ಕನಿಷ್ಟ ಹತ್ತನೇ ಕ್ಲಾಸಿನ ತನಕ ನಮಗೆ ಸ್ವಂತ ಮೊಬೈಲು ಬೇಡ

ನಾನು ಗಮನಿಸಿದ ಹಾಗೆಯೇ ನನ್ನ ಕೆಲ ಸ್ನೇಹಿತರು ಅಪರಿಚಿತರೊಂದಿಗೆ ಜಾಲತಾಣಗಳ ಮೂಲಕ ಸ್ನೇಹಿತರಾಗಿದ್ದಾರೆ ಹಾಗೂ ಅವರ ಜೊತೆ ಸಂಪರ್ಕದಲ್ಲಿದ್ದಾರೆ. ನನ್ನ ಪ್ರಕಾರ ಇದು ಬಹಳ ಹಾನಿಕಾರಕ.

ಮೊಬೈಲಿನಿಂದ, ಇದರ ಮೂಲಕ ಬಳಸುವ ಅಂತರ್ಜಾಲದಿಂದ ನನಗಾದ ಉಪಯೋಗಗಳು ಹಲವಾರಿವೆ. ನಾನು ಪ್ರಮುಖವಾಗಿ ಕ್ರೀಡಾ ಲೇಖನಗಳನ್ನು ಬರೆಯುವವ. ಅದಕ್ಕೆ ಬೇಕಾಗುವಂತಹ ಎಲ್ಲಾ ರೀತಿಯ ಮಾಹಿತಿಗಳನ್ನು, ಅಂಕಿಅಂಶಗಳನ್ನು ಹಾಗೂ ಪಂದ್ಯಗಳ ಹೈಲೈಟ್ಸ್‍ಗಳನ್ನು ಒದಗಿಸುವಲ್ಲಿ ಅಂತರ್ಜಾಲವು ಬಹಳ ಒಳ್ಳೆಯ ರೀತಿಯಲ್ಲಿಯೇ ಉಪಯೋಗಕ್ಕೆ ಬಂದಿದೆ. ಇದರೊಂದಿಗೆ ಹಲವಾರು ಹೊಸ ವಿಷಯಗಳನ್ನು ಸಹ ಅಂತರ್ಜಾಲವು ನನಗೆ ತಿಳಿಸಿಕೊಟ್ಟಿದೆ.

ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಮೊಬೈಲು, ಅಂತರ್ಜಾಲಗಳು ನಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲಿಕ್ಕೆ, ಶಾಲೆಯಲ್ಲಿ ಪಠ್ಯ ಅರ್ಥವಾದಿದ್ದರೆ ಇದಕ್ಕೆ ಸಂಬಂಧಿಸಿದ ವೆಬ್ ಸೈಟುಗಳ ಮೂಲಕ ವಿಷಯವನ್ನು ಅರಿಯಲಿಕ್ಕೆ ಹೆಚ್ಚು ಉಪಯೋಗಕ್ಕೆ ಬರುತ್ತವೆ. ಆದರೆ ಹೆಚ್ಚಿನವರು ಇವುಗಳನ್ನು ಬಳಸುವುದು ವಿವಿಧ ಗೇಮ್ಸ್‍ಗಳನ್ನು ಆಡಲು, ಸ್ನೇಹಿತರ ಜೊತೆ ಚಾಟಿಂಗ್, ಇನ್ಟಾಗ್ರಾಮ್ ಇತ್ಯಾದಿಗಳಿಗೆ.

ಒಂದು ಮಿತಿಯಲ್ಲಿಯೇ ಅಂತರ್ಜಾಲವನ್ನಾಗಲಿ, ಅಥವಾ ಕಂಪ್ಯೂಟರ್ ಮೊಬೈಲ್‍ಗಳನ್ನಾಗಲಿ ಬಳಸುವುದು ಯಾರಿಗೂ ಸಹ ಹಾನಿಕಾರಕವಲ್ಲ ಎಂಬುದು ನನ್ನ ಅಭಿಪ್ರಾಯ. ಆದರೆ ಆ ಮಿತಿಯನ್ನು ಮೀರಿದಾಗ ಅವುಗಳಿಂದಾಗುವ ದುಷ್ಪರಿಣಾಮಗಳು ಅನೇಕ. ಆದುದರಿಂದ ವಿದ್ಯಾರ್ಥಿಗಳಾದ ನಾವು ಅಂತರ್ಜಾಲದ ಬಳಕೆಯನ್ನು ಅಗತ್ಯವಿದ್ದಷ್ಟು ಮಾತ್ರ ಮಾಡಿ ಅದರ ಸದುಪಯೋಗಗಳನ್ನು ಪಡೆದುಕೊಳ್ಳಬೇಕಾಗಿದೆ.

