ಕನ್ನಡಕ್ಕೆ ಬೇಕು ನುಡಿಹಮ್ಮುಗೆ

ಅಳಿದೇ ಹೋಗಿದ್ದ ಹೀಬ್ರೂ ನುಡಿಯನ್ನು ನುಡಿಹಮ್ಮುಗೆಯ ಮೂಲಕ ಇಸ್ರೇಲಿಗಳು ಏಳಿಗೆ ಹೊಂದುವುದು ಸಾಧ್ಯವಾಗುವುದಾದರೆ… ಸಾವಿರಾರು ವರ್ಷಗಳ ಇತಿಹಾಸ ಇರುವ, ಆರು ಕೋಟಿ ಜನಸಂಖ್ಯೆಯಿರುವ, ಸಾಹಿತ್ಯ ಸಂಸ್ಕೃತಿಗಳ ಉಜ್ವಲ ಪರಂಪರೆಯಿರುವ ಕನ್ನಡಿಗರಿಗೆ ಏಕೆ ಸಾಧ್ಯವಿಲ್ಲ?

ಯಾವುದೇ ಒಂದು ಜನಾಂಗದ ಏಳಿಗೆಯಲ್ಲಿ ಆ ಜನಾಂಗದ ಜನರಾಡುವ ನುಡಿಯ ಪಾತ್ರ ಬಹಳ ಮಹತ್ವದ್ದಾಗಿದೆ. ಒಂದು ಸಮಾಜದ ಒಗ್ಗಟ್ಟಿಗೆ, ಏಳಿಗೆಗೆ ಅತ್ಯಂತ ಮಹತ್ವದ ಸಾಧನವಾಗಿರುವುದು ಆ ಜನರಾಡುವ ನುಡಿಯೇ ಆಗಿದೆ. ನುಡಿಯೊಂದು ಬರಿಯ ಸಂಪರ್ಕ ಮಾಧ್ಯಮವಾಗಿರದೆ ಸಹಕಾರದ ಮಾಧ್ಯಮವಾಗಿದೆ ಮತ್ತು ಸಂಸ್ಕೃತಿ, ಪರಂಪರೆಗಳ ಜೊತೆಗೆ ಒಂದು ನಾಡಿನ ಅರಿಮೆಯನ್ನೂ ತಲೆಮಾರುಗಳಿಗೆ ಸಾಗಿಸುವ ವಾಹಕವಾಗಿದೆ. ಒಂದು ಜನಾಂಗದ ಜನರ ಬದುಕಿನಲ್ಲಿ ಆ ಜನರಾಡುವ ನುಡಿಯ ಬಳಕೆಯ ವ್ಯಾಪ್ತಿ, ಆ ಜನರ ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ಇರುವುದು ಮತ್ತು ಇರಬೇಕಾದ್ದು ಸಹಜವಾದುದಾಗಿದೆ. ಕನ್ನಡ ನುಡಿಯು, ಕನ್ನಡಿಗರ ಬದುಕಿಗೆ ಇಂಥದ್ದೇ ಮಹತ್ವದ ಸಾಧನವಾಗಿದ್ದು ಕನ್ನಡಿಗರ ಏಳ್ಗೆಯ ಹಣೆಬರಹವನ್ನು ಗಟ್ಟಿಯಾಗಿ ಕಟ್ಟಿಕೊಡಬಲ್ಲದಾಗಿದೆ.

