ಕನ್ನಡದ ಎರಡು ಮನಃಸ್ಥಿತಿ

ಸಮಾಜಮುಖಿಯಂತಹ ಪತ್ರಿಕೆಯ ಪ್ರತಿಯೊಂದು ಸಂಚಿಕೆ ರೂಪಿಸುವುದು ಸಂಪಾದಕನಿಗೆ ಹೊಸ ಸವಾಲು ಒಡ್ಡುವ, ಅನುಭವ ದಕ್ಕಿಸುವ, ಒತ್ತಡದಲ್ಲಿ ಮುಳುಗಿಸುವ, ಸಂಕಟಕ್ಕೆ ಈಡು ಮಾಡುವ, ಸಂತೃಪ್ತಿ ಕೊಡುವ ಪ್ರಕ್ರಿಯೆ. ಅದನ್ನೆಲ್ಲಾ ಪ್ರತೀ ಬಾರಿ ಓದುಗರೆದುರು ತೋಡಿಕೊಳ್ಳಲಾಗದು; ಒಂದು ಬಗೆಯಲ್ಲಿ ಉಗುಳಲೂ, ನುಂಗಲೂ ಆಗದ ಸಂದಿಗ್ಧ ಸ್ಥಿತಿ. ಆದಾಗ್ಯೂ ನುಗ್ಗಿಬರುತ್ತಿರುವ ಒಳಗಿನ ತವಕ ತಡೆಯಲಾಗದೆ ಕೆಲವೊಮ್ಮೆ ಇಂತಹ ಅನುಭವದ ತುಣುಕುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.

ಆರೇಳು ತಿಂಗಳ ಹಿಂದೆ ಸಾಹಿತಿಯೊಬ್ಬರಿಗೆ ಒಂದು ಲೇಖನ ಬರೆದುಕೊಡಲು ಕೋರಿದಾಗ, ‘ಕಳೆದ ಮೂರು ತಿಂಗಳಿನಿಂದ ಸಾಹಿತ್ಯ ಮತ್ತು ಸಾಹಿತಿಗಳಿಂದ ದೂರವಾಗಿ, ಅಮೇರಿಕಾದ ನನ್ನ ಮಕ್ಕಳ ಮನೆಗಳಲ್ಲಿ ಮೊಮ್ಮಕ್ಕಳ ಜೊತೆಗೆ ಸುಖವಾಗಿರುವ (ಪ್ರಗತಿಪರ ಲೇಖಕನೊಬ್ಬ ಸುಖವಾಗಿರುವುದು ಆಪರಾಧವಲ್ಲ ತಾನೆ?) ನಾನು, ಇನ್ನೂ ಮೂರು ತಿಂಗಳು ಇಲ್ಲೆ ಇರುವುದರಿಂದ, ರೆಫರೆನ್ಸ್ ಮಾಡಲು ಯಾವುದೇ ಪುಸ್ತಕಗಳು ನನ್ನಲ್ಲಿ ಇಲ್ಲಿ ಇಲ್ಲದಿರುವುದರಿಂದ, ನನಗೆ ಈ ಬಾರಿಯ ಶಿಕ್ಷೆಯಿಂದ ಪಾರು ಮಾಡಬೇಕೆಂದು ಪ್ರಾರ್ಥಿಸುವೆ’ ಎಂದು ಪ್ರತಿಕ್ರಿಯಿಸಿದರು. ಆಗ ಸುಮ್ಮನಾಗಿ ಈ ಸಂಚಿಕೆ ಸಿದ್ಧಪಡಿಸುವಾಗ, ‘ಬಾಕಿ ಉಳಿಸಿಕೊಂಡಿರುವ ಶಿಕ್ಷೆಗೆ ಈಗ ಸಿದ್ಧವಿರುವಿರೆಂದು ಭಾವಿಸುವೆ!’ ಎಂದು ಪ್ರಚೋದಿಸಿದೆ. ‘ಇಪ್ಪತ್ತು ಲಕ್ಷ ಕೋಟಿಯಲ್ಲಿ ನನ್ನ ಪಾಲು, ನನ್ನ ಖಾತೆಗೆ ಬೀಳುವವರೆಗೆ ಬೇರಾವ ಶಿಕ್ಷೆಗೂ ನಾನು ಲಭ್ಯನಿಲ್ಲ’ ಎಂದರು. ‘ಆ ಪಟ್ಟಿಯಲ್ಲಿ ಲೇಖಕರು ಸೇರಿದಂತಿಲ್ಲ; ಒಮ್ಮೆ ಪರಿಶೀಲಿಸಿ!’ ಎಂದು ಕಾಲೆಳೆದೆ.

ಹೀಗೆ ಸಾಗಿದ ಸಂಭಾಷಣೆಯ ಚುಂಗು ಹೀಗಿದೆ:

‘ಕನ್ನಡ ಸಾಹಿತ್ಯಲೋಕ ಸಾಂಕ್ರಾಮಿಕ ರೋಗಗಳನ್ನು ಹೇಗೆ ಕಂಡಿದೆ..? -ಈ ವಿಷಯ ಕುರಿತು ಒಂದು ಲೇಖನ ಬರೆದುಕೊಡುವಿರಾ?’

‘ಸರ್, ಪ್ರಾಮಾಣಿಕವಾಗಿ ಹೇಳುವೆ. ನನಗೆ ಈ ಬಗ್ಗೆ ಏನೇನೂ ತಿಳಿಯುವುದಿಲ್ಲ. ನಾನು ಸುಳ್ಳು ಸುಳ್ಳು ಕತೆಗಳನ್ನು ಬರೆಯಬಲ್ಲೆ ಹೊರತಾಗಿ, ಯಾವುದೇ ಸತ್ಯವನ್ನು ಹೇಳಲಾರೆ’.