ಸಾಮಾಜಿಕ ಜಾಲತಾಣಗಳನ್ನು ಮಕ್ಕಳು ಎಂದರೆ ನಾವು ಬಳಸುವಾಗ ಬಹಳ ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ. ಹಾಗೂ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸುವುದು ಹೇಗೆ ಎಂಬುದನ್ನು ಪೋಷಕರು ತಿಳಿಸಿ ಕೊಡಬೇಕಾಗುತ್ತದೆ. ಇಂದಿನ ಸಮಾಜದಲ್ಲಿ ಸಾವಿರಾರು ಸಾಮಾಜಿಕ ಜಾಲತಾಣಗಳ ಆ್ಯಪ್ ಗಳಿವೆ ಹಾಗೂ ವೆಬ್ ಸೈಟ್ ಗಳಿವೆ. ತನ್ನ ಗೆಳೆಯ ಒಂದು ತಾಣವನ್ನು ಬಳಸಿದ ಎಂದಾಕ್ಷಣ ಅದನ್ನು ತಾನು ಕೂಡ ಮಾಡಬೇಕೆಂಬ ಆಸೆ ನಮ್ಮ ಮನಸಿನಲ್ಲಿ ಮೂಡುವುದು ಸಹಜ.

ಮಕ್ಕಳು ಬಳಸುತ್ತಿರುವ ತಾಣ ಸುರಕ್ಷಿತವಾಗಿದೆಯೇ ಹಾಗೂ ಅವರು ಅದರಲ್ಲಿ ಮಾಡುತ್ತಿರುವ ಚಟುವಟಿಕೆಗಳು ಆರೋಗ್ಯಕರವಾದದ್ದೇ ಎಂಬುದನ್ನು ನೋಡಿಕೊಳ್ಳುವುದು ಪೋಷಕರಿಗೆ ಇಂದಿನ ಜಗತ್ತಿನಲ್ಲಿ ಬಹುದೊಡ್ಡ ಸವಾಲಾಗಿದೆ. ಹಲವು ಪೋಷಕರಿಗೆ ಇದರ ಬಗ್ಗೆ ಜ್ಞಾನವೇ ಇರುವುದಿಲ್ಲ. ಅಂತಹ ಪರಿಸ್ಥಿತಿಗಳಲ್ಲಿ ಬಹುತೇಕ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಅತಿಯಾಗಿ ಹಚ್ಚಿಕೊಳ್ಳುವ ಸಾಧ್ಯತೆಯಿರುತ್ತದೆ.