ಇದನ್ನು ವಾಸ್ತವದ ನೆಲೆಗಟ್ಟಿನಲ್ಲಿ ಸರಳವಾಗಿ ಹೇಳಬೇಕೆಂದರೆ ಹುಟ್ಟಿದ ಮಗುವೊಂದು ಮೊದಲು ಕೇಳುವ ಲಾಲಿಯಿಂದ ಹಿಡಿದು, ಅದು ಬೆಳೆಯುವ ಪರಿಸರ, ನೆರೆಹೊರೆಯವರು, ಆಡುವ ಗೆಳೆಯರು, ಆಡುವ ಆಟಗಳು, ನೋಡುವ ಕಾರ್ಟೂನು, ಜ್ಞಾನ ವಿಜ್ಞಾನದ ವಾಹಿನಿಗಳು, ಮೊದಲ ಶಾಲಾಕಲಿಕೆ, ಕಾಲೇಜು, ಉನ್ನತ ಶಿಕ್ಷಣ, ಉದ್ಯೋಗ, ಅಂಗಡಿ ಮುಂಗಟ್ಟುಗಳ ವಹಿವಾಟು, ಕೊಳ್ಳುವ ಉತ್ಪನ್ನಗಳ ಮೇಲಿರುವ ಮಾಹಿತಿ, ಕೇಳುವ ರೇಡಿಯೋ, ನೋಡುವ ಟಿವಿ, ಸಿನಿಮಾ, ನಾಟಕ, ಓದುವ ಕತೆ-ಕವನದ ಪುಸ್ತಕಗಳು, ಸಾರ್ವಜನಿಕ ಒಡನಾಟಗಳು, ವ್ಯಾಪಾರ ವಹಿವಾಟು, ಉದ್ಯೋಗ, ಸರ್ಕಾರಿ ಕಛೇರಿಗಳ ಕೆಲಸಗಳು, ಪಾಸ್‍ಪೋರ್ಟ್, ವಿಮಾನ ನಿಲ್ದಾಣ, ಅಂಗಡಿ ಮುಂಗಟ್ಟು, ಮಾಲ್ ಮೊದಲಾದ ಕಡೆಗಳಲ್ಲಿ ನಡೆಸುವ ವಹಿವಾಟುಗಳು ಸೇರಿದಂತೆ ಎಲ್ಲವೂ ಅದರ ನುಡಿಯಲ್ಲಿರುತ್ತದೆ. ಇದು ಅತ್ಯಂತ ಸಹಜವಾದುದೂ, ಸರಿಯಾದುದೂ ಆಗಿದೆ.

ಇಂತಹ ಒಂದು ಸಹಜವಾದ ಪರಿಸರ ಯಾವುದೇ ಒಂದು ನಾಡಿನ ಜನರಿಗೆ ಏಳಿಗೆ ಹೊಂದಲು ಅತ್ಯಂತ ಪೂರಕವಾದುದ್ದಾಗಿದೆ. ಇದು ಜಪಾನಿನಲ್ಲಿದೆ, ಜರ್ಮನಿಯಲ್ಲಿದೆ, ಇಂಗ್ಲೆಂಡಿನಲ್ಲಿದೆ, ಫ್ರಾನ್ಸ್ ದೇಶದಲ್ಲಿದೆ… ಹಾಗೇ ಪ್ರಪಂಚದ ಹೆಚ್ಚಿನ ಎಲ್ಲೆಡೆಯೂ ಇದೆ ಮತ್ತು ದೌರ್ಭಾಗ್ಯದ ಸಂಗತಿಯೆಂದರೆ ಕನ್ನಡನಾಡಿನಲ್ಲಿ ಇಲ್ಲ! ಅದು ಇಲ್ಲದಿರುವುದು ಕನ್ನಡಿಗರಿಗೆ ಯಾವುದೇ ಕೊರತೆಯಾಗಿ ಕಾಣದೆ ತೀರಾ ಸಹಜವಾದ ಸ್ಥಿತಿ ಎನ್ನಿಸಿಬಿಟ್ಟಿರುವುದು ಇನ್ನಷ್ಟು ಅಚ್ಚರಿಯ ಸಂಗತಿ!

ನಾಗರಿಕತೆಯಲ್ಲಿ ಹೊಸಹೊಸ ಕಂಡುಕೊಳ್ಳುವಿಕೆಗಳಾದ್ದರಿಂದಾಗಿ ದೂರಗಳು ಹತ್ತಿರವಾದಂತೆಯೇ, ಬೇರೆಬೇರೆ ನುಡಿಗಳ ಜನರ ನಡುವಿನ ಒಡನಾಟ ಹೆಚ್ಚತೊಡಗಿತು. ಇದು ವಲಸೆಯ ಹೆಚ್ಚಳಕ್ಕೆ ನೀರೆರೆಯಿತು.

