗಾರರು ಸದ್ವಿದ್ಯಾಧಿಕರಾದ
ಪಂಚಾಳರಿರ್ದರಿಕ್ಕೆಲದಿ

ಶರಧಿಯೊಳೊಗೆದ ಹೊಂದಾವರೆಯಂತಿರ್ಪ
ಪುರ ಮಧ್ಯದಲಿ ಕೃಷ್ಣರಾಯ
ಅರಮನೆ ಕನ್ನಿಕೆಯೆಂಬಂತೆ ಜನ ಮೋ
ಹರಿಸಲು ಕಣ್ಗೆ ರಂಜಿಸಿತು

ಆ ಪಟ್ಟಣವು ಸಾಗರದಲ್ಲಿರುವ ಸುವರ್ಣ ಕಮಲದಂತೆ ಶೋಭಿಸುತ್ತಿತ್ತು. ಅದರ ಮಧ್ಯೆ ಕೃಷ್ಣರಾಯನ ಅರಮನೆಯು ಲಕ್ಷ್ಮೀಯಂತೆ ಮನೋಹರವಾಗಿತ್ತು.

ಬ್ರಾಹ್ಮಣರ ಕೇರಿಗೆ ಬಂದರೆ ಅಲ್ಲಿ ಮನೆಯ ಮುಂದೆ ತುಳಸೀ ಕಟ್ಟೆಯ ಮುಂದೆ ನಡೆಯುತ್ತಿರುವ ಪೂಜೆ, ಭಜನೆ, ಹೋಮ ಮಾಡುವ ಬ್ರಾಹ್ಮಣರು, ಕನ್ನಡಕ ಹಾಕಿಕೊಂಡು ಸಣ್ಣವರಿಗೆ ಪಾಠ ಹೇಳುವ ಉಪಾಧ್ಯಾಯರು ಸ್ನಾನ ಮಾಡಿ ಪಟ್ಟನಾಮ ಹಾಕಿಕೊಂಡ ವೈಷ್ಣವರು, ಊಟದ ಮನೆಯ ಮುಂದೆ ಹೊಟ್ಟೆ ಮುಂದು ಮಾಡಿಕೊಂಡು ಬಾಗಿಲು ಹಿಡಿಸದೆ ನುಗ್ಗಾಡುವ ಹೊಸ ರಾಜನ ಬಳಗದಂತಿರುವ ಬ್ರಾಹ್ಮಣರು ಇವೆಲ್ಲಾ ನಿದರ್ಶನಗಳು ಅಂದಿನ ವಾಸ್ತವತೆಯನ್ನು ನಿರೂಪಿಸುತ್ತವೆ.

ಕಾವ್ಯದ ಸೌರಾಷ್ಟ್ರ ವರ್ಣನಾ ಸಂಧಿಯಲ್ಲಿ ಕಂಡು ಬರುವ ವಧೂಟಿಯ ಅಂಶ ಬಹುಮುಖ್ಯವಾದದ್ದು.

ಕೃತಿ ವೇಳ್ದವ ಕನಕ ದಾಸೋತ್ತಮ ಕೇಳ್ದವ
ಳ್ಸತಿ ಸುಜ್ಞಾನ ವಧೂಟಿ
ಕೃತಿಗೆ ಕರ್ತನು ಕಾಗಿನೆಲೆಯಾದಿ ಕೇಶವ
ಕೃತಿಯ ಕೇಳ್ದರೆ ಪುಣ್ಯವಹುದು

ಈ ಕೃತಿ ರಚಿಸಿದವರು ಕನಕದಾಸರು, ಕೇಳಿದವಳು ಜ್ಞಾನಸಂಪನ್ನೆಯಾದ ಯುವತಿ ವಧೂಟಿ ಎಂಬ ಹೆಣ್ಣು. ಕಾರಣ ಕರ್ತನಾದವನು ಕಾಗಿನೆಲೆಯಾದಿಕೇಶವ ಕೇಳಿದವರಿಗೆ ಪುಣ್ಯ ಲಭಿಸುವುದೆಂದು ಹೇಳಿದ್ದಾರೆ ಕನಕರು.