ಸಾಮಾಜಿಕ ಜಾಲತಾಣಗಳನ್ನು ಅವುಗಳು ಸೂಚಿಸಿದ ವಯಸ್ಸಿನ ಮಿತಿ ದಾಟಿದ ತಕ್ಷಣ ಬಳಸುವುದು ನನ್ನ ಅಭಿಪ್ರಾಯಕ್ಕೆ ಸರಿ. ಯಾಕೆಂದರೆ ಹಲವಾರು ತಜ್ಞರ ಅಭಿಪ್ರಾಯವನ್ನು ತೆಗೆದುಕೊಂಡೇ ಜಾಲತಾಣಗಳ ವಯಸ್ಸಿನ ಮಿತಿಯನ್ನು ನಿರ್ಧರಿಸಲಾಗಿರುತ್ತದೆ. ಆದರೆ ಮಿತಿಮೀರಿ ಅದನ್ನು ಬಳಸುವುದು ಬಹಳ ಅಪಾಯಕಾರಿ. ನಾನು ಗಮನಿಸಿದ ಹಾಗೆಯೇ ನನ್ನ ಕೆಲ ಸ್ನೇಹಿತರು ಅಪರಿಚಿತರೊಂದಿಗೆ ಈ ಜಾಲತಾಣಗಳ ಮೂಲಕ ಸ್ನೇಹಿತರಾಗಿದ್ದಾರೆ ಹಾಗೂ ಅವರ ಜೊತೆ ಸಂಪರ್ಕದಲ್ಲಿದ್ದಾರೆ. ನನ್ನ ಪ್ರಕಾರ ಇದು ಬಹಳ ಹಾನಿಕಾರಕ. ತಮಗೆ ಗೊತ್ತಿಲ್ಲದವರ ಜೊತೆ ಅದೂ ಅಂತರ್ಜಾಲದ ಮೂಲಕ ಸಂಪರ್ಕದಲ್ಲಿರುವುದು ಅಷ್ಟು ಆರೋಗ್ಯಕರವಾದುದಲ್ಲ ಎಂಬುದು ನನ್ನ ಅಭಿಪ್ರಾಯ. ಆದುದರಿಂದ ಮಕ್ಕಳ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡುವುದು ಪೋಷಕರ ಆದ್ಯ ಕರ್ತವ್ಯವಾಗಿದೆ.

ಪೋಷಕರು ತಮ್ಮ ‘ಮಕ್ಕಳ ಮೊಬೈಲ್ ಅನ್ನು ನಾವು ನೋಡಲು ಹೋಗುವುದಿಲ’್ಲ ಎಂದು ಹೇಳುವುದೇ ಒಂದು ರೀತಿಯ ಪ್ರತಿಷ್ಠೆಯ ಮಾತಿನಂತೆ ಕಾಣುತ್ತದೆ. ಇದರ ಅಪಾಯವನ್ನು ನಾನು ನನ್ನ ಸಹಪಾಠಿಗಳಲ್ಲಿ ಗಮನಿಸಿದ್ದೇನೆ.

ನಾನು ಗಮನಿಸಿದಂತೆ ನನ್ನ ಸಂಪರ್ಕಕ್ಕೆ ಬಂದ ಕೆಲವು ಪೋಷಕರು ತಮ್ಮ ಮಕ್ಕಳಿಗೆ ಪ್ರೈವಸಿಯನ್ನು ಕೊಡುತ್ತೇವೆ ಎನ್ನುವುದನ್ನು ‘ಮಕ್ಕಳಿಗೆ ನಾವು ಯಾವುದೇ ಕಟ್ಟುಪಾಡುಗಳನ್ನು ವಿಧಿಸದೆ ಅವರನ್ನು ಸ್ವತಂತ್ರವಾಗಿ ಬಿಡುತ್ತೇವೆ’ ಎನ್ನುವ ಅರ್ಥದಲ್ಲಿ ಪ್ರತಿಪಾದಿಸುತ್ತಾರೆ. ಮಕ್ಕಳಿಗೆ ಮೊಬೈಲ್ ಕೊಡಿಸುವುದನ್ನೂ ಅವರು ಹೀಗೆ ಭಾವಿಸುತ್ತಾರೆ ಎನಿಸುತ್ತದೆ. ಇಂತಹ ಪೋಷಕರು ತಮ್ಮ ‘ಮಕ್ಕಳ ಮೊಬೈಲ್ ಅನ್ನು ನಾವು ನೋಡಲು ಹೋಗುವುದಿಲ’್ಲ ಎಂದು ಹೇಳುವುದೇ ಒಂದು ರೀತಿಯ ಪ್ರತಿಷ್ಠೆಯ ಮಾತಿನಂತೆ ಕಾಣುತ್ತದೆ. ಇದರ ಅಪಾಯವನ್ನು ನಾನು ನನ್ನ ಸಹಪಾಠಿಗಳಲ್ಲಿ ಗಮನಿಸಿದ್ದೇನೆ.