ಹಿಂದೆಲ್ಲಾ ಇಂತಹ ವಾತಾವರಣವು ಸಹಜವಾಗಿಯೇ ಒಂದು ನಾಡಿನಲ್ಲಿ ಇರುತ್ತಿತ್ತು. ಹೊರಗಿನವರು ಸಮಾಜದ ಒಳಬರುವುದೇ ದುಸ್ತರವಾಗಿದ್ದಂತಹ ದಿನಗಳಲ್ಲಿ ಹಾಗೆ ಬಂದವರೂ ಕೂಡಾ ಬಲುಬೇಗ ಬೆರೆತುಹೋಗಬೇಕಾದ ಅನಿವಾರ್ಯತೆಯ ವಾತಾವರಣವಿತ್ತು. ಹೀಗಾಗಿ ಎರಡು ಬೇರೆಬೇರೆ ನುಡಿಯಾಡುವ ಜನಾಂಗಗಳ ನಡುವಿನ ಒಡನಾಟದಿಂದಾಗುವ ಪರಿಣಾಮಗಳು ಬಹಳ ಕಡಿಮೆಯಿರುತ್ತಿತ್ತು. ಆದರೆ ನಾಗರಿಕತೆಯಲ್ಲಿ ಹೊಸಹೊಸ ಕಂಡುಕೊಳ್ಳುವಿಕೆಗಳಾದ್ದರಿಂದಾಗಿ ದೂರಗಳು ಹತ್ತಿರವಾದಂತೆಯೇ, ಬೇರೆಬೇರೆ ನುಡಿಗಳ ಜನರ ನಡುವಿನ ಒಡನಾಟ ಹೆಚ್ಚತೊಡಗಿತು. ಇದು ವಲಸೆಯ ಹೆಚ್ಚಳಕ್ಕೆ ನೀರೆರೆಯಿತು.

ಇಂದು ಇಂತಹ ವಲಸೆ, ದೇಶದ ಒಗ್ಗಟ್ಟಿಗೆ ಪೂರಕವೆನ್ನುವ ತಪ್ಪುಕಲ್ಪನೆಯ ಕಾರಣದಿಂದಾಗಿ ವಲಸೆಯೂ ಅಸಹಜವಾದ ಪ್ರಮಾಣದಲ್ಲಿ ನಡೆಯುತ್ತಾ ಸಮಾಜದ ಮೇಲಿನ ಪರಿಣಾಮಗಳೂ ಮಿತಿಮೀರಿವೆ. ಇಂತಹ ಪರಿಸ್ಥಿತಿ ಭಾರತ ಸ್ವತಂತ್ರವಾದ ನಂತರ ಇದರೊಳಗಿನ ಕರ್ನಾಟಕದಂತಹ ಭಾಷಾವಾರು ಪ್ರದೇಶಗಳ ಮೇಲೆ ತೀವ್ರವಾಗಿಯೇ ಆಗುತ್ತಿರುವುದನ್ನು ನೋಡುತ್ತಿದ್ದೇವೆ. ಹೀಗೆ ಅಸಹಜವಾದ ಬೆಳವಣಿಗೆಗಳು ಉಂಟುಮಾಡುವ ಬದಲಾವಣೆಗಳು ದೊಡ್ಡಮಟ್ಟದಲ್ಲಿ ಆಗುತ್ತಿರುವಾಗ ಕನ್ನಡಿಗರಂತಹ ನುಡಿಜನಾಂಗವೊಂದು ನುಡಿಹಮ್ಮುಗೆಯ (ಲಾಂಗ್ವೇಜ್ ಪ್ಲಾನಿಂಗ್) ಮೊರೆ ಹೋಗಬೇಕಾದ ಅಗತ್ಯ ಎದ್ದುಕಾಣುತ್ತದೆ.