ಕನಕದಾಸರ ಜೀವನದ ಬಹುಮುಖ್ಯ ಅಂಶ ಅವರ ಹೆಂಡತಿಯ ಕುರಿತಾದದ್ದು. ಇಲ್ಲಿ ವಧೂಟಿ ಅವರ ಹೆಂಡತಿಯೆ ಎಂಬ ಅರ್ಥ ನೀಡುತ್ತದೆ. ಕನಕದಾಸರು ಕಾಗಿನೆಲೆಯಲ್ಲಿದ್ದಾಗ ವಿರಕ್ತ ವೇಶ್ಯೆಯೊಬ್ಬಳು ಕನಕರ ಶಿಷ್ಯತ್ವವನ್ನು ಸ್ವೀಕರಿಸಿ ಕನಕನ ಸಂಗಾತಿಯಾಗಿದ್ದಳೆಂಬ ಪ್ರತೀತಿ ಇದೆ. ರಸಿಕತನ, ಸೌಂದರ್ಯ, ಗುಣವಂತಿಕೆ, ಶೌರ್ಯ, ಸಮಾಜ ಗ್ರಹಿಸುವ ಸೂಕ್ಷ್ಮತೆ ಹಾಗೂ ತನ್ನ ನೆಚ್ಚಿನ ಶ್ರೀಕೃಷ್ಣನ ಲೀಲೆಯ ಪ್ರಭಾವ ಈ ಎಲ್ಲಾ ಅಂಶಗಳ ಪ್ರಭಾವವೂ ಕನಕದಾಸರ ಮೇಲೆ ಬೀರಿ ಶೃಂಗಾರ ಪ್ರಧಾನ ಕಾವ್ಯ ರಚಿತವಾಗಿರಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಆ ಕಾಲಘಟ್ಟದ ಸಾಮಾಜಿಕ ಅಸಮಾನತೆಗೆ ತಕ್ಕ ಉತ್ತರ ನೀಡಿದ್ದಾರೆ ಕನಕದಾಸರು.

ಅಂತಿಮವಾಗಿ ಮೋಹನ ತರಂಗಿಣಿಯಲ್ಲಿ ಕಾಣುವ ‘ವಧೂಟಿ’ ಕನಕದಾಸರ ಹೆಂಡತಿ ಎಂಬ ಅರ್ಥ ನೀಡುತ್ತದೆ. ಇಡೀ ಕಾವ್ಯದಲ್ಲಿ ವಧೂಟಿಯ ಮೂಲಕ ಕನಕದಾಸರು ಮಹಿಳೆಗೆ ನೀಡಿದ ಪ್ರಾಧಾನ್ಯತೆಯನ್ನು ನೋಡಬಹುದಾಗಿದೆ.

ಕುಟಿಲ ಕುಂತಳದೊಳು ಮಧುಪಾನ ತೊಂಡೆವ
ಣ್ದುಟಿಯೊಳು ಕಠಿನ ಕಾಂತೆಯರ
ಘಟಕುಚದೊಳಗಲ್ಲದೀ ನುಡಿಗಳು ಸಂ
ಘಟಿಸವು ಸೌರಾಷ್ಟ್ರದಲ್ಲಿ