ನನಗೆ ನನ್ನ ಮನೆಯಲ್ಲಿ ನನಗೇ ಆದ ಮೊಬೈಲನ್ನು ಇನ್ನೂ ಕೊಡಿಸಿಲ್ಲ. ನಾನು ನನಗೆ ಅಗತ್ಯವಾದಾಗ ನನ್ನ ಅಮ್ಮ ಅಥವಾ ಅಪ್ಪನ ಮೊಬೈಲಿನಲ್ಲಿ ಅಗತ್ಯದ ಕೆಲಸ ಮಾಡಿಕೊಳ್ಳುತ್ತೇನೆ. ನನ್ನ ಪಿಯುಸಿ ಮುಗಿಯುವವರೆಗೂ ನನಗೆ ಸ್ವಂತ ಮೊಬೈಲು ಕೊಡಿಸುವುದಿಲ್ಲ ಎಂದು ಅಪ್ಪ ಅಮ್ಮ ಹೇಳಿದ್ದಾರೆ. ಕನಿಷ್ಟ ಎಸ್ಸೆಸ್ಸೆಲ್ಸಿ ಮುಗಿಯಯವವರೆಗೆ ನಾವು ಸ್ವಂತ ಮೊಬೈಲು ಹೊಂದಬಾರದು. ಪೋಷಕರ ಮೊಬೈಲ್ ಅಥವಾ ಅಂತರ್ಜಾಲ ಸಂಪರ್ಕ ಬಳಸಿದರೂ ಇದನ್ನು ಬಳಸಿ ತಮ್ಮ ಮಕ್ಕಳು ಮಾಡುವ ಚಟುವಟಿಕೆಗಳ ಮೇಲೆ ಪೋಷಕರು ನಿಗಾ ಇಡುವುದು ಸೂಕ್ತ ಎಂದು ನನ್ನ ಭಾವನೆ.

ಎರಡು ಸಾವಿರದ ನಂತರದ ಆಧುನಿಕ ತಂತ್ರಜ್ಞಾನ ಅಗಾಧವಾಗಿ ಬೆಳೆದಿರುವ ಈ ಕಾಲಘಟ್ಟದ ಪೋಷಕರು ಪ್ರಮುಖವಾಗಿ ತಮ್ಮ ಮಕ್ಕಳನ್ನು ರೂಪಿಸುವಾಗ ಗಮನಿಸಬೇಕಾದ ಅಂಶವೇನೆಂದರೆ ಮಕ್ಕಳ ಆಸಕ್ತಿಯ ಕ್ಷೇತ್ರದಲ್ಲಿ ಅವರನ್ನು ಮುಂದುವರೆಯಲು ಬಿಡಬೇಕು. ಹಲವು ಪೋಷಕರಲ್ಲಿ ಒಂದು ಸಹಜವಾದ ಆಸೆಯಿರುತ್ತದೆ. ಅದೆಂದರೆ ತಮ್ಮ ಮಗ/ಮಗಳು ಚೆನ್ನಾಗಿ ಓದಿ ದೊಡ್ಡ ಹುದ್ದೆ ಪಡೆದು ಆರಾಮಿನ ಜೀವನವನ್ನು ನಡೆಸಬೇಕು ಎನ್ನುವುದು. ಇದು ಅತ್ಯಂತ ಸಹಜ. ಅದು ತಪ್ಪು ಸಹ ಅಲ್ಲ. ಆದರೆ ಆ ಆಸೆಯನ್ನು ತಮ್ಮ ಮಕ್ಕಳ ಮೇಲೆ ಹೇರುವುದು ಬಹಳ ತಪ್ಪು. ಮಕ್ಕಳಿಗೂ ಸಹ ಪೋಷಕರ ಆಸೆಯಿರುವ ಕ್ಷೇತ್ರದಲ್ಲಿಯೇ ಆಸಕ್ತಿಯಿದ್ದರೆ ಅದರಲ್ಲಿಯೇ ಮುಂದುವರೆಯುತ್ತಾರೆ. ಒಂದು ವೇಳೆ ಇಲ್ಲ ಎಂದರೆ ಅವರಿಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಮುಂದುವರೆಯುತ್ತಾರೆ.

