-ಟಿ.ಕೆ.ಗಂಗಾಧರ ಪತ್ತಾರ
‘ಕಣ್ಣಡಕ’ ಎಂಬುದು ‘ಕನ್ನಡಕ’ ಎಂದಾಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ‘ಕಣ್ಣಡಕ’ಕ್ಕೆ ಅರ್ಥವಿದೆ; ‘ಕಣ್ಣು’ಗಳಿಗೆ ಅಡಕವಾದದ್ದು ಕಣ್ಣಡಕ. ಹಾಗಾದರೆ ‘ಕನ್ನಡಕ’ ಪದಕ್ಕೆ ಏನರ್ಥ?
ಸಾಮಾನ್ಯವಾಗಿ ನರ-ನಾರಿಯರ ವಯಸ್ಸು 40 ವರ್ಷ ತುಂಬಿದಾಗ ಸಮೀಪ ದೃಷ್ಟಿಯಲ್ಲೋ, ದೂರ ದೃಷ್ಟಿಯಲ್ಲೋ ವ್ಯತ್ಯಯವಾಗುವುದು ಸಹಜ. ಕಣ್ಣಿನ ದೃಷ್ಟಿ ಮಂದವಾಗುವುದು, ಎದುರಿನ ಆಕೃತಿ ಎರಡಾಗಿ ನಾಲ್ಕಾಗಿ ಕಾಣುವುದು, ಮಂಜು-ಮOಜಾಗಿ ಗೋಚರಿಸುವುದು, ಏನನ್ನಾದರೂ ದಿಟ್ಟಿಸಿ ನೋಡಿದಾಗ ಕಣ್ಣಲ್ಲಿ ನೀರು ತುಂಬುವುದು, ಕಂಬನಿ ಉದುರುವುದು, ನರ-ನಾಡಿಗಳು ಸೆಳೆದಂತಹ-ಜಗ್ಗಿದOತಹ ಅನುಭವವಾಗುವುದು, ಲಘುವಾಗಿ ತಲೆನೋವು ಬರುವುದು-ಇವೆಲ್ಲಾ ಸರ್ವೇಸಾಮಾನ್ಯ. ಆಗ ನೇತ್ರವೈದ್ಯರ ಬಳಿ ಹೋಗಲೇಬೇಕಾಗುತ್ತದೆ. ಅವರು ದೃಷ್ಟಿಪರೀಕ್ಷಕ (ರಿಫ್ರೆಕ್ಷನಿಸ್ಟ್)ರಲ್ಲಿಗೆ ಕಳಿಸುತ್ತಾರೆ. ಅವರ ವರದಿ ಮೇರೆಗೆ ನಿರ್ದಿಷ್ಟ ನಂಬರಿನ ಚಾಳೀಸು ಹಾಕಿಕೊಳ್ಳಲು ತಿಳಿಸುತ್ತಾರೆ.
ಚಾಳೀಸು, ಚಷ್ಮಾ-ಎಂದು ಕರೆಯಲಾಗುವ ಈ ‘ನಯನಾಭರಣ’ವನ್ನು ‘ಸುಲೋಚನ’ ಎಂದೂ ‘ಕನ್ನಡಕ’ವೆಂದೂ ಕರೆಯಲಾಗುತ್ತದೆ. 40ವರ್ಷ ತುಂಬಿದಾಗ ಬರುವುದರಿಂದ ‘ಚಾಳೀಸು’ ಎಂಬ ಹೆಸರು ಬಂದಿರುವುದು ಸಹಜ. ಹಿಂದಿ ಭಾಷೆಯಲ್ಲಿ ‘ಚಷ್ಮ’ ಎಂದರೆ ಕಣ್ಣು ಅರ್ಥವಿರುವುದರಿಂದ-ಇದೂ ಸರಿ. ಒಳ್ಳೇಕಣ್ಣು ಎಂಬರ್ಥದ ‘ಸುಲೋಚನ’ವೂ ಸರಿ.