ಕುಟಿಲ ಕೊಂಕುತನವೆನ್ನುವುದು ಕೂದಲಲ್ಲಿ ಮಧುಪಾನವೆನ್ನುವುದು ತೊಂಡೆ ಹಣ್ಣಿನಂತಹ ತುಟಿಗಳಲ್ಲಿ, ಕಠಿತನವೆನ್ನುವುದು ರಮಣೀಯರ ಕುಂಭಕುಚಗಳಲ್ಲಿಯೇ ಹೊರತು ಬೇರೆಡೆಯಲ್ಲಿ ಇಂತಹ ಶಬ್ದಗಳು ಹುಟ್ಟಲಾರವು. ಕನಕದಾಸರು ಇಲ್ಲಿ ಹರೆಯವನ್ನು ಕುರಿತು ವರ್ಣಿಸುವಲ್ಲಿ ಸಫಲತೆ ಕಾಣುತ್ತಾರೆ. ಅವರ ಕಣ್ಣಲ್ಲಿ ತನ್ನ ಕಾಂತಿಯನ್ನು ತುಂಬಿದಂತೆ ಕಾಣುತ್ತಿತ್ತು. ಮತ್ತು ಅವರ ದೇಹ ಲಾವಣ್ಯ ಕುರಿತಾಗಿ ಹೇಳುವಾಗ ಉಡುಗೆ ತೊಡುಗೆಗಳ ಮನ್ಮಥನ ಗುಡಿಯ ಬಾಗಿಲಿಗೆ ತೋರಣ ಕಟ್ಟಿದಂತೆ ಶಬರಿಯ ಮೈಮೇಲೆ ತಳಿರಿನ ಉಡುಗೆ ಶೋಭಿಸುತ್ತಿತ್ತು. ಇಡೀ ಕಾವ್ಯದಲ್ಲಿ ಹೆಂಡತಿಯ ಮಾಧುರ್ಯವನ್ನು ವರ್ಣಿಸುತ್ತಾ ಕಾವ್ಯ ಅಸ್ವಾದಿಸಿದ್ದಾರೆ. ಸುಗುಣೆ, ಜಾಣೆ, ಕನೈದಿಲೆಯ ಕಣ್ಣುಳ್ಳ ನಿನ್ನ ಕಿವಿಯ ಕೊಳದಲ್ಲಿ ನೀನು ಕೇಳುವಂತಾದರೆ ನನ್ನ ಕಾವ್ಯವನ್ನು ತುಂಬಿಸುವೆಬೇಸರವಿಲ್ಲದೆ ಎಂದು ನಿವೇದಿಸಿದ್ದರೆ.

ಇಲ್ಲಿ ಕಂಡು ಬರುವ ವನವಿಹಾರದ ವರ್ಣನೆ ಕಂಡು ಬರುವುದು ಕೃಷ್ಣನ ಅರಮನೆ ರಾಣಿಯರಿಂದ ಇಲ್ಲಿನ ಸ್ತ್ರೀಯರು ಇತರ ಕಾವ್ಯಗಳಲ್ಲಿರುವಂತೆ ಉದ್ಯಾನದ ಹೂವು-ತಳಿರುಗಳನ್ನು ಕೀಳುವ ಸುಕುಮಾರಿಯವರಂತಿಲ್ಲ. ಹೂಗಳನ್ನು ಸಿಂಗಾರಕ್ಕಾಗಿ ಬಳಸಿ ತೃಪ್ತಿ ಪಟ್ಟ ಹಾಗೆ ಕಾಣುತ್ತಿಲ್ಲ. ಇವರು ‘ಕೈದಣಿವನಕ ನಾನಾ ಪುಷ್ಪಂಗಳ ಕೊಯ್ದು ಪೊಟ್ಟಣವ ಕಟ್ಟಿದರು. ಅಷ್ಟು ಮಾತ್ರವಲ್ಲ “ಅಂಬೆ ಹಳದಿ ಕಾರ್ಗೆಣಸು ನೀರುಳ್ಳಿ, ಕೊತ್ತಂಬರಿ, ಕರಿಬೇವು, ಸಹಿತ, ಸಿಂಬೆ ಕೂಗಲಿ ಪಿಪ್ಪಲಗಾಯ ಕೊಯ್ದರು ನಿಂಬೆಯ ಕಳಿವಣ್ಣಳೊಡನೆ ಇವರ ಕೇವಲ ವಿಲಾಸಕ್ಕೆ ಬಂದವರಲ್ಲ. ಕೃಷ್ಣನ ಅರಮನೆಯ ಈ ಹೆಂಗಸರು ಅಡುಗೆ ಮನೆಯನ್ನು ನೆನಪಿನಲ್ಲಿಟ್ಟುಕೊಂಡು ‘ನೀರುಳ್ಳಿ, ಕೊತ್ತಂಬರಿ, ಕರಿಬೇವು ಸಹಿತ ಕೊಯ್ದು ಪೊಟ್ಟಣ ಕಟ್ಟಿದ್ದಾರೆ. ಇಲ್ಲಿ ಜನಸಾಮಾನ್ಯರ ಜೀವನವನ್ನು ಯಥಾವತ್ತಾಗಿ ಚಿತ್ರಿಸಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿದ್ದಾರೆ.

ಅವಳ ಇಚ್ಛೆಯನ್ನರಿತ ಕೃಷ್ಣ ಅವಳ ಆಸೆ ಈಡೇರುವಂತೆ ಹರಸುತ್ತಾನೆ. ಮುಂದೆ ರುಕ್ಮಿಣಿಗೆ ಪ್ರದ್ಯುಮ್ನನ ರೂಪದಲ್ಲಿ ಜನ್ಮ ತಾಳುತ್ತದೆ.