ಪ್ರಖ್ಯಾತ ಸಾಹಿತಿಯ ಇಂತಹ ಆಘಾತಕಾರಿ ನಿವೇದನೆಯನ್ನು ಅರಗಿಸಿಕೊಳ್ಳಲು ನನಗಿನ್ನೂ ಸಾಧ್ಯವಾಗಿಲ್ಲ! ಆದರೆ ಈ ಸಂಚಿಕೆಯ ಮುಖ್ಯಚರ್ಚೆ ಸಂದರ್ಭದಲ್ಲಿ ಪುಟಿದೆದ್ದ ‘ಕನ್ನಡ ಸಾಹಿತ್ಯಲೋಕವೇಕೆ ಸಾಂಕ್ರಾಮಿಕ ಪಿಡುಗುಗಳಿಗೆ ಪೂರ್ಣ ಪ್ರಮಾಣದಲ್ಲಿ ತೆರೆದುಕೊಳ್ಳಲಿಲ್ಲ?’ ಎಂಬ ಪ್ರಶ್ನೆಗೆ ಭಾಗಶಃ ಉತ್ತರ ದೊರೆಯಿತು. ಅಂದಹಾಗೆ ಬೆಂಗಳೂರು ನಿವಾಸಿಯಾಗಿರುವ ಮಂಗಳೂರು ಮೂಲದ ಈ ಸಾಹಿತಿ ನಿವೃತ್ತ ಬ್ಯಾಂಕ್ ಅಧಿಕಾರಿ.

ಇದಕ್ಕೆ ತದ್ವಿರುದ್ಧವಾದ ಇನ್ನೊಂದು ನಿದರ್ಶನವಿದೆ. ಅವರು ಕನ್ನಡದ ಹೆಸರಾಂತ ವಿಮರ್ಶಕರು, ಅನುವಾದಕರು. ನನ್ನ ಲೇಖನದ ಬೇಡಿಕೆಗೆ, ‘ವಿಶ್ವಾಸಕ್ಕೆ ಕೃತಜ್ಞ. ಯೋಚನೆ ಮಾಡಿ ನೋಡಿದೆ. ಹಾಗೆ ಬರೆಯುವ ಮನಸ್ಥಿತಿ ಇಲ್ಲ. ಉಪಯೋಗವೂ ಇಲ್ಲ ಅನಿಸುತ್ತಿದೆ. ಈ ಎರಡು ತಿಂಗಳು ಏನು ಮಾಡಿದರೂ ಮಾಡದಿದ್ದರೂ ಸಮಾಧಾನ ಸಿಗದೆ ದುರಂತ, ಹಾಸ್ಯ, ವ್ಯಂಗ್ಯ, ವಿಡಂಬನೆ, ವ್ಯರ್ಥ ವಿದ್ವತ್ತು, ಹುನ್ನಾರ, ದುರಾಸೆ, ಕ್ರೌರ್ಯ, ಪ್ರೀತಿ, ವಿಶ್ವಾಸ, ಆತಂಕ, ಎಲ್ಲವನ್ನೂ ದೊಡ್ಡ ಭೂತಗನ್ನಡಿಯಲ್ಲಿ ನೋಡುತ್ತಿರುವ ಹಾಗಿದೆ. ಲೋಕ ಇರುವ ರೀತಿ ಇದು ಅನ್ನುವ ಮರೆತ ಪಾಠ ಹೊಸದಾಗಿ ಕಲಿಯುತ್ತಿರುವ ಹಾಗೆ ಅನಿಸುತ್ತಿದೆ’ ಎಂದು ಪ್ರತಿಕ್ರಿಯಿಸಿದರು.

ಇಬ್ಬರೂ ಲೇಖನ ಬರೆಯಲು ನಿರಾಕರಿಸಿದರು; ಕಾರಣಗಳು ಮಾತ್ರ ವಿಭಿನ್ನ. ಒಬ್ಬರು ಸತ್ಯಕ್ಕೆ ವಿಮುಖರಾದರೆ, ಇನ್ನೊಬ್ಬರು ವಾಸ್ತವದ ಕಾಠಿಣ್ಯಕ್ಕೆ ಕಳವಳಗೊಂಡವರು. ಬಹುಶಃ ಇವರಿಬ್ಬರು ಸಾಹಿತಿಗಳು ಸಮಕಾಲೀನ ಕನ್ನಡ ಸಾರಸ್ವತಲೋಕದ ಎರಡು ಬಗೆಯ ಬೌದ್ಧಿಕ ಸೆಲೆ-ನೆಲೆಗಳನ್ನು ಪ್ರತಿಬಿಂಬಿಸುತ್ತಿದ್ದಾರೆ.

ಈ ಸಂಚಿಕೆ ಸಂಪೂರ್ಣ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದೆ ಎಂದು ಆಕ್ಷೇಪಿಸದಿರಿ; ಕಣ್ಣೆದುರಿಗಿನ ದುರಂತಕ್ಕೆ ಬೆನ್ನು ತೋರುವುದು ಸಮಾಜಮುಖೀ ಲಕ್ಷಣವಲ್ಲ. ಪತ್ರಿಕೆ ಮತ್ತು ಪರಿಸರ ಕೊರೊನಾಮುಕ್ತ ಆಗುವ ಕಾಲ ಆದಷ್ಟು ಬೇಗ ಬರಲಿ.

Leave a Reply

Your email address will not be published.