ಈ ‘ಸುಲೋಚನ’ಕ್ಕೆ ಸಂಬAಧಿಸಿದ ನೈಜ ಘಟನೆಯೊಂದು ಇಲ್ಲಿ ಉಲ್ಲೇಖಾರ್ಹ. ನಾನು 1970-71ರಲ್ಲಿ ಕುಕನೂರು ವಿದ್ಯಾನಂದ ಗುರುಕುಲ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದಾಗ ಬಂ.ರO. ಸರ್ಮೊಕದ್ದಂ ಅವರ ಪರಿಚಯವಾಯ್ತು. ಬಂ.ರO.ಎOದರೆ ಬಂಡೇರOಗ, ಸರ್ಮೊಕದ್ದಂ ಅನ್ನೋದು ಮನೆತನದ ಹೆಸರು. ಅವರ ಪೂರ್ವಜರೊಬ್ಬರು ವಕೀಲರಾಗಿದ್ದರು. ಎಂಥ ಕ್ಲಿಷ್ಟಕರ ಮೊಕದ್ದಮೆಗಳನ್ನೂ ಸಮರ್ಪಕವಾಗಿ ವಾದಿಸಿ ಪಾಟೀಸವಾಲಿನಲ್ಲಿ ನಾನಾ ಅನ್ನೋ ಪ್ರತಿವಾದಿ ವಕೀಲರನ್ನು ಸೋಲಿಸಿ ಲೀಲಾಜಾಲವಾಗಿ ಕೇಸ್ ಗೆಲ್ಲುತ್ತಿದ್ದರಂತೆ. ತತ್ಪರಿಣಾಮವಾಗಿ ಒಬ್ಬ ಆಂಗ್ಲ ಜಡ್ಜ್ ಅವರಿಗೆ ‘ಸರ್ಮೊಕದ್ದಂ’ ಎಂಬ ಬಿರುದು ನೀಡಿದ್ದು ಅದೇ ಅವರ ಮನೆತನಕ್ಕೆ ಅಡ್ಡ ಹೆಸರಾಗಿ ಚಾಲ್ತಿಯಲ್ಲಿ ಬಂದಿತ್ತು.
ಈ ಬಂಡೇರAಗರಾವ್ ಹುಟ್ಟಿದಾರಭ್ಯ ನಿರಂತರ ಒಂದಿಲ್ಲೊAದು ಕಾಯಿಲೆಯಿಂದ ಸತ್ತು ಸತ್ತು ಮರುಹುಟ್ಟು ಪಡೆಯುತ್ತಿದ್ದ ಕಾರಣ ತೊಟ್ಟಿಲಲ್ಲಿಟ್ಟ ಹೆಸರು ಬಿಟ್ಟು ಬಂಡೆಯAತೆ ಗಟ್ಟಿಯಾಗಿ ಬದುಕಲೆಂದು ಬಂಡೇರOಗ ಅಂತಾ ಕರೆದಿದ್ದು ಮುಂದೆ ಅದೇ ಶಾಶ್ವತ ಹೆಸರಾಯ್ತು. ಬಾಲ್ಯಾವಸ್ಥೆಯಿಂದಲೇ ಅವರಿಗೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ಅತೀ ದಪ್ಪ ಗಾಜಿನ ಚಾಳೀಸು ಅವರ ನೇತ್ರಾಭರಣವಾಯಿತು. ಆದರೆ ಶಾಲೆಯಲ್ಲಿ ಬಲು ಚುರುಕು. ತರಗತಿಯಲ್ಲಿ ಒಮ್ಮೆ ಕೇಳಿದ್ದು ಒಂದ್ಸಲ ಓದಿಬಿಟ್ಟರೆಂದರೆ ಹಸಿಗೋಡೆಗೆಸೆದ ಹರಳಿನಂತೆ ಅವರ ಚಿತ್ತಭಿತ್ತಿಯಲ್ಲಿ ಅಚ್ಚೊತ್ತಿಬಿಡುತ್ತಿತ್ತು.
ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಕವನ ರಚನೆಯ ಗೀಳು. ಪ್ರಬಂಧ ಬರಹ, ಆಶು ಭಾಷಣ ಯಾವುದೇ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆಯುತ್ತಿದ್ದರು. ಎಂ.ಎ.ಗೆ ಬರುವಷ್ಟರಲ್ಲಿ ಅವರ ಹಲವಾರು ಕವಿತೆ, ಹರಟೆ ಕರ್ಮವೀರದಲ್ಲಿ ಅಚ್ಚಾಗಿ ಕೆಲವು ನಾಟಕ ಧಾರವಾಡ ಆಕಾಶವಾಣಿಯಲ್ಲಿ ಪ್ರಸಾರವಾಗಿದ್ದವು. ಅವರ ಬೇಂದ್ರೆ ಪಾತ್ರವನ್ನು ನೋಡಿ ಸ್ವತಃ ವರಕವಿ ಬೇಂದ್ರೆಯವರೇ ನಿಬ್ಬೆರಗಾಗಿದ್ದರಂತೆ.
‘ಸುಲೋಚನ’ವೆಂಬ ಅವರ ಕಾವ್ಯನಾಮ ಬಯೋಡೇಟಾದಲ್ಲೂ ಸೇರಿಕೊಂಡಿತ್ತು. ಸುಲೋಚನ-ಬಂಡೇರAಗರಾವ್ ಸರಮೊಕದ್ದಂ ಎಂದೇ ಬರೆಯುತ್ತಿದ್ದರು. ಒಮ್ಮೆ ಲೆಕ್ಚರರ್ ಹುದ್ದೆ ‘ಇಂಟರ್ವ್ಯೂ’ಗೆ ಹೋದಾಗ ದಫೇದಾರ ‘ಸುಲೋಚನ.. ಸುಲೋಚನ ಯಾರಮ್ಮಾ ಒಳಗ ಹೋಗ್ರಿ’ ಎಂದು ಹೇಳಿ, ಪಕ್ಕದ ರೂಮೊಳಗೆ ಯಾವುದೋ ಫೈಲ್ ತರಲು ಹೋದ. ಒಳಗೆ ಬಂದ ಬಂ.ರA.ಅವರನ್ನು ನೋಡಿದ ಮೂವರೂ ಸಾಹೇಬ್ರು ಒಕ್ಕೊರಲಿನಿಂದ, ‘ಯರ್ರೀ ಅದೂ ಒಳಗ ನುಗ್ಗೋರು, ನಾನ್ಸೆನ್ಸ್. ಸುಲೋಚನ ಬಾಯೀನ್ನ ಕರದ್ರ ನೀವ್ಯಾಕ್ರೀ ಬಂದ್ರಿ’ ಎಂದು ಜೋರು ಮಾಡಿದರು. ಯಾವುದೋ ಒಂದು ಶೃಂಗಾರ ಸುಂದರ ವದನಾರವಿಂದದಿAದ ಕಂಗೊಳಿಸುವ ಬೆಡಗು ಬಿನ್ನಾಣದ ವೈಯಾರಿ ಬರುವುದೆಂಬ ನಿರೀಕ್ಷೆಯಲ್ಲಿದ್ದ ಅವರಿಗೆ ನಿರಾಶೆಯಿಂದ ಸಿಟ್ಟು ನೆತ್ತಿಗೇರಿಬಿಟ್ಟಿತ್ತು.
‘ಲೋ ದಫೇದಾರ, ಎಲ್ಲಿ ಹಾಳಾಗಿ ಹೋದ್ಯೋ ಬಡ್ಡೀಮಗನೇ? ಸುಲೋಚನ ಬಾಯೀನ್ ಕಳಸು ಅಂದ್ರ ಯಾವುದೋ ಕೆಂಪು ಮೋತೀ ಮಂಗನ್ನ ಕಳಿಸೀಯಲ್ಲೋ ಅಂತಾ ಒದರಾಡತೊಡಗಿದರು. ನಮ್ಮ ಬಂ.ರO. ಒಳ್ಳೇ ಪರಂಗಿಯವರAತೆ ಕೆಂಪುಗುಲಾಬಿಯ ಬಣ್ಣದವರಾಗಿದ್ದರು.