ಇಂತಹ ಸಂಪದ್ಭರಿತವಾದ ದ್ವಾರಕೆ, ಅಲ್ಲಿ ಶ್ರಿಕೃಷ್ಣನ ಆಳ್ವಿಕೆ. ಅಂತಃಪುರದಲ್ಲಿ ಶ್ರೀಕೃಷ್ಣ ರುಕ್ಮಿಣಿ ಮತ್ತು ಪರಿವಾರದವರು ಬಗೆ ಬಗೆಯ ಕಲೆಗಳ ಪ್ರದರ್ಶನಗಳನ್ನು ನೋಡಿ ಸಂತೋಷಿಸುತ್ತಿರುತ್ತಾರೆ. ಆಗ ವಿನೋದದ ಆಟಗಳನ್ನು ಆಡುವ ಪಕ್ಷಿ ಕ್ರೀಡೆಗಳ ಪ್ರದರ್ಶನ ನಡೆದಿರುತ್ತದೆ. ಪಕ್ಷಿಯೊಂದು ತನ್ನ ಮರಿಗೆ ಅಕ್ಕರೆಯಿಮದ ಗುಟುಕು ಕೊಡುವ ದೃಶ್ಯ ಕಂಡ ರುಕ್ಮಿಣಿಗೆ ಪುತ್ರಾಪೇಕ್ಷೆಯಾಗುತ್ತದೆ. ಅವಳ ಇಚ್ಛೆಯನ್ನರಿತ ಕೃಷ್ಣ ಅವಳ ಆಸೆ ಈಡೇರುವಂತೆ ಹರಸುತ್ತಾನೆ. ಮುಂದೆ ರುಕ್ಮಿಣಿಗೆ ಪ್ರದ್ಯುಮ್ನನ ರೂಪದಲ್ಲಿ ಜನ್ಮ ತಾಳುತ್ತದೆ.

ತಾರಕಾಸುರನು ದೇವತೆಗಳಿಗೆ ಮಿತಿ ಮೀರಿದ ತೊಂದರೆಯನ್ನು ಕೊಡುತ್ತಿರುತ್ತಾನೆ. ಈ ಉಪಟಳದ ನಿವಾರಣೆಗಾಗಿ ದೇವತೆಗಳು ಬ್ರಹ್ಮನಲ್ಲಿ ಮೊರೆ ಹೋಗುತ್ತಾರೆ. ಶಿವನಿಂದ ಜನಿಸುವ ಪುತ್ರನಿಂದ ಮಾತ್ರ ತಾರಕಾಸುರನ ವಧೆಯಾಗುವುದೆಂದು ತಿಳಿಸುತ್ತಾನೆ. ಶಿವನಲ್ಲಿಗೆ ಹೋಗಬೇಕೆಂದರೆ ಅವನು ತಪೋನಿರತನಾಗಿರುತ್ತಾನೆ. ತಪೋಭಂಗ ಮಾಡಲು ಬೃಹಸ್ಪತಿಯ ಆಜ್ಞೆಯಂತೆ ಮನ್ಮಥನ ಪ್ರಯತ್ನ ನಡೆಯುತ್ತದೆ. ಎಚ್ಚೆತ್ತ ಶಿವನ ಕ್ರೋಧ ಹಣೆಗಣ್ಣಲ್ಲಿ ಗುರಿಯಾಗಿ ಭಸ್ಮವಾಗುತ್ತಾನೆ. ರತಿಯ ಪ್ರತಾಪಕ್ಕೆ ಶಿವನು ಕನಿಕರ ತೋರಿ ಮನಸಿಜನಾಗಿ ನಿನ್ನೊಡಗೂಡಿ ಇರುತ್ತಾನೆಂದು ರತಿಗೆ ಸಾಂತ್ವನ ಹೇಳುತ್ತಾನೆ.