ಯಾವುದೇ ನುಡಿಯ ಹರವು, ಕಸುವು, ಬಳಕೆ ಅಥವಾ ಸ್ವರೂಪಕ್ಕೆ ಸಂಬಂಧಪಟ್ಟಂತೆ ನುಡಿಸಮಾಜದ ಮೇಲೆ ಪ್ರಭಾವ ಬೀರಬಲ್ಲ ಕ್ರಮಗಳನ್ನು ಯೋಜಿಸಿ ಕೈಗೊಳ್ಳುವುದನ್ನು ನುಡಿ ಹಮ್ಮುಗೆ (ಲಾಂಗ್ವೇಜ್ ಪ್ಲಾನಿಂಗ್) ಎನ್ನಲಾಗುತ್ತದೆ. ಸಾಮಾನ್ಯವಾಗಿ ಸರ್ಕಾರಗಳು ಇದನ್ನು ಪರಿಣಾಮಕಾರಿಯಾಗಿ ಮಾಡಬಲ್ಲವಾದರೂ ಸಂಸ್ಥೆಗಳು, ವ್ಯಕ್ತಿಗಳು ಕೂಡಾ ನುಡಿಹಮ್ಮುಗೆಯನ್ನು ರೂಪಿಸುವುದುಂಟು. ಮೇಲ್ನೋಟಕ್ಕೆ ನೋಡಿದಾಗ ‘ಭಾಷೆಗಾಗಿ ಒಂದು ಯೋಜನೆ ಮಾಡುವುದು’ ಎನ್ನುವುದೇ ಒಂದು ರೀತಿಯಲ್ಲಿ ಅಚ್ಚರಿಯಾದ, ಅಸಹಜವಾದ ಕ್ರಿಯೆಯೆನ್ನಿಸುವಂತೆ ತೋರಿದರೂ ಕೂಡಾ ಒಂದು ನುಡಿಯ ಮೇಲೆ, ನುಡಿಯನ್ನಾಡುವ ಜನರ ಮೇಲೆ ಅಸಹಜವಾಗೇ ಬೇರೆ ಬೇರೆ ಪ್ರಭಾವಗಳಾಗುತ್ತಾ ಆ ನುಡಿ ಅಳಿದುಹೋಗುವಂತಾಗುತ್ತಿರುವ ವಾಸ್ತವ ಸನ್ನಿವೇಶದಲ್ಲಿ ‘ಲಾಂಗ್ವೇಜ್ ಪ್ಲಾನಿಂಗ್’ ಅಗತ್ಯವೆನ್ನಿಸುತ್ತದೆ. ಜಗತ್ತಿನಲ್ಲಿ ನುಡಿ ಹಮ್ಮುಗೆಯನ್ನು ಅಳವಡಿಸಿಕೊಂಡು ಏಳಿಗೆ ಹೊಂದಿದ ನಾಡಿನ ಒಂದು ಪ್ರಮುಖ ಉದಾಹರಣೆಯೆಂದರೆ ಹೀಬ್ರೂ ನುಡಿಯದ್ದು. ಅಳಿವಿನ ಅಂಚಿಗೆ ಬಂದಿದ್ದ ಹೀಬ್ರೂ ನುಡಿಗೆ ಹಮ್ಮುಗೆಯೊಂದನ್ನು ಮಾಡುವ ಮೂಲಕ ನುಡಿಯನ್ನೂ, ಆ ಮೂಲಕ ಜನಾಂಗವನ್ನೂ ಮುಂದುವರೆಯುವಂತೆ ಮಾಡಿದ್ದು ಇಸ್ರೇಲಿನಲ್ಲಿ.

ನುಡಿಹಮ್ಮುಗೆಯಲ್ಲಿ ನುಡಿ ಕಸುವು ಹಮ್ಮುಗೆ (corpus planning),, ನುಡಿ ಹರವು ಹಮ್ಮುಗೆ (Status planning) ಎನ್ನುವ ಎರಡು ಅಂಗಗಳಿವೆ. ನುಡಿ ಕಸುವು ಹಮ್ಮುಗೆಯು ನುಡಿಯ ಕಸುವನ್ನು ಹಿಗ್ಗಿಸುವ ಉದ್ದೇಶ ಹೊಂದಿರುತ್ತವೆ.