ಮಕ್ಕಳ ಆಸಕ್ತಿಯ ಕ್ಷೇತ್ರವನ್ನು ಗುರುತಿಸುವಲ್ಲಿ ಮತ್ತು ಅದನ್ನು ಪ್ರೋತ್ಸಾಹಿಸುವುದರಲ್ಲಿ ಪೋಷಕರು ಹಾಗೂ ಶಿಕ್ಷಕರು ಪ್ರಮುಖ ಪಾತ್ರವನ್ನು ವಹಿಸಬೇಕು. ಅವರ ಪ್ರತಿಭೆಯನ್ನು ಹುಡುಕಿ ಹೊರತಂದಾಗ ಮಾತ್ರ ಅವರಿಗೆ ಅದರಲ್ಲಿ ಸಮರ್ಥವಾಗಿ ಮುನ್ನಡೆಯಲಾಗುತ್ತದೆ.

ಖಿನ್ನತೆಯಂತಹ ಸಮಸ್ಯೆಗಳು ಹೆಚ್ಚಾಗುತ್ತಿರುವ ಈಗಿನ ಸಮಾಜದಲ್ಲಿ ಮಕ್ಕಳಿಗೆ ಅವರ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರೆಯುವ ಪ್ರೋತ್ಸಾಹ ನೀಡುವುದು ಅವರಿಗೆ ಬಹಳ ದೊಡ್ಡ ಸಹಾಯವನ್ನು ಮಾಡಿದ ಹಾಗಾಗುತ್ತದೆ. ನಾನು ಗಮನಿಸಿದಂತೆ ಇಂದಿನ ಮಕ್ಕಳು ಎರಡು ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಅವುಗಳೆಂದರೆ ಪೋಷಕರಿಂದ ಪ್ರೋತ್ಸಾಹದ ಕೊರತೆ ಹಾಗೂ ನಮ್ಮ ಪ್ರತಿಭೆ ಯಾವ ಕ್ಷೇತ್ರದಲ್ಲಿದೆ ಎಂಬುದನ್ನು ಗುರುತಿಸಿಕೊಳ್ಳುವಲ್ಲಿನ ವಿಫಲತೆ. ಮಕ್ಕಳ ಆಸಕ್ತಿಯ ಕ್ಷೇತ್ರವನ್ನು ಗುರುತಿಸುವಲ್ಲಿ ಮತ್ತು ಅದನ್ನು ಪ್ರೋತ್ಸಾಹಿಸುವುದರಲ್ಲಿ ಪೋಷಕರು ಹಾಗೂ ಶಿಕ್ಷಕರು ಪ್ರಮುಖ ಪಾತ್ರವನ್ನು ವಹಿಸಬೇಕು. ಅವರ ಪ್ರತಿಭೆಯನ್ನು ಹುಡುಕಿ ಹೊರತಂದಾಗ ಮಾತ್ರ ಅವರಿಗೆ ಅದರಲ್ಲಿ ಸಮರ್ಥವಾಗಿ ಮುನ್ನಡೆಯಲಾಗುತ್ತದೆ.

ನನಗನ್ನಿಸಿದ ಹಾಗೆ ಮತ್ತೊಂದು ವಿಷಯದಲ್ಲಿ ಇಂದಿನ ಪೋಷಕರು ಎಡವುತ್ತಿರುವುದು ಎಲ್ಲಿ ಎಂದರೆ ಮಕ್ಕಳಿಗೆ ‘ನೀನು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದರೆ ಅಥವಾ ಇಂತಹ ಸಾಧನೆ ಮಾಡಿದರೆ ನಿನಗೆ ಉಡುಗೊರೆಯಾಗಿ ಬೈಕ್ ಕೊಡಿಸುತ್ತೇನೆ, ವೆಸ್ಪಾ ಗಾಡಿ ನೀಡುತ್ತೇವೆ’ ಇತ್ಯಾದಿ ಹೇಳುವುದು. ಇದು ಮಕ್ಕಳೇ ಮಾಡಬೇಕಾಗಿರುವ ಕಾರ್ಯಗಳಲ್ಲಿ ಆಮಿಷವೊಡ್ಡಿ ಕೆಲಸ ಮಾಡಿಸುವುದು ಅಕ್ಷರಶಃ ತಪ್ಪು ಎಂಬುದು ನನ್ನ ಭಾವನೆ. ತಪ್ಪು ಅನಿಸುವುದು ಏಕೆ ಎಂದರೆ ಮಕ್ಕಳು ಓದುವುದು ಅವರ ಕರ್ತವ್ಯ, ಅವರು ಚೆನ್ನಾಗಿ ಮಾಡಿದಲ್ಲಿ ಅವರ ಭವಿಷ್ಯ ಚೆನ್ನಾಗಿರುತ್ತದೆ ಹಾಗೂ ಅದು ಅವರ ಏಳಿಗೆಗೆ ಸಾಥ್ ನೀಡುತ್ತದೆ. ಅವರ ಮೂಲಭೂತ ಕರ್ತವ್ಯವನ್ನು ಮಾಡುವುದಕ್ಕೆ ಪೋಷಕರು ಆಮಿಷವನ್ನಿಟ್ಟಾಗ ಬೆಳೆದ ಮೇಲೆ ಆ ಮಗುವೂ ಕೂಡ ಇದೇ ರೀತಿ ತಾನು ತನ್ನ ಜವಾಬ್ದಾರಿಯ ಭಾಗವಾದ ಕೆಲಸಗಳನ್ನು ಮಾಡಿಕೊಡಲಿಕ್ಕೆ ಜನರಿಂದ ಲಂಚವನ್ನು ಕೇಳಿದಲ್ಲಿ ಆಶ್ಚರ್ಯವೇನಿರುತ್ತದೆ?