ವಿದ್ಯಾಪಾರಂಗತನಾದ ಆ ಮಗುವೇ ಪ್ರದ್ಯುಮ್ನ. ಆತನಿಂದಲೇ ತನಗೆ ಕೇಡು ಎಂದು ನಾರದರಿಂದ ಅರಿತ ಶಂಭಾರಾಸುರ ಪ್ರದ್ಯುಮ್ನನನ್ನು ಕೊಂದು ಹಾಕುವ ಪ್ರಯತ್ನ ಮಾಡುತ್ತಾನೆ. ಶಂಭರಾಸುರ ಪ್ರದ್ಯುಮ್ನರ ನಡುವೆ ಯುದ್ಧ ಜರುಗುತ್ತದೆ. ಶಂಭರಾಸುರ ಪ್ರದ್ಯುಮ್ನನಿಂದ ಹತನಾಗುತ್ತಾನೆ.

ದುಃಖತಪ್ತ ರತಿ ಅಲೆದಾಡುತ್ತ ಶಂಭರಾಸುರನ ರಾಜ್ಯಕ್ಕೆ ಬಂದು ಅವನ ಅಂತಃಪುರದಲ್ಲಿ ಅಡುಗೆ ಕೆಲಸದವಳಾಗಿ ಸೇರಿಕೊಳ್ಳುತ್ತಾಳೆ.

ರುಕ್ಮಿಣಿಗೆ ಹುಟ್ಟಿದ ಮಗುವಿನಿಂದ ತನಗೆ ಕುತ್ತು ಎಂದರಿತ ಶಂಭರಾಸುರನು ಮಗುವಾದ ಪ್ರದ್ಯುಮ್ನನನ್ನು ಕದ್ದು ಕಡಲಲ್ಲಿ ಬೀಸಾಡುತ್ತಾನೆ. ಆ ಮಗುವನ್ನು ಮೀನು ನುಂಗುತ್ತದೆ. ಬೆಸ್ತರು ಬೀಸಿದ ಬಲೆಗೆ ಅದೇ ಮೀನು ಬೀಳುತ್ತದೆ. ವಿಚಿತ್ರ ಮೀನು ಎಂದು ಭಾವಿಸಿದ ಜಾಲಗಾರ ಅದನ್ನು ಶಂಭರಾಸುರನಿಗೆ ಕಾಣಿಕೆಯಾಗಿ ಅರ್ಪಿಸುತ್ತಾನೆ. ಅಡುಗೆ ಮನೆಗೆ ತಂದ ಆ ಮೀನನ್ನು ಅಡುಗೆ ಆಳಾದ ರತಿದೇವಿ ಕತ್ತರಿಸುತ್ತಾಳೆ. ಅದರ ಒಡಲಿನಿಂದ ಒಂದು ಸುಂದರವಾದ ಗಂಡು ಮಗು ಹೊರಬರುತ್ತದೆ. ಅದನ್ನು ಕಂಡು ರತಿ ವಿಸ್ಮಿತಳಾಗುತ್ತಾಳೆ. ಅಷ್ಟರಲ್ಲಿ ಕಂದನ ಕಾದುಕೊ ಎಂದು ಅಶರೀರವಾಣಿಯಾಗುತ್ತದೆ. ರತಿ ಶಂಭರಾಸುರನಲ್ಲಿ ಬಂದು ತನ್ನ ಸಖಿಯ ಮಗುವೆಂದು ಹೇಳಿ ಮಗುವನ್ನು ಪೋಷಿಸಲು ಅನುಮತಿ ಪಡೆಯುತ್ತಾಳೆ. ತಿಂಗಳ ಬೆಳಕಿನ ಚಂದಿರನಂತೆ ಸಕಲರ ಗಮನ ಸೆಳೆಯುತ್ತ ಮಗು ಬೆಳೆಯುತ್ತದೆ. ಮಗುವಿನ ಅಂದ ಚಂದ ಸೊಬಗುಗಳಿಗೆ ಶಂಭರಾಸುರನು ಮನಸೋತು, ತನ್ನಲ್ಲಿದ್ದ ಸಕಲ ವಿದ್ಯೆಗಳನ್ನು ಧಾರೆಯೆರೆಯುತ್ತಾನೆ. ವಿದ್ಯಾಪಾರಂಗತನಾದ ಆ ಮಗುವೇ ಪ್ರದ್ಯುಮ್ನ. ಆತನಿಂದಲೇ ತನಗೆ ಕೇಡು ಎಂದು ನಾರದರಿಂದ ಅರಿತ ಶಂಭಾರಾಸುರ ಪ್ರದ್ಯುಮ್ನನನ್ನು ಕೊಂದು ಹಾಕುವ ಪ್ರಯತ್ನ ಮಾಡುತ್ತಾನೆ. ಶಂಭರಾಸುರ ಪ್ರದ್ಯುಮ್ನರ ನಡುವೆ ಯುದ್ಧ ಜರುಗುತ್ತದೆ. ಶಂಭರಾಸುರ ಪ್ರದ್ಯುಮ್ನನಿಂದ ಹತನಾಗುತ್ತಾನೆ. ರತಿಯೊಡನೆ ಪ್ರದ್ಯುಮ್ನ ದ್ವಾರಕೆಗೆ ಬರುತ್ತಾನೆ. ಕೃಷ್ಣ-ರುಕ್ಮಿಣಿ ಹಾಗೂ ಪರಿವಾರದವರಿಂದ ಸ್ವಾಗತ ದೊರೆಯುತ್ತದೆ. ಅವರಿಬ್ಬರಿಗೂ ವಿಜೃಂಭಣೆಯ ಮದುವೆ ಏರ್ಪಾಡು ಮಾಡುತ್ತಾರೆ. ಪ್ರದ್ಯುಮ್ನ ರತಿಯರ ವೈಭೋಗ, ಸುಖವಿಲಾಸ, ಸರಸರ ಸಲ್ಲಾಪದ ಸಂಸಾರ ಜೀವನ ಪ್ರಾರಂಭವಾಗುತ್ತದೆ.