ಕನ್ನಡದ ನುಡಿ ಹಮ್ಮುಗೆ

ಕನ್ನಡದ ನುಡಿಹಮ್ಮುಗೆ ಕನ್ನಡಿಗರನ್ನು ಸಬಲಗೊಳಿಸುತ್ತದೆ ಎನ್ನುವುದಾದರೆ ಅಂತಹ ನುಡಿ ಹಮ್ಮುಗೆಯಲ್ಲಿ ಏನೇನಾಗಬೇಕು ಎನ್ನುವುದನ್ನು ನೋಡೋಣ. ನುಡಿಹಮ್ಮುಗೆಯಲ್ಲಿ ನುಡಿ ಕಸುವು ಹಮ್ಮುಗೆ (corpus planning),, ನುಡಿ ಹರವು ಹಮ್ಮುಗೆ (Status planning) ಎನ್ನುವ ಎರಡು ಅಂಗಗಳಿವೆ. ನುಡಿ ಕಸುವು ಹಮ್ಮುಗೆಯು ನುಡಿಯ ಕಸುವನ್ನು ಹಿಗ್ಗಿಸುವ ಉದ್ದೇಶ ಹೊಂದಿರುತ್ತವೆ. ಅದರಲ್ಲಿ ಲಿಪಿ ಸುಧಾರಣೆ, ಪದಕಟ್ಟಣೆ, ಅರಿಮೆ ಕವಲುಗಳನ್ನು ಕನ್ನಡದಲ್ಲಿ ತರುವುದು ಸೇರಿವೆ. ಲಿಪಿ ಸುಧಾರಣೆಯಲ್ಲಿ ನುಡಿಯೊಂದರ ಬರಹಕ್ಕೆ ಕಾಲಕಾಲಕ್ಕೆ ಬೇಕಿರುವ ಅಕ್ಷರಗಳನ್ನು ಸೇರಿಸಿ, ಬೇಡದ ಅಕ್ಷರಗಳನ್ನು ಲಿಪಿಯಿಂದ ಕೈಬಿಡುತ್ತಾ, ಬರಹವನ್ನು ನುಡಿಯ ಬಳಕೆಗೆ ಅನುಕೂಲವಾಗುವಂತೆ ಮಾರ್ಪಡಿಸಲಾಗುತ್ತದೆ. ಉದಾಹರಣೆಗೆ ಟರ್ಕಿ ದೇಶದಲ್ಲಿ ಅರಬ್ಬಿ ಲಿಪಿಯನ್ನು ಲ್ಯಾಟಿನ್ನಿಗೆ ಬದಲಿಸಲಾಯಿತು. ಚೀನಾದಲ್ಲಿ ಚೀನಿ ಲಿಪಿಯನ್ನು ಸುಧಾರಣೆ ಮಾಡಿ ಆಧುನಿಕ ಚೀನಿ ಲಿಪಿಯನ್ನು ಜಾರಿಮಾಡಲಾಯಿತು. ಆ ಮೂಲಕ ಕಠಿಣವಾದ ಮತ್ತು ಸಂಕೀರ್ಣವಾದ ಲಿಪಿಯನ್ನು ತಿಳಿಗೊಳಿಸಲಾಯಿತು. ಕನ್ನಡದಲ್ಲಿ ಕೂಡಾ ಬೇಡದ ಅಕ್ಷರಗಳನ್ನು ಕೈಬಿಡುವ ಬಗ್ಗೆ ಡಾ.ಡಿ.ಎನ್.ಶಂಕರ್ ಭಟ್ ಅವರಂತಹ ಹಲವು ಭಾಷಾ ವಿಜ್ಞಾನಿಗಳು ಒಲವು ತೋರಿದ್ದಾರೆ.

ನುಡಿ ಕಸುವು ಹಿಗ್ಗಿಸುವಲ್ಲಿ ಹೊಸ ಪದಗಳನ್ನು ಕಟ್ಟುವಿಕೆ ಮಹತ್ವದ್ದಾಗಿದೆ. ಈಗಾಗಲೇ ಇರುವ ಪರಭಾಷೆಯ ಪದಗಳಿಗೆ ಕನ್ನಡದ್ದೇ ಪದಗಳನ್ನು ಕಟ್ಟುವ ಮೂಲಕ ಪದಕಟ್ಟಣೆಯನ್ನು ಯಾರು ಬೇಕಾದರೂ ಮಾಡಲು ಸಾಧ್ಯವಾಗಿಸುವಂತಹ ಪ್ರಯತ್ನಗಳು ನಡೆಯುತ್ತಿವೆ. ಹಿಂದೆಲ್ಲಾ ಪದಗಳನ್ನು ಕಟ್ಟುವವರು ವಿಷಯ ತಜ್ಞರಾಗಿರುವುದಕ್ಕಿಂತಾ ಹೆಚ್ಚಾಗಿ ಸಂಸ್ಕೃತ ಭಾಷಾ ಪಂಡಿತರಾಗಿರಬೇಕಿತ್ತು ಎನ್ನುವ ಪರಿಸ್ಥಿತಿಯನ್ನು ಇದು ಬದಲಿಸಿ ಕನ್ನಡಿಗರ ಪದಕಟ್ಟಣೆಯ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹೊಸ ಹೊಸ ಪದಗಳನ್ನು ಕಟ್ಟುವುದು, ಅದನ್ನು ಸಮಾಜದಲ್ಲಿ ಬಳಕೆಗೆ ಪರಿಚಯಿಸುವುದು ನುಡಿಯ ಕಸುವು ಹೆಚ್ಚಿಸಲು ಸಹಕಾರಿಯಾಗಲಿದೆ.