ಈ ಪುರುಷ ಸುಲೋಚನ, ‘ಸರ್ ಸರ್ ನಾನೇರೀ ಸುಲೋಚನ’ ಅಂದಾಗ ಎಲ್ರೂ ಕಕ್ಕಾಬಿಕ್ಕಿಯಾಗಿ ಒಬ್ರನ್ನೊಬ್ರು ಮಿಕಿಮಿಕಿ ಮಕಮಕ ನೋಡಾಕ್ ಹತ್ತಿದರು. ಅದ್ಹಾö್ಯಂಗ್ರೆಪಾ, ಹೆಣ್ಣು ಹೆಸರು ಇಟ್ಗೊಂಡ್ರಿ ಅಂದ್ರು. ‘ಹೌದ್ ಸರ್, ನಾನೊಬ್ಬ ಕವಿ. ನನ್ನ ಕಾವ್ಯನಾಮ-ಸುಲೋಚನ’ ಅಂದಾಗೆಲ್ರೂ ಸುಸ್ತೋಸುಸ್ತು.
ನನ್ನ ಅಚ್ಚುಮೆಚ್ಚಿನ ಈ ಸುಲೋಚನ 15.8.1985ರಂದು ಮೂತ್ರಕೋಶ ವೈಫಲ್ಯದಿಂದ ಅಕಾಲ ಮೃತ್ಯುವಶರಾದರು!.
ಸರಿ! ಆದರೆ-ಈ ‘ಕನ್ನಡಕ’ವೆಂದರೇನರ್ಥ? ಈ ಹೆಸರು ಏಕೆ ಬಂತು? ಹೇಗೆ ಬಂತು?
ನಮ್ಮಲ್ಲಿ ‘ಣ’-‘ನ’ ವಿವಾದ ಬಹುಹಿಂದಿನಿAದಲೂ ಇದೆ. ಕರ್ಣಾಟಕ-ಕರ್ನಾಟಕ ಎರಡೂ ಚಾಲ್ತಿಯಲ್ಲಿವೆ. ನಾನು ಸಣ್ಣವನಾಗಿದ್ದಾಗ ಅದೇ ತಾನೇ ನಮ್ಮ ಕುಗ್ರಾಮಕ್ಕೆ ಹಿಟ್ಟಿನ ಗಿರಣಿ ಬಂದಿದ್ದರೂ ಬಹುತೇಕ ಹೆಣ್ಣುಮಕ್ಕಳು ಗಿರಣಿಯ ಹಿಟ್ಟು ಸತ್ವಹೀನ ಅಂತಾ ಮನೆಯ ಅಥವಾ ನೆರೆಮನೆಯ ಬೀಸೋಕಲ್ಲಿನಲ್ಲಿಯೇ ಜೋಳ ಗೋಧಿ ಬೀಸುತ್ತಿದ್ದರು. ಆಗೆಲ್ಲಾ ಅವರು ಬೀಸೋಕಲ್ಲಿನ ಪದಾ ಹಾಡುತ್ತಾ ಬೀಸುತ್ತಿದ್ದರು.
ಬೆಳಗಾಗ ನಾನೆದ್ದು/ ಯಾರ್ಯಾರ ನೆನೆಯಲಿ/ಎಳ್ಳು ಜೀರಿಗಿ ಬೆಳೆಯೋಳ/-ಭೂಮಿತಾಯ್ನ-/
ಎದ್ದೊಂದು ಗಳಿಗಿ ನೆನೆದೇನ//
ಕಲ್ಲವ್ವ ತಾಯಿ/ನುರಿಸವ್ವ ಜ್ವಾಳವನ/
ಮೆಲ್ಲಮೆಲ್ಲನೆ ಉದುರವ್ವ-ನಾ ನಿನಗೆ-/
ಬೆಲ್ಲದಾರತಿಯ ಬೆಳಗೇನ//
ತಮ್ಮ ಮನೆಯಲ್ಲಿ ಬೀಸೋಕಲ್ಲು ಇಲ್ಲದವರು ಇದ್ದವರ ಮನೆಗೆ ಬೀಸಿಕೊಂಡು ಬರಲು ಹೋದಾಗ ಈ ಹಾಡುಗಳ ಜತೆ ಹಾಡುತ್ತಿದ್ದ ಕೃತಜ್ಞತಾರ್ಪಣ ಹಾಡು ಅವರ ಸಹಜ ಸುಸಂಸ್ಕೃತ ಮನೋಭಾವನೆಯನ್ನು ಬಿಂಬಿಸುತ್ತಿತ್ತು.