ಅವರಿಗೊಬ್ಬ ಪುತ್ರ ಜನಿಸುತ್ತಾನೆ. ಆತನೇ ತ್ರಿಲೋಕ ಸುಂದರ ಅನಿರುದ್ಧ.

ರತಿ ಮನ್ಮಥರ ಕಥೆಯಲ್ಲಿ ರತಿಯ ಪಾತ್ರದಲ್ಲಿ ಸಂಕೀರ್ಣತೆಯಿದೆ. ಆಕೆ ಮೊದಲಲ್ಲಿ ಮನ್ಮಥನ ಮಡದಿಯಾಗಿ ಅವಳು ಅನುಭವಿಸಿದ ವೇದನೆಗಳನ್ನು ಕಾವ್ಯ ಚೆನ್ನಾಗಿ ಹಿಡಿದಿಡುತ್ತದೆ. ದೇವತೆಗಳ ಕಲ್ಯಾಣಕ್ಕಾಗಿ ಮನ್ಮಥ ಎಲ್ಲರ ಜವಾಬ್ದಾರಿ ಹೊತ್ತುಕೊಂಡು ಶಿವನ ತಪೋಭಂಗಕ್ಕೆ ತೆರಳುತ್ತಾನೆ. ಅವನ ಸಾವು ಒಂದು ರೀತಿಯಲ್ಲಿ ನಿಶ್ಚಿತವಾಗಿದ್ದರೂ ಅವನ ಸಾವಿಗೆ ಅವನ ಮಡದಿಯಾದ ರತಿಯ ವಿಲಾಪವನ್ನು ಬಹಳಷ್ಟು ಪದ್ಯಗಳಲ್ಲಿ ಕವಿ ಇಲ್ಲಿ ಹಿಡಿದಿಡುತ್ತಾರೆ. ಆನಂತರ ಆಕೆ ಶಂಬರಾಸುರನ ಪುರಕ್ಕೆ ಬರುತ್ತಾಳೆ. ಅಲ್ಲಿ ಶಂಬರಾಸುರನ ಆಸೆಯ ಕಣ್ಣಿಗೆ ಬೀಳುತ್ತಾಳೆ. ಅವಳ ಪಾತಿವ್ರತ್ಯ ಮೌಲ್ಯವನ್ನು ಮತ್ತೇ ಕವಿ ಇಲ್ಲಿ ತೋರುತ್ತಾರೆ.