ನಾನು ಕಂಡಂತೆ ಹಲವು ಪೋಷಕರ ಪ್ರಮುಖವಾದ ಸಮಸ್ಯೆ ಏನೆಂದರೆ ಎಲ್ಲರೂ ಕೂಡ ಮಕ್ಕಳು ಒಂದು ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಅಥವಾ ಒಂದು ವಿಷಯದಲ್ಲಿ ಯಶಸ್ಸು ಕಂಡರೆ ‘ಹಾಗಾಗುತ್ತದೆ, ಹೀಗಾಗುತ್ತದೆ, ನೀನು ಇಷ್ಟು ದೊಡ್ಡ ಮಟ್ಟಕ್ಕೆ ಹೋಗುತ್ತೀಯಾ! ಹಾಗೆ ಹೀಗೆ’ ಎಂದೆಲ್ಲಾ ಹೇಳಿ ಯಶಸ್ಸಿಗೆ ತಯಾರು ಮಾಡಿರುತ್ತಾರೆ. ಒಂದು ವೇಳೆ ಅದೇ ವಿಷಯದಲ್ಲಿ ಆ ಮಗು ವಿಫಲವಾದರೆ ಏನು ಮಾಡಬೇಕೆಂಬುದನ್ನು ಯಾರೂ ಸಹ ಅದಕ್ಕೆ ತಿಳಿಹೇಳಿರುವುದಿಲ್ಲ.

ಯಶಸ್ಸಿನ ಜೊತೆಗೆ ವೈಫಲ್ಯಕ್ಕೂ ಸಹ ಮಕ್ಕಳನ್ನು ತಯಾರು ಮಾಡುವುದು ಬಹಳ ಪ್ರಮುಖವಾಗುತ್ತದೆ. ಇತ್ತೀಚಿಗೆ ನಾನು ನೋಡಿದ ಹಿಂದಿ ಚಲನಚಿತ್ರ ‘ಛಿಛೋರೆ’ಯ ಆಶಯವೂ ಕೂಡ ಇದಾಗಿತ್ತು.

ಸೋತಾಗ ಏನೂ ಸಹ ಹೋಗಿಲ್ಲ, ನಾವೆಲ್ಲರೂ ಈಗಲೂ ಸಹ ನಿನ್ನೊಂದಿಗಿರುತ್ತೇವೆ, ಧೃತಿಗೆಡಬೇಡ ಎಂದು ಹೇಳುವ ಪೋಷಕರು ಬಹಳ ಎಂದರೆ ಬಹಳ ಕಮ್ಮಿ ಇರುತ್ತಾರೆ. ಅಂತಹ ಸಂದರ್ಭದಲ್ಲಿ ಮಕ್ಕಳು ಮಾನಸಿಕವಾಗಿ ಬಹಳ ಕುಗ್ಗಿಹೋಗುತ್ತಾರೆ ಹಾಗೂ ಯಶಸ್ಸಿಗೆ ಪೂರ್ಣಪ್ರಮಾಣದಲ್ಲಿ ತಯಾರಾಗಿದ್ದ ಅವರಿಗೆ ವೈಫಲ್ಯ ಸಿಡಿಲು ಬಡಿದ ಹಾಗಾಗುತ್ತದೆ. ಆದುದರಿಂದ ಯಶಸ್ಸಿನ ಜೊತೆಗೆ ವೈಫಲ್ಯಕ್ಕೂ ಸಹ ಮಕ್ಕಳನ್ನು ತಯಾರು ಮಾಡುವುದು ಬಹಳ ಪ್ರಮುಖವಾಗುತ್ತದೆ. ಇತ್ತೀಚಿಗೆ ನಾನು ನೋಡಿದ ಹಿಂದಿ ಚಲನಚಿತ್ರ ‘ಛಿಛೋರೆ’ಯ ಆಶಯವೂ ಕೂಡ ಇದಾಗಿತ್ತು.