ಕಲ್ಲು ಕೊಟ್ಟಮ್ಮಾಗೆ/ಎಲ್ಲ ಭಾಗ್ಯವು ಬರಲಿ/
ಪಲ್ಲಕ್ಕಿ ಮ್ಯಾಲೆ ಮಗ ಬರಲಿ-ಆ ಮನಿಗೆ-/
ಮಲ್ಲಿಗೆ ಮುಡಿಯೋ ಸೊಸೆ ಬರಲಿ//
ಜಾನಪದ ಹಾಡುಗಳಲ್ಲಿ ಆಗ ಜನಪ್ರಿಯವಾಗಿದ್ದ ನಾಟಕ ಮತ್ತು ಸಿನಿಮ ಹಾಡುಗಳೂ ಸೇರಿಕೊಳ್ಳುತ್ತಿದ್ದುದು ಸೋಜಿಗ!
ಹೇಮರೆಡ್ಡಿ ಮಲ್ಲಮ್ಮ ನಾಟಕದ ‘ಹೃದಯ ವ್ಯಥೆ ನಾನ್ ತಾಳೆ ಮಮ ಜನನಿ…’; ‘…ನನ ಮ್ಯಾಲೆ ಸವತೀ ತರ್ತೀನಂದ ಮನ್ಯಾಗಿಡ್ತೀನಂದ/ ತಂದರ ತರಲೆಂದೆ ನಾ ಉಟ್ಟ ಸೀರೀ ಉಡಲೆಂದೆ ಮನ್ಯಾಗಿರಲೆಂದೆ….’ ಇದರ ಜೊತೆಗೆ ‘ರತ್ನಗಿರಿ ರಹಸ್ಯ’ ಸಿನಿಮದ ‘ಅನುರಾಗದಾ ಅಮರಾವತಿ/ ಅಸಮಾನ ಭಾಗ್ಯದ ರಾಶಿ/ ನಮ್ಮ ಕನ್ನಡ ಪ್ರೇಮದ ಜ್ಯೋತಿ/’ ಹಾಡು ಸೇರಿ ಕೊಂಡಿರುತ್ತಿತ್ತು. ಇದು 1957ರಿಂದ 1961ವರೆಗಿನ ಮಾತು. ಆಗಿನ್ನೂ ನಾನು ಯಾವುದೇ ಸಿನಿಮಾ ನೋಡಿರಲಿಲ್ಲ. ನಾನು 1962ರಲ್ಲಿ ಮೊಟ್ಟಮೊದಲಿಗೆ ಹೊಸಪೇಟೆ ಸಚ್ಚಿದಾನಂದ ಟಾಕೀಜಿನಲ್ಲಿ ಕಣ್ಣು ತೆರೆದು ವೀಕ್ಷಿಸಿದ್ದು ರಾಜ್-ಲೀಲಾವತಿ ಜೋಡಿಯ ‘ಕಣ್ತೆರೆದು ನೋಡು’.
ಅಲ್ಲದೇ ಸಿನಿಮಾ ನೋಡಲು ಹತ್ತು ಮೈಲು ದೂರದ ಕುಕನೂರು, ಹತ್ತುಹದಿನೈದು ಮೈಲು ದೂರದ ನರೇಗಲ್, ಕೊಪ್ಪಳ ಅಥವಾ ಗದಗಿಗೆ ಹೋಗಬೇಕಾಗಿತ್ತು. ಹಿಂದಿಯ ‘ನಾಗಿನ್’, ‘ಅನಾರ್ಕಲಿ’, ಕನ್ನಡದ ‘ಕಿತ್ತೂರು ಚೆನ್ನಮ್ಮ’, ‘ಸ್ಕೂಲ್ ಮಾಸ್ಟರ್’ ಇತ್ಯಾದಿ ಸಿನಿಮಾ ಬಂದಾಗ ಹಳ್ಳಿ-ಹಳ್ಳಿಗಳ ಮಂದಿ ಚಕ್ಕಡಿ ಕಟ್ಟಿಕೊಂಡು ನರೇಗಲ್ಲಿಗೆ ಕೆಲವರು, ಕುಕನೂರಿಗೆ ಕೆಲವರು ಹೋಗುತ್ತಿದ್ದ ದೃಶ್ಯ ನನ್ನ ಕಣ್ಮುಂದೆ ಕಟ್ಟಿದಂತಿದೆ. ಆ ವೈಭವ ಆ ಸಡಗರ-ಸಂಭ್ರಮ ನೋಡುವಂತಿರುತ್ತಿತ್ತು. ಯಾವುದೋ ಜಾತ್ರೆಗೋ, ಮದುವೆ ದಿಬ್ಬಣಕ್ಕೋ ಹೋಗುತ್ತಿದ್ದಾರೆಂಬ ಭಾವನೆ ಮೂಡುತ್ತಿತ್ತು.