ನುಡಿ ಹರವು ಹಮ್ಮುಗೆಯಲ್ಲಿ ಎಲ್ಲೆಲ್ಲಿ ನುಡಿಯ ಬಳಕೆಯನ್ನು ತರಬೇಕು ಎನ್ನುವುದನ್ನು ಯೋಜಿಸಲಾಗುತ್ತದೆ. ಇದನ್ನು ಎಲ್ಲೆಲ್ಲಿ ನುಡಿಯು ಇರಬೇಕೆಂಬ ಒಂದು ಪಟ್ಟಿಯನ್ನು ತಯಾರಿಸುವ ಮೂಲಕ ಆರಂಭಿಸಲಾಗುತ್ತದೆ. ಇಂತಹ ಪಟ್ಟಿಯ ಮೂಲಕ ನುಡಿಯ ಈಗಿನ ಹರವನ್ನು ತಿಳಿಯಲಾಗುತ್ತದೆ. ಜೊತೆಗೆ ನುಡಿಯ ಕಸುವನ್ನೂ ಅಳೆಯಲಾಗುತ್ತದೆ. ಇಂತಹ ಪಟ್ಟಿಯನ್ನು ನಾವು `ನುಡಿ ಬಳಕೆ ಹರವು’ (Language Register) ಎನ್ನಬಹುದು. ಒಂದು ನುಡಿಯ ನುಡಿ ಹರವಿನ ಪಟ್ಟಿ ಎನ್ನುವುದನ್ನು ಹೀಗೆ ಅರಿಯಬಹುದು. ಆ ನುಡಿಯಲ್ಲಿ ಲಾಲಿ ಹಾಡುಗಳಿವೆಯೇ? ಇದೆ ಎಂದರೆ ಪಟ್ಟಿಗೆ ಒಂದು ಅಂಶ ಸೇರಿದಂತಾಯ್ತು.

ತಾಂತ್ರಿಕ ವಿಷಯಗಳಲ್ಲಂತೂ ಇದು ಅಸಾಧ್ಯವೆನ್ನಿಸುವ ಪರಿಸ್ಥಿತಿಯಿದೆ. ಕನ್ನಡದ ಜನರಿಗೆ ಈ ನಾಡಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ಒಂದನ್ನೇ ಬಳಕೆ ಮಾಡಿ ಸುಲಭವಾಗಿ ಕೆಲಸ ಮುಗಿಸಿಕೊಂಡು ಬರುವ ಸಾಧ್ಯತೆ ಕುಗ್ಗುತ್ತಾ ಬರುತ್ತಿದೆ.

ಆ ನುಡಿಯಲ್ಲಿ ಲಿಪಿ ಇದೆಯೇ? ನುಡಿಯಲ್ಲಿ ಮೊದಲ ಹಂತದ ಕಲಿಕೆ ಇದೆಯೇ?… ಹೀಗೆ ಸಾಗುವ ಪಟ್ಟಿ ನುಡಿಯಲ್ಲಿ ದಿನಬಳಕೆಯ ವಸ್ತುಗಳನ್ನು ಬಳಸುವ ಬಗೆ/ಎಚ್ಚರಿಕೆಯ ಮಾಹಿತಿ ಟಿಪ್ಪಣಿಯಿವೆಯೇ ಎಂಬ ಸಣ್ಣ ವಿಷಯದಿಂದ ಆ ನುಡಿಯಲ್ಲಿ ಉನ್ನತ ತಂತ್ರಜ್ಞಾನವಿದೆಯೇ ಎನ್ನುವವರೆಗೂ ಹರವು ಪಡೆದುಕೊಳ್ಳುತ್ತದೆ. ಇಂದು ಕನ್ನಡಿಗರ ಕಲಿಕೆಯು ಇರುವ ಹಂತವನ್ನು ನೋಡಿ.

