ಕನ್ನಡದ ಕಾವ್ಯಋಷಿ ಕೃಷ್ಣಶೆಟ್ಟರು ಕಣ್ಮರೆಯಾದರು

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದ (1980) ಕವಿ ಕೃಷ್ಣಶೆಟ್ಟರು ನಮ್ಮನ್ನಗಲಿದ್ದಾರೆ. ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಇವರು ನೇರ ಆಯ್ಕೆಯಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳೆಂದು ನಿಯಮಕಗೊಂಡಿದ್ದರು (1961). ಪ್ರಾಮಾಣಿಕ, ದಕ್ಷ, ಅಭಿವೃದ್ಧಿಪರವಾದ ಬಿಡುವಿಲ್ಲದ ಆಡಳಿತದಲ್ಲಿಯೇ ತಲ್ಲೀನರಾಗಿದ್ದ ಕೃಷ್ಣಶೆಟ್ಟರು ನಿವೃತ್ತಿಯ ನಂತರ ಕನ್ನಡ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡರು. ನಡುಗನ್ನಡ ಕಾಲದ ಷಟ್ಪದಿ ಕಾವ್ಯಪ್ರಕಾರದಲ್ಲಿ ದಾರ್ಶನಿಕ ವ್ಯಕ್ತಿಗಳಾದ ರಾಮಕೃಷ್ಣ ಪರಮಹಂಸರು, ಅರವಿಂದ ರಮಣ ಮಹರ್ಷಿಗಳು ಮತ್ತು ಮಹಾತ್ಮಾ ಗಾಂಧೀಜಿ ಕುರಿತಾದ ಇವರ ಮಹಾಕಾವ್ಯಗಳು ಅಪರೂಪದ ಪ್ರಯೋಗಗಳಾಗಿವೆ.

ಭಾರತದ ಪ್ರಾಚೀನ ಪರಂಪರೆ, ಆಧ್ಯಾತ್ಮಕ ದೃಷ್ಟಿಕೋನವನ್ನು ಆಧುನಿಕ ಚಿಂತನೆಗಳು ಮತ್ತು ವರ್ತಮಾನದ ಘಟನೆಗಳೊಂದಿಗೆ ಮೇಳವಿಸಿಕೊಂಡು ವಿರಚಿತವಾದ ಈ ಮಹಾಕಾವ್ಯಗಳು ಹಾಡುಗಬ್ಬದ ರಸಗಟ್ಟಿಗಳಾಗಿವೆ. ಕೃಷ್ಣಶೆಟ್ಟರ ಭಕ್ತಿಗೀತೆಗಳ ಕವನ ಸಂಗ್ರಹಗಳು ಹಾಗೂ ಧ್ವನಿಸುರುಳಿಗಳೂ ಜನಮನ್ನಣೆ ಗಳಿಸಿವೆ. ಸಾಹಿತ್ಯ ವಿಮರ್ಶೆ ಮತ್ತು ಹಲವು ಜೀವನಚರಿತ್ರೆಗಳನ್ನು ರೂಪಿಸಿದ ಇವರ ಗದ್ಯಬರಹವೂ ಲಲಿತವಾಗಿದೆ. ಇಲಾಖೆಯ ವರಿಷ್ಠ ಹುದ್ದೆಯಲ್ಲಿ ಸೇವೆ ಮಾಡಿ ಸಾಹಿತ್ಯ ಸೃಷ್ಟಿ ಮತ್ತು ಮಹಾಕಾವ್ಯ ಕೃತಿಗಳ ರಚನೆ ಮಾಡಿದ ಪ್ರಪ್ರಥಮ ಅಧಿಕಾರಿಯಾಗಿರುವ ಕೃಷ್ಣಶೆಟ್ಟರು ಸರಳವಾದ ಸಂತಜೀವನವನ್ನು ಬಾಳಿದವರು.

 

ಮಕ್ಕಳಿಗಾಗಿ ವರ್ಣರಂಜಿತ ಪತ್ರಿಕೆಯೊಂದನ್ನು ಇವರು ಪ್ರಾರಂಭಿಸಿದ್ದರೂ ಅದು ಹೆಚ್ಚು ವರ್ಷ ಬದುಕಲಿಲ್ಲ. ಕೃಷ್ಣಶೆಟ್ಟರ ಸಾಹಿತ್ಯಿಕ ಸಾಧನೆಗಳನ್ನು ಗಮನಿಸಿ ಬಾದಾಮಿಯಲ್ಲಿ ಜರುಗಿದ 3ನೆಯ ಶಿಕ್ಷಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೆಂದು ಆಯ್ಕೆ ಮಾಡಲಾಗಿತ್ತು (1993).

ಪ್ರಾಧ್ಯಾಪಕ ಸಂ.ಶಿ.ಭೂಸನೂರಮಠ ಸಾಹಿತ್ಯ ಪ್ರಶಸ್ತಿಯೂ ಕೃಷ್ಣಶೆಟ್ಟರಿಗೆ ಲಭ್ಯವಾಗಿತ್ತು. ನಿವೃತ್ತ ವಿದ್ಯಾಧಿಕಾರಿಗಳ ವೇದಿಕೆ ಕರ್ನಾಟಕ, ಬೆಂಗಳೂರಿನ ಗಾಣಿಗ ವೈಶ್ಯ ಸಮಾಜ ಮತ್ತು ಇನ್ನಿತರ ಸಂಘಟನೆಗಳು ಸೇರಿಕೊಂಡು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೆಲ ವರುಷಗಳ ಹಿಂದೆ ಕೃಷ್ಣಶೆಟ್ಟರನ್ನು ಗೌರವಿಸಿದ್ದವು. ಕುಟುಂಬ ವತ್ಸಲರಾಗಿ ಸಮಾಜಮುಖಿ ಸ್ನೇಹ ಜೀವಿಗಳಾಗಿ, ಸಾತ್ವಿಕ ಶರಣ ಜೀವನವನ್ನು ನಿವೃತ್ತಿಯ ನಂತರದ ನಾಲ್ಕು ದಶಕಗಳ ತಮ್ಮ ಬಾಳಿನುದ್ದಕ್ಕೂ ಸಾಕ್ಷೀಕರಿಸಿದ ಕೃಷ್ಣಶೆಟ್ಟರಿಗೆ ಕನ್ನಡನಾಡು ಕೃತಜ್ಞವಾಗಿದೆ.

 

Leave a Reply

Your email address will not be published.