ಮತ್ತೊಂದು ವಿಷಯ ಪೋಷಕರು ಪ್ರಮುಖವಾಗಿ ಅನುಸರಿಸಬೇಕಾದುದು ಏನೆಂದರೆ ಒಂದು ಘಟನೆ ನಡೆದುಹೋದಮೇಲೆ ಮಕ್ಕಳನ್ನು ಅದಕ್ಕಾಗಿ ದೂಷಿಸುವುದನ್ನು ನಿಲ್ಲಿಸಬೇಕು. ಒಂದು ಘಟನೆಗೂ ಮುಂಚೆ ಅದಕ್ಕೆ ಸಮರ್ಪಕವಾಗಿ ಮಕ್ಕಳನ್ನು ತಯಾರು ಮಾಡುವುದನ್ನಷ್ಟೇ ಮಾಡಬೇಕು ಹೊರತು ನಡೆದುಹೋದ ಘಟನೆಗೆ ದೂಷಿಸಬಾರದು. ಇದು ಮೊಬೈಲು ಅಥವಾ ಅಂತರ್ಜಾಲದ ಬಳಕೆಯಿಂದಲೇ ಆಗಿರಬಹುದು ಅಥವಾ ಇದಕ್ಕೆ ಹೊರತಾದುದೂ ಆಗಿರಬಹುದು. ಅದರ ಬದಲಿಗೆ ಆ ವಿಷಯವನ್ನು ಮರೆತು ಅದನ್ನೇ ಮಾದರಿಯನ್ನಾಗಿಟ್ಟುಕೊಂಡು ಮುಂದಿನ ವಿಷಯದ ಮೇಲೆ ತಮ್ಮ ಚಿತ್ತ ಹರಿಸಬೇಕು.

ನನ್ನ ಅನುಭವದ ಮೇಲೆಯೇ ಹೇಳುವುದಾದರೆ ನನ್ನ ಅಪ್ಪ ಅಮ್ಮ ಇಬ್ಬರೂ ಕೂಡ ಆಗಿಹೋಗಿರುವ ವಿಷಯದ ಬಗ್ಗೆ ಎಂದೂ ನನಗೆ ಕೇಳಿಲ್ಲ. ಬದಲಾಗಿ ಮುಂದೆ ಬರಲಿರುವ ವಿಷಯಗಳ ಬಗ್ಗೆ ಯೋಚಿಸಲು ಹೇಳುತ್ತಾರೆ. ನಡೆದುಹೋದಮೇಲೆ ಏನು ಮಾಡಲಿಕ್ಕಾಗುತ್ತದೆ, ಮುಂದೆ ಬರುವುದನ್ನಾದರೂ ನಾವು ಬದಲಿಸಬಹುದು ಎಂಬುದು ಅವರ ಚಿಂತನೆ.

*ಲೇಖಕ ನಾಲ್ಕನೇ ತರಗತಿಯಿಂದ ಸಾಹಿತ್ಯರಚನೆಯಲ್ಲಿ ಆಸಕ್ತಿ ಹೊಂದಿದ್ದು, ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಮೂವತ್ತು ಕೃತಿಗಳನ್ನು ಪ್ರಕಟಿಸಿದ್ದಾನೆ. ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುತ್ತಾನೆ; ಪ್ರಸ್ತುತ ಶಿವಮೊಗ್ಗದ ಲೋಯಲಾ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ.

Leave a Reply

Your email address will not be published.