ನಮ್ಮ ಕನ್ನಡ ಪ್ರೇಮದ ಜ್ಯೋತಿ…ಎಂದು ತಾಯಂದಿರು ಹಾಡುತ್ತಿದ್ದಾಗ ‘ಕನ್ನಡ’ಕ್ಕೂ- ‘ಪ್ರೇಮಕ್ಕೂ’-‘ ಜ್ಯೋತಿ’ಗೂ ಏನು ಸಂಬAಧ? ಎತ್ತಣ ಅನುಬಂಧ? ಅನ್ನೋ ಜಿಜ್ಞಾಸೆ.
ಆಗೆಲ್ಲ ರೇಡಿಯೋ-ಗ್ರಾಮಾಫೋನುಗಳಲ್ಲಿ ಕೇಳಿ ಕೇಳಿ ಬಾಯಿಂದ ಬಾಯಿಗೆ ಸಿನಿಮಾ ಹಾಡು ಹರಡುತ್ತಿದ್ದವು. ನಮ್ಮ ಓಣಿ ಕೊನೆಯ ಕಿರಾಣಿ ಅಂಗಡಿ ಜೀರ ಕೊಟ್ರಪ್ಪ ಗ್ರಾಮಾಫೋನ್ ತಂದದ್ದು ನಂಗAತೂ ಬಲು ಖುಷಿ. ಒಮ್ಮೆ ಈ ಹಾಡು ಕಿವಿಗೆ ಬಿತ್ತು. ‘ಕನ್ನಡ’ಅನ್ನೋದು ಬೇರೆ ಥರ ಕೇಳಿಸ್ತು. ಎರಡು ಮೂರು ಸಲ ಮೈಯೆಲ್ಲ ಕಿವಿಯಾಗಿ ಆಲಿಸಿದಾಗ ಅದು ‘ಕನ್ನಡ’ ಅಲ್ಲ ‘ಕಣ್ಣಾದ’ ಅನ್ನೋದು ಸ್ಪಷ್ಟವಾಯ್ತು.
ಆಗ ನಮ್ಮ ಸೋದರಮಾವ ನೋಡಿದ ಸಿನಿಮಾದ ಪದ್ಯಾವಲಿ ತರುತ್ತಿದ್ದದ್ದು ನೆನಪಾಯ್ತು. ಸೀದಾ ಮನೆಗೆ ಓಡಿದವನೇ ಟ್ರಂಕ್ ತೆರೆದು ಪುಸ್ತಕ ಹುಡುಕಿಯೇ ಬಿಟ್ಟೆ. ಅದರಲ್ಲಿ ‘ನಮ್ಮ ಕಣ್ಣಾದ ಪ್ರೇಮದ ಜ್ಯೋತಿ’ ಅಂತಾ ಇತ್ತು. ಇದು ‘ರತ್ನಗಿರಿ ರಹಸ್ಯ’ ಹಳೆಯ ಕನ್ನಡ ಚಿತ್ರದಲ್ಲಿ ಕಲಾಕೇಸರಿ ಉದಯಕುಮಾರ್ ಹಾಗೂ ಪ್ರತಿಭಾನ್ವಿತ ಬಹುಭಾಷಾ ತಾರೆ ಜಮುನಾ ಸನ್ನಿವೇಶಕ್ಕೆ ಚಿತ್ರೀಕರಿಸಿದ ಹಾಡು.