ಕೆಲವರ್ಷಗಳ ಹಿಂದೆ ಹತ್ತನೇ ತರಗತಿಯ ಆಚೆಗೆ ಪಿಯುಸಿಯವರೆಗೂ ಇದ್ದ ಕನ್ನಡ ಮಾಧ್ಯಮದಲ್ಲಿನ ಕಲಿಕೆ ದಿನೇ ದಿನೇ ಕುಗ್ಗುತ್ತಾ ಬರುತ್ತಿದೆ. ಉನ್ನತ ಕಲಿಕೆಯೆನ್ನುವುದು ಕನ್ನಡದಲ್ಲಿ ಕಷ್ಟ ಎನ್ನುವ ವಾತಾವರಣವಿದೆ. ತಾಂತ್ರಿಕ ವಿಷಯಗಳಲ್ಲಂತೂ ಇದು ಅಸಾಧ್ಯವೆನ್ನಿಸುವ ಪರಿಸ್ಥಿತಿಯಿದೆ. ಕನ್ನಡದ ಜನರಿಗೆ ಈ ನಾಡಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ಒಂದನ್ನೇ ಬಳಕೆ ಮಾಡಿ ಸುಲಭವಾಗಿ ಕೆಲಸ ಮುಗಿಸಿಕೊಂಡು ಬರುವ ಸಾಧ್ಯತೆ ಕುಗ್ಗುತ್ತಾ ಬರುತ್ತಿದೆ. ಬೆಂಗಳೂರು ಬಸ್ ನಿಲ್ದಾಣದಲ್ಲಿ ಇರುವ ಸುಲಲಿತತೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿಲ್ಲ! ಇನ್ನು ನಮ್ಮ ಮನರಂಜನೆ ಮತ್ತು ದೂರದರ್ಶನಗಳಲ್ಲಿ ಕನ್ನಡದಲ್ಲಿ ಕಾರ್ಯಕ್ರಮಗಳನ್ನು, ಮನರಂಜನೆಯನ್ನು ಪಡೆದುಕೊಳ್ಳಲಾಗದ ಪರಿಸ್ಥಿತಿಯಿರುವುದನ್ನೂ ಗಮನಿಸಬೇಕಾಗಿದೆ.

ಇಂಥಾ ದುಸ್ಥಿತಿಯನ್ನು ಸರಿಯಾದ ನುಡಿಹಮ್ಮುಗೆಯೊಂದು ಬದಲಿಸಬಲ್ಲದು. ಹೆಚ್ಚು ಹೆಚ್ಚು ಹರವು ಪಡೆದುಕೊಂಡಷ್ಟೂ ಆ ನುಡಿ ಹೆಚ್ಚು ಹೆಚ್ಚು ಜೀವಂತ ಮತ್ತು ಪ್ರಭಾವಶಾಲಿಯಾಗುತ್ತದೆ. ಇದರಲ್ಲಿ ಸರ್ಕಾರದ ಪಾತ್ರವೂ ಪ್ರಮುಖವಾಗಿದೆ. ಸರ್ಕಾರವು ನುಡಿಗೆ ಆಡಳಿತ ಭಾಷೆಯ ಸ್ಥಾನಮಾನ ನೀಡುವ ಮೂಲಕ ಎಲ್ಲೆಲ್ಲಿ ಯಾವ ಯಾವ ಪ್ರಮಾಣದಲ್ಲಿ ನಮ್ಮ ನುಡಿ ಇರಬೇಕು ಎನ್ನುವುದನ್ನು ಕಾಯ್ದೆ ಕಾನೂನುಗಳ ಮೂಲಕ ಸ್ಥಾಪಿಸಲು ಸಾಧ್ಯವಾಗುತ್ತದೆ. ಗ್ರಾಹಕ ಸೇವೆಯಲ್ಲಿ, ಆಡಳಿತದಲ್ಲಿ, ಕಲಿಕೆಯಲ್ಲಿ… ಹೀಗೆ ಎಲ್ಲೆಡೆ ಕನ್ನಡ ತರಲು ಕಾಯ್ದೆಕಾನೂನು ರೂಪಿಸುವ ಮಹತ್ವದ ಕೆಲಸವನ್ನು ನುಡಿ ಹಮ್ಮುಗೆಯ ಅಂಗವಾಗಿ ಸರ್ಕಾರ ಮಾಡಬಹುದಾಗಿದೆ.