ಅವಳು ದೃಢ ಮನಸ್ಸಿನಿಮದ ತನ್ನ ಪತಿಭಕ್ತಿಯನ್ನು ತೋರುತ್ತಾಳೆ. ಶಂಬರಾಸುರನ ಮನೆಯಲ್ಲಿ ತೊತ್ತಾದ ಸಂದರ್ಭದಲ್ಲಿ ಮೀನಿನ ಹೊಟ್ಟೆಯಲ್ಲಿ ಸಿಕ್ಕ ಮಗು ತನ್ನ ಗಂಡ ಎಂದು ದೈವವಾಣಿಯಾದ ಮೇಲೆ ಅದನ್ನು ಸಾಕಲು ತೊಡಗುತ್ತಾಳೆ. ಇಡೀ ಪ್ರಸಂಗ ಕುತೂಹಲಕಾರಿಯಾಗಿದೆ. ತಾನು ಸಾಕಿದ ಮಗುವನ್ನು ತನ್ನ ಗಂಡನಾಗಿ ಸ್ವೀಕರಿಸುವ ಕ್ರಿಯೆ ಸಮುದಾಯ ವಿರೋಧಿಯಾದುದು. ಅದರಂತೆ ರತಿದೇವಿಯ ಸಂಗಾತಿಯ ಆಸೆ ಮಗುವನ್ನು ಬೆಳೆಸುವುದರಲ್ಲಿ ವ್ಯಕ್ತವಾಗಿದೆ. ಎನ್ನಬಹುದು. ಈ ಸಂಕೀರ್ಣ ಮಿಥಿಕವು ಜಾನಪದೀಯ ಅಂಶಗಳನ್ನು ಹೊಂದಿದೆ.

ಮೂರನೇ ತಲೆಮಾರಿನ ಅನಿರುದ್ಧ ಉಷಾರ ಪ್ರಣಯ ಮತ್ತು ಮದುವೆ ಇನ್ನೊಂದು ಕಾಮದ ಸಾಫಲ್ಯವನ್ನು ಹೇಳುವ ಕಥೆ. ಬಾಣಾಸುರನನ್ನು ಅನಿರುದ್ಧ ಎದುರಿಸುವುದರೊಂದಿಗೆ ಉಷಾ ಪ್ರಣಯ ಸಾರ್ಥಕತೆ ನಡೆಯುತ್ತದೆ. ಉಷಾ ತನ್ನ ಸ್ವಪ್ನದ ಮೂಲಕ ತನ್ನ ಗಂಡನಾಗುವವನನ್ನು ಕಾಣುವುದು ಕೂಡ ಒಂದು ಸಾಂಕೇತಿಕವಾದ ವಿಷಯ. ಉಷಾ ಮತ್ತು ಅವಳ ಸಖಿ ಚಿತ್ರಲೇಖೆಯರ ಚಿತ್ರಣವು ಮೋಹನ ತರಂಗಿಣಿಯ ಸುಂದರ ಭಾಗಗಳಾಗಿವೆ. ಉಷಾ ಶಿವಪೂಜೆಗೆ ಬರುವ ವೈಭವ, ಅವಳ ಶಿವಭಕ್ತಿ ಇತ್ಯಾದಿಗಳ ಮೂಲಕ ಅವಳನ್ನು ಸುಸಂಸ್ಕತ ಹೆಣ್ಣಾಗಿ ಕವಿ ತೋರಿಸಲೆತ್ನಿಸಿದ್ದಾರೆ.

ಒಟ್ಟಾರೆಯಾಗಿ ಕನಕದಾಸರ ಮೋಹನ ತರಂಗಿಣಿ ಕಾವ್ಯವು ಹಲವು ಪ್ರೇಮ ಕಾವ್ಯಗಳ ಶೃಂಗಾರ ವರ್ಣನಾ ಕಾವ್ಯವಾಗಿದೆ. ಕೃಷ್ಣನೇ ಇಲ್ಲಿಯ ನಾಯಕ. ಹೆಣ್ಣಿನ ಕ್ರಿಯಾಶಕ್ತಿ ಹಾಗೂ ಪಾತಿವ್ರತ್ಯದ ಮೌಲ್ಯದ ಆಯಾಮಗಳನ್ನು ಇಲ್ಲಿ ಕಾಣಬಹುದು.

*ಲೇಖಕರು ಕೊಡಗಿನ ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು.

2 Responses to " ಕನಕದಾಸರ ‘ಮೋಹನ ತರಂಗಿಣಿ’

ಡಾ.ಕಾವೇರಿ ಪ್ರಕಾಶ್

"

Leave a Reply

Your email address will not be published.