ಇದರಲ್ಲಿ ‘ನಮ್ಮ ಕಣ್ಣಾದ ಪ್ರೇಮದ ಜ್ಯೋತಿ’ ಎಂಬುದು ಗ್ರಾಮಾಫೋನ್ನಲ್ಲಿ ರೇಡಿಯೋದಲ್ಲಿ ಕೇಳಿ ಕೇಳಿ ಹಳ್ಳೀ ಹೆಣ್ಣು ಮಕ್ಕಳ ಬಾಯಲ್ಲಿ ‘ಕಣ್ಣಾದ’ ಎನ್ನುವುದು ‘ಕನ್ನಾಡ’ ಎಂದಾಗಿತ್ತು. ಇಲ್ಲಿ ಯಾವುದೇ ಪದೋಚ್ಚಾರಣೆಯ ಪ್ರಮಾದವಿಲ್ಲ. ಬದಲಾಗಿ ಕನ್ನಡ ಕುಲನಾರಿಯರ ಕನ್ನಡ ನುಡಿ ಪ್ರೇಮ ಗಮನಾರ್ಹ.
ಈ ಹಿನ್ನೆಲೆಯಲ್ಲಿ ‘ಕಣ್ಣಡಕ’ ಎಂಬುದು ‘ಕನ್ನಡಕ’ ಎಂದಾಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ‘ಸುಲೋಚನ’ಕ್ಕೆ ಅರ್ಥವಿದೆ. ಹಾಗೆಯೇ ‘ಕಣ್ಣಡಕ’ಕ್ಕೂ ಅರ್ಥವಿದೆ. ‘ಕಣ್ಣು’ಗಳಿಗೆ ಅಡಕವಾದದ್ದು ಕಣ್ಣಡಕ ಅಂತಾ ಅರ್ಥೈಸಬಹುದಲ್ಲವೇ? ಕಣ್ಣು+ಅಡಕ = ಕಣ್ಣಡಕವಾದೀತು! ಆದರೆ ಕನ್ನಡಕ ಹೇಗಾಗುತ್ತದೆ! ‘ಕನ್ನಡಕ’ಕ್ಕೆ ಅರ್ಥವೇನಿದೆ?
ಈ ‘ನ’ ಮತ್ತು ‘ಣ’ ದ ಇನ್ನೊಂದು ಉದಾಹರಣೆ. 1978-79ರಲ್ಲಿ ಒಂದೂವರೆ ವರ್ಷ ಕೊಪ್ಪಳದ ರವೀಂದ್ರ ಮೆಡಿಕಲ್ ಸ್ಟೋರ್ನಲ್ಲಿ ಸೇಲ್ಸ್ ಬಾಯ್ ಆಗಿದ್ದಾಗ ‘ನೇಣ್ಸುಖ್’ ಅಂತ ಒಬ್ಬ ಮಾರವಾಡಿ ಅದರ ಪಾರ್ಟನರ್. ಇದ್ಯಾವ ಸೀಮೆ ಹೆಸರು ಅಂತಾ ಕುತೂಹಲ! ಆ ಹೆಸರಿನ ಮೂಲ ಹುಡುಕಲು ಬೆನ್ನು ಹತ್ತಿದೆ. ಅದು “ನಯನ ಸುಖ” ಎಂಬ ಅಂದದ ಚೆಂದದ ಹೆಸರು. ಅದು ‘ನೇನ್ಸುಖ್’ ಆಗಿ ಕೊನೆಗೆ ‘ನೇಣ್ಸುಖ್’ ಎಂಬ ಹೆಸರೇ ಚಾಲ್ತಿಯಲ್ಲುಳಿದುಬಿಟ್ಟಿತ್ತು.
ಹೀಗಾಗಿ ಇದನ್ನು ‘ಕನ್ನಡಕ’ದ ಬದಲು ‘ಕಣ್ಣಡಕ’ ಎನ್ನುವುದೇ ಸರಿಯಲ್ಲವೇ?