ನುಡಿ ಹಮ್ಮುಗೆಯಿಂದಾಗಿ ನುಡಿಯಾಡುವ ಜನರ ಏಳಿಗೆಯ ಹೆಬ್ಬಾಗಿಲು ತೆರೆದುಕೊಳ್ಳುತ್ತದೆ. ಅಸಹಜ ಕಾರಣಗಳಿಂದಾಗಿ ತೊಂದರೆಗೆ ಒಳಪಡುತ್ತಿರುವ ಕನ್ನಡದಂತಹ ಸಮೃದ್ಧವಾದ ನುಡಿಗೆ ನುಡಿಹಮ್ಮುಗೆಯ ಬೆಂಬಲ ದೊರೆತರೆ ನಾಡಿಗೆ ಒಳಿತು.

‘ನುಡಿಹಮ್ಮುಗೆ’ಯು ದಿನದಿಂದ ದಿನಕ್ಕೆ “ನುಡಿ ಬಳಕೆಯ ಹರವ”ನ್ನು ಕುಗ್ಗಿಸಿಕೊಳ್ಳುತ್ತಿರುವ ಕನ್ನಡಕ್ಕೆ ಜೀವಜಲವಾಗುವುದರಲ್ಲಿ ಸಂಶಯವಿಲ್ಲ. ಕನ್ನಡನಾಡಿನಲ್ಲಿ ಕನ್ನಡವು ಬದುಕಿನ ಎಲ್ಲಾ ಅಗತ್ಯಗಳನ್ನು ಪೂರೈಸುವ ಸಾಧನವಾಗಬೇಕಾಗಿದೆ. ನುಡಿಹಮ್ಮುಗೆಯ ಯಶಸ್ಸು, ಈ ಯೋಜನೆಗಳ ಮೇಲೆ ಮುಖ್ಯವಾಗಿ ನಿಂತಿದ್ದರೂ ಸಮಾಜದ ಹೊಣೆಗಾರಿಕೆಯೂ ಮುಖ್ಯವಾಗಿದೆ.

ಕನ್ನಡ ಸಾಹಿತ್ಯ ಪರಿಷತ್, ಕನ್ನಡ ವಿಶ್ವವಿದ್ಯಾಲಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳಂತಹ ಸಂಸ್ಥೆಗಳ ಜೊತೆಯಲ್ಲಿ ನಾಗರಿಕರೂ ತೊಡಗಿಕೊಳ್ಳುವ ಮೂಲಕ ಕನ್ನಡದ ನುಡಿಹಮ್ಮುಗೆಯನ್ನು ಯಶಸ್ವಿಯಾಗಿ ಯೋಜಿಸಿ ಜಾರಿ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ “ಕಾಣಲಿ ಕನ್ನಡ: ಕೇಳಲಿ ಕನ್ನಡ” ಎನ್ನುವ ಒಂದು ಸರಳ ಸೂತ್ರವನ್ನು ಅಳವಡಿಸಿಕೊಳ್ಳಬಹುದು. ಅಳಿದೇ ಹೋಗಿದ್ದ ಹೀಬ್ರೂ ನುಡಿಯನ್ನು ನುಡಿಹಮ್ಮುಗೆಯ ಮೂಲಕ ಇಸ್ರೇಲಿಗಳು ಬಳಸಿಕೊಂಡು ಏಳಿಗೆ ಹೊಂದುವುದು ಸಾಧ್ಯವಾಗುವುದಾದರೆ… ಸಾವಿರಾರು ವರ್ಷಗಳ ಇತಿಹಾಸ ಇರುವ, ಆರು ಕೋಟಿ ಜನಸಂಖ್ಯೆಯಿರುವ, ಸಾಹಿತ್ಯ ಸಂಸ್ಕೃತಿಗಳ ಉಜ್ವಲ ಪರಂಪರೆಯಿರುವ ಕನ್ನಡಿಗರಿಗೆ ಇದು ಅಸಾಧ್ಯವಾದ ಕೆಲಸವೇನಲ್ಲ!

*ಲೇಖಕರು ಕನ್ನಡಪರ ಚಿಂತಕರು; ಬನವಾಸಿ ಬಳಗ ಸಂಘಟನೆಯ ಅಧ್ಯಕ್ಷರು.

Leave a Reply

Your email address will not be published.